About Us Advertise with us Be a Reporter E-Paper

ಅಂಕಣಗಳು

ಮಲ್ಯ ಮತ್ತು ಬಳಗವನ್ನು ಮಣಿಸಿದ ದಿವಾಳಿತನ ಘೋಷಣಾ ಕಾನೂನು

- ಗಣೇಶ್ ಭಟ್, ವಾರಣಾಸಿ

ಭಾರತದ ಬ್ಯಾಂಕ್‌ಗಳು ಶ್ರೀಮಂತರ ಪರವಾಗಿವೆ, ಬಡವರ ಸಾವಿರ ರುಪಾಯಿಗಳ ಲೆಕ್ಕದ ಸಾಲವನ್ನು ಆಸ್ತಿ ಜಪ್ತಿ ಮಾಡಿಯಾದರೂ ಶತಾಯಗತಾಯ ವಸೂಲಿ ಮಾಡುತ್ತವೆ, ಕೋಟಿಗಟ್ಟಲೆ ಸಾಲ ಮಾಡಿದವರ ಸಾಲವನ್ನು ಮನ್ನಾ ಮಾಡುತ್ತವೆ ಎನ್ನುವುದು ಭಾರತೀಯ ಬ್ಯಾಂಕ್ ವ್ಯವಸ್ಥೆಯ ಇರುವ ಬಹು ದೊಡ್ಡ ಟೀಕೆಯಾಗಿದೆ. ಇದು ಬಹುಮಟ್ಟಿನ ಸತ್ಯವೂ ಹೌದು. ಬಡ ರೈತರಿಗೆ ಐವತ್ತು ಸಾವಿರ ಅಥವಾ ಒಂದು ಲಕ್ಷ ರುಪಾಯಿಗಳ ಸಾಲವನ್ನು ಕೊಟ್ಟ ಬ್ಯಾಂಕ್‌ಗಳು ಇವರಿಂದ ಬಲವಂತವಾಗಿ ಸಾಲವನ್ನು ವಸೂಲಿ ಮಾಡುತ್ತವೆ. ಸಾಲವನ್ನು ಕಟ್ಟಲಾಗದೆ, ಅಡವಿಟ್ಟ ತಮ್ಮ ಆಸ್ತಿಪಾಸ್ತಿಯನ್ನು ಕಳೆದುಕೊಳ್ಳುವ ಭಯದಲ್ಲಿ ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ದೇಶದಲ್ಲಿ ಐನೂರು ಕೋಟಿ ರುಪಾಯಿಗಳು, ಸಾವಿರ ಕೋಟಿ ರುಪಾಯಿಗಳು, ಐದು ಸಾವಿರ ಕೋಟಿ ರುಪಾಯಿಗಳು, ಹತ್ತು ಸಾವಿರ ಕೋಟಿ ಕೋಟಿ ಕೋಟಿಗಳ ಲೆಕ್ಕದಲ್ಲಿ ಸಾಲ ಮಾಡಿದ ಬಹಳಷ್ಟು ಉದ್ಯಮಗಳು ಹಾಗೂ ಉದ್ಯಮಿಗಳು ನಂತರ ಬ್ಯಾಂಕ್‌ಗಳಿಗೆ ಸಾಲವನ್ನು ಮರುಪಾವತಿ ಮಾಡದೆ ಮೋಸ ಮಾಡುತ್ತಿದ್ದಾರೆ.

