ಸಮೀಕ್ಷೆಗಳ ಪ್ರಕಾರ ಮುದುಡಿರುವ ತಾವರೆ ಅರಳಲಿದೆಯೇ?

Posted In : ಸಂಗಮ, ಸಂಪುಟ

ವಿಶ್ಲೇಷಣೆ – ವಿಕ್ರಮ್ ಜೋಶಿ

ಕರ್ನಾಟಕದ ವಿಧಾನಸಭಾ ಚುನಾವಣೆ ಮುಗಿದಿದೆ. ಮೋದಿ, ಯೋಗಿ, ಶಾ, ಕುಮಾರಸ್ವಾಮಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಇವರೆಲ್ಲರ ಆರು ತಿಂಗಳ ರ್ಯಾಲಿಯ ಪರಿಶ್ರಮದ ಫಲಕ್ಕೆ ಇನ್ನು ಎರಡು ದಿನ ಕಾಯಬೇಕಿದೆ. ಮೋದಿಯವರ ಇಪ್ಪತ್ತೊಂದು ರ್ಯಾಲಿ, ಯೋಗಿಯವರ ಇಪ್ಪತ್ತು ರ್ಯಾಲಿ, ಅಮಿತ್ ಶಾರವರ ಮೂವತ್ತು ರ್ಯಾಲಿ ಕರ್ನಾಟಕವನ್ನು ಕೆಲವು ದಿನಗಳ ಮಟ್ಟಿಗೆ ದೇಶದ ನಕ್ಷೆಯಲ್ಲಿ ಹೊಳೆಯುವಂತೆ ಮಾಡಿತ್ತು. ಎಲ್ಲೆಲ್ಲೂ ಕೇಸರಿಯ ಬಣ್ಣ ಚೆಲ್ಲಿತ್ತು. ಪರಿವರ್ತನಾ ರ್ಯಾಲಿ, ಯಾತ್ರೆ, ವಿಕಾಸ ಪರ್ವ ಯಾತ್ರೆ ಹೀಗೆ ರಾಜ್ಯದ ಮೂರೂ ಪ್ರಬಲವಾದ ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದವು.

ಕಾಂಗ್ರೆಸ್ ಪರ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದರೆ, ಜೆಡಿಎಸ್ ಪರ ಅಸಾದುದ್ದೀನ್ ಓವೈಸಿ, ಮಾಯಾವತಿ ಪ್ರಚಾರ ನಡೆಸಿದರು. ಮನಮೋಹನ್ ಸಿಂಗ್ ಅವರು ಆನಂದ್ ಶರ್ಮಾರವರ ಜೊತೆ ಬಂದು ಪ್ರೆಸ್ ಕಾನ್ಫರೆನ್‌ಸ್ ನಡೆಸಿದ್ದು ಬಿಟ್ಟರೆ ದೆಹಲಿಯಿಂದ ಯಾವುದೇ ದೊಡ್ಡ ಪ್ರಚಾರಕರು ಕಾಂಗ್ರೆಸ್ ಪಕ್ಷದಿಂದ ಬಂದ ನೆನಪಿಲ್ಲ. ಆದರೆ ಬಿಜೆಪಿ ಮಾತ್ರ ಕೊನೆಯ ಭರ್ಜರಿ ಸಿಕ್ಸರ್ ಬಾರಿಸಿತ್ತು. ಎಲ್ಲ ಪಕ್ಷದಿಂದ ಸೇರಿ ಒಟ್ಟೂ 2655 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ರಾಜ್ಯಕ್ಕೊಂದು ಪ್ರನಾಳಿಕೆ, ಕ್ಷೇತ್ರವಾರು ಪ್ರನಾಳಿಕೆ, ಪೋಸ್ಟರು, ಪೇಪರು, ಹ್ಯಾಂಡ್ ಬಿಲ್ಲು ಹೀಗೆ ಎಲ್ಲರೂ ತಮ್ಮ ಬತ್ತಳಿಕೆಯಲ್ಲಿದ್ದ ಬಾಣಗಳನ್ನು ತೆಗೆದು ಬಿಲ್ಲಲ್ಲಿ ಹೂಡಿದ್ದೇ ಹೂಡಿದ್ದು. ಎಲೆಕ್ಷನ್ ಕಮಿಷನ್ ಪ್ರಕಾರ 4,96,82,357 ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು.

