About Us Advertise with us Be a Reporter E-Paper

ರಾಜ್ಯ

ನವೆಂಬರ್‌ ಒನ್‌ ಕನ್ನಡಿಗರಾಗುವುದರ ಬದಲು ನಂಬರ್‌ ಒನ್‌ ಕನ್ನಡಿಗರಾಗಿ

- ಚಿನ್ಮಯ್ ಭದ್ರಾವತಿ

ನವೆಂಬರ್‌ ಹತ್ತಿರ ಬಂದ ಹಾಗೆ ನಮಗೆ ಕನ್ನಡ ನೆನಪಾಗುತ್ತದೆ, ವರ್ಷವಿಡೀ ಇಲ್ಲದ ಅಭಿಮಾನ ನವೆಂಬರ್ 1ರಂದು ಉಕ್ಕಿ ಹರಿಯುತ್ತದೆ, ನವೆಂಬರ್ ತಿಂಗಳೆಲ್ಲ ಕನ್ನಡ ರಾಜ್ಯೋತ್ಸವದ ಸಂಭ್ರಮ, ಒಂದಿಷ್ಟು ಕನ್ನಡ ಪರ ಸಂಘಟನೆಗಳು ವರ್ಣರಂಜಿತ ಕಾರ್ಯಕ್ರಮ ಮಾಡಿ, ಚಿತ್ರಗೀತೆಗಳನ್ನ ಹಾಕಿ, ತಾಯಿ ಭುವನೇಶ್ವರಿಗೆ ಜೈಕಾರ ಹಾಕಿ , ಅಂತ್ಯಗೊಳಿಸಿಬಿಡುತ್ತವೆ, ಒಂದಿಷ್ಟ ಕಾಲೇಜುಗಳು ಯಾರೋ ನಟರನ್ನ ಕರೆಸಿ ಸಿನಿಮಾ ಡೈಲಾಗ್ ಹೊಡಿಸಿ ಮುಗಿಸಿಬಿಡುತ್ತವೆ, ಅಷ್ಟೇನಾ ರಾಜ್ಯೋತ್ಸವ. ಕರ್ನಾಟಕದ  ಸಂಸ್ಕೃತಿಯನ್ನ, ಪರಂಪರೆಯನ್ನ, ಸಾಮರ್ಥ್ಯವನ್ನ ನೆನಪು ಮಾಡಿಕೊಳ್ಳೊದು ಯಾರು..?

