ವಿಶ್ವವಾಣಿ

ಮೊದಲ ಚುನಾವಣೆಯಲ್ಲಿ ಅಟಲ್‌ಜೀ ₹8500 ಖರ್ಚು ಮಾಡಿದ್ದರು!

ನೇಕರಿಗೆ ಗೊತ್ತಿಲ್ಲ, ವಾಜಪೇಯಿ ಅವರು ದಿಲ್ಲಿಗೆ ಹೋಗಿದ್ದು ರಾಜಕಾರಣಿಯಾಗಿ ಅಲ್ಲ. ಜನಸಂಘದ ಕಾರ್ಯಕರ್ತರಾಗಿಯೂ ಅಲ್ಲ. ಅವರು ಅಲ್ಲಿಗೆ ಹೋಗಿದ್ದು ಪತ್ರಕರ್ತರಾಗಿ. ಆದರೆ ದೇಶದ ಪ್ರಧಾನಿಯಾಗುವ ಹಂತವನ್ನು ತಲುಪಿದ್ದು ಅವರ ಧೀಮಂತಿಕೆಗೆ ಹಿಡಿದ ಕೈಗನ್ನಡಿ.

1951ರಲ್ಲಿ ವಾಜಪೇಯಿ ಅವರು ‘ವೀರ ಅರ್ಜುನ’ ಪತ್ರಿಕೆ ಸಂಪಾದಕರಾಗಿ ನಿಯುಕ್ತಗೊಂಡರು. ಡಾ.ಶ್ಯಾಮಪ್ರಸಾದ ಮುಖರ್ಜಿಯವರು ಬಾರಿಗೆ ಭೇಟಿಯಾದ ಅಟಲ್‌ಜೀ ಅವರಲ್ಲಿ ಅದೇನೋ ವೈಶಿಷ್ಟ್ಯ ಗುರುತಿಸಿದರು. ಪತ್ರಿಕೆಗಿಂತ ರಾಜಕಾರಣಕ್ಕೆ ಸೂಕ್ತ ವ್ಯಕ್ತಿಯೆಂದು ಅವರನ್ನು ಜನಸಂಘದ ಕೆಲಸಕ್ಕೆ ಹಚ್ಚಿದರು. ಎರಡು ವರ್ಷಗಳ ಕಾಲ ಸಂಪಾದಕರಾಗಿ ಕೆಲಸ ಮಾಡಿದ ಅಟಲ್‌ಜೀ, ಆರಂಭದಲ್ಲಿ ಡಾ.ಮುಖರ್ಜಿ ಅವರ ಸಹಾಯಕರಾದರು. ನಂತರ ಅವರಿಗೆ ಕಾರ್ಯದರ್ಶಿ ಜವಾಬ್ದಾರಿ ನೀಡಲಾಯಿತು.

ಡಾ.ಮುಖರ್ಜಿ ನಿಧನದ ನಂತರ, ಅಟಲ್‌ಜೀ ಜನಸಂಘದ ಸಕ್ರಿಯ ನಾಯಕರಾಗಿ ಕೆಲಸ ಮಾಡಲಾರಂಭಿಸಿದರು. ಆನಂತರ 1957ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಲಖನೌ, ಮಥುರಾ ಹಾಗೂ ಬಲರಾಮಪುರದಿಂದ ಮೊದಲ ಎರಡು ಕ್ಷೇತ್ರಗಳಲ್ಲಿ ಸೋತು ಮೂರನೇ ಕ್ಷೇತ್ರದಲ್ಲಿ ಜಯ ಗಳಿಸಿದರು.

ಬಲರಾಮಪುರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿ, ನಾಮಪತ್ರ ಸಲ್ಲಿಸಲು ಹೋದಾಗ, ಆ ಊರನ್ನು ಅವರು ಅದಕ್ಕಿಂತ ಮೊದಲು ನೋಡಿರಲಿಲ್ಲ. ಇಡೀ ಕ್ಷೇತ್ರದ ಒಂದು ಊರಿನ ಪರಿಚಯವೂ ಇರಲಿಲ್ಲ. ಜನಸಂಘ ಹಾಗೂ ಆರೆಸ್ಸೆಸ್‌ನ ಮೂರ್ನಾಲ್ಕು ಕಾರ್ಯಕರ್ತರ ಹೊರತಾಗಿ ಬೇರೆಯವರ ಸಂಪರ್ಕವೂ ಇರಲಿಲ್ಲ. ಅಟಲ್‌ಜೀ ಹತ್ತಿರ ಹಣವೂ ಇರಲಿಲ್ಲ. ಜನಸಂಘ ಎಂಬ ಪಕ್ಷವಿದೆ, ಅದರ ಸಿದ್ಧಾಂತ ಇವು.. ಎಂಬುದನ್ನು ಜನರಿಗೆ ಪ್ರಚುರಪಡಿಸುವುದಕ್ಕಾಗಿ ಮಾತ್ರ ಚುನಾವಣೆಗೆ ಸ್ಪರ್ಧಿಸಿದ್ದರು. ಎಲ್ಲ ಮೂರು ಕ್ಷೇತ್ರಗಳಲ್ಲಿ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂಬುದು ಅವರಿಗೆ ಗೊತ್ತಿತ್ತು. ಗೆಲ್ಲುವ ಯಾವ ಲಕ್ಷಣವೂ ಇರಲಿಲ್ಲ.

