ವಿಶ್ವವಾಣಿ

ಬಹಳ ವರ್ಷಗಳ ನಂತರ ಶಿರಸಿ ಪ್ಯಾಟೆಯಲ್ಲಿ ಹೆಜ್ಜೆ ಹಾಕಿದಾಗ ಅನಿಸಿದ್ದು..!

ಶಿರಸಿ ಪೇಟೆಯಲ್ಲಿ ಸುತ್ತಾಡದೇ ಬಹಳ ವರ್ಷಗಳೇ ಶಿರಸಿಯ ಬೀದಿ ಬೀದಿಗಳೆಲ್ಲ ನನಗೆ ಅಂಗೈ ಮೇಲಿನ ಗೆರೆಗಳಷ್ಟೇ ಪರಿಚಿತ. ಆ ಪೇಟೆಯ ಎಲ್ಲಾ ಬೀದಿಗಳಲ್ಲೂ ಹೆಜ್ಜೆ ಗುರುತುಗಳಿವೆ. ನಾನು ನನ್ನ ಬಾಲ್ಯದ ಹತ್ತು ವರ್ಷಗಳನ್ನು ಕಳೆದಿದ್ದು ಶಿರಸಿಯಿಂದ ಸುಮಾರು ಹದಿನೈದು ಕಿ.ಮೀ. ದೂರದ ಹಳ್ಳಿಯಲ್ಲಿ. ‘ಮಾಲ್ಗುಡಿ ಡೇಸ್’ ಧಾರಾವಾಹಿ ನೋಡುವಾಗ ಕ್ಷಣ ಕ್ಷಣಕ್ಕೆ ನೆನಪಾಗುತ್ತಿದ್ದುದು ಶಿರಸಿ ಪೇಟೆ. ಸುತ್ತಮುತ್ತಲಿನ ಹಳ್ಳಿ ಜನರ ಪಾಲಿಗೆ ಶಿರಸಿ ಅಂದರೆ ಪೇಟೆ. ಗಂಡನ ಹೆಸರು ಹೇಳದ ಸಂಪ್ರದಾಯಸ್ಥ ಹೆಂಡತಿಯಂತೆ, ಯಾರೂ ಶಿರಸಿ ಕರೆಯುವುದಿಲ್ಲ, ಶಿರಸಿಗೆ ಹೋಗ್ತೇನೆ ಎಂದು ಹೇಳುವುದಿಲ್ಲ. ಪ್ಯಾಟೆಗೆ, ಪೇಟೆಗೆ ಹೋಗ್ತೇನೆ ಅಂತಾರೆ.

ವಾರಕ್ಕೊಮ್ಮೆ ಈ ಪ್ಯಾಟೆಗೆ ಹೋಗಲೇಬೇಕು. ಅದರಲ್ಲೂ ಮಂಗವಾರದ ಸಂತೆಗೆ ಹೋಗದಿದ್ದರೆ ಸಮಾಧಾನ ಇಲ್ಲ, ಶಿರಸಿಯ ಮಂದಿಗೆ. ಅದಕ್ಕೂ ದೊಡ್ಡ ಊರೆಂದರೆ ಹುಬ್ಬಳ್ಳಿ, ನಂತರ ಬೆಂಗಳೂರು. ಹೀಗಾಗಿ ಪ್ಯಾಟೆಗೆ ಹೋಗುವುದೆಂದರೆ ಸಣ್ಣ ಚೈನಿ ಮಾಡಿದಂತೆ. ಬೇಸರವಾದರೂ ಒಂದು ಸುತ್ತು ಹೋಗಿ ಬಂದರೆ ಏನೋ ಸಮಾಧಾನ. ಇನ್ನು ಸಾಮಾನು, ಅಗತ್ಯ ವಸ್ತು ಬೇಕಾದಾಗಲೆಲ್ಲ ಪ್ಯಾಟೆಗೆ ಹೋಗಲೇಬೇಕು. ಅದರಲ್ಲೂ ಹವ್ಯಕರು ಸಲ ಪ್ಯಾಟೆಗೆ ಹೋಗಿ ಬಂದರೆ ನಾಲ್ಕು ದಿನ ಮಾತಾಡುವಷ್ಟು ಸುದ್ದಿ ಸಿಗುತ್ತದೆ. ಶಿರಸಿ ಸುತ್ತಮುತ್ತಲಿನ ಸಾವಿರಾರು ಹಳ್ಳಿಗಳ ಮಂದಿ, ಅದರಲ್ಲೂ ಹವ್ಯಕರು ಶಿರಸಿಯನ್ನು ಇಂದಿಗೂ ಅದೇ ಪ್ಯಾಟೆಯನ್ನಾಗಿ, ಅದೇ ಸೊಗಡಿನಿಂದ ಕಾಪಾಡಿಕೊಂಡು ಬಂದಿದ್ದಾರೆ.

