ಸಿನಿಮಾಸ್
ಮತ್ತೊಂದು ‘ಮಠ’
ಗುರುಪ್ರಸಾದ್ ನಿರ್ದೇಶನದ ‘ಮಠ’ ಸಿನಿಮಾ ಯಾರಿಗೆ ನೆನಪಿಲ್ಲ. ಕಾಮಿಡಿ ಜಾನರ್ನಲ್ಲಿ ಅದ್ಬುತ ಸಂದೇಶವನ್ನು ನೀಡಿದ ಸಿನಿಮಾ. ಗುರುಪ್ರಸಾದ್ ಅವರಿಗೆ ಹಾಗೂ ಜಗ್ಗೇಶ್ ಅವರಿಗೆ ಹೆಸರು ಚಿತ್ರವದು. ಈಗ ಅದೇ ಹೆಸರಿನ ಹೊಸಬರ ‘ಮಠ’ ಸಿನಿಮಾ ಸೆಟ್ಟೇರಿದ್ದು, ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚಿಗೆ ಮುಹೂರ್ತ ಕಾರ್ಯಕ್ರಮ ನಡೆಯಿತು.
‘ಪುಟಾಣಿ ಸಫಾರಿ’ ‘ವರ್ಣಮಯ’ ಚಿತ್ರವನ್ನು ನಿರ್ದೇಶಿಸಿರುವ ರವೀಂದ್ರ ವೆನ್ಶಿಯವರು ಮಠ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕಾರ್ಯಕ್ರಮದ ನಂತರ ಮಾತನಾಡಿದ ವೆನ್ಶಿ, ಕಾಮಿಡಿ ಜಾನರ್ನ ಸಿನಿಮಾ ಇದಾಗಿದ್ದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು. ಗುರುಪ್ರಸಾದ್ ರವರ ಮಠಕ್ಕೂ ಈ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದರು. ಇದು ಕಲ್ಪಿತ ಕಥೆಯಲ್ಲ. ಜೀವನಕ್ಕೆ ಹತ್ತಿರವಾಗುವಂತಹ ಈ ಸಿನಿಮಾದಲ್ಲಿ ಕ್ರೋಢೀಕರಿಸಲಾಗಿದೆ ಎಂದರು.
ಮಠ ಚಿತ್ರದಲ್ಲಿ ತರಂಗ ಸಂತೋಷ್ ಎಂಬುವವರು ಪ್ರಮುಖ ಪಾತ್ರವಹಿಸಿದ್ದು, ಅವರ ಸುತ್ತವೇ ಮಠ ಗಿರಕಿ ಹೊಡೆಯುತ್ತದೆ. ತರಂಗ ಸಂತೋಷ್ ಮೂಲತಃ ರಂಗಭೂಮಿ ಕಲಾವಿದರಾಗಿದ್ದು ಎ.ಎಸ್. ಮೂರ್ತಿ ಅವರ ಶಿಷ್ಯ. ಇವರು ರಚಿಸಿದ್ದ ಕರ್ನಾಟಕದ ಮಠಗಳ ಮಾರ್ಗದರ್ಶನ ಪುಸ್ತಕವೇ ಈ ಮಠ ಚಿತ್ರಕ್ಕೆ ಮೂಲ ಪ್ರೇರಣೆಯಾಗಿದೆಯಂತೆ.
ಮಠವೆಂದರೆ ಪರ್ಯಾಯ ಸರ್ಕಾರ ಮತ್ತು ನೆಗೆಟೀವ್ ಶೇಡ್ ಹೊರತುಪಡಿಸಿ ಮಠದ ಒರಿಜಿನಲ್ ಪಾಸಿಟೀವ್ ಥೀಮನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಚಿತ್ರದ ಮೂಲಕ ಮಾಡಲಾಗುವುದಂತೆ.
ಈ ಚಿತ್ರದಲ್ಲಿ 5 ಹಾಡುಗಳಿದ್ದು, ವರ್ಣಮಯ ಸಂಗೀತ ನಿರ್ದೇಶಕ ಶ್ರೀಗುರು ಮಠಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮುಖವಾಗಿ ಈ ಚಿತ್ರದಲ್ಲಿ 8 ಜಾನಪದ ಗೀತೆಗಳನ್ನು ಅಳವಡಿಸಿಕೊಂಡಿರುವುದು ಮಠಕ್ಕೆ ಪ್ಲಸ್ ಪಾಯಿಂಟ್.
ಕರ್ನಾಟಕದ 30 ಜಿಲ್ಲೆಗಳಲ್ಲಿಯೂ ಚಿತ್ರದ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿದ್ದು, ಚಾಮರಾಜ ನಗರದ ಚಿಕ್ಕ ಮಠದಿಂದ ಬೀದರ್ನ ಬಾಲ್ಕಿವರೆಗೆ ಶೂಟಿಂಗ್ ಮಾಡಲಾಗುವುದಂತೆ. ಚಿತ್ರಕ್ಕೆ ರಂಗಭೂಮಿ ಕಲಾವಿದರನ್ನೇ ಆರಿಸಿಕೊಳ್ಳಲು ಯೋಜಿಸಲಾಗಿದ್ದು,ಆಯ್ಕೆ ಪ್ರಕ್ರಿಯೆ ಬರದಿಂದ ಸಾಗುತ್ತಿದೆ. ಚಿತ್ರವನ್ನು ರಮೇಶ್ ನಿರ್ಮಿಸುತ್ತಿದ್ದು, ಜೀವನ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಸ್ಟಾರ್ ನಾಗಿ, ವಿಜಯನಗರ ಮಂಜು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಡಿಸೆಂಬರ್ ಮೊದಲನೇ ವಾರ ಚಿತ್ರೀಕರಣ ಪ್ರಾರಂಭವಾಗಲಿದೆ.