About Us Advertise with us Be a Reporter E-Paper

ವಿವಾಹ್

ಮದುವೆಯಾಗಲು ಪರಿಚಿತರೇ ಬೇಕು!

- ಕೆ.ಎ. ಸೌಮ್ಯ

ಪ್ರತಿಯೊಬ್ಬರೂ ತಮಗಿಷ್ಟ ಬಂದ ಹಾಗೆ ಮದುವೆಯ ನಂತರದ ಬದುಕು ಇರಬೇಕು, ಇರುತ್ತದೆ ಎಂದು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡಿರುತ್ತಾರೆ. ಅಲ್ಲಿ ತಮಗೆ ಎಂಥ ವ್ಯಕ್ತಿತ್ವದವರು ಬಾಳ ಸಂಗಾತಿಗಳಾಗಿರುತ್ತಾರೆ, ಅವರು ಇಷ್ಟವಾಗುವ ಕೆಲಸ ಕಾರ್ಯಗಳನ್ನೇ ಮಾಡುತ್ತಾರೆ, ನಡೆದುಕೊಳ್ಳುತ್ತಾರೆ… ಅಂತೆಲ್ಲ ಸಕಲ ರೀತಿಯ ಕಲ್ಪನೆಯಲ್ಲಿಯೇ ಮನಸ್ಸು ತೇಲುತ್ತಿರುತ್ತದೆ.

ಆದರೆ ಒಂದಲ್ಲ ಒಂದು ದಿನ ಈ ಕಲ್ಪನೆ ನಿಜವಾಗಲೇಬೇಕು. ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನಮ್ಮ ಜೀವನಕ್ಕೆ ಪ್ರವೇಶ ಮಾಡಲೇಬೇಕು. ಮದುವೆಗೆ ಮೊದಲು ಕೇವಲ ಎರಡೋ ಮೂರೋ ಬಾರಿ ನೋಡಿದ ಮಾತ್ರಕ್ಕೆ ಅವರು ಹೀಗೆ, ಅವರ ವ್ಯಕ್ತಿತ್ವ ಇಂಥದ್ದು ಎಂದು ಅಳೆಯಲು ಸಾಧ್ಯವಿಲ್ಲ. ಹಾಗಾಗಿ ಅವರು ಹೇಗೋ, ಏನೋ ಎಂಬ ಅಳುಕು ವಧು ಮತ್ತು ವರ ಇಬ್ಬರ ಮನದಲ್ಲಿಯೂ ಇದರ ಬದಲಾಗಿ ಜೀವನದ ಸಂಗಾತಿಯಾಗುವವರು ನಮಗೆ ಗೊತ್ತಿರುವವರೇ ಆದರೆ ಎಷ್ಟು ಚೆನ್ನಾಗಿರುತ್ತದೆ? ಎಂಬ ಕಲ್ಪನೆ ನಮ್ಮೆಲ್ಲರಿಗೂ ಮೂಡಿರುವಂಥದ್ದೇ. ಅಪರಿಚಿತ ವ್ಯಕ್ತಿಯ ಕೈಯಲ್ಲಿ ನಮ್ಮ ಇಡೀ ಜೀವನವನ್ನು ಒಪ್ಪಿಸುವುದಕ್ಕಿಂತಲೂ, ನಮಗೆ ಗೊತ್ತಿರುವವರೇ ಬಾಳ ಸಂಗಾತಿಗಳಾದರೆ ಬದುಕು ಚೆನ್ನಾಗಿರುತ್ತದೆ ಎಂಬುದು ಪ್ರತಿಯೊಬ್ಬರಲ್ಲೂ ಇರುವ ಆಸೆ ಕೂಡ. ಅದನ್ನು ಹೆಚ್ಚಿನವರು ಹೇಳಿಕೊಳ್ಳುವುದಿಲ್ಲ. ನಮ್ಮ ಬಗ್ಗೆ ಚೆನ್ನಾಗಿ ಅರಿತವರು ಎಂದರೆ ಪರಿಚಿತರು. ಪ್ರತಿದಿನ ನಾವು ಓಡಾಡುವ ದಾರಿಯಲ್ಲಿ ನಮ್ಮನ್ನು ಗಮನಿಸುವವರು, ಒಟ್ಟಿಗೆ ಕೆಲಸ ಮಾಡುವವರು, ಒಟ್ಟಿಗೆ ಓದಿದವರು. ಆದರೆ ಅದು ಪರಿಚಯಕ್ಕಿಂತಲೂ ಹೆಚ್ಚು ಮುಂದುವರೆದಿರುವುದಿಲ್ಲ. ನಮ್ಮ ನಡುವೆ ಮಾಮೂಲಿಗಿಂತಲೂ ಹೆಚ್ಚು ಮಾತುಕತೆ ನಡೆದಿರುವುದಿಲ್ಲ. ಮತ್ತು ಅಗತ್ಯಕ್ಕಿಂತ ಹೆಚ್ಚು ನಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡಿರುವುದಿಲ್ಲ. ಎಷ್ಟೋ ಬಾರಿ ನಮಗೆದುರಾಗುವ ವ್ಯಕ್ತಿಗಳ ಹೆಸರೂ ಸಹ ಗೊತ್ತಿರುವುದಿಲ್ಲ. ಹೀಗಿರುವಾಗ ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿ ಮದುವೆಯಲ್ಲಿ ಕೊನೆಗಾಣುವುದು ಹೇಗೆ?

