About Us Advertise with us Be a Reporter E-Paper

ಗುರು

ಅರಿವಿನ ಶರಧಿ ಬನ್ನಂಜೆ ಗೋವಿಂದಾಚಾರ್ಯ

* ಜಿ. ಪಿ. ನಾಗರಾಜನ್

ಅಪ್ರತಿಮ ಸಂಶೋಧನಾ ಪ್ರವೃತ್ತಿ, ನಿರಂತರ ಅಧ್ಯಯನಶೀಲತೆ, ಸತ್ಯನಿಷ್ಠುರತೆ ಗೋವಿಂದಾಚಾರ್ಯರಿಗೆ ಬಾಲ್ಯದಿಂದಲೇ ಬಂದ ಬಳುವಳಿ. ಸತ್ಯಶೋಧನೆ ಅವರ ಬದುಕಿನ ಮಂತ್ರ, ಪೌರುಷೇಯ-ಅಪೌರುಷೇಯ ಜ್ಞಾನಸಮಸ್ತವೂ ಆಚಾರ್ಯರಿಗೆ ಅವರು ವಿದ್ವತ್ತಿನ ಖನಿ, ಭಾಷೆಯೇ ಅಧ್ಯಾತ್ಮವಾಗಿರುವ ಅಚ್ಚರಿ. ಸನಾತನ ಸಂಸ್ಕೃತಿಯೇ ಸಾಕಾರಗೊಂಡಿರುವ ಋಷಿಸ್ವರೂಪಿ.

ಅಕ್ಷರ ಲೋಕಕ್ಕೆ ಬೆಲೆಕಟ್ಟಲಾಗದ ಅಕ್ಷರ ಕೊಡುಗೆಯಿತ್ತಿರುವ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರು ಈ ಶತಮಾನ ಕಂಡ ಪಾರವಿಲ್ಲದ ಜ್ಞಾನಮಾನಸಸರೋವರ, ಅರಿವಿನ ಶರಧಿ. ನಿತಾಂತ ಸ್ವಾಧ್ಯಾಯದಿಂದ ತತ್ತ್ವಶಾಸ್ತ್ರಗ್ರಂಥಗಳ, ಕನ್ನಡ – ಸಂಸ್ಕೃತ ಸಾಹಿತ್ಯ , ಉಪನ್ಯಾಸ, ಸಿನಿಮಾ, ಪತ್ರಿಕೋದ್ಯಮ, ಕಾವ್ಯಸಂಚಯ, ಸಂಶೋಧನೆ, ಗ್ರಂಥ ಸಂಪಾದನೆ, ಮಾತು-ಬರೆಹ ಎಲ್ಲದರಲ್ಲೂ ಸಮಾನ ಒಡೆತನ ಇವು ಅವರ ಅಸಾಮಾನ್ಯ ಅಗಣಿತ ಮುಖಗಳು. ಬೆರಗನ್ನು ಮೀರಿದ ಬೆರಗು. ಭಾರತೀಯ ಚಿಂತನಕ್ರಮಗಳ ಬಗ್ಗೆ ಪ್ರಸ್ತುತ ಯುವಜನತೆಯ ಆಸಕ್ತಿಗೆ ಒಂದು ಸ್ಪಷ್ಟ ಗುರಿಯನ್ನು ತೋರಿಸಿ ಮುನ್ನಡೆಸುವುದರಲ್ಲೇ ಭಾರತದ ಭವಿಷ್ಯವಿದೆ ಎಂದು ದೃಢವಾಗಿ ನಂಬಿದ ಆಶಾವಾದಿ.

