About Us Advertise with us Be a Reporter E-Paper

ಅಂಕಣಗಳು

ಅವರು ಗೊಂಬೆ ಅಂಗಡಿಯಲ್ಲಿ ಬಿಟ್ಟ ಮಗುವಿನಷ್ಟು ಕ್ರಿಯಾಶೀಲ..!

- ವಿಶ್ವೇಶ್ವರ್‌ ಭಟ್‌

ಅಂದು ರಾತ್ರಿ ಅನಂತಕುಮಾರ ಮನೆಯಲ್ಲಿ ಗೌರಿ ಲಂಕೇಶ ಕುಳಿತಿದ್ದಳು. ಅವಳು ಬರುವುದು ಅವರಿಗಾಗಲಿ, ನನಗಾಗಲಿ ಗೊತ್ತಿರಲಿಲ್ಲ. ಹಿಂದಿನ ವಾರವಷ್ಟೇ ಅನಂತಕುಮಾರ ಬಗ್ಗೆ ಲಂಕೇಶ ಕೆಟ್ಟದಾಗಿ ಬರೆದಿದ್ದರು. ‘ಈ ಲಂಕೇಶ ಮೇಷ್ಟ್ರಿಗೆ ಪಾಠ ಮಾಡುವುದು ಹೇಗೆ ? ಸುಳ್ಳು ಸುಳ್ಳೇ ಬರೆದಿದ್ದಾರೆ.’ ಗೊಣಗಿಕೊಂಡಿದ್ದರು. ‘ಗೌರಿ ಲಂಕೇಶ ಬಂದಿದ್ದಾಳೆ, ನಿಮ್ಮನ್ನು ಭೇಟಿ ಮಾಡಬೇಕಂತೆ’ ಎಂದು ಅನಂತಕುಮಾರಗೆ ಹೇಳಿದೆ. ನನಗೆ ಅವರ ಪ್ರತಿಕ್ರಿಯೆ ಗೊತ್ತಿತ್ತು. ‘ನನ್ನನ್ಯಾಕ್ರೀ ಭೇಟಿ ಮಾಡಬೇಕಂತೆ? ಅವಳ ಅಪ್ಪನೇ ಬರೆದಿದ್ದಾರಲ್ಲ, ನಾನೊಬ್ಬ ನಿಷ್ಪ್ರಯೋಜಕ ಮಂತ್ರಿ ಅಂತ. ಈ ಮಂತ್ರಿಯ ಹತ್ತಿರವೇನು ಕೆಲಸ?’ ಎಂದು ಬೇಸರದಿಂದ ಮುಖ ಕಿವುಚಿಕೊಂಡು ಹೇಳಿದರು. ಒಂದು ಕ್ಷಣ ಮೌನದ ನಂತರ, ‘ಭಟ್ರೇ, ಏನು ಮಾಡಲಿ? ನಾನು ಆಕೆಯನ್ನು ಭೇಟಿ ಮಾಡಬೇಕಾ?’ ಎಂದು ನನ್ನನ್ನೇ ಕೇಳಿದರು.

‘ಸಾರ್, ನಿಮ್ಮ ಬಾಗಿಲಿಗೆ ಬಂದಿದ್ದಾಳೆ. ಅಲ್ಲದೇ ನೀವು ಇದ್ದೀರೆಂಬುದನ್ನು ಖಾತ್ರಿಪಡಿಸಿಕೊಂಡೇ ಬಂದಿದ್ದಾಳೆ. ಭೇಟಿ ಮಾಡದಿರುವುದು ಸರಿ ಹೋಗಲಿಕ್ಕಿಲ್ಲ. ಅಷ್ಟಕ್ಕೂ ಆಕೆ ಬಂದಿರುವುದು ಏಕೆಂಬುದು ಗೊತ್ತಿಲ್ಲ. ಯಾವುದಕ್ಕೂ ಭೇಟಿ ಮಾಡುವುದು ಒಳ್ಳೆಯದು’ ಎಂದೆ. ಅನಂತಕುಮಾರ ಮರು ಮಾತಾಡದೇ, ‘ಹೂಂ’ ಎಂದರು. ಗೌರಿ ಲಂಕೇಶ ಅನಂತಕುಮಾರ ಚೇಂಬರ್‌ಗೆ ಹೋದಳು. ಅವಳಿಗೆ ನಾನು ಅಲ್ಲಿರುವುದು ಇಷ್ಟವಿರಲಿಲ್ಲ. ಆದರೆ ಅನಂತಕುಮಾರ ‘ಅವರು ಇರಲಿ ಬಿಡಿ, ತೊಂದರೆ ಇಲ್ಲ’ ಎಂದರು.

ಗೌರಿ ಲಂಕೇಶ ಒಂದೇ ಸಮನೆ ಉದ್ವಿಗ್ನಳಾಗಿ ನಿವೇದಿಸಿಕೊಳ್ಳಲಾರಂಭಿಸಿದಳು, ಮುಂಬೈ ಪೊಲೀಸರು ಬಂದು ಅಪ್ಪನನ್ನು ಅರೆಸ್ಟ್ ಮಾಡಿ ಎಳೆದುಕೊಂಡು ಹೋಗಿದ್ದಾರೆ. ಅಪ್ಪನ ವಿರುದ್ಧ ಮುಂಬೈ ಕೋರ್ಟಿನಲ್ಲಿ ಕೇಸಿತ್ತು. ಆದರೆ ಅವರು ಹಾಜರಾಗಲಿಲ್ಲವೆಂಬ ಕಾರಣಕ್ಕೆ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ದಯವಿಟ್ಟು ಸಹಾಯ ಮಾಡಿ’ ಎಂದು ದೈನ್ಯಳಾಗಿ ವಿನಂತಿಸಿಕೊಂಡಳು.

