ಸಿಎಂಗೆ ಸೌಭಾಗ್ಯವಾಗಿ ಪರಿಣಮಿಸಲಿದೆಯೆ ಸಮೀಕ್ಷೆ? 

Posted In : ಸಂಗಮ, ಸಂಪುಟ

-ತುರುವೇಕೆರೆ ಪ್ರಸಾದ್

ಇತ್ತೀಚೆಗೆ ಮಾಧ್ಯಮಗಳು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಮೇಲುಗೈ ಸಾಧಿಸುತ್ತದೆ ಎಂಬ ಅಂಶ ಹೊರಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ಉತ್ಸಾಹ, ಸಂತೋಷದಿಂದ ಉಬ್ಬಿ ಹೋಗಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಟುಸ್ಸೆಂದ  ಬೆಲೂನ್ ತರಹ ಧರಾಶಾಯಿಯಾಗಿ ಮಕಾಡೆ ಮಲಗಿವೆ.  ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಾ ಅಭೂತಪೂರ್ವ, ಚರಿತ್ರಾರ್ಹ ಯಶಸ್ಸಿನ ಕನವರಿಕೆಯಲ್ಲಿದ್ದಾರೆ.  ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರದ ಝಲಕ್‌ಗಳ ಒಂದು ಫ್ಲಾಶ್ ಬ್ಯಾಕ್ ಮೇಲೆ ಕಣ್ಣಾಡಿಸಿ ಬರೋಣ ಬನ್ನಿ!

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ 2013ರಲ್ಲಿ ಉತ್ತಮ ಆಡಳಿತ ನೀಡುವ ಆಶ್ವಾಸನೆಯೊಂದಿಗೆ ಅಧಿಕಾರ ಸ್ವೀಕರಿಸಿತು. ಹಾಗೆಂದು ಅದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಉತ್ತಮ ಆಡಳಿತವೇನೂ ಆಗಿರಲಿಲ್ಲ.ವೈಯಕ್ತಿಕವಾಗಿ ವಿರೋಧಪಕ್ಷಗಳು ಸಿದ್ದರಾಮಯ್ಯನವರ ಮೇಲೆ ಯಾವುದೇ ಭ್ರಷ್ಟಾಚಾರ, ಹಗರಣದ ಆರೋಪ ಸಾಬೀತು ಮಾಡಲಾಗದಿದ್ದರೂ  ಆಡಳಿತದಲ್ಲಿ ಕೆಳ ಹಂತದಿಂದ ಮೇಲಿನ ಹಂತದವರೆಗೆ ಭ್ರಷ್ಟಾಚಾರ,ಲಂಚ ರುಷುವತ್ತುಗಳೇನೂ ಕಡಿಮೆ ಆಗಲಿಲ್ಲ. ಹಾಗೆ ಹೇಳಬೇಕೆಂದರೆ ಅಧಿಕಾರಿಗಳಿಗೆ ಹಿಂದೆ ಇದ್ದ ಭಯವೂ ಈ ಸರಕಾರದಲ್ಲಿ ಹೊರಟು ಹೋಯಿತು. ಸ್ವತಃ ಸಿಎಂ ಸಾಹೇಬರೇ ಎಸಿಬಿ ರಚನೆ ಮಾಡಿ ಲೋಕಾಯುಕ್ತವನ್ನು ಹಲ್ಲಿಲ್ಲದ ಕಚ್ಚದ ಹೊಳ್ಳೆಪಿಂಗ ಮಾಡಿಬಿಟ್ಟರು. ಸಿದ್ದರಾಮಯ್ಯನವರ ಮೇಲೇ ಹುಬ್ಲೋಟ್, ಡಿನೋಟಿಫಿಕೇಶನ್ ಸೇರಿದಂತೆ ಎಸಿಬಿಯಲ್ಲಿ 30ಕ್ಕೂ ಹೆಚ್ಚು ಕೇಸು ದಾಖಲಾದವು.

