Ravi Hunj Column: ಇದು ಬಸವಣ್ಣನ ಹೆಸರನ್ನು ಬಳಸಿ ಅವನಿಗೆ ಮಾಡುತ್ತಿರುವ ಅಪಚಾರ !
ಡಾ.ಸಾಖರೆಯವರ ಅಭಿಪ್ರಾಯ ಸರಿಯಲ್ಲ. ವೃಷಭಪಂಡಿತನು ತನ್ನ ತೈತ್ತಿರೀಯೋಪನಿಷತ್ ಭಾಷ್ಯದ ಆರಂಭದಲ್ಲಿ ಶ್ರೀಪತಿಯನ್ನು ‘ಭಾಷ್ಯಕೃತ್’ ಎಂದು ಕರೆದು ಗೌರವಿಸಿದ್ದಾರೆ: ‘ವೇದ ವ್ಯಾಸಂ ಸೂತ್ರಕಾರಂ ದೂರ್ವಾಸಂ ವೃತ್ತಿಕಾರಕಮ್ | ಭಾಷ್ಯಕೃತ್ ಪಂಡಿತಾರಾಧ್ಯಂ ಚ ಪ್ರಪದ್ವೇ ಪಾಶಮುಕ್ತಯೇ|’. ಅಲ್ಲದೆ ವೃಷಭ ಪಂಡಿತರು ತಮ್ಮ ಭಾಷ್ಯದಲ್ಲಿ ಶ್ರೀಕರ ಭಾಷ್ಯವನ್ನು ಸಂಗ್ರಹಿಸಿದ್ದಾರೆ.
-
ಬಸವ ಮಂಟಪ (ಭಾಗ-2)
ರವಿ ಹಂಜ್
ಮಾನ್ಯ ಸದಾಶಿವಯ್ಯ ಯಾನೆ ‘ಶಿವಸುತ’ರೇ ಗುರುತಿಸಿದಂತೆ ಕಾಶಿವೀರಾರಾಧ್ಯನು ತನ್ನ ‘ದುರ್ಮ ಗುಪ್ತಾಭ್ಯುದಯ’ ಎಂಬ ತೆಲುಗು ಕಾವ್ಯದಲ್ಲಿ ಶ್ರೀಪತಿ ಪಂಡಿತಾರಾಧ್ಯರನ್ನು ಶಿವಾದ್ವಯ ಮಾರ್ಗ ಸ್ಟ್ರಾರದುರಂಧರ’ರೆಂದು ಕರೆದಿರುವುದು ಅವರು ಶಿವಾತ ಸಿದ್ಧಾಂತವನ್ನು ಪ್ರತಿಪಾದಿಸಿ ದವರು ಎಂಬುದನ್ನು ತಿಳಿಸುವುದಕ್ಕಾಗಿ. ಅವರು ಶಿವಾತವನ್ನು (ಭೇದಭೇದ, ವಿಶೇಷಾದ್ರೆತ, ಶಕ್ತಿವಿಶಿಷ್ಟಾ ದ್ಧತ ಪರ್ಯಾಯ ಪದಗಳು) ಪ್ರತಿಪಾದಿಸಿದ ಗ್ರಂಥವಿದ್ದಿರಬಹುದು ಎಂದು ಭಾವಿಸುವುದಕ್ಕೆ ಸಾಧ್ಯವಿದೆ.
ಅದೇ ಮೂಲ ಶ್ರೀಕರಭಾಷ್ಯವೇ ಏಕಾಗಿರಬಾರದು? ವಿದ್ವಾನ್ ಎಂ.ಜಿ.ನಂಜುಂಡಾರಾಧ್ಯರು ಸಾಸಲ ಚಿಕ್ಕಣಾರಾಧ್ಯರು ರಚಿಸಿರುವ ಪಂಚಬ್ರಹ್ಮದಯಭಾಷ್ಯದಲ್ಲಿ ಉಲ್ಲೇಖಿಸಲ್ಪಟ್ಟ ಶ್ರೀಪತಿಪಂಡಿತರೇ ಎಂದು ಭಾವಿಸಿರುವುದನ್ನು ಖಡಾಖಂಡಿತವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಶ್ರೀ ಸ್ವಾಮಿಗಳೇ ಗುರುತಿಸಿದಂತೆ ಶ್ರೀಪತಿ ಪಂಡಿತರು ವೇದ ಮಂತ್ರಗಳಿಗೆ ವೇದಾಗಮ ಪುರಾಣೋಪನಿಷತ್ತುಗಳಿಂದ ಉದಾಹರಿಸಿ ವೀರಶೈವರಪರ ಭಾಷ್ಯವನ್ನು ಬರೆದಿದ್ದಾರೆ ಎಂದು ಸಾಸಲ ಚಿಕ್ಕಣಾರಾಧ್ಯರು ಹೇಳಿದ್ದು ಶ್ರೀಕರಭಾಷ್ಯಕ್ಕೂ ಅನ್ವಯಿಸುವುದರಿಂದ ಅದೇ ಆರಾಧ್ಯಸಂಹಿತೆಯೆಂಬ ಹೆಸರಿನಲ್ಲಿ ಇದ್ದಿರಬಹುದು.
ಕಾಲಾಂತರದಲ್ಲಿ ಆ ಹೆಸರು ಮರೆಯಾಗಿರಬಹುದು. ಶ್ರೀಕರಭಾಷ್ಯವು ಕಾಲಾಂತರದಲ್ಲಿ ಪರಿಷ್ಕರಣ ಹೊಂದಿರುವ ಹಿನ್ನೆಲೆಯಲ್ಲಿ ಹಾಗೆ ಹೇಳಲು ಸಾಧ್ಯವಿದೆ. ನಂದಿಕೇಶ್ವರ ಶಿವಾಚಾ ರ್ಯರು ತಮ್ಮ ಲಿಂಗಧಾರಣಚಂದ್ರಿಕೆಯಲ್ಲಿ ಶ್ರೀಪತಿ ಪಂಡಿತರ ಉಖ ಮಾಡಿರುವುದು ಅಸಂಭವ ವೆಂದೂ, ಸಾಖರೆಯವರ ಆವೃತ್ತಿಯಲ್ಲಿ ಆ ವಾಕ್ಯವೇ ಇಲ್ಲವೆಂದೂ ಶ್ರೀ ‘ಶಿವಸುತ’ರು ಹೇಳಿರುವುದು ಸರಿಯಲ್ಲ.
