ವಿಶ್ವವಾಣಿ

‘ಮುಂದೆ ಶತ್ರು ವಾಗಬಲ್ಲವನೆ ನಿಜವಾದ ಗೆಳೆಯ’

ಹಿಂದಿಯಲ್ಲಿ ಒಂದು ಗಾದೆ ಮಾತಿದೆ. ‘ಅಚ್ಛಿ ಚೀಜ್ ದೋಸ್‌ತ್ ಔರ್ ದುಶ್ಮನ್‌ಕೋ ನಹಿ ಬತಾನಾ’ ಅಂತ. ಅಂದರೆ ಒಳ್ಳೆ ವಸ್ತವನ್ನು ಗೆಳೆಯ ಹಾಗೂ ವೈರಿಗೆ ತೋರಿಸಬೇಡ ಅಂತ ಇದರ ಅರ್ಥ. ಗೆಳೆಯ, ವೈರಿ ವಿರುದ್ಧ ಶಬ್ದಗಳು, ಗೆಳೆಯ, ಗೆಳೆತನಗಳ ಬಗ್ಗೆ ನೂರಾರು, ಸಾವಿರಾರು ವಾಕ್ಯಗಳಿವೆ, ಉಕ್ತಿಗಳಿವೆ. ಗೆಳೆಯ ಒಳ್ಳೆಯವನಿದ್ದರೆ ಕನ್ನಡಿ ಬೇಕಿಲ್ಲ. ಗೆಳೆಯರಿದ್ದರೆ ಸಿರಿಸಂಪತ್ತು ಗೆಳೆಯರಿದ್ದರೆ ಊರುಗೋಲು ಬೇಕಿಲ್ಲ. ಗೆಳೆಯರಿದ್ದರೆ ನಿನಗೆ ಬುದ್ದಿಯೂ ಇರಬೇಕಿಲ್ಲ ಇತ್ಯಾದಿ, ಇತ್ಯಾದಿ. ಆದರೆ, ಇಲ್ಲಿ ಗೆಳೆಯನನ್ನು ಸಾರಾಸಗಟು ವೈರಿಯ ಜತೆ ಸಮೀಕರಿಸಲಾಗಿದೆ. ಏನಿದರ ಅರ್ಥ? ಇದು ಅರ್ಥವಾಗಬೇಕಾದರೆ, ನಿಮಗೆ ವಯಸ್ಸಾಗಿಬೇಕು. ಅಸಂಖ್ಯಾತ ಗೆಳೆಯರು ನಿಮ್ಮ ಜೀವನದಲ್ಲಿ ಬಂದು ಹೋಗಿರಬೇಕು, ಅದರಲ್ಲೂ ನಿಮ್ಮ ಚಡ್ಡಿ ದೋಸ್ತಗಳು ಎಷ್ಟೋ ವರ್ಷಗಳ ಮೇಲೆ ಅದೂ ನೀವೊಂದು ಹೆಸರು, ಹಣ, ಗೌರವ ಮಾಡಿಕೊಂಡ ಮೇಲೆನಾದರೂ ಭೇಟಿಯಾದರೆಂದರೆ ವೈರಿಗಳಿಗಿಂತ ನಿಮ್ಮನ್ನು ಹೆಚ್ಚು ಹಿಂಸಿಸುತ್ತಾರೆ. ಅವರು ಪ್ರೀತಿಸುತ್ತಿದ್ದಾರೋ, ತೀರಿಸಿಕೊಳ್ಳುತ್ತಿದ್ದಾರೋ, ಹಳ್ಳಕ್ಕೆ ಕೆಡುವುತ್ತಿದ್ದಾರೋ, ದಿಬ್ಬಕ್ಕೆರಿಸುತ್ತಿದ್ದಾರೋ ತಿಳಿಯುವದಿಲ್ಲ. ನನ್ನದೇ ಅನುವಗಳನ್ನು ಹಂಚಿಕೊಳ್ಳುತ್ತೇನೆ.

