About Us Advertise with us Be a Reporter E-Paper

ಅಂಕಣಗಳು

ಅಸುರ ಸಂಹಾರ ಮತ್ತು ಮೂರು ನಗರಗಳ ಕತೆ

- ಸುಧಾ ಮೂರ್ತಿ

ಭೂ ಮಂಡಲವನ್ನು ತನ್ನ ದುರಾಡಳಿತದಿಂದ ನಡುಗಿಸಿದ್ದ ತಾರಕಾಸುರನ ಸಂಹಾರ ಆಯಿತಾದರೂ, ಅವನದೇ ಗುಣ ಲಕ್ಷಣಗಳುಳ್ಳ ಮೂವರು ಮಕ್ಕಳು ಈಗ ಲೋಕ ಕಂಟಕರಾಗಲು ತಯಾರಾಗಿದ್ದರು. ತಾರಕಾಕ್ಷ, ವೀರ್ಯವಾನ್ ಮತ್ತು ವಿದ್ಯುನ್ಮಾಲಿ ಕ್ರಮವಾಗಿ ಅವರ ಹೆಸರುಗಳು. ಕಾರ್ತಿಕೇಯ ತಮ್ಮ ತಂದೆಯನ್ನು ರೋಷಾವಿಷ್ಟರಾಗಿದ್ದ ಮೂವರೂ, ಅಮರತ್ವ ಹೊಂದಬೇಕೆಂಬ ಉದ್ದೇಶದಿಂದ ಬ್ರಹ್ಮನನ್ನು ಕುರಿತು ಬಹಳ ಕಾಲ ತಪಸ್ಸು ಮಾಡಿದರು.

ಕೊನೆಗೊಮ್ಮೆ ಪ್ರತ್ಯಕ್ಷನಾದ ಬ್ರಹ್ಮದೇವ, ಅವರು ಕೇಳಿದ ವರ ನೀಡಲಾರೆ ಎಂದ.
ಆ ಮೂವರೂ ಸಹೋದರರು ಆಗ ಹೀಗೆಂದು ಬೇಡಿಕೊಂಡರು, ‘ಓ ದೇವನೇ, ಅಮರತ್ವ ದಯಪಾಲಿಸಲಾಗದಿದ್ದರೆ, ಭದ್ರವಾದ ಮೂರು ನಗರಗಳನ್ನು ಕಟ್ಟುವ ಶಕ್ತಿಯನ್ನಾದರೂ ಕೊಡು. ಅಸಾಧಾರಣವಾಗಿದ್ದು, ಅಭೇದ್ಯವಾದ ಕೋಟೆಗಳು ಆ ಮೂರೂ ನಗರಗಳಿಗೆ ಇರಬೇಕು. ಸಾವಿರ ವರ್ಷಕ್ಕೊಮ್ಮೆ ಮೂರು ನಗರಗಳ ಕೋಟೆಗಳೂ ಒಂದೆಡೆ ಸೇರಬೇಕು. ಆಗುವ ವೇಳೆ ಕೇವಲ ಒಂದು ಬಾಣದಿಂದ ಮೂರೂ ಧ್ವಂಸವಾದರೆ ನಾವು ಸಾವನ್ನು ಒಪ್ಪಿಕೊಳ್ಳುತ್ತೇವೆ’ ಇದಕ್ಕೆ ‘ತಥಾಸ್ತು’ ಎಂದ ಬ್ರಹ್ಮ.

ರಾಕ್ಷಸರ ವಾಸ್ತುಶಿಲ್ಪಿಯಾದ ಮಯನನ್ನು ಬರಮಾಡಿಕೊಂಡ ತಾರಕಾಸುರನ ಮಕ್ಕಳು ಮೂರು ಅಭೇದ್ಯ ಕೋಟೆಗಳನ್ನು ಕಟ್ಟಲು ಆಜ್ಞಾಪಿಸಿದಾಗ, ಒಂದನ್ನು ಬಂಗಾರದಿಂದ, ಎರಡನೆಯದನ್ನು ಬೆಳ್ಳಿಯಿಂದ ಹಾಗೂ ಕೊನೆಯದನ್ನು ಕಬ್ಬಿಣದಿಂದ ನಿರ್ಮಿಸಿದ, ಮಯ. ಸ್ವರ್ಗದಲ್ಲಿ ಕಟ್ಟಲಾದ ಸುವರ್ಣ ಕೋಟೆಯನ್ನು ಹಿರಿಯನಾದ ತಾರಕಾಕ್ಷ, ಆಗಸದಲ್ಲಿ ಎದ್ದುನಿಂತ ಬೆಳ್ಳಿಯದನ್ನು ವೀರ್ಯವಾನ್ ಹಾಗೂ ಭೂಮಿಯಲ್ಲಿ ಮಯ ನಿರ್ಮಿಸಿಕೊಟ್ಟ ಕಬ್ಬಿಣದ ಕಿರಿಯ ಸಹೋದರ ವಿದ್ಯುನ್ಮಾಲಿ ವಶಪಡಿಸಿಕೊಂಡರು. ತ್ರಿಪುರ ಎಂಬುದಾಗಿ ಆ ಮೂರೂ ನಗರಗಳು ಹಾಗೂ ತ್ರಿಪುರಾಸುರರು ಎಂಬುದಾಗಿ ಆ ರಾಕ್ಷಸ ಸಹೋದರರು ಕ್ರಮೇಣ ಖ್ಯಾತರಾದರು.

