About Us Advertise with us Be a Reporter E-Paper

ವಿವಾಹ್

ಮದುವೆಯಾದ ಹೊಸತರಲ್ಲಿ ಎಲ್ಲ ಗಂಡಸರೂ ಹೀಗೆ ಅನ್ನಿಸುತೆ

- ಜಮುನಾ ರಾಣಿ ಎಚ್. ಎಸ್

ಮೊನ್ನೆ ನನಗೊಂದು ಕನಸು ಬಿದ್ದಿತ್ತು ಅದನ್ನು ಹೇಳಲು ಅದೆಷ್ಟು ಬಾರಿ ನಿನ್ನ ಮುಂದೆ ಬಂದು ನಿಂತೆನೋ ಗೊತ್ತಿಲ್ಲ. ನೀನು ಮಾತ್ರ ಆಫೀಸಿನ ಪೋನ್ ಗಳಲ್ಲೇ ಬ್ಯುಸಿ ಮನೆಯಲ್ಲಿದ್ದಾಗಲೂ. ಮಾಡಿದರೆ ಅದೇ ಮೆಸೇಜು ಐ ಯಾಮ್ ಇನ್ ಮೀಟಿಂಗ್, ಕಾಲ್ ಯೂ ಲೇಟರ್. ಆದರೆ ನೀನು ಫೋನ್ ಮಾಡಿದಾಗಲೂ ಕೇಳುವಷ್ಟು ಟೈಮ್ ಇಲ್ಲವಲ್ಲಾ ನಿನ್ನ ಹತ್ತಿರ ನನ್ನ ದೊರೆಯೇ

ಹಲೋ ಜೀವದ ಗೆಳೆಯ…
ಹೇಗಿದ್ದೀಯಾ ? ಓ.. ಆಶ್ಚರ್ಯನಾ ಬೆಳಗ್ಗೆಯಿನ್ನಾ ಬೈ.. ಹೇಳಿ ಆಫೀಸಿಗೆ ಬಂದೆ, ಆಗಲೇ ಮೇಲ್ ಮೂಲಕ ನನ್ನ ಮುಂದೆ ಕುಳಿತಿದ್ದಾಳೆ ಎಂದು. ಇವತ್ತೇನು ಸ್ಪೆಷಲ್ಲು ? ಎಂದೂ ಇಲ್ಲದ್ದು ಅಂತ, ಅಥವಾ ಉಫ್ ಇವಳಿಂದಲಾ ಓದಿದರಾಯಿತು ಅಂತ ಸುಮ್ಮನಾದೆಯಾ ? ಇರಲಿ ಈ ಮೇಲ್ ನಲ್ಲಿ ನಿನ್ನ ಮುಖದ ಭಾವನೆಗಳು ನನಗೆ ಕಾಣುವುದೇ ಇಲ್ಲ. ಒಂದೊಂದು ಸಾರಿ ಇದೇ ಸರಿ ನಿನ್ನೊಂದಿಗೆ ಮಾತನಾಡಲು ಎನ್ನಿಸಿಬಿಡುತ್ತದೆ. ಮನೆಯಲ್ಲಿ ನೀನು ಮಾತನಾಡಲು ಸಿಗುವುದಿಲ್ಲವಲ್ಲ ಅದಕ್ಕೆ. ಅದಿರಲಿ ಹೇಗಿದೆ ನಿಮ್ಮ ಆಫೀಸು, ಅಲ್ಲಿನ ವಾತಾವರಣ, ಮೂರೊತ್ತೂ ಒಂದೇ ತೆರನಾದ ಬೆಳಕನ್ನು ಚೆಲ್ಲುವ ಅಲ್ಲಿನ ಲೈಟ್‌ಗಳು, ಆ ನಿನ್ನ ಹವಾನಿಯಂತ್ರಿತ ಕ್ಯಾಬಿನ್, ಮಂಡಿವರೆಗೆ ಸ್ಕರ್ಟ್ ಹಾಕಿಕೊಂಡು ವೈಯಾರದಿಂದ ಮಾತನಾಡುವ ಆ ಸಹೋದ್ಯೋಗಿಗಳು, ಮೂರು ದಿನಕ್ಕೊಮ್ಮೆ ಎಂದು ಬಂದು ಕಾಡುವ ಫಾರಿನ್ ಕ್ಲೈಂಟ್ಸ್ ಹಾಗೆ ಮೂರೊತ್ತೂ ನಿನ್ನ ಜೊತೆಯೇ ಇರುವ ಲ್ಯಾಪ್ಟಾಪ್, ಕೊನೆದಾಗಿ ಪ್ರತಿಕ್ಷಣವೂ ನಿನ್ನ ಸಂಗಾತಿ ಎಂದು ನನ್ನ ಹೊಟ್ಟೆ ಉರಿಸುವ ಮೊಬೈಲ್…?

