About Us Advertise with us Be a Reporter E-Paper

ವಿರಾಮ

ಚಾರ್ಮಾಡಿ ಮಡಿಲಲ್ಲಿ ಪುಟ್ಟ ಮನೆ

ಶ್ರೀ ವಿದ್ಯಾ ರಾವ್

ಸುಮಾರು 1990 ರ ದಶಕದ ಆಸುಪಾಸು. ನನ್ನ ವಿದ್ಯಾಭ್ಯಾಸ ಇನ್ನೂ ಆರಂಭವಾಗಬೇಕಿದ್ದ ದಿನಗಳು. ಆ ಸಮಯದಲ್ಲಿ ನಾವು ನೆಲೆಸಿದ್ದು  ನಮ್ಮ ಜಿಲ್ಲೆಯ ಕಟ್ಟ ಕಡೆಯ ಊರು. ಸುತ್ತಲೂ ಪಶ್ಚಿಮ ಘಟ್ಟದ ಸೌಂದರ್ಯ. ಕಾಡು, ಬಳ್ಳಿ, ಕಣಿವೆ, ಅಲ್ಲಲ್ಲಿ ಸಣ್ಣ ಪುಟ್ಟ ನದಿಗಳು, ತೊರೆಗಳು. ಆಗಾಗ ಕಾಣಸಿಗುವ ಅಪರೂಪದ ಪ್ರಾಣಿ ಪಕ್ಷಿಗಳು. ಮಳೆಗಾಲದಲ್ಲಿ ಹಚ್ಚ ಹಸುರಿನ ಹೊದಿಕೆಯಲ್ಲಿ ಪ್ರಕೃತಿಯ ಸೊಬಗು. ಚಳಿಗಾಲದಲ್ಲಿ ದೂರದ ಬೆಟ್ಟಗಳ ತುಂಬಾ ಕಾಡ್ಗಿಚ್ಚು. ಪರ್ವತಗಳ ತುದಿಗಳಲ್ಲಿ ಕೆಂಪು ಬಣ್ಣದ ದೀಪವೇ ಉರಿಯುತ್ತಿದ್ದ ನೋಟ. ಚಾರ್ಮಾಡಿಯಲ್ಲಿ ಹಾವಿನಂತೆ ಬಳುಕಿಕೊಂಡು ಸಾಗುವ ಘಾಟಿ ರಸ್ತೆಯಲ್ಲಿ ಯಾವಾಗಲೂ ವಾಹನಗಳ ಭರಾಟೆ.  ಇಳಿದ ನಿರಾಳತೆಯಲ್ಲಿ ವೇಗವಾಗಿ ಬರೋ ವಾಹನಗಳು ಒಂದೆಡೆಯಾದ್ರೆ, ಸರಾಗ ಪ್ರಯಾಣಕ್ಕಾಗಿ ಪ್ರಾರ್ಥಿಸುತ್ತಾ ಘಾಟಿಯ ಕಡೆ ಮುಖಮಾಡಿ ಪ್ರಯಾಣಿಸುವ ಚಾಲಕರು ಮತ್ತೊಂದೆಡೆ.

ಇವೆಲ್ಲದರ ಮಧ್ಯೆ, ರಸ್ತೆಬದಿಯಲ್ಲಿ ಗಟ್ಟಿಯಾಗಿ ನಿಂತಿತ್ತು ನಮ್ಮ ಮೊದಲ ಬಾಡಿಗೆ ಮನೆ. ಮಣ್ಣುಮಿಶ್ರಿತ ಗೋಡೆ, ಹಂಚಿನ ಮಾಡು ಇದ್ದ ಆ ಮನೆಯಲ್ಲಿ ಎರಡೇ ಕೋಣೆಗಳು. ಬಾಡಿಗೆ 200 ರೂ. ಈಗ ಅಷ್ಟೇನಾ ಅಂದುಕೊಂಡ್ರು, ಆಗಿನ ಕಾಲಕ್ಕೆ ಅದೇ ದೊಡ್ಡ  ಮೊತ್ತ. ರಸ್ತೆಯ ಪಕ್ಕದಲ್ಲೇ ಇದ್ದದ್ದರಿಂದ, ಕಿವಿ ತುಂಬಾ  ಶಬ್ದ. ಪ್ರತಿ ವಾಹನದ ಓಡಾಟದ ರಭಸಕ್ಕೆ ಮನೆಯೇ ಅಲ್ಲಾಡಿದ ಅನುಭವ.

