ಅಡಕೆ ಹಾಳೆ ಬಂತು ಅಮೆಜಾನ್‌ಗೂ ಅಮೆರಿಕೆಗೂ!

Posted In : ಅಂಕಣಗಳು, ತಿಳಿರು ತೋರಣ

ಅಡಕೆ ಹಾಳೆಯ ತಟ್ಟೆಗಳ ಬಗ್ಗೆ ನಾನು ಹಿಂದೊಮ್ಮೆ ಬರೆದಿದ್ದೆ. ವಿಜಯ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದ ಪರಾಗಸ್ಪರ್ಶ ಅಂಕಣದಲ್ಲಿ 22 ಮಾರ್ಚ್ 2009ರ ಲೇಖನ, ಅದನ್ನು ಹೀಗೆ ಕೊನೆಗೊಳಿಸಿದ್ದೆ-‘ಸ್ವತಃ ಅಡಕೆ ಕೃಷಿಕರಾಗಿರುವ ಇನ್ನೋರ್ವ ಹಿರಿಯ ಮಿತ್ರ ಪುತ್ತೂರಿನ ಗೋವಿಂದ ಭಟ್ ಅವರದು ಬೇರೊಂದು ರೀತಿಯ ಗ್ಲೋಬಲ್ ಥಿಂಕಿಂಗ್. ಎಷ್ಟೆಂದರೂ ಅವರು ಸೈಕಲ್ ಮೇಲೆ ವಿಶ್ವಪರ್ಯಟನೆ ಮಾಡಿಬಂದ ಸಾಹಸಿಗ. ಅವರು ‘ಹಳ್ಳಿಯಿಂದ’ ಅಂತೊಂದು ಬ್ಲಾಗ್ ಬರೆಯುತ್ತಾರೆ. ಅದರಲ್ಲಿ ಅಡಕೆ ಹಾಳೆಯ ತಟ್ಟೆಗಳ ಬಗ್ಗೆಯೂ ಪ್ರಸ್ತಾವಿಸಿದ್ದಾರೆ. ಅಮೆರಿಕದ ಜನತೆಗೆ ಅಡಕೆ ಹಾಳೆಯ ತಟ್ಟೆಗಳನ್ನು ಪರಿಚಯಿಸಬೇಕು ಎಂಬ ಮಹತ್ವಾಕಾಂಕ್ಷೆ ಅವರದು.

ಹಾಗೇನಾದರೂ ಆದರೆ… ಅಡಕೆ ಹಾಳೆಯ ತಟ್ಟೆಗಳು ಬಿಳಿಮನೆಯ ಡೈನಿಂಗ್‌ಟೇಬಲ್ ಮೇಲೂ ರಾರಾಜಿಸಿದರೆ… ಬರಾಕ್ ಒಬಾಮನ ಮಕ್ಕಳಿಗೆ ಅಡಕೆ ಹಾಳೆಯ ಮೇಲೆ ಕುಳಿತು ಜಾರುಬಂಡೆ ಆಟ ಆಡುವ ಯೋಗವಲ್ಲದಿದ್ದರೂ ಅಡಕೆ ಹಾಳೆಯ ತಟ್ಟೆಯಲ್ಲಿ ಊಟ ಮಾಡುವ, ಕಡೇ ಪಕ್ಷ ನೂಡಲ್ಸ್ ತಿನ್ನುವ ಯೋಗವಾದರೂ ಬರಬಹುದು!’  ಆಗಿನ್ನೂ ಬರಾಕ್ ಒಬಾಮ ಮೊದಲ ಸಲ ಅಧ್ಯಕ್ಷ ಗಾದಿಗೆ ಏರಿ ಒಂದೆರಡು ತಿಂಗಳುಗಳಷ್ಟೇ ಆಗಿದ್ದವು. ಒಬಾಮನ ಮಕ್ಕಳು ಮಲಿಯಾ ಮತ್ತು ಸಾಷಾ ಇನ್ನೂ ಚಿಕ್ಕವರಿದ್ದರು.