ಬ್ಯಾಂಕ್‌ಗಳಿಗೆ ಮೋಸ ಮಾಡಲು ಒಂದು ಸುಲಭ ಉಪಾಯವನ್ನು ಈ ಉದ್ಯಮಗಳು ಕಂಡುಹಿಡಿದಿದ್ದವು. ಅದೆಂದರೆ, ತಮ್ಮ ಸಂಸ್ಥೆಯನ್ನು ‘ದಿವಾಳಿ’ ಎಂದು ಘೋಷಣೆ ಮಾಡಿ ಸಾಲ ಕೊಟ್ಟ ಬ್ಯಾಂಕ್, ಶೇರುದಾರರು ಹಾಗೂ ಹೂಡಿಕೆದಾರರನ್ನು ವಂಚಿಸುತ್ತಿದ್ದವು. ದಿವಾಳಿ ಎಂದು ಘೋಷಣೆ ಮಾಡಿದ ಮೇಲೆ ಅವರ ಸಾಲವನ್ನು ವಸೂಲಿ ಮಾಡಿಕೊಳ್ಳುವ ಕಾನೂನು ಹಾಗಾಗಿಯೇ ಭಾರತದ ಬ್ಯಾಂಕ್‌ಗಳಿಗೆ 9000 ಕೋಟಿ ರುಪಾಯಿಗಳ ಸಾಲವಂಚನೆ ಮಾಡಿದ್ದ ವಿಜಯ್ ಮಲ್ಯ ದೇಶ ಬಿಟ್ಟು ಇಂಗ್ಲೆಂಡ್‌ನಲ್ಲಿ ತಿರುಗುತ್ತಿದ್ದರೆ, 12000 ಕೋಟಿ ರುಪಾಯಿಗಳಷ್ಟು ಬ್ಯಾಂಕ್ ಸಾಲವನ್ನು ಪಡೆದು ನೀರವ್ ಮೋದಿ ಮತ್ತು ಆತನ ಮಾವ ಮೆಹುಲ್ ಚೋಕ್ಸಿ ದೇಶ ಬಿಟ್ಟು ಪರಾರಿಯಾದರು.

ಇದು ಓಡಿಹೋದವರ ಕಥೆಯಾದರೆ, ಮಲ್ಯನಿಗಿಂತ 5 ಪಟ್ಟು ಹೆಚ್ಚು ಪ್ರಮಾಣದ ಸಾಲ ಮಾಡಿ, ನೀರವ್ ಮೋದಿಗಿಂತ 4 ಪಟ್ಟು ಹೆಚ್ಚು ಪ್ರಮಾಣದ ಸಾಲವನ್ನು ಪಡೆದು ‘ದಿವಾಳಿ’ ಘೋಷಿಸಿಕೊಂಡು ಸಾಲ ಮರುಪಾವತಿ ಮಾಡದ ಸಂಸ್ಥೆಗಳು ಭಾರತದಲ್ಲಿವೆ. ಉದಾಹರಣೆಗೆ, ‘ಭೂಷಣ್ ಸ್ಟೀಲ್ಸ್’ 44,478 ಕೋಟಿ ರುಪಾಯಿಗಳ ಸಾಲದಲ್ಲಿದ್ದರೆ, ‘ಲ್ಯಾಂಕೋ ಇನ್ಫ್ರಾಟೆಕ್ ಲಿಮಿಟೆಡ್’ 44,364 ಕೋಟಿ , ‘ಎಸ್ಸಾರ್ ಸ್ಟೀಲ್ ಲಿಮಿಟೆಡ್’ 37,284 ಕೋಟಿ , ‘ಭೂಷಣ್ ಪವರ್ ಆಂಡ್ ಸ್ಟೀಲ್ಸ್’ 37,248 ಕೋಟಿ ರುಪಾಯಿ…ಹೀಗೆ ಸುಮಾರು 8 ಲಕ್ಷ ಕೋಟಿ ರುಪಾಯಿಗಳಿಗಿಂತ ಹೆಚ್ಚು ಮೌಲ್ಯದ ಬ್ಯಾಂಕ್ ಸಾಲವು ಮರು ಪಾವತಿಯಾಗದೆ ಉಳಿದುಕೊಂಡಿದ್ದವು.

