About Us Advertise with us Be a Reporter E-Paper

ಸಿನಿಮಾಸ್

‘ಅಮ್ಮಚ್ಚಿಯ ಗೆಲುವಿನ ಮಾತು’….. ನಿರ್ದೇಶಕಿ ಚಂಪಾ ಶೆಟ್ಟಿ ಸಂದರ್ಶನ

- ನವೀನ್‌ಕೃಷ್ಣ, ಪುತ್ತೂರು

ಕಳೆದ ರಿಲೀಸ್ ಆದ ‘ಅಮ್ಮಚ್ಚಿಯೆಂಬ ನೆನಪು ಚಿತ್ರ, ಉತ್ತಮ ಕಥಾ ವಸ್ತುವನ್ನು ಬಯಸುವ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಪ್ರಸಿದ್ಧ ಬರಹಗಾರ್ತಿ ಡಾ.ವೈದೇಹಿಯವರ ಮೂರು ಕಥೆಗಳನ್ನಾಧರಿಸಿ ಚಿತ್ರ ನಿರ್ದೇಶಿಸಿದ್ದ ಚಂಪಾಶೆಟ್ಟಿಯವರ ಪ್ರತಿಭೆಯನ್ನು ಗಿರೀಶ್ ಕಾಸರವಳ್ಳಿ, ಯೋಗಾರಾಜ್ ಭಟ್.. ಮುಂತಾದವರು ಮೆಚ್ಚಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹೀಗೆ ಮೊದಲ ಚಿತ್ರದ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ವಭರಿತ ಚಿತ್ರಗಳನ್ನು ನೀಡುವ ಸೂಚನೆ ನೀಡಿರುವ ಚಂಪಾ ಶೆಟ್ಟಿಯವರು ‘ವಿಶ್ವವಾಣಿ ಸಿನಿಮಾಸ್’ ಜೊತೆ ತಮ್ಮ ಮನದಾಳದ ಹಂಚಿಕೊಂಡಿದ್ದಾರೆ.

* ವೈದೇಹಿಯವರ ಮೂರು ಕಥೆಗಳನ್ನು ಬೆಳ್ಳಿತೆರೆಯ ಮೇಲೆ ಪರಿಣಾಮಾರಿಯಾಗಿ ತರುವುದು ಒಂದು ಸವಾಲು, ಈ ಸವಾಲನ್ನು ಹೇಗೆ ನಿಭಾಯಿಸಿದ್ರಿ?
ಸಣ್ಣದರಲ್ಲೇ ನಾನು ಕಥೆ-ಕಾದಂಬರಿಗಳನ್ನು ಓದುವುದನ್ನು ರೂಢಿಸಿಕೊಂಡಿದ್ದೆ. ಅದೇ ಓದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಹೀಗೆ.. ವೈದೇಹಿ ಅವರ ಕಥೆಗಳೆಂದರೆ ನನಗೆ ಅಚ್ಚು ಮೆಚ್ಚು. ರಂಗಭೂಮಿಯ ಒಡನಾಟದಲ್ಲಿದ್ದಾಗ ಒಂದು ನಾಟಕ ನಿರ್ದೇಶಿಸುವ ಮನಸ್ಸಾಯಿತು. ಅದಕ್ಕಾಗಿ ಸೂಕ್ತ ಕಥೆಯನ್ನು ಹುಡುಕುತ್ತಿದ್ದೆ. ಆಗ ಕಣ್ಣಿಗೆ ಬಿದ್ದವಳೇ ವೈದೇಹಿವರ ‘ಅಕ್ಕು’. ಅಕ್ಕುವನ್ನು ಮೇಲೆ, ಸ್ತ್ರೀ ಸಂವೇದನೆಯ ಬಗ್ಗೆ ವೈದೇಹಿಯವರು ಬರೆದ ಇನ್ನೆರೆಡು ಸಣ್ಣಕಥೆಗಳು ಸೇರಿಕೊಂಡವು. ಇವು ಮೂರು ಕಥೆಗಳನ್ನು ಸೇರಿಸಿ ‘ಅಕ್ಕು’ ಎಂಬ ನಾಟಕ ನಿರ್ದೇಶನ ಮಾಡಿದೆ. ನಾಟಕ ರಾಜ್ಯದ ಗಡಿ ದಾಟಿ ಸಾಕಷ್ಟು ಯಶಸ್ವಿ ಪ್ರದರ್ಶನ ಕಂಡಿತು. ಶಿವಳ್ಳಿ ಬ್ರಾಹ್ಮಣ ಕನ್ನಡದಲ್ಲಿರುವ ‘ಅಕ್ಕು’ವನ್ನು ಭಾಷೆಯ ಎಲ್ಲೆ ಮೀರಿ ಪ್ರೇಕ್ಷರು ಮೆಚ್ಚಿಕೊಂಡರು. ನಾಟಕದ ಯಶಸ್ಸು ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿತು. ಮೂರು ಕಥೆಗಳನ್ನು ಸೇರಿಸಿ ನಾಟಕ ಮಾಡಿದ್ದರಿಂದ, ಬೆಳ್ಳಿತೆರೆಗೆ ಅದೇ ಕಥೆಯನ್ನು ಚಿತ್ರಕಥೆ ಬರೆಯುವುದು ಹೆಚ್ಚು ಸವಾಲೆನಿಸಲಿಲ್ಲ.