ಅರ್ಕಾವತಿ, ಭೂಪಸಂದ್ರದ ಡಿನೋಟಿಫಿಕೇಶನ್ ಗುಮ್ಮ ಗುಡುಗಿ ನಾಳೆ ಬೆಳಿಗ್ಗೆಯೇ ಅವರ  ಸಿಎಂ  ಎಗರಿ ಹೋಗುವುದೇನೋ ಎಂಬಂತೆ ಆರ್ಭಟಿಸಿದವು. ಆದರೆ ಸದ್ದಿಲ್ಲದೇ ಲೋಕಾಯುಕ್ತ ವ್ಯಾಪ್ತಿಯಲ್ಲಿದ್ದ ರಾಜಕೀಯದವರ ಮೇಲೂ ಆರೋಪವಿದ್ದ 700ಕ್ಕೂ ಹೆಚ್ಚು ಪ್ರಕರಣಗಳು ಎಸಿಬಿಗೆ ವರ್ಗಾವಣೆಗೊಂಡು ಧೂಳು ಹೊದ್ದು ಮಲಗಿಬಿಟ್ಟವು.ಸಿದ್ದರಾಮಯ್ಯನವರ ಆಡಳಿತದಲ್ಲಿ ಸಾಲು ಸಾಲು ಎಡವಟ್ಟುಗಳು ಆಗುತ್ತಲೇ ಹೋದವು. ಡಿ.ಕೆ.ರವಿ ಆತ್ಮಹತ್ಯೆ ವಿಚಾರದಲ್ಲಿ ಸರಕಾರದ ನಡೆ ವಿರುದ್ಧ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಡಿವೈಎಸ್ಪಿ ಗಣಪತಿ ಅವರ ಪ್ರಕರಣದಲ್ಲಂತೂ ಸರಕಾರ ತೀವ್ರ ಮುಜಗರ ಅನುಭವಿಸಿತು. ಗೃಹಸಚಿವ ಜಾರ್ಜ್ ರಾಜೀನಾಮೆಯನ್ನೂ ಕೊಡಬೇಕಾಯಿತು. ಸಿಐಡಿ  ತಿಪ್ಪೆ ಸಾರಿಸಿ ಜಾರ್ಜ್ ಅವರಿಗೆ ವಾಪಸ್ ಸಚಿವ ಸ್ಥಾನ ದಯಪಾಲಿಸಿದ್ದು ತಪ್ಪು ಎಂಬುದು ಸುಪ್ರೀಂ ಕೊರ್ಟ್ ಸಿಬಿಐಗೆ ಪ್ರಕರಣ ವಹಿಸಿದಾಗ ಜನರಿಗೆ ಮನವರಿಕೆ ಆಯಿತು.  ವಿರೋಧಪಕ್ಷಗಳು ಜಾರ್ಜ್ ಅವರ ರಾಜೀನಾಮೆಗೆ ಪಟ್ಟು ಹಿಡಿದು ಬೆಳಗಾವಿ ಅಧಿವೇಶನದ ಒಂದೆರಡು ದಿನಗಳ ಕಲಾಪವೇ ಢಮಾರ್ ಅಂದಿತು.

