ವಿಶ್ವವಾಣಿ

‘ಅನುಕ್ತ’ ಯಾರಿಗೂ ಹೇಳಿಲ್ಲವಂತೆ


ಕರಾವಳಿಯ ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ತೊರಿಸುವಂತಹ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರಕ್ಕೆೆ ‘ಅನುಕ್ತ’ ಎಂದು ನಾಮಕರಣ ಮಾಡಲಾಗಿದೆ. ‘ಅನುಕ್ತ’ ಅಂದರೆ ಹೇಳದಂತ ಅನ್ನುವ ಅರ್ಥವಿದ್ದು, ಒಂದು ಕನಸ್ಸು ಬಿದ್ದರೆ ಅದರರ್ಥ ಏನು, ಯಾಕೆ ಎಂದು ಕಾಡುವುದಕ್ಕಾಗಿ ಈ ಹೆಸರನ್ನು ಇಟ್ಟಿದ್ದೇವೆ ಎನ್ನುತ್ತದೆ ಚಿತ್ರ ತಂಡ.

ಮೂಲತಃ ಕನ್ನಡದವರು, ಬಾಂಬೆಯ ಸೋನಿ ವಾಹಿನಿಯಲ್ಲಿ ಸಂಕಲನ, ನಿರ್ದೇಶನದ ನಂತರ ದುಬೈನಲ್ಲಿ ಸರಿಸುಮಾರು ಎಂಟು ವರ್ಷಗಳ ಸೇವೆ ಸಲ್ಲಿಸಿರುವ ಅಶ್ವಥ್ ಸ್ಯಾಮುಯಲ್ ‘ಅನುಕ್ತ’ ಚಿತ್ರಕ್ಕೆೆ ಚಿತ್ರಕಥೆ ರಚಿಸಿ, ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸಂತೋಷ್ ಕುಮಾರ್ ಕೊಂಚಾಡಿ ಮತ್ತು ಕಾರ್ತಿಕ್ ಅತ್ತಾವರ್ ಕತೆ ಬರೆದು, ನವೀನ್ ಶರ್ಮಾ ಹಾಗೂ ಕಿರಣ್ ಶೆಟ್ಟಿ ಸಂಭಾಷಣೆ ಬರೆದಿರುವ ಚಿತ್ರಕ್ಕೆೆ ಸಂತೋಷ್ ಕುಮಾರ್ ಕೊಂಚಾಡಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ನಟಿಸಿರುವ ಸಂಪತ್‌ರಾಜ್ ಈ ಚಿತ್ರದ ವಿಶೇಷ ಪಾತ್ರವೊಂದಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಂಗೀತಾ ಭಟ್, ಅನು ಪ್ರಭಾಕರ್, ಶ್ರೀಧರ್, ಉಷಾ ಭಂಡಾರಿ, ಚಿದಾನಂದ ಪೂಜಾರಿ, ಅನಿಲ್ ನೀನಾಸಂ, ರಮೇಶ್ ರೈ ಮುಂತಾದವರು ಚಿತ್ರದ ಇತರೆ ಪಾತ್ರಗಳಾಗಿ ಬಣ್ಣ ಹಚ್ಚಿದ್ದಾರೆ. ಶ್ರೀಹರಿ ಬಂಗೇರ ನಿರ್ಮಿಸುತ್ತಿರುವ ‘ಅನುಕ್ತ’ ಚಿತ್ರಕ್ಕೆೆ, ಮನೋಹರ್ ಜೋಷಿ ಛಾಯಾಗ್ರಹಣ, ಎನ್.ಎಂ.ವಿಶ್ವ ಸಂಕಲನ ಕಾರ್ಯವಿದೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಬ್ರಹ್ಮಾವರದಲ್ಲಿರುವ 500 ವರ್ಷದ ಪುರಾತನ ಮನೆ, ಕರಾವಳಿಯ ಸುಂದರ ತಾಣಗಳು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಆಡಿಯೊ ದುಬೈನಲ್ಲಿ ಬಿಡುಗಡೆಯಾಗಲಿದ್ದು, ಮುಂದಿನ ತಿಂಗಳು ಚಿತ್ರದ ಟ್ರೇಲರ್‌ನ್ನು ಹೊರತರಲು ಚಿತ್ರ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.