ಪಡುವಣ ಕಡಲ ತಡಿಯ ಪವಿತ್ರ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿನ ಒಂದು ಸಣ್ಣ ಗ್ರಾಮ ಬನ್ನಂಜೆ. ಆದರೀಗ ಬನ್ನಂಜೆಯೆಂಬ ಕಿರುಗ್ರಾಮವೂ ’ಗೋವಿಂದಾಚಾರ್ಯ’ ಎಂಬ ಮಹಾನ್ ಚೈತನ್ಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕಾರಸಂಪನ್ನ ಕುಟುಂಬದಲ್ಲಿ ಶ್ರೀಮತಿ ಸತ್ಯಭಾಮಾ – ಪಡಮುನ್ನೂರು ನಾರಾಯಣಾಚಾರ್ಯ ದಂಪತಿಗಳ ಪುಣ್ಯ ಗರ್ಭದಲ್ಲಿ 1936ರಲ್ಲಿ ಜನಿಸಿದರು. ಶಾಲೆಗೆ ಹೋಗಿ ಅವರು ಕಲಿತದ್ದು ಅತ್ಯಲ್ಪ. ಸಂಸ್ಕೃತದ ಉದ್ದಾಮ ವಿದ್ವಾಂಸರು, ತರ್ಕ ಕೇಸರಿ ಬಿರುದಾಂಕಿತರು ಆಗಿದ್ದ ತಂದೆಯವರಿಂದಲೇ ಆಚಾರ್ಯರಿಗೆ ನ್ಯಾಯ, ವೇದಾಂತ, ತರ್ಕ, ಅಲಂಕಾರಗಳ ಆರಂಭಿಕ ಅಧ್ಯಾಪನ ದೊರೆಯಿತು. ಅದ್ಭುತವಾದ ಗ್ರಹಣ, ಧಾರಣ, ಸ್ಮರಣ ಶಕ್ತಿಗಳ ವರಪ್ರಸಾದಿತರಾಗಿದ್ದ ’ಗೋವಿಂದಾಚಾರ್ಯ’ರಿಗೆ ಪಲಿಮಾರುಮಠಾಧೀಶ ಶ್ರೀವಿದ್ಯಾಮಾನ್ಯತೀರ್ಥರ ಶಾಸ್ತ್ರಾನುಗ್ರಹ, ಕಾಣಿಯೂರುಮಠಾಧೀಶ ಶ್ರೀವಿದ್ಯಾಸಮುದ್ರತೀರ್ಥರ ಮಾರ್ಗದರ್ಶನದ ಸುಯೋಗ, ಶ್ರೇಷ್ಠ ಮಾನವತಾವಾದಿ ಪೇಜಾವರ ಶ್ರೀಗಳ ಹರಕೆಯ ಭಾತಿ, ಪೂರ್ಣಪ್ರಜ್ಞರ ಸಂಪ್ರೀತಿ, ಒದಗಿ ಬಂದದ್ದು ಯೋಗಾಯೋಗ. ಅತಿಯಾದ ಸಾಂಪ್ರದಾಯಿಕತೆ, ಮಡಿವಂತಿಕೆಗಳಿಂದ ದೂರವಿದ್ದ ಅವರ ಮುಂದಿನ ಅಗಾಧ ಜ್ಞಾನಾರ್ಜನೆಯೆಲ್ಲಾ ನಿತಾಂತ ಸ್ವಾಧ್ಯಾಯದಿಂದಲೇ. ಭಾರತೀಯ ಸನಾತನ ಪರಂಪರೆಯ ತ್ರೈಸಿದ್ಧಾಂತಗಳ, ಅಗಣಿತ ತತ್ತ್ವಶಾಸ್ತ್ರಗ್ರಂಥಗಳ, ಕನ್ನಡ – ಸಂಸ್ಕೃತ ಸಾಹಿತ್ಯ ಸಾಗರದ ಆಳ, ಅಗಲ, ಹರಹುಗಳ ಸಾರ ಸರ್ವಸ್ವವನ್ನೂ ಆಪೋಶನ ತೆಗೆದುಕೊಂಡ ಅಗಸ್ತ್ಯ ಅವರು.. ಈ ನಿಟ್ಟಿನಲ್ಲಿ ಅವರಿಗೆ ಅವರೇ ಸಾಟಿ.