*ಚಿತ್ರದಲ್ಲಿ ಟೈಟಲ್ ಪಾತ್ರ ಅಮ್ಮಚ್ಚಿ ಪಾತ್ರಕ್ಕಿಂತ ಅಕ್ಕು ಪಾತ್ರ ಹೆಚ್ಚು ಕಾಡುತ್ತದೆ. ಚಿತ್ರಕಥೆ ಬರೆಯುವ ಸಂದರ್ಭದಲ್ಲೇ ಅಕ್ಕು ಪಾತ್ರದ ಮಿತಿ ಅಮ್ಮಚ್ಚಿಯನ್ನು ಮೀರಿದ್ದು ಎಂಬುದು ನಿಮ್ಮ ಅರಿವಿಗೆ ಬಂದಿತ್ತಾ?
ಇಲ್ಲಿ ಎರಡೂ ಪಾತ್ರಗಳಿಗೂ ತನ್ನದೇ ಆದ ಇಂಪಾರ್ಟೆನ್‌ಸ್ ಇದೆ. ಅಕ್ಕು ಪಾತ್ರ ಮಾನಸಿಕ ತೊಂದರೆಗೆ ಒಳಗಾದ ಪಾತ್ರವಾಗಿದ್ದರಿಂದ ಅದು ಹೆಚ್ಚು ಕಾಡಬಹುದು. ಹಾಗೆಂದ ಮಾತ್ರಕ್ಕೆ ಅಮ್ಮಚ್ಚಿಯ ಪಾತ್ರ ವೀಕ್ ಅಂತ ಅಲ್ಲ. ಅಮ್ಮಚ್ಚಿ ಆದ ನಿರ್ಧಾರವನ್ನು ತೆಗೆದುಕೊಳ್ಳುವ ಮನಸ್ಥಿತಿಯವಳು. ನಿರ್ದೇಶಕಿಯಾಗಿ ನನಗೆ ಎರಡೂ ಪಾತ್ರಗಳೂ ಸರಿ ಸಮಾನ.

