About Us Advertise with us Be a Reporter E-Paper

ಸಿನಿಮಾಸ್

ಸರ್ವರನ್ನೂ ಗೆದ್ದ ನಟಸರ್ವಭೌಮ

- ಶಶಾಂಕ್ ಜೋಯಿಸ್

ಪವರ್ ಮತ್ತು ಪವನ್ ಕಾಂಬಿನೇಷನ್‌ನ ಎರಡನೇ ಸಿನಿಮಾ ‘ನಟಸಾರ್ವಭೌಮ’. ಸಿನಿಮಾದ ಹೆಸರು, ಟೀಸರ್, ಟ್ರೇಲರ್, ಹಾಡುಗಳಷ್ಟೇ ಅಲ್ಲದೇ, ಪುನೀತ್ ಅವರ ಹೇರ್ ಸ್ಟೈಲ್ ಕೂಡಾ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಹೀಗೆ ಪ್ರತಿ ಹೆಜ್ಜೆಗೂ ಸದ್ದು ಮತ್ತು ಸುದ್ದಿ ಎರಡನ್ನೂ ಮಾಡಿ ನಿರೀಕ್ಷೆ ಹುಟ್ಟಿಸಿದ ಸಿನಿಮಾ ನಿನ್ನೆ ಬಿಡುಗಡೆಯಾಗಿ ಫುಲ್ ಹೌಸ್ ಪ್ರದರ್ಶನ ಕಾಣುತ್ತಿದೆ. ಇಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾದಲ್ಲಿ ಏನಿದೆ ಎಂದು ಮುನ್ನ ನಿರ್ದೇಶಕ ಪವನ್ ಒಡೆಯರ್ ಅವರನ್ನು ವಿಶ್ವವಾಣಿ ಸಿನಿಮಾಸ್ ಮಾತಿಗೆಳೆದಾಗ,
ನಟಸಾರ್ವಭೌಮನ ಬಗ್ಗೆ ಅವರು ಹೇಳಿದಿಷ್ಟು….

‘ನಟಸಾರ್ವಭೌಮ’ ಎಂದ ತಕ್ಷಣ ನೆನಪಾಗುವುದು?
ಯಾರೇ ಕನ್ನಡಿಗನಿಗಾದರೂ ನಟಸಾರ್ವಭೌಮ ಎಂದರೆ ಮೊದಲಿಗೆ ಡಾ.ರಾಜ್‌ಕುಮಾರ್ ಅವರೇ ನೆನಪಾಗುತ್ತಾರೆ. ಇದರ ಜತೆಗೆ ನನಗೆ ಪುನೀತ್ ಸರ್ ನೆನಪಾಗುತ್ತಾರೆ, ಅವರ ಜತೆಗಿನ ಇಡೀ ಸಿನಿಮಾದ ಜರ್ನಿ ನೆನಪಾಗುತ್ತದೆ.

  ತುಂಬಾ ತಡವಾಗಿ ಪ್ರಶ್ನೆ ಕೇಳುತ್ತಿದ್ದೇನೆ, ಈ ಸಿನಿಮಾಗೆ ‘ನಟಸಾರ್ವಭೌಮ’ ಎಂಬ ಹೆಸರನ್ನು ಇಟ್ಟಿದ್ದೇಕೆ
ಪುನೀತ್ ಅವರ ಅಭಿಮಾನಿಗಳು, ಕನ್ನಡ ಚಿತ್ರಪ್ರೇಮಿಗಳು ಈ ವರೆಗೂ ಯಾವ ರೀತಿಯಲ್ಲಿ ಪುನೀತ್ ಅವರನ್ನು ನೋಡಿದ್ದಾರೋ, ಅದಕ್ಕಿಂತ ವಿಭಿನ್ನವಾಗಿ, ಹೊಸ ರೀತಿಯಲ್ಲಿ ಈ ಸಿನಿಮಾ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ. ಈ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ಅದು ಪುನೀತ್ ಅವರ ನಟನೆ. ಇದೇ ಕಾರಣಕ್ಕೆ ಸಿನಿಮಾಗೆ ನಟಸಾರ್ವಭೌಮ ಎಂಬ ಹೆಸರನ್ನು ಇಟ್ಟಿದ್ದೇವೆ.