ಮೊನ್ನೆ ಶಿರಸಿಗೆ ಹೋದಾಗ ಸ್ವಲ್ಪ ಬಿಡುವಾಗಿದ್ದೆ. ಗೆಳೆಯ ವೆಂಕಟೇಶ ಹೆಗಡೆ ಹೊಸಬಾಳೆ ಜತೆಗೆ ಶಿರಸಿ ಪ್ಯಾಟೆಯ ಗಲ್ಲಿ ಗಲ್ಲಿಗಳಲ್ಲಿ ಎರಡು ತಾಸು ತಿರುಗಾಡಿದೆ. ಅಂಥ ಗಮನಾರ್ಹ ಬದಲಾವಣೆ ಕಾಣಲಿಲ್ಲ. ಮೂವತ್ತೈದು, ನಲವತ್ತು ವರ್ಷಗಳ ಹಿಂದೆ ಬೀದಿಗಳು ವಯಸ್ಸಾದವರಂತೆ ಕಂಡವು. ಅಲ್ಲಲ್ಲಿ ಒಂದಷ್ಟು ಹಳೆಯದಾಗುತ್ತಿರುವ ಹೊಸ ಕಟ್ಟಡಗಳನ್ನು ಬಿಟ್ಟರೆ, ಅದೇ ನಿಧಾನ ಬದುಕು, ಅವೇ ಕಿರಿದಾದ ರಸ್ತೆಗಳು, ಅದೇ ಅದೆ ಪಂಡಿತ ಲೈಬ್ರರಿ, ಹಳೆ ಬಸ್ ಸ್ಟ್ಯಾಂಡ್, ಬೀಡಕಿಬೈಲು, ಚನ್ನಪಟ್ಟಣ ಬಜಾರು, ನಟರಾಜ ಗಲ್ಲಿ, ಹೊಸಪೇಟೆ ರಸ್ತೆ, ಅವೇ ಕಂಡ ಮುಖಗಳು, ಅದೇ ಆತ್ಮೀಯತೆ, ಪ್ರೀತಿ, ರಾಗಬದ್ಧ ಮಾತು, ತಂಬ್ಳಿ, ಕರ್ಕ್ಲಿ, ಅಪ್ಪೆಹುಳಿ ಘಮಲು.

ಪ್ಯಾಟೆಯ ಮಧ್ಯಭಾಗದಲ್ಲಿರುವ ದೇವಿಕೆರೆಯ ದೊಡ್ಡ ಕೆರೆ ಗಲೀಜಿನಿಂದ ಮುಕ್ತವಾಗಿರುವುದನ್ನು ಬಿಟ್ಟರೆ, ಅಪರೂಪಕ್ಕೆ ಒಂದೋ ಎರಡೂ ಹೊಸ ಕಟ್ಟಡಗಳನ್ನು ಹೊರತು ಪಡಿಸಿದರೆ ಏನೇನೂ ಬದಲಾವಣೆ ಇಲ್ಲ. ಆಧುನಿಕತೆಯ ಗಾಳಿ ಬೀಸಿದರೂ ಶಿರಸಿ ಪ್ಯಾಟೆ ಆ ಗಾಳಿಗೆ ಹಾರಿಹೋಗಿಲ್ಲತನ್ನ ಹಳೆ ಛಾಪನ್ನು ಉಳಿಸಿಕೊಂಡಿದೆ.

ಇದಕ್ಕೆ ಅಲ್ಲಿನ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಲೋಕಸಭಾ ಸದಸ್ಯರಾದ ಅನಂತಕುಮಾರ ಹೆಗಡೆ ಅವರ ಯೋಗದಾನವಿದೆ ಎನಿಸುತ್ತದೆ. ಅವರು ಶಿರಸಿಯನ್ನು ನಲವತ್ತು ವರ್ಷಗಳ ಹಿಂದೆ ಹೇಗಿತ್ತೋ ಇಂದೂ ಹಾಗೆ ಇರುವಂತೆ ನೋಡಿಕೊಂಡಿದ್ದಾರೆ. ಆಧುನಿಕತೆಯ ಸೋಂಕು ತಟ್ಟದಂತೆ ವಹಿಸಿದ್ದಾರೆ. ಯಾವುದೇ ಅಭಿವೃದ್ಧಿ ಯೋಜನೆಗಳು ಕಾಲಿಡದಂತೆ ಮುತುವರ್ಜಿ ವಹಿಸಿದ್ದಾರೆ. ಇವರಿಬ್ಬರ ದೆಸೆಯಿಂದಾಗಿ ಶಿರಸಿ ತನ್ನ ಪಾರಂಪರಿಕ ಸೊಗಡನ್ನು ಕಾಪಾಡಿಕೊಂಡಿದೆ. ಸರಕಾರದ ಯೋಜನೆಗಳಾಗಲಿ, ಕಾಮಗಾರಿಗಳಾಗಲಿ, ಅಭಿವೃದ್ಧಿ ಯೋಜನೆಗಳಾಗಲಿ, ಹಣವಾಗಲಿ ಇಲ್ಲಿ ವಿನಿಯೋಗವಾದ ಯಾವುದೇ ಕುರುಹುಗಳೂ ಕಾಣುವುದಿಲ್ಲ.