ಬಲರಾಮಪುರಕ್ಕೆ ಮೊದಲ ಬಾರಿಗೆ ಆಗಮಿಸಿದಾಗ, ಅವರನ್ನು ಸ್ವಾಗತಿಸಲು ಐವತ್ತು ಜನರೂ ಇರಲಿಲ್ಲ. ಆದರೂ ಅವರು ಬೇಸರಿಸಿಕೊಳ್ಳಲಿಲ್ಲ. ಬಲರಾಮಪುರದ ಜತೆಗೆ ಇನ್ನಿತರ ಎರಡು (ಲಖನೌ ಹಾಗೂ ಮಥುರಾ) ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರಿಂದ, ವಾಜಪೇಯಿ ಅಲ್ಲಿಗೂ ಹೋಗಬೇಕಾಗುತ್ತಿತ್ತು. ಹೀಗಾಗಿ ಹೆಚ್ಚಿನ ಸಮಯವನ್ನು ಬಲರಾಮಪುರಕ್ಕೆಂದು ಕೊಡಲು ಆಗುತ್ತಿರಲಿಲ್ಲ.

ನಾಮಪತ್ರ ಸಲ್ಲಿಸಿದ ದಿನ ವಾಜಪೇಯಿ ಭಾಷಣ ಮಾಡಿದರು. ಅವರ ಮಾತುಗಳನ್ನು ಕೇಳಿದ ಅಲ್ಲಿನ ಮತದಾರರು ಮಂತ್ರಮುಗ್ಧರಾದರು. ಈ ಭಾಷಣಗಳು ಕಾಳ್ಗಿಚ್ಚಿನಂತೆ ಕ್ಷೇತ್ರದಲ್ಲಿ ಪ್ರಚಾರವಾದವು. ಅದಾದ ಬಳಿಕ ಬಲರಾಮಪುರದಲ್ಲಿ ಅವರು ಭಾಷಣ ಮಾಡಿದ್ದು ಐದಾರು ಬಾರಿ ಅಷ್ಟೆ. ಆದರೆ ಅಷ್ಟೊತ್ತಿಗೆ ವಾಜಪೇಯಿ ಅವರು ಅದ್ಭುತ ಮಾತುಗಾರರೆಂಬ ಸುದ್ದಿ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ಪಡೆದಿತ್ತು.

ವಾಜಪೇಯಿ ಅವರು ಬಲರಾಮಪುರದಲ್ಲಿ ಖರ್ಚು ಮಾಡಿದ್ದು ಹನ್ನೊಂದು ಸಾವಿರ ರುಪಾಯಿ ಮಾತ್ರ! ಅದೂ ಅವರ ಸ್ವಂತ ಹಣವಲ್ಲ. ಎಲ್ಲವನ್ನೂ ಜನಸಂಘದ ಕಾರ್ಯಕರ್ತರು ಚುನಾವಣೆ ಮುಗಿದ ನಂತರ ಸಂಗ್ರಹಿಸಿದ್ದರಲ್ಲಿ ಎರಡೂವರೆ ಸಾವಿರ ರುಪಾಯಿ ಉಳಿದಿದ್ದುವಂತೆ.

ವಾಜಪೇಯಿ ಲಖನೌ ಹಾಗೂ ಮಥುರಾದಲ್ಲಿ ದಯನೀಯವಾಗಿ ಪರಾಭವಗೊಂಡರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಬಲರಾಮಪುರದಲ್ಲಿ ಗೆದ್ದರು. ಆ ಚುನಾವಣೆಯಲ್ಲಿ ಜನಸಂಘದ ನಾಲ್ವರು ಗೆದ್ದಿದ್ದರು.

ಗುರುತು, ಪರಿಚಯ, ಸಂಪರ್ಕ ಏನೂ ಇಲ್ಲದ ಕ್ಷೇತ್ರದಿಂದ ಅಟಲ್‌ಜೀ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದಿದ್ದರು.

ವಿಚಿತ್ರ ಅಂದರೆ 1962ರಲ್ಲಿ ನಡೆದ ಚುನಾವಣೆಯಲ್ಲಿ ಅಟಲ್‌ಜೀ ಬಲರಾಮಪುರದಿಂದ ಸೋತುಹೋದರು. ಆದರೆ 1967ರಲ್ಲಿ ಪುನಃ ಅಟಲ್‌ಜೀ ಆರಿಸಿ ಬಂದರು. ಕ್ಷೇತ್ರದಲ್ಲಿ ನಾನಾಜೀ ದೇಶಮುಖ್ ಸಹ (1977ರಲ್ಲಿ) ಜನತಾಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಆಗ ವಾಜಪೇಯಿ ಅವರೇ ಪ್ರಮುಖ ಪ್ರಚಾರ ರೂವಾರಿ.

