About Us Advertise with us Be a Reporter E-Paper

Breaking Newsದೇಶಪ್ರಚಲಿತ

ವಿವಾಹ ಪತ್ರಿಕೆಯಲ್ಲಿ ಮೋದಿಗೆ ಮತ ಯಾಚನೆ: ಚುನಾವಣಾ ಆಯೋಗ ನೋಟಿಸ್‌‌‌

ದೆಹಲಿ: ‘ವಿವಾಹ ಸಮಾರಂಭಕ್ಕೆ ಆಗಮಿಸುವವರು ಉಡುಗೊರೆ ನೀಡಬೇಕಿಲ್ಲ, ಬದಲಾಗಿ ಮತ ಹಾಕುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ’ ಎಂದು ಪುತ್ರನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದ ಪೋಷಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಉತ್ತರಾಖಂಡ್‌ನ ಜೋಶಿಖೋಲಾ ಗ್ರಾಮದಲ್ಲಿ ಗೋಶಾಲೆಯೊಂದನ್ನು ನಡೆಸುತ್ತಿರುವ ಜಗದೀಶ್ ಚಂದ್ರ ಜೋಶಿ ತಮ್ಮ ಪುತ್ರ ಜೀವನ್ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡಿದ್ದರು. ಈ ಮದುವೆ ಆಹ್ವಾನ ಪತ್ರಿಕೆ ಇದೀಗ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿವಾಹ ಏಪ್ರಿಲ್ 22ಕ್ಕೆ ನಿಗಧಿಯಾಗಿದೆ. ವಿವಾಹಕ್ಕೆ ಆಗಮಿಸುವವರು ವಧು ವರರಿಗೆ ಉಡುಗೊರೆಗಳನ್ನು ತರಬೇಡಿ, ಬದಲಾಗಿ ಏಪ್ರಿಲ್ 11ರಂದು ಮೋದಿಜೀ ಅವರಿಗೆ ಮತ ಹಾಕಿ ಎಂದು ಆಮಂತ್ರಣ ಪತ್ರಿಕೆಯಲ್ಲಿ ಕೋರಿದ್ದರು. ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಆರೋಪದ ಮೇಲೆ ಬಾಗೇಶ್ವರದ ಸಹಾಯಕ ಚುನಾವಣಾ ಅಧಿಕಾರಿಗಳು ಜೋಶಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ಪರ ಘೋಷಣೆ ಮುದ್ರಿಸಿದ್ದವರಿಗೆ ಎಆರ್‌ಓ ಅವರು ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ. 24 ಗಂಟೆಯೊಳಗೆ ಖುದ್ದು ಹಾಜರಾಗಿ ವಿವರಣೆ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರಂಜನಾ ತಿಳಿಸಿದ್ದಾರೆ. ‘ಆಮಂತ್ರಣ ಪತ್ರಿಕೆಯ ಕರಡನ್ನು ನನ್ನ ಮಕ್ಕಳು ನೀಡಿದ್ದರು. ನನ್ನಿಂದ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ ಎಂದು ಆಯೋಗವನ್ನು ಕೋರುತ್ತೇನೆ. ನಾವು ಜನ ಸಾಮಾನ್ಯರಾಗಿದ್ದು, ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಲ್ಲ’ ಎಂದು ಜೋಶಿ ತಿಳಿಸಿದ್ದಾರೆ. ಲೋಕಸಭೆಗೆ ಉತ್ತರಾಖಂಡದಲ್ಲಿ ಏಪ್ರಿಲ್ 11ರಂದು ಮತದಾನ ನಡೆಯಲಿದೆ.

Tags

Related Articles

Leave a Reply

Your email address will not be published. Required fields are marked *

Language
Close