ಅವತ್ತಿನ ಸಂದರ್ಭಕ್ಕೆ ಆ ಎರಡು ಕೋಣೆಗಳು ಅರಮನೆಯೇ ಆಗಿತ್ತು. ಅಪೇಕ್ಷೆಗಳು ಇರಲಿಲ್ಲ, ನಿರೀಕ್ಷೆಗಳು ಕೂಡ. ಬಗೆ ಬಗೆಯ ತಿಂಡಿ ತಿನಿಸುಗಳು ಇತ್ತೋ ಇಲ್ವೋ ನೆನಪಿಲ್ಲ. ಆದರೆ ನೆಮ್ಮದಿಯ ಜೀವನ ಮಾತ್ರ ಮನಸ್ಸಿನ ತುಂಬಾ ಮುಳುಗಿತ್ತು. ಹತ್ತಿರದಲ್ಲೇ ಇದ್ದ ನಮ್ಮ ಮನೆಯ ಮಾಲೀಕರು ದೂರದ ಸಂಬಂಧಿಕರು. ಅವರಿಗೂ ಇಬ್ಬರು ಮಕ್ಕಳು. ನಾವೂ ಇಬ್ಬರು. ನಮ್ಮ ಹಾರಾಟಕ್ಕೆ ಕಡಿವಾಣ ಹಾಕೋರೆ  ಗದ್ದೆ, ತೋಟ, ಅಂಗಳ, ಮೈದಾನ, ಸಣ್ಣ ಪುಟ್ಟ ಹಳ್ಳ ತೊರೆಗಳು.. ಒಂದಾ ಎರಡಾ, ನಾವು ಅಡ್ಡಾಡದ ಜಾಗಗಳೇ ಇಲ್ಲ.

‘ಮೊಬೈಲು’ ಪದವನ್ನೇ ಕೇಳದ ಆ ದಿನಗಳು. ಎಲ್ಲದಕ್ಕೂ ಲ್ಯಾಂಡ್‌ಲೈನ್‌ಫೋನ್‌ಗಳ ಮೇಲೆ ಅವಲಂಬಿತಗೊಂಡಿದ್ದ ದಿನಗಳು.  ವಿಪರೀತ ಮಳೆಯಾದ್ರೆ ಕೇಳೋದೇ ಬೇಡ. ಗಾಳಿ ಮಳೆಗೆ ಫೋನ್ ಕಂಬ ಬೀಳೋದು, ಇಲ್ಲಾ ಆ ಕಂಬಗಳ ಮೇಲೆ ಮರಗಳು ಬೀಳೋದು. ಏನಾದ್ರೂ ಅವಾಂತರಗಳು ನಡೀತಾನೇ ಇರುತ್ತಿತ್ತು. ಅದು ಬಿಟ್ರೆ ಪತ್ರ ವ್ಯವಹಾರಗಳು. ಸರಿಯಾದ ಸಮಯಕ್ಕೆ  ತಲುಪಿದ್ರೆ ಸಂತೋಷ ಪಡುತ್ತಿದ್ದ ಸನ್ನಿವೇಶಗಳು. ಇನ್ನೂ ಬ್ಲ್ಯಾಕ್ ಅಂಡ್ ವೈಟ್ ಟಿವಿ ಯುಗ, ಆಂಟೆನಾ ಬಳಸುತ್ತಿದ್ದ ಕಾಲ. ಆ ಟಿವಿಯನ್ನು ಟ್ಯೂನ್ ಮಾಡೋದೇ ಒಂದು ಹರಸಾಹಸ. ‘ಚ್ಯಾನೆಲ್ ಬಂತಾ.. ಬಂತಾ’  ಕೇಳಿ ಕೇಳಿನೇ ಗಂಟಲು ಒಣಗಿಸಿಕೊಂಡಿದ್ದೇ ಅಧಿಕ.  ಚ್ಯಾನೆಲ್ ಬಂತೋ ಬಿಡ್ತೋ. ಇವುಗಳ ಮಧ್ಯೆ ಆಗಸದ ತುಂಬಾ ಮೋಡಗಳು ದಿಬ್ಬಣ ಹೊರಟರಂತೂ ಕೇಳೋದೇ ಬೇಡ. ಸಿಗ್ನಲ್‌ಗಳು ಕೂಡ ಆಟ ಆಡಿಸಲು ಪ್ರಾರಂಭಿಸಿ  ಬಿಡುತ್ತವೆ. ದಿನ ನಿತ್ಯ ಈ ರಗಳೆಯನ್ನ  ನಮಗೆ, ಹೊರಗಿನ ವಾತಾವರಣವೇ ಮಜಾ ಅನ್ನಿಸ್ತಾ ಇತ್ತು.