ನನ್ನ ಐವತ್ತೆಂಟರ ವಯಸ್ಸಿನ ಈ ಸಮಯದಲ್ಲಿ ನಾನು ಗಮನಿಸಿದ್ದೇನೆಂದರೆ ಪ್ರತಿ ಐದು ವರ್ಷಕ್ಕೊಮ್ಮೆ ನನ್ನ ಜೀವನದ ಗತಿಯಲ್ಲಿ ಗಮನಾರ್ಹ ಬದದಲಾವಣೆಗಳಾಗಿವೆ. ಸಂಕ್ರಮಣ ವರ್ಷಕ್ಕೊಮ್ಮೆ ಬಂದರೆ ನನ್ನ ಜೀವನದಲ್ಲಿ ಐದು ವರ್ಷಕ್ಕೊಮ್ಮೆ ಸಂಕ್ರಮಣ ಕಾಲ ಬಂದಿದೆ. ಸಾರಾಸಗಟು ನನ್ನ ಜೀವನ, ಸುತ್ತಲಿನ ಗೆಳೆಯರು, ಗುರಿ, ಉದ್ದೇಶ, ಉದ್ಯೋಗ ಎಲ್ಲವೂ ಬದಲಾವಣೆಯಾಗುತ್ತದೆ. ನಾನೇ ಚಕಿತನಾಗುವಷ್ಟು ಇದು ನನ್ನ ಜೀವನದಲ್ಲಿ ನಡೆದಿದೆ, ಈ ಪರಿಚಿತವಾಗಿ ಸ್ನೇಹಿತರಾಗಿರುವವರೇ ಬೇರೆ, ಈಗ್ಗೆ ಐದು ಹತ್ತು ವರ್ಷಗಳ ಹಿಂದೆ ಇದ್ದವರೇ ಬೇರೆ, ಹಳೇ ಸ್ನೇಹಿತರು ಕೆಲವರೀಗ ಶತ್ರುಗಳಾಗಿದ್ದಾರೆ, ಕೆಲ ಶತ್ರುಗಳು ಸ್ನೇಹಿತರಾಗಿದ್ದಾರೆ. ಒಟ್ಟಿನಲ್ಲಿ ಬದಲಾವಣೆಯೇ ಬದುಕು ಎಂದು ಮನ ಗಾಣುತ್ತಿದ್ದೇನೆ.

ಗೆಳೆಯರ ಬಗ್ಗೆ ಗುರುಗಳಾದ ಬೀಚಿಯವರ ‘ತಿಂಮರಸಾಯನ’ ಎಂಬ ಪುಸ್ತಕದಲ್ಲಿ ಅನೇಕ ಹಾಗೂ ವಿಪರೀತ ಅರ್ಥಗಳಿವೆ. ಗೆಳೆಯ ಎಂದರೆ ಅವರು ಹೇಳುತ್ತಾ ಹೋಗುವ ಅರ್ಥಗಳು ಒಂದಲ್ಲವೊಂದು ಸಾರಿ ನಮ್ಮ ಜೀವನದಲ್ಲಿ ನಾವು ಅನುಭವಿಸಿದವುಗಳೇ, ಕೆಲ ಉದಾಹರಣೆಗಳು

ಮುಂದೆ ಎಂದಾದರೂ ಶತ್ರುವಾಗಬಹುದಾದವನೇ ಗೆಳೆಯ; ನಿನ್ನ ಶತ್ರುಗಳನ್ನು ನಾನೂ ದ್ವೇಷಿಸುತ್ತೇನೆ ಎನ್ನುವವನನ್ನೂ ಎಂದೂ ನಿನ್ನ ಗೆಳೆಯ ಎಂದು ಹೇಳಿಕೊಳ್ಳಬೇಡ;

ದೇವರೆ, ನನ್ನನ್ನು ನನ್ನ ಗೆಳೆಯರಿಂದ ರಕ್ಷಿಸು, ಶತೃಗಳಿಂದ ನಾನೇ ರಕ್ಷಿಸಿಕೊಳ್ಳುತ್ತೇನೆ;

ಗೆಳೆಯ ಎಂದು ಯಾವ ಕತ್ತೆಯನ್ನಾದರೂ ಮಾಡಿ ಕ್ಳೊಬಹುದು, ಕರೆಯಬಹುದು. ಆದರೆ, ಶತೃವಾಗಲು ಯೋಗ್ಯ ಸಿಂಹಬೇಕು.

