About Us Advertise with us Be a Reporter E-Paper

ಅಂಕಣಗಳು

ಬ್ರಾಹ್ಮಣರ ಮೇಲಿನ ದಾಳಿಯೋ? ಸ್ವಯಂಕೃತವೋ?

ವಿವಾದ: ಜಿತೇಂದ್ರ ಕುಂದೇಶ್ವರ

ಶೀರೂರು ಶ್ರೀಗಳ ಅಸಹಜ ಸಾವಿನ ಬಳಿಕ ಹುಟ್ಟಿಕೊಂಡ ವಿವಾದವನ್ನು ಬ್ರಾಹ್ಮಣರ ಮೇಲಿನ ದಾಳಿಗಳು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಈ ವಿವಾದ ಬ್ರಾಹ್ಮಣರ ಸ್ವಯಂ ಕೃತವೋ ಅಥವಾ ಬ್ರಾಹ್ಮಣೇತರರ ಷಡ್ಯಂತ್ರವೋ ಎಂಬ ಕುರಿತು ಒಂದಿಷ್ಟು

ಬ್ರಹ್ಮನ ಐದನೇ ತಲೆಯನ್ನು ಕಿರುಬೆರಳಿಂದ ಕಿತ್ತ ಪರಶಿವನಿಗೆ ಕೊನೆಗೆ ಬ್ರಹ್ಮ ಕಪಾಲವೇ ಕಂಟಕವಾಗಿ ರಕ್ತವನ್ನೇ ಹೀರುತೊಡಗುತ್ತದೆ. ಕಪಾಲಕ್ಕೆ ವಿಪರೀತ ಹಸಿವು. ಅಂಥ ಬ್ರಹ್ಮ ಕಪಾಲದಂತೆ ಹಸಿವು, ಹಸಿವು ಎಂದು ನಾಲಿಗೆ ಹೊರ ಚಾಚಿ ಬ್ರೇಕಿಂಗ್ ಸುದ್ದಿಗಾಗಿ ಕಾಯುತ್ತಿದ್ದ ಮಾಧ್ಯಮಗಳ ಮುಂದೆ ಪೇಜಾವರ ಶ್ರೀಗಳು ಕಾಳು ಹಾಕತೊಡಗಿದರು. ನೊಣ ಸಿಕ್ಕರೂ ಸಾಕು ಎಂಬಂತಿದ್ದವರಿಗೆ ಹೆಣವೇ ಸಿಕ್ಕಾಗ ಎಷ್ಟು ಖುಷಿ ಆಗಬೇಡ?

ಮಾಧ್ಯಮಗಳು (ಪತ್ರಿಕೆಗಳು ಸಹಿತ) ರಣ ಹದ್ದುಗಳಂತೆ ಶೀರೂರು ಪ್ರಕರಣವನ್ನು  ಹೆಕ್ಕಿ, ಹೆಕ್ಕಿ ಕುಕ್ಕಿ, ಕುಕ್ಕಿ ವರದಿ ಮಾಡಿದವು. ಮರಣೋತ್ತರ ತನಿಖೆಯ ನೆಪದಲ್ಲಿ ಹಲವರ ಮಾನ ಹರಾಜು ಹಾಕಿದವು.

ಆದರೆ ಸೂಜಿಯ ಮೊನೆಯಲ್ಲಿ ನಿವಾರಿಸಬಹುದಾಗಿದ್ದ ವಿವಾದವನ್ನು ಸರಿಪಡಿಸಲು ಕೊಡಲಿ ಎತ್ತಿಕೊಂಡದ್ದು ಯಾರು? ಅಸಹಜವಾಗಿ ಮೃತಪಟ್ಟ ಶೀರೂರು ಶ್ರೀಗಳು ಬ್ರ್ಮಾಣ, ಪರಮ ಪೂಜ್ಯಪೇಜಾವರ ಯತಿಗಳೂ ಬ್ರಾಹ್ಮಣರೇ. ಬಹುತೇಕ ಪತ್ರಿಕೆಗಳ ಸಂಪಾದಕರೂ ಬ್ರಾಹ್ಮಣರೇ, ಸುದ್ದಿವಾಹಿನಿಗಳಲ್ಲಿ, ಪತ್ರಕರ್ತರಲ್ಲಿಯೂ ಜನಿವಾರ ಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ!

