About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕೈಯಲ್ಲಿ ಬಂದೂಕು ಹಿಡಿದರೂ ಹತ್ಯೆ: ಕಾಶ್ಮೀರಿ ಯುವಕರಿಗೆ ಭಾರತೀಯ ಸೇನೆ ಖಡಕ್ ಎಚ್ಚರಿಕೆ

ದೆಹಲಿ: ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಅವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಲಾಗುತ್ತದೆ ಎಂದು ಕಾಶ್ಮೀರಿ ಯುವಕರಿಗೆ ಭಾರತೀಯ ಸೇನೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಉಗ್ರ ಸಂಘಟನೆ ಸೇರಿರುವ ತಮ್ಮ ಮಕ್ಕಳನ್ನು ಶರಣಾಗಿ ಮುಖ್ಯವಾಹಿನಿ ಸೇರುವಂತೆ ಮನವೊಲಿಸಬೇಕು ಎಂದು ಕಾಶ್ಮೀರಿ ತಾಯಂದಿರಿಗೆ ಚಿನಾರ್ ಸೈನ್ಯದಳದ ಕಮಾಂಡರ್ ಕನ್ವಲ್‌ಜೀತ್ ಸಿಂಗ್ ಧಿಲಾನ್ ಈ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸಿಆರ್‌ಪಿಎಫ್, ಸೇನೆ ಹಾಗೂ ಪೊಲೀಸ್ ಇಲಾಖೆಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಶ್ಮೀರಿ ಸಮಾಜದಲ್ಲಿ ತಾಯಂದಿರ ಪಾತ್ರ ಬಹಳ ಪ್ರಮುಖವಾಗಿದೆ. ಆ ತಾಯಂದಿರಿಗೆ ನಮ್ಮ ಮನವಿ ಏನೆಂದರೆ ಉಗ್ರ ಸಂಘಟನೆಗಳ ಜತೆ ಸಕ್ರಿಯರಾಗಿರುವ ನಿಮ್ಮ ಮಕ್ಕಳನ್ನು ಶರಣಾಗುವಂತೆ ಮನವಿ ಮಾಡಿ, ಮುಖ್ಯವಾಹಿನಿಗೆ ಕರೆದುಕೊಂಡು ಬನ್ನಿ. ಶರಣಾಗದೇ ಬಂದೂಕು ಹಿಡಿದು ಸೇನೆಯ ವಿರುದ್ಧ ನಿಂತಲ್ಲಿ ಅವರನ್ನು ಯಾವುದೇ ಮುಲಾಜಿಲ್ಲದೆ ಕೊಂದು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿ ಪಾಕಿಸ್ತಾನದ ಪ್ರೇರಣೆಯಿಂದ ನಡೆದಿದೆ ಎನ್ನುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಪುಲ್ವಾಮಾ ದುರಂತ ಸಂಭವಿಸಿದ 100 ಗಂಟೆಯೊಳಗೆ ಜೈಷ್ ಎ ಮಹಮ್ಮದ್ ಸಂಘಟನೆಯ ಹಲವಾರು ಉಗ್ರರನ್ನು ಕೊಂದು ಹಾಕಿದ್ದೇವೆ ಎಂದು ತಿಳಿಸಿದರು.

ಕಾಶ್ಮೀರದಲ್ಲಿನ ಜೈಷ್ ಉಗ್ರ ಸಂಘಟನೆಯ ಮೂಲವನ್ನು ಪತ್ತೆ ಹಚ್ಚಿದ್ದೇವೆ. ಕಾಶ್ಮೀರದಲ್ಲಿ ಜೈಷ್ ಸಂಘಟನೆಯ ಕಮಾಂಡರ್ ಆಗಿದ್ದ ದಾಳಿಯ ಸಂಚುಕೋರ ರಷೀದ್ ಘಾಜಿ ಅಲಿಯಾಸ್ ಕಮ್ರಾನ್‌ನನ್ನು ಕೊಂದಿದ್ದೇವೆ. ಯಾವುದೆ ಕಾರಣಕ್ಕೂ ನಿಮ್ಮ ಮಕ್ಕಳು ಉಗ್ರ ಸಂಘಟನೆಗಳಿಗೆ ಸೇರದಂತೆ ಎಚ್ಚರ ವಹಿಸಿ ಎಂದು ಕಾಶ್ಮೀರದ ತಾಯಂದಿರಿಗೆ ಅವರು ಮತ್ತೊಮ್ಮೆ ಮನವಿ ಮಾಡಿದರು.

Tags

Related Articles

Leave a Reply

Your email address will not be published. Required fields are marked *

Language
Close