ನಾವಿದ್ದ ಮನೆಯ ಹಿಂಬದಿಯಲ್ಲೇ ಒಂದು ನಾಗಬನವೂ ಇತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಾಗೂ ಮನೆಯ ಹೊರಗೆ ಹಾವುಗಳ ದರ್ಶನ ಸಾಮಾನ್ಯ. ಚಿಕ್ಕ ವಯಸ್ಸು, ಗೊಡ್ಡು ಧೈರ್ಯ ಬೇರೆ,  ಹಳ್ಳಿ ಜೀವನ,  ಬದುಕಿನ ತುಂಬಾ ಕುತೂಹಲಗಳು. ಆಟ ಆಡ್ತಾ ಇರೋ ಸಂದರ್ಭಗಳಲ್ಲಿ ಹಾವುಗಳು ಏನಾದ್ರೂ ಕಾಣಿಸಿಕೊಂಡ್ರೆ, ಅವು ಹೋಗೋವಲ್ಲಿ  ನಮ್ಮ ಸವಾರಿಯೂ ಸಾಗ್ತಿತ್ತು.  ಹೆಸರು ಗೊತ್ತಿಲ್ಲ, ಅವುಗಳ ಜಾತಿ ತಿಳಿಯುವಷ್ಟು ಮಾಹಿತಿ  ಆದ್ರೂ ಕಲರ್ ಕಲರ್ ಹಾವುಗಳನ್ನ ನೋಡಿದ ನೆನಪು ಮಾತ್ರ ಇನ್ನೂ ಇದೆ. ನಮ್ಮ ತಲೆಯಲ್ಲಿ ಏನು ಇಲ್ಲಾಂದ್ರೂ, ಆ ಹಾವು ಹಂಗಂತೆ, ಈ ಹಾವು ಹಿಂಗಂತೆ ಅನ್ನೋ ಚರ್ಚೆಗಳಿಗೆ ಕಡಿಮೆ ಇರಲಿಲ್ಲ.

10 – 15 ವರ್ಷಗಳ ಕಾಲ ಅದೇ ಬಾಡಿಗೆ ಮನೆಯಲ್ಲಿ ಮತ್ತು ಚಾರ್ಮಾಡಿಯಲ್ಲಿ ನಮ್ಮ ಜೀವನ. ನಿಜಕ್ಕೂ ಯಾವತ್ತೂ ಮರೆಯಲಾಗದ ಕ್ಷಣಗಳು. ಇಷ್ಟು ದೀರ್ಘಾವಧಿಯ ಬದುಕು ಅಲ್ಲಿನ ಜನರ ಪ್ರೀತಿ, ಸಹಾಯಕ್ಕೆ, ಕಾಡಿನ ಸಹವಾಸಕ್ಕೆ ಯಾವತ್ತೂ  ಬಾಗಲೇಬೇಕು.  ಅಚ್ಚರಿಯ ಸಂಗತಿ ಅಂದ್ರೆ, ನಾವು ಸ್ವಂತ ಮನೆಯತ್ತ ಸ್ಥಳಾಂತರಿಸಿದ ಬಳಿಕ, ಸಣ್ಣ ಪುಟ್ಟ ಬಿರುಕುಗಳು ಹೊರತುಪಡಿಸಿ ಆ ಮನೆ ಇನ್ನೂ ತನ್ನ ಆಸ್ತಿತ್ವವನ್ನ ಉಳಿಸಿಕೊಂಡಿದೆ. ಆ ಮನೆಯನ್ನ ಮತ್ತೆ ನೋಡ್ತಾ ಇದ್ರೆ… ಈಗಲೂ ಅದೇ ಬಾಲ್ಯದ ನೆನಪ್ಕ. ಆ ಬದುಕೂ ಮತ್ತೊಮ್ಮೆ ಬರೋ ಹಾಗೆ ಇರ್ತಿದ್ರೆ ಎಷ್ಟು ಚೆನ್ನಾಗಿರೋದು. ಆ ಸುಂದರ ಬದುಕು ಕಣ್ಣ ಮುಂದೆ ಬಂದಾಗ ಎಲ್ಲಾ, ಈ ಹಾಡು ಯಾವತ್ತೂ ನೆನಪಾಗುತ್ತೆ. ಆಜಾ ಬಚ್ಪನ್  ಬಾರ್ ಫಿರ್..

ದೆ ದೆ ಅಪ್ನಿ ನಿರ್ಮಲ್ ಶಾಂತಿ…

Tags

Related Articles

Leave a Reply

Your email address will not be published. Required fields are marked *

Language
Close