ಭಾಗ್ಯವಂತರೇ, ‘ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ’ 

Posted In : ಸಂಗಮ, ಸಂಪುಟ

ಇತ್ತೀಚಿನ ದಿನಗಳಲ್ಲಿ  ಮೋದಿಯಯವರನ್ನು ಅಣಕಿಸುವಂಥ ಕೆಲವು ಪೋಸ್ಟ್‌‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ದೇಶದ ಅಭಿವೃದ್ಧಿಯನ್ನು ಗಮನಿಸುತ್ತಿರುವವರು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿರುವುದು ನಿಜ. ಮೋದಿ ಭಕ್ತರಿಗಂತೂ ಮೋದಿ ಹೇಳಿದ್ದು, ಮಾಡಿದ್ದೆಲ್ಲವೂ ಸರಿಯಿರಬಹುದು! ಆದರೆ ಮೋದಿಯನ್ನು ವಿರೋಧಿಸುವವರು ಹಾಗೂ ವಿರೋಧಿಸಲಿಕ್ಕಾಗಿಯೇ ವಿರೋಧಿಸುವವರು ನರೇಂದ್ರ ಮೋದಿಯವರನ್ನು ಪವಾಡ ಪುರುಷನಂತೆ ನೋಡುತ್ತಿರುವುದೇ ಆಶ್ಚರ್ಯ ಉಂಟು ಮಾಡುತ್ತಿದೆ.  ಇದಕ್ಕೆ ಈ ಕೆಳಗಿನ ಪೋಸ್ಟ್‌ ಒಂದು ಚಿಕ್ಕ ನಿದರ್ಶನ ಅಷ್ಟೇ.   ಹಾಸಿಗೆ ನಿಮ್ಮದು, ನಿದ್ದೆಯೂ ನಿಮ್ಮದು; ಸ್ಮಾರ್ಟ್ ಸಿಟಿ ಕನಸು ನಿಮ್ಮದೇ ಕನಸು ಕಾಣುತ್ತಿರಿ ಎಂದು ಹೀಯಾಳಿಸುವ ಮುನ್ನ ಎರಡು ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಸಾಧ್ಯವೇ?

ಎನ್ನುವುದರ ಅರಿವಾದರೂ ಬೇಡವೇ?  100 ಸ್ಮಾರ್ಟ್ ಸಿಟಿಗಳ ನಿರ್ಮಾಣದ ಬಗ್ಗೆ 25 ಜೂನ್ 2015ರಂದು ನರೇಂದ್ರ ಮೋದಿಯವರು ಘೋಷಣೆ ಮಾಡಿದರು.  ಈವರೆಗೂ ಸ್ಮಾರ್ಟ್ ಸಿಟಿ ಅನ್ನೋದು ಮಾತಿನ ಮೋಡಿಯಷ್ಟೇ ಎನ್ನುವುದು ವಿರೋಧಿಸುವುದಕ್ಕಾಗಿಯೇ ಇರುವ ವಿರೋಧಿಗಳ ಮಾತು.  ತಮಾಷೆಯೆಂದರೆ; ದೃಶ್ಯ ವೈಭವವನ್ನು ಕಟ್ಟಿಕೊಡುವ ಬಾಹುಬಲಿ ಚಿತ್ರದ ಆರಂಭದ ಭಾಗ ಬಿಡುಗಡೆಯಾಗಿದ್ದು 10 ಜುಲೈ 2015ರಲ್ಲಿ.  ಆಗ ಬಾಹುಬಲಿ ಸಿನಿಮಾದ ಅಂತಿಮ ಭಾಗವನ್ನು 2016ರಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿತ್ತು.  ರಾಜಮೌಳಿಯಂತಹ ಚಿತ್ರ ನಿರ್ದೇಶಕ, ಅವರ ತಂಡ, ದೊಡ್ಡ ಸಂಸ್ಥೆಗಳ ಬಂಡವಾಳ, ಒಟ್ಟಿನಲ್ಲಿ ಕಾರ್ಪೊರೇಟ್ ರೀತಿಯಲ್ಲಿ ಸಿನಿಮಾ ನಿರ್ಮಾಣ ಕಾರ್ಯ ನಡೆದರೂ, ಬಿಡುಗಡೆಯಾಗಿದ್ದು ಮಾತ್ರ 28 ಏಪ್ರಿಲ್ 2017ರಲ್ಲಿ, ಅಂದರೆ ಹೇಳಿದ ಒಂದು ವರ್ಷಕ್ಕಿಂತಲೂ ತಡವಾಗಿ.  ಸಕಲ ಸೌಲಭ್ಯಗಳಿದ್ದೂ ದೃಶ್ಯ ವೈಭವವೊಂದನ್ನು ಕಟ್ಟಿಕೊಡುವ ಕೆಲಸವೇ ಅಂದುಕೊಂಡದ್ದಕ್ಕಿಂತ ತಡವಾಗಬೇಕಾದರೆ, ಭಾರತದಂತಹ ದೇಶದಲ್ಲಿ ಸ್ಟಾರ್ಟ್ ಸಿಟಿಗಳ ನಿರ್ಮಾಣ ಘೋಷಣೆಯಾದ ಎರಡು ವರ್ಷದಲ್ಲಿಯೇ ಸಾಧ್ಯವಾಗುತ್ತದೆಯೇ?

