ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

K V Chandramouli Column: ಅರಸು ಮತ್ತು ಸಿದ್ದರಾಮಯ್ಯ: ಒಂದು ಹೋಲಿಕೆ

ಸಮಾಜವಾದಿ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದ ಸಿದ್ದರಾಮಯ್ಯ, ದೇವರಾಜ ಅರಸು ಅವರ ಅಹಿಂದ ರಾಜಕಾರಣದ ವಾರಸುದಾರರೆಂಬ ಭಾವಚಿತ್ರದೊಂದಿಗೆ ಬೆಳೆದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಅವರು, 2013ರಲ್ಲಿ ಪೂರ್ಣ ಐದು ವರ್ಷಗಳ ಅವಧಿ ಪೂರೈಸಿದ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರಾದರು.

ಅರಸು ಮತ್ತು ಸಿದ್ದರಾಮಯ್ಯ: ಒಂದು ಹೋಲಿಕೆ

-

Profile
Ashok Nayak Jun 9, 2026 11:51 AM

ರಾಜತಂತ್ರ

ಕೆ.ವಿ.ಚಂದ್ರಮೌಳಿ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅನೇಕ ಮುಖ್ಯಮಂತ್ರಿಗಳು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೆಲವರು ಆಡಳಿತದ ದಕ್ಷತೆಯಿಂದ, ಕೆಲವರು ಅಭಿವೃದ್ಧಿ ಯೋಜನೆಗಳಿಂದ, ಇನ್ನೂ ಕೆಲವರು ದೂರದೃಷ್ಟಿ ಮತ್ತು ಸಂಸ್ಥಾ ನಿರ್ಮಾಣ (institution building) ಸಾಮರ್ಥ್ಯದಿಂದ ನೆನಪಾಗುತ್ತಾರೆ. ಆದರೆ ಯಾವುದೇ ನಾಯಕನ ಅಂತಿಮ ಮೌಲ್ಯ ಮಾಪನವು ಅವರು ಗೆದ್ದ ಚುನಾವಣೆಯಿಂದಲ್ಲ; ಸಮಾಜ ಮತ್ತು ಆರ್ಥಿಕತೆಯ ಮೇಲೆ ಬೀರಿದ ಶಾಶ್ವತ ಪರಿಣಾಮದಿಂದ ನಿರ್ಧಾರವಾಗುತ್ತದೆ.

ಸಮಾಜವಾದಿ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದ ಸಿದ್ದರಾಮಯ್ಯ, ದೇವರಾಜ ಅರಸು ಅವರ ಅಹಿಂದ ರಾಜಕಾರಣದ ವಾರಸುದಾರರೆಂಬ ಭಾವಚಿತ್ರದೊಂದಿಗೆ ಬೆಳೆದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಅವರು, 2013ರಲ್ಲಿ ಪೂರ್ಣ ಐದು ವರ್ಷಗಳ ಅವಧಿ ಪೂರೈಸಿದ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರಾದರು. ನಂತರ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಅವರು, ಕರ್ನಾಟಕದ ದೀರ್ಘಾವಧಿ ಯ ಮುಖ್ಯಮಂತ್ರಿಗಳ ಸಾಲಿನಲ್ಲಿ ಸ್ಥಾನ ಪಡೆದರು.

ಇಷ್ಟು ದೀರ್ಘ ರಾಜಕೀಯ ಪಯಣದ ನಂತರವೂ ಒಂದು ಪ್ರಶ್ನೆ ಉಳಿದಿದೆ: ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸವನ್ನು ಬದಲಿಸಿದ ಅವರ ಶಾಶ್ವತ ಕೊಡುಗೆ ಯಾವುದು?