ಇದನ್ನೂ ಓದಿ: Ravi Hunj Column: ಪರಿತ್ಯಕ್ತ ಸಹಸಂಕೀರ್ಣಿಗರ ಯಾನೆ ಬಸವ ಭಂಜಕರ ಮೇಳೈಸುವಿಕೆ !
ಕೆಲವು ವಿಷಯಗಳಲ್ಲಿ ಮತಭೇದವಿದ್ದರೂ, ಎಲ್ಲಿ ಮತಸಾಮಂಜಸ್ಯವಿದೆಯೋ ಅಲ್ಲಿ ಶ್ರೀಪತಿ ಪಂಡಿತರ ಹೆಸರನ್ನು ಉಲ್ಲೇಖಿಸಲು ಅಡ್ಡಿಯಿರಲಾರದು. ಈಗ ಆ ವಾಕ್ಯ ಮುದ್ರಿತ ಪ್ರತಿಗಳಲ್ಲಿ ಇದೆ. ಆ ವಾಕ್ಯವೆಂದರೆ ಇದು- ‘ನನು ಯದ್ಯಪಿ ಭವದುಕ್ತರೀತ್ಯಾ ‘ಸರ್ವಲಿಂಗಂ ಸ್ಥಾಪಯತಿ’ ಇತ್ಯಸ್ಯ ಲಿಂಗಧಾರಣಪರತ್ವಂ ಸಿದ್ಧತಿ, ತಥಾಪಿ ವೇದಾರ್ಥ- ಪ್ರಣೇತೃಭಿರ್ವಿದ್ಯಾರಣ್ಯೆಸ್ತತ್ ಪರತ್ತೇನಾ ವ್ಯಾಖ್ಯಾನಾತ್ ಸಂದೇಹ ಇತಿ ಚೇತ್, ತದೇತದ್ ಬಧಿರಕರ್ಣ ಜಾಪಮನುಕರೋತಿ, ತೈರವ್ಯಾಖ್ಯಾತ ತ್ಪೇಪಿ ಕಾಲಹಸ್ತಿದೀಕ್ಷಿತ-ಮಂಚಣ-ಪಂಡಿತಾರಾಧ್ಯಪ್ರಭೃತಿಭಿಸ್ತತ್ಪರತ್ವೇನ ವ್ಯಾಖ್ಯಾನಾತ್’ (ಲಿಂ.ಚ.ಜಂಗಮವಾಡಿ ಮಠ, 1988, ಪು. ೯೨). (ನೀನು ಹೇಳಿದ ರೀತಿಯಲ್ಲಿ ‘ಸರ್ವಲಿಂಗಂ ಸ್ಥಾಪ ಯತಿ’ ಎಂಬುದು ಲಿಂಗಧಾರಣ ಪರವಾಗಿದೆ.
ಆದರೆ ವೇದಾರ್ಥವನ್ನು ಮಾಡಿದ ವಿದ್ಯಾರಣ್ಯರು ಹಾಗೆ ಲಿಂಗಧಾರಣ ಪರವಾಗಿ ವ್ಯಾಖ್ಯಾನ ಮಾಡಿಲ್ಲವೆಂದು ಸಂದೇಹ ಬರುತ್ತದೆ. ಇದು ಕಿವುಡನ ಮುಂದೆ ಜಪಮಾಡಿದಂತೆ. ಅವರು ಹಾಗೆ ವಿವರಿಸಿಲ್ಲದಿದ್ದರೂ ಕಾಳಹಸ್ತಿ ದೀಕ್ಷಿತ, ಮಂಚಣ, ಪಂಡಿತಾರಾಧ್ಯರು ಹಾಗೆ ವ್ಯಾಖ್ಯಾನ ಮಾಡಿದ್ದಾರೆ). ಇದು ಡಾ. ಸಾಖರೆಯವರ ಪ್ರತಿಯಲ್ಲೂ ಇರುವುದನ್ನು ನೋಡಬಹುದು. ಅವರು ಅಲ್ಲಿ ಉಲ್ಲೇಖಗೊಂಡ ಪಂಡಿತಾರಾಧ್ಯ ಶ್ರೀಪತಿಪಂಡಿತನಲ್ಲ; ಬದಲಾಗಿ ತೈತ್ತಿರೀಯೋಪನಿಷತ್ತಿಗೆ ಭಾಷ್ಯವನ್ನು ಬರೆದಿರುವ ವೃಷಭಪಂಡಿತ ಎಂದು ಹೇಳಿರುವುದನ್ನು ನೋಡಿದರೆ ಅವರ ಪ್ರತಿ ಯಲ್ಲೂ ಆ ವಾಕ್ಯವಿದೆ ಎಂಬುದು ಸಿದ್ಧವಾಗುತ್ತದೆ.
ಡಾ.ಸಾಖರೆಯವರ ಅಭಿಪ್ರಾಯ ಸರಿಯಲ್ಲ. ವೃಷಭಪಂಡಿತನು ತನ್ನ ತೈತ್ತಿರೀಯೋಪನಿಷತ್ ಭಾಷ್ಯದ ಆರಂಭದಲ್ಲಿ ಶ್ರೀಪತಿಯನ್ನು ‘ಭಾಷ್ಯಕೃತ್’ ಎಂದು ಕರೆದು ಗೌರವಿಸಿದ್ದಾರೆ: ‘ವೇದ ವ್ಯಾಸಂ ಸೂತ್ರಕಾರಂ ದೂರ್ವಾಸಂ ವೃತ್ತಿಕಾರಕಮ್ | ಭಾಷ್ಯಕೃತ್ ಪಂಡಿತಾರಾಧ್ಯಂ ಚ ಪ್ರಪದ್ವೇ ಪಾಶಮುಕ್ತಯೇ|’. ಅಲ್ಲದೆ ವೃಷಭ ಪಂಡಿತರು ತಮ್ಮ ಭಾಷ್ಯದಲ್ಲಿ ಶ್ರೀಕರ ಭಾಷ್ಯವನ್ನು ಸಂಗ್ರಹಿಸಿ ದ್ದಾರೆ.