ಇದು ಬ್ರಾಹ್ಮಣ ಮಠ. ಬ್ರಾಹ್ಮಣ ಮಠಾಧಿತಿಗಳೊಳಗಿರುವ ಗೊಂದಲ. ಹಾಗಾಗಿ ನೀವು  ಇದಕ್ಕೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬ್ರಾಹ್ಮಣರ ವಿಷಯಕ್ಕೆ ತಲೆಹಾಕಬೇಡಿ. ಪೇಜಾವರರಿಗೆ ಬುದ್ಧಿ ಹೇಳುವ, ವಿಮರ್ಶಿಸುವುದು ದುಷ್ಟ ವಿಚಾರ ಬೇಡ ಎಂದು ಮಾಧ್ವ ಮತಾನುಯಾಯಿಗಳು ವ್ಯಗ್ರರಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿ ಹಾಯುತ್ತಿದ್ದಾರೆ.

ಇತ್ತೀಚೆಗೆ ಉಡುಪಿ ಪುರಾತನ ಶಿವ ಸನ್ನಿಧಿ ಶ್ರೀ ಅನಂತೇಶ್ವರವನ್ನೇ ಅನಂತಾಸನ  ಕ್ಷೇತ್ರ ಎಂದು ಬದಲಾಯಿಸಿದಾಗ ವಿವಾದವಾಯಿತು. ಅದು ಬ್ರಾಹ್ಮಣೇತರರು ಗಲಾಟೆ ಮಾಡಿಕೊಂಡದಲ್ಲ. ಬ್ರಾಹ್ಮಣರದೇ- ಶೈವ ಮತ್ತು ವೈಷ್ಣವ ಪಂಗಡದ ಜಗಳದು.ಚಲೋ ಉಡುಪಿ’ ಎನ್ನುತ್ತಾ ಮಠದತ್ತ ಬುದ್ಧಿಜೀವಿಗಳು ಧಾವಿಸಿದಾಗ ಪೇಜಾವರ  ನಿಮ್ಮ ಜತೆ ನಾವಿದ್ದೇವೆ ಎಂದು ಮುಂದೆ ಬಂದದ್ದು, ಪ್ರತಿಭಟನೆಮಾಡಿದ್ದು, ಬೆಂಬಲ ಸೂಚಿಸಿದ್ದು ಮುಸ್ಲಿಮರು! ಆಗ ಬ್ರಾಹ್ಮಣರ ಸುದ್ದಿಗೆ ಬರಬೇಡಿ ಎನ್ನುವರು ಎಲ್ಲಿದ್ದರು ?

ಬ್ರಾಹ್ಮಣರು ಯಾರ ಹಂಗೂ ಇಲ್ಲದೆ ದುಡಿಯುತ್ತಿದ್ದಾರೆ,  ಮೀಸಲು ಇಲ್ಲ, ಸ್ವಾವಲಂಬಿಗಳು, ಬುದ್ಧಿವಂತರು ಎಲ್ಲವೂ ನಿಜ. ಬಡ ಬ್ರಾಹ್ಮಣರು ಸಂಕಷ್ಟದಲ್ಲಿದ್ದಾರೆ. ಇವೆಲ್ಲವೂ ಸತ್ಯ. ಈ ವಿಚಾರ ಇಟ್ಟುಕೊಂಡು ಬ್ರಾಹ್ಮಣರಲ್ಲಿ ಒಗ್ಗಟ್ಟು ಮೂಡಿಸುವುದು ತಪ್ಪೇನಿಲ್ಲ. ಆದರೆ ಅದಕ್ಕೂ ಶೀರೂರು ಶ್ರೀಗಳ ಪ್ರಕರಣ ಬೆಳವಣಿಗೆಗಳಿಗೂ ಎಂಥಾ ಸಂಬಂಧ?