ಎಲ್ಲ ಬಲಿಷ್ಠ ಅಸುರರ ವಿಷಯದಲ್ಲಿ ಆಗುವಂತೆ, ಇವರೂ ವಿಶೇಷ ಶಕ್ತಿ ಗಳಿಸಿಕೊಂಡಾಕ್ಷಣ ಅಹಂಕಾರದಿಂದ ಕೊಬ್ಬಿದರು. ಕೆಟ್ಟ ಆಳ್ವಿಕೆ ನಡೆಸಿ ಜನರನ್ನು ಗೋಳುಹೊಯ್ದುಕೊಂಡರು. ಗತ್ಯಂತರವಿಲ್ಲದೆ ಜನ ಇವರಿಂದ ಪಾರುಮಾಡಿ ಎಂದು ದೇವರಲ್ಲಿ ಮನವಿ ಸಲ್ಲಿಸಿದರು. ಶಿವ ಏನಾದರೂ ನೆರವು ನೀಡಬೇಕೆಂದು ನಿಶ್ಚಯಿಸಿ ಮುಂದೆ ಬಂದ. ಇನ್ನೇನು ಕೋಟೆಗಳು ಒಂದು ಸಾಲಿನಲ್ಲಿ ಕೂಡಿಕೊಳ್ಳುವ ಸಮಯ ಸನ್ನಿಹಿತವಾಗಲಿದೆ ಎಂದು ಅವನಿಗೆ ಗೊತ್ತಿತ್ತು. ಇದೀಗ ಅವನ್ನು ಭೇದಿಸಲು ಬೇಕಾಗಿದ್ದ ಒಂದು ಶಕ್ತಿಶಾಲಿ ಬಾಣದ ಹುಡುಕಾಟದಲ್ಲಿ ಶಿವ ತೊಡಗಿದ. ಸ್ವರ್ಗದ ವಾಸ್ತುಶಿಲ್ಪಿ ವಿಶ್ವಕರ್ಮನಿಗೆ ಕರೆ ಹೋಯಿತು. ಏನಾಗಬೇಕಿತ್ತು ಎಂದು ಕೋರಿಕೊಂಡ ವಿಶ್ವಕರ್ಮನಿಗೆ ಸಮಸ್ಯೆಯ ಎಲ್ಲಾ ವಿವರ ಹೇಳಿ, ‘ನನಗೊಂದು ವಿಶೇಷ ರಥ, ಜತೆಗೊಂದು ಅಸಾಧಾರಣ ಶಕ್ತಿಯುಳ್ಳ ಬಿಲ್ಲು-ಬಾಣಗಳನ್ನು ಮಾಡಿಕೊಡುವೆಯಾ?’ ಎಂದು ಕೇಳಿದ ಶಿವ.

ಕೂಡಲೇ ಒಪ್ಪಿಕೊಂಡ ವಿಶ್ವಕರ್ಮ ಕಾರ್ಯಸನ್ನದ್ಧನಾದ. ಒಂದು ಬಂಗಾರದ ನಿರ್ಮಿಸಿ, ಅದರಲ್ಲಿ ಸೂರ್ಯನ ಶಕ್ತಿ ತುಂಬಿದ. ಪಿನಾಕ ಹಾಗೂ ಶಾರಂಗ ಎಂಬ ಬಿಲ್ಲುಗಳನ್ನು ಸಿದ್ಧಪಡಿಸಿದ. ಮೂರೂ ಕೋಟೆಗಳನ್ನು ಏಕ ಕಾಲಕ್ಕೆ ಧ್ವಂಸಮಾಡುವ ತಾಕತ್ತಿನ ಬಾಣವೂ ತಯಾರಾಯಿತು. ರಥ, ಪಿನಾಕ ಬಿಲ್ಲು ಹಾಗೂ ಆ ಬಾಣವನ್ನು ಶಿವನಿಗೆ ಸಮರ್ಪಿಸಿದ ವಿಶ್ವಕರ್ಮ, ಶಾರಂಗವನ್ನು ವಿಷ್ಣುವಿಗೆ ನೀಡಿದ.