‘ನಟಸಾರ್ವಭೌಮ’ ಕತೆಯ ಎಳೆ ಹುಟ್ಟಿದ್ದೆಲ್ಲಿ?
‘ರಣವಿಕ್ರಮ’ ಸಿನಿಮಾ ಮಾಡುವುದಕ್ಕೆ ಮೊದಲೇ, ಸುಮಾರು ಎಂಟು ವರ್ಷದ ಈ ಸಿನಿಮಾ ಬಗ್ಗೆ ಪ್ಲಾನ್ ಮಾಡಿದ್ದೆ. ಕತೆಯ ಎಳೆಯ ಬಗ್ಗೆ ಪುನೀತ್ ಅವರ ಬಳಿ ಚರ್ಚಿಸಿದ್ದೆ. ಅದು ಅವರಿಗೆ ಅಷ್ಟೊಂದು ಇಂಪ್ರೆಸ್ ಮಾಡಿರಲಿಲ್ಲ. ಒಂದಿಷ್ಟು ಬದಲಾವಣೆ ಮಾಡಿಕೊಂಡು ಬರಲು ಹೇಳಿದ್ದರು. ನಾನು ನಂತರದಲ್ಲಿ ಬೇರೆ ಬೇರೆ ಸಿನಿಮಾದಲ್ಲಿ ಬ್ಯುಸಿ ಆದೆ. ಅವರ ಜತೆಗೆ ರಣವಿಕ್ರಮ ಸಿನಿಮಾ ಕೂಡಾ ಮಾಡಿದೆ. ಇದೆಲ್ಲರ ನಡುವೆಯೂ ನನ್ನ ತಲೆಯಲ್ಲಿ ಈ ಸಿನಿಮಾದ ಕತೆ ಸದಾ ಕೊರೆಯುತ್ತಿತ್ತು. ಕಡೆಗೆ ಕತೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು, ರೀತಿಯ ಸ್ಕ್ರೀನ್ ಪ್ಲೇ ಮಾಡಿಕೊಂಡು ಪುನೀತ್ ಅವರ ಮುಂದೆ ಹೋದೆ. ಮುಂದಿನದ್ದು ನಿಮಗೆ ಗೊತ್ತಿದೆ.

ಪುನೀತ್ ಮತ್ತು ನಿಮ್ಮ ಕೆಮಿಸ್ಟ್ರಿ ಹೇಗಿದೆ?
ಯಾವುದೇ ನಿರ್ದೇಶಕನಿಗಾದರೂ ಪುನೀತ್ ಅವರನ್ನು ಒಮ್ಮೆಯಾದರೂ ನಿರ್ದೇಶಿಸಬೇಕು ಎಂಬ ಕನಸಿರುತ್ತದೆ. ಅಂಥ ಒಬ್ಬ ಒಳ್ಳೆ ನಟ ಅವರು. ಅವರ ಜತೆಗೆ ಎರಡನೇ ಸಿನಿಮಾ ಮಾಡಿದ್ದೇನೆ, ಇದು ನನಗೆ ವೈಯುಕ್ತಿಕವಾಗಿ ಖುಷಿ ಕೊಟ್ಟ ವಿಷಯ. ನಾವಿಬ್ಬರೂ ಹೇಗೆ, ನಮ್ಮ ಐಡಿಯಾಗಳೇನು, ನಮ್ಮ ಕಂಫರ್ಟ್ ರೆನ್ ಯಾವುದು ಎಂಬುದು ತಿಳಿದಿದ್ದ ಕಾರಣ ನನ್ನ ನನ್ನ ತಲೆಯಲ್ಲಿ ಏನಿತ್ತೋ ಅದನ್ನೇ ಪುನೀತ್ ಸರ್ ಕೊಟ್ಟರು.

ಪುನೀತ್ ಅವರ ಪಾತ್ರದ ಬಗ್ಗೆ ಹೇಳಿ ?
ಪುನೀತ್ ಅವರು ಈ ವರೆಗೂ ಸಾಕಷ್ಟು ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಅವರಿಗೆ ಆ್ಯಕ್ಷನ್, ಆ್ಯಕ್ಟಿಂಗ್ ಯಾವುದೂ ಹೊಸದಲ್ಲ. ಆದರೆ ಈ ಸಿನಿಮಾ ಮೂಲಕ ಪುನೀತ್ ಅವರು ಮೊದಲನೇ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ. ಹಾರರ್ ಸಿನಿಮಾಗಳೆಂದರೆ ಯಾರದ್ದೋ ಮೇಲೆ ಆತ್ಮ ಬರುತ್ತಿರುತ್ತದೆ, ಅದರಿಂದ ಉಂಟಾಗುವ ಸಮಸ್ಯೆಯನ್ನು ಹೋಗಿ ಪರಿಹರಿಸುತ್ತಿರುತ್ತಾನೆ. ಇಂಥ ಕತೆಗಳು ಒಂದಿಷ್ಟು ಬಂದಿವೆ. ಆದರೆ ಈ ಸಿನಿಮಾದಲ್ಲಿ ಹೀರೋ ಮೇಲೆ ಆತ್ಮ ಬರುತ್ತದೆ. ಇದೊಂಥರ ಹೊಸ ಪ್ರಯತ್ನ. ಇದು ಸಿನಿಮಾದ ಹೈಲೈಟ್, ಪುನೀತ್ ಇದನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಪಾತ್ರದ ಚೇಂಜ್ ಓವರ್‌ಗಳನ್ನು ತೆರೆಯ ಮೇಲೆ ನೋಡುವಾಗ ಹೊಸ ಫೀಲ್‌ಕೊಡುತ್ತದೆ, ಇದರಿಂದ ಇಡೀ ಸಿನಿಮಾ ಬೇರೆಯದೇ ಅನುಭವ ಕೊಡುತ್ತದೆ.

