About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

“ನಾನು ಕುಟುಂಬ ರಾಜಕಾರಣ ಮಾಡುತ್ತಿದ್ದೇನಾ? ನೀವೇ ಹೇಳಿ”: ಗಳಗಳನೆ ಅತ್ತುಬಿಟ್ಟ ಗೌಡರು

ತಾತನ ತ್ಯಾಗ ಸ್ಮರಿಸಿ ಕಣ್ಣೀರಾದ ಮೊಮ್ಮಗ ಪ್ರಜ್ವಲ್‌, ಮಕ್ಕಳಾದ ಬಾಲಕೃಷ್ಣ, ರೇವಣ್ಣ

ಮೊಮ್ಮಗನಿಗಾಗಿ ತಮ್ಮ ಸಂಸದೀಯ ಕ್ಷೇತ್ರ ಬಿಟ್ಟು ಕೊಟ್ಟು, ಮುಂದಿನ ಲೋಕಸಭಾ ಚುನಾವಣೆಯಲ್ಲಿ, ಹಾಸನ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಸ್ಪರ್ಧೆಯನ್ನು ಅಧಿಕೃತವಾಗಿ ಘೋಷಿಸಿದ ಮಾಜಿ ಪ್ರಧಾನಿ ದೇವೇಗೌಡ ಇದೇ ವೇಳೆ ಭಾವುಕರಾಗಿ ಗಳಗಳನೇ ಅತ್ತುಬಿಟ್ಟಿದ್ದಾರೆ.

ಈ ಸನ್ನಿವೇಶವನ್ನು ಕಂಡ ದೇವೇಗೌಡರ ಮೊಮ್ಮಗ, ಹಾಸನ ಸಂಸದೀಯ ಕ್ಷೇತ್ರದ ಆಕಾಂಕ್ಷಿ, ಪ್ರಜ್ವಲ್‌ ರೇವಣ್ಣ ಸಹ ಭಾವುಕರಾಗಿದ್ದಾರೆ. ಪುತ್ರ ರೇವಣ್ಣದ ಕ್ಷೇತ್ರವಾದ ಹೊಳೆನರಸೀಪುರ ತಾಲೂಕು ಮೂಡಲಹಿಪ್ಪೆ ಚನ್ನಕೇಶವ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ತೆರದ ವಾಹನದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಅಭ್ಯರ್ಥಿ ಪ್ರಜ್ವಲ್, ರೇವಣ್ಣ ದಂಪತಿ ಪ್ರಚಾರ ನಡೆಸಿದರು.

ಈ ವೇಳೆ, ಕಣ್ಣೀರ ಧಾರೆಯಾಗಿ ಮಾತನಾಡಿದ ದೇವೇಗೌಡರು, “ನಾನು ಕೇವಲ ನನ್ನ ಮಕ್ಕಳಿಗಾಗಿ ಹೋರಾಟ ಮಾಡುತ್ತೇನೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ನಾನು ಯಾರಿಗೆ ಮೋಸ ಮಾಡಿದ್ದೇನೆ ಹೇಳಿ? ನಾನು ಕುಟುಂಬ ರಾಜಕಾರಣ ಮಾಡುತ್ತಿದ್ದೇನಾ? ನೀವೇ ಹೇಳಿ. ಈ ಬಗ್ಗೆ ನಿಮ್ಮಿಂದಲೇ ತೀರ್ಮಾನ ಆಗಬೇಕು” ಎಂದು ಮತದಾರರನ್ನೇ ಪ್ರಶ್ನಿಸಿದ್ದಾರೆ.