ಅಷ್ಟರಮಟ್ಟಿಗೆ ಬದಲಾವಣೆಯ ಹೊಡೆತದಿಂದ ಈ ಪ್ಯಾಟೆಯನ್ನು ಜೋಪಾನವಾಗಿ ಕಾಪಾಡಿದ್ದಾರೆ. ಇಬ್ಬರೂ ಎರಡೂವರೆ ದಶಕಗಳಿಂದ ಜನಪ್ರತಿನಿಧಿಗಳಾಗಿ ಮೇಲಿಂದ ಮೇಲೆ ಆಯ್ಕೆಯಾಗುತ್ತಿದ್ದರೂ ಈ ಸಾಧನೆ ಮೆರೆಯುತ್ತಿರುವುದು ಸಣ್ಣ ಮಾತಲ್ಲ.

ಸ್ಥಳೀಯ ಟಿಎಸೆಸ್ ಸಂಸ್ಥೆ ಬೆಂಗಳೂರು ನಗರದಲ್ಲಿರುವಂಥ ಮಾರ್ಕೆಟನ್ನು ಸ್ಥಾಪಿಸಿ ಶಿರಸಿ ನಗರದ ಎಲ್ಲಾ ವ್ಯಾಪಾರವನ್ನೂ ಕಬಳಿಸಿದೆ. ಒಂದೇ ಸೂರಿನಡಿಯಲ್ಲಿ ಕೃಷಿ ಸಾಮಾನುಗಳಿಂದ ಹಿಡಿದು ಎಲ್ಲಾ ವಸ್ತುಗಳು ಸಿಗುವ ದೈತ್ಯ ಸೂಪರ್ ಮಾರ್ಕೆಟ್ ಒಂದೇ ಆಧುನಿಕತೆಯ ನವ ನಿಕ್ಷೇಪ.

ಈ ವಿಷಯದಲ್ಲಿ ಟಿಎಸೆಸ್ ಆಡಳಿತ ಮಂಡಳಿಯ ದೂರದರ್ಶಿತ್ವ ಮತ್ತು ದಕ್ಷತೆಯನ್ನು ಮೆಚ್ಚಲೇಬೇಕು. ಶಿರಸಿ ಪೇಟೆ ಹೊಸ ಹೊಸ ಸಾಹಸಗಳಿಗೆ ಮುಂದಾಗಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿಕೊಳ್ಳದಿದ್ದರೆ, ಅಲ್ಲಿನ ಯುವಕರು ನಗರಗಳತ್ತ ಮುಖ ಮಾಡುವುದು ಅನಿವಾರ್ಯವಾಗುತ್ತದೆ.

ಶಿರಸಿಯ ಸುತ್ತಮುತ್ತಲಿನ ಎಲ್ಲಾ ಪ್ರತಿಭೆಗಳು ದೊಡ್ಡ ನಗರ ಹಾಗೂ ವಿದೇಶಗಳಲ್ಲಿ ನೆಲೆಸಿವೆ. ಆ ಹಳ್ಳಿಗಳೆಲ್ಲ ಇಂದು ನಾಗರಿಕತೆಯ ಯಾನದ ಕೊನೆಯ ಸ್ಟಾಪುಗಳಂತೆ ಕಾಣಿಸುತ್ತವೆ. ಈ ವರ್ಷ ವಿಪರೀತ ಮಳೆಯಾಗಿ ಬಹುತೇಕ ಹಳ್ಳಿಗಳಲ್ಲಿ ಅಡಕೆಗೆ ಕೊಳೆರೋಗ ಬಂದಿದೆ. ಶೇ.75 ರಷ್ಟು ಬೆಳೆ ಈ ರೋಗಕ್ಕೆ ಆಹುತಿಯಾಗಬಹುದು. ಅಡಕೆ ಬೆಳೆಗಾರ ಸದಾ ಬೆಳೆ, ಕೊಳೆ ಮತ್ತು ಬೆಲೆ ಜತೆಗೆ ಹೋರಾಡಬೇಕಾದ ಅನಿವಾರ್ಯ.

