About Us Advertise with us Be a Reporter E-Paper

ಗೆಜೆಟಿಯರ್

Aurora Lights ಇದು ಬಾನಿನ ಹೋಳಿ ಹಬ್ಬ!

ಡಾ.ಶ್ರೀಕಾಂತ ಭಟ್, ಹ್ಯಾಂಬರ್ಗ್ ಜರ್ಮನಿ

ಅರೇ, ವಾವ್ ! ಇದೇನಿದು, ಬೇರೆ ಬೇರೆ ಬಣ್ಣಗಳು ಆಕಾಶದಲ್ಲಿ..!  ಕಗ್ಗತ್ತಲ ಬಾನಲ್ಲಿ ರಂಗು ರಂಗಿನ  ಚೆಲ್ಲುತ್ತಿರುವವರು ಯಾರು..? ಹಸುರು ಮತ್ತು ಹಲವು ಬಣ್ಣಗಳಿಂದ ಸಂಭ್ರಮಿಸಿ ನರ್ತನ ಮಾಡುತ್ತಿರುವ ದೃಶ್ಯ ಎಂಬತ್ತರ ದಶಕದ ಚಲನಚಿತ್ರಗಳ, ವಿಶೇಷವಾಗಿ ಡಿಸ್ಕೋಶಾಂತಿ ಅಥವಾ ಸಿಲ್‌ಕ್ ಸ್ಮಿತಾ ಅವರ ಐಟಂ ಸಾಂಗ್‌ನ ಸ್ಟೇಜ್ ಹಿಂಭಾಗದ ಬೆಳಕು ಹೇಗೆ ಪದೇಪದೆ ಬದಲಾಗುತ್ತಿತ್ತೋ, ಹಾಗೆಯೇ ತೋರುತ್ತದೆ. ಡಾ.ರಾಜ್‌ಕುಮಾರ್ ಹಾಡಿ ನಟಿಸಿದ ‘ಹೊಸಬೆಳಕೂ..ಮೂಡುತ್ತಿದೆ..! ಅತ್ತ ಇತ್ತ, ಸುತ್ತ ಮುತ್ತ..ಕಾಂತಿಯ’..! ಎಂದು ಹಾಡಿ, ಕುಣಿದು ಕುಪ್ಪಳಿಸಬೇಕು ಅನ್ನಿಸುತ್ತದೆ. ಹೀಗೆ ಆಕಾಶ ಓಕುಳಿಯಾಡಿ, ಅಲೆ ಅಲೆಯಾಗಿ ನಲಿಯುವುದನ್ನು,  ‘ಅರೋರ  ’ ಎಂದು ಕರೆಯುತ್ತಾರೆ. ಮೂಲತಃ  ಅರೋರಾ ಲೈಟ್‌ಸ್ ನೇರಳೆ, ಹಳದಿ, ನೀಲಿ, ಗುಲಾಬಿ ಮತ್ತು ಕೆಂಪು ಬಣ್ಣಗಳಿಂದ ಕೂಡಿರಬಹುದಾದರೂ, ಸಾಮಾನ್ಯವಾಗಿ ಹಸುರು ಬಣ್ಣದಲ್ಲಿಯೇ ದರ್ಶನವಾಗುತ್ತದೆ. ಬಾನು, ಎಷ್ಟು ದಿನ ನೀಲಿ ಸೀರೆಯೊಂದನ್ನೇ ಉಡಲಿ ಎಂದು ಚಂದ್ರಮನದಲ್ಲಿ ಮುನಿಸಿಕೊಂಡಿರುವಾಗ, ಸೂರ್ಯ ತನಗೆ ಸಿಕ್ಕಿದ್ದೇ ಎಂದುಕೊಂಡು, ಹಸುರು ಬಣ್ಣದ ಸೀರೆ ಉಡುಗೊರೆ ಕೊಟ್ಟಿರಬಹುದೇ? ನೋಡೋಣ ಬನ್ನಿ…

