About Us Advertise with us Be a Reporter E-Paper

ಅಂಕಣಗಳು

ಫೇಲ್ ಮಾಡದಿರುವುದೇ ಎಲ್ಲ ಸಮಸ್ಯೆಗಳಿಗೆ ಮೂಲಕಾರಣ…!

- ಮೋಹನ್ ಕುಮಾರ್ B.N

ಸ್ನೇಹಿತರೊಬ್ಬರು ತಮ್ಮ ಮಗನ ಶಾಲೆಯ ಅಡ್ಮಿಶನ್‌ಗಾಗಿ ಕರೆ ಮಾಡಿದ್ದರು. ಸುಮಾರು ಅರ್ಧ ಗಂಟೆ ಫೋನಿನಲ್ಲಿ ಮಾತಾಡಿದರು. ಅವರ ಮಗನಿಗೆ ಕೇಂದ್ರಿಯ ವಿದ್ಯಾಲಯದಲ್ಲಿಯೇ ಸೀಟು ಬೇಕಿತ್ತು. ಆ ಶಾಲೆಯ ಬಗ್ಗೆ ಎಲ್ಲ ವಿವರವಾಗಿ ಹೇಳಿ, ನನಗೆ ತಿಳಿದಿರುವ ಕೇಂದ್ರದ ಮಂತ್ರಿಯೊಬ್ಬರ ಮೂಲಕ ಒಂದು ಮಾತು ಹೇಳಿಸುವಂತೆ ಕೇಳಿಕೊಂಡರು. ಅದಕ್ಕೆ ನಾನು, ‘ಆಯಿತು, ಪ್ರಯತ್ನಿಸುತ್ತೇನೆ.’ ಎಂದು ಹೇಳಿದೆ. ಇವರ ಮಗ 8ನೇ ತರಗತಿಯೋ, 10ನೇ ತರಗತಿಯೋ ಇರಬಹುದು ಎಂದು ನಾನು ಭಾವಿಸಿದ್ದೆ. ಮುಗಿಸುವಾಗ ‘ಸರಿ, ನಿಮ್ಮ ಮಗ ಎಷ್ಟನೇ ತರಗತಿ?’ ಎಂದು ಕೇಳಿದೆ. ಅದಕ್ಕವರು, ‘ಒಂದನೇ ತರಗತಿಗೆ ಸೇರಿಸಬೇಕು’ ಎಂದರು! ನನಗೆ ಏನು ಹೇಳಬೇಕೋ, ತಿಳಿಯಲಿಲ್ಲ. ಎಡಗಡೆ ಇದ್ದ ಹೃದಯ ಬಲಗಡೆ ಬಂದಂತಾಯಿತು. ಎಂಥಾ ಹಣೆಬರಹ ಮಾರಾಯ ಎಂದು ಹಣೆ ಚಚ್ಚಿಕೊಳ್ಳುತ್ತಾ, ‘ಆಯಿತು’ ಎಂದು ಫೋನ್ ಇಟ್ಟೆ. ಅವತ್ತು ರಾತ್ರಿ ನಿದ್ದೆಯೇ ಬರಲಿಲ್ಲ. ರಾತ್ರಿಯೆಲ್ಲ ತಲೆಯಲ್ಲಿ ಏನೆನೋ ಯೋಚನೆಗಳು ಬರಲಾರಂಭಿಸಿದವು.

ಅಲ್ಲ, ಒಂದನೆಯ ತರಗತಿಗೆ ಪ್ರವೇಶ ಪಡೆಯಲೇ ಒಬ್ಬ ಕೇಂದ್ರ ಸಂಸದರ ಪತ್ರ ಬರೆಯಿಸುವಂತಹ ಕಾಲ ಬಂದಿದೆಯೆಂದರೆ, ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹೊಗಳಬೇಕೋ, ತೆಗಳಬೇಕೋ ತಿಳಿಯುತ್ತಿಲ್ಲ. ಇಷ್ಟೆಲ್ಲ ಮಾಡಿಯೂ ಓದಿದ ಮಕ್ಕಳ ಭವಿಷ್ಯ ಇವತ್ತು ಹೇಳಿಕೊಳ್ಳುವಂತಹ ಬದಲಾವಣೆಗಳನ್ನು ತಂದಿಲ್ಲ. ಇಂದಿಗೂ ಡಾಕ್ಟರ್, ಎಂಜಿನಿಯರ್‌ಗಳಿಗೆ ಕೆಲಸವೇ ಸಿಗುತ್ತಿಲ್ಲ. ಹತ್ತಾರು ವರ್ಷ ಕಷ್ಟಪಟ್ಟು, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮಕ್ಕಳನ್ನು ಓದಲು ಕಳುಹಿಸಿದರೂ ಸಹ, ಶಾಲೆಯ ನಂತರ ಅವರೆಲ್ಲರೂ ಹೋಗುವುದು ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್‌ಗಳಿಗೆ ಮಾತ್ರ.

ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲವಪ್ಪ. ಕರೆದು, ಕರೆದು ಸೇರಿಸಿಕೊಳ್ಳುತ್ತಿದ್ದವು. ನಾನೂ ಕೂಡ ಹತ್ತು ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲಿಯೇ ಒಂದು ತುಂಬಾ ಸಣ್ಣದಾದ ಶಾಲೆಯಲ್ಲಿ ಓದಿ, ನಂತರ ಚಾರ್ಟರ್ಡ್ ಅಕೌಂಟೆಂಟ್ ಆದದ್ದು. ನಾವು ಓದದ್ದನ್ನು ಇಂದಿನ ಮಕ್ಕಳು ಶಾಲೆಯಲ್ಲಿ ಅದೇನು ಓದುತ್ತಾರೋ, ನನಗಂತೂ ತಿಳಿಯುತ್ತಿಲ್ಲ. ನಮ್ಮ ಪದ್ಯಗಳೆಂದರೆ, ‘ಕರಡಿಯ ಕುಣಿತ, ಅಣ್ಣನು ಮಾಡಿದ ಗಾಳಿಪಟ, ಹೂವನು ಮಾರುತ ಬರುವ ಹೂವಾಡಗಿತ್ತಿ, ಹಿಂದಿ ಭಾಷೆಯ ಇತನಿ ಪ್ಯಾರೀ, ತಿತಲಿ ರಾಣಿ, ಒಂದು ಕಾಡಿನ ಮಧ್ಯದೊಳಗೆ’ ಅಷ್ಟೆ.

ಇಂತಹ ನೂರಾರು ಪದ್ಯಗಳು ಶಾಲೆಗೆ ಹೋಗುವ ಮುನ್ನವೇ ಮಕ್ಕಳ ಬಾಯಿಯಲ್ಲಿ ಬರುತ್ತಿರುತ್ತವೆ. ಇಷ್ಟೆಲ್ಲ ಮುಂದುವರಿದ ಶಿಕ್ಷಣ ಪದ್ಧತಿಯಿದ್ದರೂ, ಯಾರಿಗೂ ಕೆಲಸ ಸಿಗುತ್ತಿಲ್ಲವೇಕೆ? ಸಿಕ್ಕರೂ ಸಂಬಳ ಸಾಕಾಗುತ್ತಿಲ್ಲ. ನಾವು ಅಂದುಕೊಂಡಂತೆ ಶಿಕ್ಷಣ ವ್ಯವಸ್ಥೆ ಮೇಲ್ದರ್ಜೆಗೆ ಏರಿರುವುದು ಕೇವಲ ಹೊರಗಿನ ಹಾಗೂ ಒಳಗಿನ ಥಳುಕು-ಬಳಕಿನ ಬಿಲ್ಡಿಂಗ್‌ನಿಂದ ಮಾತ್ರ. ಶಿಕ್ಷಣ ಪದ್ಧತಿಯಲ್ಲಿ ಮೇಲ್ದರ್ಜೆಗೆ ಹೋಗಿಯೇ ಇಲ್ಲ. ಒಬ್ಬ ವಿದ್ಯಾರ್ಥಿಯ ನಿಜವಾದ ಬುದ್ಧಿವಂತಿಕೆಯ ಪರೀಕ್ಷೆ ಆಗುತ್ತಿಲ್ಲ. ಕೇವಲ ಶಾಲೆಯಲ್ಲಿ ಶಿಕ್ಷಕರು ಬಂದು ಪಾಠ ಮಾಡುತ್ತಾರೆ. ಅವನಿಗೆ ಅರ್ಥವಾಯಿತೋ, ಇಲ್ಲವೋ ಎಂದು ಸರಿಯಾಗಿ ತಿಳಿಯುವುದಿಲ್ಲ. ತಿಂಗಳಿಗೊಮ್ಮೆ , ವರ್ಷಕ್ಕೊಮ್ಮೆ ನಡೆಯುವ ಪರೀಕ್ಷೆಯಲ್ಲಿ ಅವನು ಸರಿಯಾದ ಉತ್ತರ ಬರೆಯದಿದ್ದರೂ, ಆತನನ್ನು ಪಾಸ್ ಮಾಡಿರುತ್ತಾರೆ. ಕಾರಣವಿಷ್ಟೇ, ಸರಕಾರದ ನಿಯಮ. ಸರಕಾರದ ನಿಯಮಾನುಸಾರ 9ನೇಯ ತರಗತಿಯವರೆಗೆ ಫೇಲ್ ಮಾಡಲೇಬಾರದು. ಸತತವಾಗಿ ಒಂಬತ್ತು ವರ್ಷ ಸೋಲಿನ ರುಚಿಯನ್ನೇ ತೋರಿಸದೇ, ಒಮ್ಮೆಲೆ ಹತ್ತನೇಯ ತರಗತಿಯಲ್ಲಿ ಅಪ್ಪಿ ತಪ್ಪಿ ಫೇಲ್ ಆದರೆ, ಆ ವಿದ್ಯಾರ್ಥಿಯ ಮನಸ್ಸಿನ ಮೇಲೆ ಅದು ಪರಿಣಾಮ ಬೀರುವುದು ನಿಶ್ಚಿತ. ಆಗ ಮನನೊಂದು ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈಹಾಕುತ್ತಾರೆ.

ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ. ಪ್ರತಿಯೊಂದು ತರಗತಿಯಲ್ಲಿಯೂ, ಪರೀಕ್ಷೆಗಳು ನಡೆಯುತ್ತಿದ್ದವು. ಅವನು 3ನೇ ತರಗತಿಯಾದರೂ ಸರಿ, ಆರನೇ ತರಗತಿ ಆದರೂ ಸರಿ ಫೇಲ್ ಮಾಡಬೇಕೆಂದರೆ, ಫೇಲ್ ಮಾಡುತ್ತಿದ್ದರು. ಈಗ ನೋಡಿ, ಯಾರನ್ನಾದರೂ ಕೇಳಿ. ಶೇ.90 ಕ್ಕಿಂತ ಕಡಿಮೆ ಅಂಕ ಬಂದಿದೆ ಅನ್ನುವವರು ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಕಾಲದಲ್ಲಿ ಶೇ.90ರಷ್ಟು ಅಂಕ ಬಂದಿದೆಯೆಂದರೆ, ಅವನು ಗ್ರೇಟ್ ಅಂತಿತ್ತು. ಈಗ ಎಲ್ಲರೂ ತೆಗೆಯುತ್ತಾರೆ. ಈ ಶಾಲೆಗಳೂ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿವೆ. ಸುಮ್ಮನೆ ಮಕ್ಕಳನ್ನು ಪಾಸ್ ಮಾಡಿ, ಹೆಚ್ಚೆಚ್ಚು ಅಂಕಗಳನ್ನು ನೀಡಿ, ತಮ್ಮ ಶಾಲೆಯ ಇಂತಿಷ್ಟು ಮಕ್ಕಳು ಶೇ.90ರಷ್ಟು ಅಂಕ ಪಡೆದ ಮಕ್ಕಳೆಂದು ಮಕ್ಕಳ ಫೋಟೊ ಸಹಿತ ಶಾಲೆಯ ಮುಂದೆ ಬ್ಯಾನರ್‌ಗಳನ್ನು ಹಾಕಿ, ಪಾಲಕರಿಂದ ಫೀಸು ಕಿತ್ತುಕೊಂಡು ನಾವು ಅದು ಕೊಡುತ್ತೇವೆ, ಇದು ಕೊಡುತ್ತೇವೆಂದು ಹೇಳುವುದಷ್ಟೆ. ಇದರ ಜತೆಗೆ ಶಿಕ್ಷಣ ಮಂತ್ರಿಯಿಂದ, ಜಿಲ್ಲೆಯ ಸಿಇಒ ಗಳಿಗೆ ಬೇರೆ ಆಜ್ಞೆಯಿರುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಫಲಿತಾಂಶಗಳು ಬರಬೇಕು. ಫೇಲಾಗುವವರ ಅತಿ ಕಡಿಮೆಯಿರಬೇಕು ಎಂಬೆಲ್ಲ ಸಂದೇಶಗಳು ಬಂದಿರುತ್ತವೆ.