ಸಕಲ ಸಿದ್ಧತೆ ನಡೆಸಿದ ಈಶ್ವರ, ಬ್ರಹ್ಮನನ್ನು ರಥದ ಸಾರಥಿ ಮಾಡಿಕೊಂಡು ತ್ರಿಪುರದ ಕಡೆ ದೌಡಾಯಿಸಿದ. ಅವರು ಅಲ್ಲಿಗೆ ಹೋಗಿ ತಲುಪುವದಕ್ಕೂ, ಮೂರು ರಾಜ್ಯಗಳ ಕೋಟೆಗಳು ಸಾಲಿನಲ್ಲಿ ಬಂದು ಸೇರುವುದಕ್ಕೂ ತಾಳೆಯಾಯಿತು. ಗುರಿಯಿಟ್ಟು ಬಾಣ ಹೂಡಿ, ಮೂರು ಕೋಟೆಗಳು ಹಾಗೂ ಅವುಗಳಲ್ಲಿ ನೆಲೆಸಿದ್ದ ಮೂವರು ರಾಕ್ಷಸರನ್ನು ಒಮ್ಮೆಗೇ ಹತಗೈದ ಶಿವ. (ತೆಲಂಗಾಣದಲ್ಲಿರುವ ರಾಮಪ್ಪ ದೇವಸ್ಥಾನದಲ್ಲಿ ಈ ಕದನದ ಶಿಲ್ಪವನ್ನು ಕಾಣಬಹುದಾದರೆ, ಹಂಪೆಯ ವಿರೂಪಾಕ್ಷ ದೇಗಲುದ ಚಾವಣಿಯಲ್ಲಿ ಅದರ ಪೇಂಟಿಂಗ್ ಇದೆ).

ಅಸುರ ಸಂಹಾರ ಮಾಡಿ ಲೋಕಕ್ಕೆ ಅವರ ಕಾಟದಿಂದ ಮುಕ್ತಿ ನೀಡಿದ ಶಿವನನ್ನು ಜನ ಹಾಡಿ ಹೊಗಳಿದರು. ಅಂದಿನಿಂದ ‘ಪಿನಾಕಿ’ ಎಂಬ ಹೆಸರೂ ಅವನಿಗೆ ಸೇರಿಕೊಂಡಿತು. ಬಿಲ್ಲು ಪಡೆದುಕೊಂಡ ವಿಷ್ಣುವನ್ನು ಶಾರಂಗದೇವ ಎಂದು ಸ್ತುತಿಸುವುದು ಮೊದಲಾಯಿತು. ಕೆಡುಕಿಗೆ ಸೋಲಾಗಿ, ಒಳಿತು ಮೇಲುಗೈ ಸಾಧಿಸಿದ್ದನ್ನು ಸಂಭ್ರಮಿಸಲು ಅಂದು ಜನ ದೀಪ ಹಚ್ಚಿ ಸಂಭ್ರಮಿಸಿದ್ದು ಇಂದಿಗೂ ಒಂದು ಸಂಪ್ರದಾಯವಾಗಿ ಮುಂದುವರಿದಿದೆ. ದೀಪಾವಳಿ ಕಳೆದ ನಂತರ ಬರುವ ಕಾರ್ತೀಕ ಮಾಸವಿಡೀ ಪ್ರತಿದಿನ ಮನೆಗಳಲ್ಲಿ ದೀಪ ಬೆಳಗಿಸಲಾಗುತ್ತದೆ.

