About Us Advertise with us Be a Reporter E-Paper

ಅಂಕಣಗಳು

ಅಮೇರಿಕಾದ ಬಾಲಕ ದೂರದ ಇಟಲಿ ದೇಶದಲ್ಲಿ ಹೀರೋ ಆದದ್ದು!

-ಎಸ್.ಷಡಕ್ಷರಿ

1994ರಲ್ಲಿ ಇಟಲಿಯಲ್ಲಿ ನಡೆದ ಒಂದು ಪ್ರಸಂಗ. ಅಮೆರಿಕದ ಏಳು ವರ್ಷ ವಯಸ್ಸಿನ ಬಾಲಕ ದೂರದ ಇಟಲಿ ದೇಶದಲ್ಲಿ ಗುಂಡೇಟಿಗೆ ಸಿಕ್ಕಿ ಪ್ರಾಣ ಕಳೆದುಕೊಂಡರೂ, ಇಟಲಿಯ ಜನ ಆತನನ್ನು ನೆನಪಿಸಿಕೊಳ್ಳುವಂತೆ ಮಾಡಿದ ಪ್ರಸಂಗ!

ಅಮೆರಿಕದ ಬರಹಗಾರ ರೇಗ್ ಗ್ರೀನ್ ಎಂಬುವವರು ತಮ್ಮ ಪುಟ್ಟ ಕುಟುಂಬದೊಂದಿಗೆ ಇಟಲಿ ದೇಶದ ಪ್ರವಾಸದಲ್ಲಿದ್ದರು. ಪಡೆದಿದ್ದ ಕಾರೊಂದನ್ನು ರೇಗ್ ಅವರೇ ಓಡಿಸುತ್ತಿದ್ದರು. ಪಕ್ಕದಲ್ಲಿ ಅವರ ಹೆಂಡತಿಯಿದ್ದರು. ಏಳು ವರ್ಷದ ಮಗ ನಿಕೋಲಾಸ್ ಹಿಂದಿನ ಸೀಟಿನಲ್ಲಿ ಮಲಗಿದ್ದ. ದಂಪತಿಗಳು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತ, ಪ್ರೀತಿಯ ಮಾತುಗಳನ್ನಾಡಿಕೊಳ್ಳುತ್ತ ‘ನಮ್ಮ ಸಂಸಾರ ಆನಂದಸಾಗರ’ ಎಂದುಕೊಳ್ಳುತ್ತ ಹೋಗುತ್ತಿದ್ದರು.

ಇದ್ದಕ್ಕಿದ್ದಂತೆ ಎಲ್ಲಿಂದಲೋ ಕಾರಿಗೆ ಬಂದೂಕಿನ ಗುಂಡುಗಳು ಬಂದಪ್ಪಳಿಸಿದವು. ಗುಂಡಿನ ದಾಳಿಗೆ ಗಾಬರಿಯಾದ ಗ್ರೀನ್ ಕಾರನ್ನು ಇನ್ನೂ ವೇಗವಾಗಿ ಓಡಿಸಿಕೊಂಡು ಹೋದರು. ರಸ್ತೆಯಲ್ಲಿ ಪೊಲೀಸ್ ವ್ಯಾನ್ ಒಂದು ಕಂಡಾಗ, ತಮ್ಮ ಕಾರನ್ನು ಗುಂಡಿನ ದಾಳಿಯ ಬಗ್ಗೆ ದೂರಿದರು.

ಪೊಲೀಸಿನವರು ಹೆದ್ದಾರಿ ದರೋಡೆಕೋರರು ಗುಂಡು ಹಾರಿಸಿರಬಹುದು ಎನ್ನುತ್ತ ಕಾರನ್ನು ಪರೀಕ್ಷಿಸಿದಾಗ, ಹಿಂದಿನ ಸೀಟಿನಲ್ಲಿ ಮಲಗಿದ್ದ ಅವರ ಮಗ ನಿಶ್ಚಲನಾಗಿ ಬಿದ್ದಿರುವುದು ಕಂಡಿತು. ಮಗನಿಗೆ ಗುಂಡು ತಾಗಿತ್ತು. ರಕ್ತ ಸುರಿಯುತ್ತಿತ್ತು. ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ನಿಕೋಲಾಸ್ ಸಾವನ್ನಪ್ಪಿದ.