ಅನುಪಮಾ ಪರಮೇಶ್ವರ್ ಮೊದಲ ಸಲ ಕನ್ನಡಕ್ಕೆ ಬಂದಿದ್ದಾರೆ…
ಕನ್ನಡ ಸಿನಿಮಾದಲ್ಲಿ ಮೊದಲ ಸಲ ನಟಿಸಿದ್ದಾರೆ, ಆದರೆ ಕರ್ನಾಟಕದಲ್ಲಿ ಸಾಕಷ್ಟು ಫೇಮಸ್. ಅವರ ಪ್ರೇಮಂ, ಅ ಆ, ಸೇರಿದಂತೆ ಹಲವು ಸಿನಿಮಾಗಳ ಮೂಲಕ ಇಲ್ಲಿಯೂ ಫ್ಯಾನ್‌ಸ್ಗಳನ್ನು ಪಡೆದಿದ್ದಾರೆ. ಹೀಗಾಗಿ ಅವರ ಆ್ಯಕ್ಟಿಂಗ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಈ ಸಿನಿಮಾದಲ್ಲಿ ಅವರಿಗೆ ಪ್ರಮುಖ ಪಾತ್ರವಿದೆ. ಸಾಮಾಜಿಕ ಕಳಕಳಿ ಇರುವ ಒಬ್ಬ ಲಾಯರ್ ಪಾತ್ರದಲ್ಲಿ ಅವರು ಕಾಣಿಸಿಕೊಡಿದ್ದಾರೆ. ಪುನೀತ್ ಮತ್ತು ಅನುಪಮ ಜೋಡಿ ಮೋಡಿ ಮಾಡಬಹುದು ಎನ್ನುವ ಭರವಸೆ ಇದೆ.

ರಚಿತಾ ರಾಮ್…. ?
ರಚಿತಾ ಅವರ ಪಾತ್ರ ಹೊತ್ತು ಮಾತ್ರ ತೆರೆಯ ಮೇಲೆ ಬರುತ್ತದೆ, ಅವರದು ಬಬ್ಲಿ ಬಬ್ಲಿಯಾದ ಪಾತ್ರ. ಸಿನಿಮಾದಲ್ಲಿ ಅವರು ಸ್ವಲ್ಪ ಹೊತ್ತಷ್ಟೇ ತೆರೆಯ ಮೇಲೆ ಕಾಣಿಸಿಕೊಂಡರೂ, ಅವರ ಹ್ಯಾಂಗ್ ಓವರ್ ಇಡೀ ಸಿನಿಮಾ ಇರುತ್ತದೆ. ಅದನ್ನು ಪೂರ್ತಿಯಾಗಿ ವಿವರಿಸುವುದು ಕಷ್ಟ. ಹೇಳಿದರೆ ಸಿನಿಮಾದ ಕತೆಯೇ ಬಿಚ್ಚಿಕೊಂಡು ಬಿಡುತ್ತದೆ.

ರಾಕ್‌ಲೈನ್ ವೆಂಕಟೇಶ್ ಜತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
ನಾನು ಚಿಕ್ಕಂದಿನಿಂದ ಅವರ ನಿರ್ಮಾಣದ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಇಂದು ಅವರೊಟ್ಟಿಗೆ ಸಿನಿಮಾ ಮಾಡಿದ್ದೇನೆ ನನ್ನ ಪಾಲಿಗೆ ಅದೊಂದು ಹೆಮ್ಮೆ, ಖುಷಿ ನೀಡುವ ವಿಚಾರ. ಅವರ ಬಗ್ಗೆ ನಾನು ಏನು ಹೇಳಿದರೂ ಕಡಿಮೆ. ಅವರೊಬ್ಬ ಪ್ರೊಫೆಷನಲ್ ನಿರ್ಮಾಪಕ, ಸಿನಿಮಾದ ಆಳ ಅಗಲ ಎಲ್ಲಾ ಅವರಿಗೆ ಚೆನ್ನಾಗಿ ತಿಳಿದೆ. ನಿರ್ದೇಶಕನ ಬೇಡಿಕೆ ಏನು ಎನ್ನುವುದನ್ನು ಸಿನಿಮಾದ ನಾಯಕ ಮತ್ತು ನಿರ್ಮಾಪಕ ಇಬ್ಬರೂ ಅರ್ಥಮಾಡಿಕೊಂಡು ಬಿಟ್ಟರೆ ನಮ್ಮ ಕೆಲಸ ತುಂಬಾ ಸುಲಭ. ಇದು ನಟಸಾರ್ವಭೌಮ ಸಿನಿಮಾದಲ್ಲಿ ಸಾಧ್ಯವಾಯ್ತು.