ಎಷ್ಟೋ ಸಮಯವಾದ ಮೇಲೆ ಶಿವ ಪಿನಾಕಿಯನ್ನು ತನ್ನ ಭಕ್ತರಲ್ಲೊಬ್ಬನಾದ ನಿಮಿ ಎಂಬುವನಿಗೆ ನೀಡಿದ. ಅದನ್ನು ಪೂಜನೀಯವಾಗಿ ‘ಶಿವಧನಸ್ಸು’ ಎಂದು ಕರೆದ ಆ ರಾಜ ಕಾಲ ಕಾಪಾಡಿಕೊಂಡ. ತಲೆಮಾರುಗಳು ಕಳೆದು ಆ ವಂಶದಲ್ಲಿ ಜನಕ ಜನಿಸಿದಾಗಲೂ, ಅದು ಅಲ್ಲಿ ಉಳಿದಿತ್ತು. ತನಗೆ ತಲೆತಲಾಂತರವಾಗಿ ಬಂದ ಆಸ್ತಿಯಾದ ಶಿವಧನಸ್ಸಿನ ಮಹತ್ವ ಅರಿತುಕೊಂಡಿದ್ದ ಜನಕ ಮಹಾರಾಜ, ತನ್ನ ಚೆಲುವೆಯಾದ ಮಗಳು ಸೀತೆಯ ಸ್ವಯಂವರ ಏರ್ಪಡಿಸಿದಾಗ, ಯಾರು ಶಿವಧನಸ್ಸನ್ನು ಲೀಲಾಜಾಲವಾಗಿ ಎತ್ತುವರೋ ಆ ಸ್ವಯಂವರಾರ್ಥಿಗೆ ಮಗಳನ್ನು ಮದುವೆ ಮಾಡಿಕೊಡುವೆ ಎಂದು ಘೋಷಿಸಿದ. ಮುಂದೆ ಶ್ರೀರಾಮಚಂದ್ರ ಆ ಬಿಲ್ಲನ್ನು ಎದೆಗೇರಿಸಿ, ಸೀತೆಯ ಕೈಹಿಡಿದದ್ದು ಎಲ್ಲರಿಗೂ ಗೊತ್ತಿರುವ ಕತೆ.

*ಗಜರಾಜನ ಕತೆ:
ಒಬ್ಬ ಆನೆಬಲದ ಮಗ ಇದ್ದ. ಅವನನ್ನು ಗಜಾಸುರ ಎಂದು ಕರೆಯಲಾಗುತ್ತಿತ್ತು. ವಿಶೇಷವಾದ ಗಜಾಸ್ತ್ರ ಎಂಬುದನ್ನು ಬಳಸಿ ಬಾಣಗಳನ್ನು ಅವನು ಹೂಡಿದರೆ, ಯುದ್ಧಭೂಮಿಯಲ್ಲಿ ಅವೆಲ್ಲ ಆನೆಗಳಾಗಿ ಪರಿವರ್ತಿತವಾಗುತ್ತಿದ್ದುದೂ ಅವನಿಗೆ ಇದ್ದ ಇನ್ನೊಂದು ವಿಶೇಷ ಸಾಮರ್ಥ್ಯ. ಹೃದಯಲ್ಲಿ ಏನಾದರೂ ಆಸೆ ಇಟ್ಟುಕೊಂಡವರಾರೂ ಗಜಾಸುರನನ್ನು ಸಂಹರಿಸಲಾರರು ಎಂಬ ವರ ಕೂಡ ಅವನಿಗೆ ದಕ್ಕಿತ್ತು.
ಪಾರ್ವತಿ ದೇವಿ, ಮಹಿಷಾಸುರನನ್ನು ಸಂಹರಿಸಿದಾಗ ಗಜಾಸುರ ರೊಚ್ಚಿಗೆದ್ದ. ಎಲ್ಲ ದೇವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂಬ ಗೀಳಿಗೆ ಬಿದ್ದ. ಶಿವನ ಬಳಿ ಓಡಿಹೋದರು. ಹೆದರಬೇಡಿ, ಯಾವೊಂದೂ ಆಸೆ, ಆಕಾಂಕ್ಷೆಗಳನ್ನು ಹೊಂದಿರದ ಬೈರಾಗಿ ನಾನಾದ್ದರಿಂದ ಆ ದುಷ್ಟನನ್ನು ಸಂಹರಿಸಬಲ್ಲೆ ಎಂದು ದೇವತೆಗಳನ್ನು ಸಮಾಧಾನಿಸಿದ.