ಉಡುಪಿ  ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣರ ಸೊತ್ತು ಹೌದು. ಅದನ್ನು ಕುರುಬರು ಬಂದು ಕೇಳಿದಾಗ ಮೊದಲಿಗೆ ಅಡ್ಡ ಬಂದದ್ದೇ ಶೀರೂರು ಸ್ವಾಮೀಜಿ. ಉಡುಪಿ ಕುರುಬರಿಗೆ ಸೇರಬೇಕು ಎಂದು ಕನಕ ಗೋಪುರ ಸಂದರ್ಭ ಕುರುಬರು ಬಂದು ಮುತ್ತಿಗೆ ಹಾಕಿದಾಗ ಇದೇ ಶೀರೂರು ‘ಏರ್ ಬರ್ಪೆರ್ ಸೂಪೆ’( ಯಾರು ಬರುತ್ತಾರೆ ನೋಡುತ್ತೇನೆ )ಎಂದು ಕಾವಿಯನ್ನು ಸೊಂಟಕ್ಕೆ ಬಿಗಿದು  ಅವರನ್ನು ಎದುರಿಸಿದವರು. ಬ್ರಾಹ್ಮಣರೇನು ಬಿಟ್ಟಿ ಬಿದ್ದಿದ್ದಾರೆಯೇ ಎಂದು ಈಗ ಪ್ರಶ್ನಿಸುತ್ತಿರುವವರು ಯಾರೂ ಕೂಡಾ ಅಂದು  ಕಾಣಸಿಕ್ಕಿಲ್ಲ! ಮುತ್ತಿಗೆ ಹಾಕಿದವರನ್ನು ಚದುರಿಸಿದ್ದು ಬ್ರಾಹ್ಮಣೇತರ ಪೊಲೀಸರೇ ಹೊರತು ಬ್ರಾಹ್ಮಣರಲ್ಲ.

ಯುವ ಬ್ರಾಹ್ಮಣರನ್ನು ಸಂಘಟಿಸಿ, ಶಕ್ತಿಶಾಲಿ ಮಾಡಿದ್ದೂ ಶೀರೂರು ಶ್ರೀಗಳೇ. ಹೀಗಾಗಿ ಬ್ರಾಹ್ಮಣರು ಒಗ್ಗಟ್ಟಾಗಿ ಅವರ ಅಸಹಜ ಸಾವಿನ ತನಿಖೆಗಾಗಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಬೇಕು.

ನಿಜ ಹೇಳಬೇಕೆಂದರೆ ಶಿರೂರು ಶ್ರೀಗಳು ಅಷ್ಟಮಿ ಸಂದರ್ಭ ಲಕ್ಷಗಟ್ಟಲೆ ಮೌಲ್ಯದ ನೋಟಿನ ಹಾರ ಹುಲಿವೇಷಧಾರಿಗಳಿಗೆ ಹಾಕುತ್ತಿದ್ದರು. ಅವರೆಲ್ಲರೂ ಸ್ವಾಮೀಜಿ ಪರ ಪ್ರತಿಭಟನೆಗೆ ಬಂದಿದ್ದರೂ ಸಾಕಿತ್ತು. ಮಠಗಳ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ  ಮಾಡುವ ಹಕ್ಕು ಜನಸಾಮಾನ್ಯರಿಗೆ ಇಲ್ಲ ಎನ್ನುತ್ತಿದ್ದೀರಿ, ಆಯಿತು, ವಿಮರ್ಶಿಸುವ ಹಕ್ಕು ವಿದ್ವಾಂಸರಿಗೆ ಮೀಸಲು ಇರಲಿ. ಆದರೆ ಆದರೆ ಸಾಮಾಜಿಕ ಜವಾಬ್ದಾರಿ ಕುರಿತು, ನಡೆಯುವ ಬೆಳವಣಿಗೆ ಕುರಿತು ಕೇಳುವ ಹಕ್ಕನ್ನು ಜನಸಾಮಾನ್ಯರಿಂದ ಕಿತ್ತುಕೊಳ್ಳುವುದು ಸರಿಯೇ?

