About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

166 ಮಕ್ಕಳಿಗೆ ಸಾಮೂಹಿಕ ವ್ರತೋಪದೇಶ

ಧರ್ಮಸ್ಥಳ: ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ನಿಮಿತ್ತ ಮಂಗಳವಾರ ಅಯೋಧ್ಯೆೆಯ ಪುಣ್ಯ ಭೂಮಿಯಲ್ಲಿ ಪಂಚ ಮಹಾ ವೈಭವ ಮಂಟಪದಲ್ಲಿ ಆದಿನಾಥ ಮಹಾರಾಜರಿಂದ ತಮ್ಮ ಮಕ್ಕಳಾದ ಬ್ರಾಹ್ಮಿ, ಸುಂದರಿ, ಭರತ, ಬಾಹುಬಲಿಗೆ ಅಕ್ಷರಾಭ್ಯಾಸ ಹಾಗೂ ಸಾಮೂಹಿಕ ಅಕ್ಷರಾಭ್ಯಾಸದ ರೂಪಕ ಪ್ರದರ್ಶನ ನಡೆಯಿತು.

110 ಹುಡುಗರು ಹಾಗೂ 56 ಹುಡುಗಿಯರು ಸೇರಿ 166 ಮಂದಿಗೆ ಸಾಮೂಹಿಕ ವ್ರತೋಪದೇಶ ನೀಡಲಾಯಿತು. ನರಸಿಂಹರಾಜಪುರ ಸಿಂಹನಗದ್ದೆೆ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜಿನೇಶ್ವರನ ಅನುಯಾಯಿಗಳು ಜೈನರು. ಮೋಕ್ಷ ಪ್ರಾಪ್ತಿಯ ಪ್ರಥಮ ಹಂತವೆ ವ್ರತೋಪದೇಶ. ಜನಿವಾರ ಧಾರಣೆ ಅಂದರೆ ಸಮ್ಯಕ್ ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ ಎಂಬ ರತ್ನತ್ರಯ ಧರ್ಮವನ್ನು ಅನುಸರಿಸುವುದೇ ಆಗಿದೆ ಎಂದರು.

ಜನಿವಾರ ಧಾರಣೆ ಮಾಡದವರು ಬಸದಿಯ ಗರ್ಭಗುಡಿ ಪ್ರವೇಶಿಸಬಾರದು. ವಿವಾಹ ಆಗಬಾರದು ಎಂದು ಅವರು ಸಲಹೆ ನೀಡಿದರು. ಜೈನ ಧರ್ಮದಲ್ಲಿ ನಂಬಿಕೆ ಇಟ್ಟು ವ್ರತ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದೇವರು, ಗುರುಗಳು ಮತ್ತು ಶಾಸ್ತ್ರದ ಮೇಲೆ ಅಚಲ ನಂಬಿಕೆ ಇಡಬೇಕು. ಸ್ವಾದ್ಯಾಯ ಮಾಡಬೇಕು ಎಂದರು.

ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ವ್ರತ ಸ್ವೀಕಾರ ಮಾಡಿದವರು ಮದ್ಯ, ಮಾಂಸ ಮತ್ತು ಮಧು ತ್ಯಾಗ ಮಾಡಬೇಕು. ರಾತ್ರಿ ಭೋಜನ ಮಾಡಬಾರದು. ಅಹಿಂಸಾ ಧರ್ಮದ ಪಾಲನೆ ಮಾಡಬೇಕು ಎಂದರು.

ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನಧರ್ಮದ ವ್ರತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತಿ ಸುಧಾರಿಸಿದರೆ ಮಾತ್ರ ಗತಿ ಸುಧಾರಿಸುತ್ತದೆ. ಸಹವಾಸ ದೋಷದಿಂದ ಜೈನರು ಯಾವುದೆ ದುಶ್ಚಟಕ್ಕೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.

ಸಾಮೂಹಿಕ ಅಕ್ಷರಾಭ್ಯಾಸದಲ್ಲಿ 46 ಮಕ್ಕಳು ಭಾಗವಹಿಸಿದರು. ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಮಹಾರಾಜರು ಅಕ್ಷತೆಯ ಮೇಲೆ ಸುವರ್ಣ ಶಲಾಕೆಯಿಂದ ಓಂಕಾರ ಬರೆದು ಸಾಮೂಹಿಕ ವ್ರತೋಪದೇಶ ನೀಡಿದರು. ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿಮಹಾರಾಜರು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಇದ್ದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಫೆ. 14 ರಂದು ಗುರುವಾರ ಧರ್ಮಸ್ಥಳಕ್ಕೆ ಆಗಮಿಸುವರು. ಬಳಿಕ ಮಂಗಲ ಪ್ರವಚನ ನೀಡಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close