ಸ್ವರ್ಗದ ಸೇನೆಯ ಅಧಿಪತಿಯ ಜತೆ, ತನ್ನ ಮಗನೂ ಆಗಿದ್ದ ಕಾರ್ತಿಕೇಯನೊಂದಿಗೆ ಶಿವ ಸಮರಕ್ಕೆ ಸಿದ್ಧತೆ ನಡೆಸಿದ. ಈ ಸುದ್ದಿ ಗಜಾಸುರನನ್ನು ತಲುಪಿತು. ತನ್ನ ಸಹಾಯಕರು-ಹಿತೈಷಿಗಳೊಂದಿಗೆ ಶಿವನನ್ನು ಹೇಗೆ ಎದುರಿಸಬೇಕೆಂದು ಅವನೂ ಮಂತ್ರಾಲೋಚನೆ ನಡೆಸಿದ. ಯುದ್ಧಕ್ಕೂ ಮುಂಚೆಯೇ ಗಣೇಶನನ್ನು ಪ್ರಾರ್ಥಿಸಿದರೆ, ಆತ ವರ ನೀಡಲೇಬೇಕಾದ ಪ್ರಸಂಗ ಬರುತ್ತದೆ ಉಪಾಯ ಹೂಡಿ, ಅತೀವ ಭಕ್ತಿಯಿಂದ ತನ್ನ ವಿಜಯಕ್ಕಾಗಿ ಆ ದೇವನಿಗೆ ಮೊರೆಯಿಟ್ಟ, ಗಜಾಸುರ. ಕೂಡಲೇ ಪ್ರತ್ಯಕ್ಷನಾದ ಗಣೇಶ, ತನ್ನ ಭಕ್ತನನ್ನು ಕುರಿತು ಹೀಗೆ ಹೇಳಿದ: ಗಜಾಸುರ, ನನ್ನ ತಂದೆಯಾದ ಸಾಕ್ಷಾತ್ ಶಿವ ನಿನ್ನ ಸಂಹಾರಕ್ಕೆ ನಿಂತಿರುವಾಗ ಯಾರೂ ನಿನ್ನನ್ನು ಆತನಿಂದ ಕಾಪಾಡಲಾರರು. ಇದು ನನಗೂ ಅನ್ವಯಿಸುತ್ತದೆ. ಆದರೆ ನಾನು ನಿನಗೆ ಮಾಡಬಹುದಾದ ಒಂದೇ ಒಂದು ಸಹಾಯವೆಂದರೆ, ಶಿವನ ಬಾಣ ನಿನ್ನ ದೇಹವನ್ನು ಸೋಕಿದ ಕ್ಷಣವೇ ನಿನಗೆ ಸಾಕ್ಷಾತ್ಕಾರವುಂಟಾಗಿ, ಅಜ್ಞಾನದಿಂದ ಹೊಂದುವಂತೆ ಕರುಣಿಸುವುದು. ನಿನ್ನ ಅವನತಿ ತಡೆಯಲಾರೆನಾದರೂ, ಮರಣದಲ್ಲಿ ಪರಮಾತ್ಮನ ದರ್ಶನ ಹೊಂದುವಂತೆ, ಸಾಯುಜ್ಯ ತಲುಪುವಂತೆ ವರ ನೀಡುತ್ತೇನೆ ಎಂದು ಭಕ್ತನಿಗೆ ವಾಗ್ದಾನ ನೀಡಿದ, ಗಣೇಶ.

ಶಿವ ಮತ್ತು ಗಜಾಸುರನ ನಡುವೆ ಭೀಕರ ಕದನ ನಡೆಯಿತು. ತನ್ನಲ್ಲಿದ್ದ ಎಲ್ಲ ಮಾರಕ ಅಸ್ತ್ರಗಳನ್ನು ಮಹಾದೇವನ ಮೇಲೆ ಪ್ರಯೋಗಿಸಿದ ಆ ರಾಕ್ಷಸ. ವರುಣಾಸ್ತ್ರ ಶಿವನ ತಲೆ ಸೋಕಿದಾಗ, ಅಲ್ಲಿ ನೆಲೆಸಿದ್ದ ಗಂಗೆ ಹರಿದುಬಂದು ದೇವನ ಪಾದ ತೋಯಿಸಿದಳು. ಆನಂತರ ಗಜಾಸುರ ಅಗ್ನಿ ಅಸ್ತ್ರ ಮಾಡಿದರೆ, ಕೂಡಲೇ ಅದರ ಜ್ವಾಲೆಗಳನ್ನು ನಂದಿಸಿದಳು, ಗಂಗೆ. ಬಳಿಕ ಹೂಡಲಾದ ಶೂಲ ಅಸ್ತ್ರ, ಶಿವನ ತ್ರಿಶೂಲಕ್ಕೆ ಡಿಕ್ಕಿ ಹೊಡೆದು ಉರಿದು ಬೂದಿಯಾಯಿತು. ವಾಯು ಬೂದಿಯನ್ನು ಎಲ್ಲೆಡೆ ಚದುರಿಸಿದ ಮೇಲೆ ತ್ರಿಶೂಲ ಅಚಲವಾಗಿ ಉಳಿದಿದ್ದು ಕಾಣಿಸಿತು.