ಅವರಿಗೆ ಆಡಲಿಕ್ಕಂತ ಶ್ವೇತಭವನದ ಅಂಗಳದಲ್ಲಿ ಜಾರುಬಂಡಿ ಹಾಕಿಸಿದ್ದು ಆಗ ಇಲ್ಲಿನ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿ ಬೆಳೆದ ನನ್ನಂಥವರು ಚಿಕ್ಕಂದಿನಲ್ಲಿ ಅಡಕೆ ಹಾಳೆಯ ಮೇಲೆ ಕುಳಿತು ಕಲ್ಲುಬಂಡೆಯ ಮೇಲೆ ಜಾರುತ್ತಿದ್ದದ್ದನ್ನು (ಚಡ್ಡಿ ಹರಿದುಕೊಳ್ಳುತ್ತಿದ್ದದ್ದನ್ನೂ) ನೆನಪಿಸಿಕೊಂಡು ಆ ಸಂದರ್ಭದಲ್ಲಿ ನಾನೊಂದು ಲಹರಿ ಹರಿಸಿದ್ದೆ. ಬೆಂಗಳೂರಿನಲ್ಲಿ ಯಾಹೂ ಕಂಪನಿಯ ಆಫೀಸ್ ಕ್ಯಾಫೆಟೇರಿಯಾದಲ್ಲಿ ಅಡಕೆ ಹಾಳೆಯ ತಟ್ಟೆಗಳ ಬಳಕೆ ಆರಂಭಿಸಿದ್ದಾರೆಂದು, ತಾನು ಕೆಲವೊಮ್ಮೆ ಅಲ್ಲಿ ಅಡಕೆ ಹಾಳೆಯ ಬೌಲ್‌ನಲ್ಲಿ ಮ್ಯಾಗಿ ನೂಡಲ್‌ಸ್‌ ತಿನ್ನುವುದಿದೆಯೆಂದು ಕಾರ್ತಿಕ್ (ನನ್ನಣ್ಣನ ಮಗ) ಹೇಳುತ್ತಿದ್ದುದನ್ನೂ ಆ ಹರಟೆಯಲ್ಲಿ ಸೇರಿಸಿದ್ದೆ. ಹಾಗಾಗಿಯೇ ಉಪಸಂಹಾರದಲ್ಲಿ ಅಡಕೆ ಹಾಳೆಯ ಜಾರುಬಂಡೆ ಆಟ ಮತ್ತು ಮ್ಯಾಗಿ ನೂಡಲ್ಸ್ ಉಲ್ಲೇಖವಾದದ್ದು.

ಅದಾದ ಮೇಲೆ ಈ ಏಳೆಂಟು ವರ್ಷಗಳಲ್ಲಿ ಅಡಕೆ ತೋಟಗಳ ಸುತ್ತ ಹರಿಯುವ ನೇತ್ರಾವತಿ, ಶರಾವತಿ, ತುಂಗಭದ್ರಾ ಮುಂತಾದ ನದಿಗಳಲ್ಲಿ ಮಾತ್ರವಲ್ಲ ಇಲ್ಲಿ ವಾಷಿಂಗ್ಟನ್‌ನ ಪೊಟೊಮ್ಯಾಕ್ ನದಿಯಲ್ಲೂ ಸಾಕಷ್ಟು ನೀರು ಹರಿದಿದೆ. ಒಬಾಮ ತನ್ನ ಎರಡನೆ ಅವಧಿಯನ್ನೂ ಮುಗಿಸಿ ಇನ್ನೇನು ಟ್ರಂಪಣ್ಣನಿಗೆ ಬಿಳಿಮನೆಯನ್ನು ಬಿಟ್ಟುಕೊಡುವ ತಯಾರಿ ನಡೆಸಿದ್ದಾನೆ. ಯಾಹೂ ಕಂಪನಿಯ ಬೆಂಗಳೂರು ಆಫೀಸಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಈಗ ಕ್ಯಾಲಿಫೋರ್ನಿಯಾದಲ್ಲಿ ಯಾಹೂ ಹೆಡ್‌ಕ್ವಾರ್ಟರ್ಸ್‌ಗೆ ಸೇರಿ ವರ್ಷಗಳು ಕಳೆದಿವೆ. ಮ್ಯಾಗಿ ಬ್ಯಾನ್ ಆಗಿ ಆ ಬ್ಯಾನಿಗೇ ಬ್ಯಾನ್ ಸಹ ಆಗಿದೆ. ‘ಪರಾಗಸ್ಪರ್ಶ’ ಅಂಕಣ ಮುಗಿದು ಇದೀಗ ‘ತಿಳಿರುತೋರಣ’ ಅಂಕಣ ಹತ್ತಿರ ಹತ್ತಿರ ಒಂದು ವರ್ಷದ ಹೊಸ್ತಿಲಲ್ಲಿದೆ.