ಶೀರೂರು ಶ್ರೀಗಳ ಅಸಹಜ ಸಾವಿನ ಸುದ್ದಿ ಕೇಳಿದ ಬಳಿಕ ಪೇಜಾವರ ಶ್ರೀಗಳು ಶಿರಸಿಯಲ್ಲಿ ನಿಗದಿತ ಕಾರ್ಯಕ್ರಮ ರದ್ದು ಮಾಡದೆ ಸನ್ಮಾನ ಸ್ವೀಕರಿಸಿದರು. ಅಷ್ಟಕ್ಕೂ ಸುಮ್ಮನಿರದೆ ಮ್ಯಾಮದ ಮುಂದೆ ನಿಂತು  ಶೀರೂರು ಮಠಾಧಿಪತಿಗಳ ವಿರುದ್ಧ ಅನೈತಿಕ  ಅಕ್ರಮ ಸಂತಾನ, ಮಾದಕ ವ್ಯಸನಗಳನ್ನು ಆರೋಪಿಸಿ, ಇದಕ್ಕಾಗಿಯೇ ತಾವು ಶೀರೂರು ಶ್ರೀ ಅಂತಿಮ ಕಾರ್ಯದಲ್ಲಿ ಭಾಗಹಿಸುತ್ತಿಲ್ಲ ಎಂದರು. ಅದುವರೆಗೆ ಊಹಾಪೋಹವಾಗಿಯೇ ಇದ್ದ ಸುದ್ದಿಗಳಿಗೆ ಪೇಜಾವರ ಶ್ರೀಗಳು ಅಧಿಕೃತ  ಮುದ್ರೆ ಒತ್ತಿದಂತಾಯಿತು. ಮದವೇರಿದ ಆನೆಗೆ ಮತ್ತಷ್ಟು ಮದ್ಯ ಕುಡಿಸಿದಂತಾಯಿತು ಆಗ ಮಾಧ್ಯಮಗಳಲ್ಲಿ ಶೀರೂರು ಶ್ರೀಗಳು ಇತರ ಮಠಾಧೀಶರ ಮೇಲೆ ಮಾಡಿದ ತೀರಾ ಅಸಹ್ಯ ಅರೋಪಗಳನ್ನು  ಧೈರ್ಯದಿಂದಲೇ ಪ್ರಸಾರವಾದವು.

ಪೇಜಾವರರು ಪೂರ್ವ ನಿಗದಿತ ಕಾರ್ಯಕ್ರಮ ರದ್ದು  ಮಾಡಿ ವಿರಾಮ ಪಡೆದಿದ್ದರೆ ಈ  ತಿರುವು ಸಿಗುತ್ತಿರಲಿಲ್ಲ. ಒಂದು ವೇಳೆ ಶೀರೂರು ಶ್ರೀಗಳ ವೃಂದಾವನ ಕಾರ್ಯಗಳಲ್ಲಿ ಭಾಗಿಯಾಗಿದ್ದರಂತೂ ಮತ್ತಷ್ಟು ದೊಡ್ಡವರಾಗುತ್ತಿದ್ದರು. ಅಷ್ಟಮಠಗಳು ಈ ಮಟ್ಟಿನ ಟೀಕೆಗೆ ಗುರಿಯಾಗುತ್ತಿರಲಿಲ್ಲ. ಬ್ರಾಹ್ಮಣರ ಸಹಿತ ಅಸಂಖ್ಯಾತ  ಭಕ್ತ ಸಮೂಹಕ್ಕೂ ಗೊಂದಲ ಉಂಟಾಗುತ್ತಿರಲಿಲ್ಲ ಎನ್ನುವುದು ನನ್ನ ಭಾವನೆ. ಇದೇ ಭಾವನೆಯನ್ನು ಅನೇಕ ಮಂದಿ ಹೇಳಿದ್ದಾರೆ, ಕೆಲವರು ಹೇಳದೆ ತಮ್ಮ ಹೊಟ್ಟೆಯೊಳಗೆ ಇಟ್ಟುಕೊಂಡಿದ್ದಾರೆ.