ಪ್ರಶ್ನೆಪತ್ರಿಕೆಗಳು ಪದೇ ಪದೇ ಲೀಕಾಗಿ ಕಿಮ್ಮನೆ ಸುಮ್ಮನೆ ಮನೆಗೆ ಹೋದರು. ಪೋಲಿಸ್, ಜೈಲು ಆಡಳಿತದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದು  ಮಾಜಿ ಡಿಐಜಿ ರೂಪಾ ಮತು  ಡಿವೈಎಸ್ಪಿ ಅನುಪಮಾ ಶೆಣೈ ಅವರ ಪ್ರಕರಣಗಳಲ್ಲಿ ಸಾಬೀತಾಯಿತು. ಮಹದಾಯಿ, ಮೇಕೆದಾಟು, ನೇತ್ರಾ ತಿರುವು ಯಾವ ಯೋಜನೆಯೂ  ಪ್ರಗತಿ ಕಾಣಲಿಲ್ಲ. ಜಾಗತಿಕ ಬಂಡವಾಳ ಹೂಡಿಕೆಗೆ ಬಂಡವಾಳಗಾರರ ಸಭೆ ನಡೆಯಿತು.ಆದರೆ ನಿರೀಕ್ಷಿಸಿದಷ್ಟು ಬಂಡವಾಳ ಮಾತ್ರ ಹರಿದು ಬರಲಿಲ್ಲ.1.92 ಲಕ್ಷ ಕ್ಯುಬಿಕ್ ಮೀಟರ್‌ನಷ್ಟು ಮರಳಿನ ಅಕ್ರಮ ಸಾಗಣೆ ನಡೆದಿದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆದರು. ಕಾಂಗ್ರೆಸ್ ಹೈಕಮಾಂಡ್‌ಗೆ ಸೂಟ್‌ಕೇಸ್‌ಗಳಲ್ಲಿ ಲಂಚ ಹೋಗಿದೆ ಎಂದು ಡೈರಿಗಳು ಹಾರಾಡಿದವು. ಒಮ್ಮೆ ಇಡೀ ಬೆಂಗಳೂರೇ ಕಸದ ತಿಪ್ಪೆಯಾದರೆ   ಧೋ ಎಂದು ಸುರಿದ ಮಸಲಧಾರೆಗೆ  ಬೆಂಗಳೂರು ರಸ್ತೆಗಳು ಕಿತ್ತು ಕೆರ ಹಿಡಿದು ಜನ ಗುಂಡಿಗೆ ಬಿದ್ದು  ಸರಕಾರಕ್ಕೆ ಹಿಡಿಶಾಪ ಹಾಕಿದರು.

ಸಿದ್ದರಾಮಯ್ಯನವರ ಆಡಳಿತದ ಕಾಲದಲ್ಲಿ ಮುಷ್ಕರ ಬಂದ್‌ಗಳಿಗೇನೂ ಕೊರತೆ ಇರಲಿಲ್ಲ. ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ವೈದ್ಯರು,ಸಾರಿಗೆ ಸಿಬ್ಬಂದಿ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು  ಎಂದಿನಂತೆ ಇವರ ಕಾಲದಲ್ಲೂ ಮುಷ್ಕರ ನಡೆಸಿದರು. ಕಾರ್ಮಿಕ ಸಂಘಟನೆಗಳ ಅಗಾಧ ಶಕ್ತಿ ಮೆರೆದ ಗಾರ್ಮೆಂಟ್ ಕಾರ್ಮಿಕರ ಮುಷ್ಕರ ಹಿಂಸಾಚಾರಕ್ಕೂ ತಿರುಗಿತು. ವಿಶೇಷವೆಂದರೆ ಸಿದ್ದರಾಮಯ್ಯನವರ ಕಾಲದಲ್ಲಿ  ಮುಷ್ಕರಕ್ಕಿಳಿದದ್ದು. ಅದನ್ನು ಅಧಿಕಾರ ಮತ್ತು ಕಾನೂನಿನ ಮೂಲಕ ಹತ್ತಿಕ್ಕಲಾಯಿತು. ಇನ್ನು ಸಿದ್ದರಾಮಯ್ಯನವರ ಆಡಳಿತದ ಮಹತ್ವಾಕಾಂಕ್ಷಿ ಯೋಜನೆಯೇ ಹಿಂದುತ್ವವನ್ನು ಹತ್ತಿಕ್ಕುವುದು ಎಂಬಂತಾಗಿತ್ತು. ಇಡೀ ಹಿಂದುತ್ವವೇ ದಂಗೆ  ಎದ್ದಿದೆ ಎನ್ನುವ ರೀತಿಯಲ್ಲಿ ಈ ಸರಕಾರ ಹಿಂದೂಗಳ ದಮನಕ್ಕೆ ಹಲವು ಅಂಶದ ಹಿಡನ್ ಅಜೆಂಡಾವನ್ನೇ ರೂಪಿಸಿಕೊಂಡು  ಯುದ್ಧ ಸಾರಿ ಬಿಟ್ಟಿತು.

