ಜಾತಿ ವ್ಯವಸ್ಥೆ-ಅವಕಾಶ ಕೈ ಚೆಲ್ಲಿತೆ ಸುಪ್ರೀಂಕೋರ್ಟ್?

Posted In : ಸಂಗಮ, ಸಂಪುಟ

ಅವಲೋಕನ -ಉಮಾ ಮಹೇಶ ವೈದ್ಯ

ಸುರೇಶ ಸವರ್ಣೀಯ ಜಾತಿಗೆ ಸೇರಿದ ಹುಡುಗ, ಸುನೀತಾ ದಲಿತ ಜಾತಿಗೆ ಸೇರಿದ ಹುಡುಗಿ. ಇಬ್ಬರೂ ಸಹಪಾಠಿಗಳು. ಇಬ್ಬರಲ್ಲೂ ಪ್ರೇಮಾಂಕುರವಾಗಿ, ಬಿಟ್ಟಿರಲಾರದಷ್ಟು ಗಟ್ಟಿಯಾದಾಗ, ತಮ್ಮ ಮದುವೆಯನ್ನು ಒಪ್ಪದ ಹಿರಿಯರನ್ನು ಧಿಕ್ಕರಿಸಿ ಓಡಿ ಹೋಗಿ ಗೆಳೆಯರ ನೆರವಿನಿಂದ ಧರ್ಮಸ್ಥಳದಲ್ಲಿ ಮದುವೆಯಾಗುತ್ತಾರೆ. ಕೆಲ ದಿನ ಪ್ರಣಯ ಪಕ್ಷಿಯಂತೆ ಹಾರಾಡಿ, ವಾಸ್ತವಕ್ಕೆ ಮರಳಿದ ನಂತರ ಕಂಡು ಬಂದ ಸತ್ಯ , ಸಂಸಾರ ಬಂಡಿ ಎಳೆಯಲು ಹಣ ಬೇಕೇ ಹೊರತು ಕೇವಲ ಪ್ರೀತಿ, ಪ್ರಣಯವಲ್ಲ ಎಂದು. ದಿನ ಸಾಗಿದಂತೆ ಮಕ್ಕಳಾಗಿ ನಂತರ ಅವರಿಬ್ಬರ ನಡುವೆ ಸರಸ ಕಡಿಮೆಯಾಗಿ ವಿರಸ ಹೆಚ್ಚಿದಂತೆ ದಾಂಪತ್ಯದಲ್ಲಿ ಬಿರುಕು ಮೂಡಿ, ಸುನೀತಾ ಪೊಲೀಸ್ ಠಾಣೆಯನ್ನೇರಿ ಸುರೇಶ ತನಗೆ ಜಾತಿ ಹೆಸರಿನಲ್ಲಿ ಅವಮಾನಿಸಿದ ಅಥವಾ ಕೀಳಾಗಿ ನೋಡಿಕೊಂಡ ಎಂದು ಆಪಾದಿಸುತ್ತಾಳೆ.

ಠಾಣಾಧಿಕಾರಿ ಹೇಳುವುದು, ಸುರೇಶನ ಮೇಲೆ ಮೊದಲು ದಲಿತ ದೌರ್ಜನ್ಯ ಪ್ರಕರಣ ದಾಖಲಾಗುತ್ತದೆಯೇ ಹೊರತು ಕೇವಲ ಕುಟುಂಬ ಕಲಹ ಪ್ರಕರಣವಲ್ಲ ಎಂದು. ಸುನೀತಾ ತನ್ನನ್ನು ಮದುವೆಯಾಗಿ ತನ್ನ ಮಕ್ಕಳಿಗೆ ತಾಯಿಯಾಗಿದ್ದರಿಂದ ಮೊದಲಿನ ದಲಿತ ಜಾತಿ ಕಳೆದು, ಆಕೆಯೂ ಸವರ್ಣೀಯ ಜಾತಿಗೆ ಸೇರಿದವಳು ಎಂದು ಸುರೇಶ ವಾದಿಸಿದರೆ, ಅದಕ್ಕುತ್ತರವಾಗಿ ನ್ಯಾಯಾಲಯಗಳು ಹೇಳುವುದು ಹುಟ್ಟಿನಿಂದ ಬಂದ ಜಾತಿ ಮದುವೆ ನಂತರ ಬದಲಾಗದು. ಪ್ರೇಮಿಸುವಾಗ ಅಡ್ಡಬರದ ಈ ಜಾತಿ , ಓಡಿ ಹೋಗಿ ಮದುವೆಯಾಗಿ, ಕೆಲ ದಿನಗಳ ನಂತರ ಪರಸ್ಪರರಲ್ಲಿ ಆಕರ್ಷಣೆ ಕಳೆಗುಂದಿದಾಗ, ಉಂಟಾಗುವ ದಾಂಪತ್ಯ ಕಲಹಗಳು ಈಗ ದಲಿತ ದೌರ್ಜನ್ಯ ಪ್ರಕರಣಗಳಾಗಿ ನ್ಯಾಯಾಲಯಗಳ ಮುಂದಿವೆ.

