ವಿಶ್ವವಾಣಿ

ಗಂಗಾವತಿ ಪ್ರಾಣೇಶ್ ಹೆಸರು ಕೇಳದ ಕನ್ನಡಿಗರಿಲ್ಲ, ಕರ್ನಾಟಕ ಸರಕಾರಕ್ಕೆ ಮಾತ್ರ ಅವರಿನ್ನೂ ಗೊತ್ತಿಲ್ಲ !

ಅಂದು ನಾನು ರವಾಂಡದಲ್ಲಿದ್ದೆ. ಗಂಗಾವತಿ ಪ್ರಾಣೇಶ ಅವರು ಮಾಡಿ, ಗಂಗಾವತಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಉದ್ಘಾಟಕರಾಗಿ ಬರುವಂತೆ ಕೋರಿದರು. ನಾನು ಕಾರ್ಯಕ್ರಮದ ಹಿಂದಿನ ದಿನ, ರವಾಂಡ ಹಾಗೂ ಉಗಾಂಡ ಪ್ರವಾಸ ಮುಗಿಸಿ ಬೆಂಗಳೂರು ತಲುಪುವವನಿದ್ದೆ. ಮರುದಿನವೇ ಗಂಗಾವತಿಗೆ ಹೋಗುವುದು ಕಷ್ಟ. ಮೊದಲನೆಯದಾಗಿ ದೈಹಿಕ ದಣಿವು ಹಾಗೂ ಎರಡನೆಯದಾಗಿ ಆಫೀಸಿನ ಕೆಲಸ, ಬರವಣಿಗೆ, ಪೆಂಡಿಂಗ್ ಕೆಲಸ. ಆದರೆ ಆಮಂತ್ರಣ ನೀಡುತ್ತಿರುವವರು ನನ್ನ ಆತ್ಮೀಯ ಸ್ನೇಹಿತರಾದ ಪ್ರಾಣೇಶ. ಇಲ್ಲ, ಆಗೊಲ್ಲ ಎಂದು ಹೇಳಲು ಮನಸ್ಸಾಗಲಿಲ್ಲ. ಮರು ಮಾತಿಲ್ಲದೇ ಒಪ್ಪಿಕೊಂಡೆ. ಪ್ರೀತಿಆತ್ಮೀಯತೆಗೆ ಸಾಧಿಸುವ, ಸೋಲಿಸುವ ಗುಣಗಳಿರುತ್ತವೆ. ವಿದೇಶದಿಂದ ಬಂದವನೇ ಮರುದಿನ ಹೊಸಪೇಟೆ, ಗಂಗಾವತಿ ಕಡೆಗೆ ಹೊರಟಾಗ ದೇಹ ಸಣ್ಣದಾಗಿ ಚೀರುತ್ತಿತ್ತು. ಆದರೆ ಮನಸ್ಸು ಹೋಗಲೇಬೇಕೆಂದು ಕೈಹಿಡಿದು ಎಳೆಯುತ್ತಿತ್ತು.

ಸಾಹಿತ್ಯ ಸಮ್ಮೇಳನದ ಹಿಂದಿನ ರಾತ್ರಿ ಹೊಸಪೇಟೆ ತಲುಪಿದ್ದೆ. ಮರುದಿನ ಬೆಳಗ್ಗೆ ಹನ್ನೊಂದು ಗಂಟೆಗೆ ಸಮ್ಮೇಳನದ ಉದ್ಘಾಟನೆ. ನಾನು ಉಪಾಹಾರ ಮುಗಿಸಿ ಹತ್ತು ಗಂಟೆಗೆ ಸಿದ್ಧನಾದೆ. ಹೊಸಪೇಟೆಯಿಂದ ಗಂಗಾವತಿಗೆ ಒಂದು ತಾಸಿನ ಹಾದಿ. ಕಾರ್ಯಕ್ರಮದ ಸ್ಥಳದಿಂದ ನಮ್ಮ ವರದಿಗಾರ ಸಾರ್, ನೀವು ಎಷ್ಟು ಹೊರಡಬೇಕೆಂಬುದನ್ನು ನಾನು ಹೇಳ್ತೇನೆ. ಆನಂತರವೇ ಹೊರಡಿಎಂದ. ನಾನು ಅವನ ಮುಂದಿನ ಕರೆಗಾಗಿ ಕಾಯುತ್ತಾ ಕುಳಿತೆ.

