About Us Advertise with us Be a Reporter E-Paper

ವಿರಾಮ

ಐವರು ಯುವಕರ ಮುದ್ದಿನ ಕೃಷ್ಣೆ

* ಡಾ. ಸಿ.ಎಂ.ಗೋವಿಂದರೆಡ್ಡಿ 9448587027

(ಕಳೆದ ವಾರ: ದ್ರುಪದ ರಾಜನು ತನ್ನ ಮಗಳಾದ ದ್ರೌಪದಿಯ ಸ್ವಯಂವರವನ್ನು ಏರ್ಪಡಿಸಿದ್ದ. ಮೇಲೆ ಸುತ್ತುವ ಮೀನಿನ ಗೊಂಬೆಗೆ, ಕೆಳಗೆ ಎಣ್ಣೆಯಲ್ಲಿ ಅದರ ಬಿಂಬವನ್ನು ನೋಡಿ ಬಾಣ ಬಿಡುವ ಸವಾಲು. ಪಾಂಡವರೂ ಬ್ರಾಹ್ಮಣರ ವೇಷದಲ್ಲಿ ಆ ಸ್ವಯಂವರಕ್ಕೆ ಹೋಗಿದ್ದರು. ಬಂದಿದ್ದ ರಾಜಕುಮಾರರಿಗೆ ಮತ್ಸ್ಯಯಂತ್ರವನ್ನು ಭೇದಿಸಲು

ರಾಜಕುಮಾರರು ಯಾರೂ ಯಂತ್ರವ ಭೇದಿಸಲಾಗದೆ ಸೋತಿರಲು
ಕೃಷ್ಣೆಯು ಚಿಂತೆಯ ಮೊಗವನು ತಗ್ಗಿಸಿ ಯಂತ್ರದ ಬಳಿಯಲಿ ನಿಂತಿರಲು
ದ್ರುಪದನು ಹೇಳಿದ- ‘ಸ್ಪರ್ಧೆಗೆ ಬಂದವರಾರೂ ಗುರಿಯನು ತಲುಪಿಲ್ಲ
ಧನುರ್ವಿದ್ಯೆಯಲಿ ಯಶವನು ಗಳಿಸುವ ಸ್ಪರ್ಧೆಯು ಇನ್ನೂ ಮುಗಿದಿಲ್ಲ
ಸಾರ್ವಜನಿಕರಲಿ ಯಾರೇ ಆಗಲಿ ಗುರಿಯನು ಸಾಧಿಸಬಹುದಿಲ್ಲಿ
ಯಂತ್ರದ ಮತ್ಸ್ಯವ ಭೇದಿಸಿ ಕೃಷ್ಣೆಯ ಗೆಲ್ಲಬಹುದು ಈ ಸ್ಪರ್ಧೆಯಲಿ’॥