ಎರಡು ವಿಭಿನ್ನ ಮಾದರಿಗಳು

ಅಭಿವೃದ್ಧಿ ಅರ್ಥಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರ ಆಡಳಿತ ಮಾದರಿಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ದೇವರಾಜ ಅರಸು ಅವರ ರಾಜಕಾರಣವು ರಚನಾತ್ಮಕ ಬದಲಾವಣೆ ಮತ್ತು ಆಸ್ತಿ ಮರುಹಂಚಿಕೆ ಮೇಲೆ ಕೇಂದ್ರೀಕೃತವಾಗಿತ್ತು. ಭೂ ಸುಧಾರಣೆಗಳು, ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆ, ಸಾಮಾಜಿಕ ಅನ್ಯಾಯದ ವಿರುದ್ಧದ ಕ್ರಮಗಳು- ಇವೆಲ್ಲವೂ ಶಾಶ್ವತ ಸಬಲೀಕರಣ ಮತ್ತು ಸಾಮಾಜಿಕ ಚಲನಶೀಲತೆ ಸೃಷ್ಟಿಸುವ ಪ್ರಯತ್ನಗಳಾಗಿದ್ದವು.

ಇದನ್ನೂ ಓದಿ: K V Chandramouli Column: ಯುವ ಅಸಮಾಧಾನ: ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆಯ ಗಂಟೆ

ವಿಮರ್ಶಕರ ಪ್ರಕಾರ ಸಿದ್ದರಾಮಯ್ಯ ಅವರ ಆಡಳಿತವು ಕಲ್ಯಾಣ ರಾಜ್ಯದ (welfare state) ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಿತು. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮುಂತಾದ ಯೋಜನೆಗಳು ಲಕ್ಷಾಂತರ ಕುಟುಂಬಗಳಿಗೆ ಆದಾಯ ಭದ್ರತೆ ಮತ್ತು ಸಾಮಾಜಿಕ ರಕ್ಷಣೆಯನ್ನು ಒದಗಿಸಿವೆ. ಆದರೆ ಅವುಗಳ ಕೇಂದ್ರಬಿಂದು ಉತ್ಪಾದಕ ಆಸ್ತಿ ಸೃಷ್ಟಿಗಿಂತ ಉಪಭೋಗಕ್ಕೆ ಬೆಂಬಲ ನೀಡುವುದಾಗಿತ್ತು ಎಂಬ ಟೀಕೆ ಕೇಳಿಬರುತ್ತದೆ. ಈ ವ್ಯತ್ಯಾಸವನ್ನು ಒಂದು ಸಾಲಿನಲ್ಲಿ ಹೇಳುವು ದಾದರೆ: ಅರಸು ಭೂಮಿಯ ಹಕ್ಕು ಕೊಟ್ಟರು, ಸಂಕೋಲೆ ಮುರಿದರು; ಸಿದ್ದರಾಮಯ್ಯ ನೆರವು ಕೊಟ್ಟರು, ನೋವು ತಗ್ಗಿಸಿದರು.

ಭಾಗ್ಯ ಮತ್ತು ಗ್ಯಾರಂಟಿ ರಾಜಕಾರಣ

ಸಿದ್ದರಾಮಯ್ಯ ಆಡಳಿತದ ಪ್ರಮುಖ ಗುರುತಾಗಿ ಭಾಗ್ಯ ಮತ್ತು ಗ್ಯಾರಂಟಿ ಯೋಜನೆಗಳು ಹೊರ ಹೊಮ್ಮಿವೆ. ಈ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತಕ್ಷಣದ ನೆರವು ಒದಗಿಸಿ ರಾಜಕೀಯವಾಗಿಯೂ ಜನಪ್ರಿಯತೆ ಪಡೆದಿವೆ. ಆದರೆ ವಿಮರ್ಶಕರ ಪ್ರಶ್ನೆ ಬೇರೆ. ಈ ಯೋಜನೆಗಳು ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಿದವೆಯೇ? ಅಥವಾ ಸರಕಾರದ ನೆರವಿನ ಮೇಲೆ ಹೆಚ್ಚು ಅವಲಂಬಿತರನ್ನಾಗಿಸಿವೆಯೇ? ಉದ್ಯೋಗ ಸೃಷ್ಟಿ , ಕೌಶಲ್ಯಾಭಿವೃದ್ಧಿ, ಉತ್ಪಾದಕತೆಯ ವೃದ್ಧಿ ಮತ್ತು ಉದ್ಯಮಶೀಲತೆ ಮೂಲಕ ಅವಕಾಶಗಳನ್ನು ನಿರ್ಮಿಸುವ ಬದಲು ನೇರ ನೆರವಿನ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು.