ಇತ್ತೀಚೆಗೆ ಉತ್ತರಪ್ರದೇಶದ ಸವರ್ಣೀಯ ಸಮುದಾಯದ ಸುನೀತಾ ಸಿಂಗ್ ದಲಿತನನ್ನು ಮದುವೆಯಾಗಿ ತಾನೂ ದಲಿತ ಜಾತಿಗೆ ಸೇರಿದವಳೆಂದು ಹೇಳಿ, ಜಾತಿ ಪ್ರಮಾಣ ಪತ್ರ ಪಡೆದು, ನಂತರ ಆ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸರಕಾರಿ ಕೆಲಸ ಪಡೆದುಕೊಂಡಿದ್ದಳು. ಈ ಜಾತಿ ಪ್ರಮಾಣ ಪತ್ರದ ಸಿಂಧುತ್ವದ ಪ್ರಶ್ನೆ ಬಂದಾಗ ಅಲಹಾಬಾದ ಹೈಕೋರ್ಟ್ ಅದನ್ನು ರದ್ದುಪಡಿಸಿ ಆಕೆಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಮಾಡಿತ್ತು. ಈ ಆದೇಶದ ಕಾನೂನಾತ್ಮಕತೆಯನ್ನು ಪ್ರಶ್ನಿಸಿ ಕೊನೆಗೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಾಗ , ತೀರ್ಪು ನೀಡುತ್ತ ಹೇಳಿದ್ದು ‘ಮನುಷ್ಯನ ಜಾತಿ ಆತನ ಹುಟ್ಟಿನಿಂದ ನಿರ್ಧರಿತವಾಗುತ್ತದೆ. ಆದ್ದರಿಂದ ಮದುವೆಯಾದ ಪರಿಣಾಮವಾಗಿ ಆತನ ಜಾತಿ ಬದಲಾಗುವುದಿಲ್ಲ.’ ಕಾರಣ ಮಹಿಳೆಗೆ ದಲಿತ ಜಾತಿ ಪ್ರಮಾಣ ಪತ್ರ ನೀಡುವುದು ಕಾನೂನು ಸಮ್ಮತವಲ್ಲವೆಂದು ಆದೇಶ ನೀಡಿದೆ.

ಈ ಎಲ್ಲ ತೀರ್ಪುಗಳನ್ನು ಹಾಗೂ ಆದೇಶಗಳನ್ನು ಕೂಲಂಕಷವಾಗಿ ಪರಿಶೀಲಿಸದಾಗ ನಿಜಕ್ಕೂ ನಿರಾಶೆ ತರುವ ಅಂಶವೇನೆಂದರೆ, ‘ಜಾತಿ’ ಎಂದರೆ ಏನು? ಅದರ ವ್ಯಾಖ್ಯಾನವೇನು? ಜಾತಿಯನ್ನು ಯಾವ ಆಧಾರದ ಮೇಲೆಯಾವಾಗಿನಿಂದ ನಿರ್ಧರಿಸಲು ಪ್ರಾರಂಭಿಸಲಾಯಿತು? ಸ್ವಾತಂತ್ರ್ಯಾನಂತರ ಈಗ ಜಾತ್ಯತೀತ ಆಧಾರದ ನಿಂತ ನಮ್ಮ ಸಂವಿಧಾನದ ಅಡಿಯಲ್ಲಿ ಹುಟ್ಟಿನಿಂದ ಜಾತಿ ನಿರ್ಣಯಸುವುದು ಸಿಂಧುವೇ? ಎನ್ನುವ ಪ್ರಶ್ನೆಗಳಿಗೆ ಎಲ್ಲಿಯೂ ಉತ್ತರ ನೀಡಿಲ್ಲ. ಉದಾಹರಣೆಗೆ, ಸುನೀತಾ ವಿರುದ್ಧ ಉತ್ತರ ಪ್ರದೇಶ ಸರಕಾರ ಪ್ರಕರಣದಲ್ಲಿ ನ್ಯಾಯಮೂರ್ತಿಗಳು ಐದು ಪುಟದ ತೀರ್ಪಿನಲ್ಲಿ ಕೇವಲ ಒಂದೇ ಸಾಲಿನಲ್ಲಿ ಹೇಳಿದ ಅಭಿಪ್ರಾಯ ‘ಮನುಷ್ಯನ ಜಾತಿ ಆತನ ಹುಟ್ಟಿನಿಂದ ನಿರ್ಧರಿತವಾಗುತ್ತದೆ ಎಂಬುದು ಸರ್ವವಿಧಿತವೆಂಬುದು’. ಆದರೆ ಈ ಅಭಿಪ್ರಾಯ ಸಮರ್ಥಿಸುವ ಯಾವುದೇ ಕಾನೂನು ಅಂಶಗಳ ಆಧಾರಗಳನ್ನು ನೀಡದಿರುವುದು ವಿಷಾದನೀಯ.