ಬ್ಯಾಂಕ್ ವ್ಯವಸ್ಥೆಯಲ್ಲಿ ದೀರ್ಘ ಕಾಲ ಮರು ಉಳಿದುಕೊಂಡ ಸಾಲವನ್ನು ಕೆಟ್ಟ ಸಾಲ ಅಥವಾ ಉನುತ್ಪಾದಿತ ಆಸ್ತಿ( ನಾನ್ ಪರ್ಫಾರ್ಮಿಂಗ್ ಅಸೆಟ್/ಎನ್‌ಪಿಎ) ಎಂದು ವಿಂಗಡಿಸಲಾಗುತ್ತದೆ. ನಿಗದಿಪಡಿಸಲಾದ ದಿನದಿಂದ 90 ದಿನಗಳಿಗಿಂತಲೂ ಹೆಚ್ಚು ಸಮಯದವರೆಗೆ ಕಂತು ಮರುಪಾವತಿಯಾಗದ ಸಾಲಗಳು ಎನ್‌ಪಿಎ ಎಂದು ಘೋಷಿಸಲ್ಪಡುತ್ತವೆ. ಬಡ್ಡಿ ಪಾವತಿಸಲ್ಪಟಿದ್ದರೂ ಅಸಲು ಹಿಂತಿರುಗಿಸಲ್ಪಡದಿದ್ದರೂ ಆ ಸಾಲವು ಅನುತ್ಪಾದಿತ ಸಾಲವೆಂದು ಗುರುತಿಸಲ್ಪಡುತ್ತವೆ. ಬ್ಯಾಂಕ್ ನ ಬ್ಯಾಲೆನ್‌ಸ್ ಶೀಟಿನಿಂದ ಇಂತಹ ಎನ್ ಪಿಎ ಯನ್ನು ಹೊರಗಿಡುವ ಪ್ರಕ್ರಿಯೆಯನ್ನು ‘ರೈಟ್ ಆಫ್’ ಎಂದು ಹೇಳಲಾಗುತ್ತದೆ. ಎನ್‌ಪಿಎ ಯ ಆಫ್ ಪ್ರಕ್ರಿಯೆಯನ್ನು ‘ಸಾಲ ಮನ್ನಾ’ ಎಂದು ಅಪಪ್ರಚಾರ ಮಾಡಲಾಗುತ್ತಿದೆ.

ಶ್ರೀಮಂತರ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷ ಹಾಗೂ ಅದರ ನಾಯಕರು ಆರೋಪ ಮಾಡುತ್ತಿದ್ದರೂ ಅದು ಜನರನ್ನು ದಾರಿ ತಪ್ಪಿಸುವ ಒಂದು ರಾಜಕೀಯ ಪ್ರಯತ್ನವಷ್ಟೇ ಹೊರತು ಸತ್ಯವಲ್ಲ. ಏಕೆಂದರೆ ಬ್ಯಾಲೆನ್‌ಸ್ ಶೀಟ್ ನಿಂದ ಹೊರಗಿಡುವುದೆಂದ ಮಾತ್ರಕ್ಕೆ ಆ ಸಾಲಗಳನ್ನು ವಸೂಲಿ ಮಾಡಲಾಗುವುದಿಲ್ಲ ಅಂತ ಅಲ್ಲ. ಬ್ಯಾಂಕ್‌ನ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಈ ಕೆಟ್ಟ ಸಾಲಗಳು ಅಡ್ಡಿಯಾಗಿ ಹೂಡಿಕೆದಾರರ ಪರಿಣಾಮ ಬೀರುವುದನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ.

2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕೆಟ್ಟ ಸಾಲಗಳನ್ನು ವಸೂಲಿ ಮಾಡುವ ಕ್ರಮದ ಮೊದಲ ಹಂತವಾಗಿ ಎಲ್ಲಾ ಬ್ಯಾಂಕ್ ಗಳ ಕೆಟ್ಟ ಸಾಲದ ಪ್ರಮಾಣವನ್ನು ಘೋಷಿಸಲು ಆದೇಶಿಸಿತು. ಇದರ ಪರಿಣಾಮವಾಗಿ ವಿಜಯ್ ಮಲ್ಯ, ನೀರವ್ ಮೋದಿ ಮುಂತಾದವರ ಮೋಸವೂ ಹೊರ ಪ್ರಪಂಚಕ್ಕೆ ಅರಿವಾಯಿತು. ಪ್ರಸ್ತುತ ಕಾನೂನಿನ ಲೋಪದೋಷವನ್ನು ಬಳಸಿಕೊಂಡು ದಿವಾಳಿ ಘೋಷಿಸಿಕೊಂಡು ಸಾಲಗಳ್ಳತನ ಮಾಡುವುದನ್ನು ನಿಲ್ಲಿಸಲು ಮೋದಿ ಸರಕಾರವು ಹೂಡಿದ ಅಸ್ತ್ರವೇ ‘ದಿವಾಳಿ ಮತ್ತು ದಿವಾಳಿತನ ಘೋಷಣಾ ಕಾನೂನು(ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಟ್ಸಿ ಕೋಡ್-ಐಬಿಸಿ).