ನಿನ್ನ ಶ್ರೀಮಂತಿಕೆಯೆಂಬ ಜ್ವರದ ಉಷ್ಣತೆಯನ್ನು ಅಳೆಯಲು ಥರ್ಮಾಮೀಟರ್‌ನಂತೆ ಕೆಲಸ ಮಾಡುವವನೆ ಗೆಳೆಯ;

ನಮ್ಮ ಒಬ್ಬೊಬ್ಬ ಗೆಳೆಯರು ಸತ್ತಂತೆಲ್ಲ ನಾವು ಸಾವಿಗೆ ಹತ್ತಿರವಾಗುತ್ತೇವೆಂಬುದನ್ನು

ಹೊಸ ಗೆಳೆಯನ ಬಗ್ಗೆ ಹೆಚ್ಚು ತಿಳಿದುಕೊ, ಹಳೆಯ ವೈರಿಯ ಬಗ್ಗೆ ಏನೂ ತಿಳಿಯದಂತಿರು;

ಸಂಪತ್ತು ಗೆಳೆಯರನ್ನು ತಂದುಕೊಡುತ್ತೆ, ಸಂಕಷ್ಟ ಅವರನ್ನು ಪರೀಕ್ಷಿಸುತ್ತದೆ. ಹೀಗೆ ಅನೇಕ ಅರ್ಥಗಳಿವೆ.

ನನ್ನನ್ನು ಮೊದಲಿನಿಂದ ನೋಡಿದ ಅನೇಕ ಗೆಳೆಯರಿದ್ದಾರೆ. ಮೊದಲಿನಿಂದ ನೋಡಿದವರಿಗ ನಾನು ಕೈಗೆ ಸಿಗುತ್ತಿಲ್ಲ, ಈಗಿನವರಿಗೆ ಅರ್ಥವಾಗುತ್ತಿಲ್ಲ. ಮೊದಲು ಗೆಳೆಯರನ್ನು ನಾನೇ ಹುಡುಕಿ ಹೋಗುತ್ತಿದ್ದೆ. ಈಗ ಗೆಳೆಯರೇ ಬಂದರೂ ಅಡಗಲು ಜಾಗ ಹುಡುಕುತ್ತಿದ್ದೇನೆ. ಕೆಲ ಕಿರಿಯ ಗೆಳೆಯರಿದ್ದಾರೆ ಗಂಗಾವತಿ, ಹೊಸಪೇಟೆ, ಬಳ್ಳಾರಿ ಬಿಟ್ಟರೆ ಊರಿಗೆ ಹೋದವರಲ್ಲ. ಅವರ ಮುಂದೆ ನಾನು ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್, ಅಡಿಲೇಡ್ ಸುದ್ದಿಗಳನ್ನು ಹೇಳಿದರೆ ನಂಬುವದೇ ಇಲ್ಲ, ಅಲ್ಲಿ ಅತಿ ವಿಚಿತ್ರ ಚಳಿ. ನೊಣ, ಧೂಳು, ಸೊಳ್ಳೆ ಇಲ್ಲವೇ ಇಲ್ಲ ಎಂದರೆ, ‘‘ಬಳ್ಳಾರಿಯಂಥಾ ಬಳ್ಳಾರ್ಯಾಗೆ ಇವೆಲ್ಲ ಇವೆ, ಚಳಿ ಅಂದ್ರೆನೋ ಮಾರಾಯ ಕೇಳಿದವರಿದ್ದಾರೆ, ಅಲ್ಲಿ ಮಾಳಿಗೆ ಮ್ಯಾಲೆ ಜನ ಮಲಗಂಗಿಲ್ಲ ಅಂದ್ರೆ ಯಾರು ನಂಬ್ತಾರೋ ಹುಚ್ಚ ಹಳೇ ಹುಚ್ಚ ’ಎಂದು ನಕ್ಕು ಬಿಟ್ಟಿದ್ದಾರೆ.