ಹೆಗಡೆ, ಭಟ್ಟರ ಮಕ್ಕಳೆಲ್ಲ ನಗರ, ಪಟ್ಟಣಗಳನ್ನು ಸೇರಿದ್ದಾರೆ. ಅವರ ಹೊಲ, ಗದ್ದೆಗಳಲ್ಲಿ ಕೆಲಸ ಕೆಲಸಗಾರರು ಸಿಗುತ್ತಿಲ್ಲ. ಎಲ್ಲಾ ಹಳ್ಳಿಗಳೂ ವೃದ್ಧಾಶ್ರಮಗಳಾಗಿವೆ. ಹಳ್ಳಿಯಲ್ಲಿರುವ ಹುಡುಗರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಮುಂದೆ ಬರುತ್ತಿಲ್ಲ. ತನ್ನ ವೈಭವಗಳನ್ನು ಧರಿಸದಿದ್ದರೆ ನಿನಗೆ ಉಳಿಗಾಲವಿಲ್ಲ ಎಂದು ಎಲ್ಲ ಪಟ್ಟಣ, ನಗರಗಳೂ ಹಳ್ಳಿಗಳನ್ನು ಬೆದರಿಸುತ್ತಿವೆ. ಪಾಪ, ಈ ಹಳ್ಳಿಗಳು ಆನೆಯ ಕಾಲಿಗೆ ಸಿಕ್ಕ ಬಸವನಹುಳುಗಳಂತಾಗಿವೆ. ಇವೆಲ್ಲವೂ ಹೊಸ ಹೊಸ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ನವ ವಸಾಹತುಗಳಂತೆ ಭಾಸವಾಗುತ್ತವೆ.

ಹಳ್ಳಿಗಳಲ್ಲಿ ನಡೆಯುವ ಈ ಎಲ್ಲ ವಿದ್ಯಮಾನಗಳು ಶಿರಸಿ ಪ್ಯಾಟೆಯನ್ನು ತಟ್ಟದೇ ಹೋಗುವುದಿಲ್ಲ. ಇಂದಿಗೂ ದೊಡ್ಡ ಹಳ್ಳಿಯಾಗಿಯೇ ಉಳಿದಿರುವುದು ಈ ಕಾರಣಕ್ಕೆ.

ಇದಕ್ಕೆ ಯಾರನ್ನೂ ದೂಷಿಸಿ ಫಲವಿಲ್ಲ. ಸದ್ಯದ ಸ್ಥಿತಿಯಲ್ಲಿ ಈ ಯಾವ ಸಮಸ್ಯೆಗಳಿಗೆ ಉತ್ತರಗಳಂತೂ ಗೋಚರಿಸುತ್ತಿಲ್ಲ. ಪರಿಸ್ಥಿತಿಯನ್ನು ಸಮತಟ್ಟು ಮಾಡುವ ಸಾಮರ್ಥ್ಯವಿರುವುದು ‘ಸಮಯ’(ಕಾಲ) ಕ್ಕೊಂದೇ. ಅಲ್ಲಿಯವರೆಗೆ ಈ ಎಲ್ಲ ವೈರುಧ್ಯಗಳ ನಡುವೆಯೂ ಸಾಗಬೇಕು. ಹಳೆಯ ಪೊರೆ ಕಳಚಿಕೊಳ್ಳಲು ಮನಸ್ಸಿಲ್ಲದ, ಹೊಸ ಪೋಷಾಕು ಧರಿಸಲು ಒಳಗೊಳಗೇ ಸಣ್ಣ ಆಸೆ ಪೊರೆಯುವ, ಇವೆರಡರ ತೊಳಲಾಟದಲ್ಲಿ ಸ್ವಲ್ಪ ದಿನ ಯಥಾಸ್ಥಿತಿ ಕಾದುಕೊಳ್ಳೋಣವೆಂದು ಬಯಸುವ ಸಾಂಪ್ರದಾಯಿಕ ಮನಸ್ಥಿತಿ ಶಿರಸಿಯಲ್ಲಿ ಎಂದು ಅನಿಸಿತು.

ಒಂದೇ ಮಗ್ಗುಲಲ್ಲಿ ಬಹಳ ಕಾಲ ಮಲಗಿಯೇ ಇರಲು ಸಾಧ್ಯವಿಲ್ಲ.

ಬರಹ ಮತ್ತು ಹುಚ್ಚು

ಒಮ್ಮೆ ಖ್ಯಾತ ಪತ್ರಕರ್ತ, ಅಂಕಣಕಾರ ಖುಷವಂತ್ ಸಿಂಗ್ ಅವರಿಗೆ ಓದುಗ ಅಭಿಮಾನಿಯೊಬ್ಬ,  I am mad of your writings ಎಂದು ಬರೆಯುವ ಬದಲು I am mad by your writings ಎಂದು ಬರೆದಿದ್ದನಂತೆ. ಅಂದರೆ ನಿಮ್ಮ ಬರವಣಿಗೆಯ ಹುಚ್ಚು ಅಭಿಮಾನಿ ಎನ್ನುವ ಬದಲು ನಿಮ್ಮ ಬರವಣಿಗೆಯಿಂದ ಹುಚ್ಚನಾದೆ ಅಂತ.