ಭಾಷೆಯೇ ಅಧ್ಯಾತ್ಮ
ಅಪ್ರತಿಮ ಸಂಶೋಧನಾ ಪ್ರವೃತ್ತಿ, ನಿರಂತರ ಅಧ್ಯಯನಶೀಲತೆ, ಸತ್ಯನಿಷ್ಠುರತೆ ಆಚಾರ್ಯರಿಗೆ ಬಾಲ್ಯದಿಂದಲೇ ಬಳುವಳಿ. ಸತ್ಯಶೋಧನೆ ಅವರ ಬದುಕಿನ ಮಂತ್ರ, ಪೌರುಷೇಯ-ಅಪೌರುಷೇಯ ಜ್ಞಾನಸಮಸ್ತವೂ ಆಚಾರ್ಯರಿಗೆ ಕರತಲಾಮಲಕ. ಅವರು ವಿದ್ವತ್ತಿನ ಖನಿ, ಭಾಷೆಯೇ ಅಧ್ಯಾತ್ಮವಾಗಿರುವ ಅಚ್ಚರಿ. ಸನಾತನ ಸಂಸ್ಕೃತಿಯೇ ಸಾಕಾರಗೊಂಡಿರುವ ಋಷಿಸ್ವರೂಪಿ.

ವೇದ, ವೇದಾಂತ, ದರ್ಶನ, ವ್ಯಾಕರಣ, ಛಂದಸ್ಸು, ಸಂಖ್ಯಾಶಾಸ್ತ್ರ, ಸಂಗೀತ, ಸಾಹಿತ್ಯ, ಕಾವ್ಯ, ಕನ್ನಡ-ಸಂಸ್ಕೃತ ವಾಙ್ಮಯ, ವಿಮರ್ಶೆ, ಅನುವಾದ, ಇತಿಹಾಸ, ನಾಟಕ, ಉಪನ್ಯಾಸ, ಸಿನಿಮಾ, ಪತ್ರಿಕೋದ್ಯಮ, ಕಾವ್ಯಸಂಚಯ, ಸಂಶೋಧನೆ, ಗ್ರಂಥ ಸಂಪಾದನೆ, ಪ್ರಖರವಾಗ್ಮಿಯತೆ. ಪ್ರವಚನಪಟುತ್ವ, ಮಾತು-ಬರೆಹ ಎರಡರಲ್ಲೂ ಸಮಾನ ಒಡೆತನದ ಸವ್ಯಸಾಚಿ. ಹೀಗೆ ಯಾದಿ ಬನ್ನಂಜೆಯವರ ಅಸಾಮಾನ್ಯ ವ್ಯಕ್ತಿತ್ವದ ಅಗಣಿತ ಮುಖಗಳು. ಅವರ ಕಬಂಧ ಹಸ್ತಗಳಿಗೆ ನಿಲುಕದೇ ಉಳಿದ ವಸ್ತುವಿಷಯಗಳು ಇವೆಯೇ ಎಂಬುದಕ್ಕೆ ‘ಇಲ್ಲ’ ಎಂಬುದೇ ಅತ್ಯುಕ್ತಿಯಲ್ಲದ ಉತ್ತರ ಅವರ ಸಾಹಿತ್ಯದ ನಂಟು. ಸುದೀರ್ಘಕಾಲ ‘ಉದಯವಾಣಿ’ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿದ್ದ ಅವರ ಸಾಹಿತ್ಯ ನಂಟು, ಶಾಸ್ತ್ರಗ್ರಂಥಗಳ ಅಧ್ಯಯನದೆಡೆಗೆ ಹೊರಳಿದ ಫಲವಾಗಿ ಅರಳಿದ ಪುಷ್ಪಗಳು ಉಪನಿಷಚ್ಚಂದ್ರಿಕಾ, ಮಹಾಭಾರತ ತಾತ್ಪರ್ಯ ನಿರ್ಣಯ, ಶತರುದ್ರೀಯಂ, ಚತ್ವಾರಿ ಸೂಕ್ತಾನಿ, ವಿಷ್ಣುಸಹಸ್ರನಾಮ ವ್ಯಾಖ್ಯಾನ, ಸಂಗ್ರಹ ರಾಮಾಯಣ, ತಂತ್ರಸಾರ ಸಂಗ್ರಹ, ಮುಕ್ಕಣ್ಣ ದರ್ಶನ, ಪರಾಶರ ಕಂಡ ಪರತತ್ವ, ದಾಸಾಂಜಲಿ, ಸಂಗ್ರಹ ಭಾಗವತ, ಪ್ರಮೇಯ ನವಮಾಲಿಕೆ, ಹದಿನಾಕು ಹಾಡುಗಳು, ಪುರಂದರೋಪನಿಷತ್, ಭಗವಂತನ ನಲ್ನುಡಿ, ಮುಂತಾದ ಅನನ್ಯ ಸಂಸ್ಕೃತ, ಕನ್ನಡ ಕೃತಿ ಮೌಕ್ತಿಕಗಳು. ತೆರೆಮರೆಗೆ ಸರಿಯುತ್ತಿರುವ ಸಂಸ್ಕೃತದ ಮಹಾಕೃತಿಗಳನ್ನು ಮತ್ತೆ ಜನಮಾನಸ ಗದ್ದಿಗೆಯಲ್ಲಿ ಅಧಿಷ್ಠಿತಗೊಳಿಸಿದ ಅಗ್ಗಳಿಕೆಯೂ ಅವರದಾಗಿದೆ..