 2014ರಲ್ಲಿ ನೂರಾರು ಕನಸುಗಳನ್ನು ಬಿತ್ತಿ ಅಧಿಕಾರಕ್ಕೆ ಬಂದ ಮೋದಿ ಸರಕಾರವನ್ನು ದೂಷಿಸಲು, ಸ್ಮಾರ್ಟ್‌ಸಿಟಿ ಘೋಷಣೆಯನ್ನು ಬಳಸಿಕೊಳ್ಳುವವರು, ಕೇಂದ್ರ ಸರ್ಕಾರದ ಮೂಲ ಸೌಕರ್ಯ ಯೋಜನೆಗಳಲ್ಲಿ ಅನಗತ್ಯವಾಗಿ ವೆಚ್ಚವಾಗುತ್ತಿದ್ದ ಹಣ, ಎರಡು ವರ್ಷಗಳಲ್ಲಿ 20% ನಿಂದ 11%ಗೆ ಇಳಿದಿರುವುದರ ಬಗ್ಗೆ ಒಂದೇ ಒಂದು ಮಾತೂ ಆಡುವುದಿಲ್ಲ.  ಕರ್ನಾಟಕದಲ್ಲಿ ಮಾಂಸದ ಅಂಗಡಿಗೆ ಸಹಾಯಧನ ಕೊಡುವುದನ್ನು ಮುಕ್ತಕಂಠದಿಂದ ಸ್ವಾಗತಿಸುವ ಈ ಭಾಗ್ಯವಂತರು ಸ್ಮಾರ್ಟ್‌ಸಿಟಿ ಘೋಷಣೆಯನ್ನು ಅಪಹಾಸ್ಯ ಮಾಡುತ್ತಾರೆಯೇ ಹೊರತು, ಉದ್ಯಮಗಳು ಬೆಂಗಳೂರಿನಿಂದ ಹೈದರಾಬಾದ್, ಅಮರಾವತಿ ಕಡೆಗೆ ವಲಸೆ ಹೋಗುತ್ತಿರುವುದರ ಬಗ್ಗೆ ಚಕಾರ ಎತ್ತುವುದಿಲ್ಲ.  ಕಾರಣ ಇವರು ಬಯಸುವುದು ಭಾಗ್ಯಗಳನ್ನು ಮಾತ್ರ.

