About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮೋದಿಯನ್ನು ಸೋಲಿಸುವುದು ವಿಪಕ್ಷಗಳ ಹಗಲುಗನಸು: ಅಮಿತ್‌ ಶಾ

ದೆಹಲಿ: ಪ್ರಧಾನಿ ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್‌ ಮತ್ತು ಇತರ ಎಲ್ಲಾ ಪಕ್ಷಗಳು ಒಂದಾಗಿವೆ. ಇದು ಖಂಡಿತ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹೇಳಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಮಾತನಾಡಿ, ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ಪ್ರಧಾನಿ ನರೇಂದ್ರ ಮೋದಿ ಅವರಂತೆ ಪ್ರಸಿದ್ಧಿ ಪಡೆದ ನಾಯಕರು ಇಡೀ ಜಗತ್ತಿನಲ್ಲಿಯೇ  ಇಲ್ಲ ಅಮಿತ್ ಶಾ ಹೇಳಿದ್ದಾರೆ.

ಅಯೋಧ್ಯೆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಾಗುತ್ತಿದೆ. ಆದಷ್ಟು ಬೇಗನೆ ಪ್ರಕರಣ ಮುಕ್ತಾಯವಾಗಬೇಕು ಎಂದು ನಾವು ಬಯಸುತ್ತೇವೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಿಜೆಪಿ ಬಯಸುತ್ತದೆ. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್‌ ಪ್ರಕರಣವನ್ನು ಮತ್ತಷ್ಟು ವಿಳಂಬಿಸಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನದ ಮಾರ್ಗದಲ್ಲಿ ರಾಮ ಮಂದಿರ ನಿರ್ಮಾಣವನ್ನು ನಾವು ಬಯಸುತ್ತೇವೆ ಎಂದು ಘೋಷಿಸಿದರು.

ದೇಶದ ಜನತೆ ರಾಹುಲ್‌ಗಿಂತ ಬುದ್ಧಿವಂತರು. ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ರಾಹುಲ್ ಗಾಂಧಿ ಮೋದಿ ಸರಕಾರದ ವಿರುದ್ಧ ಆಧಾರ ರಹಿತ ಲಂಚದ ಆರೋಪ ಮಾಡುತ್ತಾರೆ ಎಂದು ಶಾ ಕಿಡಿ ಕಾರಿದರು. 2014ರ ವರೆಗೂ ದೇಶದಲ್ಲಿ ಒಟ್ಟು 60 ಸಾವಿರ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳೇ ಇರಲಿಲ್ಲ. ಆದರೆ ಮೋದೀ ಅವರು ಈ ಎಲ್ಲ ಕುಟುಂಬಗಳಿಗೆ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ಒದಗಿಸಿದರು. ‘ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆಯಡಿ ದೇಶ ಕಾಯುವ ವೀರ ಯೋಧರಿಗೆ ನರೇಂದ್ರ ಮೋದಿ ಸರಕಾರ ಗೌರ ಸಲ್ಲಿಸಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರಕಾರ ದೇಶದ ಮಹಿಳೆಯರಿಗೆ ಘನತೆಯೊಂದಿಗೆ ಬದುಕುವ ಹಕ್ಕನ್ನು ನೀಡಿದೆ. ಅದಕ್ಕಾಗಿ 90 ಲಕ್ಷ ಶೌಚಾಲಯಗಳನ್ನೂ ನಿರ್ಮಿಸಲಾಗಿದೆ. ದೇಶದ ಭದ್ರತೆಗಾಗಿ ಮೋದಿ ಸರಕಾರ ಕಠಿಣ ಪರಿಶ್ರಮ ವಹಿಸಿದೆ ಎಂದು ಶಾ ನುಡಿದರು.

ಬಡವರ ಅಭಿವೃದ್ಧಿಗಾಗಿ ನಾವು ಬಹಳಷ್ಟು ಕೆಲಸಗಳನ್ನು ಮಾಡಿದ್ದೇವೆ. ದೇಶದ ಭದ್ರತೆಯೂ ಅಷ್ಟೇ ಮುಖ್ಯವಾಗಿದೆ. 2014ರ ಮೊದಲು ನಮ್ಮ ಯೋಧರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಪ್ರತಿದಿನ ಉಗ್ರರು ದೇಶದೊಳಕ್ಕೆ ನುಸುಳಿ ಬರುತ್ತಿದ್ದರು. ಈ ಪರಿಸ್ಥಿತಿಗಳನ್ನು ನಾವು ನಿಯಂತ್ರಿಸಿದ್ದೇವೆ. 2014ರಲ್ಲಿ ಬಿಜೆಪಿ ಕೇವಲ 6 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. 2019ರ ವೇಳೆಗೆ ಬಿಜೆಪಿ 16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ.

ಪರಸ್ಪರ ಎದುರಿಸಲಾಗದ, ಸೋಲಿನ ಭೀತಿಯಿರುವ ಜನರು ಇಂದು ಒಟ್ಟಾಗುತ್ತಿದ್ದಾರೆ. ಒಂಟಿಯಾಗಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ಅರಿವಾಗಿದೆ. ಲೋಕಸಭೆ ಚುನಾವನೆ ಎರಡು ಸಿದ್ಧಾಂತಗಳ ನಡುವಣ ಹೋರಾಟವಾಗಲಿದೆ. ಬಿಜೆಪಿ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಬಡವರ ಅಭಿವೃದ್ಧಿಯ ಸಂಕೇತವಾದರೆ, ಎದುರಾಳಿಗಳು ಕೇವಲ ಅಧಿಕಾರಕ್ಕಾಗಿ ಒಟ್ಟಾಗಿದ್ದಾರೆ ಎಂದು ಅಮಿತ್ ಶಾ ಕುಟುಕಿದರು.

