About Us Advertise with us Be a Reporter E-Paper

ವಿವಾಹ್

ಎಲ್ಲಾ ಮದುವೆಗಳೂ ಸ್ವರ್ಗದಲ್ಲೇ ನಿಶ್ಚಯವಾದವೇ….?

* ಭವದಿ

ಸುಖೀ ದಾಂಪತ್ಯ ಹಾಗೂ ಮದುವೆಯ ವೈಫಲ್ಯಕ್ಕೆ ಏನು ಕಾರಣ? ಒಬ್ಬರನ್ನೊಬ್ಬರು ಅರಿತ ದಂಪತಿಯ ಮದುವೆ ಸ್ವರ್ಗದಲ್ಲಿ ನಿಶ್ಚಿತವಾದದ್ದೇ.. ಹಾಗೆ ಒಬ್ಬರ ಮುಖ ಇನ್ನೊಬ್ಬರಿಗೆ ನೋಡಿದರೆ ಆಗದಂತೆ ಕಚ್ಚಾಡುತ್ತಿರುವ ದಂಪತಿಯ ಈ ಸಂಬಂಧ ನರಕದಲ್ಲಿ ನಿರ್ಧರಿತವೇ?

ಅನುರೂಪವಾಗಿರುವ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರುವ ನೋಡಿದಾಕ್ಷಣ, ಇವರ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರಬೇಕು ಎಂದು ಅನ್ನಿಸಿಬಿಡುತ್ತದೆ. ಹಾಗೆಯೇ ಸದಾ ಕಿತ್ತಾಡುವ, ಜಗಳ ಕಾಯುವ ಜೋಡಿಯ ಬಗ್ಗೆ ಇವರು ತಪ್ಪಿ ಮದುವೆಯಾಗಿದ್ದಾರೆ.. ಇವರಿಬ್ಬರೂ ಸರಿಯಾದ ಜೋಡಿಯಲ್ಲ ಎಂಬ ಭಾವನೆ ಪ್ರತಿಯೊಬ್ಬರ ಮನದಲ್ಲೂ ಉದ್ಭವಿಸಿಬಿಡುತ್ತದೆ.

ಸಾಮಾನ್ಯವಾಗಿ ಎರಡು ರೀತಿಯ ಮದುವೆ ಇದೆ. ಒಂದು ಸತಿಪತಿಗಳೆನ್ನಿಸಿದ ನಂತರ ಒಬ್ಬರನ್ನೊಬ್ಬರು ಅರಿತು, ಕಷ್ಟಸುಖಗಳಲ್ಲಿ ಸಹಭಾಗಿಗಳಾಗಿ, ಜತೆಯಾಗಿ ಹೆಜ್ಜೆ ಇಡುವಂತಹ ಯಶಸ್ವಿ ಮದುವೆ. ಇನ್ನೊಂದು ತಾವು ಪ್ರೀತಿಸುವಾಗ, ರನ್ನ ಚಿನ್ನ ಎನ್ನುತ್ತಾ, ಸಂಗಾತಿಗೋಸ್ಕರ ಕೊಡಲು ಸಿದ್ಧರಾಗಿದ್ದೂ, ದಾಂಪತ್ಯ ಬದುಕಿಗೆ ಕಾಲಿಟ್ಟ ತಕ್ಷಣ ಯಾವುದೋ ಜನ್ಮದ ವೈರಿಗಳಂತೆ ವರ್ತಿಸುವ ದುರಂತ ವಿವಾಹ. ಅದನ್ನೇ ನರಕದಲ್ಲಿ ನಿಶ್ಚಯವಾದ ವಿವಾಹವೆನ್ನುವುದು.

ಆದರ್ಶ ದಾಂಪತ್ಯ..
ಪತಿ ಪತ್ನಿ ಸಂಸಾರದ ಕಣ್ಣು, ಇಬ್ಬರೂ ಸಂಸಾರವೆಂಬ ನೊಗವನ್ನು ಹೊರುವ ಜೋಡೆತ್ತುಗಳು, ಎಲ್ಲಾ ಕಷ್ಟಸುಖಗಳಲ್ಲಿ ಸಮನಾಗಿ ಭಾಗಿಯಾಗುವವರು ಎಂದೆಲ್ಲಾ ಗಂಡ ಹೆಂಡತಿಯರ ಬಗ್ಗೆ ಮಾತಿದೆ. ಮನೋಭಾವ, ನಡವಳಿಕೆ, ಸ್ವಭಾವಗಳಲ್ಲಿ ಎಷ್ಟೇ ವೈರುಧ್ಯಗಳಿದ್ದರೂ, ಸಂಗಾತಿಯ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡುವ, ಗೌರವಿಸುವ ಮನೋಸ್ಥಿತಿಯನ್ನು ಬೆಳೆಸಿಕೊಂಡಾಗ ದಾಂಪತ್ಯ ಬದುಕು ಹಳಿ ತಪ್ಪದು. ಹಿಂದೂ ಸಂಪ್ರದಾಯದ ಪ್ರಕಾರ ಭಾವನಾತ್ಮಕ, ಅಧ್ಯಾತ್ಮಿಕ, ಬೌದ್ಧಿಕವಾಗಿ ಪತಿ-ಪತ್ನಿ ಇಬ್ಬರೂ ಒಂದಾಗಬೇಕು. ಅದರರ್ಥ ದಂಪತಿ ಈ ವಿಚಾರಗಳನ್ನು ಹಂಚಿಕೊಂಡು, ಅರಿತುಕೊಂಡು, ತಮ್ಮ ಜ್ಞಾನಭಂಡಾರವನ್ನು ಹಿಗ್ಗಿಸಿ, ಅರ್ಥೈಸಿಕೊಂಡು ಮುನ್ನಡೆಯಬೇಕೆಂಬುದಾಗಿದೆ, ಆಗಲೇ ಇಚ್ಛೆಯನರಿತ ಸತಿ ಜತೆಗಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನುವ ನುಡಿ ಸತ್ಯವಾಗುವುದು.