ಅಕ್ಷರ ಲೋಕಕ್ಕೆ ಬೆಲೆಕಟ್ಟಲಾಗದ ಕೊಡುಗೆ
ತಿಳಿಗನ್ನಡ ನುಡಿ ಬನ್ನಂಜೆಯವರ ಆಡುಂಬೊಲ. ವಿನೂತನ ಪದಪ್ರಯೋಗ ಕಥನ ಶೈಲಿ ಅವರಿಗೆ ಸಿದ್ಧಿಸಿದ ಅಪರೂಪದ ವರ.. ಉತ್ತರರಾಮ ಚರಿತಂ, ತತ್ವಸಾರಸಂಗ್ರಹ, ಚತುರ್ದಶ ಸೂಕ್ತಿಗಳು, ಮಹಾಶ್ವೇತೆ, ತಲವಕಾರೋಪನಿಷತ್, ಮೃಚ್ಛಕಟಿಕ, ಋತುಸಂಹಾರ, ಕೃಷ್ಣಾಮೃತಮಹಾರ್ಣವ ಮುಂತಾದ ಸಂಸ್ಕೃತಕೃತಿ ಒಟ್ಟಿಲುಗಳು ಅರ್ಥಾಂತರಾರ್ಥಗಳೊಡನೆ ಕನ್ನಡದ ಕನ್ನಡಿಯಲ್ಲಿ ರೂಪು ತಳೆದದ್ದು ಅವರಿಂದ. ಕಾಳಿದಾಸ, ಭವಭೂತಿ, ಭಾರವಿ, ಭಾಸ, ದಂಡಿ, ಶೂದ್ರಕರು ಕನ್ನಡವಾಗಿ ನಮ್ಮೆದೆಗೆ ಹತ್ತಿರವಾದದ್ದು ಅವರ ನುಡಿಯ ಓಜಸ್ಸಿನಿಂದ ಮಾತ್ರವಲ್ಲದೆ, ವಿಸ್ಮೃತಿಗೊಳಗಾಗಬಹುದಾಗಿದ್ದ ಈ ಮಹಾಕವಿಗಳ ಕೃತಿರತ್ನಗಳು ಕನ್ನಡಿಗರ ಮಡಿಲು ತುಂಬಿ ಪುನರ್ಜೀವ ಪಡೆದಿವೆ. ಸಂಸ್ಕೃತದ ಸತ್ವಕ್ಕೆ ಕನ್ನಡ ಎಣೆಯಾಗಿ ನಿಂತದ್ದು ಬನ್ನಂಜೆಯವರ ಕನ್ನಡ ನುಡಿಯ ಅವರ ಸಾಹಿತ್ಯ ಕೃಷಿ ಕಾವ್ಯ ಖುಷ್ಕಿಯಿಂದ ಆಗಮಿಕ ತರಿಯೆಡೆಗೆ ಹೊರಳಿದ್ದು, ಬರೆದದ್ದು, ನುಡಿದದ್ದು ಎಲ್ಲವೂ ಅಕ್ಷರ ಲೋಕಕ್ಕೆ ಅವರಿತ್ತ ಬೆಲೆಕಟ್ಟಲಾಗದ ಅಕ್ಷರ ಕೊಡುಗೆ. ಕನ್ನಡ ಶಬ್ದ ಭಂಡಾರಕ್ಕೆ ಅವರು ಟಂಕಿಸಿ ಕೊಟ್ಟ ಪದಗಳು ಅಗಣಿತ – ಅಪ್ರತಿಮ. ಹತ್ತಾರು ವಿಶ್ವವಿದ್ಯಾನಿಲಯಗಳು ಹಲವು ದಶಕಗಳ ಕಾಲಾವಧಿಯಲ್ಲಿ ಸಾಧಿಸಲಾಗದ ಕಾರ್ಯವನ್ನು ಬನ್ನಂಜೆ ಎಂಬ ಒಬ್ಬ ವ್ಯಕ್ತಿ ಏಕಾಂಗಿಯಾಗಿ ಕೇವಲ ಆರುಹತ್ತು ವರುಷಗಳಲ್ಲಿ ಸಾಧಿಸಿರುವುದು ಜಗತ್ತಿನ ಅದ್ಭುತಗಳನ್ನು ಮೀರಿದ ಅತ್ಯದ್ಭುತ. ಬೆರಗನ್ನು ಮೀರಿದ