ದ್ರುಪದನ ಈ ಬಗೆ ಪ್ರಕಟಣೆಯಾಲಿಸಿ ಬೆಕ್ಕಸ ಬೆರಗಾಯಿತು ಸಭೆಯು
ಕದ್ದಿಂಗಳ ನಡುರಾತ್ರಿಯ ಸಮಯದಿ ಸಾಧ್ಯವೆ ಬೆಳದಿಂಗಳ ಸುಧೆಯು
ಸಾಧಿಸಲಾಗದ ಗುರಿಯನು ಸಾಧಿಸಬಲ್ಲನೆ ಸಾಮಾನ್ಯ?
ಸಭೆಯಲಿ ಗುಜುಗುಜು ಶುರುವಾಗಿದ್ದಿತು ಬರುವನೆ ಇಲ್ಲಿ ಅಸಾಮಾನ್ಯ?
ವಿಪ್ರರ ಗುಂಪಿನ ಬ್ರಾಹ್ಮಣನೊಬ್ಬನು ಬಂದನು ಸ್ಪರ್ಧೆಯ ವೇದಿಕೆಗೆ
ಘನಗಂಭೀರದಿ ಸಾಗಿದ ಮೆಲ್ಲಗೆ ಮತ್ಸ್ಯಯಂತ್ರ ಧನುವಿನ ಬಳಿಗೆ
ಎಡಗೈಯಲಿ ಆ ಬಿಲ್ಲನು ಎತ್ತುತ ಹೊಳೆಯುವ ಬಾಣವ ಗುರಿ ಹಿಡಿದ
ಮೀನಿನ ಬಿಂಬವ ನೋಡುತ ನೋಡುತ ಮೂಲದ ಕಡೆ ಬಾಣವನುಗಿದ
ಬಾಣವು ಮತ್ಸ್ಯದ ಕಣ್ಣಿಗೆ ನಾಟಿತು ಜಯಜಯಕಾರವು ಸಭೆಯಲ್ಲಿ
ಬ್ರಾಹ್ಮಣನೊಬ್ಬನು ರಾಜಕುಮಾರಿಯ ಗೆದ್ದನು ಎಂದರು ಖುಷಿಯಲ್ಲಿ
ಯಾರೂ ಘಟನೆಯು ಸ್ಪರ್ಧೆಗೆ ತಿರುವನು ನೀಡಿತ್ತು
ರಾಜಸಮೂಹವು ಪ್ರತಿಭಟಿಸುತ್ತಲಿ ಗೆಲುವನು ಖಂಡಿಸತೊಡಗಿತ್ತು॥

ದ್ರೌಪದಿ ಹೂವಿನ ಮಾಲೆಯ ಸಂಗಡ ನಡೆದಳು ಬ್ರಾಹ್ಮಣ ವೀರನೆಡೆ
ರಾಜರೆಲ್ಲರೂ ಒಟ್ಟಿಗೆ ಎದ್ದರು, ನಡೆದರು ತಡೆಯಲು ಕೃಷ್ಣೆಯೆಡೆ
ರಾಜರಿಗಲ್ಲದೆ ವಿಪ್ರನಿಗೇತಕೆ ರಾಜಕುಮಾರಿಯು ಎನ್ನುತ್ತ
ಗಲಭೆಯ ಎಬ್ಬಿಸಿ ಅರಾಜಕತೆಯನು ಸೃಷ್ಟಿಸಿ ಶಾಂತಿಯ ಕದಡುತ್ತ
ಕೂಡಲೆ ಬ್ರಾಹ್ಮಣ ಗುಂಪಿನೊಳಿಂದಲಿ ನಾಲ್ವರು ಯುವಕರು ಧಾವಿಸುತ
ಎದುರಿಸಿ ನಿಂತರು ವಿರೋಧಿಸಿದವರ ಅಲ್ಲಿಂದಲ್ಲಿ ನಿವಾರಿಸುತ!
ಸಿಕ್ಕಸಿಕ್ಕವರ ಚಚ್ಚತೊಡಗಿದರು ತಮ್ಮ ಪರಾಕ್ರಮವನು ತೋರಿ
ಒಬ್ಬೊಬ್ಬರೂ ಹತ್ತು ಬಡಿದರು ತೋರಿಸಿ ಅವರಿಗೆ ಸರಿದಾರಿ
ಪೆಟ್ಟನು ತಾಳದೆ ತತ್ತರಿಸಿದ್ದರು ಶಾಂತಿಯ ಕದಡಲು ಬಂದವರು
ಹೊಟ್ಟೆಯಕಿಚ್ಚಲಿ ಸಿಟ್ಟುಗೊಂಡಿದ್ದ ಸೋತು ನಿರಾಶೆಗೊಂಡವರು
ದ್ರುಪದಕುಮಾರನು ದೃಷ್ಟದ್ಯುಮ್ನನು ಅಲ್ಲಿಗೆ ಬಂದನು ತಡೆಯುತ್ತ
ಐವರು ವೀರರ ಜೊತೆಯಲಿ ತಾನೂ ಕಾದಲು ತೊಡಗಿದ ಬಡಿಯುತ್ತ
ಕೂಡಲೆ ದ್ರುಪದನ ಸೈನ್ಯವು ಬಂದಿತು ತಂದಿತು ಎಲ್ಲವ ತಹಬದಿಗೆ
ಐವರು ಬ್ರಾಹ್ಮಣ ವೀರರು ನಿಂತರು ದ್ರೌಪದಿ ಬಳಿಯಲಿ ರಕ್ಷಣೆಗೆ॥