*‘ಮೊಟ್ಟೆ’ ಖ್ಯಾತಿಯ ರಾಜ್ ಅವರನ್ನು ವೆಂಕಪ್ಪಯ್ಯ ಮಾಡಲು ಹೊರಟಿದ್ದರ ಹಿಂದಿನ ಲಾಜಿಕ್ ಏನು?
ನಾನು ‘ಒಂದು ಮೊಟ್ಟೆಯ ಕಥೆ’ಯನ್ನು ಹಲವು ಬಾರಿ ನೋಡಿದ್ದೇನೆ. ಇಡೀ ತಂಡದ ಟೀಮ್ ವರ್ಕ್ ಮತ್ತು ಹಾರ್ಡ್ ವರ್ಕ್ ತುಂಬಾ ಸೆಳೆದಿತ್ತು. ಇನ್ನು, ರಾಜ್ ಮಾಡಿದ್ದ ಜನಾರ್ದನನ ಪಾತ್ರ ನಿಭಾಯಿಸುವುದು ಸುಲಭದ ಸಂಗತಿಯಲ್ಲಿ. ಅಲ್ಲಿ ರಾಜ್ ಇಡೀ ಚಿತ್ರದಲ್ಲಿ ಅಂಡರ್‌ಪ್ಲೇನಲ್ಲೇ ನಿಭಾಯಿಸಿದ್ದರು. ಹೀಗೆ, ವೆಂಕಪ್ಪಯ್ಯ ಎಂಬ ವಿಲನ್ ಪಾತ್ರಕ್ಕೆ ರಾಜ್ ಅವರು ಹೆಚ್ಚು ಸೂಕ್ತ ಎಂದು ತೀರ್ಮಾನಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಚಿತ್ರ ಬಿಡುಗಡೆಯಾಗಿ ವೆಂಕಪ್ಪಯ್ಯನ ಪಾತ್ರ ಸಣ್ಣದಾಗಿದ್ದರೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆಯೆಂದರೆ ರಾಜ್ ಅವರ ಕೊಡುಗೆ ಮಹತ್ವದ್ದು.

*ಚಿತ್ರದ ಛಾಯಾಗ್ರಹಣದ ಬಗ್ಗೆ, ದೃಶ್ಯ ಕಟ್ಟಿಕೊಟ್ಟ ಬಗ್ಗೆ ಸಾಕಷ್ಟು ಪ್ರಶಂಸೆಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ರಂಗಭೂಮಿಯ ಅನುಭವ ಸಹಾಯಕ್ಕೆ ಬಂತೇ?
ಖಂಡಿತಾ, ರಂಗಭೂಮಿಯಲ್ಲಿನ ಬ್ಲಾಕಿಂಗ್‌ನ ಅನುಭವ ಇಲ್ಲಿ ಸಹಾಯಕ್ಕೆ ಬಂತು. ಇನ್ನು, ಡಿಓಪಿ ನವೀನ್ ನೀಡುತ್ತಿದ್ದ ಸಲಹೆಗಳು ನನಗೆ ಸಾರ್ಥಕ ದೃಶ್ಯಗಳನ್ನು ಕಟ್ಟಿಕೊಡಲು ಹೆಚ್ಚು ಕಷ್ಟವಾಗಲಿಲ್ಲ. ಶೂಟಿಂಗ್‌ಗೂ ಮುನ್ನ ನಾವು ಹುಡುಕಿದ್ದ ಲೊಕೇಶನ್‌ಗಳು ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದ್ದರ ಹಿಂದೆ ನವೀನ್ ಕೈಚಳಕ ಸಾಕಷ್ಟಿದೆ.