ಬನ್ನಂಜೆ ಎಂಬ ಅರಿವಿನ ಅಂಬುದಿ
ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಸಿಂಗರಿಸಿದ ವಿದ್ಯಾವಾಚಸ್ಪತಿ, ಪ್ರತಿಭಾಂಬುಧೀ, ವಿದ್ಯಾ ವಾರಿಧಿ, ಶಾಸ್ತ್ರ ಸವ್ಯಸಾಚಿ, ಪಂಡಿತ ರತ್ನ, ಪದ್ಮಶ್ರೀ ಪುರಸ್ಕಾರ – ಉಪಾಧಿಗಳೆಲ್ಲ ಅವರ ಅಭಿಮಾನಿಗಳ ಅಪಾರ ಪ್ರೀತಿಗೆ ಪುರಾವೆಯಾದರೂ ಸೀಮಿತ ಪದಸಂಪತ್ತಿಗೆ ಎಟುಕಿದ ಪದಗಳಷ್ಟೇ. ಅದನ್ನೆಲ್ಲ ಮೀರಿ ಆಗಸದೆತ್ತರಕ್ಕೆ ಏರಿನಿಂತವರು ಅವರು. ಬನ್ನಂಜೆಗೆ ಸೂಕ್ತ ಉಪಾಧಿಯೆಂದರೆ ಅದು ‘ಬನ್ನಂಜೆ ’ ಎಂಬುವುದು ಮಾತ್ರ.

ಆಚಾರ್ಯರ ಪ್ರವಚನಗಳು ವಿಷಯ ದೃಷ್ಟಿಯಿಂದ ತಳಸ್ಪರ್ಶಿ. ಕೇಳುಗರ ಅವರ ಸರಳ್ಗನ್ನಡದ ಸೊಗಡು ಆಪ್ತಾತಿ ಆಪ್ತ. ಸಂಸ್ಕೃತ ಕೃತಿಗಳ ಕನ್ನಡ ರೂಪಕ್ಕೆ ಅವರಿತ್ತ ‘ಆವೆಮಣ್ಣಿನ ಆಟದ ಬಂಡಿ’ ‘ಭಗವಂತನ ನಲ್ನುಡಿ’, ’ನಡುವಿನವನ ಬಿಡುಗಡೆ ’ಮುಗಿಲ ಮಾತು’ ಕೃಷ್ಣನೆಂಬ ಸೊದೆಯ ಕಡಲು ನೆನಪಾದಳು ಶಕುಂತಲೆ, ಮುಂತಾದ ಕನ್ನಡ ಅಚ್ಚಕನ್ನಡವಾಗಿರುವ ಶೀರ್ಷಿಕೆಗಳು ಅವರ ಸೃಜನಶೀಲತೆಗೆ, ನುಡಿಗಾರುಡಿಗೆ ಪದನಿರ್ಮಾಣ ಕುಶಲತೆಗೆ ಹಿಡಿದ ಪರಾಕು ಪಳಯಿಗೆಗಳು.