ಹತ್ತೂವರೆ, ಹನ್ನೊಂದು, ಹನ್ನೊಂದುವರೆ, ಹನ್ನೆರಡು.. ಫೋನ್ ಬರಲಿಲ್ಲ. ನಾನೇ ಫೋನ್ ಮಾಡಿದೆ. ‘ಸಮ್ಮೇಳನದ ಅಧ್ಯಕ್ಷರಾದ ಗಂಗಾವತಿ ಪ್ರಾಣೇಶ ಅವರ ಮೆರವಣಿಗೆ ನಡೀತಿದೆ. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದೆ. ವೇದಿಕೆಗೆ ಬರಲು ಇನ್ನೂ ಸ್ವಲ್ಪ ತಡವಾಗಬಹುದು. ನಾನು ಹೇಳಿದ ನಂತರವೇ ಹೊರಡಿಎಂದ ನಮ್ಮ ವರದಿಗಾರ. ಹೊಸಪೇಟೆ ಹೊಟೇಲ್‌ನಲ್ಲಿ ಕುಳಿತು ಏನು ಮನಸ್ಸು ಕೇಳಲಿಲ್ಲ. ಮೆರವಣಿಗೆಯನ್ನಾದರೂ ನೋಡೋಣ ಎಂದು ಹೊರಟೆ. ಗಂಗಾವತಿ ತಲುಪುತ್ತಿದ್ದಂತೆ ನನಗೆ ಅಚ್ಚರಿ. ಊರಿನ ಪ್ರವೇಶದ್ವಾರದಲ್ಲಿ ದೊಡ್ಡ ಬ್ಯಾನರ್, ಪೋಸ್ಟರ್, ಫ್ಲೆಕ್‌ಸ್ ಹೋರ್ಡಿಂಗ್‌ಗಳು. ಪ್ರಾಣೇಶ ಅವರ ವಿವಿಧ ಭಂಗಿಗಳ ಫೋಟೊಗಳು. ಊರಿನ ಎಲ್ಲ ಬೀದಿಗಳಲ್ಲಿ ಅವರಿಗೆ ಶುಭ ಕೋರುವ ಜಾಹೀರಾತು ಫಲಕಗಳು. ಎಲ್ಲಿ ನೋಡಿದರೂ ಪ್ರಾಣೇಶ ಅವರ ಫೋಟೊಗಳು.

ಹತ್ತು ವರ್ಷಗಳ ಹಿಂದೆ ನಾನು ನೋಡಿದ ಗಂಗಾವತಿ ಪಟ್ಟಣ ಎಲ್ಲೆಡೆ ವ್ಯಾಪಿಸಿಕೊಂಡು ಗುರುತು ಸಿಗದ ರೀತಿಯಲ್ಲಿ ಬೆಳೆದರೆ, ಅದೇ ಹುಟ್ಟಿದ ಸಾಮಾನ್ಯ ಹುಡುಗನೊಬ್ಬ ಊರಿನ ಖ್ಯಾತಿಯನ್ನು ಕೇವಲ ಕರ್ನಾಟಕದಲ್ಲಲ್ಲ, ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದ್ದ!

ದೂರದಲ್ಲಿ, ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಪ್ರಾಣೇಶ ಸಾಗುತ್ತಿದ್ದರು. ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅವರಿಗೆ ಜೈಕಾರ ಹಾಕುತ್ತಿದ್ದರು, ಶುಭಕೋರುತ್ತಿದ್ದರು, ಆರತಿ ಎತ್ತುತ್ತಿದ್ದರು, ಕೈಗೆ ಸಿಕ್ಕಿದ್ದನ್ನು ಕೊಟ್ಟು ಖುಷಿಪಡುತ್ತಿದ್ದರು. ತರಕಾರಿ ಮಾರುವವರು, ಬೋಂಡಾ ಕರಿಯುವವರು, ಹಣ್ಣುಹಂಪಲು ಮಾರುವ ಬೀದಿ ವ್ಯಾಪಾರಿಗಳು, ದಾರಿಹೋಕರೆಲ್ಲ ಪ್ರಾಣೇಶ ಅವರನ್ನು ಕಣ್ತುಂಬಿಸಿಕೊಂಡು ಸಂತಸದಿಂದ ಬೀಗುತ್ತಿದ್ದರು. ಮೆರವಣಿಗೆ ವಾಹನದ ಹಿನ್ನೆಲೆಯಲ್ಲಿ ಸೆಲ್ಫಿ ನೋಡಿದರೆ ಕೀಕೀ ಡಾನ್‌ಸ್ನೆನಪಾಗುತ್ತಿತ್ತು. ಊರಿನ ಗಣ್ಯವ್ಯಕ್ತಿಗಳು, ವರ್ತಕರು, ವ್ಯಾಪಾರಿಗಳು, ರಾಜಕಾರಣಿಗಳು, ಸಂಸದರು, ಶಾಸಕರು, ನಗರಸಭೆ ಅಧ್ಯಕ್ಷರೆಲ್ಲ ಪ್ರಾಣೇಶ ಅವರಿಗೆ ಶುಭಕೋರಿ ಊರ ತುಂಬಾ ಫಲಕಗಳನ್ನು ಹಾಕಿದ್ದರು. ನಾನು ದೂರದಿಂದಲೇ ಮೆರವಣಿಗೆಯನ್ನು ನೋಡಿದೆ. ಹೃದಯ ತುಂಬಿಬಂದಿತು. ಪ್ರಾಣೇಶ ಬಗ್ಗೆ ಅಭಿಮಾನ ನೂರ್ಮಡಿಯಾಯಿತು.