ಮುಂಬೈ ಪೊಲೀಸರು ಲಂಕೇಶ ಅವರನ್ನು ಅರೆಸ್ಟ್ ಮಾಡಲು ಹೋದಾಗ ಅವರು, ‘ನಾನು ಯಾರು ಗೊತ್ತಾ? ಪ್ರಾಯಶಃ ನಿಮಗೆ ನಾನ್ಯಾರು ಎಂಬುದು ಗೊತ್ತಿರಲಿಕ್ಕಿಲ್ಲ’ ಎಂದು ಆವಾಜ್ ಹಾಕಿದಾಗ, ಪೊಲೀಸರು ನಾಲ್ಕು ಬಾರಿಸಿದ್ದರು. ಕೆಳತುಟಿ ಹರಿದುಹೋಗಿತ್ತು. ಮುಖ ನೀಲಿಗಟ್ಟಿ ಊದಿಕೊಂಡಿತ್ತು. ಅನಂತಕುಮಾರ ಜಾಗದಲ್ಲಿ ಬೇರೆ ಯಾರೇ ಇದ್ದರೂ, ಹಿಂದಿನವಾರ ‘ಅಪ್ಪ’ನೇ ಬರೆದ ಲೇಖನ ಪ್ರಸ್ತಾಪಿಸಿ—- ‘ಸಾರಿ’ ಎಂದು ಹೇಳುತ್ತಿದ್ದರು. ಅದೊಂದೇ ಅಲ್ಲ, ಲಂಕೇಶ ಅನಂತಕುಮಾರ ಬಗ್ಗೆ ಅನೇಕ ಸಲ ಕೆಟ್ಟದಾಗಿ ಬರೆದಿದ್ದರು.

ಆದರೆ ಅನಂತಕುಮಾರ ಅವ್ಯಾವವೂ ತಮಗೆ ಗೊತ್ತೇ ಇಲ್ಲದವರಂತೆ, ‘ಸರಿ, ಖಂಡಿತ ಹೆಲ್ಪ್ ಮಾಡ್ತೀನಿ’ ಎಂದವರೇ, ಮಹಾರಾಷ್ಟ್ರದ ಅಂದಿನ ಉಪ ಮುಖ್ಯಮಂತ್ರಿ (ಗೃಹ ಸಚಿವರೂ ಹೌದು) ಹಾಗೂ ಸ್ನೇಹಿತ ಗೋಪಿನಾಥ ಮುಂಡೆ ಅವರಿಗೆ ಕರೆ ಮಾಡಿ, ‘ಲಂಕೇಶ ನಮ್ಮ ರಾಜ್ಯದ ಗೌರವಾನ್ವಿತ, ಸಂಭಾವಿತ, ಶ್ರೇಷ್ಠ ಸಾಹಿತಿ, ಲೇಖಕರು, ಪತ್ರಕರ್ತರು. ಅವರನ್ನು ತಕ್ಷಣ ಬಿಡುಗಡೆ ಮಾಡಿ, ಬೆಂಗಳೂರಿಗೆ ಕಳಿಸುವ ಏರ್ಪಾಟು ಮಾಡಬೇಕು’ ಎಂದು ವಿನಂತಿಸಿಕೊಂಡರು. ಮುಂಡೆ ಆಯಿತು ಎಂದರು. ಅವರು ತಕ್ಷಣ ಪ್ರಭಾವ ಬಳಸಿ ಲಂಕೇಶ ಬಿಡುಗಡೆಯಾಗುವಂತೆ ಮಾಡಿದರಲ್ಲದೇ, ಮುಂಬೈನಿಂದ ಬೆಂಗಳೂರಿಗೆ ವಿಮಾನ ಹತ್ತಿಸಿ ಕಳುಹಿಸಿಕೊಟ್ಟರು.

ಬೆಂಗಳೂರಿಗೆ ಬಂದ ಲಂಕೇಶ, ‘ರೀ ಅನಂತಕುಮಾರ, ನಿಮ್ಮ ಉಪಕಾರಕ್ಕೆ ಥ್ಯಾಂಕ್ಸ್. ಆದರೆ ಒಂದು ಮಾತು ನೆನಪಿಡಿ. ಈ ಕಾರಣಕ್ಕೆ ವಿರುದ್ಧ ಬರೆಯುವುದಿಲ್ಲ ಅಂತ ಭಾವಿಸಬೇಡಿ. ಮುಂಚಿನಂತೆ ನಿಮ್ಮ ವಿರುದ್ಧ ಬರೆಯುವವನೇ’ ಎಂದು ಹೇಳಿ ಫೋನ್ ಇಟ್ಟರು. ಅಷ್ಟೇ ಅಲ್ಲ, ಅವರ ವಿರುದ್ಧ ಸತತವಾಗಿ ಬರೆದರು. ಅಪ್ಪನ ನಿಧನ ನಂತರ ಮಗಳೂ ಅನಂತಕುಮಾರ ವಿರುದ್ಧ ವಿನಾಕಾರಣ ಬರೆದಳು. ಚಾರಿತ್ರ್ಯಹರಣವಾಗುವಂಥ ವರದಿ ಪ್ರಕಟಿಸಿದಳು.

