ವಿಶ್ವವಾಣಿ

ಬೆಂಗಳೂರಿನಲ್ಲಿ ಜೆಡಿಎಸ್ ಪ್ರೊಟೆಸ್ಟ್, ಶಿರಸಿಯಲ್ಲಿ ‘ಕೈ’ ವಿಭಿನ್ನ ಪ್ರತಿಭಟನೆ (ವಿಡಿಯೊ)

ಬೆಂಗಳೂರು: ತೈಲ ಬೆಲೆ ಏರಿಕೆ ವಿರುದ್ಧ ನಡೆಯುತ್ತಿರುವ ಭಾರತ್ ಬಂದ್ ಬಿಸಿ ರಾಜ್ಯದೆಲ್ಲೆಡೆ ತಟ್ಟಿದೆ. ಬೆಂಗಳೂರಿನಲ್ಲೂ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ನಗರದ ಟೌನ್‍ಹಾಲ್‌ನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರಕಾರದ ಧೋರಣೆ ವಿರುದ್ಧ ಆಕ್ರೋಶ ಹೊರಹಾಕಿದರು. ಇನ್ನು ಸದಾ ಗಿಜಿಗುಡುತ್ತಿದ್ದ ಕೆ.ಆರ್.ಮಾರುಕಟ್ಟೆ ಕೂಡ ಸ್ತಬ್ಧವಾಗಿದ್ದು, ಬಿಕೋ ಎನ್ನುತ್ತಿದೆ.

ಮಂಗಳೂರಿನಲ್ಲಿ ಶಾಸಕರ ಕಾರನ್ನು ಬೆನ್ನತ್ತಿದ ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ನೋಡಿ ಕಾರು ನಿಲ್ಲಿಸಿದ ಶಾಸಕ ವೇದವ್ಯಾಸ ಕಾಮತ್ ಅವರು, ಬಲವಂತದ ಬಂದ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಒಲೆ ಹಚ್ಚಿ ಚಹಾ ಮಾಡುವ ಮೂಲಕ ಪ್ರತಿಭಟಿಸಿದರು. ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದು, ಬಸ್ ಸಂಚಾರ, ಆಟೋ ಓಡಾಟ ಎಂದಿನಂತೆ ಇವೆ.