ಮಗಳು ನಿಮ್ಮವಳೇ, ಜವಾಬ್ದಾರಿನೂ ನಿಮ್ಮದು; ಭೇಟಿ ಪಡಾವೋ, ಭೇಟಿ ಬಚಾವೋ Blind following & blind criticism are equally dangerous  ಎನ್ನುವುದಕ್ಕೆ ಇದೊಂದು ಉದಾಹರಣೆ.  ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ದಿನೆದಿನೇ ಸುದ್ದಿಯಾಗುತ್ತಿರುವಾಗ, ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಎಂದು ಅರಿವು ಮೂಡಿಸುವುದನ್ನೂ ಲೇವಡಿ ಮಾಡುವವರಿಗೆ, ಕೇವಲ ಒಂದೇ ವರ್ಷದಲ್ಲಿ 2 ಕೋಟಿ ಎಲ್‌ಪಿಜಿ ಸಂಪರ್ಕ ಕಲ್ಪಿಸಿ, ನಿರೀಕ್ಷೆಗೂ ಮೀರಿ ಉಜ್ವಲ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಿರುವುದು ಕಾಣಿಸುವುದಿಲ್ಲ.  ಮಹಿಳೆಯರ ಆರೋಗ್ಯದ ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ 3 ವರ್ಷಗಳಲ್ಲಿ 5 ಕೋಟಿ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಯೇ ಉಜ್ವಲ ಯೋಜನೆ.  ಜಾತಿ, ಧರ್ಮದ ಅಳತೆಗೋಲಿಲ್ಲದ ಈ ಯೋಜನೆ ಒಂದು ವರ್ಷದಲ್ಲಿಯೇ 2 ಕೋಟಿ ಕುಟುಂಬಗಳನ್ನು ತಲುಪಿರುವುದನ್ನು ಮರೆಮಾಚುತ್ತಾರೆ. ಆದರೆ ಶಾದಿಭಾಗ್ಯವನ್ನು ಬಿಗಿದಪ್ಪಿಕೊಳ್ಳುತ್ತಾರೆ.

ಜತೆಗೆ ಮೋದಿಯವರು ಯುಪಿಎ ಜಾರಿಗೆ ತಂದಿದ್ದ ಯೋಜನೆಗಳನ್ನು ಹೆಸರು ಬದಲಿಸಿ ತಮ್ಮ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂಬ ಆರೋಪ ಬೇರೆ.  ಯೋಜನೆಯನ್ನು ಘೋಷಿಸುವುದಕ್ಕೂ, ಅದನ್ನು ಫಲಾನುಭವಿಗಳಿಗೆ ತಲುಪಿಸುವುದಕ್ಕೂ ತುಂಬಾ ಅಂತರವಿದೆ.  ಯುಪಿಎ ಸರಕಾರ ತನ್ನ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದಿದ್ದರೆ 2ಜಿ ಹಗರಣ, ಕೋಲ್‌ಗೇಟ್ ಹಗರಣ, ಕಾಮನ್‌ವೆಲ್ತ್‌ ಹಗರಣ, ಆದರ್ಶ ಸೊಸೈಟಿ ಹಗರಣ ಹೀಗೆ ಬಾಲದಂತೆ ಹಗರಣಗಳ ಪಟ್ಟಿ ಬೆಳೆಯುತ್ತಿರಲಿಲ್ಲ.  ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿರುವ ಉಜ್ವಲ ಯೋಜನೆಯ ಬಗ್ಗೆ  ಮಾತನಾಡದ/ ವಿರೋಧಿಸಲಿಕ್ಕಾಗಿಯೇ ವಿರೋಧಿಸುವ ಭಾಗ್ಯವಂತರು ಹೆಮ್ಮೆಯ ಯೋಗದಿನ ಆಚರಣೆಯನ್ನೂ ಅಪಹಾಸ್ಯ ಮಾಡುತ್ತಾರೆ.

