About Us Advertise with us Be a Reporter E-Paper

Breaking Newsದೇಶಪ್ರಚಲಿತ

ಬೇಕಾಬಿಟ್ಟಿ ಮಾರಲು ಪತ್ರಿಕೆಗಳು ಸಾಬೂನು ಅಲ್ಲ!

ದೆಹಲಿ: ಪತ್ರಿಕೋದ್ಯಮ ಒಂದು ಪವಿತ್ರವಾದ ವೃತ್ತಿ. ಇದೊಂದು ಕಾರ್ಖಾನೆಯಲ್ಲ.ಯಂತ್ರಗಳಿಂದ ಸರಕುಗಳು ಸಿದ್ದವಾಗಿ ಹೊರ ಬರುವ ಗಿರಿಣಿ ಇದಲ್ಲ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿರಬಹುದು. ಹಾಗೆಂದು ಅದು ತನ್ನ ಮೂಲ ಉದ್ದೇಶವನ್ನು ಮರೆಯುವಂತಿಲ್ಲ.

ಪತ್ರಿಕೆಗಳು ಯಾರು ಏನೇ ಅನ್ನಲಿ, ಟೂಥ್‌ಪೇಸ್ಟ್ ಹಾಗೂ ಸಾಬೂನಿಗೆ ಹೋಲಿಸುವಂತಿಲ್ಲ. ಸಾಬೂನು ಮಾರಾಟಕ್ಕೂ ಪತ್ರಿಕೆ ಮಾರಾಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾಬೂನು ನಮ್ಮ ದೇಹಕ್ಕಾಗಿ, ಪತ್ರಿಕೆ ನಮ್ಮ ಹೃದಯಕ್ಕೆ.

ಪತ್ರಿಕೆಗಳನ್ನು ನಷ್ಟದಲ್ಲಿ ನಡೆಸಲು ಸಾಧ್ಯವಿಲ್ಲ. ಹಾಗೆಂದು ಲಾಭಗಳಿಸಲೆಂದೇ ವ್ಯಾವಹಾರಿಕ ದೃಷ್ಟಿಯನ್ನಿಟ್ಟುಕೊಂಡೇ ನಡೆಸಲು ಸಹ ಸಾಧ್ಯವಿಲ್ಲ .ಜಾಹೀರಾತುಗಳನ್ನು ಪಡೆಯುವುದು ಮಾತ್ರ ಪತ್ರಿಕೆಯ ಉದ್ದೇಶವಾಗಬಾರದು. ಜಾಹೀರಾತುಗಳಿಲ್ಲದ ಆದರೆ ಸಾಕಷ್ಟು ಓದುಗರು ಇರುವ ಪತ್ರಿಕೆಯನ್ನು ಮುಚ್ಚಬಾರದು.ಅಂಥ ಪತ್ರಿಕೆಗಳನ್ನು ಉಳಿಸಬೇಕಾದುದು ಎಲ್ಲರ ಕರ್ತವ್ಯ.

ಇಂಥ ಪತ್ರಿಕೆಯನ್ನು ರಕ್ಷಿಸಲು ಹಲವಾರು ಮಾರ್ಗಗಳಿವೆ. ಸಹಕಾರಿ ಸಂಘಗಳನ್ನು ರಚಿಸಿಕೊಂಡು ಇಂಥ ಪತ್ರಿಕೆಗಳನ್ನು ಉಳಿಸಬಹುದು. ಮನಸ್ಸು ಮಾಡಿದರೆ ಆ ಪತ್ರಿಕೆಯಲ್ಲಿ ದುಡಿಯುತ್ತಿರುವ ಪತ್ರಕರ್ತರೆಲ್ಲ ಒಗ್ಗೂಡಿಯೂ ರಕ್ಷಿಸಬಹುದು.