 ಇದು ಉತ್ತರ ಮತ್ತು ದಕ್ಷಿಣ ಧ್ರುವಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ಚಳಿಗಾಲದ ಸಮಯದಲ್ಲಿ ಕಾಣಸಿಗುವ ಪ್ರಕೃತಿ  ಉತ್ತರ ಧ್ರುವದ ಹತ್ತಿರ ದೇಶಗಳಾದ  ಐಸ್‌ಲ್ಯಾಂಡ್, ಸ್ವೀಡೆನ್, ನಾರ್ವೆ, ಫಿನ್‌ಲ್ಯಾಂಡ್, ಕೆನಡಾದ ಉತ್ತರಭಾಗ, ಗ್ರೀನ್‌ಲ್ಯಾಂಡ್‌ಗಳಲ್ಲಿ ನವೆಂಬರ್‌ನಿಂದ ಮಾರ್ಚ್ ತಿಂಗಳುಗಳಲ್ಲಿ ಕಂಡುಬರುತ್ತದೆ. ಇದನ್ನು ನೋರ್ದಿಕ್ ಲೈಟ್‌ಸ್ ಅಥವಾ ಅರೋರ ಬೋರಿಯಾಲಿಸ್ ಎಂದು ಕರೆಯುತ್ತಾರೆ. ಈ ಹೆಸರಿಟ್ಟದ್ದು ಗೆಲಲಿಯೋ ಮಹಾಶಯನೇ. ದಕ್ಷಿಣ ಧ್ರುವ ಸಮೀಪವಿರುವ ನ್ಯೂಸಿಲ್ಯಾಂಡ್, ದಕ್ಷಿಣ ಚಿಲಿ, ದಕ್ಷಿಣ ಅರ್ಜೆಂಟೀನ ಕೆಲವು ಭಾಗಗಳಲ್ಲಿ ಮಾರ್ಚ್‌ನಿಂದ ಅಕ್ಟೋಬರ್ ತಿಂಗಳುಗಳಲ್ಲಿ ಕಂಡುಬರುತ್ತದೆ. ಇದನ್ನು ಸದರ್ನ್ ಲೈಟ್‌ಸ್ ಅಥವಾ ಅರೋರ ಅಸ್ಟ್ರಾಲಿಸ್ ಎಂದು ಕರೆಯುತತಾರೆ.  ಗಮನಿಸಿ, ಚಳಿಗಾಲಕ್ಕೂ ಈ ಬೆಳಕಿಗೂ ಸಂಬಂಧ ಇಲ್ಲ. ಈ ವಿದ್ಯಮಾನ ಎಲ್ಲ ಕಾಲದಲ್ಲಿ ಮತ್ತೆ ದಿನದ ಇಪ್ಪತ್ನಾಲ್ಕು ಗಂಟೆಯೂ ಸಂಭವಿಸುತ್ತಾ ಇರುತ್ತದೆ. ಉತ್ತರ ಅಥವಾ ದಕ್ಷಿಣ ಧ್ರುವ ಸಮೀಪ ಬೇಸಿಗೆಕಾಲದಲ್ಲಿ ಸೂರ್ಯನ ಬೆಳಕು ಮಧ್ಯರಾತ್ರಿವರೆಗೂ ಪ್ರಖರವಾಗಿರುವುದರಿಂದ, ಇದು ನಮಗೆ ಕಾಣಿಸುವುದಿಲ್ಲ.