ಅನಂತಕುಮಾರ ‘ಹೂಂ, ಹಾಂ’ ಎನ್ನಲಿಲ್ಲ. ಎಂದೂ ತಾವು ಮಾಡಿದ ಈ ‘ಉಪಕಾರ ಪ್ರಸಂಗ’ವನ್ನು ಎಲ್ಲೂ ಹೇಳಲಿಲ್ಲ. ‘ನಾನು ನನ್ನ ಬುದ್ಧಿ ತೋರಿಸಿದೆ. ಅವರು ಅವರ ಬುದ್ಧಿ ತೋರಿಸಿದರು, ಅದರಲ್ಲೇನಿದೆ?’ ಎಂದು ನಕ್ಕುಬಿಟ್ಟರು. ಇದಾದ ಬಳಿಕ ನಾನು ಈ ಪ್ರಸಂಗವನ್ನು ಅವರ ಬಾಯಿಂದ ಮತ್ತೊಮ್ಮೆ ಕೇಳಲಿಲ್ಲ. ತಾವು ಮಾಡಿದ ಸಾಧನೆಗಳ ಬಗ್ಗೆ ತುಸು ಅಗಾಧವಾಗಿ ಬಣ್ಣಿಸಿಕೊಳ್ಳುತ್ತಿದ್ದ ಅನಂತಕುಮಾರ, ತಾವು ಮಾಡಿದ ಉಪಕಾರಗಳ ಬಗ್ಗೆ ಮಾತ್ರ ಹೇಳಿಕೊಳ್ಳುತ್ತಿರಲಿಲ್ಲ. ‘ಕೆರೆಯ ನೀರನು ಕೆರೆಗೆ ಚೆಲ್ಲಿ/ವರವ ಪಡೆದರಂತೆ ಕಾಣಿರೋ’ ಎಂದು ಹೇಳಿ ವಿಷಯಾಂತರ ಮಾಡಿಬಿಡುತ್ತಿದ್ದರು. ಅವರಿಂದ ಹಣಕಾಸು ನೆರವು ಸೇರಿದಂತೆ, ಹಲವು ರೀತಿಯಿಂದ ಉಪಕೃತರಾದವರು ಅವೆಷ್ಟೋ. ಆದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಿಲ್ಲ ಇರುತ್ತಿದ್ದರು.*

ಅನಂತಕುಮಾರ ಅವರನ್ನು ಸುಸ್ತು, ನಿಸ್ತೇಜ, ಆಲಸಿ, ಮಬ್ಬುಗತಿಯಲ್ಲಿ ಯಾರೂ ನೋಡಿರಲಿಲ್ಲ. ವರ್ಷಕ್ಕೊಮ್ಮೆ ಬರುತ್ತಿದ್ದ ಜ್ವರವನ್ನೂ ಎರಡು ದಿನಕ್ಕಿಂತ ಜಾಸ್ತಿ ಇಟ್ಟುಕೊಂಡವರಲ್ಲ. ಸದಾ ತಿರುಗಾಟ, ಪ್ರವಾಸ, ಮಾತು, ಹೋರಾಟ, ಸಭೆ, ಸಮಾರಂಭ, ಬೈಠಕ್, ಭಾಷಣ…ಕುಳಿತಲ್ಲಿ ಕುಳಿತುಕೊಳ್ಳುವ ಆಸಾಮಿಯೇ ಅಲ್ಲ. ಗೊಂಬೆ ಅಂಗಡಿಯಲ್ಲಿ ಬಿಟ್ಟ ಮಗುವಿನಂತೆ ಸದಾ ಕ್ರಿಯಾಶೀಲ. ಗುಜರಾತಿನಲ್ಲಿ ಭೂಕಂಪ ಸಂಭವಿಸಿದಾಗ ದೇಣಿಗೆ ಸಂಗ್ರಹಿಸಲು ಅನಂತಕುಮಾರ ಬೆಂಗಳೂರು ನಗರದಲ್ಲಿ ಪಾದಯಾತ್ರೆ ಮಾಡಿದರು. ಬಸವನಗುಡಿಯಿಂದ ಆರಂಭವಾದದ್ದು ಗಾಂಧಿಬಜಾರ, ಬುಲ್‌ಟೆಂಪಲ್ ರಸ್ತೆ, ಕೆ.ಆರ್.ಮಾರ್ಕೆಟ್, ಅವೆನ್ಯೂ ರಸ್ತೆ, ತರಗುಪೇಟೆ, ಮೈಸೂರು ಬ್ಯಾಂಕ್, ಮೆಜೆಸ್ಟಿಕ್, ರಾಜಾಜಿನಗರ, ಪ್ರಸನ್ನ ಟಾಕೀಸ್, ಮಾಗಡಿ ರಸ್ತೆ, ವಿಜಯನಗರ, ಗಾಳಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆ ಮೂಲಕ ಶಂಕರಮಠದಲ್ಲಿ ರಾತ್ರಿ ಎಂಟು ಗಂಟೆಗೆ ಕೊನೆಗೊಂಡಿತು. ಅವರ ಹಿಂದೆಯೇ ಹೆಜ್ಜೆ ಹಾಕಿದ ನಾನು ಮೈಸೂರು ಬ್ಯಾಂಕ್ ಬರುತ್ತಿರುವಂತೆ ಇನ್ನು ಒಂದು ಹೆಜ್ಜೆ ಕಿತ್ತಿಡಲು ಸಾಧ್ಯವೇ ಇಲ್ಲವೆಂದು ಕಾರನ್ನೇರಿ, ಮೆರವಣಿಗೆಯ ಹಿಂಬದಿಯಲ್ಲಿ ನಿಧಾನವಾಗಿ ಬರುತ್ತಿದ್ದೆ, ಅನಂತಕುಮಾರ ಕಿಟಕಿಟನೆ ಓಡುತ್ತಿದ್ದರು.