ಮತ್ತು, ಇವೆಲ್ಲದರ ಮಧ್ಯೆ ಮುಖ್ಯವಾಗಿ ಪುತ್ತೂರಿನ ಗೋವಿಂದ ಭಟ್ಟರ ಹಾರೈಕೆ ನಿಜವಾಗಿದೆ! ಅಮೆರಿಕದಲ್ಲಿ ಅಡಕೆ ಹಾಳೆಯ ತಟ್ಟೆಗಳ ಉಪಯೋಗ ವ್ಯಾಪಕವಾಗಿ ಶುರುವಾಗಿದೆ. ಶ್ವೇತಭವನದ ಡೈನಿಂಗ್‌ಹಾಲ್‌ನಲ್ಲಿ ಅಲ್ಲದಿದ್ದರೂ ಅಮೆರಿಕದ ಸಾಮಾನ್ಯ ಜನತೆಗೆ ಈಗ ಅಡಕೆ ಹಾಳೆಯ ತಟ್ಟೆಗಳ ಪರಿಚಯ ಆಗಿದೆ.  ಮೊನ್ನೆ ನವೆಂಬರ್ 20ರ ಭಾನುವಾರ ವಾಷಿಂಗ್ಟನ್ ಡಿಸಿ ಪ್ರದೇಶದ ನಮ್ಮ ‘ಕಾವೇರಿ’ ಕನ್ನಡ ಸಂಘದ ದೀಪಾವಳಿ + ರಾಜ್ಯೋತ್ಸವ + ಮಕ್ಕಳ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮ ಇತ್ತು. ಮಧ್ಯಾಹ್ನ ಭರ್ಜರಿಯಾಗಿ ಹಬ್ಬದೂಟ. ಜೆಎಸ್‌ಎಸ್ (ಜಗದ್ಗುರು ಶಿವರಾತ್ರೀಶ್ವರ ಸಂಸ್ಥಾನದ ವಾಷಿಂಗ್ಟನ್ ಶಾಖೆ) ಕ್ಯಾಟರಿಂಗ್ ವಿಭಾಗದವರ ಅಡುಗೆ. ಬಿಸಿಬೇಳೆಭಾತ್, ಪೂರಿ-ಸಾಗು, ಕಾಳಿನ ಪಲ್ಯ, ಮೊಸರನ್ನ, ಬಾದೂಶಾ ಎಲ್ಲ ಇದ್ದವು. ಅಚ್ಚಕನ್ನಡದ ಔತಣಕ್ಕೆ ಮತ್ತಷ್ಟು ರುಚಿ ಬಂದದ್ದು ಅಡಕೆ ಹಾಳೆಯ ಚೌಕಾಕಾರದ ತಟ್ಟೆಗಳಲ್ಲಿ ಬಡಿಸಿದ್ದರಿಂದ. ಈ ಹಿಂದೆ ಇದೇ ವರ್ಷ ಕಾವೇರಿ ಸಂಘದ ಗಣೇಶ ಚತುರ್ಥಿ ವಿಶೇಷ ಕಾರ್ಯಕ್ರಮದಲ್ಲೂ ಊಟ ಬಡಿಸಿದ್ದು ಅಡಕೆ ಹಾಳೆಯ ತಟ್ಟೆಗಳಲ್ಲೇ. ಜೆಎಸ್‌ಎಸ್‌ನವರದೇ ಅಡುಗೆ ಆಗಲೂ ಇದ್ದದ್ದು.