ಹಿಂದುತ್ವದ ಸಾರ, ವಿಚಾರ, ಆಚಾರ  ಏನೂ ಗೊತ್ತಿಲ್ಲದ ಹಿಂದೂ ವಿಚಾರವಾದಿಗಳು ಹಿಂದೂಗಳನ್ನ, ಹಿಂದುತ್ವವನ್ನ ವಾಚಾಮಗೋಚರವಾಗಿ ಬೈದರು. ವಿಚಾರವಾದಿಗಳ ಕೊಲೆಗಳ ಆರೋಪವನ್ನು ಹಿಂದೂ  ಮೇಲೆ ಯಾವುದೇ ಅಳುಕು, ಮುಲಾಜಿಲ್ಲದೆ ಹೊರಿಸಲಾಯಿತು. ಇಷ್ಟಾದರೂ ಕಲಬುರ್ಗಿ, ಗೌರಿ ಹಂತಕರು ಪತ್ತೆ ಆಗಲೇ ಇಲ್ಲ.ಸಿಎಂ ಹಿಂದೂಗಳನ್ನು ಹೀಗಳೆಯುತ್ತಲೇ ಹಲವು ಸ್ವಾಮಿಗಳಿಗೆ ಔತಣ ಹಾಕಿಸಿದರು.ಅವರಿಗೆಲ್ಲಾ ಸೈಟು ಕೊಟ್ಟರು,  ಅನುದಾನದ ಭರವಸೆ ಕೊಟ್ಟರು. ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೇನೆಂದು ಅಧಿಕಾರಕ್ಕೆ ಬಂದವರು ಎಡ-ಬಲದ ಗೊಂದಲಗಳನ್ನು ಹಾಗೇ ಜೀವಂತವಾಗಿಟ್ಟರು.   ಹಿಂದೂಗಳ, ಹಿಂದೂ ಸಂಘಟನೆಗಳ ಕಾರ್ಯಕರ್ತರ  ಸಾಲು ಸಾಲು ಕೊಲೆಗಳಾದರೂ ಸರಕಾರಕ್ಕೆ ಅವರೂ ಮನುಷ್ಯರು ಎನಿಸಲೇ ಇಲ್ಲ.

ಸತ್ತ, ಎಮ್ಮೆ, ಹಸುಗಳಿಗೆ  ಒಂದಿಷ್ಟು ಪರಿಹಾರ ಬಿಸಾಕಿ ಕೈತೊಳೆದುಕೊಳ್ಳಲಾಯಿತು. ಅವರನ್ನು  ಪಾಕಿಸ್ತಾನದವರು ಎಂಬಂತೆ ನಡೆಸಿಕೊಂಡು ಅನ್ಯ ಕೋಮಿನವರನ್ನು ಬಾಚಿ ತಬ್ಬಿ ಮುತ್ತಿಕ್ಕಿತು. ಬಹುಸಂಖ್ಯಾತ ಹಿಂದೂಗಳು ವಿರೋಧಿಸಿದ, ಕಳೆದ ವರ್ಷ ಒಂದು ಜೀವವನ್ನೇ ಬಲಿಪಡೆದಿದ್ದ  ಟಿಪ್ಪೂ ಜಯಂತಿಯನ್ನು  ಹಠ ಹಿಡಿದು ಸಂಭ್ರಮದಿಂದ ಆಚರಿಸಿತು. ಪದೇ ಪದೇ ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು.  ಮುಸ್ಲಿಂ ಕೋಮು ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಾಯಿತು. ಅದೇ ಒಬ್ಬರು ಹಿಂದೂ ಸ್ವಾಮಿಗಳು ಪಾಪ ಕೇಸಿನ ಮೇಲೆ  ಹಾಕಿಸಿಕೊಂಡು ನರಳಿದರೂ ತಲೆಹಾಕದಷ್ಟು ನ್ಯಾಯ ನಿಷ್ಠುರತೆಯನ್ನು ಮೆರೆಯಿತು. ಸ್ವತಃ ಸಿಎಂ ಸಾಹೇಬರೇ ಮೀನು ತಿಂದು ಹೋದರೆ ಮಂಜುನಾಥ ಸಿಟ್ಟುಕೊಳ್ಳುತ್ತಾನಾ? ಎಂದು  ಮುಸ್ಲಿಮರು ಅಜಾನ್ ಮಾಡುವಾಗ ಚಪ್ಪಲಿ ಬಿಚ್ಚಿ ಅಲ್ಲಾನಿಗೆ ಶ್ರದ್ಧೆ, ಭಕ್ತಿ ಮೆರೆದರು. ಹಿಂದೂ ದೇವರುಗಳನ್ನು ಅವಹೇಳನ ಮಾಡಿದವರಿಗೆ, ಭಗವದ್ಗೀತೆ ಸುಡಿ ಎಂದವರಿಗೆ, ಬಹುಸಂಖ್ಯಾತ ಹಿಂದೂಗಳ ಭಾವನಾತ್ಮಕ ದೈವ ಮರ್ಯಾದಾ ಪುರುಷೋತ್ತಮನ ಮರ್ಯಾದೆ ತೆಗೆದವರಿಗೆ ಪ್ರಶಸ್ತಿ ನೀಡಿ ಮೆರೆಸಲಾಯಿತು. ಕನ್ನಡಮ್ಮನನ್ನೇ ಕ್ಯಾರೇ ಎನ್ನದವರೆಲ್ಲಾ ಸಾಹಿತ್ಯದ ಸಾರಥಿಗಳಾಗಿ ರಥ ಏರಿ  ಹಾಕಿಸಿಕೊಂಡರು.