ಸಾವಿರದ ಗಡಿದಾಟಿ ಮುಂದಡಿಯಿಟ್ಟಿರುವ ಆಚಾರ್ಯರ ಬಿಡಿ ಲೇಖನಗಳ ವ್ಯಾಪ್ತಿಗೆ ಸಿಲುಕಿದ ವಸ್ತು ವೈವಿಧ್ಯ ಊಹಾತೀತ. ಋತಬದ್ಧತೆಯ ವೈಚಾರಿಕ ಮೇಲೆ ಮೂಡಿಬಂದ ಅವರ ಒಂದೊಂದು ಲೇಖನವೂ ಒಂದೊಂದು ಮೌಕ್ತಿಕ. ಸಾವಿರದ ಶಾಶ್ವತಗಳು. ಅವರ ಸಾಹಿತ್ಯ ಸೃಷ್ಟಿ ಕನ್ನಡ ಸಂಸ್ಕೃತಗಳೆರಡರಲ್ಲೂ ಸಮಾನವಾಗಿ ಪ್ರಸ್ಫುಟಗೊಂಡಿದ್ದು, ಸಂಸ್ಕೃತವು ಶಾಸ್ತ್ರಸಾಹಿತ್ಯಕ್ಕೆ ಶರಣು ಎಂದಿದ್ದರೆ, ಕನ್ನಡವು ಕಾವ್ಯ, ಕವನ, ಪ್ರಬಂಧ, ಭಾಷಾಂತರ, ಪ್ರವಚನ ಹೀಗೆ ಎಲ್ಲ ಸೃಜನಾತ್ಮಕ ಪ್ರಕಾರಗಳಲ್ಲೂ ಪ್ರಕಾಶಿಸಿದೆ. .

ಚಲನಚಿತ್ರ ಜಗತ್ತಿನಲ್ಲಿ ಪ್ರಯೋಗಶೀಲತೆಗೆ ಹೆಸರಾದ ಜಿ.ವಿ.ಅಯ್ಯರ್ ಅವರ ‘ಆದಿ ಶಂಕರಾಚಾರ್ಯ ಮತ್ತು ಭಗವದ್ಗೀತೆ’ ಸಂಸ್ಕೃತ ಚಿತ್ರಗಳಿಗೆ ಬನ್ನಂಜೆಯವರು ಒದಗಿಸಿದ ಸಾಹಿತ್ಯ ಜಗನ್ಮಾನ್ಯ. ಕನ್ನಡದ ಚಿತ್ರಕ್ಕೆ ಅವರು ನೀಡಿರುವ ಅತ್ಯುಚ್ಚ ಮಟ್ಟದ ಸಾಹಿತ್ಯ ಆ ಮಹಾಯತಿಗೆ ಬೆಳಗಿದ ನೀರಾಂಜನ.