ಇನ್ನೇನೂ ಮಾಡಲೂ ತೋಚದೆ, ತನ್ನಲ್ಲಿದ್ದ ವಿಶೇಷಾಸ್ತ್ರವಾದ ಗಜಾಸ್ತ್ರ ಉಪಯೋಗಿಸಿದ ಆ ರಾಕ್ಷಸ. ರಣಾಂಗಣದಲ್ಲಿ ಒಮ್ಮೆಲೇ ಸಾವಿರಾರು ಆನೆಗಳು ಘೀಳಿಟ್ಟವು. ಆದರೆ ಎದುರಿಗೆ ಇದ್ದ ಶಿವ ಹಾಗೂ ಗಣೇಶನನ್ನು ನೋಡಿದ ಕೂಡಲೇ ಅಷ್ಟೇ ಶಾಂತವಾಗಿ ಶರಣಾದವು. ಇದೀಗ ಸಮರ ಮುಕ್ತಾಯಗೊಳಿಸಬೇಕಾಗಿದೆ ಎಂದು ಶಿವನಿಗೆ ಅರಿವಾಯಿತು. ತನ್ನಲ್ಲಿದ್ದ ವರುಣಾಸ್ತ್ರವನ್ನು ಗಜಾಸುರನ ಮೇಲೆ ಪ್ರಯೋಗಿಸಿದ. ಅದು ದೇಹ ಸೀಳುತ್ತಿದ್ದಂತೆಯೇ ಅಸುರನ ಕಣ್ಣುಗಳು ಮುಚ್ಚಿಕೊಂಡವು. ಮರು ಕ್ಷಣ ತೆರೆದುಕೊಂಡಾಗ ದೈವಸ್ವರೂಪಿ ಶಿವನನ್ನು ಅವು ದಿಟ್ಟಿಸುತ್ತಿದ್ದವು. ಸುಂದರ ನೀಲ ಶರೀರ, ತಲೆಗೆ ಅಲಂಕಾರವಾಗಿದ್ದ ಅರ್ಧಚಂದ್ರ ಮತ್ತು ಮುಡಿಯಲ್ಲಿದ್ದ ಗಂಗೆಯ ಸಮೇತ ಶಿವದರ್ಶನ ಗಜಾಸುರನಿಗೆ ಅನುಗ್ರಹವಾಯಿತು. ದೇವರ ಕೊರಳಲ್ಲಿದ್ದ ರುದ್ರಾಕ್ಷಿ ಮಾಲೆ, ಹಣೆಗಣ್ಣು, ಕೈಗಳಲ್ಲಿ ಇದ್ದ ತ್ರಿಶೂಲ, ಡಮರುಗಳೂ ಗೋಚರಿಸಿದವು. ಶಿವನತ್ತಲೇ ಮಂದಹಾಸ ಬೀರುತ್ತಿದ್ದ ಪಾರ್ವತಿ ಬಗಲಲ್ಲಿ ಕಂಡಳು. ತಾನು ಯಾರನ್ನು ಶತ್ರುವಾಗಿ ಪರಿಗಣಿಸಿದ್ದೆ, ಅವನೊಂದಿಗೆ ಭಯಂಕರ ಕದನ ಮಾಡಿದೆ ಎಂಬುದು ಹೊಳೆದು ಗಜಾಸುರ ಪರಿತಪಿಸಿದ. ಆದರೆ ಕೊನೆಯುಸಿರು ಎಳೆಯುವಾಗ ಶಿವನ ಸಮೀಪದರ್ಶನವಾಗಿದ್ದು ಅವನಿಗೆ ಅಷ್ಟೇ ಸಂತಸ ತಂದಿತು. ಪಂಚಾಕ್ಷರಿ ಮಂತ್ರವಾದ ಓಂ ನಮಃ ಶಿವಾಯ ಜಪಿಸುತ್ತ ಗಜಾಸುರ ತನ್ನ ಸಾವನ್ನು ಎದುರುಗೊಂಡ.