ಇವರಿಗೆಲ್ಲ ಮತದಾನ ಮಾಡಲು ಅನುಕೂಲ ಆಗುವಂತೆ 56,696 ಮತಗಟ್ಟೆಗಳನ್ನು ಚುನಾವಣಾ ಆಯೋಗ ನಿಯೋಜಿಸಿತ್ತು. ಮೋದಿಯವರ ವೇವ್ ಎನ್ನಿ, ಗಾಂಧಿಯ ಕ್ರೇಜ್ ಎನ್ನಿ, ಕುಮಾರ ಸ್ವಾಮಿಯವರ ಭಾವುಕತೆ ಎನ್ನಿ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮತದಾನದಲ್ಲಿ ತೀವ್ರವಾದ ಬದಲಾವಣೆಯೇನು ಆಗಿಲ್ಲ. 2013ರಲ್ಲಿ 71.45% ಮತದಾನ ನಡೆದರೆ ಈ ಬಾರಿ ಹೆಚ್ಚು ಕಡಿಮೆ ಅಷ್ಟೇ ಮತದಾನ ನಡೆದಿದೆ (70.9%). ರಜೆಯಲ್ಲಿ ಕೆಲಸ ಮಾಡಿ, ಹಳ್ಳಿಹಳ್ಳಿಗೆ ಹೋಗಿ, ಬಿಸಿಲಿನಲ್ಲಿ ಕೂತು ಸರ್ಕಾರಿ ನೌಕರರು ಈ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪೋಲಿಸ್ ಹಾಗೂ ಭದ್ರತಾ ಪಡೆಯೂ ಅಷ್ಟೇ. ಚುನಾವಣೆಯ ತಾರೀಖನ್ನು ನಂತರದಲ್ಲಿ ಆಯೋಗವು 196 ಕೋಟಿ ರೂಪಾಯಿ ಮೌಲ್ಯಕ್ಕೆ ಮುಟ್ಟುಗೋಲು ಹಾಕಿದೆ. ರಾಜರಾಜೇಶ್ವರಿ ನಗರದ ನಕಲಿ ಮತದಾರರ ಗುರುತಿನ ಚೀಟಿಯ ಹಗರಣ ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆಯದೆ ಹೆಚ್ಚಾಗಿ ಶಾಂತಿಯುತವಾಗಿ ಚುನಾವಣೆ ನಡೆದಿದೆ, ಇದೇ ಪ್ರಜಾಪ್ರಭುತ್ವದ ಮೊದಲ ಗೆಲುವು.

ಚುನಾವಣೆ ಮುಗಿದಿದೆ, ಈಗ ಯಾರು ಅಧಿಕಾರಕ್ಕೆ ಬರುವುದು ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆ. ಮೊದಲ ಚುನಾವಣಾ ಪೂರ್ವದ ಎಲ್ಲ ಸಮೀಕ್ಷೆಗಳು ಯಾವ ಒಂದು ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದಿದ್ದವು. ಮತದಾನದ ನಂತರ ನಡೆದ ಸಮೀಕ್ಷೆಗಳು ಬೆರೆಯೇ ಹೇಳುತ್ತಿವೆ. ಮತದಾನೋತ್ತರದ ಒಂಬತ್ತು ಬೇರೆ ಸಮೀಕ್ಷೆಗಳ ಪಕ್ಷಿನೋಟ ಏನು ಹೇಳುತ್ತಿದೆ ಎಂದು ನೋಡೋಣವೇ?

ಕಾಂಗ್ರೆಸ್ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಬಹುದು?
– ಟೈಮ್ಸ್ ನೌ ಟಿವಿ -ವಿಎಂಆರ್: 97
– ಎಕ್ಸಿಸ್ ಮೈ ಇಂಡಿಯಾ: 111
– ಸಿ ವೋಟರ್: 93
– ಜನ್ ಕಿ ಬಾತ್: 75
– ರಿಪಬ್ಲಿಕ್: 82
– ಎಬಿಪಿ ನ್ಯೂಸ್: 87
– ನ್ಯೂಸ್ – ಸಿಎನ್ ಎಕ್ಸ್: 78
– ನ್ಯೂಸ್ ನೇಷನ್: 75
– ಟುಡೇಸ್ ಚಾಣಕ್ಯ: 73

ಭಾರತೀಯ ಜನತಾ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಬಹುದು?
– ಟೈಮ್ಸ್ ನೌ ಟಿವಿ -ವಿಎಂಆರ್: 94
– ಎಕ್ಸಿಸ್ ಮೈ ಇಂಡಿಯಾ: 85
– ಸಿ ವೋಟರ್: 103
– ಜನ್ ಕಿ ಬಾತ್: 106
– ರಿಪಬ್ಲಿಕ್: 114
– ಎಬಿಪಿ ನ್ಯೂಸ್: 97-109
– ನ್ಯೂಸ್ ಎಕ್ಸ್ – ಎಕ್ಸ್: 102-110
– ನ್ಯೂಸ್ ನೇಷನ್: 105-109
– ಟುಡೇಸ್ ಚಾಣಕ್ಯ: 120