ಶಾಸ್ತ್ರಾಧ್ಯಯನ, ಶಾಸ್ತ್ರ ಮಥನ, ಬನ್ನಂಜೆಯವರ ಪಾಲಿಗೆ ಒಂದು ತಪಸ್ಸು. ಆ ತಪಸ್ಸಿನ ಫಲವಾಗಿ ಆರ್ಜಿತವಾದ ಜ್ಞಾನ ಅರ್ಥಿಗಳಿಗೆ ಲಬ್ಧವಾಗಿರುವುದು ಈ ಭುವಿಯ ಭಾಗ್ಯ. ಭಾರತೀಯ ಸಂಸ್ಕೃತಿ ದರ್ಶನವನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ’ ಹಿಂದೂ ಧರ್ಮ ಎನ್ನುವುದು ರಾಷ್ಟ್ರೀಯತೆಯ ಸೂಚಕ. ಇಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಲು ಅವಕಾಶವಿದೆ. ಭಾರತದಲ್ಲಿ ಮಾತ್ರವೇ ಡೆಮಾಕ್ರಸಿ ಇನ್ ಫಿಲಾಸಫಿಯನ್ನು ಯಾವುದೇ ಮತವನ್ನು ಅನುಸರಿಸಲು ಸ್ವಾತಂತ್ರ್ಯವನ್ನು ನೀಡಿರುವುದೇ ಈ ಸಂಸ್ಕೃತಿ. ಅಸಹಿಷ್ಣುತೆಯನ್ನು ಸೃಷ್ಟಿಸುತ್ತಿರುವವರು ರಾಜಕಾರಣಿಗಳಷ್ಟೆ.’ಎನ್ನುವ ಅವರ ಅಭಿಪ್ರಾಯ ಚಿಂತನೆಗೆ ಹಚ್ಚುತ್ತದೆ. ಅವರೇ ಹೇಳಿರುವ ’ನಮ್ಮ ಬದುಕು ಪ್ರಾಮಾಣಿಕವಾಗಿರಲಿ. ಮನಸ್ಸಿನಲ್ಲಿ ಒಂದು, ಮಾತಿನಲ್ಲಿ ಮತ್ತೊಂದು ಎಂಬ ಮುಖವಾಡ ಬೇಡ. ಯಾರೊಂದಿಗೇ ಆಗಲಿ, ಅಭಿಪ್ರಾಯ ಭೇದ ಇದ್ದರೆ ಇರಲಿ, ಆದರೆ ವೈಯಕ್ತಿಕ ದ್ವೇಷ ಬೇಡ.’ ಎಂಬ ಮಾತುಗಳು ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ.

ಬನ್ನಂಜೆ ಗೋವಿಂದಾಚಾರ್ಯ ಜನಪ್ರೀತಿಯೆಂಬ ಅಪಾರ ಐಶ್ವರ್ಯದ ಒಡೆಯರು. ನೈರಾಶ್ಯ ತುಂಬಿದ ಅದೆಷ್ಟೋ ವಿಷಣ್ಣ ಮನಸ್ಸುಗಳು ಅವರ ಸಾಂತ್ವನ ನುಡಿಗಳಿಂದಾಗಿ, ಉಪದೇಶ ಸೊದೆಯಿಂದಾಗಿ ನವಚೈತನ್ಯ ಪಡೆದಿರುವುದು ಅವರ ನುಡಿಶಕ್ತಿಗೆ ಸಾಕ್ಷಿಯಾಗಿದೆ. ದೇಹಕ್ಕೆ ಎಂಬತ್ತು ತುಂಬಿದ್ದರೂ, ಚೈತನ್ಯದಲ್ಲಿ ಇನ್ನೂ ಯುವಕರಾಗಿಯೇ ಇರುವ ವೇದಾಂತಿ, ಚಿಂತಕ, ತತ್ತ್ವಜ್ಞಾನಿ, ಸಾಹಿತಿ, ಏನೆಲ್ಲ ಆಗಿರುವ, ಎಲ್ಲಕ್ಕೂ ಮಿಗಿಲಾಗಿ ಸದಾ ಸಮಾಜದ ಒಳಿತನ್ನೇ ಬಯಸುವ ’ಬನ್ನಂಜೆ ಗೋವಿಂದಾಚಾರ್ಯ ಎಂಬ ದಣಿವರಿಯದ ಜೀವನೋತ್ಸಾಹಿ ನಮ್ಮ ನಡುವೆ ಇರುವುದೇ ನಮಗೆ ಸಿಕ್ಕಿರುವ ಮಹದ್ಭಾಗ್ಯ.

Tags

Related Articles

Leave a Reply

Your email address will not be published. Required fields are marked *

Language
Close