ದೇಹ ನಿಮ್ಮದು, ಚಾಪೇನೂ ನಿಮ್ಮದು; ಯೋಗದಿನ.  ನಮ್ಮ ನೆಲದ ಪ್ರತೀಕವಾಗಿರುವ, ದೇಶದ ಹೆಮ್ಮೆಯ ಯೋಗವನ್ನು ಜೂನ್ 21ರಂದು ಯೋಗದಿನವಾಗಿ ಇಡೀ ವಿಶ್ವವೇ ಸಂಭ್ರಮದಿಂದ ಆಚರಿಸುತ್ತದೆ.  ಆದರೆ ಮೋದಿ ವಿರೋಧಿಸಲು ಯೋಗವೂ ಅಪಹಾಸ್ಯಕ್ಕೀಡಾಗುತ್ತಿರುವುದೇ ವಿಪರ್ಯಾಸ.  ಉಚಿತವಾಗಿ ಕಲಿಯಬಹುದಾದ, ಆರೋಗ್ಯ ಸುಧಾರಿಸಿಕೊಳ್ಳಬಹುದಾದ ಯೋಗದಿನಾಚರಣೆಯನ್ನು ಅಪಹಾಸ್ಯ ಮಾಡುವವರು, ಕರ್ನಾಟಕ ಸರ್ಕಾರ ಹೆದ್ದಾರಿಗಳಲ್ಲಿನ ಬಾರ್ ಮಾಲೀಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ವಿರೋಧಿಸುವುದಿಲ್ಲ.  ಕಾರಣ ಮೋದಿವಿರೋಧಿ ನೀತಿ ಅಡ್ಡ ಬರುತ್ತದೆ.  ಯೋಗದ ಹೆಸರಲ್ಲಿ ಮೋದಿ ವಿಶ್ವಾದ್ಯಂತ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂಬ ಅಸಹನೆಯೂ ಕಾರಣವಿರಬಹುದು.

ಅಷ್ಟಕ್ಕೂ ಜಾಗತಿಕ ಮಟ್ಟದಲ್ಲಿ ಮೋದಿ ನಾಯಕತ್ವ ಸದ್ದು ಮಾಡಿದರೆ ಭಾರತಕ್ಕಲ್ಲವೇ ಒಳ್ಳೆಯದು.  ಒಂದು ಕಡೆ ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕಾದಲ್ಲಿ, ತನ್ನ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದ ಬರಾಕ್ ಒಬಾಮಾ ನಂತರ, ಬಂದು ಕುಳಿತಿರುವ ಡೊನಾಲ್ಡ್‌ ಟ್ರಂಪ್ ತನ್ನ ಹಾವಭಾವ, ನಾಲಿಗೆಯ ಮೇಲೆ ಹಿಡಿತವಿಲ್ಲದಿರುವುದರಿಂದ ನಕಾರಾತ್ಮಕ ಅಂಶಗಳನ್ನು ಬೀರುತ್ತಿದ್ದರೆ, ಇನ್ನೊಂದು ಕಡೆ ಮಾತಿನ ಮೇಲೆ ಹಿಡಿತ, ಹಾವಭಾವ, ಗಟ್ಟಿ ನಿರ್ಧಾರಗಳಿಂದ ಜಾಗತಿಕ ಮಟ್ಟದ ನಾಯಕರ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿರುವ ಮೋದಿ, ಹೊಸ ಶಖೆಯೊಂದಕ್ಕೆ ನಾಂದಿ ಹಾಡುತ್ತಿರುವಂತಿದೆ.  ಇದಕ್ಕೆ ತಾಜಾ ಉದಾಹರಣೆಯೆಂದರೆ, ಮೊನ್ನೆ ಮೋದಿಯವರ ಇಸ್ರೇಲ್ ಭೇಟಿಗೂ ಮುನ್ನ ಅಲ್ಲಿನ ಪತ್ರಿಕೆಯೊಂದು ಎದ್ದೇಳಿ, ವಿಶ್ವದ ಬಲಿಷ್ಠ ನಾಯಕರೊಬ್ಬರು ಆಗಮಿಸುತ್ತಿದ್ದಾರೆ ಎಂದು ಮೋದಿಗೆ ಸ್ವಾಗತ ಕೋರಿರುವುದು. ಇಲ್ಲಿಯೂ ಭಾಗ್ಯವಂತರ ವಿರೋಧ.