ಇಷ್ಟೇ ಸಾಕು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೇಪರ್‌ಗಳನ್ನು ತುಂಬಾ ಸುಲಭ ಮಾಡುವುದು ಅಥವಾ ಪೇಪರಿನ ಮೌಲ್ಯಮಾಪನವನ್ನು ಬಹಳ ಸರಳಗೊಳಿಸುವುದು ಅಥವಾ ಕೊನೆಯ ಅರ್ಧ ಗಂಟೆ ಕಾಲ ಕಾಪಿ ಮಾಡಲು ಬಿಡುವುದು ಮುಂತಾದ ಅನಾಚಾರ ಮಾಡಲು. ಇದರಿಂದ ಎಲ್ಲರಿಗೂ ಶೇ.90ರಷ್ಟು ಅಂಕಗಳು, ಎಲ್ಲರೂ ಪಾಸ್. ಶಿಕ್ಷಣ ಮಂತ್ರಿಗೂ ಒಳ್ಳೆಯ ಹೆಸರು, ಜಿಲ್ಲೆಯ ಸಿಇಒ ಗೂ ಒಳ್ಳೆಯ ಹೆಸರು.

ಹಿಂದಿನ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ. ಎಸ್‌ಎಸ್‌ಎಲ್‌ಸಿ ಜೀವನವನ್ನೇ ಬದಲಿಸುವ ಒಂದು ಪರೀಕ್ಷೆಯಾಗಿತ್ತು. ಹೆಣ್ಣು ಮಕ್ಕಳಿಗಂತೂ ಹತ್ತನೇ ತರಗತಿ ಪಾಸಾದರೆ ಮದುವೆ ಪ್ರಸ್ತಾಪಗಳಲ್ಲಿ ಡಿಮ್ಯಾಂಡ್, ಫೇಲಾದರೆ ನೋ ಡಿಮ್ಯಾಂಡ್. ಇನ್ನು ಹುಡುಗರ ವಿಷಯದಲ್ಲಿ ಅಪ್ಪ-ಅಮ್ಮನ ಮೈಂಡ್ ಫಿಕ್‌ಸ್ ಆಗಿರುತ್ತಿತ್ತು. ಜಸ್‌ಟ್ ಪಾಸ್ ಆದನೆಂದರೆ, ಅವನನ್ನು ಐಟಿಐ ಅಥವಾ ಡಿಪ್ಲೊಮಾಗೆ ಸೇರಿಸಿ ತರಬೇತಿಯನ್ನು ಮುಗಿಸಿ, ನಂತರ ಯಾವುದಾದರೂ ಕಾರ್ಖಾನೆಗಳಲ್ಲಿ ಕೆಲಸಕ್ಕೆ ಸೇರಿಸುವುದು. ಎರಡನೇ ಅಥವಾ ಮೂರನೇ ದರ್ಜೆಯಲ್ಲಿ ಪಾಸಾದರೆ, ಕಲಾ ವಿಭಾಗಕ್ಕೆ ರವಾನಿಸುವುದು. ಅಲ್ಲಿ ಪತ್ರಿಕೋದ್ಯಮ ಅಥವಾ ಶಿಕ್ಷಕ ಕೋರ್ಸ್‌ಗಳನ್ನು ಮಾಡಿ, ಅವರು ಜೀವನ ರೂಪಿಸಿಕೊಳ್ಳುತ್ತಿದ್ದರು. ಇನ್ನು ಶೇ.70ರಷ್ಟು ಅಂಕ ಪಡೆದವರು, ವಾಣಿಜ್ಯ ವಿಭಾಗದಲ್ಲಿ ಸೇರಿಕೊಂಡು ಯಾವುದಾದರೂ ಅಕೌಂಟೆಂಟ್ ಅಥವಾ ಎಂಬಿಎ ರೀತಿಯ ಕೋರ್ಸ್‌ಗಳನ್ನು ಮಾಡಿ ಜೀವನ ರೂಪಿಸಿಕೊಳ್ಳುತ್ತಿದ್ದರು. ಹಾಗೇ ಶೇ.85ರಷ್ಟು ಅಂಕ ಪಡೆದವರು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ, ಡಾಕ್ಟರ್, ಎಂಜಿನಿಯರ್ ಅಥವಾ ವಿಜ್ಞಾನಿಗಳಾಗುತ್ತಿದ್ದರು.