ಇಂದು ಗಂಗಾವತಿ ಎಂಬ ಊರು, ತನ್ನನ್ನು ತಾನು ಪ್ರಾಣೇಶ ಅವರಿಗೆ ಮೀಸಲಿಟ್ಟಿತ್ತು. ತಮ್ಮ ಮನೆಯ ಮಗನ ಸಾಧನೆಯನ್ನು ಸಂಭ್ರಮಿಸುವವರಂತೆ ಗಂಗಾವತಿಯ ಸಮಸ್ತ ಜನ ಕೃತಾರ್ಥತೆ ಹಾಗೂ ತುಂಬಿಕೊಂಡಿದ್ದರು. ಅದು ಊರಿನ ಹಬ್ಬವಾಗಿತ್ತು. ಸಂಭ್ರಮವಾಗಿತ್ತು. ಸಾಹಿತ್ಯ ಸಮ್ಮೇಳನ ಬರೀ ನೆಪವಾಗಿತ್ತು. ಇಡೀ ರಾಜ್ಯವನ್ನೆಲ್ಲ ನಗಿಸುವವನಿಗೆ ನಾವು ಇಷ್ಟು ಪ್ರೀತಿಯನ್ನಾದರೂ ಕೊಡದಿದ್ದರೆ ಹೇಗೆ ಎಂದು ಅವರೆಲ್ಲ ಕೆಲಸ ಬದಿಗೊತ್ತಿ ಬಂದಿದ್ದರು.

ಮೆರವಣಿಗೆ ಸಮಾಪ್ತವಾಗಿ ವೇದಿಕೆಗೆ ಬಂದಾಗ, ಮಧ್ಯಾಹ್ನ ಎರಡು ಗಂಟೆ. ಬರೋಬ್ಬರಿ ಮೂರು ತಾಸು ತಡವಾಗಿತ್ತು. ವಿಳಂಬಕ್ಕೆ ಕ್ಷಮೆಯಾಗಲಿ, ಸ್ಪಷ್ಟನೆಯಾಗಲಿ ಬೇಕಿರಲಿಲ್ಲ. ಮೆರವಣಿಗೆ ಆರಂಭವಾದಾಗಲೇ ಸಮ್ಮೇಳನ ಉದ್ಘಾಟನೆಯಾದಂತಾಗಿತ್ತು. ನನ್ನ ಪಾಲ್ಗೊಳ್ಳುವಿಕೆ ಕೇವಲ ನೆಪ ಅಥವಾ ಔಪಚಾರಿಕ. ನಾನು ನಗುವಿನ ಬೃಹತ್ ಹೂಹಾರದಲ್ಲಿ ಒಂದು ಪಕಳೆಯಾಗಿದ್ದೆ ಅಷ್ಟೆ.

ತಾಲೂಕು ಸಾಹಿತ್ಯ ಸಮ್ಮೇಳನ ಅಂದರೆ ಊರಿನ ಕಲ್ಯಾಣಮಂಟಪದಲ್ಲೋ, ಸಮುದಾಯ ಭವನದಲ್ಲೋ ನಡೆಯಬಹುದು, 500-600 ಜನ ಸೇರಬಹುದೆಂದು ನಾನು ಭಾವಿಸಿದ್ದೆ. ಹೋಗಿ ನೋಡಿದರೆ, ವಿಶಾಲ ಶಾಮಿಯಾನ, ಬೃಹತ್ ವೇದಿಕೆ. ರಾಜಕೀಯ ಸಮಾವೇಶದಂಥ ಖದರು. ಭರ್ತಿ 14-15 ಸಾವಿರ ಜನ ಸೇರಿದ್ದರು. ಇದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಇದ್ದಿರಬೇಕು ಎಂಬ ಅನುಮಾನ ಹುಟ್ಟಿಸುವ ರೀತಿಯಲ್ಲಿ ಜನ ಜಮಾಯಿಸಿದ್ದರು. ವೇದಿಕೆ ಏರುವ ಹೊತ್ತಿಗೆ ಹೊಟ್ಟೆ ಚುರ್‌ರ್ಎನ್ನುತ್ತಿತ್ತು. ವೇದಿಕೆ ಕಾರ್ಯಕ್ರಮ ಮುಗಿದು ಕೆಳಗಿಳಿಯುವ ಹೊತ್ತಿಗೆ ಸಾಯಂಕಾಲ ನಾಲ್ಕೂವರೆ. ಊಟ ಬೇಕೆಂದು ಅನಿಸಲಿಲ್ಲ. ಕಾರ್ಯಕ್ರಮದ ತುರುಸು, ಹರ್ಷ, ಡೌಲು, ಡಾಣಕು ನೋಡಿ ಅಕ್ಷರಶಃ ಹೊಟ್ಟೆ ತುಂಬಿಹೋಗಿತ್ತು!