ವಿಮರ್ಶಕರ ಅಭಿಪ್ರಾಯದಲ್ಲಿ, ಈ ಮಾದರಿಗೆ ರಾಜಕೀಯ ಆಯಾಮವೂ ಇದೆ. ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಫಲಿತಾಂಶಗಳು ದೀರ್ಘಾವಧಿಯಲ್ಲಿ ಗೋಚರಿಸುತ್ತವೆ; ಆದರೆ ನೇರ ಸೌಲಭ್ಯಗಳ ಲಾಭ ತಕ್ಷಣ ಮತದಾರರಿಗೆ ತಲುಪುತ್ತದೆ. ಹೀಗಾಗಿ ಗ್ಯಾರಂಟಿ ಯೋಜನೆ ಗಳು ಸಾಮಾಜಿಕ ಭದ್ರತೆಯ ಜೊತೆಗೆ ಪರಿಣಾ ಮಕಾರಿ ಚುನಾವಣಾ ತಂತ್ರವಾಗಿಯೂ ಕಾರ್ಯ ನಿರ್ವಹಿಸಿದವು ಎಂಬ ವಾದ ಕೇಳಿ ಬರುತ್ತದೆ.

77

ಈ ಹಿನ್ನೆಲೆಯಲ್ಲಿ ವಿಮರ್ಶಕರು ಕೇಳುವ ಪ್ರಶ್ನೆ:

ಗ್ಯಾರಂಟಿಗಳು ಇಂದಿನ ನೋವನ್ನು ತಗ್ಗಿಸಬಹುದು; ಆದರೆ ನಾಳೆಯ ಸಮೃದ್ಧಿಯನ್ನು

ಕಟ್ಟಿಕೊಡಬಹುದೇ?

ಸಿದ್ದರಾಮಯ್ಯ 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕರ್ನಾಟಕದ ಸಾರ್ವಜನಿಕ ಸಾಲವು ಸುಮಾರು ?೨.೨ ಲಕ್ಷ ಕೋಟಿ ಮಟ್ಟದಲ್ಲಿತ್ತು.

2025-26ರ ವೇಳೆಗೆ ರಾಜ್ಯದ ಒಟ್ಟು ಬಾಧ್ಯತೆಗಳು

ರೂ.7.6 ಲಕ್ಷ ಕೋಟಿಯಿಂದ ರೂ.8.2 ಲಕ್ಷ ಕೋಟಿ ನಡುವಿನ ಮಟ್ಟಕ್ಕೆ ಏರಿವೆ. ಈ ಹಿನ್ನೆಲೆಯಲ್ಲಿ, ಸುಮಾರು ರೂ.5 ಲಕ್ಷ ಕೋಟಿಗೂ ಅಧಿಕ ಹೆಚ್ಚುವರಿ ಸಾಲದ ಪ್ರತಿಫಲವಾಗಿ ಕರ್ನಾಟಕಕ್ಕೆ ಯಾವ ಶಾಶ್ವತ ಆರ್ಥಿಕ ಆಸ್ತಿಗಳು ನಿರ್ಮಾಣವಾದವು?