ಈ ಕಾನೂನನ್ನು 2016 ರಲ್ಲಿ ಜಾರಿಗೆ ತರಲಾಯಿತು. ದಿವಾಳಿ ಎಂದು ಘೋಷಿಸಿಕೊಂಡು ಹೂಡಿಕೆದಾರರಿಗೆ ಹಾಗೂ ಬ್ಯಾಂಕ್‌ಗಳಿಗೆ ಸಾಲವನ್ನು ಮರುಪಾವತಿಸದೆ ವಂಚಿಸುವ ಎಲಾ ರೀತಿಯ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ರೂಪಿಸಿರುವ ಏಕ ಚೌಕಟ್ಟಿನ ಕಾನೂನಾಗಿದೆ, ಐಬಿಸಿ. ಹಳೆಯ ಎರಡು ಕಾನೂನುಗಳನ್ನು ತೆಗೆದು ಹಾಕಿ, 11 ಕಾನೂನುಗಳಲ್ಲಿ ತಿದ್ದುಪಡಿ ತಂದು ಇದನ್ನು ರೂಪಿಸಲಾಗಿದೆ. ಸಂಸ್ಥೆಯೊಂದರ ಸಾಲ ಮರುಪಾವತಿಸಲಾಗದ ಸ್ಥಿತಿಯನ್ನು ದಿವಾಳಿತನದ ಘೋಷಣೆ ಮಾಡುವುದು ಹಾಗೂ ದಿವಾಳಿ ಸಂಸ್ಥೆಯ ವಿಚಾರದಲ್ಲಿ ನಿರ್ದಿಷ್ಟ ನಿರ್ಣಯವನ್ನು ತೆಗೆದುಕೊಳ್ಳಲು ಈ ಕಾನೂನಿನ ಅನ್ವಯ ಸಾಧ್ಯವಿದೆ. ಸಾಲ ಮರುಪಾವತಿಸಲು ಸಾಧ್ಯವಾಗದ ಕಂಪನಿಗಳನ್ನು ‘ಇನ್ಸಾಲ್ವೆನ್ಸಿ ಹಾಗೂ ಬ್ಯಾಂಕ್ರಪ್ಟ್ಸಿ ಬೋರ್ಡ್ ಆಫ್ ಇಂಡಿಯಾ (ಐಬಿಬಿಐ)’ದ ವ್ಯಾಪ್ತಿಗೆ ತರಲಾಗುತ್ತದೆ. ತದನಂತರ ಮುಂದಿನ 180 ದಿನಗಳಲ್ಲಿ ಕಂಪನಿಯ ಸಾಲ ಮರುಪಾವತಿಯ ವ್ಯವಸ್ಥೆಗಳನ್ನು ಐಬಿಬಿಐ ರೂಪಿಸುತ್ತದೆ. ಕಂಪನಿಯ ಸ್ಥಿರ ಹಾಗೂ ಚರಾಸ್ಥಿಯನ್ನು ಒಟ್ಟುಗೂಡಿಸುವುದು, ಕಂಪನಿಯನ್ನು ಇನ್ನೊಂದು ಕಂಪನಿಗೆ ವಹಿಸುವುದೇ ಮೊದಲಾದ ಎಲ್ಲಾ ರೀತಿಯ ಪರಿಶೀಲನೆ ಜರಗುತ್ತದೆ.

ಐಬಿಸಿ ಕಾನೂನಿನ ಅಡಿಯಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಅದುವರೆಗೂ ಸಿಗಬೇಕಾದ ವೇತನದ ಬಿಡುಗಡೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಕಂಪನಿಯ ಹೂಡಿಕೆದಾರರು ಅಥವಾ ಷೇರುದಾರರಿಗೆ ಸಿಗಬೇಕಾದ ಪಾಲನ್ನು ಹಾಗೂ ಪರಿಹಾರವನ್ನು ಕೊಟ್ಟು ಅವರ ಕಾಪಾಡುವುದು ನಂತರದ ಕೆಲಸವಾದರೆ, ಹಣಕಾಸಿನ ನೆರವು ನೀಡಿದ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಗೆ ಸಲ್ಲಬೇಕಾದ ಬಾಕಿಯನ್ನು ವಸೂಲಿ ಮಾಡುವುದು ಮುಂದಿನ ಕೆಲಸವಾಗಿದೆ. ದಿವಾಳಿಗೊಂಡ ಸಂಸ್ಥೆಯ ಆಸ್ತಿ, ಅದಕ್ಕೆ ಸಂಬಂಧಿಸಿದವರ ಆಸ್ತಿ ಯನ್ನೂ ವಶಪಡಿಸಿಕೊಳ್ಳಲು ಈ ಕಾನೂನಿನಲ್ಲಿ ಅವಕಾಶವಿದೆ ಮಾತ್ರವಲ್ಲದೆ ವಿದೇಶದಲ್ಲಿ ಕೂಡಿಟ್ಟಿರುವ ಠೇವಣಿ ಅಥವಾ ಆಸ್ತಿಯನ್ನು ಕೂಡಾ ಇಲ್ಲಿ ವಶಪಡಿಸಿಕೊಳ್ಳಬಹುದು.