ಅಮೇರಿಕಾದಾಗ ರಾತ್ರಿ ಯಾದಾಗ ಇಲ್ಲಿ ಅಲ್ಲಿ ಹಗಲಾದಾಗ ಇಲ್ಲಿ ರಾತ್ರಿ ಎಂದರೆ, ಇಡೀ ಮೂವತ್ತೆರಡು ವರ್ಷದಲ್ಲಿ ಒಮ್ಮೆ ಮಾತ್ರ ಅದೂ ಅವರ ತಂದೆಯನ್ನ ಆಸ್ಪತ್ರೆಗೆ ತೋರಿಸಲು ಹುಬ್ಬಳ್ಳಿಗೆ ಹೋಗಿದ್ದ ಹನುಮೇಶ ಎಂಬ ಗೆಳೆಯ ಎಂಬ ಪಕಪಕನೆ ನಕ್ಕುಬಿಟ್ಟ ‘ ಪ್ರಾಣೇಶ, ನೀನು ಅತೀ ಹೇಳ್ತಿಬಿಡಪಾ, ಜಗತ್ತಿಗೆ ಒಬ್ಬನೇ ಸೂರ್ಯ ಆತ ಎಲ್ಲ ಕಡೆ ಏಕ ಕಾಲಕ್ಕೆ ಕಾಣಿಸಿಗೋತಾನೆ, ನಿತ್ಯ ಸೂರ್ಯಗೆ ಮೂರು ಹೊತ್ತು ಅರ್ಘ್ಯ ಕೊಡೋ, ಮೂರು ಹೊತ್ತು ಮೂಗು ಹಿಡಿದು ಸಂಧ್ಯಾವಂದನೆ ಮಾಡೋ ಹೇಳ್ತಿಯೇನೋ ಈ ಕಟ್ಟು ಕಥಿ ಎಲ್ಲ’ ಎಂದೇ ಒದರಾಡಿದ. ಮೂಗು ಹಿಡಿದು ಕೂಡ್ತಿ, ಅದಕ್ಕೆ ನಿನಗೆ ಗೊತ್ತಿಲ್ಲ, ಕಣ್ಣುತೆಗೆದು, ಬುದ್ದಿ ಓಡಿಸಿದ್ರ ಗೊತ್ತಾಗ್ತದೆ’ ಎಂದೆ. ‘ಏಳನೆಯ ಕ್ಲಾಸಿಗೇ ಸಾಲಿಬಿಟ್ಟ, ಎರಡು ಏಕಾದಶಿ ಮಾಡಿ ನಿತ್ರಾಣ ಆಗಿನಿ’ ಅಂತ ವಾರ್ಷಿಕ ಪರೀಕ್ಷೆಯ ಎರಡು ಪೇಪರ್‌ಗೆ ಹೋಗದೇ ಉಂಡು ಮಲಗಿದ್ದ ಹನುಮೇಶಿಗೆ ಹೇಗೆ ಭೋಗೋಳದ ಪಾಠ ಹೇಳಲಿ?

ಇವರೆಲ್ಲ ಮುಗ್ಧರು, ಇನ್ನು ಕೆಲವು ಸ್ನೇಹಿತರಿದ್ದಾರೆ. ಇಲ್ಲಿಯೇ ಹುಟ್ಟಿ ತಾವು ಓದಿದ ಹೈಸ್ಕೂಲ್‌ನಲ್ಲೊ, ಟೀಚರ್, ಲೆಕ್ಚರ್‌ಗಳಾಗಿದ್ದಾರೆ ಅವರಿಗೆ ಬೆಂಗಳೂರಿಗೆ ವಾಲ್ಯುವೇಷನ್‌ಗೆ ಹೋಗುವುದೇ ಒಂದು ದೊಡ್ಡ ಲಾಂಗ್ ಜರ್ನಿ, ಹಂಪಿ ಯೂನಿರ್ವಸಿಟಿ ಎಂದರೆ ಕಾಶಿ, ಗುಲ್ಬರ್ಗಾ ಯುನಿವರ್ಸಿಟಿಯೆಂದರೆ ಮೆಕ್ಕಾಮದಿನಾ ತಮ್ಮ ಸಬ್ಜೆಕ್ಟು, ಕ್ಲಾಸ್ ರೂಂನಲ್ಲಿ ತಮ್ಮ ವಿದ್ಯಾರ್ಥಿಗಳ ಸೆಲೆಬಸ್ ಮುಗಿಸುವದರ ಮುಂದೆ ಪ್ರಪಂಚದ ಯಾವ ವ್ಯಕ್ತಿವಿಷಯವೂ ದೊಡ್ಡದಲ್ಲ. ಎಷ್ಟೋ ಸಲ ಗಂಗಾವತಿಯಿಂದ ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ನನ್ನನ್ನು ನೋಡಿದ ಕೆಲ ಸ್ನೇಹಿತ ಲೆಕ್ಚರ್‌ಗಳು ಏನಪಾ ನೀನು ಬೆಂಗಳೂರಿಗಾ? ನಿಂದೇನು ಐತೋ ಅಲ್ಲಿ ಕೆಲಸ? ಎಂದೆ ಚಕಿತರಾಗುತ್ತಾರೆ. ವಾಲ್ಯುವೇಷನ್‌ಗೆ ಮಾತ್ರ ಜನ ಬೆಂಗಳೂರಿಗೆ ಹೋಗಬೇಕೆಂಬುದು ಅವರ ಪುಟ್ಟ ಜಗತ್ತಿನ ಕಲ್ಪನೆ.