ಮಗನ ದಾರುಣ ಸಾವಿನಿಂದ ದಿಗ್ಭಾಂತರಾಗಿದ್ದ ಅವರು ಇಟಲಿಯನ್ನು ಶಪಿಸಲಿಲ್ಲ, ತಮ್ಮ ಅದೃಷ್ಟವನ್ನು ಶಪಿಸಲಿಲ್ಲ. ಅಲ್ಲಿದ್ದ ವೈದ್ಯರಿಗೆ ತಮ್ಮ ಏಳು ವರ್ಷದ ಮಗನ ಕಳೇಬರದ ದಾನ ಮಾಡಬಹುದೇ ಎಂದು ಕೇಳಿದರು. ವೈದ್ಯರುಗಳು ಆಗಬಹುದೆಂದು ಹೇಳಿ ಕಾರ್ಯೋನ್ಮುಖರಾದರು. ಸತ್ತ ದೇಹದಿಂದ ಹೃದಯವನ್ನು ತೆಗೆದು, ಸಾವಿನಂಚಿನಲ್ಲಿದ್ದ ಹೃದ್ರೋಗಿಯೊಬ್ಬರಿಗೆ ಅಳವಡಿಸಿದರು. ಪಿತ್ತಜನಕಾಂಗವನ್ನು ತೆಗೆದು ಸಕ್ಕರೆ ಕಾಯಿಲೆಯಿಂದಾಗಿ ಕೋಮಾದಲ್ಲಿದ್ದ ರೋಗಿಯೊಬ್ಬರಿಗೆ ಕಸಿ ಮಾಡಿದರು. ಕಣ್ಣುಗಳನ್ನು ತೆಗೆದು ಇಬ್ಬರಿಗೆ ನೇತ್ರದಾನ ಮಾಡಲಾಯಿತು. ಹೀಗೆ ಇಟಲಿಯಲ್ಲಿ ಗುಂಡೇಟಿಗೆ ತುತ್ತಾದ ಅಮೆರಿಕದ ಜೀವದ ಏಳು ಅಂಗಗಳು ಏಳು ಮಂದಿ ಇಟಲಿಯನ್ನರಿಗೆ ಜೀವದಾನ ಮಾಡಿದವು. ಅದೂವರೆಗೆ ಅಮೆರಿಕದವರಿಗೂ ಪರಿಚಯವಿರದಿದ್ದ ನಿಕೋಲಾಸ್ ಇಟಲಿಯ ಹೀರೋ ಆಗಿಬಿಟ್ಟ. ವಿಶ್ವದಾದ್ಯಂತ ಸುದ್ದಿ ಪ್ರಸಾರವಾಯಿತು. ಲಕ್ಷಾಂತರ ಮಂದಿ ಕಣ್ಣೀರು ಸುರಿಸಿದರು. ಸಾವಿರಾರು ಮಂದಿ ತಮ್ಮ ಸಾವಿನ ನಂತರ ತಮ್ಮ ಅಂಗಾಂಗಗಳನ್ನು ದಾನ ನೀಡುವ ವಾಗ್ದಾನ ಪತ್ರಗಳನ್ನು ನೀಡಿದರು. ಇದು ಎಂತಹ ಸಂಚಲನವನ್ನು ಉಂಟುಮಾಡಿತೆಂದರೆ, ಇದಕ್ಕೆ ‘ನಿಕೋಲಾಸ್ ಎಫೆಕ್ಟ್’ ಎಂದು ಹೆಸರುವಾಸಿಯಾಯಿತು.

ಭಾರವಾದ ಹೃದಯದೊಂದಿಗೆ ಅಮೆರಿಕಕ್ಕೆ ಮರಳಿದ ರೇಗ್ ಗ್ರೀನ್ ದಂಪತಿಗಳು ತಮ್ಮ ಜೀವನವನ್ನೇ ಅಂಗಾಂಗ ದಾನ ಚಳವಳಿಗೆ ಮೀಸಲಿಟ್ಟರು. 1999ರಲ್ಲಿ ರೇಗ್ ಗ್ರೀನ್ ಅವರು ಮಗನ ದುರಂತವನ್ನು ಮತ್ತು ಅಂಗಾಂಗಗಳ ದಾನವನ್ನು ಬರೆದ ‘ನಿಕೋಲಾಸ್ ಎಫೆಕ್ಟ್’ ಪುಸ್ತಕ ಜನಪ್ರಿಯವಾಯಿತು. ಅಲ್ಲಿನ ದೂರದರ್ಶನದಲ್ಲಿ ಸೀರಿಯಲ್ಲಾಗಿ ಪ್ರದರ್ಶನವಾಯಿತು. 2006ರಲ್ಲಿ ಗ್ರೀನ್ ಅವರು ಬರೆದ ‘ದ ಗಿಫ್ಟ್ ದಟ್ ಹೀಲ್ಸ್’ ಪುಸ್ತಕದಲ್ಲಿ ಅಂಗಾಂಗಗಳನ್ನು ದಾನವಾಗಿ ನೀಡಿದ ನಲವತ್ತೆರಡು ಹೃದಯಸ್ಪರ್ಶಿ ಘಟನೆಗಳನ್ನು ವಿವರಿಸಿದ್ದಾರೆ.

ಈಗ ನಾವು ನಿಕೋಲಾಸ್‌ನ ಆತ್ಮಕ್ಕೆ ಶಾಂತಿ ಕೋರೋಣ. ನಾವು ನೂರು ವರ್ಷ ಬದುಕುವಂತಾಗಲು ಪ್ರಾರ್ಥಿಸೋಣ. ಅದರ ನಂತರ ನಾವು ಸತ್ತರೆ ನಮ್ಮ ಅಂಗಾಂಗಗಳು ಸುಟ್ಟು ಬೂದಿಯಾಗುವ ಬದಲು ಅಥವಾ ಗೆದ್ದಲು ಹಿಡಿಯುವ ಬದಲು ಜೀವದಾನ ಮಾಡಬಹುದೇನೋ ಯೋಚಿಸೋಣ. ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಇಂದೇ ಮಾಡಿಡೋಣ! ನಾವೂ ಹೀರೋಗಳಾಗಲು ಪ್ರಯತ್ನಿಸೋಣ!

Tags

Related Articles

Leave a Reply

Your email address will not be published. Required fields are marked *

Language
Close