ಅಬ್ಬಾ, ನಿನ್ನನ್ನು ನನ್ನಿಂದ ದೂರವಿರುವಂತೆ ಮಾಡಲು ಅವೆಷ್ಟು ವಸ್ತುಗಳಿವೆ ಅಲ್ಲವಾ ? ಆದರೆ ಹೀಗೆ ಯೋಚಿಸುವುದು ನಾನೊಬ್ಬಳೇ. ನಿನಗೆ ಇದ್ಯಾವುದರ ಪರಿವೆಯೂ ಇಲ್ಲ. ನನ್ನಿಂದ ದಿನೇ ದಿನೇ ದೂರವಾಗುತ್ತಿದ್ದೇನೆಂಬ ಅರಿವೂ ಇಲ್ಲ. ನಿನ್ನ ಪ್ರಕಾರ ನನಗೊಬ್ಬಳಿಗೇ ಕೆಟ್ಟ ಯೋಚನೆಗಳು ಬರುವುದು ಅಲ್ಲವೇ ? ಆದರೆ ಇದರೊಳಗಿನ ನನ್ನ ಪ್ರೀತಿಯೇಕೆ ನಿನಗೆ ಅರ್ಥವಾಗುವುದಿಲ್ಲ.

ನನ್ನೆದೆಯಲಿ ಅಂದಿಗೂ, ಇಂದಿಗೂ, ಎಂದೆಂದಿಗೂ ನಿನ್ನ ಮೇಲಿನ ಪ್ರೀತಿ ಕಿಂಚಿತ್ತೂ ಕಮ್ಮಿಯಾಗದು. ಅದು ಮನಸ್ಸಿನಲ್ಲಿ ಮಾತ್ರವಲ್ಲ ನನ್ನೆಲ್ಲಾ ಚಟುವಟಿಕೆಗಳಲ್ಲೂ ವ್ಯಕ್ತವಾಗುವುದು. ಈ ಕಾಲಕ್ಕೆ ಇದೆಲ್ಲಾ ಕೇವಲ ತೋರಿಕೆ ಎನ್ನುವ ನಾಮವ ನೀಡಿದರೂ ಉಹುಂ, ಬದಲಾಗದು ನನ್ನ ಪ್ರೀತಿ. ಇದೇನಿದು ಒಂದು ಘಂಟೆಯ ಹಿಂದೆ ಹಣೆಗೆ ಹೂಮುತ್ತನಿಟ್ಟು ಬೀಳ್ಕೊಟ್ಟಿದ್ದವಳು, ಅರ್ಧಗಂಟೆಯ ಹಿಂದೆ ಟ್ರಾಫಿಕ್ಕಿನಲ್ಲಿದ್ದಾಗ ನಾಲ್ಕು ಹುಷಾರು ಅಂತ ಫೋನ್ನಲ್ಲಿ ಪಿಸುಗುಟ್ಟಿದವಳು, ಆಫೀಸ್ ತಲುಪಿದ ಕೂಡಲೇ ಮೇಲ್ ಬೇರೆ ಕಳಿಸಿದ್ದಾಳೆ ಅಂತ ಆಶ್ಚರ್ಯನಾ…? ಹೌದು ನಾನು ಹೀಗೆ, ಮದುವೆಯೆಂಬ ನಮ್ಮನ್ನು ಸಂಸಾರವೆಂಬ ಜೈಲಿನಲ್ಲಿ ಕೂಡಿ ಹಾಕಿದ್ದೇ ಪ್ರೇಮಿಸಲೆಂದು ಅದನ್ನು ಅಳೆದು ತೂಗಿ ವ್ಯಕ್ತ ಪಡಿಸುವ ಜರೂರೇನು?