ಅವರ ಕ್ಯಾಟರಿಂಗ್ ಕಂಟ್ರಾಕ್ಟ್‌ನಲ್ಲಿ ಅಡಕೆ ಹಾಳೆಯ ತಟ್ಟೆಗಳೂ ಸೇರಿದ್ದಿರಬಹುದು ಎಂದು ನಾನಂದುಕೊಂಡಿದ್ದೆ. ಮತ್ತೆ ನೋಡಿದರೆ ವಿಷಯ ಹಾಗಲ್ಲ. ಕಾವೇರಿ ಸಂಘದಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿರುವ ಮಣಿ ಶ್ರೀನಿವಾಸ್ ಅವರ ಯೋಜನೆ ಅದು! ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಟ್ಟೆಗಳ ಬಲ್ಕ್ ಖರೀದಿ, ಕಾವೇರಿ ಕುಟುಂಬಕ್ಕೆಲ್ಲ ಹೊಸ ಬಗೆಯಲ್ಲಿ ಊಟ ಬಡಿಸುವ ಉಮೇದು ಎಲ್ಲವೂ ಅವರದೇ. ಅಷ್ಟಾಗಿ ಅವರೇನೂ ಮೂಲತಃ ಕರಾವಳಿಯವರಾಗಲೀ ಮಲೆನಾಡಿನವರಾಗಲೀ ಅಲ್ಲ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಆದರೂ ಕನ್ನಡನಾಡಿನ ಆಚಾರ-ವಿಚಾರ ಆಹಾರ-ವಿಹಾರ ವೈವಿಧ್ಯಗಳನ್ನು ಈ ದೇಶದಲ್ಲೂ ತೋರಿಸಬೇಕು, ಇಲ್ಲಿ ಹುಟ್ಟಿ ಬೆಳೆದ ಅಮೆರಿಕನ್ನಡಿಗ ಮಕ್ಕಳಿಗೂ ಪರಿಚಯಿಸಬೇಕು ಎಂಬ ತುಡಿತವಿರುವವರು. ಅದಕ್ಕೋಸ್ಕರವೇ ಎಲ್ಲೋ ಹುಡುಕಿ ಅಡಕೆ ಹಾಳೆಯ ತಟ್ಟೆಗಳ ವ್ಯವಸ್ಥೆ ಮಾಡಿದ್ದಾರೆ.

ನನ್ನಂಥವರಿಗೆ ಅದು ಮಣ್ಣಿನ ವಾಸನೆ ಆಘ್ರಾಣಿಸಿದ ಸಂತಸ. ತುಂಬ ಖುಷಿಯಾಯ್ತು. ಅಡಕೆ ಹಾಳೆಯ ತಟ್ಟೆಯಲ್ಲಿ ಊಟ ಮಾಡಿದ್ದಕ್ಕಂತೂ ಹೌದೇ ಹೌದು. ಅದಕ್ಕಿಂತ ಹೆಚ್ಚಾಗಿ ಈಗ ಅಮೆರಿಕದಲ್ಲೂ ಅವುಗಳ ಬಳಕೆ ಶುರುವಾಯ್ತಲ್ಲ ಎಂದು. ಅಡಕೆ ಹಾಳೆಯ ತಟ್ಟೆ ಇರಲಿ, ಹಾಳೆಯನ್ನೇ ನೋಡಿರದವರಿಗೆ, ಅದೇನೆಂದು ಗೊತ್ತಿಲ್ಲದವರಿಗೆ ಕೆಲ ವಿವರಗಳನ್ನಿಲ್ಲಿ ಕೊಡುತ್ತೇನೆ. ಅಡಕೆ ಮರ ಕಾಲಕಾಲಕ್ಕೆ ತನ್ನ ಒಂದೊಂದು ಸೋಗೆಯನ್ನು ಉದುರಿಸುತ್ತದೆ. ಹಾಗೆ ಉದುರಿದ ಸೋಗೆಯಲ್ಲಿ ಮರದ ಕಾಂಡಕ್ಕೆ ತಗುಲಿದ್ದ ಭಾಗವನ್ನಷ್ಟೇ ಕತ್ತರಿಸಿ ಪ್ರತ್ಯೇಕವಾಗಿಸಿದರೆ ಅದೇ ಅಡಕೆ ಹಾಳೆ. ತುಳುವರ ಶಿರಸ್ತ್ರಾಣ ‘ಮುಟ್ಟಾಳೆ’ಯಿಂದ ಹಿಡಿದು ಭೂತಕೋಲ ದಲ್ಲಿ ಭೂತದ ವೇಷ ಕಟ್ಟಲು ಮುಖ್ಯ ಪರಿಕರವಾಗುವವರೆಗೆ ಬಹೂಪಯೋಗಿ ವಸ್ತು. ಒಳಭಾಗ ಬಿಳಿ, ಹೊರಭಾಗ ದಪ್ಪಗೆ ಕಂದು ಬಣ್ಣದ್ದಿರುತ್ತದೆ. ರಟ್ಟು ಕಾಗದದಂತೆ ಗಟ್ಟಿಮುಟ್ಟಾಗಿರುತ್ತದೆ.