ಅಭಿವೃದ್ಧಿ ಅರ್ಥಶಾಸ್ತ್ರದ ದೃಷ್ಟಿಯಿಂದ, ಆ ಸಾಲದ ಗಣನೀಯ ಭಾಗವು ಉತ್ಪಾದಕ ಆಸ್ತಿಗಳ ಸೃಷ್ಟಿಗಿಂತ ಕಲ್ಯಾಣ ಯೋಜನೆಗಳು ಮತ್ತು ಆದಾಯ ವೆಚ್ಚಗಳಿಗೆ ಹೆಚ್ಚು ಬಳಕೆಯಾಗಿದ್ದರೆ, ಅದನ್ನು ಅತ್ಯುತ್ತಮ ಆರ್ಥಿಕ ತಂತ್ರವೆಂದು ಹೇಳುವುದು ಕಷ್ಟ ಎಂದು ವಿಮರ್ಶಕರು ವಾದಿಸು ತ್ತಾರೆ. ಅವರ ಅಭಿಪ್ರಾಯದಲ್ಲಿ, ಇಂತಹ ಭಾರೀ ಸಾಲದ ಫಲವಾಗಿ ಈ ಮುಂದಿನ ರೀತಿಯ ಶಾಶ್ವತ ಆಸ್ತಿಗಳು ಮತ್ತು ಪರಿವರ್ತನಾತ್ಮಕ ಯೋಜನೆಗಳು ಸ್ಪಷ್ಟವಾಗಿ ಗೋಚರಿಸ ಬೇಕಾಗಿತ್ತು: ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳು, ಜಾಗತಿಕ ಮಟ್ಟದ ಉತ್ಪಾದನಾ ವಲಯಗಳು, ಹೊಸ ಉದ್ಯೋಗ ನಗರಗಳು, ವಿಶ್ವಮಟ್ಟದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಹಾಗೂ ನೀರಾವರಿ ಕ್ರಾಂತಿಗೆ ಕಾರಣವಾದ ಬೃಹತ್ ಯೋಜನೆಗಳು.

ವಿಮರ್ಶಕರ ಪ್ರಕಾರ, ಇವು ಸಿದ್ದರಾಮಯ್ಯ ಆಡಳಿತದ ವಿಶಿಷ್ಟ ಸಾಧನೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿತವಾಗಿಲ್ಲ. ಸಾಲದ ದೊಡ್ಡ ಭಾಗವು ಕಲ್ಯಾಣ ಯೋಜನೆಗಳು, ಅನುದಾನಗಳು ಮತ್ತು ಆದಾಯ ವೆಚ್ಚಗಳಿಗೆ ತೆರಳಿರುವುದರಿಂದ ಅದರ ಫಲಿತಾಂಶ ದೀರ್ಘಾವಧಿಯ ಆರ್ಥಿಕ ಪರಿವರ್ತನೆಯಾಗಿ ಕಾಣಿಸಿಕೊಳ್ಳುವ ಬದಲು ತಾತ್ಕಾಲಿಕ ಉಪಶಮನದ ಮಟ್ಟದ ಉಳಿದಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಬೆಂಬಲಿಗರ ಪ್ರಕಾರ ಈ ವೆಚ್ಚಗಳು ಬಡ ಕುಟುಂಬಗಳಿಗೆ ಸಾಮಾಜಿಕ ಭದ್ರತೆ, ಖರೀದಿ ಸಾಮರ್ಥ್ಯ ಮತ್ತು ಆರ್ಥಿಕ ನೆಮ್ಮದಿಯನ್ನು ಒದಗಿಸಿವೆ. ಹೀಗಾಗಿ ಚರ್ಚೆಯ ಮೂಲ ಪ್ರಶ್ನೆ ಸಾಲದ ಪ್ರಮಾಣ ವಲ್ಲ, ಅದರ ಶಾಶ್ವತ ಪರಿಣಾಮ.