ಅಂದು ಅವರು ಏನಿಲ್ಲವೆಂದರೂ 30-35 ಕಿಮಿಗಿಂತ ಹೆಚ್ಚು ದೂರ ಕ್ರಮಿಸಿರಬಹುದು. ಕೋಟಿಗಟ್ಟಲೆ ಹಣ ಸಂಗ್ರಹವಾಗಿತ್ತು. ಚಪ್ಪಲಿ ಧರಿಸಿಯೇ ಅಷ್ಟು ನಡೆದಿದ್ದರು. ಬೇರೆ ಯಾರಾದರೂ ಆಗಿದ್ದರೆ, ಮನೆಗೆ ಬಂದು ಮಲಗಿಬಿಡುತ್ತಿದ್ದರು. ಮನೆಗೆ ಬಂದವರೇ ಪತ್ನಿಗೆ ಬಕೆಟ್‌ನಲ್ಲಿ ಬಿಸಿನೀರು ತರುವಂತೆ ಹೇಳಿದರು. ಆ ಬಕೆಟ್‌ನಲ್ಲಿ ಇಪ್ಪತ್ತು ನಿಮಿಷ ಕಾಲಿಟ್ಟುಕೊಂಡರು. ಅಲ್ಲಿಯೇ ಊಟ ತರುವಂತೆ ಹೇಳಿದರು. ಸರಸರನೆ ಸ್ನಾನ ಮಾಡಿ, ರಾತ್ರಿ ಹನ್ನೊಂದರ ವಿಮಾನಕ್ಕೆ ಮುಂಬೈಗೆ ಹೋಗಿ, ಅಲ್ಲಿಂದ ಮಧ್ಯರಾತ್ರಿ ಎರಡು ಗಂಟೆಗೆ ವಿಮಾನದಲ್ಲಿ ದಿಲ್ಲಿಗೆ ಪ್ರಯಾಣ ಬೆಳೆಸಿದರು. ಕ್ಯಾಬಿನೆಟ್ ಮೀಟಿಂಗ್ ಸೇರಿದಂತೆ ಇನ್ನೂ ಕೆಲವು ಮಹತ್ವದ ಸಭೆಗಳಿದ್ದವು.

ಇದು ಒಂದೆರಡು ದಿನದ ವಿದ್ಯಮಾನವಲ್ಲ, ಹೆಚ್ಚು ಕಮ್ಮಿ ಇದೇ ಮಾದರಿಯಲ್ಲಿ ಅವರು ಮೂವತ್ತು ವರ್ಷಗಳನ್ನು ಕಳೆದಿರಬಹುದು. ನನಗೆ ತಿಳಿದಂತೆ, ದಿಲ್ಲಿ-ಬೆಂಗಳೂರು ನಡುವೆ ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಅನಂತಕುಮಾರ ಅವರಷ್ಟು ಯಾರೂ ಸಂಚರಿಸಿರಲಿಕ್ಕಿಲ್ಲ. ಆ ಹಣದಲ್ಲಿ ಅವರು ಒಂದು ಸಣ್ಣ ವಿಮಾನವನ್ನೇ ಖರೀದಿಸಬಹುದಿತ್ತೇನೋ? ಅನಂತಕುಮಾರ ದಿಲ್ಲಿಯಿಂದ ಬೆಂಗಳೂರಿಗೆ ಬಂದರೆ ಮತದಾರರಿಗೆ ಗೊತ್ತಾಗದೇ ಹೋಗಬಹುದು. ಆದರೆ ಗಗನಸಖಿಯರಿಗೆ ಗೊತ್ತಾಗದೇ ಹೋಗುವುದಿಲ್ಲ ಎಂದು ತಮಾಷೆ ಮಾಡಿದ್ದುಂಟು. ಮೈಗೆ ರೆಕ್ಕೆ ಕಟ್ಟಿಕೊಂಡೇ ಹಾರುತ್ತಿದ್ದರು.

ಒಮ್ಮೆ ಅನಂತಕುಮಾರ ಬೆಳಗ್ಗೆ ಮೂರೂವರೆಗೆ ಎದ್ದು ಸಿದ್ಧರಾಗಿ, ಐದು ಗಂಟೆಗೆ ಮನೆಬಿಟ್ಟು, ಆರು ಗಂಟೆಯ ವಿಮಾನದಲ್ಲಿ ಗೋವಾಕ್ಕೆ ಬಂದೆವು. ಗೋವಾದಿಂದ ಕಾರವಾರಕ್ಕೆ ಹೆಲಿಕಾಪ್ಟರ್‌ನಲ್ಲಿ ಪಯಣ. ಕಾರವಾರದಲ್ಲಿ ಶಂಕುಸ್ಥಾಪನೆ. ಅಲ್ಲಿಂದ ಹುಬ್ಬಳ್ಳಿಗೆ. ಅಲ್ಲಿ ಮೂರು ಕಾರ್ಯಕ್ರಮ. ಅಲ್ಲಿಂದ ರಾಯಚೂರಿನಲ್ಲಿ ಮಧ್ಯಾಹ್ನ ಮದುವೆ ಊಟ. ರಾಯಚೂರಿನಿಂದ ಗುಲ್ಬರ್ಗಕ್ಕೆ ಪಯಣ. ಅಲ್ಲಿ ಕಾರ್ಯಕರ್ತರ ಸಭೆ. ಅಲ್ಲಿಂದ ಹೈದರಾಬಾದ್‌ಗೆ. ಅಲ್ಲಿ ಹೆಲಿಕಾಪ್ಟರ್ ಬಿಟ್ಟು, ವಿಮಾನದಲ್ಲಿ ಬೆಂಗಳೂರಿಗೆ. ಕ್ಷೇತ್ರದಲ್ಲಿ ಮದುವೆಗೆ ಹಾಜರಾಗಿ, ಮಧ್ಯರಾತ್ರಿ ವಿಮಾನದಲ್ಲಿ ದಿಲ್ಲಿಗೆ ವಾಪಸ್.