ಇಸ್ರೇಲ್ ಜತೆಗಿನ ಸಂಬಂಧ ಸುಧಾರಣೆಯ ಬಗ್ಗೆ. ಸದ್ಯ ಅಕ್ಕಪಕ್ಕದ ಪಾಕಿಸ್ತಾನ, ಚೀನಾ ಕಾಲುಕೆರೆದುಕೊಂಡು ಜಗಳವಾಡುತ್ತಿರುವಾಗ ಬಲಿಷ್ಠ ಇಸ್ರೇಲ್‌ನೊಂದಿಗೆ ಸಂಬಂಧ ಸುಧಾರಣೆ ಮಾಡಿಕೊಳ್ಳುವುದನ್ನು ಬಿಟ್ಟು, ಪ್ಯಾಲೆಸ್ತೇನ್ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿದೆಯೇ?  ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವ ಇಸ್ರೇಲ್‌ನೊಂದಿಗೆ ಮೋದಿ ಸರ್ಕಾರ ಮೈತ್ರಿ ವೃದ್ಧಿಸಿಕೊಂಡಿರುವುದು, ಮೋದಿಯವರ ಬಲಿಷ್ಠ ಭಾರತ ನಿರ್ಮಾಣ ಕನಸಿಗೆ ಪೂರಕವಾಗಿರುವುದಂತೂ ನಿಜ.  ಈ ಕನಸಿನ ಸಾಕಾರಕ್ಕೆ ವಿದೇಶಿ ಭೇಟಿಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಮೋದಿಯವರನ್ನು ಊಔಐಎಏ ಈಉ  ಎಂದು ಅಣಕಿಸುವವರಿಗೆ, ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಅನ್ನು ಯಾವ ದೇಶಗಳೂ ವಿರೋಧಿಸದೇ ಇದ್ದುದು, ಸಿರಿಯಾದಲ್ಲಿನ ಯಶಸ್ವಿ ರಕ್ಷಣಾ ಕಾರ್ಯ, ವಿಶ್ವ ಯೋಗದಿನಾಚರಣೆ, ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗುತ್ತಿರುವ ಈ ಸಂದರ್ಭದಲ್ಲಿ ವಿವಿಧ ದೇಶಗಳು ಭಾರತದೊಂದಿಗಿನ ಮೈತ್ರಿಯನ್ನು ಇನ್ನಷ್ಟು ಗಟ್ಟಿಕೊಳ್ಳುತ್ತಿರುವುದೆಲ್ಲವನ್ನು ಗಮನಿಸಿದರೆ ಸಾಕು, ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ನಾಯಕತ್ವವನ್ನು ಗಟ್ಟಿಗೊಳಿಸುತ್ತಿರುವುದರ ಅರಿವಾಗುತ್ತದೆ.