ಜನತಾ ದಳ (ಜ್ಯಾ) ಎಷ್ಟು ಸೀಟುಗಳನ್ನು ಗೆಲ್ಲಬಹುದು?
– ಟೈಮ್ಸ್ ನೌ ಟಿವಿ -ವಿಎಂಆರ್: 35
– ಎಕ್ಸಿಸ್ ಮೈ ಇಂಡಿಯಾ: 26
– ಸಿ ವೋಟರ್: 25
– ಜನ್ ಕಿ ಬಾತ್: 37
– ರಿಪಬ್ಲಿಕ್: 43
– ಎಬಿಪಿ ನ್ಯೂಸ್: 21-30
– ನ್ಯೂಸ್ ಎಕ್ಸ್- ಸಿಎನ್ ಎಕ್ಸ್: 35-39
ನ್ಯೂಸ್ ನೇಷನ್: 36-40
– ಟುಡೇಸ್ ಚಾಣಕ್ಯ: 26

ಇದನ್ನು ನೋಡಿದರೆ ಕರ್ನಾಟಕದಲ್ಲಿ ಕೇಸರಿಕರಣವಾಗಿ ಕಮಲ ಅರಳುವುದು ಖಚಿತವಾಗಿದೆ ಅನಿಸುತ್ತದೆ. ಬಿಜೆಪಿಗೆ ಸರಕಾರ ರಚಿಸುವಷ್ಟು ಸೀಟುಗಳು ಸಿಗುವ ಸಾಧ್ಯತೆ ಬಹಳಷ್ಟಿದೆ. ಬಿಜೆಪಿಗೆ ಈ ಚುನಾವಣೆ ಆತ್ಮಾಭಿಮಾನದ ಸವಾಲು. ಕಾಂಗ್ರೆಸ್ ಪಕ್ಷಕ್ಕೆ ಇದು ಕೊನೆಯ ಒಂದು ಉಳಿದ ದೊಡ್ಡ ರಾಜ್ಯ. ಇಲ್ಲಿ ಸೋತರೆ ಲೋಕಸಭಾ ಚುನಾವಣೆಯಲ್ಲಿ ಯಾವ ಕನಸನ್ನೂ ಕಾಣುವ ಹಾಗಿಲ್ಲ. ಮೋದಿಜಿಯವರ ವಿರುದ್ಧ ಸೈನ್ಯ ಕಟ್ಟಲು ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಬಹಳ ಅನಿವಾರ್ಯ. ಹಾಗೆಯೇ ಇದು ದೇವೇಗೌಡರ ಪಾಲಿಗೆ ಮಗನನ್ನು ಮುಖ್ಯಮಂತ್ರಿ ಮಾಡಲು ಸಿಗಬಹುದಾದ ಕೊನೆಯ ಅವಕಾಶ.

ಇದೆಲ್ಲ ನಿಜ, ಆದರೆ ಎಲ್ಲೋ ಒಂದು ಕಡೆ ಬಿಜೆಪಿಯ ತಂತ್ರ, ಲೆಕ್ಕ ಸರಿ ಆದ ಹಾಗಿದೆ. ದೇವೇಗೌಡರ ಲೆಕ್ಕ ಸ್ವಲ್ಪ ತಪ್ಪಾದ ಹಾಗಿದೆ. ಇದು ಕೇವಲ ಎಕ್ಸಿಟ್ ಪೋಲ್ ಸಮೀಕ್ಷೆ. ನಿಜವಾದ ಮತದೆಣಿಕೆಯಲ್ಲಿ ಏನೂ ಆಗಬಹುದು. ಆದರೂ ಒಂದು ಲೆಕ್ಕಾಚಾರದ ಮೇಲೆ ಆಧಾರಿತ ಊಹೆ ನಮಗೆ ಸರಿಯಾದ ಸೂಚನೆಯನ್ನೇ ಕೊಡುತ್ತದೆ. ಅರ್ಥ ಮಾಡಿಕೊಳ್ಳುವ ಕೆಲವು ಸಿಂಪಲ್ ನಿಯಮಗಳಿವೆ. ಇಡೀ ಕರ್ನಾಟಕ ಚುನಾವಣೆಯನ್ನು ಪ್ರಚಾರ, ಒಂದು ಪಕ್ಷಕ್ಕೆ ಮತದಾರದ ಒಲವು, ಅಧಿಕಾರ ವಿರೋಧಿ ಅಲೆ, ವಿರೋಧ ಪಕ್ಷ ಹೇಗಿದೆ ಹಾಗೂ ಸರ್ಕಾರದ ಸಾಧನೆಗಳು ಏನು ಎನ್ನುವುದರ ಮೇಲೆ ವಿಶ್ಲೇಷಣೆ ಮಾಡಿದರೆ ಮತದಾನೋತ್ತರದ ಸಮೀಕ್ಷೆಗಳು ಹೇಳುತ್ತಿರುವುದು ನೈಜತೆಗೆ ಹತ್ತಿರವಾಗಿ ಕಾಣುತ್ತಿದೆ.