ಪ್ರಜ್ವಲ್‌ಗೇನೂ ರಾಜಕೀಯಕ್ಕೆ ಬರಲು ಆಸೆಯಿರಲಿಲ್ಲವಾದರೂ, ಅಲ್ಲಿನ ಜನತೆ ವಿಪರೀತ ಒತ್ತಡ ಹಾಕಿದ ಕಾರಣ, ಅನಿವಾರ್ಯವಾಗಿ ತಮ್ಮ ಮೊಮ್ಮಗನನ್ನು ರಾಜಕೀಯಕ್ಕೆ ತರಬೇಕಾಯಿತು ಎಂದ ಗೌಡರು, “ನಿಮ್ಮ ಅಪೇಕ್ಷೆಯಂತೆ ನನ್ನ ಮೊಮ್ಮಗನನ್ನೇ ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದೇನೆ.ಈ ಬಗ್ಗೆ  ಹಲವು ಮುಖಂಡರ ಜೊತೆ ಈಗಾಗಲೇ ಮಾತಾಡಿ ತೀರ್ಮಾನ ಮಾಡಿದ್ದೇನೆ” ಎಂದಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ‍ದಲ್ಲಿ ಅಂಬರೀಷ್‌ ಪತ್ನಿ ಸುಮಲತಾ ಸ್ಫರ್ಧಿಸುವ ಕುರಿತಂತೆ ಹಗುರವಾಗಿ ಮಾತನಾಡಿ ಎಲ್ಲೆಡೆ ಟೀಕೆಗೆ ಈಡಾಗಿದ್ದ ಪುತ್ರ ರೇವಣ್ಣರನ್ನು ಸಮರ್ಥಿಸಿ ಮಾತನಾಡಿದ ದೇವೇಗೌಡ, “ರೇವಣ್ಣ ಸ್ವಲ್ಪ ಕೋಪಿಷ್ಟ, ಕೋಪ ಬಿಟ್ಟರೆ ಅವನಂಥ ನಾಯಕನಿಲ್ಲ” ಎಂದು ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಕೊಂಡಿದ್ದಾರೆ.

ತಮ್ಮ ಮೊಮ್ಮಗನ ಕುರಿತಂತೆ ಮಾತು ಮುಂದುವರೆಸಿ, “ಪ್ರಜ್ವಲ್ ಗೆ  ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡು ಅಂತಾ ಹೇಳಿದ್ದೆ, ಅವನು ಹೋಗಲಿಲ್ಲ. ರೇವಣ್ಣನ ಮತ್ತೊಬ್ಬ ಪುತ್ರ ಸೂರಜ್  ಒಳ್ಳೆಯ ವೈದ್ಯನಾದ. ಪ್ರಜ್ವಲ್ ಮತ್ತು ಸೂರಜ್ ಲವಕುಶರಿದ್ದಂತೆ. ನಿಮ್ಮೆಲ್ಲರ ಆಶೀರ್ವಾದ ಪ್ರಜ್ವಲ್ ಮತ್ತು ಸೂರಜ್ ಮೇಲೆ ಇರಲಿ. ಅಣ್ಣ-ತಮ್ಮ ಇಬ್ಬರೂ ಒಟ್ಟಿಗೆ ಹೋಗಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅವರಿಗೆ ಒಳಿತಾಗಲಿ” ಎಂದು ಹಾರೈಸಿದ್ದಾರೆ.

ಇದೇ ವೇಳೆ, ಮೊಮ್ಮಕ್ಕಳಿಗೆ ಟಿಕೆಟ್‌ ನೀಡುವ ವಿಚಾವಾಗಿ ಜೆಡಿಎಸ್‌ನಲ್ಲಿ ಆಂತರಿಕ ಭಿನ್ನಮತಗಳು ಕೇಳಿಬಂದ ವಿಚಾರವಾಗಿ ಮಾತನಾಡಿದ ಗೌಡರು, “ಪ್ರಜ್ವಲ್ ನಿಂತರೆ ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ಕೆಲವರು ಹೇಳುತ್ತಾರೆ.  ಆದರೆ, ನಾನು ನಿಮ್ಮ ಮಡಿಲಿಗೆ ಪ್ರಜ್ವಲ್​ನನ್ನು ಹಾಕಿದ್ದೇನೆ. ನಿಮ್ಮ ಅನುಮತಿ ಪಡೆದೆ ನಾನು ಪ್ರಜ್ವಲ್​ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇನೆ.  ನಿಮ್ಮ ಆಶೀರ್ವಾದ ಪ್ರಜ್ವಲ್​ ಮೇಲೆ ಇರಲಿ” ಎಂದು ಗದ್ಗದಿತರಾದರು.