ಭಲಾ! ಭಲಾ! ಬಲಶಾಲಿಗಳೆದುರಲಿ ನಿಲ್ಲಲಾಗುವುದೆ ಬಲುಹೊತ್ತು?
ಭಲೇ! ಎಂದು ಬಲು ಮೆರೆದವರೆಲ್ಲರು ಸುಲಭದ ತುತ್ತು!
ಸುಲಭವಾಗಿ ಜಯವೆಂದೂ ಲಭಿಸದು ಸದಾ ಜಾಗ್ರತೆಯು ಇರಬೇಕು
ಛಲದಲಿ ಗೆಲುವಿನ ಗುರಿಯನು ತಲುಪಲು ಏಕಾಗ್ರತೆ ಮನವಿರಬೇಕು॥

ಅವರಲಿ ಹಿರಿಯನು ಸಾರಿದ ಸಭೆಯಲಿ- ‘ಸಭಿಕರೆ, ನಾವೇ ಪಾಂಡವರು
ದ್ರುಪದಕುಮಾರಿಯ ಗೆದ್ದವ ಅರ್ಜುನ ನಾವುಗಳೆಲ್ಲರು ಉಳಿದವರು
ಅರಗಿನಮನೆ ಅವಘಡವನು ಭೇದಿಸಿ ತಪ್ಪಿಸಿಕೊಂಡೆವು ಆ ದಿನವು
ಹಲವು ಕ್ಲೇಶಗಳ ದಾಟುತ ಬರುತಲಿ ನಿಮ್ಮೆದುರಿರುವೆವು ಈ ದಿನವು’
ಧರ್ಮನ ಮಾತನು ಕೇಳಿದ ಸಭಿಕರು ಹರ್ಷೋದ್ಗಾರವ ಮಾಡಿದರು
ದ್ರುಪದನು, ಕೃಷ್ಣೆಯು ಪುಳಕಿತರಾದರು ಆನಂದದಿ
ದುರ್ಯೋಧನನಿಗೆ ಆಘಾತವಾಯಿತು ಪಾಂಡವರನು ನೋಡಿದ ಘಳಿಗೆ
ಉರಿಯುವ ಮತ್ಸರದಲ್ಲಿಯೆ ಹೊರಟನು ಹಸ್ತಿನಪುರದೆಡೆ ಮರುಘಳಿಗೆ
ಪಾರ್ಥನ ಕೊರಳಿಗೆ ದ್ರೌಪದಿ ಕೂಡಲೆ ಹಾಕಲು ಹರುಷದಿ ಜಯಮಾಲೆ
ಜಯಜಯಕಾರವು ಮುಗಿಲನು ಮುಟ್ಟಿತು, ಎಲ್ಲ ಇಲ್ಲಿ ದೇವರ ಲೀಲೆ
ಪಾಂಡವರೆಲ್ಲರು ನಡೆದರು ಒಟ್ಟಿಗೆ ತಾಯಿಯು ಕುಂತಿಯ ಬಳಿಯಲ್ಲಿ
ದ್ರುಪದಕುಮಾರಿಯು ಹಿಂದೆಯೆ ನಡೆದಳು ಐವರು ವೀರರ ಜೊತೆಯಲ್ಲಿ॥

ಕೃಷ್ಣೆಯೆಂಬ ಆ ಕೃಷ್ಣಸುಂದರಿಯ ನೋಡಿದ ಕುಂತಿಗೆ ಹಿತವಾಗಿ
ರಾಜಕುಮಾರಿಯ ಅಂದಚೆಂದಗಳು ಮನವನು ಸೆಳೆದವು ಬಹುವಾಗಿ
ಅರ್ಜುನ ಬೀಗುತ ‘ಅಮ್ಮಾ, ಮತ್ಸ್ಯಯಂತ್ರವನು ಭೇದಿಸಿದೆ
ಯಾರೂ ಸಾಧಿಸಲಾಗದ ಗುರಿಯನು ನಾನಿಂದಿನ ದಿನ ಸಾಧಿಸಿದೆ’॥