ಪ್ರಚಾರದ ಮಾಡಿದ್ದು ಯಾರು, ಹೇಗೆ ಅದರ ಪರಿಣಾಮ ಏನು?
ಮೋದಿಜಿ ಆರು ದಿನದಲ್ಲಿ ಇಪ್ಪತ್ತೊಂದು ರ್ಯಾಲಿ ನಡೆಸುತ್ತಾರೆ. ‘ಕನ್ನಡದಲ್ಲಿ ಭಾಷಾಂತರ ಬೇಡ’ ಯಾರೋ ಸಲಹೆ ಕೊಟ್ಟಾಗ ಮೋದಿಜಿ ಸೌಮ್ಯವಾಗಿ ‘ನನ್ನ ಭಾಷಣವನ್ನು ಹಳ್ಳಿ ಹಳ್ಳಿಯ ಜನ ಟಿವಿಯಲ್ಲಿ ನೋಡುತ್ತಾರೆ. ಅವರಿಗೆ ಕನ್ನಡದಲ್ಲಿ ಅರ್ಥವಾಗಲಿ ಅಂತ ಈ ಭಾಷಣವನ್ನು ಭಾಷಾಂತರ ಮಾಡಲಾಗುತ್ತದೆ’ ಎಂದು ಹೇಳುತ್ತಾರೆ. ಅಂದರೆ ಬಿಜೆಪಿಯವರ ತಂತ್ರ ಬಹಳ ಸಿಂಪಲ್ ಆಗಿತ್ತು. ಮೋದಿಜಿಯವರನ್ನು ಮುಂದಿಟ್ಟು ಚುನಾವಣೆ ನಡೆಸಿದ್ದರು. ಮೋದಿ ಹಾಗೂ ಅಮಿತ್ ಶಾರವರ ಒಂದೊಂದು ಮಾತೂ ಕೂಡ ಅಷ್ಟೇ ಕಡಕ್ ಆಗಿತ್ತು. ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರೇ ಹೊರತು ಸಿದ್ದರಾಮಯ್ಯನವರ ಮಾತಿನ ಮಿಸೈಲ್ ಇಲ್ಲ. ರಾಹುಲ್ ಗಾಂಧಿಯವರ ಪ್ರಚಾರ (ಗೊತ್ತಿದ್ದೂ) ಅತ್ಯಂತ ಕಳಪೆಯಾಗಿತ್ತು. ಕೊನೆಯ ದಿನ ಬೆಂಗಳೂರಿನಲ್ಲೋ, ಹುಬ್ಬಳ್ಳಿಯಲ್ಲೋ ಅಥವಾ ಮಂಗಳೂರಿನಲ್ಲೋ ಅಮಿತ್ ಶಾ ಪ್ರಚಾರ ಮಾಡದೆ ಯಡಿಯೂರಪ್ಪ ಹಾಗೂ ರಾಮಲು ಜತೆ ಬಾದಾಮಿಯಲ್ಲಿ ಬೃಹತ್ ರ್ಯಾಲಿ ನಡೆಸಿದರು.