ಇಷ್ಟು ಸಾಲದು ಎಂಬಂತೆ  ಮಹಾನ್ ಸಮಾಜವಾದಿ, ಲೋಹಿಯಾವಾದಿ, ಜಾತ್ಯತೀತವಾದಿ  ಎನಿಸಿಕೊಂಡಿದ್ದ ಸಿದ್ದರಾಮಯ್ಯನವರು ಧರ್ಮಗಳನ್ನೇ ಒಡೆದು ಆಳುವ ಅತಿಚಾಣಾಕ್ಷತನ ಮೆರೆದರು.  ಎರಡು ಗುಂಪಿನ  ಸ್ವಾಮಿಗಳು ದಾರಿಯಲ್ಲಿ ನಿಂತು ಬೈದಾಡಿ, ಚಪ್ಪಲಿ ತೂರಿ ಜಗಳ ಆಡಿಕೊಂಡಿದ್ದನ್ನು ನೋಡಿ ಮುಸಿ ಮುಸಿ ನಕ್ಕರು. ಸಿದ್ದರಾಮಯ್ಯನವರು ತಮ್ಮ ಪಕ್ಷದವರಲ್ಲೇ ವಿರೋಧ ಕಟ್ಟಿಕೊಂಡರು. ಈಗಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರಂತೂ ಸರಕಾರದ ಕಾರ್ಯವೈಖರಿ ವಿರುದ್ಧ ತಮ್ಮ ಹಳೇ ಮೊಂಡು ಕತ್ತಿ ಝಳಪಿಸುತ್ತಲೇ ಬಂದರು. ಡಾ.ಜಿ.ಪರಮೇಶ್ವರ್  ಸಿದ್ದರಾಮಯ್ಯ ನಡುವಿನ ಶೀತಲ ಸಮರ ಇನ್ನೂ ಮುಗಿದೇ ಇಲ್ಲ. ಕೈ ಕಚ್ಚುತ್ತವೆ ಎಂದು ಗೊತ್ತಾದ ತಕ್ಷಣ ಸಿಎಂ ಸಾಹೇಬರು ಅಂತಹವರನ್ನು  ಮುಲಾಜಿಲ್ಲದೆ ಹೊರಗಟ್ಟಿ ಕೈ ತೊಳೆದುಕೊಂಡರು.  ಕಾಂಗ್ರೆಸ್‌ಗೆ ಕೈ ಹಿಡಿದು ಕರೆತಂದ ವಿಶ್ವನಾಥ್ ಸಾಹೇಬರಿಗೇ ಸೋಡಾಚೀಟಿ ಕೊಟ್ಟರು. ಶ್ರೀನಿವಾಸ್ ಪ್ರಸಾದ್‌ಗೆ ಗೇಟ್‌ಪಾಸ್ ಕೊಟ್ಟರು.