2018ರ ನಂತರ ಬಲರಾಮಪುರ, ಕ್ಷೇತ್ರ ಮರುವಿಂಗಡಣೆಯಿಂದಾಗಿ ಶ್ರವಸ್ತಿ ಎಂದು ಬದಲಾಯಿತು. ಪ್ರಸ್ತುತ ದದ್ದನ್ ಮಿಶ್ರ(ಬಿಜೆಪಿ) ಆ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಅದೇನೇ ಇರಲಿ, ಇದು ವಾಜಪೇಯಿ ಅವರಿಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕುಶಭಾವು ಠಾಕ್ರೆ ಹೇಳಿದ ಪ್ರಸಂಗ

ಅವು 1998ರ ದಿನಗಳು. ಅಟಲ್ ಬಿಹಾರಿ ಕುರಿತು ಬರೆಯಲಿರುವ ಪುಸ್ತಕಕ್ಕೆ ಮಾಹಿತಿ ಸಂಗ್ರಹಿಸಲೆಂದು ದಿಲ್ಲಿಗೆ ಹೋಗಿದ್ದೆ. ಭಾರತೀಯ ಜನತಾಪಕ್ಷದ ಪ್ರಧಾನ ಕಚೇರಿಯಲ್ಲಿ ಕೆಲವು ನಾಯಕರನ್ನು, ಕಾರ್ಯಾಲಯದ ಸಿಬ್ಬಂದಿಯನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕುವುದು ಉದ್ದೇಶವಾಗಿತ್ತು. ಆಗ ಕುಶಭಾವು ಠಾಕ್ರೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಗೋವಿಂದಾಚಾರ್ಯ ಹಾಗೂ ನರೇಂದ್ರ ಮೋದಿಯವರು ಪ್ರಧಾನ ಕಾರ್ಯದರ್ಶಿಗಳಾಗಿದ್ದರು. .ನಾ. ಕೃಷ್ಣಮೂರ್ತಿ(ಮುಂದೆ ಇವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು) ಅವರು ಕಾರ್ಯಾಲಯದ ಪ್ರಮುಖರಾಗಿದ್ದರು. ಗೋವಿಂದಾಚಾರ್ಯ ಹಾಗೂ ಮೋದಿ ಅಕ್ಕಪಕ್ಕದ ಕೋಣೆಯಲ್ಲಿ ವಾಸಿಸುತ್ತಿದ್ದರು. ‘ನಾನು ಮೋದಿ ಪ್ರವಾಸದಲ್ಲಿರುವುದರಿಂದ ನಮ್ಮ ರೂಮಿನಲ್ಲಿಯೇ ಉಳಿದುಕೊಳ್ಳಬಹುದು’ ಎಂದು ಗೋವಿಂದಾಚಾರ್ಯರು ಮುಕ್ತ ಆಮಂತ್ರಣ ನೀಡಿದ್ದರು.

ನಾನು ಠಾಕ್ರೆ ಅವರ ಸಮಯ ನಿಗದಿಪಡಿಸಿಕೊಂಡು ಅವರನ್ನು ಭೇಟಿ ಮಾಡಿದೆ. ಠಾಕ್ರೆಯವರು ವಾಜಪೇಯಿ ಅವರ ಓರಗೆಯವರು. ಅಟಲ್‌ಜೀಗಿಂತ ಎರಡು ವರ್ಷ ಹಿರಿಯರು. ಇವರೂ ಸಹ ಅಟಲ್‌ಜೀಯವರಂತೆ ಮಧ್ಯಪ್ರದೇಶದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಚಾರಕರಾಗಿದ್ದ ಠಾಕ್ರೆಯವರನ್ನು ಜನಸಂಘಕ್ಕೆ(ರಾಜಕೀಯಕ್ಕೆ) ಕರೆತಂದು, ಪಕ್ಷದ ಮಧ್ಯಪ್ರದೇಶ ಕಾರ್ಯದರ್ಶಿ ಹಾಗೂ ಆನಂತರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮಾಡಿದವರು ವಾಜಪೇಯಿ ಅವರೇ. ಮಧ್ಯಪ್ರದೇಶದ ಲೋಕಸಭೆ ಸ್ಥಾನಕ್ಕೆ 1979ರಲ್ಲಿ ಮರುಚುನಾವಣೆಯಾದಾಗ, ಠಾಕ್ರೆಯವರನ್ನು ನಿಲ್ಲಿಸಿ, ಆರಿಸಿ ತರುವಲ್ಲಿ ಪ್ರಮುಖ ಪಾತ್ರವಹಿಸಿದವರೂ ವಾಜಪೇಯಿ ಅವರೇ.

1980ರಲ್ಲಿ ಬಿಜೆಪಿ ಸ್ಥಾಪನೆಯಾದಾಗ ಠಾಕ್ರೆ ಅವರು ರಾಷ್ಟ್ರೀಯ ಕಾರ್ಯದರ್ಶಿ ಆದರು. ನಂತರ ಪ್ರಧಾನ ಕಾರ್ಯದರ್ಶಿಯಾದರು. ಉಪಾಧ್ಯಕ್ಷರಾದರು ಹಾಗೂ ಅಧ್ಯಕ್ಷರಾದರು. ಅವರ ಈ ಹಂತಹಂತದ ತೇರ್ಗಡೆಯಲ್ಲಿ ವಾಜಪೇಯಿಗೆ ಬೇಕಾದವರು ಎಂಬುದೂ ಒಂದು ಕಾರಣವಾಗಿತ್ತು.