ಇದರ ಪರಿಣಾಮವನ್ನು ಅಲ್ಲಿಯ ಜನರೇ ಹೇಳುತ್ತಾರೆ. ಪ್ರತಿ ಕ್ಷೇತ್ರದಲ್ಲಿ ಒಂದು ಪಕ್ಷಕ್ಕೆ ಇಷ್ಟು (20-25 %) ಶೇಕಡಾ ಜನರು ನಿಯತ್ತಾಗಿ ಮತ ಹಾಕುತ್ತಾರೆ. 8-10% ಜನರು ಕೊನೆಯ ಗಳಿಗೆ ತನಕ ನಿರ್ಧಾರ ಮಾಡುವುದಿಲ್ಲ. ಪ್ರಚಾರ, ಪ್ರನಾಳಿಕೆ ಇವುಗಳ ಮೇಲೆ ನಿರ್ಧಾರ ಮಾಡುತ್ತಾರೆ. ರಾಹುಲ್ ಗಾಂಧಿಯವರು ಚುನಾವಣೆಗೂ ಬಹಳ ದಿನ ಮೊದಲು ಬಂದು ಸಾಫ್‌ಟ್ ಹಿಂದುತ್ವ ಸಾರಲು ಹೋದರು. ಅದರ ಎಫೆಕ್‌ಟ್ ಅಷ್ಟು ನಡೆಯಲಿಲ್ಲವೇನೋ ಅನಿಸುತ್ತದೆ. ಇಷ್ಟು ದಿನ ಅಹಿಂದ ಎನ್ನುತ್ತಿದ್ದ ಸಿದ್ದರಾಮಯ್ಯ ಕೊನೆಯಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಪ್ರಚಾರಕ್ಕೆ ನಿಂತರು. ಆದರೆ ಬಿಜೆಪಿ ಮೊದಲಿನಿಂದಲೂ ಒಂದೇ ದಿಶೆಯಲ್ಲಿ ಪ್ರಚಾರ ನಡೆಸುತ್ತಿತ್ತು. ಮೋದಿಯವರ ‘ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎನ್ನುವ ಕರೆ ಜನರನ್ನು ಬಿಜೆಪಿಯತ್ತ ಓಲೈಸಿತ್ತು. ಅದಲ್ಲದೇ ಪ್ರಚಾರ ಕೇವಲ ಹಾರ್ಡ್ ಆಗಿರಲಿಲ್ಲ, ಸಾಫ್‌ಟ್ ಕೂಡ ಆಗಿತ್ತು ಅಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಿಂತ ಬಿಜೆಪಿಯ ಎಲೆಕ್ಟ್ರಾನಿಕ್ ಕ್ಯಾಂಪೇನ್ ತುಂಬಾ ಪರಿಣಾಮಾಕಾರಿಯಾಗಿತ್ತು ಅಂತ ಅನಿಸುತ್ತದೆ.

ಅಧಿಕಾರ ವಿರೋಧಿ ಅಲೆ ಇತ್ತೆ? ಎಷ್ಟು ಪ್ರಬಲವಾಗಿತ್ತು?
ಅಧಿಕಾರ ವಿರೋಧಿ ಅಲೆ ಎರಡು ಕಾರಣಗಳಿಂದ ಸೃಷ್ಟಿಯಾಗುತ್ತದೆ (1) ಸಮಸ್ಯೆ ಆಧರಿತ (2) ವ್ಯಕ್ತಿತ್ವ ಆಧರಿತ. ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಸರಕಾರ ವಿಫಲವಾಯಿತು. ಆ ಪ್ರದೇಶದ ಬಹಳಷ್ಟು ಶಾಸಕರು ಪಕ್ಷದವರು. ಸಹಜವಾಗಿ ಐದು ವರ್ಷಗಳಲ್ಲಿ ಅವರ ಮೇಲೆ ವಿರೋಧ ಸೃಷ್ಟಿ ಆಗೇ ಆಗೊತ್ತೆ. ಬಿಹಾರದಲ್ಲಿ ಆಗಿದ್ದು ಇದೇ. ಅಲ್ಲಿಯ ಬಿಜೆಪಿಯ ಶಾಸಕರು ಕೆಲಸ ಮಾಡಿರಲಿಲ್ಲ. ಕರ್ನಾಟಕಕ್ಕೆ ಬಂದರೆ ಅಂತಹ ಪ್ರದೇಶಗಳಲ್ಲಿ ಕೆಲವೊಂದು ಕಡೆ ಜನರು ಅಲ್ಲಿಯ ಶಾಸಕರಿಗೆ ಪ್ರಚಾರ ಮಾಡಲೂ ಬಿಡಲಿಲ್ಲವಂತೆ. ಪ್ರಚಾರಕ್ಕೆ ಬಂದವರನ್ನು ತಿರುಗಿ ಕಳುಹಿಸಿದ ವಾರ್ತೆಗಳು ಆಗಾಗ್ಗೆ ಬರುತ್ತಿತ್ತು. ಕೊಡಗಿನಲ್ಲಿ ಟಿಪ್ಪು ಜಯಂತಿಯ ಸಿಟ್ಟು, ಬೆಂಗಳೂರಿನಲ್ಲಿ ರೋಡು, ಟ್ರಾಫಿಕ್ ಸಮಸ್ಯೆ, ಧಾರವಾಡದಂತ ಶಾಂತ ಕ್ಷೇತ್ರದಲ್ಲಿ ಎಂಬತ್ತು ಪ್ರಕರಣ ನಡೆದರೂ ಏನೂ ಮಾಡದ ಅಲ್ಲಿಯ ಶಾಸಕರು, ಕರಾವಳಿಯಲ್ಲಿ ಕೋಮುಗಲಭೆ, ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ, ಹೀಗೆ ಒಂದು ತರಹದ ಅಧಿಕಾರ ವಿರೋಧಿ ಅಲೆ ಕಾಣುತ್ತಿತ್ತು. ಈ ವಿಷಯ ಬಿಜೆಪಿಗೆ ಹೆಚ್ಚು ಮತ ಕೊಟ್ಟಿರಬಹುದು. ಹಾಗೆಯೇ ಜೆಡಿಎಸ್‌ಗೆ ಕೂಡ! ಯಾವುದಕ್ಕೂ ಜೆಡಿಎಸ್ ಎಫೆಕ್ಟ್ ಕೊನೆಗೆ ಮತದ ಹಂಚಿಕೆಯನ್ನು ನಿರ್ಧರಿಸುತ್ತದೆ.