ಈ ಬೆಳಕಿನ ಬಗ್ಗೆ ತರಹೇವಾರಿ ಮೂಢನಂಬಿಕೆಗಳು ಇದ್ದವು. ಐಸ್‌ಲ್ಯಾಂಡಿನಲ್ಲಿ ಈ ಬೆಳಕಿನ ಸಂದರ್ಭದಲ್ಲಿ ಮಗುವನ್ನು ಹೆರುವ ತಾಯಿಗೆ ಕಡಿಮೆ ಹೆರಿಗೆ ನೋವು ಕಾಣಿಸಿಕೊಳ್ಳುವುದು ಎಂದು ನಂಬಿದ್ದರು. ಆದರೆ  ಹೆಂಗಸರು ನೋಡಿದರೆ ಹುಟ್ಟುವ ಮಗುವಿನ ಕಣ್ಣು ಮೆಳ್ಳಗಣ್ಣಾಗುತ್ತದೆ ಎಂದೂ ಭಾವಿಸಿದ್ದರು. ಅಪ್ಪಿ ತಪ್ಪಿ ಅತಿವಿರಳವಾಗಿ ಕಾಣಿಸಿಕೊಳ್ಳುವ ಕೆಂಪು ಬಣ್ಣದಲ್ಲೇನಾದರೂ ಅರೋರಾ ಕಾಣಿಸಿಕೊಂಡರೆ ಏನೋ ಅನಿಷ್ಟ ಕಾದಿದೆಯೆಂದು ಹೆದರುತ್ತಿದ್ದರು. ಸ್ವೀಡನ್ ದೇಶದ ಸಮುದ್ರತೀರ ವಾಸಿಗಳು, ಇದನ್ನು ಶುಭಶಕುನದಂತೆ ಭಾವಿಸುತ್ತಿದ್ದರು. ಈ ಬೆಳಕು ಸಮುದ್ರದಲ್ಲಿರುವ ಸಣ್ಣ ಮೀನುಗಳು ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ ಉಂಟಾಗಿದೆ, ಮೀನು ಹಿಡಿಯಲು ಸರಿಯಾದ ಕಾಲ ಎಂದುಕೊಳ್ಳುತ್ತಿದ್ದರು. ಆದರೆ ಅದೇ ದೇಶದ ಒಳನಾಡ ಜನರು ಇದನನು ಅಪಶಕುನ ಎಂದು  ಈ ಬೆಳಕಿನ ಸಂದರ್ಭದಲ್ಲಿ, ಚಪ್ಪಾಳೆ ತಟ್ಟುವುದರಿಂದ ಮತ್ತು ಸೀಟಿ ಊದುವುದರಿಂದ, ಇದರ ನರ್ತನದ ವೇಗ ಹೆಚ್ಚುತ್ತದೆ ಎಂದು ಭಯಭೀತರಾಗುತ್ತಿದ್ದರು. ಉತ್ತರ ಅಮೆರಿಕಾದ ಹಲವು ಕಡೆ, ಅರೋರಾ ಲೈಟ್‌ಸ್ ತಮ್ಮ ಪೂರ್ವಿಕರ ಸಂಜ್ಞೆ ಎಂದುಕೊಂಡಿದ್ದರೆ, ಉತ್ತರ ಚೀನದಲ್ಲಿ ಈ ಬೆಳಕು ಗೋಚರಿಸಿದಾಗ ಮಧುಚಂದ್ರ ಸೂಕ್ತವೆಂದು, ಅದರಿಂದ ಆರೋಗ್ಯ ಮತ್ತು ಬುದ್ಧಿವಂತ ಮಗು ಹುಟ್ಟುತ್ತದೆ ಎಂದು ನಂಬಿದ್ದರು.

ವಾಸ್ತವವಾಗಿ ಸೂರ್ಯನೇ ಅರೋರಾ ಬೆಳಕಿನ ಮೂಲ. ಇದಕ್ಕೆ ಸೌರ ಮಾರುತಗಳು ಕಾರಣ ಎಂದು  ಪತ್ತೆ ಹಚ್ಚಿದ್ದಾರೆ. ಸೂರ್ಯ ತನ್ನ ಹುಟ್ಟಿನಿಂದಲೇ ಮಾರುತಗಳನ್ನು ಹೊರಹೊಮ್ಮಿಸುತ್ತಿದ್ದಾನೆ ಎಂದು ವಿಜ್ಞಾನಿಗಳು ದೃಢೀಕರಿಸಿ ಹಲವಾರು ವೈಜ್ಞಾನಿಕ ವಿವರಣೆಯನ್ನೂ ನೀಡಿದ್ದಾರೆ.

ಅಂದರೆ ಭೂಮಿಯ ಹುಟ್ಟಿನಿಂದಲೂ ಈ ವಿದ್ಯಮಾನ ಇದೆ ಎನ್ನಬ ಹುದು. 1908ರಲ್ಲಿ ನಾರ್ವೆಯ ಖ್ಯಾತ ವಿಜ್ಞಾನಿ ಕ್ರಿಸ್ಟಿಯಾನ್ ಬರ್ಕೆಲ್ಯಾಂಡ್, ತನ್ನ ಸಿದ್ಧಾಂತವನ್ನು ವೀಕ್ಷಣೆ ಮತ್ತು ಪ್ರಯೋಗದ ಮೂಲಕ ದೃಢೀಕರಿಸಿದ್ದಾರೆ.

ಸೂರ್ಯ ಅಗಾಧ ಬೆಳಕು ಮತ್ತು ಶಕ್ತಿಯ ಮೂಲ ತಾನೆ. ಇದೇ ಕಾರಣಗಳಿಂದ ಸೂರ್ಯನ ಮೇಲ್ಮೈ ಗಾಳಿಯು ಪ್ಲಾಸ್ಮಾ ರೂಪವನ್ನು  ಸತತವಾಗಿ

ಸೌರ ಮಾರುತವಾಗಿ ಹೊರಹೊಮ್ಮುತ್ತದೆ. ಇದು ಅರೋರಾ ಬೆಳಕಿನ ಆಕರ!