ಇನ್ನು ಇಂಗ್ಲೀಷ್ ಎಂ.. ಮಾಡಿದ ನನ್ನ ಗೆಳೆಯನೊಬ್ಬ, ಬಿ.ಕಾಂ.ಮಾಡಿದ ನಾನು ಇಂಗ್ಲೆಂಡ್‌ಗೆ ಹೋಗಿ ಬಂದದ್ದು ಸುಳ್ಳು ಎಂದೇ ತನ್ನ ಸಹೋದ್ಯೋಗಿ ಗೆಳೆಯರ ಮುಂದೆ ಹೇಳಿ ನಗಾಡಿದ್ದಾನೆ. ರಾಜ್ಯಶಾಸ್ತ್ರದಲ್ಲಿ ಎಂ.. ಮಾಡಿದ ಗೆಳೆಯನೊಬ್ಬ ನಾನು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಕಾರ್ಯಕ್ರಮ ಕೊಟ್ಟಿದ್ದೇನೆ, ದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ಒಳಗೆಲ್ಲ ಸುತ್ತಾಡಿದ್ದೇನೆಂದರೆ, ಹೈಲಿ ಇಂಪಾಸಿಬಲ್ ಎಂದೇ ವಾದಿಸಿದ್ದಾನೆ. ಇರನ್ನೆಲ್ಲ ನಾನು ನಕ್ಕಿದ್ದೇನೆ. ಎಷ್ಟು ಸಣ್ಣ ಜಗತ್ತಿನಲ್ಲಿ ಇವರೆಲ್ಲ ಎಷ್ಟು ಸುಖವಾಗಿದ್ದಾರಲ್ಲ ಎಂದು ಹೊಟ್ಟೆಕಿಚ್ಚು ಪಟ್ಟಿದ್ದೇನೆ.