ಖುಷವಂತ್ ಸಿಂಗ್ ‘ನನ್ನ ಬರಹಕ್ಕೆ ಅಂಥ ಶಕ್ತಿ ಇದೆ ಅಂತ ಗೊತ್ತಿರಲಿಲ್ಲ. ನನ್ನ ಇಂಗ್ಲಿಷ್ ಓದಿ ನೀವು ಈ ಅಭಿಪ್ರಾಯಕ್ಕೆ ಬಂದಿದ್ದೀರಿ ಅಂದರೆ, ನಾನು ನನ್ನ ಬರಹದ ಬದುಕನ್ನು ಮುಂದುವರಿಸಬೇಕೋ ಬೇಡವೋ ಎಂಬ ಸಂದೇಹ ನನ್ನಲ್ಲಿ ಮೂಡಿದೆ. ನಿಮಗೆ ಹತ್ತಿದ ಹುಚ್ಚನ್ನು ಬಿಡಿಸಿಕೊಳ್ಳಬೇಕೆಂದರೆ, ನನ್ನ ಬರಹಗಳನ್ನು ಓದದಿರುವುದೊಂದೇ ದಾರಿ’ ಎಂದು ಬರೆದರಂತೆ.

ಆಗಲೇ ಆ ಮನುಷ್ಯನಿಗೆ ತನ್ನ ತಪ್ಪಿನ ಅರಿವಾಗಿದ್ದು.

ಹೇಳಿದಷ್ಟೂ ಮುಗಿಯದ ವಾಜಪೇಯಿ

ಇತ್ತೀಚಿಗೆ ಬಿಜೆಪಿ ನಾಯಕ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾದಾಗ ದೇಶವಿದೇಶಗಳ ಎಲ್ಲ ಪತ್ರಿಕೆಗಳಲ್ಲಿ ಅವರ ಕುರಿತು ಅನೇಕರು ಲೇಖನ, ವ್ಯಕ್ತಿಚಿತ್ರಗಳನ್ನು ಬರೆದರೂ. ವಾಜಪೇಯಿ ಪ್ರಧಾನಿಯಾಗಿದ್ದಷ್ಟು ಕಾಲ ಅವರ ಮಾಧ್ಯಮ ಸಲಹೆಗಾರರಾಗಿದ್ದ, ಕನ್ನಡಿಗ ಸುಧೀಂದ್ರ ಕುಲಕರ್ಣಿ ಅವರು ಸಮಗ್ರವಾಗಿ ಬರೆಯಬಹುದು ಎಂದು ಭಾವಿಸಿದ್ದೆ. ಕಾರಣ ಅವರು ವಾಜಪೇಯಿ ಜತೆಗೆ ಹತ್ತಿರದಿಂದ ಒಡನಾಡಿದವರು. ಅಲ್ಲದೆ ಸೊಸಾಗಿ ಬರೆಯುವ ಸಾಮರ್ಥ್ಯವುಳ್ಳವರು. ಅವರಲ್ಲಿ ವಿಷಯ, ಭಾಷೆ ಮತ್ತು ನಿರೂಪಣಾ ಕೌಶಲ ಎಲ್ಲವೂ ಇವೆ. ವಾಜಪೇಯಿ ಅವರ ಬಗ್ಗೆ ಕೃತಿಯನ್ನು ನಿರೀಕ್ಷಿಸಬಹುದಾದರೆ ಅದು ಕುಲಕರ್ಣಿ ಅವರಿಂದ.

ವಾಜಪೇಯಿ ಅವರ ಬಗ್ಗೆ ಮೂಡಿ ಬಂದ ಹಲವಾರು ಲೇಖಗಳಲ್ಲಿ ನನಗೆ ಇಷ್ಟವಾದದ್ದು ಎಸ್. ಗುರುಮೂರ್ತಿ ಅವರದ್ದು. ಸುಮಾರು ನಾಲ್ಕು ದಶಕಗಳಿಂದ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಗುರುಮೂರ್ತಿ ಅವರು ಬಹಳ ಚೆನ್ನಾಗಿ ವಾಜಪೇಯಿ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿ ವಾಜಪೇಯಿ ಅವರ ಅಭಿಮಾನಿಗಳು ಸೇರಿ ಒಂದು ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು. ಅದು ಬಿಜೆಪಿ ಕಾರ್ಯಕ್ರಮ ಆಗಿರಲಿಲ್ಲ. ವಾಜಪೇಯಿ ಅವರನ್ನು ಇಷ್ಟಪಡುವ ಎಲ್ಲ ಪಕ್ಷಗಳ ಅವರಲ್ಲಿ ಬಹುತೇಕ ಮಂದಿ ಪರಿಚಿತರೇ. ಕಮ್ಯುನಿಷ್‌ಟ್ ಸಿದ್ಧಾಂತಗಳಲ್ಲಿ ನಂಬಿಕೆ ಇರುವ ಸ್ನೇಹಿತರಾದ ಶಿವರಾಂ ತಮ್ಮ ಹತ್ತಾರು ಸ್ನೇಹಿತರ ಜತೆಗೆ ಬಂದಿದ್ದರು. ಸಮಾಜವಾದಿ ಗೋಪಾಲ ರಾವ್ ಸಹ ಬಂದಿದ್ದರು.

