About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

498A ವಿಧಿ ದುರ್ಬಳಕೆ ಮೇಲೆ ಬೆಳಕು ಚೆಲ್ಲಿದ ಸಪ್ರೀಂ

ದೆಹಲಿ: ವರದಕ್ಷಿಣೆ ಕಿರುಕುಳ ಸಂಬಂಧಿತ ಭಾರತೀಯ ದಂಡ ಸಂಹಿತೆಯ 498A ವಿಧಿ ಮೂಲಕ ಕಾನೂನಿನ ದುರ್ಬಳಕೆ ಆಗುತ್ತಿರುವ ವಿಚಾರವಾಗಿ ಬೆಳಕು ಚೆಲ್ಲಿರುವ ಸುಪ್ರೀಂ ಕೋರ್ಟ್‌, ಈ ವಿಚಾರವಾಗಿ ಆಪಾದಿತರಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶ ಕೊಡಮಾಡಿದೆ.

ವಿವಾಹಿತ ಮಹಿಳೆ ಮೇಲೆ ಆಕೆಯ ಪತಿ ಹಾಗು ಸಂಬಂಧಿಕರು ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುವ ಸಂಬಂಧ ಕಾನೂನಿನಲ್ಲಿ ಇರುವ ಕೆಲ ಇತಿಮಿತಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಸಂಬಂಧ ತನ್ನ ತೀರ್ಪನ್ನು ಏಪ್ರಿಲ್ 23ರಂದು ಕಾಯ್ದಿರಿಸಿತ್ತು.

ಈ ಮುನ್ನ ಇಬ್ಬರು ನ್ಯಾಯಾಧೀಶರ ಪೀಠ ತೀರ್ಪಿತ್ತು, ವರದಕ್ಷಿಣೆ ಕಿರುಕುಳ ಸಂಬಂಧ ನೀಡಲಾಗುತ್ತಿದ್ದ ದೂರುಗಳ ಪರಾಮರ್ಶೆ ಮಾಡಲು ಸಮಿತಿಯೊಂದರ ರಚನೆ ಮಾಡಲು ಆದೇಶ ನೀಡಿತ್ತು.

ಕಳೆದ ವರ್ಷ ಜುಲೈನಲ್ಲಿ, 498A ವಿಧಿಯ ದುರ್ಬಳಕೆ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದ ದ್ವಿಸದಸ್ಯ ಪೀಠ  ಕೆಲ ನಿರ್ದೇಶನಗಳನ್ನು ಹೊರಡಿಸಿ, ಆಪಾದನೆಗಳ ಪರಾಮರ್ಶೆ ನಡೆಸದೇ ಯಾವುದೇ ಬಂಧನವನ್ನು ಮಾಡಬಾರದು, ಈ ಮೂಲಕ ಯಾರೊಬ್ಬರ ಮಾನವ ಹಕ್ಕುಗಳಿಗೂ ಚ್ಯುತಿ ತರಬಾರದು ಎಂದು ತಿಳಿಸಿತ್ತು.

ವಿಧಿಯ ದುರ್ಬಳಕೆ ಪ್ರಶ್ನಿಸಿ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಮಹಿಳಾ ವಕೀಲೆಯರು ಕಟ್ಟಿರುವ ನ್ಯಾಯಾಧಾರ ಎಂಬ ಎನ್‌ಜಿಓ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಪೀಠ ಆಲಿಸುತ್ತಿತ್ತು.

ಮಹಿಳೆಯರ ಮೇಲಾಗುತ್ತಿರುವ ವರದಕ್ಷಿಣೆ ಕಿರುಕುಳವನ್ನು ತಡೆಗಟ್ಟುವ ಉದ್ದೇಶದಿಂದ 498A ವಿಧಿಯನ್ನು ತರಲಾಗಿದ್ದರೂ, ಕೆಲವೊಮ್ಮೆ ಇದೇ ಕಾನೂನಿನ ದುರ್ಬಳಕೆ ಮಾಡುವ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ತರುವ ಪರಿಸ್ಥಿತಿಯೂ ನಿರ್ಮಾಣವಾಗಿದೆ ಎಂದು ಪೀಠ ಗಂಭೀರವಾಗಿ ಹೇಳಿತ್ತು.

“ವೈವಾಹಿಕ ಸಂಬಂಧಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯಗಳಿಗೆ ಅಂತ್ಯ ಹಾಡುವ ಮೂಲಕ ಲಿಂಗ ತಾರತಮ್ಯಕ್ಕೆ ಕೊನೆ ಹಾಡಬೇಕು. ಮತ್ತೊಂದೆಡೆ ಪುರುಷರ ಜೀವಿಸುವ ಹಾಗು ಖಾಸಗಿ ಬದುಕಿನ ಹಕ್ಕನ್ನೂ ಕಾಪಾಡಬೇಕು” ಎಂದು ಪೀಠ ತಿಳಿಸಿತ್ತು.

ಯಾವುದೇ ರೀತಿಯ ವೈವಾಹಿಕ ಸಂಬಂಧಿತ ಕೌಟುಂಬಿಕ ದೌರ್ಜನ್ಯದಲ್ಲಿ ಭಾಗಿಯಾಗಿರದ ಪತಿಯರು ಹಾಗು ಅವರ ಸಂಬಂಧಿಕರ ಹಿತಾಸಕ್ತಿಗಳನ್ನು ಕಾಪಾಡಲು ನ್ಯಾಯಾಲಯಗಳು ಮುಂದಾಗಬೇಕು ಎಂದು ಸುಪ್ರೀಂ ಕೋರ್ಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿತ್ತು.

ಪತಿ ಹಾಗು ಆತನ ಸಂಬಂಧಿಕರು ವಿವಾಹಿತ ಮಹಿಳೆಯ ಮೇಲೆ ಕ್ರೌರ್ಯ ಮೆರೆದಾಗ ಶಿಕ್ಷಿಸಲು 498A ವಿಧಿಯನ್ನು ತರಲಾಗಿದೆ. ಈ ವಿಧಿ ಅನ್ವಯ ಈ ಕ್ರೌರ್ಯಕ್ಕೆ ಮೂರು ವರ್ಷಗಳ ಜಾಮೀನು ರಹಿತ ಶಿಕ್ಷೆ ಇತ್ತು.

Tags

Related Articles

Leave a Reply

Your email address will not be published. Required fields are marked *

Language
Close