ಹಿಂದೆ ಸಮಾಜದಲ್ಲಿ ಈ ರೀತಿಯ ಒಂದು ಸಮತೋಲನವಿತ್ತು. ಮುಂದೆ ಇವರೆಲ್ಲರೂ ಸೇರುವ ಕಂಪನಿಗಳಲ್ಲಿಯೂ ಅಷ್ಟೆ. ಇಷ್ಟೇ ಕರಾರುವಾಕ್ಕಾಗಿ ಮುಂದೆ ಬೆಳೆಯುತ್ತ ಹೋಗುತ್ತಿದ್ದರು. ಮದುವೆಯ ವಿಚಾರದಲ್ಲಿಯೂ, ಅವರವರ ಕೆಲಸಕ್ಕೆ ಅನುಗುಣವಾಗಿ ವಧು-ವರರ ಜೋಡಿಯಾಗುತ್ತಿತ್ತು. ಆದ್ದರಿಂದಲೇ ಹಿಂದಿನ ಕಾಲದವರ ಸಂಸಾರದಲ್ಲಿ ಅಷ್ಟೊಂದು ಅನೋನ್ಯತೆ ಇರುತ್ತಿತ್ತು. ಒಬ್ಬರು, ಮತ್ತೊಬ್ಬರ ಸಾಧನೆಯನ್ನು ಗೌರವಿಸಿ ಬದುಕುತ್ತಿದ್ದರು. ಜತೆಗೆ ಹಾಸಿಗೆ ಇದ್ದಷ್ಟು ಕಾಲನ್ನು ಚಾಚುತ್ತಿದ್ದರು. ಆದರೆ ಈಗ ಯಾರನ್ನೇ ಕೇಳಿ ಶೇ.90 ಅಂತಲೇ ಹೇಳುವುದು. ಅಲ್ಲ, ಶಾಲೆಗಳಲ್ಲಿ ಶೇ.50ರಷ್ಟು ಅಂಕ ಗಳಿಸಿ ಒಂದು ಕಾರ್ಖಾನೆಯಲ್ಲಿ ಸಾಮಾನ್ಯವಾಗಿ ಕೆಲಸ ಮಾಡುವ ಅರ್ಹತೆ ಇರುವವನಿಗೆ ಶೇ.90ರಷ್ಟು ಅಂಕ ನೀಡಿ, ತೇರ್ಗಡೆಗೊಳಿಸಿದರೆ ಅವನಿಗೆ ಆಫೀಸರ್ ನೀಡಲಾದೀತೇ? ಒಂದು ಕತ್ತೆಗೆ ಬಣ್ಣ ಬಳಿದು ನಿಲ್ಲಿಸಿದಾಕ್ಷಣ ಅದನ್ನು ಕುದುರೆ ಎಂದು ಹೇಳಲಾದೀತೆ? ಈ ಹೇಳಿಕೆ ತುಂಬಾ ಖಾರವಾಗಿ ಕೇಳಬಹುದು, ಆದರೆ ಇದುವೇ ಇಂದಿನ ನೈಜ ಚಿತ್ರಣ. ವಿಧಿಯಿಲ್ಲದೇ ಬರೆಯಬೇಕಾಗಿದೆ. ಬದಲಾಗಿ, ಇಂತಹ ವಿದ್ಯಾರ್ಥಿಯ ಅರ್ಹತೆಯನ್ನು ಅಲ್ಲಿಯೇ ಕಟ್ ಮಾಡಿದ್ದರೆ, ಆತನ ನಿರೀಕ್ಷೆಗಳು ಹೆಚ್ಚಾಗುತ್ತಿರಲಿಲ್ಲ.