ಇತ್ತೀಚಿನ ದಿನಗಳಲ್ಲಿ ಪತ್ರಿಕೊದ್ಯಮದ ಗುಣಮಟ್ಟ ಗಣನೀಯವಾಗಿ ಕುಸಿಯತೊಡಗಿದೆ. ಪತ್ರಿಕೋದ್ಯಮ ಉದ್ದೇಶ ಗತಿಯನ್ನು ಪಡೆಯುತ್ತಿದೆ. ಮಾರುಕಟ್ಟೆ ಶಕ್ತಿಗಳು ಸಂಪಾದಕೀಯ ವರ್ಗದ ಮೇಲೆ ಪ್ರಭಾವ ಬೀರುತ್ತಿವೆ. ಪತ್ರಿಕೆಯನ್ನು ಕೂಡಾ ಒಂದು ಸರಕು ಅಥವಾ ಉತ್ಪನ್ನವಾಗಿ ಪರಿಗಣಿಸಲಾಗುತ್ತಿದೆ.

ಈ ಪರಸ್ಥತಿ ಯಾವ ಹಂತವನ್ನು ತಲುಪಬಹುದೆಂದು ಯಾರಿಗೂ ಗೊತ್ತಿಲ್ಲ. ಪತ್ರಿಕೋದ್ಯಮ ಇತ್ತೀಚಿನ ದಿನಗಳಲ್ಲಿ ಪಡೆಯುತ್ತಿರುವ ಮುಗ್ಗಲುಗಳನ್ನು ಗಮನಿಸಿದರೆ ಯಾರಿಗೂ ಖಂಡಿತವಾಗಿಯೂ ಸಮಾಧಾನವಾಗಲಾರದು.
ಪತ್ರಕರ್ತರು ಅದರಲ್ಲೂ ಯುವ ಪತ್ರಕರ್ತರು ವಿಷಯದ ಸತ್ಯಾ ಸತ್ಯತೆಯನ್ನು ತಿಳಿಯಲು ಪ್ರಯತ್ನಿಸಬೇಕು. ತನಿಖಾ ವರದಿಯ ಸೋಗಿನಲ್ಲಿ ವಿಷಯವನ್ನು ಅತಿ ರಂಜಿತಗೊಳಿಸಬಾರದು. ದುರದೃಷ್ಟಕರ ಸಂಗತಿಯೆಂದರೆ ಆಗುತ್ತಿರುವುದೇ ಅದು. ಇಂಥ ಪ್ರವೃತ್ತಿ ಪತ್ರಕರ್ತರಿಗಾಗಲೀ, ಪತ್ರಿಕೋದ್ಯಮಕ್ಕಾಗಲೀ ಒಳ್ಳೆಯದಲ್ಲ.ಪತ್ರಿಕೋದ್ಯಮ ಮೊದಲು ಒಂದು ಮಿಶನ್ ಆಗಿತ್ತು. ಅನಂತರ ಅದು ಪೊಫೆಶನ್ (ವೃತ್ತಿ)ಆಯಿತು. ಈಗ ಅದು ಸೆನ್‌ಸೇಶನ್ (ಅತಿರಂಜಿತ)ಆಗಿದೆ.

ಕೆಲವರು ನನ್ನನ್ನು ಕೇಳುತ್ತಾರೆ ‘ನೀವು ಪತ್ರಿಕೋದ್ಯಮಕ್ಕೆ ಮರಳಿ ಬರುತ್ತೀರಾ’ ಎಂದು. ಆಗ ನಾನು ಹೇಳುತ್ತೇನೆ ‘‘ಪತ್ರಕರ್ತರು ರಾಜಕಾರಣಿಯಾಗುವ ಆಕಾಂಕ್ಷೆವನ್ನು ಬಿಟ್ಟರೆ, ನಾನು ರಾಜಕೀಯ ರಂಗ ಬಿಟ್ಟು ಪತ್ರಿಕೋದ್ಯಮಕ್ಕೆ ಮರಳುತ್ತೇನೆ. ಆದರೆ ಈಗ ನಾವಿಬ್ಬರೂ ನಮ್ಮ ನಮ್ಮ ಕ್ಷೇತ್ರದಲ್ಲಿ ಚೆನ್ನಾಗಿಯೇ ಇದ್ದೇವೆ’’ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close