ವಿಶ್ವವಾಣಿ

ಆಟಿ ಅಮವಾಸ್ಯೆಗೆ ಒಂದೇ ವಾರ..!

ಇನ್ನೇನು ಆಟಿ ಅಮವಾಸ್ಯೆಗೆ ಇನ್ನೊಂದು ವಾರ ಮಾತ್ರ ಬಾಕಿಯಿದೆ. ಆಷಾಢ ಅಮವಾಸ್ಯೆಯು ಕರಾವಳಿಯಲ್ಲಿ ಆಟಿ ಅಮವಾಸ್ಯೆ ಅಂತಾನೇ ಫೇಮಸ್. ಅಂದು ಹಾಳೆ ಮರದ ತೊಗಟೆಯ ಕಷಾಯ ಕುಡಿದು ತೀರ್ಥಸ್ನಾನ ಮಾಡೋದು ವಿಶೇಷ.

ಹಿಂದಿನ ಕಾಲದಲ್ಲಿ ಈ ತಿಂಗಳಿನಲ್ಲಿ ವಿಪರೀತ ಮಳೆ ಇರೋದ್ರಿಂದ ರೋಗ, ರುಜಿನಗಳು ಸಂಭವಿಸೋ ಆಪತ್ತು ಎದುರಾಗುತ್ತೆ. ಹೀಗಾಗಿ ಹಾಳೆ ಮರದ ತೊಗಟೆಯಿಂದ ಕಷಾಯ ತಯಾರಿಸಿ ಅದನ್ನ ಆಟಿ ಅಮವಾಸ್ಯೆಯಂದೇ ಬೆಳ್ಳಂಬೆಳಗ್ಗೆ ಸೇವಿಸಬೇಕು. ಔಷದೀಯ ಗುಣವಿರುವ ಈ ಕಷಾಯವನ್ನ ಸೇವಿಸೋದ್ರಿಂದ ಯಾವುದೇ ರೋಗಗಳು ಬರೋದಿಲ್ಲ ಅನ್ನೋ ನಂಬಿಕೆ ಕರಾವಳಿಗರದ್ದು. ಹೀಗಾಗಿ ತುಳುನಾಡಿನಲ್ಲಿ ಆಟಿ ಅಮವಾಸ್ಯೆಗೆ ಬಹಳ ಮಹತ್ವವಿದೆ.

ತುಳುನಾಡಿನಲ್ಲಿ ಇದಕ್ಕೆ ವಿಶಿಷ್ಠ ಸಂಪ್ರದಾಯವಿದೆ. ಮುಂಜಾನೆ ಬೇಗನೆ ಎದ್ದು ಸೂರ್ಯೋದಯ ಆಗೋದಕ್ಕಿಂತ ಮುನ್ನ ಹಾಳೆ ಮರ ಹುಡುಕಿ ಅದರ ತೊಗಟೆ ಕಿತ್ತು ತರಬೇಕು. ಇದ್ರ ತೊಗಟೆಯನ್ನು ಅರೆದು ಶುಂಠಿ, ಬೆಳ್ಳುಳ್ಳಿ ಒಗ್ಗರಣೆ ಸೇರಿಸಿ ಈ ಕಹಿ ಕಷಾಯವನ್ನ ಕುಡಿಯಬೇಕು. ಅಯ್ಯೋ.. ಬೆಳ್ಳಂಬೆಳಗ್ಗೆ ಕಾಲಿ ಹೊಟ್ಟೆಗೆ ಈ ಕಹಿ ಕಷಾಯ ಕುಡಿಯಬೇಕಾ ಅಂತಾ ಇಷ್ಟವಿಲ್ಲದಿದ್ರೂ, ಕಷ್ಟಪಟ್ಟು ಕುಡಿದು ಅದನ್ನ ಸಂಭ್ರಮಿಸೋ ಪರಿವೇ ಬೇರೆ. ಮದ್ದು ಸೇವಿಸಿದ ಕೂಡಲೇ ಪತ್ರೊಡೆಯ ಖಾದ್ಯ ಕಹಿ ಮರೆಸುತ್ತೆ.

ಆದ್ರೆ ಹಾಳೆ ಮರದ ತೊಗಟೆ ತರುವಾಗ ಬಹಳ ಎಚ್ಚರ ವಹಿಸೋದು ಅಗತ್ಯ. ಹಾಳೆ ಮರದ ಬದಲು ಇನ್ಯಾವುದೋ ಮರದ ತೊಗಟೆ ಕಷಾಯ ಸೇವಿಸಿ ಅನೇಕ ಕುಟುಂಬಗಳಿಗೆ ಕರಾಳ ಅಮವಾಸ್ಯೆಯೂ ಆಗಿದೆ. ಈ ಬಗ್ಗೆ ಬಹಳ ಎಚ್ಚರದಿಂದಿರೋದು ಒಳ್ಳೆಯದು. ಸರಿಯಾಗಿ ಗೊತ್ತಿದ್ದರೆ, ಹಿರಿಯರಿಂದ ಸಲಹೆ ಪಡೆದು, ಸರಿಯಾಗಿ ಪರಿಶೀಲಿಸಿಯೇ ಹಾಳೆ ಮರದ ತೊಗಟೆ ತರೋದು ಒಳಿತು.