ಯಾವುದೇ ವ್ಯಕ್ತಿ ಎಷ್ಟೇ ಮಹತ್ವದ ಸಾಧನೆ ಮಾಡಲಿ, ಹಿಮಾಲಯದ ಎತ್ತರಕ್ಕೇರಲಿ, ಅವನ ಹುಟ್ಟಿದ ಊರಿನಲ್ಲಿ ಅವರಿಗೆ ಎಂಥ ಮರ್ಯಾದೆ ಸಿಗುತ್ತದೆಂಬುದು ಬಹಳ ಮುಖ್ಯ. ಕಾರಣ, ಒಬ್ಬ ವ್ಯಕ್ತಿ ಎಂಥ ಸಾಧನೆ ಮಾಡಿದರೂ, ಅವನ ನಿಜವಾದ ಬಂಡವಾಳಊರಿನ ಜನರಿಗೆ ಗೊತ್ತಿರುತ್ತದೆ. ಅದಕ್ಕಾಗಿಯೇ ಹಿರಿಯರು ಊರು ಗೆದ್ದು ಮಾರು ಗೆಲ್ಲುಎಂಬ ಗಾದೆ ಹೇಳೋದು. ಯಾರಿಗಾದರೂ ಅವರ ತವರೂರಿನಲ್ಲಿ ಸಿಗುವ ಮಾನ, ಮರ್ಯಾದೆಯೇ ಸರ್ವಶ್ರೇಷ್ಠವಾದುದು. ಅಂದು ಪ್ರಾಣೇಶ ಊರು ಗೆದ್ದಿದ್ದರು!

ಇಂದು ಗಂಗಾವತಿಊರಿನ ಹೆಸರು ಲಕ್ಷಾಂತರ ಜನರ ನಾಲಗೆ ಮೇಲೆ ನಲಿಯುತ್ತಿದ್ದರೆ, ಊರು ಪರಿಚಿತವಾಗಿದ್ದರೆ ಪ್ರಾಣೇಶ ಮೂಲಕ ಅಂದರೆ ಅತಿಶಯೋಕ್ತಿ ಅಲ್ಲ. ಪ್ರಾಣೇಶ ಬಲ್ಲವರಿಗೆಲ್ಲ ಗಂಗಾವತಿಯೂ ಗೊತ್ತು. ಗಂಗಾವತಿ ನೋಡದವರಿಗೂ ಪ್ರಾಣೇಶ ಅವರಿಂದಾಗಿ ಗೊತ್ತು. ಗಂಗಾವತಿಯ ಜನ ನಾವು ಪ್ರಾಣೇಶ ಅವರ ಊರಿನವರುಎಂದು ಪರಿಚಯಿಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ಪ್ರಾಣೇಶ ದೆಸೆಯಿಂದ ವಿಶೇಷ ಮರ್ಯಾದೆ ಸಿಗುವುದನ್ನೂ ಗಮನಿಸಿದ್ದೇನೆ.

ಇಂದು ಪ್ರಾಣೇಶ ಕರ್ನಾಟಕದ ಮನೆ ಮನೆ ಮಾತು. ಅವರ ಹೆಸರನ್ನು ಕೇಳದವರಿಲ್ಲ. ಪ್ರಾಣೇಶ ಅವರ ಹಾಸ್ಯ ಕಾರ್ಯಕ್ರಮವಿದೆ ಅಂದರೆ ಹತ್ತಾರು ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ರಾತ್ರಿ ಹನ್ನೊಂದು, ಹನ್ನೆರಡು ಗಂಟೆಗೆ ಕಾರ್ಯಕ್ರಮವಿಟ್ಟರೂ ಜನರು ಮಿಸುಕಾಡುವುದಿಲ್ಲ. ಕೆಲವು ವರ್ಷಗಳ ಹಿಂದೆ ನರಸಿಂಹರಾಜಪುರದಲ್ಲಿ ನನ್ನ ಸ್ನೇಹಿತರಾದ, ವಿಧಾನಪರಿಷತ್ ಸದಸ್ಯರಾದ ಎಂ. ಶ್ರೀನಿವಾಸ ಅವರಿಗೆ ಸನ್ಮಾನವಿತ್ತು. ಅದಾದ ನಂತರ ಪ್ರಾಣೇಶ ಕಾರ್ಯಕ್ರಮವಿತ್ತು. ಸನ್ಮಾನ ಸಮಾರಂಭ ಮುಗಿದು ವೇದಿಕೆಯನ್ನು ಪ್ರಾಣೇಶ ಅವರಿಗೆ ಬಿಟ್ಟುಕೊಟ್ಟಾಗ ರಾತ್ರಿ ಹನ್ನೊಂದಾಗಿತ್ತು. ತಮ್ಮ ಸಹ ಕಲಾವಿದರ ಹಾಸ್ಯ ಮುಗಿದ ನಂತರ ಕೊನೆಯಲ್ಲಿ ಪ್ರಾಣೇಶ ಮಾತು. ಕಾರ್ಯಕ್ರಮ ಮುಗಿದಾಗ ಮಧ್ಯರಾತ್ರಿ ಒಂದು ಗಂಟೆಯಾಗಿತ್ತು. ಒಬ್ಬೇ ಒಬ್ಬ ಎದ್ದು ಹೋಗಿರಲಿಲ್ಲ. ಜಾಗ ಸಾಕಾಗದೇ ಮನೆ ಚಾವಣಿ, ಮರದ ಕೊಂಬೆ ಮೇಲೆ ಕುಳಿತು ಜನ ಹಾಸ್ಯ ಕಾರ್ಯಕ್ರಮದಲ್ಲಿ