ಆತನು ಯಾವುದಾದರೂ ಕಾರ್ಖಾನೆಯನ್ನು ಸೇರಿಕೊಂಡು ಅಲ್ಲಿಯೇ ಕೆಲಸವನ್ನು ಮಾಡುತ್ತಿದ್ದ. ಆ ಸಂಬಳಕ್ಕೆ ತಕ್ಕಂತೆ ತನ್ನ ಜೀವನಶೈಲಿಯನ್ನು ರೂಪಿಸಿಕೊಳ್ಳುತ್ತಿದ್ದ. ಅದನ್ನು ಬಿಟ್ಟು ಆತನನ್ನು ಮೇಲಕ್ಕೇರಿಸಿದರೆ, ನಿರೀಕ್ಷೆಗಳೂ ಹೆಚ್ಚಾಗುತ್ತವೆ. ಆದರೆ ಕೆಲಸಕ್ಕೆ ತಕ್ಕಂತಹ ಸಾಮರ್ಥ್ಯವೇ ಅವನಲ್ಲಿ ಇರುವುದಿಲ್ಲ. ಹಾಗಾಗಿ ಅವನಿಗೆ ತನ್ನ ನಿರೀಕ್ಷೆಗೆ ತಕ್ಕ ಕೆಲಸಗಳು ಸಿಗುವುದೇ ಇಲ್ಲ. ಸಂಬಳವೂ ಅಷ್ಟೇ, 10-15 ಸಾವಿರ ದಾಟುವುದಿಲ್ಲ. ಆಗ, ‘ಕೆಲಸ ಸಿಕ್ಕಿಲ್ಲ, ಸಿಕ್ಕಿದ ಕೆಲಸದಲ್ಲಿ ತನ್ನ ವಿದ್ಯೆಗೆ ತಕ್ಕಂತಹ ಸಂಬಳ ಸಿಗುತ್ತಿಲ್ಲ’ ಎಂದು ಗಲಾಟೆ ಮಾಡುವುದು. ಶಾಲೆಗಳು ತಮ್ಮ ವ್ಯವಹಾರ ವೃದ್ಧಿಸಿಕೊಳ್ಳಲು ಮಾಡುತ್ತಿರುವ ಇಂತಹ ‘ಕೈಂಕರ್ಯ’ಗಳ ಬಗ್ಗೆ ಸರಕಾರಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅಂತ್ಯವಾಗುವುದಿಲ್ಲ. ಬಾಯಿಯಲ್ಲಿ ನೋಡಿದರೂ ಈ ದಿನಗಳಲ್ಲಿ ನಿರುದ್ಯೋಗದ್ದೇ ಮಾತು.

ಮನೆಯ ನಲ್ಲಿ ಕೆಟ್ಟು ಹೋದರೆ, ಒಬ್ಬ ಪ್ಲಂಬರ್ ಸಿಗುವುದಿಲ್ಲ, ವಿದ್ಯುತ್ ಸಮಸ್ಯೆಯಾದರೆ ಎಲೆಕ್ಟ್ರಿಷಿಯನ್ ಸಿಗುವುದಿಲ್ಲ, ಹಲವಾರು ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರೇ ಇಲ್ಲ. (ಕರ್ನಾಟಕದಲ್ಲಿಯೇ ಸುಮಾರು 24,000 ಶಾಲೆಗಳಲ್ಲಿ ಶಾಲೆಗೊಬ್ಬನೇ ಶಿಕ್ಷನಿದ್ದಾನೆ.) ಕರೆದೆಡೆಗೆ ಆಟೋದವರು ಬರುವುದಿಲ್ಲ, ಓಲಾ, ಊಬರ್‌ನವರು ಅಷ್ಟೇ, ದಿನಕ್ಕೆ 6ಕ್ಕಿಂತಲೂ ಹೆಚ್ಚು ಟ್ರಿಪ್‌ಗಳನ್ನು ಮಾಡುವುದಿಲ್ಲ. ಹೋಟೆಲ್‌ಗಳಲ್ಲಿ ಕೆಲಸ ಮಾಡಲು ಹುಡುಗರು ಸಿಗುತ್ತಿಲ್ಲ, ಐಟಿ ಕಂಪನಿಗಳಿಗೆ ಎಂಜಿನಿಯರ್‌ಗಳು ಸಿಗುತ್ತಿಲ್ಲ. ಅಡಿಕೆ ಕೀಳಲು ಕೂಲಿಯವರು ಸಿಗುತ್ತಿಲ್ಲ, ಮನೆಕಟ್ಟಲು ಜನರು ಸಿಗುತ್ತಿಲ್ಲ, ವಕೀಲರಿಗೆ ಜ್ಯೂನಿಯರ್‌ಗಳೂ ಸಿಗುತ್ತಿಲ್ಲ, ಹಲವಾರು ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳಿಲ್ಲ, ಅಕೌಂಟಿಂಗ್ ಕೆಲಸ ಮಾಡಲು ಹುಡುಗರು ಸಿಗುತ್ತಿಲ್ಲ. ಹಾಗಾದರೆ ಎಲ್ಲಿಯ ನಿರುದ್ಯೋಗದ ಸಮಸ್ಯೆ? ಯಾರನ್ನು ಕೇಳಿದರೂ ಸಹ ಹುಡುಗರು ಸಿಗುತ್ತಿಲ್ಲವೆಂದು ಮಾತ್ರವೇ ಹೇಳುತ್ತಾರೆ. ಸಮಸ್ಯೆ ಇರುವುದು ನಿರುದ್ಯೋಗದಲ್ಲಲ್ಲ, ಶಿಕ್ಷಣ ವ್ಯವಸ್ಥೆಯ ಅಸಮತೋಲನದಲ್ಲಿ. ಸರಿಯಾದ ಅರ್ಹತೆ-ಆಧಾರದ ಮೇಲೆ ಫಲಿತಾಂಶವನ್ನು ನೀಡದೆ, ಎಲ್ಲ ವಿದ್ಯಾರ್ಥಿಗಳನ್ನು ಒಂದೇ ರೀತಿಯ ವರ್ಗದೆಡೆಗೆ ತಳ್ಳಿ ಹಾಳು ಮಾಡಲಾಗುತ್ತಿದೆ.

