Breaking Newsಸಿನಿಮಾಸ್
ಆ್ಯಂಕರ್ ಶೀತಲ್ ಶೆಟ್ಟಿ ಈಗ ಡೈರೆಕ್ಟರ್…!

ಕನ್ನಡ ಕಿರುತೆರೆಯಲ್ಲಿ ಆ್ಯಂಕರ್ ಆಗಿ, ನಂತರ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಶೀತಲ್ ಶೆಟ್ಟಿ ಈಗ ಡೈರೆಕ್ಟರ್ ಆಗಿ ಪರಿಚಯವಾಗುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಪತಿಬೇಕು ಡಾಟ್ ಕಾಂ ಚಿತ್ರದಲ್ಲಿ ನಾಯಕ ನಟಿಯಾಗಿ ಪ್ರಮೋಷನ್ ಪಡೆದುಕೊಂಡಿದ್ದ ಶೀತಲ್ ಶೆಟ್ಟಿ, ಈಗ ಸಂಗಾತಿ ಎಂಬ ಕಿರುಚಿತ್ರವೊಂದಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.
ಸಂಗಾತಿ ಎಂಬುದು ಒಂಟಿ ಹೆಣ್ಣೊಬ್ಬಳ ಸುತ್ತ ನಡೆಯುವ ಕತಾನಕ. ಡ್ರಾಮಾ ಟೀಚರ್ ಒಬ್ಬಳು ಗಂಡ, ಮನೆಯನ್ನು ತೊರೆದು ಒಬ್ಬಂಟಿಯಾಗಿ ಬದುಕುವುದರ ಸುತ್ತ ಕತೆ ಬಿಚ್ಚಿಕೊಳ್ಳುತ್ತದೆ. ಗಂಡ, ಸಂಬಂಧಗಳು, ಆಸರೆಗಳು ಇಲ್ಲದೆ ಹೆಣ್ಣಿಗೆ ಅಸ್ತಿತ್ವವಿಲ್ಲ ಎಂಬ ಪಾರಂಪರಿಕ ನಂಬಿಕೆಗಳನ್ನು ಇಂದಿನ ವಾಸ್ತವಿಕ ನೆಲೆಗಟ್ಟಿನಲ್ಲಿ ಚರ್ಚೆಗೆ ಹಿಡಿಯುವಂತೆ ಮಾಡುತ್ತದೆ.
ಒಂಟಿ ಹೆಣ್ಣಿನ ಅಂತರಾಳವನ್ನು ತೆರೆದಿಡುವ ಈ ಕಿರುಚಿತ್ರಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಕಿರುಚಿತ್ರ ನಿರ್ದೇಶನದ ಗಮನ ಸೆಳೆದಿರುವ ಶೀತಲ್ ಶೆಟ್ಟಿ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಾರಾ..? ವಿರಳ ಸಂಖ್ಯೆಯಲ್ಲಿರುವ ಕನ್ನಡದ ಮಹಿಳಾ ನಿರ್ದೇಶಕರ ಸಾಲಿನಲ್ಲಿ ಶೀತಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರಾ ಕಾದು ನೋಡಬೇಕು.