ಅನಂತಕುಮಾರ ಅಧಿಕಾರದಲ್ಲಿ ಇರಲಿ, ಬಿಡಲಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರು ಇದೇ ರೀತಿ ಭಾರತದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಪಕ್ಷ ಹಾಗೂ ಸರಕಾರಿ ಕೆಲಸಗಳ ನಿಮಿತ್ತ ಸಾವಿರಾರು ಸಲ ದೇಶ ಸಂಚಾರ ಮಾಡಿದ್ದಾರೆ. ಕರ್ನಾಟಕದ ಯಾವ ರಾಜಕಾರಣಿಯೂ ಅನಂತಕುಮಾರ ಅವರಂತೆ ದೇಶ ಸುತ್ತಿರಲಿಕ್ಕಿಲ್ಲ.

ಕರ್ನಾಟಕ ಹಾಗೂ ದಿಲ್ಲಿ ಮಾತ್ರವಲ್ಲದೇ, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಪಕ್ಷದ ಅಥವಾ ಚುನಾವಣೆ ಪ್ರಭಾರಿಯಾಗಿ ಪಕ್ಷ ಸಂಘಟನೆಗಾಗಿ ಅವರು ಎರಡು ಜನ್ಮಕ್ಕಾಗುವಷ್ಟು ತಿರುಗಿರಬಹುದು. ಅವರೆಂದೂ ಕಾಯಿಲೆ ಅಥವಾ ಕೊಸಾಲೆ ಎಂದು ಮಲಗಿದವರಲ್ಲ. ಅನಂತಕುಮಾರ ಅವರ ಪಾರ್ಥಿವ ಶರೀರದ ಮುಂದೆ ನಿಂತಾಗಲೇ ಅವರು ಮೊದಲು ಹಾಗೂ ಕೊನೆ ಬಾರಿಗೆ ಮಲಗಿದ್ದನ್ನು ನೋಡಿದ್ದು!

*************************

ಬಿಜೆಪಿ ನಾಯಕರೊಬ್ಬರ ಸೊಸೆ ಆತ್ಮಹತ್ಯೆ ಮಾಡಿಕೊಂಡಾಗ, ಆಕೆಯ ಪಾಲಕರು ಈ ನಾಯಕರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸು ದಾಖಲೆ ಮಾಡಿದ್ದರು. ಈ ನಾಯಕರು ಜೈಲುಪಾಲಾಗುವುದನ್ನು ತಪ್ಪಿಸಲು ಸಾಧ್ಯವೇ ಅವರು ಬಂದು ಅನಂತಕುಮಾರರ ಕಾಲು ಹಿಡಿದುಕೊಂಡಾಗ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಮುಖ್ಯಮಂತ್ರಿಯವರಿಗೆ ಫೋನ್ ಮಾಡಿ ಇವರನ್ನು ಬಚಾವ್ ಮಾಡಿದ್ದರು. ಅದಾದ ಕೆಲ ವರ್ಷಗಳ ನಂತರ, ಇದೇ ನಾಯಕರು ಅನಂತಕುಮಾರ ವಿರೋಧಿ ಪಾಳೆಯದಲ್ಲಿ ಸಕ್ರಿಯರಾಗಿ, ಅವರ ವಿರುದ್ಧವೇ ಕ್ರಿಯಾಶೀಲರಾಗಿ ತೊಡಗಿಸಿಕೊಂಡಾಗ, ಯಾರೋ ಬಂದು ಅನಂತಕುಮಾರರಿಗೆ, ‘ ನೀವು ಈ ಪ್ರಕರಣದಲ್ಲಿ ಅವನನ್ನು ಬಚಾವ್ ಮಾಡದಿದ್ದರೆ, ಈ ಮನುಷ್ಯ ಕಂಬಿ ಎಣಿಸಬೇಕಿತ್ತು. ಈಗ ನಿಮ್ಮ ವಿರುದ್ಧವೇ ಮಾತಾಡುತ್ತಿದ್ದಾನೆ’ ಎಂದು ಹೇಳಿದರು.

ಅದಕ್ಕೆ ‘ಅದು ಅವರ ಕೌಟುಂಬಿಕ ಕಲಹ, ವೈಯಕ್ತಿಕ ವಿಚಾರ. ಅದೇ ಬೇರೆ, ರಾಜಕಾರಣವೇ ಬೇರೆ. ಆ ಮನುಷ್ಯನ ಅನಿವಾರ್ಯ ಏನೋ, ಯಾರಿಗೆ ಗೊತ್ತು? ಅವರ ಆ ವಿಚಾರ ಪ್ರಸ್ತಾಪಿಸಬೇಡಿ’ ಎಂದು ಹೇಳಿದ್ದರು.
**