ಅದು ನಿಜವಾದ ಅರ್ಥದಲ್ಲಿ ಅಗಲಿದ ನಾಯಕನಿಗೆ ಸಲ್ಲಿದ ಶ್ರದ್ಧಾಂಜಲಿ ಆಗಿತ್ತು. ಕಾರ್ಯಕ್ರಮದುದ್ದಕ್ಕೂ ವಾಜಪೇಯಿ ವ್ಯಕ್ತಿತ್ವದ ನೆರಳು ಅಲ್ಲಿ ನೆಲೆಸಿತ್ತು. ನನಗೆ ಇಪ್ಪತ್ತು ನಿಮಿಷ ನಿಗದಿಪಡಿಸಿದ್ದರು. ಆದರೆ ಅನುಮತಿ ಪಡೆದು ನಲವತ್ತು ನಿಮಿಷ ಮಾತಾಡಿದೆ. ಆದರೆ ಹೇಳುವ ಅನೇಕ ವಿಷಯಗಳು ಹಾಗೇ

ಆ ಎರಡು ಕ್ಷೇತ್ರಗಳು

ನನ್ನ ಸಹೋದ್ಯೋಗಿಯನ್ನು ಕರೆದು ಕೇಳಿದೆ – ‘1984 ರಲ್ಲಿ ಇಂದಿರಾ ಗಾಂಧಿ ಹತ್ಯೆ ನಂತರ ದೇಶಾದ್ಯಂತ ಬೀಸಿದ ಅನುಕಂಪದ ಚಂಡಮಾರುತದಲ್ಲಿ ಎಲ್ಲ ಪಕ್ಷಗಳೂ ಕೊಚ್ಚಿ ಹೋದವು. ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿತು. ಆ ಎರಡು ಕ್ಷೇತ್ರಗಳು ಯಾವವು? ಮತ್ತು ಗೆದ್ದ ಅಭ್ಯರ್ಥಿಗಳ ಹೆಸರೇನು ಗೊತಾ ?’

ಆತ ಪ್ರಾಮಾಣಿಕವಾಗಿ ‘ಇಲ್ಲ’ ಎಂದ. ಬಿಜೆಪಿ ನಾಯಕರ ಭಾಷಣಗಳಲ್ಲಿ ಎರಡು ಸ್ಥಾನಗಳಿಂದ 284 ಸ್ಥಾನಗಳನ್ನು ಪಡೆದ ಎಂದು ಹೇಳುವುದನ್ನು ಕೇಳಿದ್ದೇನೆ. ಆದರೆ ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲ. ಆದರೆ ನನಗೂ ಕುತೂಹಲವಿದೆ ಸಾರ್’ ಎಂದ. ನಾನು ಅವನಿಗೆ ಆ ಎರಡು ಕ್ಷೇತ್ರ ಮತ್ತು ಗೆದ್ದ ಅಭ್ಯರ್ಥಿಗಳ ಹೆಸರುಗಳನ್ನೂ ಹೇಳಿದೆ.

ಅವನನ್ನು ಕರೆದು ‘ಒಂದು ಕೆಲಸ ಮಾಡು, ಇದೇ ಪ್ರಶ್ನೆಯನ್ನು ಹತ್ತು ಮಂದಿ ಬಿಜೆಪಿ ನಾಯಕರಿಗೆ, ಶಾಸಕರಿಗೆ ಮತ್ತು ಸಂಸದರಿಗೆ ಕೇಳು. ಎಷ್ಟು ಮಂದಿ ಸರಿಯಾದ ಉತ್ತರ ಹೇಳ್ತಾರೆ ನೋಡೋಣ. ಅವರು ಏನೇ ಉತ್ತರ ಕೊಟ್ಟರೂ ಸ್ಟೋರಿ. ಅವರನ್ನೆಲ್ಲ ಸಂಪರ್ಕಿಸು’ ಎಂದೆ. ನಾನು ಹೇಳಿದಂತೆ ನನ್ನ ಸಹೋದ್ಯೋಗಿ ಮೂವರು ಶಾಸಕರು, ಇಬ್ಬರು ಸಂಸದರು ಮತ್ತು ಹನ್ನೆರಡು ಕಾರ್ಯಕರ್ತರಿಗೆ ಫೋನ್ ಮಾಡಿ ಈ ಪ್ರಶ್ನೆಗಳನ್ನು ಕೇಳಿದರೆ, ಒಬ್ಬೇ ಒಬ್ಬರು ಸರಿಯಾದ ಉತ್ತರ ಹೇಳಲಿಲ್ಲವಂತೆ.