ಆದರೂ ಯಾಕೋ ಏನೋ ಪ್ರತೀ ಬಾರಿಯೂ ಅಪರಿಚಿತ ವ್ಯಕ್ತಿಗಳೇ ನಮ್ಮನ್ನು ಆಕರ್ಷಿಸುತ್ತಾರೆ. ಚಿಕ್ಕಂದಿನಲ್ಲಿ ರಾತ್ರಿ ಮಲಗಿಸುವಾಗ ಅಜ್ಜಿ ಕಥೆಯ ಪರಿಣಾಮವೋ ಏನೋ. ಯಾವುದೋ ಊರಿನ, ಯಾವುದೋ ರಾಜಕುಮಾರ, ಅದ್ಯಾವುದೋ ದೇಶದಿಂದ ನಮಗಾಗಿ ಕುದುರೆ ಮೇಲೆ ಬರುತ್ತಾನೆ ಅನ್ನುವ ವಿಷಯವೇ ಸದಾ ಕಾಡುತ್ತಿರುತ್ತದೆ. ಅವನಿಗಾಗಿ ನಮ್ಮ ಕಣ್ಣುಗಳು ಸದಾ ಕಾಯುತ್ತಿರುತ್ತವೆ. ಪರಿಚಯವಾಗುವ ಎಲ್ಲರೂ ಆ ರಾಜಕುಮಾರನ ಹಾಗೆಯೇ ಕಾಣ ತೊಡಗುತ್ತಾರೆ.

ಯಾರಿಗೇ ಆಗಲಿ ಪ್ರೀತಿ ಹುಟ್ಟಲು ಇಬ್ಬರ ಮಧ್ಯೆ ಒಡನಾಟ ಬೇಕು. ದೂರದಲ್ಲಿದ್ದುಕೊಂಡೂ ಹುಚ್ಚು ಹಿಡಿದಂತೆ ವರ್ಷಗಟ್ಟಲೇ ಪ್ರೀತಿಸುವುದು ಸಿನಿಮಾದಲ್ಲಿ ಮಾತ್ರ ಸಾಧ್ಯ. ನಿಜ ಜೀವನದಲ್ಲಿ ಪ್ರೀತಿಸುವುದೆಂದರೆ ಮುಂದಿನ ಪರಿಚಯ ಮಾಡಿಕೊಂಡು, ಕಾಂಟಾಕ್ಟ್ ಪಡೆದುಕೊಂಡು, ದಿನನಿತ್ಯ ಮಾತನಾಡುತ್ತಾ, ಜಗಳವಾಡುತ್ತಾ ಖುಷಿಯಾಗಿರಬೇಕು. ಅವರ ಜತೆ ಇದ್ದಾಗಲಷ್ಟೇ ನಿಜವಾದ ವ್ಯಕ್ತಿತ್ವ ಅರಿಯಲು ನಮ್ಮಿಂದ ಸಾಧ್ಯ. ವಿವಿಧ ಸಂದರ್ಭಗಳಲ್ಲಿ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಅರಿತರೆ ಮುಂದೆ ನಮ್ಮ ಜತೆಗೆ ಹೇಗಿರುತ್ತಾರೆ ಎಂಬ ಕಲ್ಪನೆ ಮೂಡುತ್ತದೆ.

