Breaking Newsಪ್ರಚಲಿತರಾಜ್ಯ
ಆಡಿಯೊ ಪ್ರಕರಣದಲ್ಲಿ ಸಿಎಂ ಮೊದಲ ಆರೋಪಿ: ಬಿಎಸ್ವೈ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಶರಣಗೌಡರನ್ನು ಕಳುಹಿಸಿ ಬೇಕಂತಲೇ ಆಡಿಯೊ ಟೇಪ್ ಮಾಡಿಸಿದ್ದಾರೆ. ಅದನ್ನೇ ಬಿಡುಗಡೆ ಮಾಡಿದ್ದಾರೆ. ಅವರು ಈಗ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ಆದೇಶಿಸಿದ್ದಾರೆ. ಅದು ನ್ಯಾಯಸಮ್ಮತವಾಗಿರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ವ್ಯಕ್ತಿಯೊಬ್ಬರನ್ನು ಕಳುಹಿಸಿ ಎಲ್ಲವನ್ನೂ ಪ್ಲಾನ್ ಮಾಡಿ ರೆಕಾರ್ಡ್ ಮಾಡಿಸಿದ್ದಾರೆ. ನಂತರ ಅದನ್ನೇ ಬಜೆಟ್ ದಿವಸ ಬಿಡುಗಡೆ ಮಾಡಿದ್ದಾರೆ. ಇದು ಎಲ್ಲವೂ ಕುತಂತ್ರ, ಷಡ್ಯಂತ್ರದ ಭಾಗವಾಗಿದೆ. ವಿಧಾನ ಸಭಾಧ್ಯಕ್ಷರ ಹೆಸರನ್ನು ಬಹಿರಂಗ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ ಎಂದರು.
ಮಂಗಳವಾರ ನಡೆಯಲಿರುವ ಕಲಾಪದಲ್ಲಿಯೂ ಈ ವಿಷಯವನ್ನೇ ನಾವು ಪ್ರಸ್ತಾಪಿಸಲಿದ್ದೇವೆ. ಸರಕಾರದ ಅಧೀನದಲ್ಲಿರುವ ಎಸ್ಐಟಿಗೆ ವಹಿಸದಂತೆ ಒತ್ತಾಯ ಹೇರಲಾಗುತ್ತದೆ. ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಮೊದಲ ಆರೋಪಿಯಾಗಿದ್ದಾರೆ. ಶರಣಗೌಡ ಅವರನ್ನು ಕಳುಹಿಸಿ ಆಡಿಯೊ ರೆಕಾರ್ಡ್ ಮಾಡಿಸಿದ್ದಾರೆ ಎಂದು ದೂರಿದರು.
ಸೋಮವಾರ ನಡೆದ ಕಲಾಪದಲ್ಲಿ ಪ್ರತಿಪಕ್ಷದ ನಾಯಕರು ಸರಿಯಾಗಿ ಆಡಳಿತ ಪಕ್ಷದವರ ಪ್ರಶ್ನೆಗೆ ಉತ್ತರಿಸದ ಹಿನ್ನೆಲೆಯಲ್ಲಿ ತುರ್ತು ಸಭೆಯನ್ನು ನಡೆಸಿದರು. ಎಲ್ಲ ಶಾಸಕರು ಒಕ್ಕೊರಲಿನಿಂದ ಮಾತನಾಡಿ, ಆಡಳಿತ ಪಕ್ಷದ ಸದಸ್ಯರ ಧ್ವನಿ ಅಡಗಿಸಬೇಕು ಎಂದು ತಿಳಿ ಹೇಳಿದ್ದಾರೆ.