ಮೊನ್ನೆ ನನಗೊಂದು ಕನಸು ಬಿದ್ದಿತ್ತು ಅದನ್ನು ಹೇಳಲು ಅದೆಷ್ಟು ಬಾರಿ ನಿನ್ನ ಮುಂದೆ ಬಂದು ನಿಂತೆನೋ ಗೊತ್ತಿಲ್ಲ. ನೀನು ಮಾತ್ರ ಆಫೀಸಿನ ಪೋನ್ ಗಳಲ್ಲೇ ಬ್ಯುಸಿ ಮನೆಯಲ್ಲಿದ್ದಾಗಲೂ. ಫೋನು ಅದೇ ಮೆಸೇಜು ಐ ಯಾಮ್ ಇನ್ ಮೀಟಿಂಗ್, ಕಾಲ್ ಯೂ ಲೇಟರ್. ಆದರೆ ನೀನು ಫೋನ್ ಮಾಡಿದಾಗಲೂ ಕೇಳುವಷ್ಟು ಟೈಮ್ ಇಲ್ಲವಲ್ಲಾ ನಿನ್ನ ಹತ್ತಿರ ನನ್ನ ದೊರೆಯೇ… ಅದಕ್ಕೇ ಮನದೊಳಗಿನ ಮಾತುಗಳನ್ನೆಲ್ಲಾ ಸುರಿದು ಅಕ್ಷರಗಳನ್ನಾಗಿಸಿದ್ದೇನೆ. ಇಲ್ಲಿ ಯಾದರೂ ಸ್ವಲ್ಪ ಮನಸ್ಸಿಟ್ಟು ನೀನು ಕೇಳುವೆ(ಓದುವೆ) ಎನ್ನುವ ಇಂಗಿತ ನನ್ನದು. ಕೇಳು ನನ್ನ ಕಪ್ಪೆ ಚಿಪ್ಪೇ, ನಿನ್ನ ಕೆಲಸದ ಮಧ್ಯೆ ಕ್ಷಣಕ್ಕಾದರೂ ನಾನು ನೆನಪಾಗುತ್ತೇನೋ ಇಲ್ಲವೋ ಗೊತ್ತಿಲ್ಲ… ಆದರೆ ನನ್ನ ಪ್ರತಿಕ್ಷಣವೂ ಇರುವಿಕೆ, ನಿನ್ನ ಮೌನ, ನಮ್ಮಿಬ್ಬರ ಹತ್ತು ವರ್ಷ ಪ್ರೀತಿ ಸುತ್ತಲೂ ಸುತ್ತುತ್ತಿರುತ್ತದೆ.

ಅಯ್ಯೋ, ಮರೆತೇ ಬಿಟ್ಟೆ ಕೇಳು ಆ ನನ್ನ ಕನಸಿನ ಬಗ್ಗೆ. ಒಂದು ಪುಟ್ಟ ಹಳ್ಳಿಯಲ್ಲಿ ನಾವಿದ್ದೆವಂತೆ. ಬಹುಶಃ ಸ್ವಾಂತಂತ್ರ್ಯ ಸಂಗ್ರಾಮಕೂ ಹಿಂದೆ ಅನ್ನಿಸುತ್ತದೆ. ಅಷ್ಟು ಮಸುಕು ಮಸುಕು ಆ ಕನಸಿನ ಚಿತ್ರಗಳು. ನಮ್ಮೂರಿನ ಇಳಕಲ್ ಸೀರೆಯ ಕಚ್ಚೆಯನ್ನು ಉಟ್ಟುಕೊಂಡು, ಕಾಸಗಲ ಬೊಟ್ಟು, ಕೂದಲನೆಲ್ಲಾ ಬಿಗಿದು ಕಟ್ಟಿದ ತುರುಬು ಅದಕ್ಕೆ ಕನಕಾಂಬರ ಹೂವು, ಮುತ್ತಿನ ಮೂಗುತಿ, ಬೆಂಡೋಲೆ, ಕಡಗ, ಕೈತುಂಬ ಹಸಿರು ಬಳೆ. ಅದೇನು ವೈಯ್ಯಾರದಿಂದ ಕಾಣುತಿದ್ದೆ ನಾನು ಗೊತ್ತಾ? ಅಂಗೈಯಷ್ಟು ಕನ್ನಡಿಯಲ್ಲಿ ನೋಡಿಕೊಂಡು ಕಂಡೂ ಕಾಣದಂತೆ ನಾಚಿ ನೀರಾಗಿದ್ದೆ ನಿನ್ನ ಕಾಯುತಾ. ಸೆಗಣಿಯಲ್ಲಿ ಸಾರಿಸಿದ ಒಲೆ, ಅದರ ಮೇಲೆ ಮಣ್ಣಿನ ಮಡಿಕೆ, ಎಷ್ಟು ಊದಿದರೂ ಹೊತ್ತಿಕೊಳ್ಳಲು ಕಷ್ಟ ಪಡುತಿರುವ ಕಡ್ಡಿಪುಳ್ಳೆಗಳು, ಹೊಗೆಯಿಂದ ಕಣ್ಣುಗಳು ಕೆಂಪಾಗಿದ್ದರೂ ಸಿಡುಕದ ಮನ, ಜೋಪಡಿ ಮನೆ, ಅದರ ಮುಂದೊಂದು ಹಗ್ಗದ ಮಂಚ. ಆಗತಾನೆ ನೇಗಿಲನೊತ್ತು ಬಂದ ನೀನು ಅಮ್ಮೀ ಒಸಿ ನೀರು ಬಾ ಎಂದಾಗ ಓಡೋಡಿ ಬಂದ ನಾನು. ನನ್ನ ನೋಡಿದ ಕೂಡಲೆ ನಿನ್ನದೊಂದು ಓರೆನೋಟ ಅದಕ್ಕೆ ಪ್ರತಿಯಾಗಿ ನನ್ನ ಮುಗುಳುನಗೆ. ಆಗ ನನ್ನೆದೆಯಲಿ ಮಿಡಿಯುತಿರುವ ಭಾಷೆಗೆ ಪದಗಳೇ ಸಾಲದಿತ್ತು. ಗೊತ್ತಾ ?