ಮತದ ಬ್ಯಾಂಕಿನಲ್ಲಿ ಯಾರದ್ದು ಠೇವಣಿ ಎಷ್ಟಿದೆ?
ಕಾಂಗ್ರೆಸ್ ಲಿಂಗಾಯತರನ್ನು ಒಡೆದು ಮತವನ್ನು ಗಿಟ್ಟಿಸಿಕೊಳ್ಳಲು ಮಾಡಿದ ಪ್ರಯತ್ನಗಳೇನು ಕಡಿಮೆಯಲ್ಲ. ಇವತ್ತು ಸಮೀಕ್ಷೆಗಳನ್ನು ಅದು ರಿವರ್ಸ್ ಆಗಿ ಇವರಿಗೆ ತೊಂದರೆ ಕೊಟ್ಟಿತೇ ಎನ್ನಬಹುದು. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಹೊರಗೆ ಬೀಳುತ್ತಿರುವಂತೆ ಬಿಜೆಪಿ ‘ತಾವು ಧರ್ಮದ ರಾಜಕೀಯ ಮಾಡುವುದಿಲ್ಲ’ ಎನ್ನಲು ಶುರುಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಿಲುವಿನ ವಿರುದ್ಧ ಬಹಳ ಆಕ್ರೋಶ ವ್ಯಕ್ತವಾದವು. ಕೆಲವರಿಗೆ ಬಿಟ್ಟರೆ ಯಾರಿಗೂ ಬೇರೆ ಧರ್ಮ ಬೇಕಿರಲಿಲ್ಲ. ಆ ಸಮಯದಲ್ಲಿ ಈ ಬಿಜೆಪಿ ಚುನಾವಣೆಯನ್ನು ಸೋತಿತೇ ಎನ್ನುವ ಪ್ರಶ್ನೆ ಏಳಲು ಆರಂಭವಾಗಿತ್ತು. ಆದರೆ ಕಾಂಗ್ರೆಸ್‌ನ ಪ್ರತಿಯೊಂದು ಡರ್ಟಿ ಟ್ರಿಕ್‌ಸ್ ವರವಾಗತೊಡಗಿತು. ಇದರಿಂದಾಗಿ ಲಿಂಗಾಯತರು, ಬ್ರಾಹ್ಮಣರು ಹೀಗೆ ಅವರದ್ದೇ ಒಂದು ಮತದ ಬ್ಯಾಂಕ್ ಇದೆ ಅದನ್ನು ಬಿಜೆಪಿ ಕಾಪಾಡಿಕೊಂಡು ಬಂದರು.

ಈ ಬಾರಿ ಟ್ರಿಪಲ್ ತಲಾಕ್ ಹಾಗೂ ಮೋದಿಯವರ ವಿಕಾಸದ ರಾಜನೀತಿಯ ಪರಿಣಾಮ ಮುಸ್ಲಿಂ ಮತಗಳು ಕೆಲವು ಬಿಜೆಪಿಗೆ ಬಂದಿರಬಹುದು. ಇನ್ನು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಂದರೆ ಅಲ್ಪಸಂಖ್ಯಾತರು, ಕುರುಬರು, ಹಾಗೂ ಇನ್ನಿತರೆ ಜಾತಿಯವರು. ಅವರಲ್ಲೂ ಕೂಡ ಕೆಲವೊಂದು ಮತ ಜೆಡಿಎಸ್ ಪಕ್ಷಕ್ಕೆ ಹೋಗಿರಬಹುದು ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ಜೆಡಿಎಸ್ ಎಂದೂ ತನ್ನ ಮತದಾರರ ಮೂಲವನ್ನು ಹೆಚ್ಚಿಸಿಲ್ಲ. ಓವೈಸಿಯನ್ನು ಕರೆದು ತಂದು ಯಾವ ಸಾಧನೆ ಮಾಡಿದರೋ ಗೊತ್ತಿಲ್ಲ, ಮಾಯಾವತಿಯ ಪ್ರಭಾವ ಎಷ್ಟು ಪರಿಣಾಮಕಾರಿ ಆಗಿರಬಹುದು? ಇವೆಲ್ಲವನ್ನೂ ಆಲೋಚಿಸಿ ನೋಡಿದರೆ ಬಿಜೆಪಿಗೆ ಗೆಲ್ಲುವ ಲಕ್ಷಣಗಳು ಸ್ಪಷ್ಟವೆನಿಸಿದೆ.