ಪವನ್ ಪ್ರತಿ ಸಿನಿಮಾದ ಹಾಡುಗಳು ಸಖತ್ ಸೌಂಡು ಮಾಡುತ್ತವೆ. ಸಿನಿಮಾದ ಹಾಡುಗಳ ಬಗ್ಗೆ ಹೇಳಿ
ನಾನು ಸಿನಿಮಾ ಮಾಡುವಾಗ ಹಾಡುಗಳಿಗೆ ಸ್ಪೆಷಲ್ ಸ್ಪೇಸ್ ಕೊಡುತ್ತೇನೆ. ಟೀಸರ್ ಟ್ರೇಲರ್‌ಗಳಿಗಿಂತ ಹಾಡುಗಳಿಗೆ ಜನರನ್ನು ಥಿಯೇಟರ್‌ನತ್ತ ಶಕ್ತಿ ಹೆಚ್ಚಿರುತ್ತದೆ. ಹಾಡುಗಳು ಹಿಟ್ ಆದ ತಕ್ಷಣ ಸಿನಿಮಾ ಹಿಟ್ ಆಗುತ್ತದೆ ಎಂದಲ್ಲ, ಆದರೆ ಒಳ್ಳೆಯ ಹಾಡುಗಳು ಖಂಡಿತವಾಗಿಯೂ ಸಿನಿಮಾಗೆ ಫ್ಲಸ್ ಆಗಲಿದೆ. ಈ ಸಿನಿಮಾಗೆ ಡಿ. ಇಮಾನ್ ಸಂಗೀತ ನೀಡಿದ್ದಾರೆ, ಹಾಡುಗಳು ಈಗಾಗಲೇ ಜನರ ಮೆಚ್ಚುಗೆ ಪಡೆದಿವೆ. ಡ್ಯಾನ್‌ಸ್ ವಿಥ್ ಅಪ್ಪು ಹಾಡಿಗೆ ಎಲ್ಲರಿಂದ ವ್ಯಕ್ತವಾಗುತ್ತದೆ.

ಒಟ್ಟಾರೆ ಸಿನಿಮಾದ ಹೂರಣ
ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ, ಪುನೀತ್ ಅವರ ಫ್ಯಾನ್‌ಸ್ ಸೇರಿ ಎಲ್ಲರಿಗೂ ಇಷ್ಟವಾಗುವಂಥ ಕಂಟೆಂಟ್ ಇದೆ. ಡ್ಯಾನ್‌ಸ್, ಫೈಟ್ ಹಾಡುಗಳು ಎಂದಷ್ಟೇ ಅಲ್ಲ, ಸಿನಿಮಾದಲ್ಲಿ ಒಂದೊಳ್ಳೆ ಕತೆ ಇದೆ, ಕೊನೆಯವರೆಗೂ ಹಿಡಿದಿಡುವಂಥ ಸ್ಕ್ರೀನ್‌ಪ್ಲೇ ಇದೆ. ನಾನು 100% ಭರವಸೆ ಕೊಡುತ್ತೇನೆ ಈ ಸಿನಿಮಾದಲ್ಲಿ ನೀವು ಹಿಂದೆಂದೂ ನೋಡಿರದ ಪುನೀತ್ ಅವರನ್ನು ನೋಡುತ್ತೀರಾ

ಬುಧವಾರ ರಾತ್ರಿ 10 ರಿಂದಲೇ ಶೋಗಳು ಆರಂಭ

ಬೆಂಗಳೂರಿನ ಪ್ರಸನ್ನ ಹುಬ್ಬಳಿ, ಬೆಳಗಾವಿ ಮತ್ತಿತರ ಕಡೆ 24 ಗಂಟೆ ನಿರಂತರ ಶೋಗಳು

350ಕ್ಕೂ ಹೆಚ್ಚಿನ ಥಿಯೇಟರ್‌ನಲ್ಲಿ 550ಕ್ಕೂ ಹೆಚ್ಚಿನ ಶೋಗಳು

ಕನ್ನಡದಲ್ಲಿ ಮೊದಲ ಬಾರಿಗೆ ಅನುಪಮ ಪರಮೇಶ್ವರನ್

ಪತ್ರಕರ್ತನ ಪಾತ್ರದಲ್ಲಿ ಪವರ್‌ಸ್ಟಾರ್

Tags

Related Articles

Leave a Reply

Your email address will not be published. Required fields are marked *

Language
Close