ಕಟ್ಟಿಗೆ ಒಲೆ ಮುಂದೆ ಗಂಗಳದಲ್ಲಿ ಮುದ್ದೆ, ಸೊಪ್ಪೆಸರ ನಾನು ಬಡಿಸುತ್ತಾ ಕುಂತಾಗ ಚಪ್ಪರಿಸಿಕೊಂಡು ಆಹಾ, ಓಹೋ.. ಎಂದೆನ್ನುತಾ ನೀನು ಉಣ್ಣುವಾಗ ಅದೆಂತಹ ಆನಂದ ಗೊತ್ತಾ ? ಮಧ್ಯೆ ಹೇಳೆ ಏನ್ಮಾಡ್ದೆ ಬೆಳಗಿಂದಾ ? ಎಂದು ಕೇಳಿದಾಗ ನನ್ನದರ ಊರಿನದೆಲ್ಲಾ ಹೇಳುವಾಗ ನೀನು ಹೂಂ.. ಹೂಂ.. ಅನ್ನುತ್ತಲಿದ್ದೆ. ಊಟ ಮುಗಿದ ಮೇಲೆ ಇರುವುದೊಂದು ಹಗ್ಗದ ಮಂಚದ ಮೇಲೆ ಕೌದಿಯ ಹೊದ್ದು ಆಕಾಶದ ನಕ್ಷತ್ರಗಳ ಜೊತೆಗೆ ಮಾತು ಮೌನದ ಬಿಸಿಯಪ್ಪುಗೆ ಪದಗಳಿಗೂ ನಿಲುಕವು ಕಣೋ…

ಅಷ್ಟು ಸುಂದರ ಕನಸು ನನಸಾಗಬೇಕು. ನನ್ನೊಳಗಿನ ಭೋರ್ಗರೆಯುವ ಭಾವನೆಗಳಿಗೆ ನೀನು ಅಣೆಕಟ್ಟಾಗಬೇಕು. ನಾನು ದಿನವೂ ತೆರೆದಿಡುವ ನನ್ನೊಳಗಿನ ಎಫ್.ಎಂ. ರೇಡಿಯೋದ ಕೇಳುಗ ನೀನಾಗಬೇಕು. ಬದುಕಿನ ಪಯಣದಲಿ ದಿನವೂ ನಿನಗೆ ನಾನು ಗೊತ್ತಿರಬೇಕು, ನನಗೆ ನೀನೂ ಇದಿಷ್ಟೇ ನನ್ನ ಬೇಡಿಕೆ. ಆದರೆ ಈಗಿನ ಯಾಂತ್ರಿಕ ದಿನಗಳಲಿ ಅದು ಸಾಧ್ಯವಾಗ್ತಾ ಇಲ್ಲ. ನಿನಗೊತ್ತಾ ನಮ್ಮನೆ ಅಂಗಳದಲ್ಲಿ ಹೋದ ಮಳೆಗಾಲಕ್ಕೆ ನಾನು ಹಾಕಿದ್ದ ಕೆಂಪು ದಾಸವಾಳದ ಗಿಡ ಮೊಗ್ಗುಗಳ ಬಿಟ್ಟಿದೆ. ಎರಡು ವರ್ಷದ ಹಿಂದೆ ನೆಟ್ಟಿದ್ದ ಪರಂಗಿ ಗಿಡ ಹಣ್ಣು ಬಿಟ್ಟಿದ್ದು ಅದನ್ನು ಪಕ್ಕದ ಮನೆಯ ಆಂಟಿ ಕಾಣದೆ ಕಿತ್ತುಕೊಂಡು ಹೋದದ್ದು ತಿಳಿದದ್ದು ಎದುರು ಮನೆ ಪುಟ್ಟಿ ಹೇಳಿದಾಗಲೇ, ನಾನು ಚಿನ್ನುವನ್ನು ಒಡಲಲ್ಲಿ ಹೊತ್ತಿದ್ದಾಗ ಆ ಆಂಟಿ ಅದೆಷ್ಟು ಮಾಡಿದ್ದರಲ್ಲ ಅವರ ಹತ್ತಿರ ಪರಂಗಿ ಹಣ್ಣಿನ ಬಗ್ಗೆ ಕೇಳಿ ಅವರನ್ನೇಕೆ ಸಣ್ಣವರನ್ನಾಗಿ ಮಾಡಲಿ ಅಂತ ನಾನೇ ಸುಮ್ಮನಾದೆ.