ನನ್ನದು ತಿಂಗಳ ಇಪ್ಪತ್ತು ದಿನ ಪ್ರಯಾಣ, ನಿದ್ದೆಗೇಡು, ಹೊತ್ತಲ್ಲದ ಹೊತ್ತಿನಲ್ಲಿ ಊಟ ಹಬ್ಬ ಹುಣ್ಣಿಮೆಗಳ ಸಂತಸವಿಲ್ಲ, ಜನರನ್ನು ನಗಿಸುತ್ತೆವಾಗಲಿ ನಮಗೆ ನಗುವಿಲ್ಲ ಹಬ್ಬಗಳಲ್ಲಿ ಹಬ್ಬದ ಊಟಹೋಗಲಿ, ಪ್ರಯಾಣದಲ್ಲಿ ಏನಾದರೂ ತಿನ್ನಲ್ಲು ಹೋಟಲ್‌ಗಳು ಸಿಗದೇ ಪಾರ್ಲೆಜಿ ಬಿಸ್ಕಿಟು ತಿಂದು ನೀರು ಕುಡಿದಿದ್ದೇವೆ. ಎಲ್ಲಕ್ಕಿಂತ ನನಗೆ ನಗುತರಿಸಿದ್ದೆಂದರೆ ನನ್ನ ವ್ಯಾಪಾರಿ ಗೆಳೆಯನೊಬ್ಬನಿದ್ದಾನೆ. ಒಂದೂವರೆ ತಿಂಗಳು ಅದೇ ಅಮೇರಿಕಾ ಪ್ರವಾಸ ಮುಗಿಸಿ ಬಂದು, ಎರಡು ದಿನ ಬಿಟ್ಟು ಅವನ ಅಂಗಡಿಗೆ ಹೋಗಿದ್ದೆ, ಏನಲೇ ತಿಂಗಳ ಮ್ಯಾಗಾತು ಪತ್ತೆನೇ ಇಲ್ಲ ಆಸಾಮಿ ಎಲ್ಲಿಗ್ಹೋಗಿದ್ದೆ ಎಂದ. ಅಮೇರಿಕಾಗೆ ಹೋಗಿದ್ದೆ ಎಂದೆ, ಗಾಬರಿಯಾದ ಅವನು ಹುಶ್.. ಮೆತ್ತಗೆ ಹೇಳಲೇ ಎಂದು, ಗಲ್ಲಾ ಪೆಟ್ಟಿಗೆಯಿಂದ ಎದ್ದು ಬಂದು, ಹಿಂದಿನ ಖಾಸಗಿ ತೆಕ್ಕೆ, ಗಾದಿಗಳ ರೂಮಿನಲ್ಲಿ ನನ್ನ ಕೈಹಿಡಿದು ಮೆಲ್ಲಗೆ ಕೂರಿಸಿಕೊಂಡು ಕಿವಿಯಲ್ಲಿ ಕೇಳಿದ ಎಚ್‌ಐವಿ ಆಗಿತ್ತೇನಲೇ ಅಂತ, ಬಿದ್ದು ಬಿದು ನಕ್ಕ ನಾನು ಯಪ್ಪಾ, ಪ್ರೋಗ್ರಾಂಗೆ ಹೋಗಿದ್ದೆ’ ಎಂದರೆ ‘ಲೇ ನನ್ನ ತಾವ ಯಾಕೆ ಸುಳ್ಳು ಹೇಳ್ತಿಯಲೇ ನಿನ್ನ ದೋಸ್ತ ನಾನು, ಯಾರಿಗೂ ಹೇಳಂಗಿಲ್ಲ, ನನ್ನ ಮ್ಯಾಲ ಭರವಸೆ ಇಡು’ ಎಂದು ಧೈರ್ಯ ತುಂಬುವಂತೆ ಕೈ ಅಮುಕಿದ್ದ. ಅವನಿಗೆ ವಿವರಿಸುವಲ್ಲಿ ಸಾಕು ಸಾಕಾಯಿತು. ನಮ್ಮಕಡೆ ಫಾರಿನ್ ಹೋಗಿ ಬಂದಾನೆ ಅಂದ್ರೆ ಎಚ್‌ಐವಿ ತೋರಿಸಲೇ ಹೋಗಿದ್ದ ಅಂತಲೇ ಅರ್ಥ ಇತ್ತು ಆಗೆಲ್ಲ.