ಪ್ರಾಣೇಶ ಕಾರ್ಯಕ್ರಮ ಯಾವುದೇ ಊರಿನಲ್ಲಿ ನಡೆದರೂ ಇಂಥ ಚಿತ್ರಣ ಸಾಮಾನ್ಯ. ಸದ್ಯದ ಮಟ್ಟಿಗೆ, ನಿಸ್ಸಂದೇಹವಾಗಿ, ಪ್ರಾಣೇಶ ಕರ್ನಾಟಕದ ದೊಡ್ಡ ಸ್ಟಾರ್ ಹಾಗೂ ಇ್ಟಟಡಿ ್ಠ್ಝ್ಝಛ್ಟಿ. ಮೊದಲೆಲ್ಲ ದೊಡ್ಡ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಲು ಸಿನಿಮಾ ನಟ, ನಟಿಯರನ್ನು ಕರೆಯುತ್ತಿದ್ದರು, ಮಂತ್ರಿಗಳು, ರಾಜಕಾರಣಿಗಳನ್ನು ಕರೆಯುತ್ತಿದ್ದರು. ಈಗ ಪ್ರಾಣೇಶ!

ಸಿನಿಮಾ ನಟ, ನಟಿಯರು, ಮಂತ್ರಿಗಳನ್ನು ಕರೆದರೂ ಜನ ಸೇರುವುದು ಗ್ಯಾರಂಟಿ ಇಲ್ಲ. ಪ್ರಾಣೇಶ ಬರ್ತಾರೆ ಅಂದ್ರೆ ಹತ್ತು ಸಾವಿರ ಜನರಿಗೆ ಮೋಸವಿಲ್ಲ. ಹೀಗಾಗಿ ಮುಗಿದು ಕೊನೆಯಲ್ಲಿ ಅವರ ಮಾತು. ಅಸಲಿಗೆ ಕಾರ್ಯಕ್ರಮದ ಆರಂಭದಿಂದ ಕುಳಿತುಕೊಳ್ಳುವುದೇ ಅವರ ಮಾತುಗಳನ್ನು ಕೇಳಲು. ಇದೇನು ಹೊಸ ಕ್ರೇಜ್ ಅಲ್ಲ. ಕಳೆದ ಹದಿನೈದು ವರ್ಷಗಳಿಂದ ರಾಜ್ಯದ ಯಾವುದೇ ಊರಿಗೆ ಹೋದರೂ ಇದೇ ಕತೆ.

ಇಂದಿಗೂ ಅವರನ್ನು ಕರೆದು ಹಾಸ್ಯ ಕಾರ್ಯಕ್ರಮ ಮಾಡಬೇಕೆಂದರೆ, ಮುಂದಿನ ಐದಾರು ತಿಂಗಳು ಕಾಯಬೇಕಾದುದು ಅನಿವಾರ‌್ಯ. ಯಾಕೆಂದರೆ ಅವರ ಡೇಟ್‌ಸ್ ಸಿಗುವುದಿಲ್ಲ. ಅವರ ಕಾರ್ಯಕ್ರಮಗಳೆಲ್ಲ ಐದಾರು ತಿಂಗಳ ಮೊದಲೇ ನಿಗದಿಯಾಗಿರುತ್ತವೆ. ‘ಅಣ್ಣಾ, ಪ್ರಾಣೇಶ ಅವರನ್ನು ಅಮೆರಿಕಕ್ಕೆ ಹತ್ತು ಕಾರ್ಯಕ್ರಮಗಳನ್ನು ಮಾಡಬೇಕೆಂದಿರುವೆ. ಹದಿನೈದು ದಿನ ಅವರ ಕಾಲ್‌ಶೀಟ್ ಕೊಡಿಸುಎಂದು ಅಮೆರಿಕದ ಸ್ನೇಹಿತರು ನನಗೆ ಆಗಾಗ ವರಾತ ಮಾಡುತ್ತಿರುತ್ತಾರೆ. ಪ್ರಾಣೇಶಗೆ ಸವುಡು ಇಲ್ಲ. ಅಮೆರಿಕದ ಸ್ನೇಹಿತರಿಗೆ ಇನ್ನೂ ಒಂದು ವರ್ಷ ಕಾಯಬೇಕಾಗುತ್ತದೆ ಎಂದು ಹೇಗೆ ಹೇಳುವುದು? ಅಲ್ಲಿ ಮಟ ಅವರು ಬುಕ್ ಆಗಿದ್ದಾರೆ. ಮುಂದಿನ ವರ್ಷವೂ ಇದೇ ಕತೆ, ವರ್ಷ ವರ್ಷವೂ. ಹದಿನೈದು ದಿನ ಒಟ್ಟಿಗೆ ಅವರ ಮನೆಯವರಿಗೆ, ಮಕ್ಕಳಿಗೇ ಸಿಗಲಿಕ್ಕಿಲ್ಲ. ಪ್ರಾಣೇಶ ಅಷ್ಟು ಬೇಡಿಕೆ ವ್ಯಕ್ತಿ.