ಈಗೀಗ ಹಾಲು ತರಲು ಹೋದಾಗ ಕೊನೆ ಮನೆಯ ನಾಯಿ ಚಬ್ಬಿ ಬೊಗಳುವುದ ನಿಲ್ಲಿಸಿ ನನ್ನನ್ನೂ ತನ್ನ ಸ್ನೇಹಿತಳನ್ನಾಗಿ ಸ್ವೀಕರಿಸಿದೆ ಅನ್ನಿಸುತ್ತಿದೆ. ಅದೆಷ್ಟು ಖುಷಿಯಾಗುತ್ತದೆ ಗೊತ್ತಾ ? ನನ್ನ ತಮ್ಮ ಸಾಕಿದ್ದ ಬೀದಿ ನಾಯಿ ಟುಮ್ಮಿಯೇ ನೆನಪಿಗೆ ಬರುತ್ತದೆ. ನಾನು ಏನೇನೋ ಮಾತನಾಡಬೇಕು. ನನ್ನೊಳಗಿನ ಎಲ್ಲವನ್ನೂ ತೆರೆದಿಡಬೇಕು. ನಾನು ಮಾಡುವ ಪ್ರತಿ ಭಾವನೆಗಳನೂ ನಿನಗೆ ಒಪ್ಪಿಸಬೇಕು. ನಾನೂ ನೀನೂ ಎನ್ನುವ ಎರಡು ದೇಹಗಳ ಯೋಚನೆ, ಯೋಜನೆಗಳ ಒಂದೇ ಮಾಡಿ, ನೋಡುವುದು ನಾಲ್ಕು ಕಣ್ಣುಗಳಾದರೂ ಒಂದೇ ನೋಟವಾಗಿಸಬೇಕು. ನಿನ್ನೆದೆಯ ಮೇಲೆ ನನ್ನ ಮೌನಗಳ ಮಾತನು, ಮಾತಿನ ಮೌನವನು ಬಸಿಯಬೇಕು. ನಿನ್ನ ತೋಳ್ತೆಕ್ಕೆಯಲಿ ಸದಾ ಬೆಚ್ಚಗೆ ಬಚ್ಚಿಟ್ಟುಕೊಳ್ಳಬೇಕು. ಇದೇನಪ್ಪಾ ಮನೆಯಲ್ಲಿ ಒಂದು ನಿಮಿಷವೂ ಪುರುಸೊತ್ತಿಲ್ಲದೆ ಗರಗಸದ ಹಾಗೆ ಕುಯ್ಯುವವಳು, ಆಫೀಸಿಗೆ ಹೊರಟರೂ ಪೋನ್ ಮಾಡಿ ಕಿವಿಯಲ್ಲಿ ರಕ್ತ ಬರುವಂತೆ ಬ್ಲೇಡ್ ಹಾಕುವವಳು, ಇವತ್ತೇಕೆ ಅಕ್ಷರಗಳಲ್ಲಿಯೂ ಪ್ರತಾಪ ತೋರಿಸುತ್ತಿದ್ದಾಳೆ ಅಂತ ಹುಸಿಕೋಪಗೊಂಡಿದ್ದೀಯಾ ಅಥವಾ ಬಿಡದೆ ಕಾಡುವ ಗೆಳತಿ ಜೊತೆಯಾದುದಕ್ಕೆ ಸಂತೋಷ ಪಡ್ತಿದ್ದೀಯಾ….?

Tags

Related Articles

Leave a Reply

Your email address will not be published. Required fields are marked *

Language
Close