ಹೀಗೆ ಶ್ರೀಪತಿ ಪಂಡಿತರು ಭಾಷ್ಯಕಾರರಾಗಿದ್ದರು ಎಂಬುದಕ್ಕೆ ಇದೊಂದು ನಿರ್ದಿಷ್ಟ ಆಧಾರ ವಾಗಿದೆ. ಲಿಂಗಧಾರಣಚಂದ್ರಿಕೆಯಲ್ಲಿ ಆ ವಾಕ್ಯವನ್ನು ಸೇರಿಸಿದವರು ಶ್ರೀಕರಭಾಷ್ಯವನ್ನು ಇತ್ತೀಚೆಗೆ ಸೃಷ್ಟಿಸಿದವರೇ ಎಂದು ಹೇಳುವುದಾಗಲಿ, ವೃಷಭಪಂಡಿತ ಮುಂತಾದವರ ಉಪನಿಷತ್ ಭಾಷ್ಯಗಳೂ ಅದೇ ಕಾಲದಲ್ಲಿ ಸೃಷ್ಟಿಯಾದವುಗಳೇ ಎಂದು ‘ಶಿವಸುತ’ರು ವಾದಿಸುವುದು, ತಮಗೆ ವಿರುದ್ಧವಾದುದೆಲ್ಲ ಅನಂತರ ಸೃಷ್ಟಿಯಾದುದು ಎಂದು ಹೇಳುವ ಅಂತೆಕಂತೆಯ ಮಾತೆಂದು ಅನಾವರಣಗೊಳ್ಳುತ್ತ ಸಾಗುತ್ತದೆ.
ಶ್ರೀಕರಭಾಷ್ಯದ ಕಾಲದ ಬಗ್ಗೆ ಶ್ರೀ ಹಯವದನರಾಯರು ವಿಚಾರ ಮಾಡುತ್ತಾ ‘ಮಧ್ವ’ ಪದದ ಪ್ರಯೋಗವು ಶ್ರೀಕರಭಾಷ್ಯದಲ್ಲಿ ನಾಲ್ಕು ಕಡೆ ಬಂದಿದೆಯೆಂಬ ಕಾರಣದಿಂದ ಅದು ಕ್ರಿ.ಶ. 1400ಕ್ಕೆ ಸೇರಿದ್ದೆಂದು ಹೇಳಿದ್ದಾರೆ.
ಅವರು ಕ್ರಿ.ಶ. 1936ರಲ್ಲಿ ಬೆಂಗಳೂರಿನಿಂದ ಪ್ರಕಟಿಸಿದ ಶ್ರೀಕರಭಾಷ್ಯದ ಮುನ್ನುಡಿಯಲ್ಲಿ ಹಾಗೆ ಹೇಳಿದ್ದಾರೆ. ಅವರು ಸಂಪಾದಿಸಿದ ಗ್ರಂಥದಲ್ಲಿ ನಾಲ್ಕು ಕಡೆ ‘ಮಧ್ವ’ ಶಬ್ದ ಬಂದಿದೆ. ಒಂದು ವಿಷಯವನ್ನಿಲ್ಲಿ ಗಮನಿಸಬೇಕು. ಈ ಗ್ರಂಥಸಂಪಾದನೆಗೆ ಶ್ರೀ ಹಯವದನರಾವ್ ಅವರು ಆಧಾರ ವಾಗಿಟ್ಟುಕೊಂಡಿರುವುದು ಒಟ್ಟು ಎಂಟು ಹಸ್ತಪ್ರತಿಗಳೆಂದು ಅವರ ಭೂಮಿಕೆಯಿಂದ ಗೊತ್ತಾಗು ತ್ತದೆ.
ಆ ಹಸ್ತಪ್ರತಿಗಳಲ್ಲಿ, ಕ್ರಿ.ಶ. 1923ರಲ್ಲಿ ಪ್ರತಿ ಮಾಡಲ್ಪಟ್ಟ ಮೈಸೂರಿನ ಬಸವಾರಾಧ್ಯರು ಎಂಬು ವವರಿಂದ ಪಡೆದ ಹಸ್ತಪ್ರತಿಯಲ್ಲಿ ಮಾತ್ರ ನಾಲ್ಕು ಕಡೆಗಳಲ್ಲಿ ‘ಮಧ್ವ’ ಪದದ ಪ್ರಯೋಗವಿದೆ. ಬೇರೆ ಹಸ್ತಪ್ರತಿಗಳಲ್ಲಿಲ್ಲ. ಹೀಗೆ ಕೇವಲ ಒಂದು ಹಸ್ತಪ್ರತಿಯ ಆಧಾರದ ಮೇಲೆ ‘ಮಧ್ವ’ ಪದವನ್ನು ಶ್ರೀ ಹಯವದನರಾವ್ ಅವರು ಗ್ರಂಥದಲ್ಲಿ ಉಳಿಸಿಕೊಂಡು, ಅದರ ಆಧಾರದ ಮೇಲೆ ಶ್ರೀಕರಭಾಷ್ಯದ ಕಾಲ ಕ್ರಿ.ಶ.1400 ಎಂದು ನಿರ್ಧರಿಸಿದ್ದಾರೆ.