ಕೆಲವು ಆಚಾರ್ಯರು ಶೀರೂರು ಕಾಲವಶರಾದ ಮೇಲೆ  ವಿಷ ಕಾರುತ್ತಿದ್ದಾರೆ. ಅಂದು ಕನಕದಾಸರನ್ನು ಹೊರಗೆ ಅಟ್ಟಿದ ಕೆಲವು ಅತಿ  ಪಳೆಯುಳಿಕೆಗಳು ಇರಬಹುದು. ಶೀರೂರು ಸ್ವಾಮೀಜಿ ಅಗಲಿದ ಮೇಲೆ ಅವರು ಮಾದಕ ವ್ಯಸನಿ, ಸ್ತ್ರೀ ಲೋಲರಾಗಿದ್ದರು ಎಂದು ಬೊಬ್ಬಿರಿಯುತ್ತಿರುವ ಅನೇಕ ಮಡಿವಂತ ಪಂಡಿತರನ್ನು ನೋಡುತ್ತಿದ್ದೇನೆ. ಅಂಥ ಒಂದಿಬ್ಬರು ಆಚಾರ್ಯರರನ್ನು ವಿಮರ್ಶಿಸಲೇ ಬೇಕು.

ಪರ್ಯಾಯ ಮೆರವಣಿಗೆ ಸಂದರ್ಭ ಶೀರೂರು ಶ್ರೀಗಳ ಬಾಯಿಯಿಂದ ಮದ್ಯದ ವಾಸನೆ ಹೊಡೆಯುತ್ತಿತ್ತು ಎಂದು ಹೇಳಿದವರಿದ್ದಾರೆ. ಆಚಾರ್ಯರೇ ನಿಮಗೆ ಮಾಧ್ವ ಸಂಪ್ರದಾಯದ ಮೇಲೆ ಭಕ್ತಿ ಶ್ರದ್ಧೆ ಇದೆ ಎನ್ನುವುದಾದರೆ ವಾಸನೆ ಬರುತ್ತಿರುವವರನ್ನು ಪರ್ಯಾಯ ಮೆರವಣಿಗೆಯಲ್ಲಿ ಪಲ್ಲಕಿಯಲ್ಲಿ ಇಟ್ಟು ಹೊತ್ತುಕೊಂಡು  ಬಂದಿರಿ, ಅವರನ್ನು ಮಠದ ಒಳಗೆ ಬರಲು ಹೇಗೆ ಬಿಟ್ಟಿರಿ ಆಚಾರ್ಯರೇ?

ಪೇಜಾವರರು ಕಳೆದ ಪರ್ಯಾಯದಲ್ಲಿ ಮುಸ್ಲಿಮರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿ ವಿವಾದ ಉಂಟಾದಾಗ ಇದೇ ಆಚಾರ್ಯರು ಪೇಜಾವರ ಶ್ರೀಗಳನ್ನು ಮೊದಲು ನೀವು ಪರ್ಯಾಯ ಪೀಠದಿಂದ ಕೆಳಗಿಳಿಯಿರಿ ಎಂದು ಅಬ್ಬರಿಸಿದ್ದರು. ಈಗ  ಒಬ್ಬ ಬ್ರಾಹ್ಮಣ ಯತಿ ಮೃತಪಟ್ಟಾಗ ಅವರ ಕುರಿತು ಕೀಳಾಗಿ ಮಾತನಾಡಿ, ಪೇಜಾವರ ಶ್ರೀಗಳ ಪರ ಎಂದು ತೋರಿಸಿಕೊಳ್ಳಲು ಕಾರಣವೇನು ? ಬಹುಶಃ ಇಫ್ತಾರ್ ಕೂಟದ ವಿಚಾರದಲ್ಲಿ ಕಳೆದು  ಒಲವನ್ನು ಪೇಜಾವರರಿಂದ ಮತ್ತೆ ಗಳಿಸುವ ಹುನ್ನಾರ ಇರಬಹುದು.

ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣ ಸಮಾಜದ ಪರವಾಗಿ ವಾದ ಮಾಡಿ ನಾಯಕರಾಗಲು ಹವಣಿಸುತ್ತಿರುವ ಇನ್ನೊಬ್ಬ ಆಚಾರ್ಯರು ಕೂಡಾ ಶೀರೂರು ಸ್ವಾಮೀಜಿ ಕುರಿತು ತೀರಾ ಕೆಟ್ಟದಾಗಿ ಬರೆದಿದ್ದಾರೆ. ಆದರೆ ಇದೇ ಆಚಾರ್ಯರು ಹಿಂದೊಮ್ಮೆ ರಾಜಾಂಗಣದಲ್ಲಿ ನಡೆದ ಉದ್ಯಮಿಯೊಬ್ಬರ ಹುಟ್ಟುಹಬ್ಬದ ಸಮಾರಂಭದಲ್ಲಿ ನಾನು ಮುಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿ ಹುಟ್ಟುವುದಿಲ್ಲ, ಬೆಸ್ತನಾಗಿ ಹುಟ್ಟುತ್ತೇನೆ ಎಂದು ಗುಡುಗಿದ್ದರು.

ಇರಲಿ ಬಿಡಿ, ಬೆಸ್ತ ಜಾತಿ ಶ್ರೇಷ್ಠವೇ. ಆದರೆ ಅವರು  ಕಾರಣ ಮಾತ್ರ ಹೀನವಾದದ್ದು. ನನಗೆ ಬ್ರಾಹ್ಮಣ ಸಂಘ, ಮಠಗಳು ಇದುವರೆಗೆ ಸನ್ಮಾನ ಮಾಡಿಲ್ಲ. ಒಬ್ಬ ಬೆಸ್ತ ಸಮುದಾಯದವರು ಸನ್ಮಾನ ಮಾಡಿಸಿದರು ಆ ಕಾರಣಕ್ಕಾಗಿ ಬೆಸ್ತ ಸಮುದಾಯದಲ್ಲಿ ಹುಟ್ಟಬೇಕು  ಎಂದು ಹೇಳಿದ್ದರು.

ಇಂಥ ಆಚಾರ್ಯರು ಈಗ ಸಾಮಾಜಿಕ ಜಾಲತಾಣದಲ್ಲಿ  ಬ್ರಾಹ್ಮಣರ ಸಹವಾಸಕ್ಕೆ ಬಂದರೆ ಜೋಕೆ ಎಂಬರ್ಥದಲ್ಲಿ ಬರೆಯುತ್ತಿದ್ದಾರೆ. ಇವರು ಶೀರೂರು ಶ್ರೀಗಳ ವಿರುದ್ಧ ತೀರಾ ಕೆಟ್ಟದಾಗಿ (ಅದನ್ನು ಇಲ್ಲಿ ಬರೆಯಲು ಸಾಧ್ಯವಿಲ್ಲ) ಫೇಸ್ ಬುಕ್‌ನಲ್ಲಿ  ಆರೋಪ ಮಾಡುತ್ತಿದ್ದಾರೆ.  ಇದೇ ರೀತಿ  ತಾವು ಮಾಡಿದ ಅನೇಕ ಕಾರನಾಮೆಗಳನ್ನು ಆಗಾಗ ನೆನಪು ಮಾಡಿಕೊಂಡರೆ ಒಳಿತು.

ಶೀರೂರು ಶ್ರೀಗಳ ವಿಷಯದಲ್ಲಿ ಒಟ್ಟಾರೆ ವಿಷ ಎಲ್ಲೆಡೆಯಿಂದಲೂ ಕಕ್ಕುತ್ತಿದ್ದಾರೆ. ಪೇಜಾವರ ಶ್ರೀಗಳು ಇದೆಲ್ಲ ಕಂಟಕ ಸರಿಪಡಿಸಿ ವಿಷಕಂಠರಾಗಲಿ ಎನ್ನುವುದೇ ಆಶಯ. ವಿಷದ ಬಳಿಕ ಅಮೃತ ಬರಲೇ ಬೇಕು.