ವಾಜಪೇಯಿ ಅವರ ಜತೆ ಸುಮಾರು ನಾಲ್ಕು ದಶಕಗಳ ಕಾಲ ನಿಕಟ ಒಡನಾಟ ಇಟ್ಟುಕೊಂಡಿದ್ದ ಠಾಕ್ರೆ, ತಮ್ಮ ಸ್ನೇಹಿತನ ಬಗ್ಗೆ ಹೇಳಬಹುದು, ಸ್ವಾರಸ್ಯಕರ ವಿಷಯ, ಪ್ರಸಂಗಗಳನ್ನು ವಿವರಿಸಬಹುದು ಎಂದು ನಿರೀಕ್ಷಿಸಿದ್ದೆ.

ವಾಜಪೇಯಿ ಅವರು ಸ್ಕೂಲ್‌ನಲ್ಲಿ ಓದುವಾಗ ಬಹಳ ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದರು, ಚೂಟಿಯಾಗಿದ್ದರು. ಸ್ಕೂಲ್‌ನ ಪಕ್ಕದಲ್ಲಿ ದೊಡ್ಡ ಕಲ್ಲಿತ್ತು. ಯಾರಿಗೂ ಕಾಣದಂತೆ ಅದರ ಹಿಂಬದಿಗೆ ಹೋಗಿ ಅಡಗಿ ಕುಳಿತಿರುತ್ತಿದ್ದರು’ ಎಂದು ಠಾಕ್ರೆ ಹೇಳಲಾರಂಭಿಸಿದರು.

ನಾನು ಪಟಪಟನೆ ನೋಟ್‌ಸ್ ಮಾಡಿಕೊಳ್ಳಲಾರಂಭಿಸಿದೆ. ಠಾಕ್ರೆಯವರು ಸುಮ್ಮನಾದರು. ನಾನು ಅವರ ಮುಂದಿನ ಮಾತುಗಳನ್ನು ನಿರೀಕ್ಷಿಸಲಾರಂಭಿಸಿದೆ.

ಕತ್ತು ಎತ್ತಿ ಅವರ ಮುಖವನ್ನು ನೋಡಿದೆ. ಠಾಕ್ರೆಯವರು ಏನೂ ಹೇಳಲಿಲ್ಲ. ಅವರು ನಿರ್ಭಾವುಕರಾಗಿದ್ದರು. ಮುಂದೇನೋ ಹೇಳಬಹುದೆಂದು ಕಾದೆ. ಆದರೆ ಅವರು ಮೌವಾಗಿ ಕುಳಿತಿದ್ದರು. ಪ್ರಾಯಶಃ ಅವರಿಗೆ ಮುಂದಿನ ಪ್ರಸಂಗದ ನೆನಪಿನ ಹರಿವು ಕಟ್ ಆಗಿರಬಹುದೆಂದು, ಹಿಂದೆ ಅವರು ಹೇಳಿದ್ದನ್ನು ನೆನಪಿಸಿದೆ. ಠಾಕ್ರೆಯವರು ಮುಂದೆ ಏನೂ ಹೇಳಲಿಲ್ಲ.

ಸಾರ್, ಮುಂದೇನಾಯಿತು?’ ಎಂದು ಕೇಳಿದೆ.

ಅಷ್ಟೇ. ಮುಂದೇನೂ ಇಲ್ಲ. ಅಲ್ಲಿಗೆ ಮುಗಿಯಿತು’ ಎಂದರು. ‘ಹಾಗಾದರೆ ಬೇರೆ ಪ್ರಸಂಗಗಳನ್ನು ಹೇಳಿ’ ಎಂದೆ. ತುಸು ಹೊತ್ತು ಯೋಚಿಸಿ, ‘ಅಷ್ಟೇ, ನನಗೆ ಬೇರೆ ಯಾವ ಪ್ರಸಂಗಗಳಾಗಲಿ, ದೃಷ್ಟಾಂತಗಳಾಗಲಿ ನೆನಪಿಗೆ ನನಗೆ ನೆನಪಿರುವುದೆಂದರೆ ಇದೊಂದೇ ಘಟನೆ’ ಎಂದರು ಠಾಕ್ರೆ.