ಇದನ್ನಿಲ್ಲಿ ಚರ್ಚಿಸಲಾಗಿದೆ: ‘ಮಧ್ವ’ ಪದ ಪ್ರಯೋಗವಿರುವ ನಾಲ್ಕು ವಾಕ್ಯಗಳು ಹೀಗಿವೆ: ಅ) ಮಧ್ವ-ದೈತ-ಕ್ಷಪಣಕ-ತಾರ್ಕಿಕಾದಿಭಿಃ ಜೀವಾನಾಂ ವಿಭುತ್ವಾಂಗೀಕಾರಾತ್ | ತನ್ನಿರಾಸಾರ್ಥಮ್ ಏತದಽಕರಣಾರಂಭಃ| ಅ) ಮಧ್ವಾದಿ-ತಾರ್ಕಿಕಾದಿ ಕೇವಲಭೇದವಾದಿನಾಂ ಬೌದ್ಧಾದಿವತ್ ಸರ್ವಶ್ರುತಿಸಮನ್ವಯಾ-ಭಾವಾತ್ ತನ್ಮಾತ್ರಂ ಸುತರಾಮ್ ಅಸಮಂಜಸಮ್ | ಇ) ಭಾಗವತ ಪಾಂಚರಾತ್ರಾದಿ-ಮಧ್ವಾದಿ-ವೈಷ್ಣವಮತೇಷು ಜಗತ್ಕಾರಣೇಶ್ವರಸ್ಯ ಶರೀರಪರಿಗ್ರಹಾತ್ ಘಟ ಪಟಾದಿವದಂತವತ್ವಂ ವಿನಾಶಿತ್ವಮ್ | ಈ) ಸ್ಮಾರ್ತವೈಷ್ಣವಮಧ್ವಾದಿಮತೇಷ್ಟಪಿ.
ಈ ವಿಷಯದಲ್ಲಿ ಚಿಲಕೂರಿ ನಾರಾಯಣರಾವ್ ಅವರು ಹೇಳಿರುವಂತೆ ‘ಮಧ್ವ’ ಶಬ್ದಪ್ರಯೋಗವು ನಾಲ್ಕೂ ಸಂದರ್ಭಗಳಲ್ಲಿ ಸಂಗತವಲ್ಲ. ಮೊದಲನೆಯ ವಾಕ್ಯದ ಪ್ರಕಾರ ಮಧ್ವಾಚಾರ್ಯರು ಆತ್ಮನನ್ನು ವಿಭುವೆಂದು ಅಂಗೀಕರಿಸುತ್ತಾರೆ ಎಂದಂತಾಗುತ್ತದೆ.
ಇದು ಶುದ್ಧ ತಪ್ಪು. ಶ್ರೀ ಮಧ್ವಾಚಾರ್ಯರ ಪ್ರಕಾರ ಆತ್ಮನು ಅಣು, ವಿಭುವಲ್ಲ. ಅವರು ಹೇಳು ತ್ತಾರೆ- ‘ಹೇತೂನಾಂ ಸಕಾಶಾದ್ ಅಣುರೇವ’ ‘ಅಣೋರಪಿ ಜೀವಸ್ಯ ಸರ್ವಶರೀರ ವ್ಯಾಪ್ತಿರ್ಯು ಜ್ಯತೇ’ (ಬ್ರಹ್ಮಸೂತ್ರ, ಮಧ್ವಭಾಷ್ಯ ೨.೩.೨೦; ೨.೩.೨೪). ಆದ್ದರಿಂದ ಈ ಮತವು ಮಧ್ವಾಚಾರ್ಯರ ದಲ್ಲ, ಅವರಿಗಿಂತ ಪೂರ್ವದಲ್ಲಿದ್ದ ಒಂದು ದೈತ ಮತದ್ದು.
ಹಾಗೆಯೇ ಎರಡನೇ, ಮೂರನೇ ಮತ್ತು ನಾಲ್ಕನೇ ವಾಕ್ಯಗಳಲ್ಲಿ ತಾರ್ಕಿಕ ಮುಂತಾದ ಸಾಮಾನ್ಯೋ ಕ್ತಿಗಳೊಂದಿಗೆ ಮತ್ತು ಭಾಗವತ, ಪಂಚರಾತ್ರ, ಸ್ಮಾರ್ತ, ವೈಷ್ಣವ ಮುಂತಾದ ಮತವಾಚಕಗಳೊಂದಿಗೆ ‘ಮಧ್ವ’ ಎಂಬ ವಿಶೇಷ ಹೆಸರು ಸಮಂಜಸವಾಗುವುದಿಲ್ಲ. ಇದನ್ನು ಪರಿಶೀಲಿಸಿದ ಚಿಲಕೂರಿ ನಾರಾಯಣರಾವ್ ಅವರು ಶ್ರೀ ಹಯವದನರಾವ್ ಅವರಿಗೆ ಶ್ರೀಕರಭಾಷ್ಯದ ಮೂಲಪ್ರತಿಗಳನ್ನಿತ್ತ ದೇವಿಡಿ ಜಮೀನ್ದಾರರಿಗೆ ಪತ್ರ ಬರೆದು ಆ ಹಸ್ತಪ್ರತಿಗಳಲ್ಲಿ ಆ ಕಡೆಗಳಲ್ಲಿ ‘ಮಧ್ವ’ ಪದದ ಪ್ರಯೋಗ ವಿದೆಯೇ ಎಂಬುದನ್ನು ಪರಿಶೀಲಿಸಿ ತಿಳಿಸಬೇಕೆಂದು ಕೋರಿದರು.