ರೆಬೆಲ್  ಸ್ಟಾರ್ ಅಂಬರೀಶ್ ಡಂಬಲ್‌ಸ್  ಕುಟ್ಟುವಂತಾಯಿತು. ಕಾಂಗ್ರೆಸ್‌ನ ಭೀಷ್ಮ ಕೃಷ್ಣ ಪಾಂಚಜನ್ಯ ಶಂಖ ಊದಿ ಸಿದ್ದರಾಮಯ್ಯನವರನ್ನು  ಗೊರಕೆಯಿಂದ  ಎಬ್ಬಿಸಲಾಗದೆ ಬಿಜೆಪಿ ಪಾಳಯದತ್ತ ಹೋದರು. ರಾಜ್ಯದಲ್ಲಿ ಎರಡು  ಇನ್ನಿಲ್ಲದಂತೆ ಬರ ಕಾಡಿತು. ರೈತರು ಮೇಲಿಂದ ಮೇಲೆ ಆತ್ಮಹತ್ಯೆ ಮಾಡಿಕೊಂಡರು. ಕಳೆದ ನಾಲ್ಕು ವರ್ಷಗಳಲ್ಲಿ 2573 ರೈತರು ಆತ್ಮಹತ್ಯೆ ಮಾಡಿಕೊಂಡರು.  ಸರಕಾರ 1700 ಎಂದಿತು. ಸತ್ತವರ ಮನೆಗೆ ಸಚಿವರ, ಅಧಿಕಾರಗಳ ಪೆರೇಡ್ ನಡೆಯಿತು. ಹಾರ ಹಾಕಿ ಪರಿಹಾರ ಘೋಷಿಸಿ ಕೈ ತೊಳೆದುಕೊಳ್ಳಲಾಯಿತು. ಬರ ಪರಿಹಾರಕ್ಕೆ ಕೇಂದ್ರ ಹಣ ನೀಡಲಿಲ್ಲ ಎಂದು ದೂರಿದರು. ಪ್ರಧಾನಿ ಮೋದಿಯೊಂದಿಗೆ ಚೀನಾ ಪ್ರವಾಸಕ್ಕೆ ಬಿಲ್‌ಕುಲ್ ಹೋಗಲ್ಲ ಎಂದು ಕೂತು ಬಿಟ್ಟರು ಸಿದ್ದರಾಮಯ್ಯ. ರಾಜ್ಯದ ಜನತೆಗೋಸ್ಕರವಾಗಿಯಾದರೂ  ಉತ್ತಮ ಬಾಂಧವ್ಯ ಹೊಂದಿ ರಾಜ್ಯಕ್ಕೆ ಸಾಕಷ್ಟು ಅನುಕೂಲ ಮಾಡಿಕೊಳ್ಳುವುದು ಬಿಟ್ಟು ಮೋದಿಯನ್ನು ಹೀಗಳೆಯುತ್ತಾ  ಕಾಲಕಳೆದರು.

ಅಷ್ಟೆಲ್ಲಾ ಯಾಕೆ ರಾಜ್ಯಸರಕಾರದ ಕಾರ್ಯವೈಖರಿಯನ್ನು ಕಂಡು ರೋಸಿಹೋದ ಹೈಕೋರ್ಟೇ ಇಂತಹ ಕೆಟ್ಟ ಆಡಳಿತ ನೋಡಿಲ್ಲ ಎಂದು ಹೇಳಿಬಿಟ್ಟಿದೆ.ಇಷ್ಟೆಲ್ಲಾ ಆದ ಮೇಲೂ ಈಗ ಮತದಾರರು ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ಅದರಲ್ಲೂ ಸಿದ್ದರಾಮಯ್ಯನವರಿಗೆ ಜೈ ಎಂದಿದ್ದಾರೆ. ಈ ಮತದಾರರಲ್ಲಿ  ನೊಂದ,ಶೋಷಿತ ಹಿಂದೂಗಳು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರು, ಕೊಲೆಯಾದವರ ಸಂಬಂಧಿಕರು, ಸಿದ್ದರಾಮಯ್ಯನವರ ರಾಜಕೀಯ  ನೀತಿಗಳನ್ನು ಟೀಕಿಸಿಕೊಂಡು ಬಂದವರು ಎಲ್ಲರೂ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ  ಘಟನೆಗಳನ್ನೆಲ್ಲಾ ತಮ್ಮ ಸಾಕ್ಷೀಪ್ರಜ್ಞೆಯಲ್ಲಿ ತುಂಬಿಕೊಂಡ ಲಕ್ಷಾಂತರ ಯುವಕರಿದ್ದಾರೆ,ವಿದ್ಯಾವಂತರಿದ್ದಾರೆ, ಬುದ್ಧಿವಂತರಿದ್ದಾರೆ, ವಿಚಾರವಂತರಿದ್ದಾರೆ.