ಯಾರೂ ಪರಿಪೂರ್ಣರಲ್ಲ. ಒಳ್ಳೆಯತನದ ಜತೆಗೆ ದ್ವೇಷ, ಅಸೂಯೆ, ಸಿಟ್ಟು, ಸಂಶಯವನ್ನು ಪ್ರತಿಯೊಬ್ಬರೂ ಹೊಂದಿರುತ್ತಾರೆ. ಅರಿಷಡ್ವರ್ಗಗಳನ್ನು ಜಯಿಸುವುದು ಸಾಮಾನ್ಯನಿಂದ ಅಸಾಧ್ಯ. ಎಷ್ಟೇ ಅನುರೂಪ ಜೋಡಿಯಾಗಿದ್ದರೂ, ಅಲ್ಲಿ ಸಿಟ್ಟು, ಸೆಡವು, ಸಂಶಯಗಳು ಆಗಾಗ ಹೊರಬರುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ತನ್ನ ಸಂಗಾತಿಯ ಬಗ್ಗೆ ನಂಬಿಕೆ, ಪರಿಸ್ಥಿತಿಯನ್ನು ನಿಭಾಯಿಸುವ ಚಾಕಚಕ್ಯತೆ ಅತಿಮುಖ್ಯ. ಎಷ್ಟೇ ಸಂಶಯವಿದ್ದರೂ ಅದನ್ನು ಆಗಿಂದಾಗೇ ಪರಿಹರಿಸಿದರೆ, ಮುಂದಕ್ಕೆ ಪರಿತಪಿಸುವ ಪರಿಸ್ಥಿತಿ ಎದುರಾಗಲಾರದು.ನಿಷ್ಟೆ, ಅರ್ಥಮಾಡಿಕೊಳ್ಳುವ ಮನೋಭಾವ, ಒಮ್ಮತದ ನಿರ್ಧಾರ, ಸಹಕಾರ, ಒತ್ತಾಸೆಗಳೆಲ್ಲಾ ಮದುವೆಯ ಬಾಳಿಕೆಯನ್ನು ಹೆಚ್ಚಿಸುವಂತದ್ದು.

ಸ್ವರ್ಗ ನರಕದ ವ್ಯತ್ಯಾಸ
ನಮ್ಮ ಬದುಕಿನಲ್ಲೇ ಸ್ವರ್ಗನರಕ ಎರಡೂ ಅಡಗಿದೆ. ಬೇರೆಲ್ಲೂ ಅದನ್ನು ಹುಡುಕಿಕೊಂಡು ಬದುಕು ಸ್ವರ್ಗ ಅಗಬೇಕೆಂದಿದ್ದರೆ ಹೀಗೆ ಮಾಡಿ..