ನನಗೆ ಮುಂದೇನು ಕೇಳುವುದೆಂದು ಅರ್ಥವಾಗಲಿಲ್ಲ. ವಾಜಪೇಯಿ ಬಗ್ಗೆ ತಮಗೆ ಗೊತ್ತಿರುವುದು, ನೆನಪಾಗುವುದು ಅದೊಂದೇ ಘಟನೆ ಎಂದು ಅವರ ಜತೆ ಅಷ್ಟು ಸುದೀರ್ಘ ಕಾಲ ಒಡನಾಡಿದ ವ್ಯಕ್ತಿ ಹೇಳಿದರೆ ನಂಬುವುದಾದರೂ ಹೇಗೆ? ವಾಸ್ತವದಲ್ಲಿ ಅವರಿಗೆ ಗೊತ್ತಿರುವುದೇ ಅಷ್ಟು ಎಂದು ಅವರೇ ಹೇಳಿದಾಗ ನಂಬದಿರುವುದಾದರೂ ಹೇಗೆ? ನಾನು ವಾಜಪೇಯಿ ಅವರು ರಾಜಕೀಯ ಪ್ರವೇಶಿಸಿದ ದಿನಗಳ ಬಗ್ಗೆ ಕೇಳಿದೆ. ಜನಸಂಘದ ಆರಂಭಿಕ ದಿನಗಳ ಬಗ್ಗೆ ಠಾಕ್ರೆಯವರು ಚಾವಣಿ ನೋಡುತ್ತಾ ಸುಮ್ಮನೆ ಕುಳಿತಿದ್ದರು. ಮತ್ತೆ ಅವರನ್ನು ಕೆದಕುವ ಪ್ರಯತ್ನ ಮಾಡಿದಾಗಲೂ ಒಂದು ಸಾಲಿನ ಉತ್ತರ. ಕೊನೆಯದಾಗಿ, ‘ಬೇರೆ ಯಾವುದಾದರೂ ಪ್ರಸಂಗ ನೆನಪಿಗೆ ಬರುವುದೇ?’ ಎಂದು ಕೇಳಿದೆ. ‘ವಾಜಪೇಯಿಯವರು ಶಾಲೆಯಲ್ಲಿನ ಕಲ್ಲಿನ ಹಿಂದೆ ಅಡಗಿ ಕುಳಿತಿರುತ್ತಿದ್ದರು’ ಎಂಬ ಪ್ರಸಂಗವನ್ನು ಮತ್ತೊಮ್ಮೆ ಹೇಳಿದರು.

ಕೆಲವು ಜನ, ಗಣ್ಯ ವ್ಯಕ್ತಿಗಳೊಂದಿಗೆ ತಮ್ಮ ಬದುಕನ್ನೇ ಸವೆಸಿರುತ್ತಾರೆ. ಆದರೆ ಆ ವ್ಯಕ್ತಿಗಳ ವ್ಯಕ್ತಿತ್ವ, ವೈಶಿಷ್ಟ್ಯಗಳೇ ಗೊತ್ತಿರುವುದಿಲ್ಲ. ಹೆಂಡತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯದ ದಿನ ಕಳೆದುಬಿಡುತ್ತಾರೆ.

ಬಿಜೆಪಿ ನಾಯಕರೊಬ್ಬರು ಏನೋ ಹೇಳ್ತಾರೆ, ಅವರು ಹೇಳೋದನ್ನೆಲ್ಲ ಬರೆಯಲು ಹದಿನೈದು ಪುಟಗಳನ್ನು ಮೀಸಲಿಡಬಹುದೆಂದು ಮೊದಲೇ ನಿರ್ಧರಿಸಿದ್ದರೆ ಆ ಎಲ್ಲಾ ಪುಟಗಳನ್ನು ಖಾಲಿ ಬಿಡಬೇಕಾಗುತ್ತಿತ್ತು’ ಎಂದು ವಾಜಪೇಯಿ ಕುರಿತು ನಾನು ಬರೆದ ‘ಅಜಾತಶತ್ರು’ ಪುಸ್ತಕದಲ್ಲಿ ಬರೆದಿದ್ದು ಈ ಠಾಕ್ರೆ ಅವರ ಬಗ್ಗೆ !

ಈ ಕೆಲಸ ಅನಂತಕುಮಾರ ಮಾಡಲಿ!

ಅದೇ ನೀವು ಕೇಂದ್ರ ಸಚಿವ ಅನಂತಕುಮಾರ ಅವರ ಜತೆ ಒಂದು ಗಂಟೆ ಕುಳಿತುಕೊಳ್ಳಿ, ಅಟಲ್‌ಜೀ ಬಗ್ಗೆ ಹೇಳಿ ಹೇಳಿ, ನೂರಾರು ದೃಷ್ಟಾಂತಗಳನ್ನು ಹೇಳುತ್ತಾರೆ. ನೂರಾರು ಗಂಟೆಗಳ ಕಾಲ ಅಟಲ್‌ಜೀ ಕುರಿತು ಮಾತಾಡುವಷ್ಟು ಸರಕು ಅವರ ಬಳಿಯಿದೆ. ಹಾಗೆಂದು ಅವರು ಸ್ವಲ್ಪವೂ ಬೋರಾಗದಂತೆ, ಅತ್ಯಂತ ಸ್ವಾರಸ್ಯವಾಗಿ, ಅಭಿನಯಸಮೇತ ಬಣ್ಣಿಸಬಲ್ಲರು. ಅನಂತಕುಮಾರ ಅವರು ಅಟಲ್‌ಜೀ ಬಗ್ಗೆ ಮಾತನಾಡಲಾರಂಭಿಸಿದರೆ, ಅದಕ್ಕೆ ಕೊನೆಯೇ ಇಲ್ಲ. ಅದರಲ್ಲೂ ಅವರು ಒಳ್ಳೆಯ ಮೂಡಿನಲ್ಲಿದ್ದರೆ, ಸವುಡು ಸಿಕ್ಕರೆ ಹಾಗೂ ಕೇಳುಗರು ಅವರಿಗೂ ಪ್ರೀತಿಪಾತ್ರರಾದರೆ ಅನಂತಕುಮಾರ ಬಾಯಿಂದ ಆ ಕತೆಗಳನ್ನು ಕೇಳುವುದೇ ಒಂದು ಅನೂಹ್ಯ ಅನುಭವ. ಪಟಾಕಿ ಸರಕ್ಕೆ ಇಟ್ಟಂತೆ, ಒಂದೇ ಸಮನೆ, ಒಂದರ ನಂತರ ಮತ್ತೊಂದರಂತೆ ಪ್ರಸಂಗ, ಹಾಸ್ಯ ಚಟಾಕಿಗಳನ್ನು ಹೇಳುತ್ತಲೇ ಹೋಗುತ್ತಾರೆ. ಅವನ್ನೆಲ್ಲ ಯಾರಾದರೂ ನೋಟ್ ಮಾಡಿಕೊಂಡರೆ, ಒಂದು ಪುಸ್ತಕಕ್ಕಾಗುವಷ್ಟು ಸರಕು ಅವರ ಬಳಿಯಿದೆ.