ಅನಂತಕುಮಾರ ಸಂಸ್ಕೃತಿ ಖಾತೆ ಸಚಿವರಾಗಿದ್ದಾಗ, ಪದ್ಮಶ್ರೀ ಪ್ರಶಸ್ತಿ ಬಯಸಿ, ಅಕಾಡೆಮಿ ಅಧ್ಯಕ್ಷ, ಸದಸ್ಯ ಸ್ಥಾನ ಬಯಸಿ ನೂರಾರು ಮಂದಿ ಅರ್ಜಿ ಹಿಡಿದು ಬರುತ್ತಿದ್ದರು. ಒಮ್ಮೆ ಖ್ಯಾತನಾಮ ಸಾಹಿತಿಯೊಬ್ಬರು ಅನಂತಕುಮಾರ ಅವರನ್ನು ಏಕಾಂತದಲ್ಲಿ ಭೇಟಿ ಮಾಡಲು ಬಯಸಿದರು. ಸಚಿವರನ್ನು ದಬಕ್ಕನೆ ಕಾಲಿಗೆ ಬಿದ್ದು, ‘ದಯವಿಟ್ಟು ನನ್ನನ್ನು ಅಕಾಡೆಮಿ ಅಧ್ಯಕ್ಷನನ್ನಾಗಿ ಮಾಡಿ’ ಎಂದು ಗೆಂಚು ಹಾಕಿ ಎರಡೂ ಕಾಲುಗಳನ್ನು ಹಿಡಿದು ಅಂಗಲಾಚಿದರು. ಇದನ್ನು ಅವರು ನಿರೀಕ್ಷಿಸಿರಲಿಲ್ಲ. ‘ಅಲ್ಲಾ ಸ್ವಾಮಿ, ನಿಮ್ಮ ಪುಸ್ತಕ ಓದಿ ನಾನು ಬೆಳೆದವನು. ನೀವು ನನ್ನ ಕಾಲಿಗೆ ಬಿದ್ದರೆ ಹೇಗೆ? ನಾನು ನಿಮಗೆ ನಮಸ್ಕರಿಸಬೇಕೆಂದುಕೊಂಡಿದ್ದೆ. ನೀವು ಹೀಗೆಲ್ಲ ಮಾಡಬಾರದು. ನೀವು ಒಂದು ಫೋನ್ ಕರೆ ಮಾಡಿದ್ದರೂ, ನಾನೇ ನಿಮ್ಮ ಕೋರಿಕೆ ಈಡೇರಿಸುತ್ತಿದ್ದೆ.’ ಎಂದರು. ಅವರು ಹೋದ ಬಳಿಕ ಅಧ್ಯಕ್ಷರಾಗಿ ಮಾಡಿದರೆ ಹೇಗೆ?’ ಎಂದು ನನ್ನನ್ನು ಕೇಳಿದರು. ‘ನಿಮ್ಮಿಷ್ಟ’ ಎಂದೆ. ನನ್ನ ಮನದ ಇಂಗಿತವೇನು ಎಂಬುದು ಅವರಿಗೆ ಅರ್ಥವಾಯಿತು. ಎರಡು ದಿನಗಳ ನಂತರ, ಈ ಸಾಹಿತಿ ಮಹಾಶಯರು ಅಧ್ಯಕ್ಷರಾಗಿ ನೇಮಕವಾಗಿದ್ದರು. ‘ಅವರು ಕಾಲಿಗೆ ಬಿದ್ದ ಋಣದಿಂದ ಮುಕ್ತವಾಗುವುದಕ್ಕಾಗಿಯಾದರೂ ನಾನು ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಅಲ್ಲದೇ ನನಗೆ ಅವರ ‘ಅಕ್ಷರ ಋಣ’ ಇತ್ತು.’ ಎಂದರು. ನಾನು ಪ್ರತಿಕ್ರಿಯಿಸಲಿಲ್ಲ.

ಮೈಸೂರಿನಲ್ಲೊಂದು ಕಾರ್ಯಕ್ರಮ. ‘ಕರ್ನಾಟಕದ ಆಯಾಮಗಳು: ಕುವೆಂಪು ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಕೊಡುಗೆಗಳು’ ಎಂಬ ಮೇಲೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ. ವೇದಿಕೆಯಲ್ಲಿ ಘಟಾನುಘಟಿ ಸಾಹಿತಿಗಳು, ವಿದ್ವಾಂಸರು, ಗಣ್ಯರಿದ್ದರು. ಅನಂತಕುಮಾರ ಅವರ ಅಧ್ಯಕ್ಷತೆ. ದೇಜಗೌ ಅವರು ಮಾತಾಡುವಾಗ, ಅನಂತಕುಮಾರ ಅವರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಸಾಹಿತಿಯೊಬ್ಬರ ಜತೆ ಮೆಲುದನಿಯಲ್ಲಿ ಮಾತಾಡುತ್ತಿದ್ದರು. ಇದನ್ನು ನೋಡಿದ ದೇಜಗೌ, ‘ಮಾನ್ಯ ಮಂತ್ರಿಗಳು ಗಮನವಿಟ್ಟು ಕೇಳಬೇಕು. ರಾಜಕಾರಣಿಗಳಿಗೆ ಸಾಹಿತ್ಯ, ಸಾಹಿತಿಗಳ ಬಗ್ಗೆ ಗೊತ್ತಿರುವುದಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇರುವುದಿಲ್ಲ. ಸರ್.ಎಂವಿ ಕೊಡುಗೆಗಳೇನು ಅಂತ ಕೇಳಿದರೆ ಕನ್ನಂಬಾಡಿ ಅಣೆಕಟ್ಟೆ ಅಂತಾರೆ. ಅದಕ್ಕಿಂತ ಏನೂ ಗೊತ್ತಿರುವುದಿಲ್ಲ. ಅನಂತಕುಮಾರ ಅವರೇ, ನಾನು ಹೇಳುವುದನ್ನು ನೀವು ಕೇಳಬೇಕು’ ಎಂದು ಚುಚ್ಚಿದರು. ಇದರಿಂದ ಅನಂತಕುಮಾರ ಅವರಿಗೆ ಸಹಜವಾಗಿ ಕಸಿವಿಸಿಯಾಯಿತು.