ಕಾಲೇಜು ಮಕ್ಕಳ ಮನಸ್ಸಿನಲ್ಲಿ ತಾವು ಏನೋ ಸಾಧಿಸಿಬಿಟ್ಟೆವೆಂಬ ಅಹಂಕಾರವನ್ನು ಈ ಅಂಕಗಳ ಮೂಲಕ ತುಂಬಲಾಗುತ್ತಿದೆ. ಇದರ ನೇರ ಪರಿಣಾಮವು ಕೆಲಸದ ಮೇಲೆ ಮಾತ್ರವಲ್ಲದೇ, ಸಾಂಸಾರಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಗಂಡ ತಾನು ಏನೋ ಸಾಧಿಸಿದ್ದೇನೆಂಬ ಅಹಂನಲ್ಲಿದ್ದರೆ, ಹೆಂಡತಿಯೂ ಸಹ ಅದೇ ಅಹಂನಲ್ಲಿರುತ್ತಾಳೆ. ಇಬ್ಬರಿಗೂ ದಿನನಿತ್ಯ ಜಗಳ. ಮದುವೆಯಾದ ಆರು ತಿಂಗಳಿಗೇ ವಿಚ್ಛೇದನ. ನಿಜವಾಗಿಯೂ ಕಷ್ಟ, ಪರಿಶ್ರಮ, ಸಾಮರ್ಥ್ಯದಿಂದ ಶೇ.90ರಷ್ಟು ಅಂಕ ಪಡೆದವರು ಹಾಗೂ ಶಾಲೆಗಳ ಮೂರ್ಖತನದಿಂದ ಶೇ.90ರಷ್ಟು ಅಂಕ ಜೋಡಿಗಳಾದರಂತೂ ಈ ಸಮಸ್ಯೆಉಲ್ಬಣಗೊಳ್ಳುತ್ತದೆ. ಚಿನ್ನ ಹಾಗೂ ಕಬ್ಬಿಣವನ್ನು ತಾಳೆ ಮಾಡಿ, ಕಬ್ಬಿಣಕ್ಕೆ ಚಿನ್ನದ ಲೇಪನ ಹಾಕಿ ಜೋಡಿ ಮಾಡಿದಾಗ, ಪಾಪ ನಿಜವಾಗಿ ಚಿನ್ನವೇ ಅನುಭವಿಸಬೇಕಾಗುತ್ತದೆ.