ಮೂಲತಃ ಪ್ಲಾಸ್ಮಾ, ಉದ್ರೇಕಿತ ಎಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳನ್ನೂ ಒಳಗೊಂಡಿದ್ದು ಇದನ್ನು ಘನ, ದ್ರವ,ಅನಿಲದ ಹೊರತಾಗಿ ವಸ್ತುವಿನ ನಾಲ್ಕನೇ ಪ್ರಕಾರ ಎಂದು ಕರೆಯಲಾಗುತ್ತದೆ. ಇದು ಸೂರ್ಯನಿಂದ 15 ಕೋಟಿ ಕಿಲೋಮೀಟರ್ ದೂರವಿರುವ ಭೂಮಿಯನ್ನು ಕೇವಲ 18 ಗಂಟೆಯಲ್ಲಿ ತಲುಪುತ್ತದೆ. ಅಂದರೆ ಸರಿ ಸುಮಾರು ಗಂಟೆಗೆ ಎಂಬತ್ತು ಲಕ್ಷ ಕಿಲೋಮೀಟರು ವೇಗದಲ್ಲಿ ಸೌರಮಾರುತಗಳು ಬೀಸುತ್ತಿರುತ್ತದೆ. ನಮ್ಮ ವಾಯುಮಂಡಲ ಪ್ರವೇಶಿಸಿದಾಗ, ಇಲ್ಲಿರುವ  ಸಾರಜನಕಗಳಿಗೆ ಒಳ್ಳೆ  ಉದ್ದೀಪನ ಮದ್ದು ನೀಡಿದಂತೆ ಅಥವಾ ಸ್ವಲ್ಪ ಹೊತ್ತು ಹೆಂಡ ಕುಡಿದ ಅನುಭವವಾಗುತ್ತದೆ. ತನ್ನ ನಶೆಯ ಅಲೆಯಲ್ಲಿ ಸ್ವಲ್ಪ ತೇಲಾಡಿದಾಗ ಬಾನಿನ ಬಣ್ಣದ ಬದಲಾಗುವುದರ ಜತೆಗೆ, ನರ್ತಿಸಿದ ಹಾಗೆಯೂ ತೋರುತ್ತವೆ. ನಶೆ ತಾನೇ, ಎಷ್ಟು ಹೊತ್ತು ಇರಬಲ್ಲದು!

ಅರೋರಾ ಲೈಟ್‌ಸ್ ಉತ್ತರ ಅಥವಾ ದಕ್ಷಿಣ ಧ್ರುವಕ್ಕೆ ಸಮೀಪದ ಪ್ರದೇಶಗಳಲ್ಲಿ ಮಾತ್ರ ಗೋಚರಿಸಲು ಕಾರಣ ಭೂಮಿಯ ಅಯಸ್ಕಾಂತ ವಲಯ. ಪ್ರೌಢಶಾಲೆಯ ವಿಜ್ಞಾನ ತರಗತಿಯಲ್ಲಿ ಪ್ರಯೋಗದ ಮೂಲಕ, ಸೂಜಿಗಲ್ಲಿನ ಅಥವಾ  ಪ್ರಭಾವೀ ಕ್ಷೇತ್ರವನ್ನು ದಿಕ್ಸೂಚಿಯ ಮೂಲಕ ಚಿತ್ರಿಸುತ್ತಿದ್ದುದು ನಿಮಗೆ ನೆನಪಿರಬಹುದು. ಮಧ್ಯದಲ್ಲಿರುವ ದಂಡಕಾಂತದ ಎರಡೂ ಕಡೆ ಒಂದೊಂದು ಕೋಡುಬಳೆ ಸಿಕ್ಕಿಸಿದ ಚಿತ್ರದ ಹಾಗೆ ತೋರುತ್ತಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ತನ್ನ ವ್ಯಾಪ್ತಿ ಎಷ್ಟೇ ದೊಡ್ಡದಾದರೂ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೂಲಕ ಮಾತ್ರ ಆದಿ ಅಥವಾ ಅಂತ್ಯ ಕಾಣುತ್ತಿದ್ದುದು. ನಮಗೆಲ್ಲ ಗೊತ್ತಿರುವಂತೆ ಪೃಥ್ವಿಯೇ ಒಂದು ದೊಡ್ಡ ಸೂಜಿಗಲ್ಲು. ಅದರ ಪ್ರಭಾವೀ ಅಯಸ್ಕಾಂತ ವಲಯ ಉತ್ತರ ದಕ್ಷಿಣವಾಗಿ ಹಾದು ಹೋಗುತ್ತದೆ. ಸೌರ  ಭೂಮಿಗೆ ಅಪ್ಪಳಿಸಿದಾಗ, ವಾರಿಜೆಯು ತನ್ನ ಕಾಂತೀಯ ಪ್ರಭಾವದ ಮೂಲಕ ಪ್ಲಾಸ್ಮಾ ಪಥವನ್ನು ಉತ್ತರ ದಕ್ಷಿಣವಾಗಿ ಬದಲಿಸುವುದು.