ಆನಂತರ ಅನಂತಕುಮಾರ ಮಾತಿನ ಸರದಿ. ಆರಂಭಿಕ ಮಾತುಗಳನ್ನಾಡಿ, ‘ರಾಜಕಾರಣಿಗಳಿಗೆ ಸಾಹಿತ್ಯ, ಸಂಸ್ಕೃತಿ ಗೊತ್ತಿರುವುದಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡಿದ ಮಹನೀಯರ ಬಗ್ಗೆಯೂ ಗೊತ್ತಿರುವುದಿಲ್ಲ ಎಂದು ಹೇಳಿದ್ದಾರೆ. ಅಂದರೆ ನನಗೆ ಕುವೆಂಪು, ಸರ್‌ಎಂವಿ ಬಗ್ಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಹಿರಿಯರಾದ ದೇಜಗೌ ಅವರಲ್ಲಿ ಮನವಿ. ನನಗೆ ಅರ್ಧ ಗಂಟೆ ನಾನು ಇನ್ನೂ ಅರ್ಧ ಗಂಟೆ ಬೇಡುತ್ತೇನೆ. ತಾವೆಲ್ಲರೂ ದಯವಿಟ್ಟು ಸಹಕರಿಸಬೇಕು’ ಎಂದು ಹೇಳಿದವರೇ, ಕುವೆಂಪು ಹಾಗೂ ಸರ್‌ಎಂವಿ ಬಗ್ಗೆ ನಿರರ್ಗಳವಾಗಿ ಒಂದು ತಾಸು ಮಾತಾಡಿದರು. ಕುವೆಂಪು ವ್ಯಕ್ತಿತ್ವ, ಸಾಹಿತ್ಯ, ಕಾದಂಬರಿ, ಮಹಾಕಾವ್ಯ, ರಸಋಷಿಯ ಜೀವನದ ಹಾಸ್ಯಪ್ರಸಂಗ ಹಾಗೂ ಸರ್‌ಎಂವಿ ಬದುಕಿನ ಯಾರಿಗೂ ಗೊತ್ತಿರದ ಅನೇಕ ಪ್ರಸಂಗಗಳನ್ನು ಹೇಳಿದರು. ಅನಂತಕುಮಾರರ ಪ್ರತಿ ಮಾತಿಗೂ ಕರತಾಡನ. ದೇಜಗೌ ಮಾತು ಅವರನ್ನು ಕೆಣಕಿತ್ತು. ಅದಕ್ಕೆ ಉತ್ತರವಾಗಿ ಅವರು ಆಡಿದ ಮಾತುಗಳನ್ನು ಇಡೀ ಸಭೆ ಎದ್ದು ನಿಂತು ಸಮ್ಮತಿಸಿತ್ತು. ಇನ್ನೇನು ಅವರ ಮಾತು ಮುಗಿಯುವ ಮುನ್ನ ದೇಜಗೌ ಜಾಗ ಖಾಲಿ ಮಾಡಲು ಎದ್ದಾಗ, ‘ಹಿರಿಯ ಸಾಹಿತಿಗಳು ದಯಮಾಡಿ ತಮ್ಮ ಆಸನದಲ್ಲಿ ಪವಡಿಸಿರಬೇಕು. ಮಧ್ಯದಲ್ಲಿ ಎದ್ದರೆ ಕುವೆಂಪು, ಸರ್‌ಎಂವಿಗೆ ಅಪಚಾರವಾದೀತು’ ಎಂದು ಅಲ್ಲಿಯೇ ಕಟ್ಟಿಹಾಕಿದರು. ಅಂದು ಅವರು ಮಾಡಿದ ಭಾಷಣವೇ ಕಾರ್ಯಕ್ರಮದ ಹೈಲೈಟ್. ನಿಜಕ್ಕೂ ಬಹಳ ಸೊಗಸಾಗಿ ಮಾತಾಡಿದರು.

ಕುವೆಂಪು ಸಾಹಿತ್ಯ ಕುರಿತು ಅವರು ಅಷ್ಟು ಚೆಂದವಾಗಿ ಮಾತಾಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸ್ವತಃ ದೇಜಗೌ ಅವರ ಮಾತುಗಳನ್ನು ಕೇಳಿ ತಲೆದೂಗುತ್ತಿದ್ದರು. ಭಾಷಣ ಮುಗಿಸಿ ಬಂದಾಗ, ದೇಜಗೌ, ಅನಂತಕುಮಾರರನ್ನು ಅಭಿನಂದಿಸಿದರು.

ಒಮ್ಮೆ ಅನಂತಕುಮಾರ ಅವರ ದಿಲ್ಲಿ ಮನೆಗೆ ಉತ್ತರಪ್ರದೇಶದ ಕನೌಜದಿಂದ ಒಂದು ನಿಯೋಗ ಬಂದಿತ್ತು. ಅವರು ಸಚಿವರ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿರಲಿಲ್ಲ. ಅನಂತಕುಮಾರ ಬೇರೊಬ್ಬ ಗಣ್ಯರ ಜತೆ ಇದ್ದ ಕಾರಣ, ಈ ನಿಯೋಗದ ಸದಸ್ಯರು ಅರ್ಧ ಗಂಟೆ ಕಾಯುವಂತಾಯಿತು. ಆ ನಿಯೋಗದಲ್ಲಿ ಒಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಇದ್ದರು. ಅಷ್ಟು ಹೊತ್ತು ಕಾದಿದ್ದರಿಂದ ತಮಗೆ ಅವಮಾನವಾಯಿತೆಂದು ಸಿಡಿಮಿಡಿಗೊಂಡು ಎರಡು-ಮೂರು ಬಾರಿ ಎದ್ದು ನಿಂತಿದ್ದರು. ಅವರನ್ನು ಸಮಾಧಾನಪಡಿಸಿ ಕುಳ್ಳಿರಿಸುವುದೇ ದೊಡ್ಡ ಕೆಲಸವಾಯಿತು.