ಅದಕ್ಕೆ ಅವರು ಮರಳಿ ಪತ್ರ ಬರೆದು ಆ ಹಸ್ತಪ್ರತಿಗಳಲ್ಲಿ ಆ ಸ್ಥಳಗಳಲ್ಲಿ ‘ಮಧ್ವ’ ಪದವಿಲ್ಲವೆಂದು ತಿಳಿಸಿದರು. ಆದ್ದರಿಂದ ಶ್ರೀಪತಿ ಪಂಡಿತರ ಕಾಲವನ್ನು ಕ್ರಿ.ಶ. 1400 ಎಂದು ನಿರ್ಣಯಿಸಲು ಸಾಧಕ ವಾಗಿರುತ್ತದೆಯೆಂದು ಸಂಪಾದಕರು ಸೇರಿಸಿzರೆಂದು ನಾನು ಅಂದುಕೊಂಡೆ ಎಂದು ಚಿಲಕೂರಿ ನಾರಾಯಣರಾಯರು ಹೇಳಿದ್ದಾರೆ (ಪಂಡಿತಾರಾಧ್ಯ ಚರಿತ್ರ, ಭೂಮಿಕೆ, ಪು. ೩೦-೩೧). (ಆಗ ಚಿಲಕೂರಿ ನಾರಾಯಣರಾಯರಿಗೆ ಮೈಸೂರಿನ ಪ್ರತಿಯ ಬಗ್ಗೆ ತಿಳಿದಿರಲಿಲ್ಲ. ಆದ್ದರಿಂದ ಅಸಂಗತ ವಾದ ‘ಮಧ್ವ’ ಪದವನ್ನು ಹಯವದನರಾವ್ ಅವರೇ ಸೇರಿಸಿದ್ದಾರೆಂದು ತಿಳಿದು ಕೊಂಡರು).
ಹೀಗೆ ‘ಮಧ್ವ’ ಪದದ ಪ್ರಯೋಗವು ಮೂಲಪ್ರತಿಗಳಲ್ಲಿ ಇಲ್ಲದೆ ಕೇವಲ ಒಂದು ಪ್ರತಿಯ ಆಧಾರದ ಮೇಲೆ ‘ಮಧ್ವ’ ಪದವನ್ನು ಗ್ರಂಥದಲ್ಲಿ ಉಳಿಸಿಕೊಂಡಿರುವುದು ಸರಿಯಲ್ಲ. ರಾಮಾನುಜ ಭಾಷ್ಯ ವಾಕ್ಯಗಳು ಹೇಗೆ ಶ್ರೀಕರಭಾಷ್ಯದಲ್ಲಿ ಮೂಲದಲ್ಲಿದ್ದಂತೆ ಕಾಣುತ್ತದೆಯೋ ಅದರಂತೆ ಮಧ್ವಭಾಷ್ಯ ವಾಕ್ಯವು ಒಂದಾದರೂ ಇಲ್ಲಿ ದೊರೆಯುವುದಿಲ್ಲ. ಅಲ್ಲದೆ ಮಾಧ್ವ ಮತಾವಲಂಬಿಗಳಾದ ಚಿಲಕೂರಿ ನಾರಾಯಣರಾವ್ ಅವರೇ ಶ್ರೀಕರಭಾಷ್ಯದಲ್ಲಿ ಮಧ್ವರ ಬಗ್ಗೆ ಉಲ್ಲೇಖವೇ ಇಲ್ಲವೆಂದು ಹೇಳಿದ್ದಾರೆ: ‘ಈ ಭಾಷ್ಯದಲ್ಲಿ ದೈತಮತ ನಿರಾಕರಣೆಯಿಲ್ಲವೆಂದಲ್ಲ. ಆದರೆ ಅದು ಮಧೋಪಜ್ಞ ದೈತಮತವಲ್ಲ. ಬದಲಾಗಿ ಅದು ಪ್ರಾಚೀನ ದೈತವೆಂಬುದು ಸುಸ್ಪಷ್ಟ’ (ಪಂಡಿತಾರಾಧ್ಯ ಚರಿತ್ರ, ಭೂಮಿಕೆ, ಪು. ೩೧).
ಈ ಹಿನ್ನೆಲೆಯಲ್ಲಿ ‘ಶಿವಸುತರು 207ನೇ ಪುಟದಲ್ಲಿ ದೈತಮತ ಖಂಡನೆಯ ಬಗ್ಗೆ ಮತ್ತು ಸಾಮ್ಯ-ಭೇದಗಳ ಬಗ್ಗೆ ಹೇಳಿರುವುದು ಅವರ ತಪ್ಪು ಕಲ್ಪನೆ ಎಂದೇ ಹೇಳಬೇಕಾಗುತ್ತದೆ. ಶ್ರೀ ರಾಮಾನುಜರ ಕಾಲ 1017ರಿಂದ 1130, ಶ್ರೀಸ್ವಾಮಿಗಳು ಪು. ೬೮ರಲ್ಲಿ ಗುರುತಿಸಿದಂತೆ 1140 ಅಲ್ಲ.
ಶ್ರೀಕಂಠ ಶಿವಾಚಾರ್ಯರ ಕಾಲ ಕ್ರಿ.ಶ.1064; ಹೀಗಿರುವಾಗ ಅವರಿಬ್ಬರ ಕಿರಿಯ ಸಮಕಾಲೀನ ರಾಗಿದ್ದ ಶ್ರೀಪತಿ ಪಂಡಿತರ ಕಾಲ ಕ್ರಿ.ಶ. 1070. ಇದಕ್ಕೆ ಇನ್ನೊಂದು ಆಧಾರ ಪುಲ್ಲಕವಿಯ ಶ್ರೀಶೈಲ ಪಂಡಿತಾರಾಧ್ಯ ಚರಿತೆಯಲ್ಲಿ ಹೇಳಿದಂತೆ ಶ್ರೀಪತಿ ಪಂಡಿತರು ‘ಶ್ರೀ ವಿರೂಪಾಕ್ಷ ದೇಶಿಕೇಂದ್ರ’ರಿಂದ ವಾದದಲ್ಲಿ ಸೋಲಿಸಲ್ಪಟ್ಟರು ಮತ್ತು ಅವರಿಂದ ದೀಕ್ಷೆಯನ್ನು ಪಡೆದುಕೊಂಡರು ಎಂಬುದು.