*ಅಬ್ಬರದ ಪ್ರಚಾರ, ಸ್ಟಾರ್‌ಗಿರಿ ಚಿತ್ರಗಳ ಮಧ್ಯೆ ‘ಅಮ್ಮಚ್ಚಿ’ಯಂತಹ ರಿಯಲಿಸ್ಟಿಕ್ ಚಿತ್ರಗಳ ಅಸ್ತಿತ್ವ?
ಕೆಲವು ಚಿತ್ರಗಳ ಕೇವಲ ಮನೋರಂಜನೆಗಷ್ಟೇ ತಯಾರಾಗುತ್ತವೆ. ಅಮ್ಮಚ್ಚಿಯಂತಹ ರಿಯಲಿಸ್ಟಿಕ್ ಚಿತ್ರಗಳು ಮನೋರಂಜನೆಯ ಜೊತೆಗೆ ಒಂದು ಅನುಭವವನ್ನು ನೋಡುಗನಿಗೆ ಸ್ಟಾರ್‌ಗಿರಿ ಚಿತ್ರಗಳನ್ನೂ ನೋಡುವ ಒಂದು ವರ್ಗ ಹೇಗಿದೆಯೋ ಅದೇ ರೀತಿ ಅಮ್ಮಚ್ಚಿಯಂತಹ ಸೆನ್ಸಿಬಲ್, ರಿಯಲಿಸ್ಟಿಕ್ ಚಿತ್ರಗಳನ್ನೂ ನೋಡುವ ವರ್ಗವೂ ಇದೆ. ಚಿತ್ರ ಬ್ಲಾಕ್‌ಬ್ಲಾಸ್ಟರ್ ಆಗ ಬೇಕಾದ ಅಗತ್ಯವಿಲ್ಲ. ಯಾವ ಪ್ರೇಕ್ಷನಿಗೆ ತಲುಪಬೇಕೋ ಅದು ತಲುಪಬೇಕು. ಆ ಕೆಲಸ ಈಗಾಗಲೇ ಆಗಿದೆ. ನನಗೆ ಒಂದು ಸಿನ್ಸಿಯರ್ ಅಟೆಂಪ್‌ಟ್ ಮಾಡಿದ ಸಮಾಧಾನವಿದೆ. ಒಬ್ಬ ನಿರ್ದೇಶಕಿಯಾಗಿ ಮೊದಲ ಚಿತ್ರಕ್ಕೆ ಸಾಕಷ್ಟು ಪ್ರಶಂಸೆಗೆ ಒಳಗಾಗಿರೋದು ಜವಾಬ್ದಾರಿಯನ್ನು ಇನ್ನಷ್ಟು ಹೆಚಿಸಿದೆ.

ಸಿನಿಮಾ ಚೆನ್ನಾಗಿದೆ ವಿಮರ್ಶೆ ಪತ್ರಿಕೆಗಳಿಂದ ಹಾಗೂ ಸಿನಿ ರಸಿಕರಿಂದ ಬರಪೂರ ಬಂದರೂ ಕೂಡ ವೀಕ್ಷಕರು ಥಿಯೇಟರ್‌ನತ್ತ ಮುಖ ಮಾಡೋದು ಕಡಿಮೆಯಾಗುತ್ತಿದೆ. ಇಂತಹ ವಿದ್ಯಮಾನಗಳು ಮುಂಬರುವ ಕನ್ನಡ ಚಿತ್ರಗಳ ಮೇಲೆ ಹೆಚ್ಚಿನ ಒತ್ತಡತರುವಂತದ್ದು. ಅಲ್ಲದೇ ನೋಡಗರ ಸಂಖ್ಯೆ ಕಡಿಮೆಯಾದ ಕಾರಣವನ್ನೇ ಮುಂದಿಟ್ಟುಕೊಂಡು ಮಾರ್ಕೆಟಿಂಗ್ ದೃಷ್ಟಿಯಿಂದ ಮಲ್ಟಿಪ್ಲೆಕ್‌ಸ್ಗಳು ಕನ್ನಡ ಚಿತ್ರದ ಪ್ರದರ್ಶನವನ್ನು ಕಡಿಮೆ ಮಾಡುವುದಲ್ಲದೇ ಅನ್ಯ ಭಾಷಾ ಚಿತ್ರಗಳಿಗೆ ಹೆಚ್ಚಿನ ಮಾನ್ಯತೆ ಕೊಡಲು ಇತ್ತೀಚೆಗೆ ಅತಿ ಮಾಡಿದೆ. ವೈವಿಧ್ಯಮಯ ಕನ್ನಡ ಚಿತ್ರಗಳ ಸಂಖ್ಯೆಗಳು ದಿನದಿಂದ ಕುಗ್ಗುತ್ತಿರುವ ಸನ್ನಿವೇಶದಲ್ಲಿ ತೆರೆಗೆ ಬರುವ ಕೆಲವೇ ಸಿನಿಮಾಗಳನ್ನು ಸ್ವಾಗತಿಸಿ ಪ್ರೋತ್ಸಾಹಿಸುವುದು ಕನ್ನಡಗರ ಆದ್ಯ ಕರ್ತವ್ಯವಲ್ಲವೇ…

Tags

Related Articles

Leave a Reply

Your email address will not be published. Required fields are marked *

Language
Close