ಇದೆಲ್ಲಾ ಗೊತ್ತಿದ್ದೂ, ಹಣ ನಿಮ್ಮದು ಅಕೌಂಟೂ ನಿಮ್ಮದು; ಜನಧನ್ ಎಂದು ಜನೋಪಯೋಗಿ ಯೋಜನೆಗಳನ್ನು ಲೇವಡಿ ಮಾಡುತ್ತಾರೆ.  ಉಚಿತವಾಗಿ ಜನಧನ್ ಯೋಜನೆ ಮೂಲಕ ಬ್ಯಾಂಕ್ ಖಾತೆಯನ್ನೇನೋ ಜನ ತೆರೆದರು.  ಆದರೆ ಅದರ ದುರ್ಬಳಕೆ ಮಾಡಿಕೊಂಡವರು ಜನರೇ.  ನವೆಂಬರ್ 8ರಂದು 500-1000 ರೂಪಾಯಿಗಳ ಅಪಮೌಲ್ಯೀಕರಣದಂತಹ ಐತಿಹಾಸಿಕ ನಿರ್ಧಾರ ಪ್ರಕಟಿಸಿದ ನಂತರ, ತಮ್ಮ ಜನಧನ್ ಖಾತೆಗೆ ಕಪ್ಪು ಕುಳಗಳ ಹಣವನ್ನು 2.50 ಲಕ್ಷದಂತೆ ಜಮಾ ಮಾಡಿ, ಕಮಿಷನ್! ಪಡೆದವರು ಸಾಮಾನ್ಯ ಜನರೇ ಅಲ್ಲವೇ?  ಬರಿಗೈಯ ಫಕೀರ ನಾನು ಎನ್ನುವ ಮೋದಿ, ಸಾಮಾನ್ಯ ಜನರ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಜಮೆಯಾಗುವಂತೆ ಮಾಡಬಲ್ಲರು ಎಂದು ಊಹಿಸಿಕೊಳ್ಳಲು ಸಾಧ್ಯವಿತ್ತೇ?  ಆದರೂ ಸಾಧ್ಯವಾಯಿತು.  ಆದರೆ ಜನರೇ ದುರ್ಬಳಕೆ ಮಾಡಿಕೊಂಡರು.  ಆದರೂ ಮೋದಿ ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಕೆಲಸ ಮಾಡಲಿಲ್ಲ ಎನ್ನುವ ಮತ್ತದೇ ವಿರೋಧಿನೀತಿ.  ಹೀಗೆ ವಿರೋಧಿಸುವವರು, ಆಗಾಗ್ಗೆ ಭ್ರಷ್ಟರಿಗೆ ನಡುಕ ಹುಟ್ಟಿಸುತ್ತಿದ್ದ ಕರ್ನಾಟಕ ಲೋಕಾಯುಕ್ತ ಪೊಲೀಸ್ ವ್ಯವಸ್ಥೆಯನ್ನು ಮುಚ್ಚಿ ಹಾಕಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ಸ್ಥಾಪಿಸಿದಾಗ ತುಟಿಕ್ ಪಿಟಿಕ್ ಎನ್ನಲಿಲ್ಲ.  ವಿಫಲವಾದರೆ ತನಗೇ ಮುಳುವಾಗಬಹುದು ಎಂಬ ಅರಿವಿದ್ದರೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ನರೇಂದ್ರ ಮೋದಿಯವರನ್ನು ವಿರೋಧಿಸುವುದು ಮಾತ್ರ ನೊಟ್ ಬ್ಯಾನ್ ಫ್ಲಾಪ್ ಶೋ ಎಂದು.