ಯಾರನ್ನು ಕೇಳಿದರೂ ನಮಗೆ ಗೊತ್ತಿಲ್ಲ, ನಮಗೆ ಗೊತ್ತಿಲ್ಲ ಎಂದರಂತೆ. ಇನ್ನು ಕೆಲವರು ನಾಲಗೆ ತುದಿಯಲ್ಲಿದೆ, ಮನಸ್ಸಿನಲ್ಲಿದೆ, ಆದರೆ ಬಾಯಿಗೆ ಬರುತ್ತಿಲ್ಲ ಎಂದು ಹೇಳಿ ನುಣುಚಿಕೊಂಡರಂತೆ. ಬಿಜೆಪಿ ಪರವಾಗಿ ಟಿವಿ ಚಾನೆಲ್ಲುಗಳಲ್ಲಿ ಪ್ಯಾನೆಲ್ ಡಿಸ್ಕಶನ್ ಭಾಗವಹಿಸುವ ಒಬ್ಬ ನಾಯಕರು ಆ ಎರಡು ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದರಂತೆ.

ಒಟ್ಟಾರೆ ಯಾರೂ ಸರಿ ಉತ್ತರ ನೀಡಲಿಲ್ಲ ಎಂಬುದು ಮಾತ್ರ ಖರೆ.

ಅಧಿಕಾರ ಹಿಡಿಯುವವರಿಗೆ, ಕಾರ್ಯಕರ್ತರಿಗೆ ಈ ಯಾವ ಸಂಗತಿಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯ ಇಲ್ಲ, ನಿಜ. ಒಂದು ವೇಳೆ ಗೊತ್ತಿದ್ದರೆ ಅವರಿಗೆ ಯಾರೂ ಕರೆದು ಮಣೆ ಹಾಕುವುದಿಲ್ಲ. ಆದರೂ ತಮ್ಮ ಪಕ್ಷದ ಕೆಲವು ಮೂಲಭೂತ ಸಂಗತಿಗಳನ್ನು ತಿಳಿದಿರಬೇಕಾದುದು ಅವಶ್ಯ.

ಅಂದಹಾಗೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ಎರಡು ಗುಜರಾತಿನ ಮೆಹಸಾನಾ ಮತ್ತು ಆಂಧ್ರಪ್ರದೇಶದ ಹನುಮಕೊಂಡ. ಗೆದ್ದ ಅಭ್ಯರ್ಥಿಗಳ ಹೆಸರು ಡಾ..ಕೆ. ಪಟೇಲ್ ಮತ್ತು ಚಂಡ್ಲುಪೇಟ್ಲಾ ಜಂಗ ರೆಡ್ಡಿ.

ಜಗನ್ನಾಥ ಹಾಗೂ ಜಗ್ಗರ್‌ನಾಟ್

ಇಂಗ್ಲಿಷ್‌ನಲ್ಲಿ Juggernaut(ಜಗ್ಗರ್‌ನಾಟ್) ಎಂಬ ಪದದ ಬಗ್ಗೆ ನಿಮಗೆ ಗೊತ್ತಿರಬಹುದು. ಎದುರು ಸಿಕ್ಕವರನ್ನು ತುಳಿದು ನಾಶ ಮಾಡಬಲ್ಲ ಯಂತ್ರ ಅಥವಾ ವಾಹನ ಎಂಬ ಅರ್ಥವಿದೆ. (A massive inexorable force campaign, movement, or object that curshes whatever is in its path). Juggernaut ಅಲ್ಲ, ‘ಜಗನ್ನಾಥ’ ಹೋಗಿ ‘ಜಗ್ಗರ್‌ನಾಟ್’ ಆಗಿದೆ ಎಂದು ಎಂದು ಪತ್ರಕರ್ತ ವೈಯೆನ್ಕೆ ಹೇಳುತ್ತಿದ್ದರು.

ಅದಕ್ಕೆ ಅವರು ಕೊಡುತ್ತಿದ್ದ ಸಮರ್ಥನೆಪುರಿಯಲ್ಲಿ ರಥೋತ್ಸವ ನಡೆದಾಗ ಜಗನ್ನಾಥ ವಿಗ್ರಹ ಹೊತ್ತು ತರುವ ರಥದ ಉರುಳು ಚಕ್ರಗಳ ಮುಂದೆ ಭಕ್ತಾದಿಗಳು ಬೀಳುತ್ತಿದ್ದರು. ಇವರ ಮೇಲೆಯೇ ರಥದ ಚಕ್ರಗಳು ಹಾಯ್ದು ಹೋಗುತ್ತಿದ್ದವು. ಜನರ ಮೇಲೆ ಹರಿಯದಂತೆ ತಪ್ಪಿಸಲು ರಥವನ್ನು ನಿಲ್ಲಿಸಲು ಆಗುತ್ತಿರಲಿಲ್ಲ. ರಥ ಚಲಿಸುವ ಮಾರ್ಗದಲ್ಲಿ ಯಾರೇ ಬೀಳಲಿ, ಅಡ್ಡ ಬರಲಿ ಅವರನ್ನೆಲ್ಲ ಮಾಡಿ ಅದು ಮುಂದಕ್ಕೆ ಚಲಿಸುತ್ತಿತ್ತು. ಇದನ್ನು ಕಂಡ ಬ್ರಿಟಿಷರು ಸೋಜಿಗಗೊಂಡು ರೂಪಕವಾಗಿ ಬಳಸಿದರು. ಜಗನ್ನಾಥ ಹೋಗಿ ಜಗ್ಗರ್‌ನಾಟ್ ಆಯಿತು.