ಕಳೆದ 2 ವರ್ಷಗಳಲ್ಲಿ ಐಬಿಸಿ ಯ ಮೂಲಕ 3 ಲಕ್ಷ ರುಪಾಯಿಗಳಷ್ಟು ಕೆಟ್ಟ ಸಾಲಗಳು ವಸೂಲಿಯಾಗಿವೆ. ಸುಮಾರು 60 ಕ್ಕೂ ಹೆಚ್ಚು ಕೇಸುಗಳು ಪರಿಹಾರ ಕಂಡು 71000 ಕೋಟಿ ರುಪಾಯಿಗಳ ಕೆಟ್ಟ ಸಾಲಗಳು ಬ್ಯಾಂಕ್ ಗಳಿಗೆ ಮರುಪಾವತಿಯಾಗಿವೆ. ಇದರಲ್ಲಿ ಭೂಷಣ್ ಸ್ಟೀಲ್ಸ್ ನ ಸಾಲದ ಮರುಪಾವತಿ ಮಹತ್ತರವಾದುದು. ಭೂಷಣ್ ಸ್ಟೀಲ್ಸ್ ‘ಟಾಟಾ ಸ್ಟೀಲ್ಸ್’ ನ ಪಾಲಾಗಿದೆ. ಭೂಷಣ್ ಸ್ಟೀಲ್ ಸಂಸ್ಥೆಯು ಬ್ಯಾಂಕ್ ಗೆ ಮರುಪಾವತಿಸಬೇಕಾಗಿರುವ 44,478 ಕೋಟಿ ರುಪಾಯಿಗಳ ಸಾಲದಲ್ಲಿ 35,200 ಕೋಟಿ ರುಪಾಯಿಗಳನ್ನು ಟಾಟಾ ಸ್ಟೀಲ್ಸ್ ಮೊದಲ ಹಂತವಾಗಿ ಮರು ಪಾವತಿ ಮಾಡಿದೆ. ವೇದಾಂತ ಕಂಪನಿಯು ಎಲೆಕ್ಟ್ರೋಸ್ಟೀಲ್ ಸ್ಟೀಲ್ಸ್ ಕಂಪನಿಯ 5,300 ಕೋಟಿ ರುಪಾಯಿಗಳ ಸಾಲವನ್ನು ಮರುಪಾವತಿ ಮಾಡಿ ಆ ಸಂಸ್ಥೆಯನ್ನು ಖರೀದಿ ಮಾಡಿದುದರಿಂದ ಎಲೆಕ್ಟ್ರೋಸ್ಟೀಲ್ ಸ್ಟೀಲ್‌ಸ್ ಕಂಪನಿಯ ಕೆಟ್ಟ ಸಾಲದ ಸಮಸ್ಯೆಯು ಪರಿಹಾರವಾದಂತಾಗಿದೆ. ಎಸ್ಸಾರ್ ಸ್ಟೀಲ್ಸ್ ಸಂಸ್ಥೆಯು 50 ಸಾವಿರ ಕೋಟಿ ರುಪಾಯಿಗಳ ಕೆಟ್ಟ ಸಾಲವನ್ನು ಇಷ್ಟರಲ್ಲೇ ಮರುಪಾವತಿಗೊಳಿಸಲು ಒಪ್ಪಿಕೊಂಡಿದೆ. ಐಬಿಸಿ ಯ ಮೂಲಕ ಹರಾಜಾಗುವ ಪ್ರಸಂಗವು ಒದಗಿದಾಗ 50 ಸಾವಿರ ಕೋಟಿ ಸಾಲವನ್ನು ಬ್ಯಾಂಕ್‌ಗೆ ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದೆ.