ಆಡಳಿತವಿರೋಧಿ ಅಲೆ, ರೈತವಿರೋಧಿ ಅಲೆ, ಆಂತರಿಕ ವಿರೋಧ, ಹಿಂದೂ ಪರ ಅಲೆ, ಮೋದಿ ಅಲೆ, ಅಮಿತ್ ಶಾ ಬಲೆ ಯಾವುದೂ ವರ್ಕ್‌ಔಟ್ ಆಗುವ ಹಾಗೆ ಕಾಣುತ್ತಿಲ್ಲ. ಜೆಡಿಎಸ್‌ನ ಕುಮಾರಸ್ವಾಮಿಯವರು ಯಾವುದೇ ವಿಷಯವನ್ನು ತಾರ್ಕಿಕ ಅಂತ್ಯಕ್ಕೊಯ್ಯದೆ ಸರಕಾರದ ಜತೆ ರಾಜಿ ಮಾಡಿಕೊಂಡರು. ಬಿಜೆಪಿಯವರು ತಮ್ಮ ತಮ್ಮಲ್ಲೇ ರಾಜಿ  ಇದರ ಪ್ರತಿಫಲ ಕಾಂಗ್ರೆಸ್ ಸರಕಾರದ ವಿರುದ್ಧ ಕಂತೆ ಕಂತೆ ಚಾರ್ಜ್‌ಶೀಟ್ ಹಾಕಿದವರು ಈಗ ರಬ್ಬರ್‌ಶೀಟ್ ಹುಡುಕುವಂತಾಗಿದೆ. ಸಿದ್ದರಾಮಯ್ಯನವರು ಓಲೈಕೆ ಮತ್ತು   ಪೂರೈಕೆಯ ರಾಜಕೀಯ ಚಾಣಾಕ್ಷತನ ಮೆರೆದಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದೀಭಾಗ್ಯ ಹೀಗೆ ಭಾಗ್ಯಗಳ ಋಣದಲ್ಲಿ ಜನರನ್ನು ಕಟ್ಟಿ ಹಾಕಿದ್ದಾರೆ. ಈಗ ಕರ್ನಾಟಕದ ಸಾಲ ರೂ. 2.42 ಲಕ್ಷ ಕೋಟಿ. ಸಿದ್ದರಾಮಯ್ಯನವರು ತಮ್ಮ ಕಾಲಾವಧಿಯಲ್ಲಿ ಮಾಡಿದ ಸಾಲ ರೂ. 1.28ಲಕ್ಷ ಕೋಟಿ.  ತಮ್ಮ ಭಾಗ್ಯಗಳ ಪ್ರಚಾರ ಮಾಡಿಕೊಳ್ಳಲು ಖರ್ಚು ಮಾಡಿದ್ದು  ಕೋಟಿ. ಭಾಗ್ಯಗಳ ಋಣದಲ್ಲಿ ಮುಳುಗಿ ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ಎಲ್ಲವನ್ನು ಮರೆತು   ತಮ್ಮನ್ನೇ ಮತ್ತೆ ಬೆಂಬಲಿಸಲು ಹೊರಟ ಮತದಾರರನ್ನು ಪಡೆದಿರುವುದು ಸಿದ್ದರಾಮಯ್ಯನವರ ಪರಮ ಸೌಭಾಗ್ಯವೇ ಸರಿ!

Leave a Reply

Your email address will not be published. Required fields are marked *

5 × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top