ರೂ.2.2 ಲಕ್ಷ ಕೋಟಿ ಸಾಲದ ರಾಜ್ಯವನ್ನು ರೂ.8 ಲಕ್ಷ ಕೋಟಿ ಸಾಲದ ರಾಜ್ಯವನ್ನಾಗಿಸಿದ ನಂತರ, ಕರ್ನಾಟಕದ ಆರ್ಥಿಕ ಶಕ್ತಿ, ಉದ್ಯೋಗ ಸಾಮರ್ಥ್ಯ ಮತ್ತು ಉತ್ಪಾದಕ ಆಸ್ತಿಗಳಲ್ಲಿ ಅದೇ ಪ್ರಮಾಣದ ವೃದ್ಧಿ ಕಂಡುಬಂದಿದೆಯೇ? ಎಂಬ ಪ್ರಶ್ನೆಯೇ ಸಿದ್ದರಾಮಯ್ಯ ಅವರ ಆರ್ಥಿಕ ಪರಂಪರೆಯ ಕುರಿತ ಚರ್ಚೆಯ ಕೇಂದ್ರಬಿಂದುವಾಗಿದೆ.

ಅಭಿವೃದ್ಧಿ ಅರ್ಥಶಾಸ್ತ್ರದ ಮಾನದಂಡದಿಂದ ನೋಡಿದರೆ, ವಿಮರ್ಶಕರ ಅಭಿಪ್ರಾಯ ಹೀಗಿದೆ: ಸಿದ್ದರಾಮಯ್ಯರ ಕಲ್ಯಾಣ ನೀತಿಗಳು ಸಾಮಾಜಿಕವಾಗಿ ಜನಪ್ರಿಯ ವಾಗಿರಬಹುದು; ಆದರೆ ಅದೇ ಪ್ರಮಾಣದ ಒತ್ತು ಉದ್ಯೋಗ, ಕೌಶಲ್ಯಾಭಿವೃದ್ಧಿ, ಕೈಗಾರಿಕಾ ಹೂಡಿಕೆ ಮತ್ತು ಉತ್ಪಾದಕ ಆಸ್ತಿ ಸೃಷ್ಟಿಗೆ ನೀಡಿದ್ದರೆ ಕರ್ನಾಟಕಕ್ಕೆ ಹೆಚ್ಚು ಶಾಶ್ವತ ಮತ್ತು ವ್ಯಾಪಕ ಆರ್ಥಿಕ ಲಾಭವಾಗುತ್ತಿತ್ತು. ಸಾಲ ಎಷ್ಟು ಪಡೆದರು ಎಂಬುದಕ್ಕಿಂತ, ಆ ಸಾಲದಿಂದ ಎಷ್ಟು ಶಾಶ್ವತ ಸಮೃದ್ಧಿ ನಿರ್ಮಾಣವಾಯಿತು ಎಂಬುದೇ ಇತಿಹಾಸದ ಅಂತಿಮ ಮಾನದಂಡ.

ಅಹಿಂದ ರಾಜಕಾರಣ

ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ರಾಜಕಾರಣವು ಸಿದ್ದರಾಮಯ್ಯ ಅವರ ಅತ್ಯಂತ ಯಶಸ್ವಿ ಚುನಾವಣಾ ತಂತ್ರವಾಗಿತ್ತು. ಅವರ ಬೆಂಬಲಿಗರು ಇದನ್ನು ಸಾಮಾಜಿಕ ನ್ಯಾಯದ ರಾಜಕಾರಣ ಎಂದು ಕೊಂಡಾಡುತ್ತಾರೆ. ಆದರೆ ವಿಮರ್ಶಕರ ಅಭಿಪ್ರಾಯದಲ್ಲಿ, ಇದೇ ರಾಜಕಾರಣವು ಸಮಾಜವನ್ನು ಜಾತಿ ಮತ್ತು ಸಮುದಾಯ ಆಧಾರಿತ ರಾಜಕೀಯ ಗುರುತುಗಳಾಗಿ ವಿಭಜಿಸಿತು ಎನ್ನುತ್ತಾರೆ. ವಿಮರ್ಶಕರು ಇಲ್ಲಿ ಒಂದು ಸೈದ್ಧಾಂತಿಕ ಪ್ರಶ್ನೆಯನ್ನು ಎತ್ತುತ್ತಾರೆ. ಭಾರತೀಯ ಸಂವಿಧಾನವು ಸಮಾನ ಪೌರತ್ವದ ತತ್ವವನ್ನು ಪ್ರತಿಪಾದಿಸುತ್ತದೆ. ಕಾಂಗ್ರೆಸ್ ಪಕ್ಷವೂ ತನ್ನನ್ನು ಜಾತ್ಯತೀತ ಮತ್ತು ಸಮಗ್ರ ರಾಜಕೀಯದ ಪ್ರತಿನಿಧಿಯಾಗಿ ಬಿಂಬಿಸಿಕೊಳ್ಳುತ್ತದೆ.