ಅಗಲವಾದ ಪಾತ್ರೆಯಂತೆ ಉಪಯೋಗಕ್ಕೆ ಬರುತ್ತದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಕೆ ತೋಟಗಳ ಮಾಲೀಕ- ಕಾರ್ಮಿಕ ಭೇದವಿಲ್ಲದೆ ಎಲ್ಲರೂ ಅಡಕೆ ಹಾಳೆಯಲ್ಲಿ ಊಟ ಮಾಡಿದವರೇ. ಈಗಲೂ ರಜೆಯಲ್ಲಿ ಊರಿಗೆ ಹೋದಾಗ ಒಮ್ಮೆಯಾದರೂ ಅಡಕೆ ಹಾಳೆಯಲ್ಲಿ ಕುಚ್ಚಲಕ್ಕಿಯ ಬಿಸಿಬಿಸಿ ಗಂಜಿ, ಉಪ್ಪು ಮತ್ತು ಉಪ್ಪಿನಕಾಯಿ ಸೇರಿಸಿ ರಸದೌತಣ ಸವಿಯದಿದ್ದರೆ ನನಗಂತೂ ಊರಿನ ಭೇಟಿ ಪೂರ್ಣವಾಗುವುದಿಲ್ಲ. ಊಟಕ್ಕೆ ಅಡಕೆ ಹಾಳೆ ಬಳಸುವುದು ಆ ಪ್ರದೇಶದಲ್ಲಿ ಬಹುಶಃ ನೂರಾರು ವರ್ಷಗಳ ಹಿಂದಿನಿಂದ ಬಂದಿರುವ ಕ್ರಮ.

ಆದರೆ ಹಾಳೆಯನ್ನು ಸಂಸ್ಕರಿಸಿ ವಿದ್ಯುಚ್ಚಾಲಿತ ಯಂತ್ರದಲ್ಲಿ ಒತ್ತಿ ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಿ ತಟ್ಟೆಗಳನ್ನಾಗಿಸುವುದಷ್ಟೇ ಇತ್ತೀಚೆಗೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಶುರುವಾದದ್ದು. ಈಗಂತೂ ಅದೊಂದು ಉದ್ಯಮವೇ ಆಗಿಬಿಟ್ಟಿದೆ. ನಮ್ಮೂರಿನಲ್ಲಿ ಎರಡು ದಶಕಗಳ ಹಿಂದೆಯೇ ಅಂಥದೊಂದು ಉದ್ದಿಮೆ ಆರಂಭಿಸಿದ ಮೊದಲಿಗ ದಯಾನಂದ ತಾಮ್ಹನಕರ್ ಎಂಬುವವರು. ಅವರ ಯಶಸ್ಸಿನ ನಂತರ ಇನ್ನೂ ಕೆಲವರು ಅನುಸರಿಸಿದರು. ಅಡಕೆ ತೋಟಗಳಿಂದ ಹಾಳೆಗಳನ್ನು ಒಟ್ಟು ಮಾಡುವುದಕ್ಕೆ ಕೂಲಿಯಾಳುಗಳ ಕೊರತೆ, ಹಳ್ಳಿಪ್ರದೇಶದಲ್ಲಿ ಆಗಾಗ ಕೈಕೊಡುವ ವಿದ್ಯುತ್ ಪೂರೈಕೆ ವ್ಯತ್ಯಯ ಮುಂತಾದ ಸವಾಲುಗಳಿದ್ದರೂ, ತಯಾರಾದ ತಟ್ಟೆಗಳಿಗೆ ನಾಡಿನೆಲ್ಲೆಡೆ ಯಿಂದ ಬೇಡಿಕೆ ಇರುವುದು ಈ ಉದ್ಯಮವನ್ನು ಜೀವಂತ ವಾಗಿಟ್ಟಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಹಲವಾರು ಕುಟುಂಬಗಳಿಗೆ ಜೀವನೋಪಾಯ ಒದಗಿಸಿದೆ.