ಹೀಗೆ ಉತ್ತರ ದಕ್ಷಿಣವಾಗಿ ಬದಲಾದ ಪ್ಲಾಸ್ಮಾ, ನಮ್ಮ ವಾತಾವರಣದಲ್ಲಿರುವ ಆಮ್ಲಜನಕ ಮತ್ತು ಸಾರಜನಕ ಪ್ರತಿಕ್ರಿಯಿಸಿ ವಿವಿಧ ಬಣ್ಣಗಳನ್ನು ಹುಟ್ಟು ಹಾಕುತ್ತದೆ. ಆಗಲೇ ಮೂಡುವುದು ಮೂಡಣದ ಬೆಳಕು! ಬಣ್ಣ-ಬೆಳಕು ಮೂಡುವ ಸಮಯದಲ್ಲಿ  ವಾತಾವರಣದಲ್ಲಿರುವ ಆಮ್ಲಜನಕ ಮತ್ತು ಸಾರಜನಕ ಪ್ರಮಾಣ ಮತ್ತು ಅನುಪಾತಗಳ ಮೇಲೆ ಅದರ ರಂಗು ಅವಲಂಬಿತವಾಗುತ್ತದೆ. ಮಾಮೂಲಿಯಾಗಿ  ಈ ಪ್ರಕ್ರಿಯೆ ಭೂಮಿಯಿಂದ  ಕಿಲೋಮೀಟರ್ ದೂರ ಸಂಭವಿಸುತ್ತದೆ. ಈ ಪ್ರದೇಶದಲ್ಲಿ ಆಮ್ಲಜನಕದ ಪ್ರಮಾಣ ಜಾಸ್ತಿ ಇರುವುದರಿಂದ ಹಸುರು ಬಣ್ಣದಲ್ಲಿ ಅರೋರಾ ಸಾಮಾನ್ಯ. ಆಕಾಶದಲ್ಲಿ ಆಮ್ಲಜನಕ ಮತ್ತು ಸಾರಜನಕದ ಪ್ರಮಾಣ, ಎತ್ತರಕ್ಕೆ ಅನುಗುಣವಾಗಿ ಬದಲಾಗುವುದರಿಂದ ಈ ಪ್ರತಿಕ್ರಿಯೆ ಎಷ್ಟು ಎತ್ತರದಲ್ಲಿ ನಡೆಯುತ್ತದೆ ಎನ್ನುವುದನ್ನು ಅವಲಂಬಿಸಿ ಅದರ ಬಣ್ಣವೂ ಬದಲಾಗುತ್ತದೆ.

ನೋಡಿ ಎಷ್ಟು ಸುಮಧುರವಾಗಿದೆಯಲ್ಲವೇ ಭಾನು ತನ್ನ ನಲ್ಲೆಗೆ ಕೊಟ್ಟ ಉಡುಗೊರೆ ! ಸೂರ್ಯನಲ್ಲದೆ ಮತ್ಯಾರು ಕೊಡಬಲ್ಲರು? ಚಂದ್ರನು ಭುವಿಯ ಅಂದಕ್ಕೆ ಅಸೂಯೆ ಪಡುವ ಪರಿಸ್ಥಿತಿ  ಎಂದರೆ ನೀವೇ ಯೋಚಿಸಿ!

Tags

Related Articles

Leave a Reply

Your email address will not be published. Required fields are marked *

Language
Close