ಮತಗಳು ಎಷ್ಟು ಒಡೆದಿವೆ? ಯಾರು ಯಾರ ಮತಗಳನ್ನು ನುಂಗಿದರಬಹುದು?
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಎಸ್ಪಿ ಒಕ್ಕೂಟ, ಬಿಎಸ್ಪಿ, ಹಾಗೂ ಬಿಜೆಪಿ ಹೋರಾಟ ನಡೆಸಿದ್ದವು. ಬಿಹಾರದಲ್ಲಿ ಬಿಜೆಪಿ ಮತ್ತು ಆರ್‌ಜೆಡಿ-ಜೆಡಿ ಸ್ಪರ್ಧೆ. ಇವೆರಡಕ್ಕೂ ಹಾಗೂ ಕರ್ನಾಟಕ ಬಹಳ ಸಾಮ್ಯತೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಇತ್ತು. ಕೆಲವೊಮ್ಮೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸೂಚಿತ ಮೈತ್ರಿ ನಡೆದಿತ್ತು ಅನಿಸುವ ಹಾಗಿತ್ತು. ಕೆಲವೊಂದು ಕ್ಷೇತ್ರದಲ್ಲಿ ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ಜೆಡಿಎಸ್‌ಗೆ ಮತ ಹಾಕಿರಬಹುದು. ಅಲ್ಲಿ ಬಿಜೆಪಿಗೆ ಗೊತ್ತು ತಾನು ಬರುವುದಿಲ್ಲ ಎಂದು. ಹೀಗಾಗಿ ಬಿಜೆಪಿ ಈ ಸಲ ಇಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಿ ತನ್ನ ನಡೆಯನ್ನು ಇಟ್ಟಿದೆ. ಬಿಹಾರದ ಸೋಲು ಹಾಗೂ ಉತ್ತರ ಗೆಲುವು ಬಿಜೆಪಿಗೆ ಬಹಳಷ್ಟು ಕಲಿಕೆ ನೀಡಿದೆ.

ಕೆಲಸ ಮಾಡದೆ ಅಧಿಕಾರಕ್ಕೆ ಮತ್ತೊಮ್ಮೆ ಬರುವುದು ಬಹಳ ಕಷ್ಟ, ಅದರಲ್ಲೂ ವಿರೋಧಿಗಳು ಒಟ್ಟಿಗೆ ನಿಂತಾಗ ಅದು ಅಸಾಧ್ಯ! ಮತಗಳನ್ನು ಒಡೆಯುವುದೂ ಗೊತ್ತಿರಬೇಕು, ಹಾಗೆಯೇ ಮತಗಳನ್ನು ಕೂಡಿಸುವುದು. ಬಿಜೆಪಿಯು ಕಾಂಗ್ರೆಸ್ ಪಕ್ಷದ ಮತವನ್ನು ಜೆಡಿಎಸ್ ಬಳಸಿ ಒಡೆದ ಹಾಗಿದೆ. ಅದೇ ಅಲ್ಪಸಂಖ್ಯಾತರ ಮತವನ್ನು ತನ್ನೆಡೆ ಸೆಳೆಯುವತ್ತ ಯಾವುದೇ ಪ್ರಯತ್ನ ಬಿಟ್ಟಂತೆ ಕಾಣುತ್ತಿಲ್ಲ. ಆದರೂ ಈ ಸಮೀಕರಣದ ಕ್ಲಿಷ್ಟತೆ ಹೇಗೆ ಅಂದರೆ ಸಮೀಕ್ಷೆಗಳು ಹೇಳುವಂತೆ ಪಕ್ಷಕ್ಕೆ ಅತೀ ಹೆಚ್ಚು ಬಹುಮತ ಸಿಗುವ ಸಂಭವ ಕಡಿಮೆ.