ಭಕ್ತನ ಬಳಿ ಧಾವಿಸಿದ ಶಿವ, ‘ಗಜಾಸುರ, ನಿನ್ನ ಸಂಹಾರ ನನ್ನ ಕೈಯಲ್ಲಿಯೇ ಆಗಬೇಕೆಂದಿತ್ತಾದ್ದರಿಂದ ಹೀಗೆಲ್ಲ ಆಯಿತು. ನೊಂದುಕೊಳ್ಳಬೇಡ, ಕೊನೆಯಾಸೆ ಏನಾದರೂ ಇದ್ದರೆ ಹೇಳು’ ಎಂದು ಸಾಂತ್ವನಗೈದ. ಗಜಾಸುರ ಹಾಗೇನೂ ಇಲ್ಲ ದೇವನೇ. ನಿನ್ನ ಕೈಯಲ್ಲಿ ಮರಣ ಹೊಂದಿದ್ದು, ಅಂತಿಮವಾಗಿ ನಿನ್ನ ದರ್ಶನವಾಗಿದ್ದು ನನ್ನ ಸುಕೃತ. ಆದರೆ ನಾನು ಆನೆಯ ರೂಪದಲ್ಲಿ ಸಾಯಬಯಸುತ್ತೇನೆ. ಮರಣಾನಂತರ ನನ್ನ ಚರ್ಮವನ್ನು ನೀನು ಹೊದ್ದುಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ಹಾಗಾದರೂ ಸದಾ ನಿನ್ನ ಜತೆ ಇರಬೇಕು ಎಂದು ಬಯಸುತ್ತೇನೆ ಎಂದು ಕೊನೆಯಾಸೆ ಹೇಳಿಕೊಂಡ.

ಮುಗುಳ್ನಕ್ಕ ಶಿವ, ಖಂಡಿತ ಅದನ್ನು ನೆರವೇರಿಸುವೆ ಎಂದು ಆಶ್ವಾಸನೆಯಿತ್ತ. ಯಾವಾಗಲಾದರೂ ಆನೆಯ ಶಿವ ಧರಿಸುವುದು ಈ ಕಾರಣಕ್ಕಾಗಿಯೇ.ಶಿವ ಮತ್ತು ಗಜಾಸುರನ ನಡುವೆ ಈ ಭೀಕರ ಕದನ ಕಾಶಿಯಲ್ಲಿ ಆಯಿತು ಎನ್ನುವುದು ಐತಿಹ್ಯ. ಹಾಗೆ ಕಾಶಿ ಒಂದು ಪ್ರಸಿದ್ಧ ಕ್ಷೇತ್ರವಾಯಿತು. ಗಂಗೆ ಶಿರದಿಂದ ಕೆಳಗಿಳಿದು ಶಿವನ ಪಾದ ತೋಯಿಸಿದ ಸಂದರ್ಭವಾದ್ದರಿಂದ ಗಂಗಾಧರ, ವಿಶ್ವನಾಥ ಹೆಸರುಗಳೂ ಶಿವನಿಗೆ ಅಂದಿನಿಂದ ಅಂಟಿಕೊಂಡವು.

ಹುಲಿಗಳಿಗೆ ಒಂದು ಪಾಠ:
ಬಲಿಷ್ಠ ರಾಕ್ಷಸದ್ವಯರಾದ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಅವರ ಇಬ್ಬರ ಮಕ್ಕಳೆಂದರೆ ದುಂದುಭಿ, ಸೌಹಾರ್ದ್ಯ. ಬಯಸಿದ ಆಕಾರ ತಳೆಯುವ ಆ ಇಬ್ಬರಿಗೆ ಸಿದ್ಧಿಸಿತ್ತು. ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಲೋಕ ಕಂಟಕರಾದಾಗ, ವಿಷ್ಣು ಅವತಾರವೆತ್ತಿ ಅವರನ್ನು ಸಂಹರಿಸಿದ್ದ. ಅಂದಿನಿಂದ ಸೇಡು ತೀರಿಸಿಕೊಳ್ಳಲು ದುಂದುಭಿ, ಸೌಹಾರ್ದ್ಯ ಕಾತರರಾಗಿದ್ದರು. ವಿಷ್ಣುವನ್ನು ಆರಾಧಿಸುವ, ಯಜ್ಞ-ಯಾಗಾದಿಗಳನ್ನು ಮಾಡುವ ಋಷಿಮುನಿಗಳು, ಭಕ್ತರಿಗೆ ಉಪಟಳ ನೀಡಿ, ಅವರನ್ನು ಕೊಂದು ತಮ್ಮ ದ್ವೇಷಾಗ್ನಿ ನಂದಿಸಿಕೊಳ್ಳಲು ನಿಶ್ಚಯಿಸಿದರು.