ಕುಂತಿಯು ನುಡಿದಳು- ‘ವೀರ ಕುಮಾರನೆ, ಬಲ್ಲೆನು ನಿನ್ನಯ ಪ್ರತಿಭೆಯನು
ನಾಳೆಯೆ ಸುಂದರಿ ದ್ರೌಪದಿಯೊಂದಿಗೆ ನಿನ್ನಯ ಮದುವೆಯ ಮಾಡುವೆನು’
ಭೀಮನು ಹೇಳಿದ- ‘ಸ್ವಯಂವರದಲ್ಲಿ ಆಯಿತು ಗಲಭೆಯು ಜೋರಾಗಿ
ಎಲ್ಲರು ಅವಳೆಡೆ ನುಗ್ಗುತಲಿದ್ದರು ಹೊತ್ತೊಯ್ಯಲು ಅವರೊಂದಾಗಿ
ನಾನವರೆಲ್ಲರ ತಡೆದಿರದಿದ್ದರೆ ದಕ್ಕುತಲಿದ್ದಳೆ ಪಾರ್ಥನಿಗೆ?
ಆದುದರಿಂದಲಿ ಸುಂದರಿ ಅವಳನು ವರಿಸುವ ಹಕ್ಕಿದೆ ಇಂದೆನಗೆ’॥

ಭೀಮನ ಮಾತನು ಕೇಳಿದ ಅರ್ಜುನ ಕುದಿದನು ಕನಲುತ
ಕುಂತಿಯು ಚಿಂತೆಯ ಮಡುವಲಿ ಮುಳುಗುತ ನೊಂದಳು ಮನಸಿನ ತಾಪದಲಿ
ಕೂಡಲೆ ಧರ್ಮನ ಕೇಳಿದಳಲ್ಲಿಯೆ ಸತ್ಯವ ನುಡಿವನು ಅವನೆಂದು
ಧರ್ಮನು ಹೇಳಿದ ಐವರು ಒಟ್ಟಿಗೆ ಕಾಪಾಡಿದ್ದುದು ನಿಜವೆಂದು!
ತನಗೂ ಕೃಷ್ಣೆಯ ವರಿಸುವ ಹಕ್ಕಿದೆ ಎಂದನು ಅವನೂ ನಸುನಗುತ
ಮನದಲಿ ಧರ್ಮನು ಬಯಸುತಲಿದ್ದನು ಕೃಷ್ಣಸುಂದರಿಯು ತನಗೆನುತ
ನಕುಲನು ನಗುತಲಿ ಹಾಗೆಯೆ ಹೇಳಿದ ಸಹದೇವನು ಸಹ ಹೌದೆಂದ
ಪಾಂಡವರೈವರ ಹೃದಯಗಳನ್ನೂ ಸೆರೆಹಿಡಿದಿರೆ ಕೃಷ್ಣೆಯ ಅಂದ!
ಹೆಣ್ಣನು ಮಾಯೆಯು ಎನ್ನುವರಲ್ಲವೆ ಬಣ್ಣಿಸಿ ಲೋಕದಿ ತಿಳಿದವರು
ಮಾಯೆಯ ಬಲೆಯಲಿ ಸಿಲುಕುತ ಎಷ್ಟೋ ಮಂದಿಯು ಅಳಿದವರು
ತನ್ನವರನ್ನೇ ದೂರಮಾಡುವರು ಹೆಣ್ಣು-ಮಣ್ಣುಗಳ ಮೋಹದಲಿ
ಹೆಣ್ಣು-ಮಣ್ಣುಗಳ ಮೋಹಕೆ ಸಿಲುಕದ ಅಣ್ಣಗಳಿರುವರೆ ಲೋಕದಲಿ॥

Tags

Related Articles

Leave a Reply

Your email address will not be published. Required fields are marked *

Language
Close