ಪೊರಕೆ ನಿಮ್ಮದು, ಕಸ ಬೀದಿದು; ಸ್ವಚ್ಛಭಾರತ ಎಂದು ಹಂಗಿಸುವವರಿಗೆ ಮೋದಿ ಸ್ವಚ್ಛಭಾರತಕ್ಕೆ ಅಣಿಯಾದ ನಂತರ ದೇಶದ ಯುವಜನಾಂಗ ಸ್ವಆಸಕ್ತಿಯಿಂದ ದೇಶಾದ್ಯಂತ ಪಾಲ್ಗೊಂಡಿದ್ದು, ಪಾಲ್ಗೊಳ್ಳುತ್ತಿರುವುದು ಕಾಣಿಸುವುದಿಲ್ಲ.  ಸ್ವಚ್ಛಭಾರತವೆಂದರೆ ಕೇವಲ ಕಸ ಗುಡಿಸುವುದು ಮಾತ್ರವಲ್ಲ ಸ್ವಚ್ಛ ಆಡಳಿತವೂ ಅದರ ಅಂಗ ಎಂದು ಮೋದಿ ತೋರಿಸಿಕೊಟ್ಟಿದ್ದಾರೆ.  ಪೊರಕೆಯನ್ನೇ ತನ್ನ ಗುರುತಾಗಿಸಿಕೊಂಡು, ಆಡಳಿತದಲ್ಲೂ ಸ್ವಚ್ಛತೆಯನ್ನು ತರುತ್ತೇವೆಂದ ಅರವಿಂದ್ ಕೇಜ್ರಿವಾಲ್ ಪಕ್ಷದವರು, ಲಾಲು ಪ್ರಸಾದ್ ಯಾದವ್‌ರೊಂದಿಗೆ ಕೈಜೋಡಿಸಿದ್ದರ ಬಗ್ಗೆ ಈ ಭಾಗ್ಯವಂತರು ಚಕಾರವೆತ್ತುವುದಿಲ್ಲ.  ಜಾತಿ, ಧರ್ಮ ಮತ್ತು ತಮ್ಮ ಕುರ್ಚಿ ಭದ್ರವಾಗಿರುವುದನ್ನಷ್ಟೇ ಗಮನದಲ್ಲಿಟ್ಟುಕೊಂಡು ಮಂತ್ರಿಗಿರಿ ದಯಪಾಲಿಸುವ ಇಂದಿನ ರಾಜಕಾರಣದಲ್ಲಿ, ಆಯಾಕಟ್ಟಿನ ಸ್ಥಳಗಳಿಗೆ ಸಮರ್ಥರನ್ನೇ ನೇಮಿಸಿ ಸಮರ್ಥ ಆಡಳಿತ ನೀಡುತ್ತಿದ್ದರೂ ಮೋದಿ ಏನೂ ಮಾಡಿಲ್ಲ ಒಳ್ಳೆಯ ದಿನಗಳು ಬರಲಿಲ್ಲ ಎಂಬ ಅಪಹಾಸ್ಯದ ಹೊರತು ಭಾಗ್ಯವಂತರಿಗೆ ಮತ್ತೇನೂ ಕಾಣುತ್ತಿಲ್ಲ.  2004ರಿಂದ 2014ರವರೆಗೆ ಪ್ರತಿನಿತ್ಯದ ಪತ್ರಿಕೆಗಳು, ಸುದ್ದಿವಾಹಿನಿಗಳ ಚರ್ಚೆಗಳನ್ನು ಗಮನಿಸಿದರೆ ಕಣ್ಣಿಗೆ ಕಾಣುತ್ತಿದ್ದುದು ಬಹುತೇಕ ಹಗರಣ, ಉಗ್ರರ ಅಟ್ಟಹಾಸದಂತಹ ದೇಶವಿರೋಧಿ ವಿಚಾರಗಳೇ.

ಆದರೀಗ ಅಭಿವೃದ್ಧಿಯ ವಿಚಾರಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ.  ಭಾಗ್ಯಗಳನ್ನೇ ಬಯಸುವವರಿಗೆ ಲ್ಯೂಟಿನ್ ಮನಸ್ಸಿನ ಸೋಕಾಲ್ಡ್‌ ಬುದ್ಧಿಜೀವಿಗಳು, ಸೋಕಾಲ್ಡ್‌ ಉದಾರವಾದಿಗಳು ಹೇಳಿಕೊಡುತ್ತಿರುವ ಪಾಠದ ಹೆಸರು ಮೋದಿವಿರೋಧಿ ನೀತಿ.  ಕಾರಣ, ಇಷ್ಟು ವರ್ಷಗಳ ಕಾಲ ಸರಕಾರದ  ಆಯಕಟ್ಟಿನ ಸ್ಥಳಗಳಲ್ಲಿ ತಮಗೆ ಬೇಕಾದಂತೆ ಠಿಕಾಣಿ ಹೂಡಿದ್ದವರಿಗೆ ಇತ್ತೀಚೆಗೆ ಬಿಟ್ಟಿ ಫಲಗಳು ಸಿಗುತ್ತಿಲ್ಲದಿರುವುದು. 2014ರಲ್ಲಿ ಗುಜರಾತ್‌ನ ಅಭಿವೃದ್ಧಿ, ಆಡಳಿತ ವಿರೋಧಿ ಅಲೆ, ಅಣ್ಣಾ ಹಜಾರೆ ಹೋರಾಟದ ಫಲ, ತಳಮಟ್ಟದಲ್ಲಿ ಆರ್‌ಎಸ್‌ಎಸ್‌ನ ಕಾರ್ಯಕರ್ತರ ಕೆಲಸಗಳ ಕಾರಣದಿಂದ ನರೇಂದ್ರ ಮೋದಿಯವರಿಗೆ ಸ್ಪಷ್ಟಬಹುತ ದೊರೆತಿತ್ತು.  ಆದರೆ 2019ರಲ್ಲಿ ಮೋದಿ ಮತ ಕೇಳಬೇಕಿರುವುದು ತಾನೇನು ಮಾಡಿದ್ದೀನಿ ಎನ್ನುವುದರ ಆಧಾರದ ಮೇಲೆಯೇ.