ಅನಂತಕುಮಾರ ಅವರು, ಅಟಲ್‌ಜೀ ಕೇಂದ್ರ ಸರಕಾರದಲ್ಲಿ ನಾಗರಿಕ ವಿಮಾನಯಾನ, ಯುವಜನ ಸೇವೆ, ಕ್ರೀಡೆ, ಪ್ರವಾಸೋದ್ಯಮ, ಸಂಸ್ಕೃತಿ, ನಗರಾಭಿವೃದ್ಧಿ ಹಾಗೂ ಬಡತನ ನಿರ್ಮೂಲನ ಖಾತೆಗಳ ಸಚಿವರಾಗಿದ್ದರು. ಸಚಿವರಾಗುವುದಕ್ಕೆ ಮುನ್ನ ಪಕ್ಷ ಸಂಘಟನೆಯಲ್ಲಿ ಅಟಲ್‌ಜೀ ಅವರ ಜತೆ ಹತ್ತಾರು ವರ್ಷಗಳ ಕಾಲ ದುಡಿದವರು. ಕರ್ನಾಟಕವೊಂದೇ ಅಲ್ಲ, ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಹಾಗೂ ಆ ಪಕ್ಷದ ಸರಕಾರದಲ್ಲಿ, ಕೇಂದ್ರದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ರಾಷ್ಟ್ರೀಯ ನಾಯಕರ ಜತೆ ನಿಕಟ ಸಂಪರ್ಕಸಂಬಂಧ ಹೊಂದಿದವರು, ಅತಿ ಕಿರಿಯ ವಯಸ್ಸಿನಲ್ಲಿ ಕೇಂದ್ರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾದವರು. ಅಲ್ಲದೇ ಬಹುತೇಕ ಎಲ್ಲಾ ಸಂಸದೀಯ ಸ್ಥಾಯಿ ಹಾಗೂ ಸಲಹಾ ಸಮಿತಿಗಳ ಸದಸ್ಯರು ಮತ್ತು ಅಧ್ಯಕ್ಷರಾದವರು. ಸಹಜವಾಗಿಯೇ ಅವರು ಅಟಲ್‌ಜೀ, ಆಡ್ವಾಣಿ ಸೇರಿದಂತೆ ಎಲ್ಲ ಪ್ರಮುಖ ನಾಯಕರ ಜತೆ ಒಡನಾಟವಿಟ್ಟುಕೊಂಡವರು. ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರಾದವರು.

ಮೂಲತಃ ಆಡ್ವಾಣಿ ಬಿಗುಮಾನ, ಬಿಗುಮುಖದವರು, ತುಸು ಗಂಭೀರ. ಆದರೆ ಅಟಲ್‌ಜೀ ಹಾಗಲ್ಲ. ವಿನೋದಪ್ರಿಯರು. ಅನಂತಕುಮಾರ ಕೂಡ ಹಾಗೇ. ಅವರಿಗೂ ಅಗಾಧ ‘ಸೆನ್‌ಸ್ ಆಫ್ ಹ್ಯೂಮರ್’ ಇದೆ. ಅನಂತಕುಮಾರ ಅವರು ಅಟಲ್‌ಜೀ ಅವರಷ್ಟು ಜಗನ್ನಾಥ ಜೋಶಿ ಅವರೊಂದಿಗೆ ಹತ್ತಿರದಿಂದ ಒಡನಾಡಿಲ್ಲ. ಆದರೆ ಅವರ (ಜೋಶಿ)ಬಗೆಗಿನ ನೂರಾರು ಹಾಸ್ಯಪ್ರಸಂಗಗಳನ್ನು ಭಲೇ ಸ್ವಾರಸ್ಯವಾಗಿ ಹೇಳುತ್ತಾರೆ. ಹೀಗಾಗಿ ಅಟಲ್‌ಜೀ ಕುರಿತು ಇರುವ ಅನೇಕ ದೃಷ್ಟಾಂತಗಳು ಅನಂತಕುಮಾರ ಚಿತ್ತಭಿತ್ತಿಯಲ್ಲಿ ಸಮೃದ್ಧವಾಗಿವೆ.

