About Us Advertise with us Be a Reporter E-Paper

Breaking Newsದೇಶಪ್ರಚಲಿತ

ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಪ್ರಚಾರ

ಲಖನೌ: ಲೋಕಸಭಾ ಚುನಾವಣೆಗೆ ಕೇವಲ 4 ವಾರಗಳು ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಉತ್ತರ ಪ್ರದೇಶ (ಪೂರ್ವ ವಲಯ)ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಅವರು ಸೋಮವಾರದಿಂದ ಸತತ ಮೂರು ದಿನಗಳ ಕಾಲ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ.

ಅಧಿಕೃತವಾಗಿ ಸೋಮವಾರ ಪ್ರಯಾಗ್‌ರಾಜ್‌ನಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್‌ರಾಜ್, ಪ್ರಿಯಾಂಕಾ ಗಾಂಧಿ ಅವರ ಮುತ್ತಜ್ಜ ಜವಹರಲಾಲ್ ನೆಹರು ಅವರ ಜನ್ಮಸ್ಥಳವಾಗಿದೆ. ಪ್ರಧಾನಿ ಮೋದಿ ಅವರ ವಿರುದ್ಧ ನೇರ ಪ್ರಚಾರ ಆರಂಭಿಸಲಿರುವ ಪ್ರಿಯಾಂಕಾ ವಾರಾಣಸಿಯಲ್ಲೂ ಮೋದಿ ವಿರುದ್ಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಈ ಬಾರಿ ಪ್ರಿಯಾಂಕಾ ಗಾಂಧಿ ವಿಶಿಷ್ಠ ರೀತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಪ್ರಯಾಗ್ರಾಜ್‌ನಿಂದ ವಾರಾಣಸಿಯವರೆಗೂ ಹಬ್ಬಿರುವ ನದಿ ತೀರಗಳಲ್ಲಿ ದೋಣಿಗಳ ಮೂಲಕ ಪ್ರಚಾರ ನಡೆಸಲು ತೀರ್ಮಾನಿಸಿದ್ದು, ಚುನಾವಣಾ ಆಯೋಗದಿಂದ ಅನುಮತಿಯನ್ನೂ ಪಡೆದಿದ್ದಾರೆ. ವಿದ್ಯುತ್‌ಚಾಲಿತ ದೋಣಿಗಳ ಮೂಲಕ 100 ಕಿ.ಮೀ. ದೂರ ಪ್ರಯಾಣಿಸಿ, ಅವರು ಮೀನುಗಾರರಲ್ಲಿ ಮತ ಯಾಚನೆ ಮಾಡಲಿದ್ದಾರೆ. ಇದೇ ವೇಳೆ ಅವರು ನದಿ ದಡಗಳಲ್ಲಿ ವಾಸಿಸುತ್ತಿರುವ ಮೀನುಗಾರರೊಂದಿಗೆ ಸಂವಾದ ನಡೆಸಿ ಕಾಂಗ್ರೆಸ್‌ಗೆ ಮತ ನೀಡುವಂತೆ ಕೋರಲಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಉತ್ತರ ಪ್ರದೇಶಕ್ಕೆ ಇದು ಅವರ ಎರಡನೇ ಭೇಟಿಯಾಗಿದೆ. ಇದೇ ಸಂದರ್ಭದಲ್ಲಿ ಅವರು, ನೆಹರು ಕುಟುಂಬ ವಾಸಿಸುತ್ತಿದ್ದ ಆನಂದ ಭವನಕ್ಕೂ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಪ್ರಚಾರ ಪೂರ್ಣಗೊಳ್ಳುವ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿಯಲ್ಲೂ ಮತ ಕೇಳಲಿದ್ದಾರೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಕಾರ್ಯಕ್ರಮವೂ ನಿಗಧಿಯಾಗಿದೆ.ಹೋಳಿ ಹಬ್ಬದ ಹಿನ್ನೆೆಲೆಯಲ್ಲಿ ಹಮ್ಮಿಕೊಂಡಿರುವ ‘ಹೋಲಿ ಮಿಲನ್’ನಲ್ಲಿ ಭಾಗವಹಿಸುವ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಲಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪ್ರಿಯಾಂಕಾ ನಿರ್ಧರಿಸಿದ್ದಾರೆ. ತಮಗೆ ಜವಬ್ದಾರಿ ವಹಿಸಿರುವ ಪೂರ್ವ ಉತ್ತರ ಪ್ರದೇಶದಲ್ಲಿ ಪಕ್ಷದ ಬಲವರ್ಧನೆಗೆ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಬದಲಾಗಿ ಪ್ರಿಯಾಂಕಾ ರಾಯ್‌ಬರೇಲಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಗುಮಾನಿ ಕೇಳಿ ಬರುತ್ತಿತ್ತು.

ಲೋಕಸಭೆಗೆ ಅತಿಹೆಚ್ಚು ಸದಸ್ಯರನ್ನು ಆರಿಸಿ ಕಳಿಸುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಶಕ್ತಿ ಕಳೆಗುಂದಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಪ್ರಿಯಾಂಕಾ ಪಕ್ಷಕ್ಕೆ ಪುನಶ್ಚೇತನ ನೀಡಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಜವಬ್ದಾರಿ ವಹಿಸಿಕೊಂಡ ನಂತರ ರಾಜ್ಯಕ್ಕೆ ಇದು ಅವರ ಎರಡನೇ ಭೇಟಿಯಾಗಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಬಿಎಸ್‌ಪಿ, ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಹೊಂದಾಣಿಕೆ ಮಾಡಿಕೊಂಡಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ (ಅಮೇಥಿ ಮತ್ತು ರಾಯಬರೇಲಿ) ಮಾತ್ರ ಜಯಗಳಿಸಿ, ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ7ರಷ್ಟು ಮತಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿತ್ತು.
ಉತ್ತರ ಪ್ರದೇಶದಲ್ಲಿ ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಮೇ.23ರಂದು ನಡೆಯಲಿದೆ.

Tags

Related Articles

Leave a Reply

Your email address will not be published. Required fields are marked *

Language
Close