ಇಂಥ ತೀರ್ಪುಗಳು, ಸಮಾಜ ಮುನ್ನುಡಿ ಬರೆದ ಅಂತರ್ಜಾತಿ ವಿವಾಹಗಳಿಗೆ ಮಾರಕ. ಹಿಂದೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ಅತಿಯಾಗಿ, ಸಮುದಾಯಗಳ ನಡುವೆ ಸಂಘರ್ಷವೇರ್ಪಟ್ಟಾಗ, ಅಂದಿನ ಸಮಾಜ ಸುಧಾರಕರು ಜಾತಿ ಹಾಗೂ ವರ್ಗ ಸಂಘರ್ಷ ಕೊನೆಗಾಣಿಸಿ, ಸಮಾನತೆಯ ತತ್ವದಡಿ ಎಲ್ಲರೂ ಬರಬೇಕೆಂಬ ಹಿರಿದಾಸೆಯಿಂದ ಈ ಅಂತರ್ಜಾತಿ ವಿವಾಹಗಳಿಗೆ ನಾಂದಿ ಹಾಡಿದರು. ಸಮಯಾನುಸಾರ ಸಾಮಾಜಿಕ ಸ್ಥಿತ್ಯಂತರುಗಳು, ಮನೋಭಾವ, ಉದಾರೀಕರಣಗಳು ನವ ಶಿಕ್ಷಣ ಹಾಗೂ ಉದ್ಯೋಗ ಕೇತ್ರಗಳಲ್ಲಿ ತಮ್ಮದೇ ಆದ ಪರಿಣಾಮ ಬೀರಿ, ಈ ಅಂತರ್ಜಾತಿ ಹಾಗೂ ಅಂತರ್ ಮದುವೆಗಳಿಗೆ ಹೆಚ್ಚಿನ ವೇದಿಕೆ ಒದಗಿಸಿತು. ಹೊಸ ಸಮಾಜ ಕಟ್ಟುವ ಹುರುಪಿನಲ್ಲಿ ಬದುಕು ಕಟ್ಟಿಕೊಂಡ ಜೋಡಿಗಳು ಹಾಡುತ್ತ ಹೇಳಿದ್ದು, ನಮ್ಮದು ಮಾನವ ಜಾತಿ, ನಾವೆಲ್ಲ ವಿಶ್ವ ಮಾನವರು ಎಂದು. ಆದರೆ ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿಶ್ವ ಮಾನವ ಸಮಾಜ ನಿರ್ಮಿಸಲು ಹೊರಟ ಯುವಕ ಯುವತಿಯರಿಗೆ ಕಂಟಕ ಪ್ರಾಯವಾಗಲಿದೆ.