ಇಂತಹ ಸಂದರ್ಭದಲ್ಲಿ, ರಾಜಕೀ ಯವನ್ನು ನಿರ್ದಿಷ್ಠ ಸಾಮಾಜಿಕ ಒಕ್ಕೂಟಗಳ ಆಧಾರದ ಮೇಲೆ ಕಟ್ಟುವುದು ಸಾಮಾಜಿಕ ನ್ಯಾಯದ ಸಾಧನವೇ ಅಥವಾ ಹೊಸ ಮತಬ್ಯಾಂಕ್ ಸಮೀಕರಣವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಅವರು ಮತ್ತೊಂದು ಸಂಗತಿಯನ್ನು ಉಲ್ಲೇಖಿಸುತ್ತಾರೆ. ಸಿದ್ದರಾಮಯ್ಯ ಹಲವು ಬಾರಿ ಚಾಮುಂ ಡೇಶ್ವರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಒಕ್ಕಲಿಗ ಸಮುದಾಯದ ಗಣನೀಯ ಮತ ಬೆಂಬಲವಿದ್ದ ಕ್ಷೇತ್ರದ ತಮ್ಮ ರಾಜಕೀಯ ನೆಲೆಯನ್ನು ಬಲಪಡಿಸಿಕೊಂಡರು. ಅವರ ವಿರೋಧಿಗಳ ಪ್ರಕಾರ, ಆ ಕ್ಷೇತ್ರದ ಮತದಾರರು ಅವರನ್ನು ಜಾತಿಯ ಆಧಾರದ ಮೇಲೆ ಅಲ್ಲದೆ ನಾಯಕತ್ವ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಬೆಂಬಲಿಸಿದ್ದರು.

ಈ ಹಿನ್ನೆಲೆಯಲ್ಲಿ ವಿಮರ್ಶಕರು ಕೇಳುವ ಪ್ರಶ್ನೆ: ಚಾಮುಂಡೇಶ್ವರಿಯಲ್ಲಿ ಜಾತಿಯನ್ನು ಮೀರಿ ಗೆದ್ದ ನಾಯಕ, ಕರ್ನಾಟಕದಲ್ಲಿ ಜಾತಿ ಸಮೀಕರಣದ ರಾಜಕಾರಣವನ್ನು ಬಲಪಡಿಸಿದರೇ?ಸಿದ್ದರಾಮ ಯ್ಯ ಅವರ ನಾಯಕತ್ವ ಶೈಲಿಯ ಕುರಿತೂ ಟೀಕೆಗಳಿವೆ. ತಮ್ಮದೇ ಸಾಮಾಜಿಕ ನೆಲೆಯಿಂದ ಹೊರಹೊಮ್ಮಬಹುದಾದ ಪರ್ಯಾಯ ನಾಯಕತ್ವಕ್ಕೆ ಸಾಕಷ್ಟು ಅವಕಾಶ ನೀಡಲಿಲ್ಲ ಎಂಬ ಆರೋಪವನ್ನು ವಿರೋಧಿಗಳು ಮಾಡುತ್ತಾರೆ.