ಉತ್ತರ ಪ್ರದೇಶದಲ್ಲಿ 74 ಸ್ಥಾನಗಳನ್ನೂ ನಾವು ಗೆಲ್ಲಲಿದ್ದೇವೆ. ನರೇಂದ್ರ ಮೋದಿ ಅವರನ್ನು ಸೋಲಿಸುವುದು ಅಸಾಧ್ಯ. 2019ರ ಚುನಾವಣೆ ಭಾರತದ ಬಡವರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಸ್ಟಾರ್ಟಪ್‌ಗಳನ್ನು ಆರಂಭಿಸುವ ಯುವಕರಿಗೂ ಇದು ಮಹತ್ವದ ಚುನಾವಣೆ. ಭಾರತ ವೈಭವದಿಂದ ಬೆಳಗಬೇಕು ಎಂದು ಬಯಸುವ ಕೋಟ್ಯಂತರ ಮಂದಿಗೆ ಈ ಚುನಾವಣೆ ಮುಖ್ಯವಾಗಿದೆ. 2019ರ ಚುನಾವಣೆ ಮೋದಿ ವರ್ಸಸ್ ಇತರರ ನಡುವೆ ನಡೆಯಲಿದೆ. 2019ರ ಚುನಾವಣಾ ಸಮರ ಶತಮಾನಗಳ ಕಾಲ ಭಾರತದ ಮೇಲೆ ಪ್ರಭಾವ ಬೀರುವಂಥದ್ದಾಗಲಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲುವುದು ಅತ್ಯಂತ ಮುಖ್ಯ ಎಂದು ಅಮಿತ್ ಶಾ ಹೇಳಿದರು.

ಜನಸಂಘದ ದಿನಗಳಿಂದಲೂ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯದಲ್ಲಿ ಧ್ರುವ ನಕ್ಷತ್ರದಂತೆ ಬೆಳಗಿದರು. ಬಿಜೆಪಿಯ ಸಂಸ್ಥಾಪಕ ಅಧ್ಯಕ್ಷರಾಗಿ ಪಕ್ಷವನ್ನು ಸದೃಢವಾಗಿ ಬೆಳೆಸಿದರು. ವಾಜಪೇಯಿ ಮತ್ತು ಆಡ್ವಾಣಿ ಅವರಷ್ಟು ಕಠಿಣ ಪರಿಶ್ರಮವನ್ನು ಯಾರೂ ಮಾಡಿರಲಿಲ್ಲ ಎಂದು ನನ್ನ ಭಾವನೆ. ಅವರ ಪರಿಶ್ರಮದಿಂದ ಬಿಜೆಪಿ ಇಂದು ದೇಶದ ಮೂಲೆ ಮೂಲೆಗೂ ಹಬ್ಬಿದೆ ಎಂದು ಅಮಿತ್ ಶಾ ಹೇಳಿದರು.

ರಾಮಮಂದಿರವನ್ನು ಶೀಘ್ರದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ. ಈ  ಕುರಿತ ಪ್ರಕರಣವನ್ನು ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ, ಕಾಂಗ್ರೆಸ್  ಅಡ್ಡಿಯನ್ನುಂಟುಮಾಡುತ್ತಿದೆ ಎಂದು ಆರೋಪಿಸಿದರು. ಅಸ್ಸಾಂನಲ್ಲಿ ಸರ್ಬಾನಂದಾ ಸೂನೂವಾಲ್ ಸರ್ಕಾರ  ಬಂದ ನಂತರ ಎನ್ ಆರ್ ಸಿ ಪಟ್ಟಿ ತಯಾರಿಸಲಾಗಿದೆ ಎಂದು ಹೇಳಿದರು.

1.5 ಕೋಟಿ ರೂ. ವಹಿವಾಟಿನೊಂದಿಗೆ ಸಂಯೋಜನೆ ಯೋಜನೆಯನ್ನು ಸ್ವೀಕರಿಸುವ ವ್ಯಾಪಾರಿಗಳು ಕೇವಲ ಶೇ. 1%  ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ನಿರ್ಧಾರದಿಂದ  ಲಕ್ಷಾಂತರ ಸಣ್ಣ ಉದ್ಯಮಿಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂದು  ತಿಳಿಸಿದರು.

ಇನ್ನು ಕರ್ನಾಟಕದ ಎಲ್ಲ 104 ಶಾಸಕರು, ಪ್ರಧಾನ ಕಾರ್ಯದರ್ಶಿಗಳು, ವಿಧಾನ ಪರಿಷತ್​ ಸದಸ್ಯರು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.   ಮುಂಬರುವ ಲೋಕಸಭಾ ಎಲೆಕ್ಷನ್​ನಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಾಯಕರು ಗಹನವಾದ ಚರ್ಚೆ ನಡೆಯಲಿದೆ.

ಬಿಜೆಪಿ ನ್ಯಾಷನಲ್​ ಕೌನ್ಸಿಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಹಿರಿಯ ಬಿಜೆಪಿ ಮುಖಂಡರಾದ  ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಆಡಳಿತ ಇರುವ ರಾಜ್ಯಗಳ ಸಿಎಂಗಳು, ದೇಶದಲ್ಲಿರುವ ಎಲ್ಲ ಬಿಜೆಪಿ ಎಂಪಿಗಳು ಎಂಎಲ್​ಎ ಹಾಗೂ ಎಂಎಲ್​ಸಿಗಳು ಮತ್ತು ಎಲ್ಲ ಸ್ಥಳೀಯ ಬಿಜೆಪಿ ಪ್ರಮುಖ ನಾಯಕರು ಮೀಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close