ಸರಿ, ತಮ್ಮ ಭೀಕರ ದಾಳಿ ಪ್ರಾರಂಭಿಸಿದರು. ಸಿಕ್ಕಸಿಕ್ಕ ಮುನಿವರರನ್ನು ಕೊಚ್ಚಿ ಕೊಲೆಗೈದರು. ಶಿವನಿಗೆ ಪ್ರಾರ್ಥನೆ ಸಲ್ಲಿಸಿದ ಜನ, ಈ ಭಯಾನಕ ಅಸುರರಿಂದ ತಮ್ಮನ್ನು ಬೇಡಿಕೊಂಡರು. ಶಿವರಾತ್ರಿ ಆಚರಣೆ ಸನಿಹದಲ್ಲಿತ್ತು. ಕಾಶಿಯ ವಿಶ್ವನಾಥ ಮಂದಿರದಲ್ಲಿ ಭಕ್ತಾದಿಗಳೆಲ್ಲ ಸೇರಿ ಶಿವನನ್ನು ಲಿಂಗ ರೂಪದಲ್ಲಿ ಅರ್ಚಿಸುವುದು ಈ ಸಂದರ್ಭದಲ್ಲಿಯೇ ಎನ್ನುವುದು ದುಂದುಭಿ, ಸೌಹಾರ್ದ್ಯರಿಗೆ ಗೊತ್ತಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರನ್ನುಕೊಲ್ಲಬಹುದಾದ ಸುಸಂದರ್ಭ ಇದು ಎಂದು ಅವರು ಉಗ್ರ ದಾಳಿಗೆ ಸಜ್ಜಾದರು.
ಆ ರಾತ್ರಿ, ದೊಡ್ಡ ಸೈನ್ಯವೊಂದನ್ನು ಹಿಂದಿಟ್ಟುಕೊಂಡು ರಾಕ್ಷಸರಿಬ್ಬರು ದೇಗುಲ ಪ್ರವೇಶಿಸಿದರು. ಹುಲಿಯ ರೂಪ ಧರಿಸಿ ಇಬ್ಬರೂ ಜನರ ಮೇಲೆ ಬಿದ್ದರು. ಭಕ್ತ ಸಮುದಾಯ ಅಲ್ಲೋಲಕಲ್ಲೋಗೊಂಡು ಚೀರಿಟ್ಟಾಗ, ಎಲ್ಲವನ್ನೂ ದೇವರಿಗೆ, ಶಿವಲಿಂಗದಿಂದ ಹೊರಬಿದ್ದು ಆ ಇಬ್ಬರು ದುಷ್ಟರನ್ನು, ಅವರ ಸೇನೆಯನ್ನು ಧ್ವಂಸಗೈಯದೆ ನಿರ್ವಾಹವಿಲ್ಲದಾಯಿತು.

ಆ ಇಬ್ಬರನ್ನು ಸಂಹಾರ ಮಾಡಿದ ಸ್ಮರಣೆಗಾಗಿ, ಶಿವ ಆಗಾಗ ಹುಲಿ ಚರ್ಮ ಧರಿಸುತ್ತಾನೆ. ಮತ್ತು ಆ ಮೂಲಕ ತನ್ನ ಭಕ್ತಗಣಕ್ಕೆ ಯಾವುದಕ್ಕೂ ಅವರು ಹೆದರಬೇಕಿಲ್ಲ ಎಂಬ ಸಂದೇಶ ನೀಡುತ್ತಾನೆ ಎನ್ನಲಾಗುತ್ತದೆ. ದೇವರು ಎದ್ದುಬಂದ ಶಿವಲಿಂಗಗಳಲ್ಲಿ ಉಜ್ವಲ ಜ್ವಾಲೆ ಕಾಣಿಸಿಕೊಂಡಿರುತ್ತದಾದ್ದರಿಂದ ಅವನ್ನು ಜ್ಯೋತಿರ್ಲಿಂಗಗಳೆಂದು ಕರೆಯುವುದು ಪ್ರತೀತಿ. ಭಾರತದಲ್ಲಿ ಪರಮ ಪೂಜ್ಯವಾದ 12 ಜ್ಯೋತಿರ್ಲಿಂಗಗಳಿವೆ; ತಮ್ಮ ಜೀವಿತಕಾಲದಲ್ಲಿ ದರ್ಶನ ಮಾಡುವ ವ್ಯಕ್ತಿಗಳಿಗೆ ಪುಣ್ಯಸಂಚಯವಾಗುತ್ತದೆ ಎಂಬುದು ನಂಬಿಕೆ.

Tags

Related Articles

Leave a Reply

Your email address will not be published. Required fields are marked *

Language
Close