ಪೇಜಾವರ ಶ್ರೀಗಳಿಗೆ ಸನ್ಮಾನ, ಶೀರೂರು ಶ್ರೀಗಳ ವೃಂದಾವನ ಎಂಬ ಲೇಖನಕ್ಕೆ ಬ್ರಾಹ್ಮಣರೂ ಸೇರಿದಂತೆ ಅನೇಕ ಸಜ್ಜನರು ಈ ಲೇಖನ ಇಂದಿನ ಅಗತ್ಯ ಎಂದು ಮೆಚ್ಚಿದ್ದರು. ಹಲವು ಮಂದಿ ನನಗೆ  ಸಂಶಯ ಮೂಡಿತ್ತು ಚೆನ್ನಾಗಿ ವಿಶದೀಕರಿಸಿದ್ದೀರಿ ಎಂದು ಪ್ರೋತ್ಸಾಹಿಸಿದ್ದರು. ಇದಕ್ಕೆ ಪ್ರತಿಯಾಗಿ ಯಾಜ್ಞ್ಯ ವಲ್ಕ್ಯ ಜೋಶಿ ಅವರು ಪೇಜಾವರ ಶ್ರೀಗಳಿಂದ ಸಲಹೆ ಪಡೆದು ಅವರ ನಡೆಯನ್ನು ಸಮರ್ಥಿಸಿ ಬರೆದ ಲೇಖನವೂ ಪ್ರಕಟವಾಗಿದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ನನಗೆ ಬುದ್ಧಿಜೀವಿ, ಎಡಪಂಥೀಯ ಇತ್ಯಾದಿ ವಿಶೇಷಣಗಳನ್ನು ದಯಪಾಲಿಸಿದ್ದಾರೆ. ಕೆಲವವರು ವೈಯಕ್ತಿಕ ನಿಂದನೆ ಮಾಡಿದ್ದಾರೆ. ಅಂಥ ಒಂದು ನಿಂದಕ ಸಮುದಾಯ ಉದ್ದೇಶಿಸಿ ಒಂದೆರಡು ವಿಚಾರ ಹೇಳಲೇ ಬೇಕು. ಎರಡು ಸಾವಿರ ವರ್ಷಗಳ  ಬ್ರಾಹ್ಮಣರೂ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು ಎಂದು ಪೇಜಾವರ ಶ್ರೀಗಳು 18 ವರ್ಷಗಳ ಹಿಂದೆ ಕೃಷ್ಣ ಮಠದೊಳಗೆ ವಿದ್ಯಾರ್ಥಿಗಳ ಜತೆ ಸಂವಾದ ಸಂದರ್ಭ ಹೇಳಿದಾಗ ಅಚ್ಚರಿಗೊಂಡು ಪತ್ರಿಕೆಯಲ್ಲಿ ವರದಿ ಮಾಡಿದ್ದೆ. ಹೇಳಿದ್ದರಲ್ಲಿ ತಪ್ಪೂ ಇರಲಿಲ್ಲ. ಬರೆದಿದ್ದರಲ್ಲೂ ತಪ್ಪೂ ಇರಲಿಲ್ಲ ಆದರೂ ಆರೋಪಕ್ಕೆ ಗುರಿಯಾಗಬೇಕಾಯಿತು.

4 ವರ್ಷಗಳ ಹಿಂದೆ ಮಾಧ್ಯಮದ ಮುಂದೆ ವಿವಾದ ಒಂದಕ್ಕೆ ಪ್ರತಿಕ್ರಿಯಿಸುತ್ತಾ ಪೇಜಾವರ ಶ್ರೀಗಳು ರಾಘವೇಂದ್ರ ಸ್ವಾಮೀಜಿ ದೇವರಲ್ಲ ಎಂದು ಹೇಳಿದಾಗ ಅದನ್ನೂ ವರದಿ ಮಾಡಿದ್ದೆ. ಆದರೆ  ಕರ್ನಾಟಕದ ಬ್ರಾಹ್ಮಣರು ಸಹಿಸಿಕೊಳ್ಳದೆ ಪೇಜಾವರರ ವಿರುದ್ಧವೇ ಆಕ್ರೋಶ ಮಾತುಗಳಾಡಿದರು.