ಮಣಿ ಶ್ರೀನಿವಾಸ್ ಅವರಿಂದ ತಿಳಿದುಕೊಂಡ ಮೇಲೆ ನನಗೆ ಆನ್‌ಲೈನ್‌ನಲ್ಲಿ ಅಡಕೆ ಹಾಳೆಯ ತಟ್ಟೆಗಳ ಜನಪ್ರಿಯತೆ ಎಷ್ಟಿದೆ ಎಂದು ನೋಡುವ ಕುತೂಹಲವಾಯ್ತು. `Palm leaf plates’ ಎಂದು ಗೂಗಲ್‌ನಲ್ಲಿ ಹುಡುಕಿದರೆ ಸುಮಾರಷ್ಟು ವೆಬ್‌ಸೈಟುಗಳು ಸಿಗುತ್ತವೆ ಎಂದು ಅವರೇ ತಿಳಿಸಿದ್ದರು.  ಹುಡುಕಿದೆ, ಫಲಿತಾಂಶ ಪಟ್ಟಿಯ ಮೇಲೆ ಕಣ್ಣಾಡಿಸಿದಾಗ ಪಾತ್ರೆಯಂಗಡಿಗಳದೇ ಓಣಿಯಲ್ಲಿ ಕಾಲಿಟ್ಟ ಅನುಭವ. ವಿವಿಧ ಆಕಾರಗಳ, ವಿವಿಧ ಗಾತ್ರದ, ತಟ್ಟೆ, ಟ್ರೇ, ಬೌಲ್, ಸ್ಪೂನ್ ಮುಂತಾಗಿ ನಾನಾ ನಮೂನೆಯ ಪಾತ್ರೆಗಳು. ಇದುವರೆಗೆ ಹೆಸರೂ ಕೇಳಿರದ ಇ-ಅಂಗಡಿಗಳು (ಅಂತರಜಾಲ ತಾಣಗಳು). ನಡುವೆ ಆನ್‌ಲೈನ್ ಮಾರಾಟ ದೈತ್ಯ ಅಮೆಜಾನ್ ಸಹ ಇದೆ!

ಅಲ್ಲಿಯೂ ಅಡಕೆ ಹಾಳೆಯ ಪಾತ್ರೆಗಳ ಭರ್ಜರಿ ವ್ಯಾಪಾರ ನಡೆದಿದೆ! ಗ್ರಾಾಹಕರಿಗೆ ಅನುಕೂಲವಾಗುವಂತೆ ಹತ್ತು, ಐವತ್ತು, ನೂರು ಸಂಖ್ಯೆಯ ತಟ್ಟೆಗಳ ಕಟ್ಟುಗಳು. ಸರಾಸರಿಯಾಗಿ ತಟ್ಟೆಯೊಂದಕ್ಕೆ 50 ಸೆಂಟ್‌ಸ್‌‌ನಿಂದ 1 ಡಾಲರ್ ಬೆಲೆ (ಭಾರತದ ಕರೆನ್ಸಿಯಲ್ಲಾದರೆ ಸುಮಾರು 35ರಿಂದ 65 ರುಪಾಯಿ). ಮಾರ್ಕೆಟಿಂಗ್ ಹೇಗೆ ಮಾಡಬೇಕೆಂಬುದನ್ನು ನಿಜವಾಗಿಯೂ ಈ ಅಮೆರಿಕನ್ ಕಂಪನಿಗಳಿಂದ ಕಲಿಯಬೇಕು. ‘ಪರಿಪೂರ್ಣವಾಗಿ ಪ್ರಾಕೃತಿಕ, ‘ಅತ್ಯಂತ ಪರಿಸರಸ್ನೇಹಿ’, ಯಾವುದೇ ರಾಸಾಯನಿಕಗಳನ್ನು ಬಳಸದೇ ತಯಾರಿಸಿದ್ದು ಮುಂತಾಗಿ ವಿಶೇಷಣಗಳಿಂದ ಬಣ್ಣನೆ. ಅಡಕೆ ಹಾಳೆಯ ತಟ್ಟೆಗಳ ಮಟ್ಟಿಗೆ ಅದು ಸತ್ಯವೇ ಅನ್ನಿ. ಆದರೂ ‘ಶಾಖದಿಂದಾಗಲೀ ನೀರಿನಿಂದಾಗಲೀ ವಿರೂಪಗೊಳ್ಳದು’ ಎಂಬ ವಿವರಣೆಯನ್ನು ಓದಿದಾಗ ನನಗೆ ಹಳ್ಳಿಜೀವನ ನೆನಪಾದದ್ದು ಸುಳ್ಳಲ್ಲ.