ಜಾತಿಗಳನ್ನು ಮರೆತು ಜೀವಿಸುವ ಹಂಬಲದಲ್ಲಿದ್ದ ಜನರಿಗೆ , ಸದಾ ಕಾಲ ತನ್ನ ಜಾತಿ ಹಾಗೂ ತನ್ನ ಬಾಳ ಸಂಗಾತಿಯ ನೆನಪಿಸಿಕೊಳ್ಳುವ ಹಾಗೂ ಕಾನೂನಿನ ಅಂಕೆ ಮೀರಿ ವರ್ತಿಸದಂತೆ ಒಂದು ಕಟ್ಟುಪಾಡಿನಲ್ಲಿ ಜೀವನ ಸಾಗಿಸುವ ಅನಿವಾರ್ಯತೆಯನ್ನು ತಂದೊಡ್ಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮದುವೆಯ ನಂತರ, ತವರು ಮನೆಯಿಂದ ಹೆಣ್ಣು ತನ್ನ ಎಲ್ಲ ಪರಿವಾರವನ್ನು, ರೀತಿ ರಿವಾಜುಗಳನ್ನು ಮೇಲಾಗಿ ತನ್ನ ಹಿಂದಿನ ಹೆಸರನ್ನೂ ಬಿಟ್ಟು ಗಂಡನ ಮನೆಗೆ ಬಂದು, ಅಲ್ಲಿನ ರೀತಿ ರಿವಾಜುಗಳನ್ನು ತನ್ನ ಹೊಸ ಹೆಸರಿನ ಮೂಲಕ ಸ್ವೀಕರಿಸಿ, ಅದರಂತೆ ನಡೆದುಕೊಳ್ಳುತ್ತಾ ಆ ಕುಟುಂಬದ ಒಂದು ಅವಿಭಾಜ್ಯ ಅಂಗವೇ ಆಗಿ ಹೋದ ಅವಳ ಜಾತಿ ಬದಲಾಗದು ಎಂದರೆ ಹೇಗೆ? ಮದುವೆಯಾದರೂ ದಲಿತ ಹೆಣ್ಣುಮಗಳ ಜಾತಿ ಸವರ್ಣೀಯವಾಗಲಾರದು ಎಂದು ಗೊತ್ತಾದರೆ, ಸವರ್ಣೀಯ ಜಾತಿಯ ಹುಡುಗರು ಹೇಗೆ ಮನಸ್ಸನ್ನು ಬಿಚ್ಚಿ, ಯಾವುದೇ ಆತಂಕವಿಲ್ಲದೇ ಮದುವೆಯಾಗಬಲ್ಲರು?

ಅದೇ ರೀತಿ, ಸವರ್ಣೀಯ ಜಾತಿಯ ಹೆಣ್ಣುಮಗಳು ದಲಿತ ಹುಡುಗನನ್ನು ಹೇಗೆ ಮದುವೆಯಾಗಬಲ್ಲಳು? ಜಾತಿ ವ್ಯವಸ್ಥೆಯನ್ನೇ ರದ್ದು ಪಡಿಸಲು ಇದ್ದ ಅವಕಾಶವನ್ನು ಸುಪ್ರಿಂಕೋರ್ಟ್ ಕಳೆದುಕೊಂಡಿತೇ? ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವ ನ್ಯಾಯಾಂಗ, ಈ ತೀರ್ಪು ನೀಡುವಾಗ, ಭಾರತ ಒಂದು ಜಾತ್ಯತೀತ ಎಂದು ಸಂವಿಧಾನದಲ್ಲಿ ಇರುವುದನ್ನು ಪರಿಗಣಿಸದೇ, ತೀರ್ಪು ನೀಡಿದ್ದು ನಿಜಕ್ಕೂ ವಿಷಾದನೀಯ. ನಮ್ಮ ಸಂವಿಧಾನದಲ್ಲಿ ಜಾತಿ ಪದದ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ. ಮೇಲಾಗಿ ನಾವು ಸಂವಿಧಾನದಡಿ ರಚಿಸಿಕೊಂಡ ಕಾನೂನಿನೊಳಗೂ ಈ ಬಗ್ಗೆ ಅರ್ಥ ನೀಡಿಲ್ಲ. ಸಂವಿಧಾನವೇ ಪರಮೋಚ್ಛ ಗ್ರಂಥವಾಗಿರುವ ಪ್ರಜಾ ಪ್ರಭುತ್ವ ದೇಶದಲ್ಲಿ , ಹಿಂದೆ ಎಂದೋ , ಯಾವುದೋ , ಕುಲ ಕಸಬುಗಳ ಆಧಾರದ ಮೇಲೆ ಹೆಸರಿಸಲಾದ ಜಾತಿಗಳನ್ನು ಇಂದಿಗೂ ಅದನ್ನು ಜಾರಿಯಲ್ಲಿಟ್ಟು ಸಮಾಜವನ್ನು ಮತ್ತದೇ ಜಾತಿ ವ್ಯವಸ್ಥೆಯ ಬೇಯುವಂತೆ ಮಾಡುವ ಈ ತೀರ್ಪುಗಳು ನ್ಯಾಯಾಂಗದ ದೂರದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸುತ್ತವೆ ಎಂದರೆ ತಪ್ಪಾಗಲಾರದು.