ಐಬಿಸಿಯ ಹೆದರಿಕೆಗೆ ಸುಮಾರು 3,500ಕೆಟ್ಟ ಸಾಲದ ಪ್ರಕರಣಗಳಲ್ಲಿ ಸಂಸ್ಥೆಗಳು 1,20,000 ಕೋಟಿ ರುಪಾಯಿಗಳ ಸಾಲವನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಲು ಒಪ್ಪಿಕೊಂಡಿವೆ. ಐಬಿಸಿ ನೋಟಿಸ್ ಗೆ ಹೆದರಿ ಸಾಲಪ್ರಕರಣವನ್ನು ಮುಗಿಸಲು ಈ ಸಂಸ್ಥೆಗಳು ಒಪ್ಪಿಕೊಂಡಿವೆ ಎಂದರೆ ಈ ಎಷ್ಟು ಪ್ರಬಲವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಇದಲ್ಲದೆ ಕೆಲವು ಸಂಸ್ಥೆಗಳು ಸುಮಾರು 50,000 ಕೋಟಿ ರುಪಾಯಿಗಳಷ್ಟು ಮೊತ್ತವನ್ನು ಮರುಪಾವತಿ ಮಾಡಿಕೊಂಡು ಕೆಟ್ಟ ಸಾಲವನ್ನು ಪ್ರಮಾಣಿತ ಖಾತೆಗೆ ಪುನರ್ ವರ್ಗಾಯಿಸಿಕೊಂಡಿವೆ.

ಜನಸಾಮಾನ್ಯರು ಬ್ಯಾಂಕ್‌ಗಳಲ್ಲಿ ಕೂಡಿಟ್ಟ ಉಳಿತಾಯದ ಹಣವು ಕೆಟ್ಟ ಸಾಲಗಳ ಪೋಲಾಗುವುದನ್ನು ಈ ಕಠಿಣ ಕಾನೂನು ತಪ್ಪಿಸಿದೆ. ಇನ್ನು ಮುಂದೆ ಜನಸಾಮಾನ್ಯರಿಗೊಂದು ಕಾಯಿದೆ, ಧನಿಕರಿಗೊಂದು ಕಾನೂನು ಎನ್ನುವ ಅಂತರವನ್ನೂ ಐಬಿಸಿ ಮೂಲಕ ತಪ್ಪಿಸಿದಂತಾಗಿದೆ. ಕಳೆದ ನಾಲ್ಕು ವರುಷಗಳಲ್ಲಿ ಆರ್ಥಿಕ ಅಪರಾಧಿಗಳ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುತ್ತಿದೆ. ಬ್ಯಾಂಕ್ ಗಳಿಗೆ 9000 ಕೋಟಿ ರುಪಾಯಿಗಳ ಸಾಲವನ್ನು ಉಳಿಸಿ ದೇಶ ಬಿಟ್ಟು ಓಡಿದ ವಿಜಯ್ ಮಲ್ಯನ 13000 ಕೋಟಿ ರುಪಾಯಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನೀರವ್ ಮೋದಿ ಯ 7000 ಕೋಟಿ ರುಪಾಯಿಗಳ ಆಸ್ತಿಯನ್ನೂ ವಶಪಡಿಸಿಕೊಳ್ಳಲಾಗಿದೆ.

ಭಾರತ ಸರಕಾರದ ನಿರಂತರ ಪರಿಶ್ರಮದ ಪರಿಣಾಮವಾಗಿ ಇಂಗ್ಲೆಂಡ್‌ನ ನ್ಯಾಯಾಲಯ ವಿಜಯ್ ಮಲ್ಯನನ್ನು ಭಾರತಕ್ಕೆ ಗಡೀಪಾರು ಮಾಡುವ ಆದೇಶವನ್ನೂ ನೀಡಿದೆ. ಅರ್ಥಿಕ ಅಪರಾಧಗಳನ್ನು ನಿಯಂತ್ರಿಸುವ ಐಬಿಸಿಯಂತಹ ಕಠಿಣ ಸಾಲಗಳ್ಳರಿಗೆ ‘ಬುರೇ ದಿನ್’ಗಳನ್ನು ತಂದಿವೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು.

Tags

Related Articles

Leave a Reply

Your email address will not be published. Required fields are marked *

Language
Close