ನಮ್ಮಲ್ಲಿ ಅಡಕೆ ಹಾಳೆಯನ್ನು ಬಚ್ಚಲುಮನೆಯಲ್ಲಿ ನೀರು ಕಾಯಿಸಲು ಉರುವಲಾಗಿಯೂ ಬಳಸುತ್ತಿದ್ದೆವು. ಹಾಗೆಯೇ, ಹಾಳೆಯನ್ನು ಕತ್ತರಿಸಿ ಬಟ್ಟಲಿನಾಕಾರವೋ ಬೀಸಣಿಗೆಯನ್ನೋ ಮಾಡುವಾಗ ಬಗ್ಗದೇ ಇರುತ್ತಿದ್ದ ಗಟ್ಟಿ ಹಾಳೆಗಳನ್ನು ಸ್ವಲ್ಪ ಹೊತ್ತು ನೀರಿನಲ್ಲಿ ಮುಳುಗಿಸಿ ಮೆದುವಾಗಿಸುವುದೂ ಇತ್ತು. ಅಂದಮೇಲೆ ಶಾಖದಿಂದಾಗಲೀ ನೀರಿನಿಂದಾಗಲೀ ವಿರೂಪಗೊಳ್ಳದು ಎಂದರೇನರ್ಥ? ಬಹುಶಃ ‘ನೈನಂ ದಹತಿ ಪಾವಕಃ ನಚೈನಂ ಕ್ಲೇದಯಂತ್ಯಾಪೋ’ ಎಂದು ಭಗವದ್ಗೀತೆಯಲ್ಲಿ ಆತ್ಮದ ಬಗ್ಗೆ ಹೇಳಿದಂತೆ ಅಡಕೆ ಹಾಳೆಯನ್ನೂ ಅಧ್ಯಾತ್ಮ ಮಟ್ಟಕ್ಕೆ ಏರಿಸಿದ್ದಿರಬಹುದು.

ಆದರೆ ತಮಾಷೆ ಅಲ್ಲ, ಈ ಕಂಪನಿಗಳ ಮಾರ್ಕೆಟಿಂಗ್ ತಂತ್ರ ನಿಜಕ್ಕೂ ಫಲಿಸಿದೆ. ಕಾವೇರಿ ಸಂಘದ ಮಣಿ ಶ್ರೀನಿವಾಸ್ ರಂಥವರು, ಅನಿವಾಸಿ ಭಾರತೀಯರು ಮಾತ್ರವಲ್ಲ ಗಿರಾಕಿಗಳು. ಅಮೆರಿಕನ್ನರೂ ಆನ್‌ಲೈನ್‌ನಲ್ಲಿ ಅಡಕೆ ಹಾಳೆಯ ತಟ್ಟೆಗಳನ್ನು ಆರ್ಡರ್ ಮಾಡಿ ಉಪಯೋಗಿಸತೊಡಗಿದ್ದಾರೆ. ಇ-ಅಂಗಡಿಗಳ ಜಾಲತಾಣಗಳಲ್ಲಿ ರಿವ್ಯೂ ಬರೆದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪ್ಲಾಸ್ಟಿಕ್ ಅಥವಾ ಸ್ಟೈರೋಫೋಮ್‌ನಿಂದ ಮಾಡಿದ ತಟ್ಟೆಗಳಿಗಿಂತ ಇವುಗಳಲ್ಲಿ ಒಂಥರದ ವಿಶೇಷ ಜೀವಂತಿಕೆಯನ್ನು ಅವರು ಗಮನಿಸಿದ್ದಾರೆ. ಒಂದೇ ಆಕಾರ ಒಂದೇ ಗಾತ್ರವಿದ್ದರೂ ಕಟ್ಟಿನಲ್ಲಿ ಪ್ರತಿಯೊಂದು ತಟ್ಟೆಯ ನೈಸರ್ಗಿಕ ವಿನ್ಯಾಸ (ಮೇಲ್ಮೈ ಚಿತ್ತಾರ) ವಿಭಿನ್ನ ಮತ್ತು ಅನನ್ಯ ಆಗಿರುವುದೂ ಒಂದು ವಿಶೇಷ ಆಕರ್ಷಣೆಯೇ ಆಗಿದೆ. ‘ನಮ್ಮ ಮದುವೆಯ ಭೋಜನಕೂಟವನ್ನು ಹೊರಾಂಗಣದಲ್ಲಿ ಏರ್ಪಡಿಸಿದ್ದೆವು. ಪಾಮ್ ಲೀಫ್ ಪ್ಲೇಟುಗಳಲ್ಲಿ ಊಟ ಬಡಿಸಿದ್ದು ನಮ್ಮ ಅತಿಥಿಗಳಿಗೆಲ್ಲ ತುಂಬ ಇಷ್ಟವಾಯಿತು.