ಈ ವೇಳೆ ಪ್ರಜ್ವಲ್​ ತಾಯಿ ಭವಾನಿ ಕಣ್ಣೀರ ಮೂಲಕ ಸಂತಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ತಮ್ಮ ಮತ್ತೊಬ್ಬ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಸ್ಫರ್ಧೆ ಕುರಿತಂತೆ ಸಾಕಷ್ಟು ವಿರೋಧ ವ್ಯಕ್ತವಾಗಿ, ಗೋಬ್ಯಾಕ್‌ ನಿಖಿಲ್‌ ಘೋಷಗಳು ಕೇಳಿ ಬರುತ್ತಿರುವುದು ತಮಗೆ ನೋವುಂಟು ಮಾಡಿದೆ ಎಂದ ಗೌಡರು, “ಮಂಡ್ಯದಲ್ಲಿ ಕೆಲವರು ನಿಖಿಲ್ ಗೋ ಬ್ಯಾಕ್ ಎನ್ನುತ್ತಿದ್ದಾರೆ. ಜಿಲ್ಲೆಯಲ್ಲಿ ಎಂಟು ಜನ ಶಾಸಕರು ಮತ್ತು ಸಂಸದರಿದ್ದಾರೆ. ಜಿಲ್ಲೆಯ ನಾಡಿ ಮಿಡಿತ ಅರಿತ ನಿಖಿಲ್‌ಗೆ ಈ ಬಾರಿ ಅಖಾಡಕ್ಕಿಳಿಸಬೇಕೆಂದು ಅಲ್ಲಿನ ಎಲ್ಲ ಜನಪ್ರತಿನಿಧಿಗಳು ತೀರ್ಮಾನಿಸಿದ್ದರು. ನಿಖಿಲ್​ ಗೋ ಬ್ಯಾಕ್​ ಎನ್ನುತ್ತಿರುವುದು ನನ್ನ ಮನಸಿಗೆ ನೋವಾಗಿದೆ. ನಾನೇ ಮಂಡ್ಯಕ್ಕೆ ಹೋಗುವೆ, ಗೋಬ್ಯಾಕ್​ ಕೂಗಲಿ” ಎಂದು ಗೌಡರು ಇದೇ ವೇಳೆ ಹೇಳಿದ್ದಾರೆ.

ಇನ್ನು, ತಮ್ಮ ಸ್ಪರ್ಧೆ ಕುರಿತಂತೆ ಮಾತನಾಡಿದ ಗೌಡರು, “ಮೈತ್ರಿ ಪಕ್ಷಕ್ಕೆ ತುಮಕೂರು ಕೇಳಿದರೆ ಮಂಡ್ಯ ಬಿಟ್ಟುಕೊಡಿ ಎಂದು ಕಾಂಗ್ರೆಸ್​ ನಾಯಕರು ಕೇಳುತ್ತಾರೆ. ಸೀಟು ಹಂಚಿಕೆ ಕುರಿತು ಚರ್ಚೆಗೆ ನಾಳೆ ಕುಮಾರಸ್ವಾಮಿ, ರಾಹುಲ್​ ಗಾಂಧಿ ಜೊತೆ ಮಾತನಾಡುತ್ತೇನೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಎಂಬ ಬಗ್ಗೆ ನಾನು ಇನ್ನು ತೀರ್ಮಾನ ಮಾಡಿಲ್ಲ” ಎಂದರು.

Tags

Related Articles

Leave a Reply

Your email address will not be published. Required fields are marked *

Language
Close