ಜತೆಗೆ ಹಾಸ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದವರು ಇಂದು ಬೇಡಿಕೆ ಇಲ್ಲದೇ ಸೊರಗುತ್ತಿದ್ದರೆ ಇವರ ಜನಪ್ರಿಯತೆ ಮಾತ್ರ ಸ್ವಲ್ಪವೂ ಕುಂದಿಲ್ಲ. ಪ್ರತಿದಿನ ಎಲ್ಲ ಕನ್ನಡ ಚಾನೆಲ್‌ಗಳಿಗೂ ಪ್ರಾಣೇಶ ಅವರ ಹಾಸ್ಯ ಕಾರ್ಯಕ್ರಮಗಳು ಬೇಕು. ಯುಟ್ಯೂಬ್‌ನಲ್ಲೂ ಅವರ ಹಾಸ್ಯಗಳು ಜನಪ್ರಿಯ. ಕೆಲವು ತುಣುಕುಗಳನ್ನು 20-30 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅವರು ಹೇಳುವ ಜೋಕುಗಳು ಪ್ರಚಲಿತ. ಆದರೂ ಪ್ರಾಣೇಶ ಬೋರಾಗಿಲ್ಲ, ಅಪ್ರಸ್ತುತರಾಗಿಲ್ಲ, ತಾರಾಮೌಲ್ಯ ಕಳಕೊಂಡಿಲ್ಲ. ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ಕನ್ನಡಿಗರ ಹೃದಯದಲ್ಲಿ ಜಾಗ ಸಣ್ಣ ಮಾತಲ್ಲ. ಇದಕ್ಕೆ ಕಾರಣ ಹೇಳಿದ ಜೋಕುಗಳನ್ನೇ ಹೇಳಿ ಸಭಿಕರನ್ನು ಗೋಳು ಹುಯ್ದುಕೊಳ್ಳುವುದಿಲ್ಲ. ಅವರ ಗೆಲುವಿಗೆ ಮುಖ್ಯ ಕಾರಣ ಸದಾ ಅಪ್ಡೇಟ್ ಆಗುವ ಗುಣ.