ಇದೇನಿದು ಹೊಸ ಬಗೆಯ ಪ್ಲೇಟುಗಳು ಎಂದು ಎಲ್ಲರೂ ಕುತೂಹಲದಿಂದ ಚರ್ಚಿಸಿದರು. ತಾವೂ ತಗೊಂಡು ಬಳಸಬೇಕು ಎಂದು ನಿರ್ಧರಿಸಿದರು’, ಆಡಂಬರದ ಔತಣ ಕೂಟ ಏರ್ಪಡಿಸಿ ಮತ್ತಷ್ಟು ಪ್ಲಾಸ್ಟಿಕ್‌ಅನ್ನು ಭೂಮಿಗೆಸೆದ ತಪ್ಪಿತಸ್ಥ ಭಾವನೆ ಈಗ ನನಗಿಲ್ಲ. ಪಾಮ್ ಲೀಫ್ ಪ್ಲೇಟ್ಸ್ ನನ್ನ ಆಶಯಕ್ಕೆ ಹೇಳಿ ಮಾಡಿಸಿದಂಥವು – ಈ ರೀತಿಯ ಕಾಮೆಂಟು ಗಳು, ಅಮೆರಿಕನ್ ಗ್ರಾಹಕರು ಬರೆದಂಥವು, ಓದಲಿಕ್ಕೆ ಸಿಗುತ್ತವೆ. ಬೇಡಿಕೆ ಇನ್ನೂ ಹೆಚ್ಚಿದರೆ ಅಮೆರಿಕದ ಉದ್ದಗಲಕ್ಕೂ ಗ್ರೋಸರಿ ಅಂಗಡಿಗಳಲ್ಲಿ, ಕಾಸ್ಟ್ ಕೊ, ಸ್ಯಾಮ್ಸ್ ಕ್ಲಬ್‌ನಂಥ ರಖಂ ಮಳಿಗೆಗಳಲ್ಲೂ ಇನ್ನುಮುಂದೆ ಅಡಕೆ ಹಾಳೆಯ ತಟ್ಟೆಗಳ ಕಟ್ಟುಗಳು ಕಂಡುಬಂದರೆ ಆಶ್ಚರ್ಯವಿಲ್ಲ. ಎಲ್ಲೋ ಮಲೆನಾಡಿನ ಮೂಲೆಯಲ್ಲಿ ಮರದಿಂದ ಕೆಳಗೆ ಬಿದ್ದಾಗ ಹಾಳೆಗೆ ಗೊತ್ತಿತ್ತೋ ಇಲ್ಲವೋ ತಾನು ಅಮೆರಿಕಕ್ಕೆ ಹೋಗಿ ಮಿಂಚುತ್ತೇನೆಂದು. ಮುಂದಿನ ಗುರಿ ಟ್ರಂಪಣ್ಣ ಮೋದಿಯವರನ್ನು ಆಹ್ವಾನಿಸಿ ಚಹದ ಜೋಡಿ ಚೂಡಾ ಕೊಡಲಿಕ್ಕೆ ಅಡಕೆ ಹಾಳೆಯ ತಟ್ಟೆ!

-ಶ್ರೀವತ್ಸ ಜೋಶಿ

Leave a Reply

Your email address will not be published. Required fields are marked *

20 − nine =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top