ಮತ್ತೊಂದೆಡೆ ಅದು ಸುಳ್ಳೆನ್ನುವಂತೆ ಜಮೀರ್ ಅಹ್ಮದ್ ಖಾನ್, ಎಂ.ಸಿ.ಮಹದೇವಪ್ಪ ಮತ್ತು ಬೈರತಿ ಸುರೇಶ್ ಅವರಂತಹ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯ ದೊರೆತಿರುವುದು ಕಾಣಬರುತ್ತದೆ. ಇದರಿಂದ, ಸ್ವತಂತ್ರ ರಾಜಕೀಯ ವ್ಯಕ್ತಿತ್ವಕ್ಕಿಂತ ನಾಯಕನಿಗೆ ನಿಷ್ಠೆ ಪ್ರದರ್ಶಿಸುವ ಸಂಸ್ಕೃತಿಗೆ ಹೆಚ್ಚಿನ ಉತ್ತೇಜನ ದೊರೆಯಿತು ಎಂಬ ಟೀಕೆಯೂ ಕೇಳಿ ಬರುತ್ತದೆ.

ಸಿದ್ದರಾಮಯ್ಯ ಅವರು ಅಧಿಕಾರ ಪಡೆಯುವ ರಾಜಕಾರಣವನ್ನು ಅತ್ಯಂತ ಯಶಸ್ವಿಯಾಗಿ ಕಲಿತಿದ್ದರು; ಆದರೆ ಆ ಅಧಿಕಾರವನ್ನು ಶಾಶ್ವತ ಸಾಮಾಜಿಕ- ಆರ್ಥಿಕ ಪರಿವರ್ತನೆಗೆ ಎಷ್ಟರ ಮಟ್ಟಿಗೆ ಬಳಸಿದರು ಎಂಬ ಪ್ರಶ್ನೆ ಇನ್ನೂ ಚರ್ಚೆಗೆ ಗ್ರಾಸವಾಗಿದೆ. ದೇವರಾಜ ಅರಸು ಸಮಾಜದ ರಚನೆಯನ್ನು ಬದಲಿಸಲು ಪ್ರಯತ್ನಿಸಿದ ನಾಯಕನಾಗಿ ನೆನಪಾಗುತ್ತಾರೆ. ಸಿದ್ದರಾಮಯ್ಯ ಕಲ್ಯಾಣ ರಾಜಕಾರಣದ ಅತ್ಯಂತ ಯಶಸ್ವಿ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದಾರೆ.

ಅರಸು ಹಕ್ಕು ಕೊಟ್ಟರು; ಸಿದ್ದರಾಮಯ್ಯ ನೆರವು ಕೊಟ್ಟರು. ಆದರೆ ನೆನಪಿಟ್ಟುಕೊಳ್ಳಬೇಕಾದ ಇನ್ನೂ ಒಂದು ವಿಷಯ ಇದೆ. ಅರಸು ಹಿಂದುಳಿದವರ ಪರವಾದ ರಾಜಕಾರಣ ಮಾಡಿದರೂ, ಕಾಂಗ್ರೆಸ್ ಪಕ್ಷ ಅಂತಿಮವಾಗಿ ಅವರ ಜೊತೆಗೆ ನಿಲ್ಲಲಿಲ್ಲ. ಇಂದಿರಾ ಗಾಂಧಿ ಅವರ ಜೊತೆ ಹೋಗಿ ಕಾಂಗ್ರೆಸ್ (ಐ) ಅನ್ನು ಅವರು ಬಲಪಡಿಸಿದರೂ, ತಾತ್ವಿಕ ವಿರೋಧದ ಪರಿಣಾಮ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಕಟ್ಟಿದಾಗ ಕಾಂಗ್ರೆಸ್‌ನ ಯಾರೂ ಅವರ ಜೊತೆಗೆ ಬರಲಿಲ್ಲ. ಆದರೆ ಸಿದ್ದರಾ ಮಯ್ಯ ಅವರನ್ನು ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡಿದೆ. ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ನಾಯಕತ್ವದಿಂದ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಹೀಗಾಗಿ ಅವರು ಪಕ್ಷಕ್ಕೆ ನೀಡಿದ ಬಲದ ನೆನಪು ಶಾಶ್ವತವಾಗಿ ಉಳಿಯಲಿದೆ.