ಶ್ರೀ ವಿರೂಪಾಕ್ಷ ದೇಶಿಕೇಂದ್ರರ ಕಾಲ ಕ್ರಿ.ಶ. 1050 (ವಿದ್ವಾನ್ ಎಂ.ಜಿ.ನಂಜುಂಡಾರಾಧ್ಯರು ಶ್ರೀಕರ ಭಾಷ್ಯಕ್ಕೆ ಬರೆದ ಭೂಮಿಕೆ, ಕನ್ನಡ ಭಾಷಾಂತರ ಪು. 123, ಎರಡನೇ ಸಂಪುಟದ ಕಡೆಯಲ್ಲಿನ ಪರಿಶಿಷ್ಟ) ಎಂದು ಸವಿವರವಾಗಿ ವಿದ್ವತ್ಪೂರ್ಣವಾಗಿ ಪುರಾವೆ ಸಮೇತ ಸದಾಶಿವಯ್ಯನವರ ‘ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆ’ಯ ಪರಿಣಾಮವನ್ನು ಸಶಕ್ತವಾಗಿ ಕಟ್ಟಿಕೊಡು ತ್ತಾರೆ.
ಹೀಗೆ ಆರಂಭಗೊಂಡ ಅರಿಂಚು ಎತ್ತರದ ಪೀಠದ (ಕುರ್ಚಿಯ) ಈರ್ಷ್ಯೆ, ಇಂದು ಯುಗಯುಗಗಳ ಇತಿಹಾಸವನ್ನೇ ಮರೆ ಮಾಚುವ ಒಕ್ಕೂಟವಾಗಿ ಬೆಳೆದಿದೆ. ಇದಕ್ಕೆ ಪರಿತ್ಯಕ್ತ ಸಂಶೋಧಕರು, ಅಧಿಕಾರದಾಹಿಗಳು, ತ್ಯಾಜ್ಯ ಸಾಹಿತಿಗಳು, ಸ್ವಘೋಷಿತ ಚಿಂತಕರು, ‘ಕಾಫಿಗಾಗಿ ಕರ್ಮ, ದೋಸೆಗಾಗಿ ಧರ್ಮ’ (ಇಲ್ಲಿ ಕಾಫಿ, ದೋಸೆಗಳಿಗೆ ಕಾಲಾನುಕ್ರಮವಾಗಿ ಪರ್ಯಾಯ ಪದಗಳನ್ನು ಹಾಕಿಕೊಂಡು ಓದಿ) ಎನ್ನುವ ಹಿಂಬಾಲಕರು, ಪ್ರಚಾರದ ತೆವಲಿನ ಕಾವಿಗಳು,‘ ಫಡ ಫಡ ಶಿಖಂಡಿ ಎಂದಡಿಗಡಿಗೆ ನುಡಿಯಬೇಡೆಲೋ ಮೂಢ’ ಎಂಬಂಥ ಸಂಭಾಷಣಾ ರಂಜನೆಯ ಭೀಷಣ ಭಾಷಣಕೋರ ರೆಲ್ಲರೂ ಒಗ್ಗೂಡಿದ್ದಾರೆ.
ಈ ಮೂರ್ಖ ಗಾಂಪ ಗುಂಪಿಗೆ ಕುರ್ಚಿಗಾಗಿಯೇ ಬಡಿದಾಡುವ ರಾಜಕಾರಣಿಗಳು ಬಂಡವಾಳ ಹೂಡಿದ್ದಾರೆ. ವ್ಯವಹಾರಚತುರ ಲಿಂಗಾಹತರು ಅಂಗಡಿ ತೆರೆದು ಬಸವಣ್ಣನನ್ನು ಅಪಹರಿಸಿ ಅಡವಿಟ್ಟುಕೊಂಡು ಬಸವ ಧರ್ಮ, ಬಸವ ಸಂಸ್ಕೃತಿ, ಶರಣ ಸ್ಮೃತಿ, ಬಸವಂ ಶರಣಂ ಗಚ್ಛಾಮಿ, ಲಿಂಗಂ ಶರಣಂ ಅಚ್ಛಾಮಿ, ಒಕ್ಕೂಟ, ಜಾಗತಿಕ ಸಭಾ ಇತ್ಯಾದಿಯಾಗಿ ಬಗೆಬಗೆಯ ಬಣ್ಣದ ವೇಷ ಧರಿಸಿ ಪೌರಾಣಿಕ ಈಡಿಪಸ್ ನಾಟಕವನ್ನೇ ಆಧುನಿಕತೆಗೆ ಮಾರ್ಪುಗೊಳಿಸಿ ರಂಗಜಂಗಮ ನಿರ್ದೇಶನದಲ್ಲಿ ರಾಜ್ಯಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ.
ಇಮ್ಮಡಿ ಶಿವಬಸವ ಸ್ವಾಮಿಗಳಂತೆಯೇ ಅವರ ವಾರಸುದಾರರು ಸಹ ಅದೇ ಹಾದಿ ಹಿಡಿದಿದ್ದಾರೆ. ವೃತ್ತಿಪರ ಸಂಸ್ಕೃತ ವಿದ್ವಾಂಸರೂ, ‘ಶಕ್ತಿವಿಶಿಷ್ಟಾದ್ವೈತ’ ಪಂಡಿತರೂ, ಸಂಶೋಧನಾ ಚತುರರೂ ಆಗಿ ವೀರಶೈವ ಲಿಂಗಾಯತ ಸಮಾನಾರ್ಥಕ ಪದಗಳೆಂದೇ ಪರಿಗಣಿಸಿ, ವೀರಶೈವ/ಲಿಂಗಾಯತ ಮಠಗಳು- ಒಂದು ಅವಲೋಕನ, ವೀರಶೈವ/ಲಿಂಗಾಯತ ಸಮಾಜ- ಒಂದು ಅವಲೋಕನ, ವೀರಶೈವ ಧಾರ್ಮಿಕ-ತಾತ್ವಿಕ ಚಿಂತನೆ, ವಚನಸಾಹಿತ್ಯ ಮತ್ತು ವೇದೋಪನಿಷತ್ತುಗಳು ಎಂಬ ಗ್ರಂಥಗಳನ್ನು ಸಂಪಾದಿಸಿದ್ದಾರೆ.