ಸರಕಾರದ ಐದು ವರ್ಷದ ಆಡಳಿತ ಚುನಾವಣೆಗೆ ಪೂರಕವಾಗಿತ್ತಾ?
ಒಂದು ವಿಡಿಯೋ ಬಂದಿತ್ತು. ಅದರಲ್ಲಿ ರಾಜದೀಪ್ ಸರದೇಸಾಯಿ ಕೇಳುತ್ತಾರೆ, ‘ಅನ್ನ ಭಾಗ್ಯದಿಂದ ನೀವೆಲ್ಲಾ ಸಂತುಷ್ಟರಿಲ್ಲವೇ?’ ಎಂದು. ಅದಕ್ಕೆ ಜನ ಆ ಅಕ್ಕಿಯನ್ನು ತಂದು ತೋರಿಸುತ್ತಾ ‘ಈ ಅಕ್ಕಿ ಮನುಷ್ಯರಿಗೆ ತಿನ್ನಲು ಕೊಟ್ಟಿದ್ದಲ್ಲ’ ಎನ್ನುತ್ತಾರೆ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಹೀಗೆ ಎಷ್ಟೋ ಭಾಗ್ಯಗಳನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ, ಆದರೆ ಜಯಂತಿ, ಪೋಲಿಸ್ ಅಧಿಕಾರಿಗಳ ಸಾವು ಇಂತಹ ಬ್ಲಂಡರ್ ಕೂಡ ನಡೆದಿದೆಯಲ್ಲ. ಮಹಾದಾಯಿ ವಿಷಯಕ್ಕೆ ಬಂದಾಗ ಸಿದ್ದರಾಮಯ್ಯ ಬಿಜೆಪಿ ಜೊತೆ ಒಟ್ಟುಗೂಡಿ ‘ಗೋವಾ ಮುಖ್ಯಮಂತ್ರಿ ಜೊತೆ ಮಾತಾಡೋಣ’ ಎನ್ನುವ ರಾಜತಂತ್ರ ಮಾಡಬಹುದಿತ್ತು. ಆದರೆ ಇವರು ಮೋದಿಜಿ ಮೇಲೆ ಗೂಬೆ ಕೂರಿಸಿದರು.

ಕ್ಯಾಂಟೀನ್ ಶುರು ಮಾಡಿದ್ದು ಚುನಾವಣೆ ಪ್ರಚಾರಕ್ಕೆ ಅಂತಾ ಓಪನ್ ಆಗಿ ಕಾಣುತ್ತಿತ್ತು. ಸರಕಾರಕ್ಕೆ ಇದು ಸಾಧನೆ, ಜನರಿಗೆ ಇದು ಶೋಷಣೆ. ಕೇಸರಿ ಧ್ವಜ ಹಾರಲು, ಕಮಲ ಅರಳಲು ಸಹಾಯವಾಗಬಹುದಾದ ಮೆಟ್ಟಿಲು ಅಂದರೆ ಸರ್ಕಾರದ ವೈಫಲ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಹಿಂದೂಗಳನ್ನು ‘ಅತಿಯಾಗಿ’ ಒಡೆಯಲು ಪ್ರಯತ್ನ ಪಟ್ಟಿದ್ದು, ಅನಾವಶ್ಯಕವಾಗಿ ಮುಸ್ಲಿಮರನ್ನು ಮೆಚ್ಚಿಸಲು ನಾಟಕವಾಡಿದ್ದು ಕಾಂಗ್ರೆಸ್ ಸರ್ವನಾಶಕ್ಕೆ ಕಾರಣವಾಗದೇ ಇರದು. ಇಷ್ಟೆಲ್ಲಾ ನಡೆದರೂ ಜೆಡಿಎಸ್ ಯಾವತ್ತೂ ಸರ್ಕಾರವನ್ನು ವಿರೋಧಿಸಿದ್ದು ಕಾಣಿಸಿಲೇ ಇಲ್ಲ, ವಿರೋಧ ಪಕ್ಷ ಇದೆ ಅಂತ ಜನರಿಗೆ ಗೊತ್ತೇ ಆಗುತ್ತಿರಲಿಲ್ಲ. ಇವನ್ನೆಲ್ಲ ನೋಡಿದರೆ ಎಲ್ಲೋ ಗೌಡರ ಹಾಗೂ ಸಿದ್ದರಾಮಯ್ಯನವರ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿ ತನ್ನ ಬಲದ ಮೇಲೆ ಸರಕಾರ ಮಾಡುವ ಶಕ್ಯತೆ ಮಟ್ಟಿಗೆ ಸತ್ಯ ಅನಿಸುತ್ತದೆ. ಏನೇ ಹೇಳಿ ಇದು ಕರ್ನಾಟಕದಲ್ಲಿ ಕಮಲ ಅರಳುವ ಸಮಯ!

Leave a Reply

Your email address will not be published. Required fields are marked *

3 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top