ಕನ್ನಡ ಭಾಷೆಯ ಉಳಿವಿನ ಬಗ್ಗೆ ಯೋಚಿಸಿದಾಗಲೆಲ್ಲ ಒಮ್ಮೆ ಪಠ್ಯದಲ್ಲಿ ಬಂದಂತಹ, ಕೃಷ್ಣ ಶಾಸ್ತ್ರೀಯವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತಹ ಸಾಲುಗಳು ನೆನಪಾಗುತ್ತವೆ. “ಏನಾದರೂ ಒಂದು ದುರದೃಷ್ಟದಿಂದ – ಅಂಥ ದುರದೃಷ್ಟ ಬರದಿರಲಿ – ನಮ್ಮ ದೇಶದಲ್ಲಿ ಬೌದ್ಧ ಧರ್ಮ ಖಿಲವಾಗಿ ನಷ್ಟವಾಗಿ ಹೋದಂತೆ ಸಂಸೃತ ಆಗಿ ಹೋಗುವುದಾದರೆ ,ಅದು ಹೊರ ದೇಶಗಳಲ್ಲಿ ಬದುಕಿರುತ್ತದೆ, ಬಾಳುತ್ತಿರುತ್ತದೆ. ಆದರೆ ಕನ್ನಡ? ಕನ್ನಡಿಗರೆ , ನಿಮ್ಮ ಕನ್ನಡವನ್ನು ಇಂಡಿಯಾ ದೇಶದ ದಕ್ಷಿಣ ಭಾಗದಲ್ಲಿ ಓಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೊ ನೋಡಲಾರಿರಿ. ನೀವು ಅದನ್ನು ಅಲಕ್ಷ್ಯ ಮಾಡಿದರೆ ಮಿಕ್ಕ ಯಾವ ದೇಶದ ಜನರು ಅದನ್ನು ಎತ್ತಿ ಹಿಡಿಯಲಾರರು .ಅದು ಹೊದರೆ ಹೊಗಲಿ ಎನ್ನುವ ಹಾಗಿದ್ದರೆ ಈ ಕಡೆ ಬಂಗಾಳಕೊಲ್ಲಿ ಇದೆ .ಆ ಕಡೆ ಅರಬ್ಬೀ ಸಮುದ್ರ ಇದೆ.ಗುಡಿಸಿ ಹಾಕಿಬಿಡಿ. ಇತರೆ ಭಾಷೆಗಳು ಒತ್ತಿಕೊಂಡು ಬರಲಿ ಅಕ್ರಮಿಸಿಕೊಳ್ಳಲಿ..!” ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಿಗೆ ಅತ್ಯಂತ ಬೇಸರ ಹಾಗೂ ಕೋಪದಿಂದ ಹೇಳಿದಂತಹ ಸಾಲುಗಳಿವು. ಕನ್ನಡ ಭಾಷೆಯ ಸ್ಥಿತಿಯನ್ನ ರಾಜ್ಯ ರಾಜಧಾನಿಯಲ್ಲಂತೂ ಹೇಳಲಾಗದು, ಹುಡುಕಿದರೂ ಸಿಗುವುದು ವಿರಳ. ಎರಡು ಸಾವಿರ ವರ್ಷಗಳ ಇತಿಹಾಸ ಪರಂಪರೆಯನ್ನು ಹೊಂದಿದಂತಹ ಭಾಷೆಯನ್ನ ನಾವೆ ಕಡೆಗಣಿಸಿದರೆ ಮತ್ತೆ ಯಾರು ಕಾಪಾಡುತ್ತಾರೆ‌. ಕನ್ನಡವನ್ನ ಪ್ರೀತಿಸಿ, ಉಳಿಸಿ, ಬೆಳೆಸಬೇಕಾದದ್ದು ನಮ್ಮದೇ ಕರ್ತವ್ಯವಲ್ಲವೆ. ಕನ್ನಡವನ್ನ ಪ್ರೀತಿಸಿಬೇಕು ಎಂದರೆ ಬೇರೆ ಭಾಷೆಯನ್ನ ದ್ವೇಶಿಸಬೇಕು ಎಂದಲ್ಲ.ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿದ್ದರೆ ಸಾಕು‌.

ನನಿತ್ಯ ಜೀವನದಲ್ಲಿ ನಾವೆಷ್ಟು ಕನ್ನಡ ಬಳಸುತ್ತೇವೆ. ಎಟಿಎಂಗೆ ಹೋದಾಗ ಅಲ್ಲಿ ಕನ್ನಡ ಆಯ್ಕೆ ಇದ್ದರೂ ನಾವು ಕನ್ನಡವನ್ನ ಆಯ್ಕೆ ಮಾಡುತ್ತೇವ..? ಮೊಬೈಲ್ ನಲ್ಲಿ ಆಪ್ ಗಳಲ್ಲಿ ನಾವು ಯಾವ ಭಾಷೆಯನ್ನು ಆಯ್ಕೆ ಮಾಡಿದ್ದೇವೆ..? ನಮ್ಮ ಮನೆಯ ನಾಮ ಫಲಕಗಳು ಯಾವ ಭಾಷೆಯಲ್ಲಿವೆ..? ಸಾರ್ವಜನಿಕ ಸ್ಥಳಗಳಲ್ಲಿನ ಸೂಚನಾ ಫಲಕಗಳು ಯಾವ ಭಾಷೆಯಲ್ಲಿವೆ..? ಗ್ರಾಹಕ ಸೇವಾ ಸಿಬ್ಬಂದಿಯೊಂದಿಗೆ ಮಾತನಾಡಲು ಯಾವ ಭಾಷೆ ಆಯ್ಕೆ ಮಾಡಿಕೊಳ್ಳುತ್ತೇವೆ..? ವಾಟ್ಸಾಪ್ ನಲ್ಲಿ ಲಭ್ಯವಿರುವಮತಹ ಕೇವಲ 11 ಭಾಷೆಗಳಲ್ಲಿ ಕನ್ನಡವೂ ಒಂದು, ಇಲ್ಲೆಲ್ಲ ಕನ್ನಡವನ್ನ ನಾವು ಬಳಸದೆ ಮತ್ಯಾರು ಬಳಸುತ್ತಾರೆ.