ರಾಜಿಯಾಗುವುದು: ದಾಂಪತ್ಯವೆಂದರೆ ಸೋತು ಗೆಲ್ಲುವುದು ಎಂಬ ಮಾತಿದೆ. ಎಲ್ಲೋ ಹುಟ್ಟಿ, ಬೆಳೆದ ಎರಡೂ ಜೀವಗಳು ಮದುವೆಯೆಂಬ ಬಂಧನದಲ್ಲಿ ಒಂದಾಗಿ ಬಿಡುತ್ತಾರೆ. ಹಾಗಾಗಿ ಇಬ್ಬರ ಮನೋಭಾವದಲ್ಲೂ ಭಿನ್ನತೆಯಿರುವುದು ಸಾಮಾನ್ಯ. ಇದರಿಂದಾಗಿಯೇ ಆಗಾಗ್ಗೆ ಜಗಳ, ಕೋಪತಾಪಗಳು ಕಾಡುತ್ತಿರುತ್ತವೆ. ಅವಳೇ ಶುರುಮಾಡಿದ್ದು, ನನ್ನ ತಪ್ಪೇನಿಲ್ಲ, ಅವಳೇ ಸ್ಸಾರಿ ಕೇಳಲಿ ಎಂದು ಗಂಡನಾದವನು, ನಾನು ಏನೇ ಮಾಡಿದರೂ ತಪ್ಪು ಕಂಡು ಹಿಡಿಯುತ್ತಾರೆ, ಕಾಳು ಕೆರೆದು ಜಗಳಕ್ಕೆ ಬರುತ್ತಾರೆ ಹೆಂಡತಿಯೋ ಪಟ್ಟು ಹಿಡಿದು ಕುಳಿತಿದ್ದರೆ, ಸಮಸ್ಯೆ ಪರಿಹಾರವಾಗದು. ಗಂಡ ಹೆಂಡಿರ ಜಗಳದಲ್ಲಿ ಕೊನೆಗೆ ಬಡವಾಗುವುದು ಮಕ್ಕಳೇ. ಹೀಗಾಗಿ ನಾನೇ ಮೊದಲು ಕ್ಷಮೆ ಕೇಳಿ ಎಲ್ಲದಕ್ಕೂ ಮುಕ್ತಿ ಹಾಡುತ್ತೇನೆ ಎಂದು ಮುಂದಾಗಿ, ಒಂದು ಕ್ಷಣ ನಾನು ಸೋತೆ ಅಂತನ್ನಿಸಿದರೂ, ಸಂಗಾತಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುವುದು. ಇನ್ನೊಮ್ಮೆ ಅವರೇ ಕ್ಷಮೆ ಕೇಳಲು ಮುಂದಾಗುತ್ತಾರೆ.

ತ್ಯಾಗ: ಪ್ರೀತಿ ಹೆಚ್ಚಾಗಬೇಕಾದರೆ ಅಲ್ಲಿ ತ್ಯಾಗ ಇರಲೇ ಬೇಕು. ಹೆತ್ತವರೂ ತಮ್ಮ ಮಕ್ಕಳ ಸುಖಕ್ಕೋಸ್ಕರ ತಮ್ಮೆಲ್ಲಾ ಆಕಾಂಕ್ಷೆಗಳನ್ನು ತ್ಯಾಗ ಮಾಡಿರುತ್ತಾರೆ. ಹಾಗೆಯೇ ಪತಿ-ಪತ್ನಿ ಸಂಗಾತಿಗೋಸ್ಕರ ತಮ್ಮ ಸಣ್ಣ ಪುಟ್ಟ ಆಸೆ-ಕನಸನ್ನು ತ್ಯಾಗ ಮಾಡುವುದರಲ್ಲಿ ತಪ್ಪಿಲ್ಲ. ತಾನು ಅಂದುಕೊಂಡಂತೆಯೇ ಆಗಬೇಕು, ಇತರರಿಗೆ ಏನಾದರೂ ಪರ್ವಾಗಿಲ್ಲ.. ಅಂದುಕೊಂಡು ಸ್ವಾರ್ಥಮೆರೆದರೆ ಮುಂದೆ ಪರಿತಪಿಸಬೇಕಾದಿತು.

ಉತ್ತೇಜನ: ಪರಸ್ಪರರ ಕೆಲಸಕಾರ್ಯಕ್ಕೆ ಉತ್ತೇಜಿಸಿ, ಅವರೆಲ್ಲಾ ಕಷ್ಟ-ಸುಖಗಳಲ್ಲಿ ಸಾಥ್ ನೀಡುತ್ತಾ, ಇನ್ನಷ್ಟು ಸಾಧಿಸಲು ಸ್ಫೂರ್ತಿ-ಹುಮ್ಮಸ್ಸನ್ನು ತುಂಬಿದಾಗಲೇ ದಾಂಪತ್ಯಕ್ಕೊಂದು ಅರ್ಥ. ಯಾರು ಏನೇ ಅಂದರೂ ಸಂಗಾತಿ ತನ್ನೊಂದಿಗಿದ್ದಾರೆ ಅನ್ನುವ ನಂಬಿಕೆ ಏನನ್ನಾದರೂ ತಾನು ಗೆಲ್ಲಬಲ್ಲೆ ಅನ್ನುವ ಹುರುಪನ್ನು

ಕಾಯಾ, ವಾಚಾ, ಮನಸಾ ಒಬ್ಬರನ್ನೊಬ್ಬರು ಅರಿತು, ಜತೆಯಾಗಿದ್ದು, ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾಗ ಸ್ವರ್ಗದಲ್ಲೋ, ಅಥವಾ ನರಕದಲ್ಲೋ ಆದ ವಿವಾಹ ಯಶಸ್ವಿಯಾಗುವುದು. ಮದುವೆ ಎಲ್ಲಾದರೂ ನಿರ್ವಹಣೆ ನಮ್ಮ ಕೈಯಲ್ಲಿದೆ ಅಷ್ಟೇ.

Tags

Related Articles

Leave a Reply

Your email address will not be published. Required fields are marked *

Language
Close