ಈ ರೀತಿ ಗೆಳೆಯರಿದ್ದೊಂದು ಪಂಗಡವಾದರೆ ಇನ್ನು ಕೆಲವರಿದ್ದಾರೆ ಅವರದು ಬರೀ ಆರ್ಥಿಕ ಎಷ್ಟು ತಗೋತಿಯಲೆ? ಎಷ್ಟು ಗಳಿಸಿ? ಎಷ್ಟು ಡಿಪಾಜಿಟ್ ಮಾಡಿ? ಬರೀ ಇದೇ ಪ್ರಶ್ನೆಗಳು. ನನ್ನ ತಲಿಮಾಲೆ ಕೈಯಿಟ್ಟು ಹೇಳು ಎಷ್ಟು ಕೋಟಿ ಗಳಿಸಿ ಎಂದು ಪೀಡಿಸುತ್ತಾರೆ. ನಾನು ಮಾಡ್ತಿರೋದು ಹಾಸ್ಯ, ಕೋಟಿಗಳಿಕೆ ಇರಲು ಇದು ರಾಜಕಾರಣ ಅಲ್ಲ, ಜನಕೊಡುತ್ತಾರೆ ನನಗೆ, ಜನರಿಗಾಗಿ ಇರೋದನ್ನ ಲಪಟಾಯಿಸುವದಲ್ಲ ಈ ಉದ್ಯೋಗ ಎಂದು ಹೇಳಿದರೂ ನಂಬುವದಿಲ್ಲ. ಯಾರಾರನ್ನೊ ಕರೆತಂದು ಇವರಿಗೆ ಒಂದು ಲಕ್ಷ ಸಹಾಯ ಮಾಡು, ನಿಮ್ಮ ತಂದೆಯವರ ಹೆಸರಿನಲ್ಲಿ ಇವರಿಗೊಂದು ಕಾಲೇಜು ಒಂದು ಕೋಟಿಯ ಪಾಲಿಸಿ ಮಾಡಿಸು, ಹೆಲಿಕಾಪ್ಟರ್ ತಗೋ ಇತ್ಯಾದಿ ಬಿಟ್ಟಿ ಸಲಹೆ, ಉಪದೇಶ ಕೊಡುತ್ತಾರೆ. ಇವರೆಲ್ಲ ಇಪ್ಪತ್ತು ಸಾವಿರದೊಳಗೆ ಸಂಬಳ ಇರುವ ನೌಕರಿ ಇರುವವರು. ಮಾತಿನಲ್ಲಿ ಮಾತ್ರ ಲಕ್ಷ, ಕೋಟಿಗಳ ಉದಾಹರಣೆ ಕೊಡುತ್ತಾರೆ. ಮೊನ್ನೆ ಒಬ್ಬ ಗೆಳೆಯ ಬಂದು ನನ್ನ ಎರಡು ಲಾರಿ, ಒಂದು ಜೆಸಿಬಿ ಮಾರಾಟಕ್ಕಿದೆ ತಗೋತಿಯಾ? ಎಂದು ಕೇಳಿದ, ಭಾಷಣ ಮಾಡುವ ನಾನು ಲಾರಿ, ಜೆಸಿಬಿ ತಗೊಂಡು ಏನು ಮಾಡಲೋ? ಎಂದರೆ, ಹಣ ಇಟ್ಟುಕೊಂಡು ಏನುಮಾಡ್ತಿ? ಕೂಗಾಡಿದ. ಇವರು ಮಿತ್ರರೋ, ಶತ್ರುಗಳೋ ತಿಳಿಯದೆ ಒದ್ದಾಡುತ್ತಿರುತ್ತೇನೆ.

ಸಿರಿವಂತಿಕೆಗೂ, ಜನಪ್ರಿಯತೆಗೂ ಸಂಬಂಧವೇ ಇಲ್ಲ ಆದರೂ ಜನಪ್ರಿಯನಾಗಿಬಿಟ್ಟರೆ, ಸೆಲೆಬ್ರಿಟಿ ಅನಿಸಿಗೊಂಡರೆ ಸಾಕು, ಆತ ದುಡ್ಡು ಮಾಡಿದ್ದಾನೆ ಎಂದೇ ಅರ್ಥ. ಅದು ಹೇಗೆ ಕಲ್ಪಿಸಿ ಕೊಳ್ಳುತ್ತಾರೋ ತಿಳಿಯದಂತಾಗಿದೆ. ಒಂದೂರಲ್ಲಿ ಒಬ್ಬ ಬಡಬ್ರಾಹ್ಮಣನಿದ್ದನು ಎಂದೇ ಕಥೆಗಳು ಶುರುವಾಗುವಂತೆ, ಒಂದೂರಲ್ಲಿ ಒಬ್ಬ ಬಡ ಕವಿಯಿದ್ದನು, ಬಡಸಾಹಿತಿಯಿದ್ದನು ಎಂದು ಕೂಡಾ ಕಥೆಗಳಿವೆ. ಹಿರಿಯರಾದ ಮಾಸ್ಟರ್ ಹಿರಣಯ್ಯ ಹೇಳುವಂತೆ ‘ಜನ ಚಪ್ಪಾಳೆ ತಟ್ಟಿ ನಗುತ್ತಿರುವವರೆಗೂ ಕಲಾವಿದ ಕೈಲಾಸದಲ್ಲೇ ಜನರ ಚಪ್ಪಾಳೆ ನಿಂತ ದಿನ ಅವನಿಗೆ ಕೈಸಾಲ ಕೂಡಾ ಸಿಗುವದಿಲ್ಲ’ ತ್ರಿಕಾಲ ಸತ್ಯವಾದ ಮಾತು. ನಮ್ಮ ಗೆಳೆಯರು, ಬಂಧುಗಳು ಕೇಳಿಸಿಕೊಳ್ಳಬೇಕಾದ ಮಾತು