ಕನ್ನಡ ಎಷ್ಟೊಂದು ಸುಂದರ ಮತ್ತು ವೈಜ್ಞಾನಿಕ ಭಾಷೆ. ಇರುವ 59 ಅಕ್ಷರಗಳಲ್ಲಿ ಸ್ವರಗಳನ್ನು, ವ್ಯಂಜನಗಳನ್ನು, ಯೋಗವಾಹಗಳನ್ನು ಎಷ್ಟು ಚೆನ್ನಾಗಿ ಒಂದೆಡೆ ಜೋಡಿಸಿದ್ದಾರೆ. ಇಂಗ್ಲೀಷ್ ನಲ್ಲಿ ಎಲ್ಲಿದೆ ಇದೆಲ್ಲ. ಕಚಟತಪ ವರ್ಗದ ಕ ವರ್ಗವನ್ನು ಉಚ್ಚಾರ ಮಾಡಿ ನೋಡಿ ಕ ಖ ಗ ಘ ಙ ಎಲ್ಲವೂ ಗಂಟಲಿನಲ್ಲಿ ಹುಟ್ಟುತ್ತವೆ, ಚ ವರ್ಗದಲ್ಲಿನ ಚ ಛ ಜ ಝ ಞ ಎಲ್ಲವೂ ನಾಲಿಗೆ ಕೆಳಗೆ ಹುಟ್ಟುತ್ತವೆ,ತ ವರ್ಗದ ತ ಥ ದ ಧ ನ ಎಲ್ಲವೂ ನಾಲಿಗೆ ತುದ್ದಿಯಲ್ಲಿ ಹುಟ್ಟುತ್ತವೆ, ಪ ವರ್ಗದ ಪ ಫ ಬ ಭ ಮ ಎಲ್ಲವೂ ತುಟಿಯಲ್ಲಿ ಹುಟ್ಟುತ್ತವೆ, ಕ ವರ್ಗದಿಂದ ಪ ವರ್ಗದವರೆಗೆ ಗಂಟಲಿನಿಂದ ತುದಿಯವರೆಗೆ ಎಷ್ಟು ಚೆನ್ನಾಗಿ ಸಂಯೋಜನೆ ಇದೆ. ಅಮ್ಮ ಅನ್ನೊ ಶಬ್ದ ಹೊಟ್ಟೆಯಲ್ಲಿ ಹುಟ್ಟಿ ತುಟಿಯಲ್ಲಿ ಕೊನೆಗೊಳ್ಳುತ್ತದೆ, ಆದರೆ ಮಮ್ಮಿ ತುಟಿಯಲ್ಲೇ ಹುಟ್ಟಿ ತುಟಿಯಲ್ಲೇ ಸಾಯುತ್ತದೆ. ಮರಕ್ಕೆ ಪಾದಪ ಅನ್ನುತ್ತಾರೆ ಅಂದರೆ ಪಾದೈಹೀ ಪಿಬತೀಹಿ ಪಾದಪಃ ಅಂದರೆ ಯಾವುದು ಬೇರಿನಿಂದ ನೀರು ಕುಡಿಯುತ್ತದೋ ಅದು ಪಾದಪ, ಇಂಗ್ಲೀಷ್ ನಲ್ಲಿ ಮರಕ್ಕೆ ಟ್ರೀ ಏಕೆ ಎನ್ನುತ್ತಾರೆ ಎಂದರೆ ಉತ್ತರವಿಲ್ಲ. ಕನ್ನಡ ಎಷ್ಟೊಂದು ಸುಂದರ ಭಾಷೆಯಲ್ಲವೆ , ಅದನ್ನ ಉಳಿಸಿ ಬೆಳೆಸಬೆವುದು ನಮ್ಮ ಕರ್ತವ್ಯ, ಅದರತ್ತ ಚಿಂತನೆ ಮಾಡೋಣ.

Tags

Related Articles

Leave a Reply

Your email address will not be published. Required fields are marked *

Language
Close