ಕುಶಭಾವು ಠಾಕ್ರೆಯಂಥವರಿಗೆ ಅದನ್ನು ಗ್ರಹಿಸುವ ಶಕ್ತಿಯೂ ಇಲ್ಲ, ಹೇಳುವ ಕಲೆಯೂ ಇಲ್ಲ. ಆದರೆ ಅನಂತಕುಮಾರ ಅವರಿಗೆ ಹಾಗಲ್ಲ. ಅವೆರಡೂ ಇವೆ. ಅಟಲ್‌ಜೀ ಬಗ್ಗೆ ಅವರಷ್ಟು ಬೇರೆ ಯಾರೂ ಅಷ್ಟೊಂದು ‘ಸರಕು’ ಹೊಂದಿರಲಾರರು.

ಅನಂತಕುಮಾರ ಅವೆಲ್ಲವನ್ನೂ ಒಂದೆಡೆ ದಾಖಲಿಸಬೇಕು. ಅದು ನಮ್ಮ ಕಾಲದ ಉತ್ತಮ ರಾಜಕೀಯ ಹಾಗೂ ಸಾಮಾಜಿಕ ಕಥನವಾದೀತು.

ಮುಖೋಟಾ ಕುರಿತು

ಆ ಒಂದು ಪದ ದೇಶಾದ್ಯಂತ ಎಬ್ಬಿಸಿದ ಕೋಲಾಹಲ ಹಾಗೂ ಚರ್ಚೆ ಅಷ್ಟಿಷ್ಟಲ್ಲ. ಭಾರತೀಯ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಕೆ.ಎನ್. ಗೋವಿಂದಾಚಾರ್ಯ ಅವರು 1996ರಲ್ಲಿ ವಾಜಪೇಯಿ ಅವರನ್ನು ಕುರಿತು ಹೇಳಿದ್ದಾರೆನ್ನಲಾದ ಮುಖೋಟಾ(ಮುಖವಾಡ) ಎಂಬ ಪದ ಭಾರಿ ವಿವಾದ ಸೃಷ್ಟಿಸಿತು.

1996ರಲ್ಲಿ ಪಕ್ಷ ಚುನಾವಣೆಗೆ ಸಿದ್ಧವಾಗುತ್ತಿತ್ತು. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರು ಯಾರಾಗುತ್ತಾರೆಂದು ಪತ್ರಕರ್ತರು ಕೇಳಿದರು.

ಅಟಲ್‌ಜೀ ಅವರೇಕೆ ಅಧ್ಯಕ್ಷರಾಗಬಾರದು?’ ಎಂದು ವರದಿಗಾರರೊಬ್ಬರು ಕೇಳಿದರು. ಅದಕ್ಕೆ ಗೋವಿಂದಾಚಾರ್ಯರು, ‘ವಾಜಪೇಯಿ ಅವರು ಬಿಜೆಪಿಯ ಬಹುಜನಪ್ರಿಯ ಹಾಗೂ ಸ್ವೀಕಾರಾರ್ಹ ಮುಖ(Face) ಅವರನ್ನು ಪಕ್ಷದ ಅಧ್ಯಕ್ಷರೆಂದು ಬಿಂಬಿಸಿದರೆ ನಾವು ಬರುವುದು ಶತಃಸಿದ್ಧ’ ಎಂದು ಹೇಳಿದರು.

ಈ ಪೈಕಿ ಪ್ರಮುಖ ಪತ್ರಿಕೆಯೊಂದರ ವರದಿಗಾರನಿಗೆ ಅದೇನು ಕೇಳಿಸಿತೋ, ಅವರ ಉದ್ದೇಶ ಅದೇನಿತ್ತೋ ಗೊತ್ತಿಲ್ಲ. ಗೋವಿಂದಾಚಾರ್ಯರು ಅಟಲ್‌ಜೀ ಬಗ್ಗೆ acceptable face (ಸ್ವೀಕಾರಾರ್ಹ ಮುಖ) ಎಂದು ಹೇಳಿದನ್ನು ‘ಮುಖೋಟಾ’ ಎಂದು ಬರೆದ. ಅಟಲ್‌ಜೀ ಬಿಜೆಪಿಯ ಮುಖವಾಡವಷ್ಟೇ ಎಂಬರ್ಥದಲ್ಲಿ ಬರೆದುಬಿಟ್ಟ. ಅದು ಅನಗತ್ಯ ಹೈಲೈಟ್ ಆಯಿತು.

ಆ ದಿನ ಇದೇ ಪ್ರಮುಖವಾಗಿ ಚರ್ಚೆಯಾಯಿತು. ಮರುದಿನ ಉಳಿದ ಪತ್ರಿಕೆಗಳೂ ‘ಮುಖೋಟಾ’ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದವು. ಗೋವಿಂದಾಚಾರ್ಯರು ಅಸಲಿಗೆ ಹಾಗೆ ಹೇಳಿರಲೇ ಇಲ್ಲ.