ಅಷ್ಟೊತ್ತಿಗೆ ಅನಂತಕುಮಾರ ಬಂದರು. ‘ಇವರು ಉತ್ತರಪ್ರದೇಶದಿಂದ ಕನೌಜ್‌ದಿಂದ ಬಂದಿದ್ದಾರೆ’ ಎಂದಷ್ಟೇ ಹೇಳಿದೆ. ‘ಓಹೋ ನೀವು ಕನೌಜದವರಾ? ಕನೌಜದ ಮೂಲ ಹೆಸರು ಕನ್ಯಾಕುಬ್ಜ ಅಂತ. ಮಿಹಿರ ಬೋಜನ ಕಾಲದಲ್ಲಿ ನಿಮ್ಮ ಊರಿಗೆ ಮಹೋದಯ ಎಂದು ಕರೆಯುತ್ತಿದ್ದರು. ಭಾರದ್ವಾಜ ಋಷಿಯ ಗುರುವಾದ ಶಾಂಡಿಲ್ಯರು ಕನೌಜದವರು. ಅವರು ಕನ್ಯಾಕುಬ್ಜ ಬ್ರಾಹ್ಮಣ ಸಮುದಾಯದವರು. ಹರ್ಷ ರಾಜನ ಆಳ್ವಿಕೆಯಲ್ಲಿ ಕನೌಜ ಅತ್ಯಂತ ಶ್ರೀಮಂತವಾಗಿತ್ತು. ಕನೌಜ ಕಂಡರೆ ನನಗೆ ಬಹಳ ಪ್ರೀತಿ. ಯಾಕೆಂದರೆ ಗುಲಾಬಿಯ *ಅತ್ತರು ನಿಮ್ಮೂರು ವಿಶೇಷ. ನೀವೂ ಅಷ್ಟೇ ಸುವಾಸನೆಯ ಮನಸ್ಸಿನವರು’ ಎಂದು ಪೀಠಿಕೆ ಹಾಕಿ ಅವರೆಲ್ಲರನ್ನೂ ಬರಮಾಡಿಕೊಂಡು ಪರಿಚಯಿಸಿಕೊಂಡರು. ಜ್ಞಾನಪೀಠಿ ಸೇರಿದಂತೆ, ನಿಯೋಗದ ಎಲ್ಲಾ ಸದಸ್ಯರೂ ಕ್ಲೀನ್‌ಬೋಲ್ಡ್! ಎಲ್ಲರೂ ಖುಷ್!

ಅನಂತಕುಮಾರ ಅವರಿಗೆ ಅದ್ಭುತವಾದ ಸಮಯಪ್ರಜ್ಞೆ ಇತ್ತು. ಎಂಥ ಸನ್ನಿವೇಶವನ್ನಾದರೂ ನಿಭಾಯಿಸುವ ಚಾಕಚಕ್ಯತೆ, ಪ್ರಸಂಗ ನೈಪುಣ್ಯವಿತ್ತು. ಪಕ್ಷದ ಕಾರ್ಯಕ್ರಮ ಹಾಗೂ ಸಂಘ, ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸಲು ಆಗಮಿಸಿದಾಗ, ಅವರಿಗೆ ತಕ್ಷಣದಲ್ಲಿ ಪಾಯಿಂಟ್ಸ್ ಬರೆದುಕೊಡುವುದರಲ್ಲಿ ಅನಂತಕುಮಾರ ನಿಸ್ಸೀಮರು. ಹಾಗೆಯೇ ಗಣ್ಯರಿಗೆ ಸ್ಥಳೀಯರನ್ನು ಸೊಗಸಾಗಿ ಪರಿಚಯಿಸುತ್ತಿದ್ದರು.

ನಾನು ಅಟಲ್ ಬಿಹಾರಿ ವಾಜಪೇಯಿ ಕುರಿತು ‘ಅಜಾತಶತ್ರು’ ಕೃತಿಗೆ ಅನಂತಕುಮಾರರಿಂದ ಮುನ್ನುಡಿ ಬಯಸಿದ್ದೆ. ಸುಮಾರು ಒಂದು ತಿಂಗಳು ಕಾಯಿಸಿ, ಕಾಡಿಸಿ ಬರೆದುಕೊಟ್ಟಿದ್ದರು. ನೀವು ಮುಂದೊಮ್ಮೆ ನನ್ನ ಬಗ್ಗೆ ಬರೆದರೆ, ಈ ಪ್ರಸಂಗವನ್ನೂ ಸೇರಿಸಿ ಎಂದು ನಾವಿಬ್ಬರೇ ಇದ್ದಾಗ, ಪ್ರಯಾಣ ಮಾಡುವಾಗ, ಅನೇಕ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು.

ಅವೆಲ್ಲ ಈಗ ಬರೀ ನೆನಪು!
ನಾನು ಸಂಪಾದಕನಾಗಿ ಕರ್ನಾಟಕ’ಕ್ಕೆ ಹೋಗದಿದ್ದರೆ, ಅವರನ್ನು ಬಿಡುವ ಪ್ರಶ್ನೆಯೇ ಇರಲಿಲ್ಲ!

Tags

Related Articles

Leave a Reply

Your email address will not be published. Required fields are marked *

Language
Close