ಯಾರು ಕೃತಘ್ನರು?

ಕೆಲವು ತಿಂಗಳುಗಳ ಹಿಂದೆ ಕಿರಾಣಿ ಸಾಮಾನುಗಳನ್ನು ಕಟ್ಟಿದ ಒಂದು ರದ್ದಿ ಪೇಪರ್ ಸಿಕ್ಕಿತು. ಅದನ್ನು ಬಿಸಾಡುವ ಮುನ್ನ ಸುಮ್ಮನೆ ಕಣ್ಣು ಹಾಯಿಸಿದೆ. ಮಹೇಶರಾಜು ಎಂಬುವವರು ಹಣ ಕೊಟ್ಟು ನೀಡಿದ ವರ್ಗೀಕೃತ (Classified)) ಜಾಹೀರಾತು ಗಮನ ಸೆಳೆಯಿತು.

ಅವರು ನೀಡಿದ ಜಾಹೀರಾತು ಹೀಗಿತ್ತು-‘ ಒಂದು ಕಾಲಕ್ಕೆ ಲಾನ್‌ಸ್ ತಲೆ ಮೇಲಿಟ್ಟು ಆರಾಧಿಸುತ್ತಿದ್ದವರೆಲ್ಲ ಅವರ ಬಗ್ಗೆ ವಾಚಾಮಗೋಚರವಾಗಿ ಬೈಯುತ್ತಿರುವುದನ್ನು ಕೇಳಿ ವಿಪರೀತ ಸಂಕಟಪಡುತ್ತಿದ್ದೇನೆ. ಜನರ ನೀಚತನಕ್ಕೂ ಒಂದು ಮಿತಿಯಿರಬೇಕಿತ್ತು ಎಂದೆನಿಸುತ್ತಿದೆ. ಆತ ‘ಟೂರ್ ದಿ ಫ್ರಾನ್‌ಸ್’ ಸೈಕ್ಲಿಂಗ್‌ನಲ್ಲಿ ಭಾಗವಹಿಸಿದಾಗ ಉದ್ದೀಪನ ಮದ್ದು ಸೇವಿಸಿದ್ದ ಅಂತೀರಲ್ಲಾ, ನಾನೂ ಅದೇ ಮಾದಕ ಪದಾರ್ಥವನ್ನು ಒಮ್ಮೆ ಸೇವಿಸಿದ್ದೆ. ಆಗ ನನಗೆ ಸೈಕಲ್ ಬಿಡಿ, ಸೂಜಿಯೂ ಕಾಣುತ್ತಿರಲಿಲ್ಲ. ಎರಡು ದಿನ ಹಾಸಿಗೆಯಿಂದ ಎದ್ದಿರಲಿಲ್ಲ. ಹೀಗಿರುವಾಗ ಆತ ಮಾಡಿದ ‘ಸಾಧನೆ’ ಬಗ್ಗೆ ಕೆಟ್ಟದಾಗಿ ಮಾತಾಡ್ತೀರಲ್ಲ, ನಿಮ್ಮಂಥ ಯಾರೂ ಇಲ್ಲ. ಈ ಜಗತ್ತು ನಿರ್ದಯಿ. . Hell with you’

ಅಭಿಮಾನಿಗಳು ಎಲ್ಲೆಲ್ಲೋ ಹ್ಯಾಂಗೋ ಇರುತ್ತಾರೆ. ಅವರ ಪ್ರೀತಿ, ಅಭಿಮಾನ ಮಾತ್ರ ಬಹಳ ದೊಡ್ಡದು.

ಇದನ್ನು ಆರ್ಮಸ್ಟ್ರಾಂಗ್ ಓದಿರುವ ಸಾಧ್ಯತೆ ಕಮ್ಮಿ. ಓದಿದ್ದಿದ್ದರೆ ಆ ನೊಂದ ಜೀವಕ್ಕೆ ಒಂದು ಹಿಡಿ ಸಮಾಧಾನವಾದರೂ ಸಿಗುತ್ತಿತ್ತೇನೋ?