ಆದರೆ ಆಗಬಾರದ ಹಾನಿ ಆಗಿಹೋಗಿತ್ತು. ರಾತ್ರೋರಾತ್ರಿ ಅವರು ಖಳನಾಯಕರಾಗಿದ್ದರು. ವಾಜಪೇಯಿ ಅವರ ವಿರೋಧಿ ಎಂಬಂತೆ ಗೋವಿಂದಾಚಾರ್ಯರನ್ನು ಬಿಂಬಿಸಲಾಯಿತು. ಕೆಲ ಕಾಲದಲ್ಲಿ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಲಾಯಿತು. ಹೊಸ ಹೊಣೆಗಾರಿಕೆ ಅವರಿಗೆ ಕೊಡಲಿಲ್ಲ. ಗೋವಿಂದಾಚಾರ್ಯರು ಏಕಾಂಗಿಯಾದರು. ನಿರುದ್ಯೋಗಿಯಾದರು. ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಬೇರೆಬೇರೆ ಊರುಗಳಲ್ಲಿ ಉಪನ್ಯಾಸ ಮಾಡಲಾರಂಭಿಸಿದರು. ಸಹಜವಾದ ಬೇಸರವನ್ನು ಅಲ್ಲಲ್ಲಿ ಹೊರಹಾಕಿದಾಗ ವಾಜಪೇಯಿ ಅವರ ‘ಕಟ್ಟರ್ ವಿರೋಧಿ’ ಎಂಬ ಹಣೆಪಟ್ಟಿ ಮುಖೋಟಾ ಪದ ವಿವಾದದಿಂದ ಅವರನ್ನು ಗುರುತಿಸುವಂತಾಯಿತು. ಇದರಿಂದ ವಾಜಪೇಯಿಗೆ ಏನೂ ಆಗಲಿಲ್ಲ. ಅವರು ಪ್ರಧಾನಿಯಾದರು. ಆದರೆ ಗೋವಿಂದಾಚಾರ್ಯರಿಗೆ ಬಹಳ ಅನ್ಯಾಯವಾಯಿತು. ಬಿಜೆಪಿ ಅವರನ್ನು ಅತಿಯಾಗಿ ಶಿಕ್ಷಿಸಿತು.

ಮೊನ್ನೆ ವಾಜಪೇಯಿ ನಿಧನರಾದ ಬಳಿಕ ಗೋವಿಂದಾಚಾರ್ಯರನ್ನು ‘ಔಟ್‌ಲುಕ್’ ವಾರಪತ್ರಿಕೆ ಸಂಪರ್ಕಿಸಿದಾಗ ಅವರು ಹೇಳಿದರು: “I called Vajpayee “Face of BJP”, Media made it mukhota ಅಟಲ್‌ಜೀ ನನ್ನ ಗುರು. ಒಬ್ಬ ನಿಜವಾದ ಶಿಷ್ಯ ತನ್ನ ಗುರುವಿನ ಬಗ್ಗೆ ಎಂದಿಗೂ ಹೇಳಲಾರ. ಆರೆಸ್ಸೆಸ್ ಸಿದ್ಧಾಂತಗಳ ಪ್ರತಿಪಾದಕನಾಗಿ ಹೇಳುತ್ತೇನೆ, ನಾನು ಅವರ ವಿಚಾರಧಾರೆಗಳನ್ನು ಗೌರವಿಸುವವನು. ಆರೆಸ್ಸೆಸ್ ಕೂಡ ಅಟಲ್‌ಜೀ ವಿಚಾರಧಾರೆಗಳನ್ನು ಅಳವಡಿಸಿಕೊಂಡಿತು.’

ಈ ಮಾತುಗಳನ್ನು ಗೋವಿಂದಾಚಾರ್ಯರು ಇಪ್ಪತ್ತೆರಡು ವರ್ಷಗಳ ಮೊದಲು ಹೇಳಬೇಕಿತ್ತು. ಕನಿಷ್ಠ ಅಟಲ್‌ಜೀ ಅಧ್ಯಕ್ಷರಾಗುವ ಮುನ್ನ ಹೇಳಬೇಕಿತ್ತು. ಅಷ್ಟಕ್ಕೂ ಅವರು ಗೋವಿಂದಾಚಾರ್ಯರ ವಿರುದ್ಧ ಜಿದ್ದು ಸಾಧಿಸುತ್ತಿರಲಿಲ್ಲ. ಆ ವಿವಾದವನ್ನು ಕ್ಷಮಿಸಿಬಿಡುತ್ತಿದ್ದರು. ಹಾಗೆ ಗೋವಿಂದಾಚಾರ್ಯರನ್ನೂ. ಅಟಲ್‌ಜೀ ನಿಧನ ನಂತರ ಹೇಳಿದ್ದರಿಂದ ಯಾರಿಗೆ ತಲುಪಬೇಕಿತ್ತೋ ಅವರಿಗೆ ತಲುಪಲಿಲ್ಲ. ಇದೊಂಥರ ಮರೆತು ಬಿಡಬಹುದಾಗಿದ್ದ, ನೆನಪಿನಲ್ಲಿ ಕಹಿ ಘಟನೆ.