ಅಲ್ಲದೇ ಬರೀ ನಗಿಸುವುದಷ್ಟೇ ಅವರ ಆಶಯವಲ್ಲ. ನಗುವಿನ ಜತೆಗೆ ಬಲವಾದ ಸಂದೇಶ ಹಾಗೂ ನೀತಿಯೂ ಒಳಗೊಂಡಿರುವುದು ಅವರ ಹಾಸ್ಯಗಳ ವೈಶಿಷ್ಟ್ಯ. ಮಧ್ಯಮ ವರ್ಗದ ಕುಟುಂಬಗಳ ಜನಜೀವನ, ಜೀವನವಿಧಾನ, ಶೈಲಿ, ಭಾಷೆ, ಆಚರಣೆ, ಆಧುನಿಕ ಬದುಕಿನ ವೈರುಧ್ಯಗಳೇ ಅವರ ಹಾಸ್ಯಗಳ ಪ್ರಧಾನ ವಸ್ತು. ಅವರು ಗೇಲಿ ಮಾಡುವುದಿಲ್ಲ, ಲೇವಡಿ ಮಾಡುವುದಿಲ್ಲ. ಡಬಲ್ ಮೀನಿಂಗ್ ಅಂತೂ ಇಲ್ಲವೇ ಇಲ್ಲ. ಅಶ್ಲೀಲತೆ, ಪೋಲಿ ಜೋಕುಗಳಿಗೆ ಆಸ್ಪದವೇ ಇಲ್ಲ. ಅವರದು ಪ್ಯೂರ್ ವೆಜ್ ಜೋಕ್‌ಸ್. ಮನೆಮಂದಿ ಎಲ್ಲ ಕುಳಿತು ಆಸ್ವಾದಿಸಬಹುದಾದ ಮರ್ಯಾದಸ್ಥರ ಹಾಸ್ಯಗಳು. ನಮ್ಮ ಕಣ್ಣ ಮುಂದಿನ ಸಾಮಾನ್ಯ ಘಟನೆಗಳಿಗೆ ಹಾಸ್ಯದ ಕುಬುಸ ತೊಡಿಸುವುದು ಅವರ ಹೆಚ್ಚುಗಾರಿಕೆ. ಅದೇ ಉತ್ತರ ಕರ್ನಾಟಕದ ಭಾಷೆ. ಪ್ರಾಣೇಶರ ಕಾರ್ಯಕ್ರಮದಲ್ಲಿ ಮಹಿಳೆಯರ ಹಾಜರಾತಿಯೇ ಹೆಚ್ಚು. ಎಲ್ಲೂ ನಂಜಿಲ್ಲ. ಹೇಳಿದ ಹಳೇ ಜೋಕುಗಳನ್ನೇ ಮತ್ತೆ ಹೇಳುವುದಿಲ್ಲ. ಸಭ್ಯತೆ ಮೀರುವುದಿಲ್ಲ. ಹಳೇ ಜೋಕುಗಳನ್ನು ಹೇಳುವ ಸಂದರ್ಭದಲ್ಲೂ ಮತ್ತೇನೋ ಹೊಸತು ಅದಕ್ಕೆ ಸೇರಿರುತ್ತದೆ. ಸಭೆ, ಸಭಿಕರನ್ನು ನೋಡಿ ಅವರು ಹಾಸ್ಯ ಮಾಡುತ್ತಾರೆ. ಅವರನ್ನು ನೋಡುತ್ತಲೇ ಸಭಿಕರು ಹಾಸ್ಯಭಾವಪರವಶರಾಗುತ್ತಾರೆ. ತಮ್ಮಷ್ಟಕ್ಕೆ ನಗುವುದಕ್ಕೆ ತೆರೆದುಕೊಳ್ಳುತ್ತಾರೆ.

ಇದೂ ಒಂದು ರೀತಿಯಲ್ಲಿ ಸಮ್ಮೋಹನವೇ. ತಮ್ಮ ಕಷ್ಟದ ದಿನ, ಬಾಲ್ಯದ ದಿನಗಳ ಪೆದ್ದುತನ, ಬಡತನ, ತಾಪತ್ರಯಗಳನ್ನೂ ಹೇಳಿ ನಗಿಸುತ್ತಾರೆ. ತಮ್ಮ ಓರೆಕೋರೆಗಳೂ ಅವರಿಗೆ ಗೊತ್ತು. ಅವರು ಮಾತು ಕೇಳಿದರೆ ನಗುವೊಂದೇ ಅಲ್ಲ, ಸಂಸ್ಕಾರ, ಸಂಸ್ಕೃತಿಯ ಕಾಣಬಹುದು. ಅವರದು ಎಲ್ಲರನ್ನೂ ಒಳಗೊಳ್ಳುವ, ಎಲ್ಲ ವಯಸ್ಸಿನವರನ್ನೂ ತಟ್ಟುವ ಸಾಮಾಜಿಕ (ಮ್ಯಾಜಿಕ್) ಹಾಸ್ಯ. ಬರಡು ಭೂಮಿಯಲ್ಲೂ ಕಾರಂಜಿ ಪುಟಿಯುವಂತೆ, ಎಂಥ ಶುಷ್ಕ ಸನ್ನಿವೇಶದಲ್ಲೂ, ಸಾಮಾನ್ಯ ಘಟನೆಯಲ್ಲೂ ಹಾಸ್ಯ ಕಾರಂಜಿ ಚಿಮ್ಮುವಂತೆ ಮಾಡುವುದು ಪ್ರಾಣೇಶ ವರಸೆ. ತಮ್ಮ ಗುರು ಬ್ಚೀಜಿ ಅವರನ್ನು ಎಲ್ಲ ಸಂದರ್ಭಗಳಲ್ಲೂ ನೆನೆಯುವ ಪ್ರಾಣೇಶ, ಖಾಸಗಿ ಜೀವನದಲ್ಲಿ ಮಾತ್ರ ಗುರುಗಳ ಗುಣದಿಂದ ಮುಕ್ತರಾಗಿ, ಅಂತರ ಕಾಪಾಡಿಕೊಂಡಿರುವುದೂ ಗಮನಾರ್ಹ. ಅವರಿಗೆ ಗುರುವೇ ಆದರ್ಶ, ಗುರುವೇ ಎಚ್ಚರಿಕೆ.