 ಆ ವೇಳೆಗೆ ದೇಶದಲ್ಲಿ ಹತ್ತು ಕೋಟಿಗೂ ಹೆಚ್ಚಿನ ಹೊಸ ಮತದಾರರು ಸೇರ್ಪಡೆಯಾಗಿರುತ್ತಾರೆ.  ಅವರಲ್ಲಿ ಬಹುತೇಕರ ಆಯ್ಕೆ ಅಭಿವೃದ್ಧಿ ಮತ್ತು ಸ್ವಚ್ಛ ಆಡಳಿತವೇ ಆಗಿರುತ್ತದೆ.  ಇದಕ್ಕಾಗಿಯೇ ನರೇಂದ್ರ ಮೋದಿಯವರು ಚೀಫ್ ಎಕ್ಸಲೆಂಟ್ ಆಫೀಸರ್ (ಸಿಇಓ) ರಂತೆ ಕೆಲಸ ಮಾಡುತ್ತಿರುವುದು.  ಮೂರು ವರ್ಷಗಳಲ್ಲಿ ಕಾಯ್ದುಕೊಂಡಿರುವ ಮೋದಿ ಅಲೆ ಇನ್ನೊಂದು ವರ್ಷ ಮುಂದುವರೆದರೂ ಸಾಕು  NaMo4SecondTerm ಎಂಬ ರೀತಿಯ ಪ್ರಚಾರ ಆರಂಭವಾಗುದರಲ್ಲಿ ಸಂಶಯವಿಲ್ಲ.  ಹಾಗೇನಾದರೂ ಆದರೆ 2019ರಲ್ಲಿ ಮೋದಿ 300+ ಗೆಲುವಿನೊಂದಿಗೆ ಮತ್ತೆ ಅಧಿಕಾರ ಹಿಡಿಯಲಿದ್ದಾರೆ.  ಹೀಗಾಗಿಯೇ ತುಟ್ಟಿ ಬಿಟ್ಟಿ ಯೋಜನೆಗಳಿಗಾಗಿಯೇ ಕಾದುಕುಳಿತವರು, ಸಾಮಾಜಿಕ ಜಾಲತಾಣಗಳಲ್ಲಿ ಸ್ಮಾರ್ಟ್‌ಸಿಟಿ, ಯೋಗದಿನ, ಸ್ವಚ್ಛಭಾರತ ಹೀಗೆ ಮೋದಿ ಮಾಡಿದ ಪ್ರತಿ ಕೆಲಸವನ್ನು ವಿರೋಧಿಸುತ್ತಿರುವುದು.  ಅಂದ ಹಾಗೆ ಒಳ್ಳೆಯ ದಿನಗಳು ಸುಮ್ಮನೆ ಬರುವುದಿಲ್ಲ ಅಲ್ಲವೇ?

-ನಮೋಥಾನ್ ಗೋಪಾಲಕೃಷ್ಣ

ಬರಹಗಾರರು

Leave a Reply

Your email address will not be published. Required fields are marked *

5 × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top