ಹೀಗಿದ್ದೂ ಈಗ ಪುಟದಿಂದ ಪುಟಕ್ಕೆ ರzಗುವ ಸಂಶೋಧನೆಗಳ ಕಲಬುರ್ಗಿಗೆ ಜಯಕಾರ ಹಾಕುತ್ತಾ ಮುಜುಗರ ಸಂಕೀರ್ಣಿಗಳ ಗುಂಪಿಗೆ ಶರಣಾಗಿದ್ದಾರೆ. ತನ್ಮೂಲಕ ತಮ್ಮ ಹಿರಿಯ ಶ್ರೀಗಳ ಸಂಕೀರ್ಣತೆ ಯ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ.
ಇರಲಿ, ಇವರದೆಲ್ಲವೂ ಬಸವಣ್ಣ ಮತ್ತವನು ಪಾಲಿಸಿದ ಧರ್ಮಕ್ಕೆ ಹೊರಗು! ಇದು ಬಸವಣ್ಣನ ಹೆಸರನ್ನು ಬಳಸಿ ಅವನಿಗೆ ಮಾಡುತ್ತಿರುವ ಅಪಚಾರ! ವೀರಶೈವ ಧರ್ಮ ಪ್ರಸಾರಕ, ಭಕ್ತಿ ಭಂಡಾರಿ ಬಸವಣ್ಣನನ್ನು ಈ ಭಂಜಕರು ತಮ್ಮ ಗುರಾಣಿಯಾಗಷ್ಟೇ ಮಾಡಿಕೊಂಡಿದ್ದಾರೆ.
ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಿಕೊಂಡು ಅದರಡಿಯಲ್ಲಿಯೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆಯಲ್ಲ, ಹಾಗೆ ಇಂದು ಬಸವಣ್ಣನು ಭ್ರಷ್ಟ, ಧರ್ಮಭಂಜಕ, ವ್ಯಭಿಚಾರಿಗಳ ಮುಖವಾಡವಾಗಿ ಬಿಟ್ಟಿದ್ದಾನೆ. ಬಸವ ಮುಖವಾಡದಾಚೆಯ ಇವರ ಭಂಜಕತನ ವನ್ನು, ವ್ಯಭಿಚಾರವನ್ನು, ಭ್ರಷ್ಟಾಚಾರವನ್ನು ಬಯಲೆಗೆಳೆದವರನ್ನು ‘ಬಸವದ್ವೇಷಿಗಳು’ ಎಂದು ದೂಷಿಸಿ ಪರೋಕ್ಷವಾಗಿ ಬಸವದ್ವೇಷವನ್ನು ಪ್ರಸಾರ ಮಾಡುತ್ತಿದ್ದಾರೆ.
ಈ ಧರ್ಮಭಂಜಕ ವಂಚಕರಿಂದ ಬಸವಣ್ಣನನ್ನು ಬಿಡಿಸಿ ಅಖಂಡ ವೀರಶೈವವನ್ನು ಎತ್ತಿ ಹಿಡಿಯಬೇಕಾದ ಸಮಾಜ ಗೊಂದಲಗೊಂಡು ಕಣ್ಣಿದ್ದೂ ಕುರುಡಾಗಿ, ಕಿವಿಯಿದ್ದೂ ಕಿವುಡಾಗಿದೆ. ಇದೆಲ್ಲಕ್ಕೂ ತಕ್ಕ ಪ್ರತಿಕ್ರಿಯೆ ನೀಡಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ‘ವೀರಶೈವ ಮಹಾ ಸಭಾ’ ಎನ್ನುವ ಧರ್ಮದ ವಾರಸುದಾರ ಸಂಸ್ಥೆಯು ಕಾಲಾಂತರದಲ್ಲಿ ಇಂದು ಶ್ರೀಮಂತ, ಲೋಲುಪ್ತ, ವಿಲಾಸಿ ಜೀವಿಗಳ, ಆದರೆ ವೀರಶೈವ ಲಿಂಗವಂತ ಎನ್ನುವ ಧರ್ಮಕ್ಕೆ ಅಂಟಿಕೊಂಡ ವ್ಯಕ್ತಿಗಳ ಸಾಂಸ್ಕೃತಿಕ ಚಟುವಟಿಕೆಯ ಕ್ಲಬ್ ಆಗಿ ಪರಿವರ್ತನೆಗೊಂಡಿದೆ.
ಒಂದೊಮ್ಮೆ ವಚನಗಳ ಅಂಕಿತ ತಿದ್ದಿದ್ದನ್ನು ಖಂಡಿಸಿ ಕೋರ್ಟಿಗೆಳೆದು ಪಾಠ ಕಲಿಸಿದ್ದ ಮಹಾ ಸಭಾವು ಇಂದು ವಚನಗಳಲ್ಲಿನ ವೀರಶೈವ ಪದ ಮತ್ತು ಸಂಸ್ಕೃತ ಪದಗಳನ್ನು ತಿದ್ದುವ ಕಾರ್ಯ ಮಾಡುತ್ತಿರುವ ಬಸವ ಸಮಿತಿಯ ಕುಕೃತ್ಯಕ್ಕೆ ಏನೂ ಮಾಡದೆ ತಟಸ್ಥವಾಗಿದೆ. ಈ ತಿದ್ದುವಿಕೆಯಲ್ಲಿ ತೊಡಗಿರುವ ಸಂಶೋಧಕ ರಾಜೂರ ಮತ್ತು ಬಸವ ಸಮಿತಿಯ ದಾರ್ಶನಿಕರು ಇದೊಂದು ಮಹಾನ್ ಕಾರ್ಯವೆಂದು ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ಈ ತಿದ್ದುವಿಕೆಗೆ ಯಾವ ಐತಿಹಾಸಿಕ ಸಾಕ್ಷಿ ಪುರಾವೆಗಳು ಇವರಲ್ಲಿವೆ? ಇದ್ಯಾವುದನ್ನೂ ಪ್ರಶ್ನಿಸದ ಮಹಾಸಭಾದ ತಟಸ್ಥ ನಿಲುವಿಗೆ ಕಾರಣವೇನು? ಧರ್ಮಭಂಜಕರ ಪರ ಮತ್ತು ವಿರೋಧದ ಇಂದಿನ ಗುಂಪಿನ ಮುಖಂಡರ ನಡುವಿನ ಪರಸ್ಪರ ಹೊಂದಾಣಿಕೆಯ ಕಾರಣ ವೀರಶೈವ ಮಹಾಸಭಾ ಇಂದು ನಿಸ್ತೇಜ ಶವವಾಗಿದೆ.