ಆದರೆ ಪರಿಚಿತರಲ್ಲದ ವ್ಯಕ್ತಿಗಳ ಮೇಲೆ ನಮಗಿನ್ನೂ ಮೋಹ ಬೆಳೆದಿರುವುದಿಲ್ಲ, ಅವರನ್ನು ಇನ್ನೂ ನಮ್ಮ ಮನದಾಳದೊಳಗೆ ಬಿಟ್ಟುಕೊಂಡಿರುವುದಿಲ್ಲ, ಅಹಂಕಾರದ ಪರಿಧಿ ದಾಟಿ ಅವರಿನ್ನೂ ನಮ್ಮವರಾಗಿರುವುದಿಲ್ಲ, ಅಷ್ಟರಲ್ಲಿಯೇ ಉಂಟಾಗುವ ಚಿಕ್ಕ ಮನಸ್ತಾಪ ಇಬ್ಬರನ್ನೂ ಎಂದಿಗೂ ಒಂದಾಗದ ಹಾಗೆ ದೂರ ಮಾಡಿಬಿಡುತ್ತದೆ. ಅಪರಿಚಿತರ ನಡುವೆ ಈ ರೀತಿಯ ಮನಸ್ಥಾಪ ಸಾಮಾನ್ಯವಾದುದು. ಪರಿಚಿತರಲ್ಲಿಯೂ ಇದು ನಡೆಯುತ್ತಾದರೂ ನಾವು ನಮ್ಮ ಅಹಂ ಬಿಟ್ಟು ಅವರಲ್ಲಿ ಕ್ಷಮೆಯೋ ಮತ್ತೊಂದೋ ಕೇಳಿ ಸರಿ ಮಾಡಿಕೊಳ್ಳುತ್ತೇವೆ. ಆದರೆ ಅಪರಿಚಿತರ ಜತೆ ಇದು ಸಾಧ್ಯವಿಲ್ಲದ ಮಾತು.

ಆಗ ನಮಗೆ ನಮ್ಮನ್ನು ಅರ್ಥ ಮಾಡಿಕೊಂಡಿವರು ಜತೆಗಿರಬಾರದಿತ್ತೇ ಅಂತ ಹಂಬಲಿಸುವಂತಾಗುತ್ತದೆ. ನಮ್ಮ ಸಂಗಾತಿಗಳು ಪರಿಚಿತರೇ ಆದಲ್ಲಿ ನಮ್ಮ ಆಸಕ್ತಿ, ಅನಾಸಕ್ತಿ, ಖುಷಿ, ಎಲ್ಲ ವಿಷಯಗಳೂ ತಿಳಿದಿರುತ್ತದೆ. ಹೆಚ್ಚಿನದ್ದನ್ನು ವಿವರಿಸುವ ಅಗತ್ಯವೂ ಇರುವುದಿಲ್ಲ. ಹಾಗಾಗಿ ಅವರೊಂದಿಗಿನ ಬಾಳು ಚಂದ ಅಂತ ಹೇಳಲಾಗುತ್ತದೆ. ಹೊಸಬರಾದರೆ ನಮ್ಮ ಬಗ್ಗೆ ಎಲ್ಲಾ ತಿಳಿಯಲು ಕನಿಷ್ಟ ಒಂದೆಡರು ವರ್ಷಗಳಾದರೂ ಬೇಕೋ?

ನಮ್ಮ ಚಿಕ್ಕ ಚಿಕ್ಕ ವಿಷಯಗಳನ್ನೂ ತಿಳಿದುಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸುತ್ತಾ, ಆಗಾಗ ಅಚ್ಚರಿಯ ಗಿಫ್‌ಟ್ ನೀಡುತ್ತಾ ಇದ್ದರೆ ಬದುಕೆಷ್ಟು ಚಂದ ಅಲ್ಲವೇ? ನಮ್ಮ ಬಗ್ಗೆ ಚಿಕ್ಕ ಚಿಕ್ಕ ವಿಷಯಗಳನ್ನೂ ತಿಳಿದುಕೊಂಡಿರಬೇಕೆಂದರೆ ನಮ್ಮ ಮತ್ತು ಅವರ ಒಡನಾಟ ಬಹಳ ಕಾಲದ್ದಾಗಿರಬೇಕು. ಜತೆಯಲ್ಲಿಯೇ ಓದಿರಬೇಕು ಅಥವಾ ಜತೆಯಲ್ಲಿಯೇ ಕೆಲಸ ಮಾಡುತ್ತಿರಬೇಕು. ಹತ್ತಿರದಿಂದ ನಮ್ಮನ್ನು ಕಂಡವರಿಗೆ ನಮ್ಮ ಶಕ್ತಿ, ದೌರ್ಬಲ್ಯ ಎಲ್ಲವೂ ತಿಳಿದಿರುತ್ತದೆ.

ಪ್ರೀತಿಸಿ ಮದುವೆಯಾಗಲು ಕಾರಣವೇ ಇದು.. ಇಬ್ಬರ ನಡುವಿನ ಹೊಂದಾಣಿಕೆ ಚೆನ್ನಾಗಿರುತ್ತದೆ ಅಂತ. ನಾವೇನು ಅಂತ ತಿಳಿದವರು ನಮ್ಮ ಮನಸ್ಸಿಗೆ ನೋವು ಮಾಡುವುದಿಲ್ಲ ಅಂತ ಅಂದುಕೊಂಡೇ ಪ್ರೀತಿಸಿದ ಹೆಚ್ಚಿನವರು ಮದುವೆಯಾಗುತ್ತಾರೆ.

Tags

Related Articles

Leave a Reply

Your email address will not be published. Required fields are marked *

Language
Close