ಎರಡು ದಿನ ಪ್ರಾಣೇಶಮಯವಾಗಿತ್ತು. ಎರಡೂ ದಿನ ಜನ ನಕ್ಕಿದ್ದೇ ನಕ್ಕಿದ್ದು. ಶಾಸಕ ಪರಣ್ಣ ಮುನವಳ್ಳಿ ಸಮ್ಮೇಳನಕ್ಕೆ ಹೆಗಲುಕೊಟ್ಟಿದ್ದರು. ಪ್ರಾಣೇಶರ ಜನ್ಮ ಸಾರ್ಥಕವಾಯಿತುಎಂಬ ಕೃತಾರ್ಥತೆ ಎಲ್ಲರಲ್ಲೂ ಮೂಡಿತ್ತು. ಅದನ್ನು ತಾಲೂಕು ಸಾಹಿತ್ಯ ಸಮ್ಮೇಳನ ಎಂಬುದಕ್ಕಿಂತ ಪ್ರಾಣೇಶರಿಗೆ ವಾತ್ಸಲ್ಯ, ಪ್ರೀತಿ, ಅಭಿಮಾನಗಳ ಸಂಪೂರಣ ಎಂದು ಕರೆಯುವುದೇ ಸೂಕ್ತವಾಗಿತ್ತು.

ಸಮ್ಮೇಳನದ ಉದ್ಘಾಟನೆ ಮುಗಿಸಿ ಊಟ ಮಾಡಿ ಏಳುವ ಹೊತ್ತಿಗೆ ಸಾಯಂಕಾಲ ಐದು ಗಂಟೆ!

ಆನಂತರ ಪ್ರಾಣೇಶ ಅವರ ಮನೆಗೆ ಹೋಗಿದ್ದೆ. ತಮಗೆ ಪ್ರಶಸ್ತಿ, ರುಮಾಲು, ಕಿರೀಟ, ಬಿನ್ನವತ್ತಳೆ, ಹಾರ, ತುರಾಯಿ, ಸ್ಮರಣಿಕೆಗಳನ್ನಿಟ್ಟಿದ್ದ ಮ್ಯೂಸಿಯಂಗೆ ಕರೆದೊಯ್ದರು. ಅದನ್ನು ಮ್ಯೂಸಿಯಂ ಎನ್ನುವುದಕ್ಕಿಂತ ಪ್ರೀತಿಯ ಅಣೆಕಟ್ಟು ಅಥವಾ ಅಭಿಮಾನದ ಮಹಾಪೂರ ಎನ್ನಬಹುದು. ಅವರ ಸಂಗ್ರಹದಲ್ಲಿ ಎಲ್ಲ ಪ್ರಶಸ್ತಿಗಳಿದ್ದವು, ರಾಜ್ಯೋತ್ಸವ ಪ್ರಶಸ್ತಿಯೊಂದನ್ನು ಹೊರತುಪಡಿಸಿ. ‘ನಿಮಗೆ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ವಾ?’ ಎಂದು ಕೇಳಿದೆ. ‘ಇಲ್ಲ ಸಾರ್, ಸಮಸ್ತ ಕನ್ನಡಿಗರು ನನಗೆ ಅದಕ್ಕಿಂತ ದೊಡ್ಡ ಪ್ರಶಸ್ತಿ ನೀಡಿದ್ದಾರೆ. ಕರ್ನಾಟಕ ಸರಕಾರದ ಕಣ್ಣಿಗೆ ನಾನಿನ್ನೂ ಬಿದ್ದಿಲ್ಲ. ಸರಕಾರದ ಮಾನದಂಡಗಳೇ ಬೇರೆ ಬಿಡಿಎಂದರು.

ಪ್ರಾಣೇಶ, ಪ್ರಶಸ್ತಿ ಬಂದಿಲ್ಲ ಎಂದು ಹೇಳುವುದೂ ಗೌರವವೇ. ಪ್ರಶಸ್ತಿ ಬಂದರೆ ನೀವು ಅನುಮಾನಾಸ್ಪದ ವ್ಯಕ್ತಿ ಆಗ್ತಾ ಇದ್ರಿಎಂದೆ. ಜೋರಾಗಿ ನಕ್ಕೆವು. ಪ್ರಾಣೇಶ ಅವರಿಗೆ ಪ್ರಶಸ್ತಿ ಕೊಡದಿರಲು ಕಾರಣಗಳೇನು? ಪ್ರಶ್ನೆ ಕೇಳಿಕೊಳ್ಳಬೇಕಾಗಿದ್ದು ಸರಕಾರದಲ್ಲಿರುವವರು.

ಪ್ರಾಣೇಶ ಪ್ರಪಂಚದಲ್ಲಿ ಇಡೀ ದಿನ ಕಳೆದಿದ್ದು ಬಹಳ ಸ್ವಾರಸ್ಯವಾಗಿತ್ತು ಅಂದ್ರೆ ಅದು ಅಂಡರ್‌ಸ್ಟೇಟ್‌ಮೆಂಟ್!