ಜಾತ್ಯತೀತ ರಾಷ್ಟ್ರದಲ್ಲಿ ಯಾವುದೇ ಜಾತಿಗಳಿಲ್ಲವೆಂದು ಅಭಿಪ್ರಾಯ ಪಟ್ಟು ತೀರ್ಪು ನೀಡಿದ್ದರೆ ಈ ಜಾತಿ ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆದ ಕೀರ್ತಿ ನ್ಯಾಯಾಂಗಕ್ಕೆ ಖಂಡಿತ ಒದಗುತ್ತಿತ್ತು. ಆದರೆ ನ್ಯಾಯಾಂಗ ಕೈಗೆ ಬಂದ ತುತ್ತನ್ನು ಬಾಯಿಗೆ ತೆಗೆದುಕೊಳ್ಳಲಿಲ್ಲ. ಅನಾದಿ ಕಾಲದಲ್ಲಿ ವ್ಯಕ್ತಿಯ ಕುಲ ಕಸುಬುಗಳನ್ನೇ ಆಧರಿಸಿ ಅವುಗಳನ್ನು ಒಂದು ಜಾತಿ ಎಂದು ಪರಿಗಣಿಸಿ ಆಯಾ ಕುಲ ವೃತ್ತಿ ವ್ಯಕ್ತಿಗಳು ಆ ಜಾತಿಗೆ ಸೇರಿದವರು ಎಂದು ಕಂಡುಕೊಳ್ಳಲಾಗುತ್ತಿತ್ತು. ಆದರೆ ಕಾಲ ಕಳೆದಂತೆ ಕುಲ ಕಸುಬುಗಳು ಮಾಯವಾಗಿ, ವೇದ ಶಿಕ್ಷಣ ಪಡೆದ ದಲಿತನೂ ಕೂಡಾ ಮಂತ್ರ ಹೇಳುವ ಅರ್ಚಕನಾದಾಗ ಆತನ ಜಾತಿಯನ್ನು ಇನ್ನೂ ಆತನ ಹುಟ್ಟಿನಿಂದ ಏಕೆ ಗುರುತಿಸಬೇಕು?

ಉನ್ನತ ಶಿಕ್ಷಣ ಹಾಗೂ ಜ್ಞಾನ ಧನಿಗಳನ್ನು ಇನ್ನೂ ಆತನ ಹುಟ್ಟಿನ ಜಾತಿಯಿಂದ ಈ ಜಾತ್ಯತೀತ ದೇಶದಲ್ಲಿ ಗುರುತಿಸುವ ಅನಿವಾರ್ಯತೆ ಇದೆಯೇ? ಹುಟ್ಟಿನಿಂದ ಎಲ್ಲರೂ ಶೂದ್ರರೇ. ಆದರೆ ಬೆಳೆದಂತೆ ಅವರು ಪಡೆಯುವ ಹಾಗೂ ಜ್ಞಾನ, ಶಕ್ತಿ, ಚತುರತೆ ಹಾಗೂ ಕೈಗೊಳ್ಳುವ ಕೆಲಸಗಳಿಂದ ಅವರ ಜಾತಿ ನಿರ್ಧರಿತವಾಗುತ್ತದೆ ಎಂಬ ಭಗವದ್ಗೀತೆಯ ವಾಕ್ಯ ಹುಟ್ಟಿನಿದಂಲೇ ವ್ಯಕ್ತಿಯ ಜಾತಿ ನಿರ್ಧರಣೆಯಾಗುತ್ತದೆ ಎಂಬ ಅಭಿಪ್ರಾಯವನ್ನು ಖಂಡಿಸುತ್ತದೆ. ಇತ್ತ ಪವಿತ್ರ ಗಂಥಗಳಲ್ಲಿಯೂ ಇರದ, ಮೇಲಾಗಿ ಸಂವಿಧಾನದಲ್ಲಿಯೂ ಇರದ ಈ ‘ಹುಟ್ಟಿನಿಂದ ಬರುವ ಜಾತಿ’ ಪರಿಗಣನೆಯ ಕ್ರಮವನ್ನು ಎತ್ತಿ ಹಿಡಿದ ತೀರ್ಪುಗಳನ್ನು ನ್ಯಾಯಾಂಗ ಮತ್ತೊಮ್ಮೆ ಪರಿಶೀಲಿಸಿ ಜಾತ್ಯತೀತ ರಾಷ್ಟ್ರ ಹಾಗೂ ಸಂವಿಧಾನದ ಆಶಯಗಳನ್ನು ಮತ್ತು ತತ್ವಗಳನ್ನು ರಕ್ಷಿಸಬೇಕಾದ ಅಗತ್ಯ ಕರ್ತವ್ಯ ನ್ಯಾಯಾಂಗ ಇತ್ತ ನೋಡುವುದೇ?

Leave a Reply

Your email address will not be published. Required fields are marked *

five × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top