ಇವರೆಲ್ಲರ ಬೀಗರಾಟ, ಬೀಗರೂಟಕ್ಕೆ ಮಹಾಸಭಾ ವೇದಿಕೆಯಾಗಿ ವೀರಶೈವ ಸಾಹಿತ್ಯದ ತಿದ್ದುವಿಕೆ ತಿರುಚುವಿಕೆ ನಿರಾಳವಾಗಿ ನಡೆಯುತ್ತಿದೆ. ಒಂದೊಮ್ಮೆ ರಾಜ್ಯದ ಕಂಟಕವಾಗಿದ್ದ ನರಹಂತಕನನ್ನು ಮಟ್ಟ ಹಾಕಿದಂಥ ದಕ್ಷ ಅಧಿಕಾರಿ ಇಂದು ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದರೂ ಈ ಬೀಗರಾ ಟೂಟಕ್ಕೆ ಗೂಟ ಹೊಡೆಯದಾಗಿದ್ದಾರೆ.
ಏನಾದರೂ ಮಾಡಬೇಕೆಂಬ ದೃಢ ಮನಸ್ಸಿದ್ದರೂ ಅಧಿಕಾರ ವಿಹೀನರಾಗಿದ್ದಾರೆ. ಅಷ್ಟರ ಮಟ್ಟಿಗೆ ಮಹಾಸಭಾವು ಪ್ರಭಾವಿ ಶ್ರೀಮಂತ ರಾಜಕಾರಣಿಗಳ ಸಾಂಸ್ಕೃತಿಕ ಚಟುವಟಿಕೆಯ ಕ್ಲಬ್ ಆಗಿ ಕಾರ್ಯಶೀಲರನ್ನು ಕಟ್ಟಿಹಾಕಿದೆ. ಇದರಿಂದ ಸಾಮಾನ್ಯ ವೀರಶೈವರಿಗೆ ಒಂದು ನಯಾಪೈಸೆ ಯಷ್ಟೂ ಆರ್ಥಿಕ, ಸಾಮಾಜಿಕ, ಧಾರ್ಮಿಕ ಉಪಯೋಗವಿಲ್ಲ ಎನ್ನುವುದು ಸಮಾಜದ ಸುಪ್ತ ಮಾತಾಗಿದೆ.
ಈ ಸುಪ್ತಮಾತಿಗೆ ‘ವಿಶ್ವವಾಣಿ’ಯು ಮುಖವಾಣಿಯಾಗಿ ಅನಾದಿಯಿಂದ ವರ್ತಮಾನದವರೆಗಿನ ಅಖಂಡ ವೀರಶೈವ ಲಿಂಗವಂತ ಸಮಾಜದ ಪರಂಪರೆ, ಹೋರಾಟ, ಕ್ರಾಂತಿಯ ನಿಜದ ನಿಲುವು ಒಲವನ್ನು ಮತ್ತು ಭಂಜಕರ ಬಯಲಾಟವನ್ನು ಸಾಕ್ಷಿ ಪುರಾವೆ ಸಮೇತ ಬಯಲಾಗಿಸಿದೆ.
ಇನ್ನುಳಿದಂತೆ ಅಖಂಡ ವೀರಶೈವ ಲಿಂಗವಂತ ಸಮಾಜದ ಶ್ರೀಸಾಮಾನ್ಯ ಎಚ್ಚೆತ್ತು, “ಎತ್ತೆತ್ತ ನೋಡಿದಡತ್ತತ್ತ ಇವರಾಟವೇ ದೇವಾ, ಸಕಲವಿಸ್ತಾರದ ರೂಹು ಈಡಿಪಸನೇ ಮಹದೇವಾ, ‘ಭಂಜಕತಶ್ಚಕ್ಷು’ವೇ ಗುರು, ‘ಭಂಜಕತೋಮುಖ’ವೇ ಲಿಂಗ, ‘ಭಂಜಕತೋಬಾಹು’ವೇ ಜಂಗಮ ವೆಂದು, ‘ಭಂಜಕತಃಪಾದಂ’ಗಳ ಧೂಳಡಿಯ ತೃಣವಾಗಿ ನಿನ್ನ ಮಾಡಿಹರಯ್ಯ!
ತಾಯ್ಗಂಡ ಈಡಿಪಸರ ಹುಚ್ಚು ಬೆಚ್ಚಿ ಹೋಗುವಂತೆ ಹಾದರಿಗರ ಆಶೆ ಆವಿಯಾಗುವಂತೆ ಮಿಗಬಾರದು ಮಿಗದಿರಬಾರದೆಂಬಂತೆ ಅವರ ನೆತ್ತಿಯ ಮೇಲ್ನಿನ್ನ ಕಾಲ್ಮುರಿಗಿ ಹರಿಯುವಂತೆ ಬಾರಿಸೋ ಬಾರಿಸು ಹಗೆದಿಬ್ಬೇಶ್ವರ ಮಹನೀಯ" ಎಂದು ಭಂಜಕತನಕ್ಕೆ ಮಹಾಮಂಗಳವನ್ನು ಹಾಡಿ ಪರಂಪರೆಯ ಅಭ್ಯುದಯಕ್ಕೆ ದಾಂಗುಡಿಯಿಡಬೇಕಷ್ಟೇ....
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)