ಉಡುಪಿ ಚಲೋ ಎಂದು ಬುದ್ಧಿ ಜೀವಿಗಳು ಅಷ್ಟಮಠಗಳ ಮೇಲೆ ವೈಚಾರಿಕ ದಾಳಿ ನಡೆಸಿದಾಗ ಪೇಜಾವರ ಶ್ರೀ ಮಣಿಸಲೆಂದೇ ಪ್ರಗತಿ ಪರರು ಅಷ್ಟ ಮಠದತ್ತ ಹೊರಟಿರುವುದಾಗಿ ಬರೆದಿದ್ದೆ. ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ  ಮಾಡಿದಾಗ ಹಿಂದೂ ಸಂಘಟನೆ ಕಾರ್ಯಕರ್ತರು ಪೇಜಾವರರ ವಿರುದ್ಧ ಹೀನಾಮಾನವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸುತ್ತಿದ್ದರು. ಆಗ ಹಿಂದುತ್ವದ ಪರಿಕಲ್ಪನೆ ತಂದು ಕೊಟ್ಟು ವಿಶ್ವಹಿಂದೂ ಪರಿಷತ್ ಸ್ಥಾಪಕರಲ್ಲಿ ಒಬ್ಬರಾದ  ಶ್ರೀಗಳಿಗೇ ಧರ್ಮ ಬೋಧನೆಯೇ ಎಂದು ಪ್ರಶ್ನಿಸಿ ಬರೆದಿದ್ದೆ.

ಮಾನವೀಯ ಗುಣ ಉಳ್ಳ ಸ್ವಾಮೀಜಿ ಅನ್ಯಧರ್ಮೀಯರನ್ನು ಮಠಕ್ಕೆ ಕರೆದು ಊಟ ಹಾಕಿದ ಪ್ರಕರಣವದು. ಊಟ ಮಾಡಿದವರು ನಮಾಜ್ ಮಾಡಿ ಅದನ್ನು ದುರ್ಬಳಕೆ ಮಾಡಿಕೊಂಡಿರಬಹುದು. ಅದಕ್ಕಾಗಿ ಸ್ವಾಮಿಗಳನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದು ತಪ್ಪು ಎಂದು ಬರೆದಿದ್ದೆ.

ಪುತ್ತಿಗೆ ಪರ್ಯಾಯ ಸಂದರ್ಭ ಸ್ವಾಮೀಜಿಗಳ ಉಪವಾಸ, ಬಹಿರಂಗ ಕಲಹದ ಸಂದರ್ಭ ವೂ ಪವಿತ್ರ ಪುಣ್ಯಕ್ಷೇತ್ರದಲ್ಲಿ ವಿವಾದ ಸಲ್ಲದು, ಪರಿಹರಿಸಿ ಎಂದು ಬರೆದಿದ್ದೆ. ಕ್ಷೇತ್ರದ ಮೇಲೆ   ಶ್ರದ್ಧೆ, ಮಾಧ್ವರ ಮೇಲಿನ ಗೌರವ, ಕಾಳಜಿಯಿಂದಲೇ ಬರೆದದ್ದು. ಇದೀಗ ಉಡುಪಿ ಅಷ್ಟ ಮಠಗಳ ಯತಿ ಅಕಾಲಿಕವಾಗಿ ಅಸಹಜವಾಗಿ ಮೃತಪಟ್ಟಿದ್ದಾರೆ.  ಈ ಕುರಿತು ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದಲೇ ಬ್ರಾಹ್ಮಣರ ಕಾಳಜಿಯಿಂದಲೇ ಲೇಖನ ಬರೆದಿದ್ದೆ. ಮಾಧ್ಯಮಗಳದ್ದು ಅತಿರೇಕವಾಗಿದೆ ಎನ್ನುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.

Tags

Related Articles

Leave a Reply

Your email address will not be published. Required fields are marked *

Language
Close