ಇನ್ನು ನಮ್ಮ ಶಾಲಾ ಪಠ್ಯಪುಸ್ತಕಗಳು ಸಹ ಹಾಗೆಯೇ ಇವೆ. ಈಗಲೂ ಅದ್ಯಾವುದೋ ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರದ ಹಳೆಯ ವಿವರಗಳೇ ಹೊರತು ಮಕ್ಕಳಿಗೆ ಜೀವನ ಶೈಲಿಯನ್ನು ಕಲಿಸಿಕೊಡುವಂತಹ ವಿಷಯಗಳೇ ಇರುವುದಿಲ್ಲ. ಶಿಕ್ಷಕರೂ ಸಹ ಹಾಗೆಯೇ ಇದ್ದಾರೆ. ಏನೂ ಹೇಳಿಕೊಡುವುದಿಲ್ಲ. ಅದರಲ್ಲಿಯೂ ಅಪ್ಪಿ-ತಪ್ಪಿ ಮಕ್ಕಳಿಗೆ ಶಿಕ್ಷಕರು ಬೈದರೆ ಅಥವಾ ಹೊಡೆದರೆ, ಮುಗಿದೇ ಹೋಯ್ತು. ಪೋಷಕರು ಸಿಡಿದೆದ್ದು ಬರುತ್ತಾರೆ. ಇಡೀ ಮಾಧ್ಯಮ ಮಿತ್ರರೆಲ್ಲರೂ ಕ್ಯಾಮೆರಾ ಹಿಡಿದು ಶಾಲೆಯ ಮುಂದೆ ಜಮಾಯಿಸುತ್ತಾರೆ.

ನಮಗೆಲ್ಲ ಹಾಗಿರಲಿಲ್ಲ. ಅವರು ಹೊಡೆದರೆ ನಮ್ಮ ಅಪ್ಪ-ಅಮ್ಮ ಶಾಲೆಗೆ ಬಂದು ಇನ್ನು ನಾಲ್ಕು ಹಾಕಿ ಎಂದು ಹೇಳುತ್ತಿದ್ದರು. ನಮಗೆಲ್ಲ ಏನೂ ಆಗಲೇ ಇಲ್ಲ. ಹಾಗಾದರೆ ನಾವು ಜೀವನದಲ್ಲಿ ಉದ್ಧಾರವಾಗಲೇ ಇಲ್ಲವೇ? ತಗ್ಗಿ ಬಗ್ಗಿ ನಡೆಸಬೇಕಾದ ವಯಸ್ಸಿನಲ್ಲಿ ಪೋಷಕರು ತಾವೂ ಬಗ್ಗಿಸದೇ, ಶಾಲೆಯ ಶಿಕ್ಷಕರಿಗೂ ಬಗ್ಗಿಸಲೂ ಬಿಡದೇ, ದಿನ ವಯಸ್ಸಿಗೆ ಬಂದ ಮೇಲೆ ಮಕ್ಕಳು ಕುಡಿತ, ಸಿಗರೇಟು, ಗಾಂಜಾ ಎಂದು ಶುರು ಮಾಡಿದಾಗ, ಹಣೆ ಚಚ್ಚಿಕೊಂಡರೆ ಪ್ರಯೋಜನವಿಲ್ಲ.

ಕಳೆದ ವರ್ಷ ನಾನು ಯುರೋಪಿನ ಸ್ವಿಟ್ಜರ್‌ಲ್ಯಾಂಡ್ ದೇಶದ ಜ್ಯೂರಿಕ್ ನಗರಕ್ಕೆ ತೆರಳಿದ್ದಾಗ, ಅಲ್ಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದೆ. ಮೃಗಾಲಯವನ್ನು ವೀಕ್ಷಿಸಲು ಒಂದು ಶಾಲೆಯಿಂದ ಸುಮಾರು 25 ಮಕ್ಕಳು ಬಂದಿದ್ದರು. ಅವರೆಲ್ಲರೂ ಒಂದೆಡೆ ಕುಳಿತು ತಿಂಡಿಯನ್ನು ತಿನ್ನುತ್ತಿದ್ದರು. ನಾವು ಅವರಲ್ಲಿ ಕೆಲವರನ್ನು ಮಾತಾಡಿಸಿಕೊಂಡು ಹಾಗೆಯೇ ಮುಂದೆಹೋಗಿ ವಾಪಸ್ ಬಂದೆವು. ಆಗ ಆ ಮಕ್ಕಳಿರಲಿಲ್ಲ. ಜತೆಗೆ ತಾವು ತಿಂಡಿ ತಿಂದು ಮುಗಿಸಿದ ಮೇಲೆ ಆ ಜಾಗವನ್ನು ಎಷ್ಟು ಅಚ್ಚುಕಟ್ಟಾಗಿ ಶುದ್ಧಗೊಳಿಸಿದ್ದರೆಂದರೆ, ಒಂದು ಸಣ್ಣ ಕುರುಹೂ ಇರಲಿಲ್ಲ. ಪ್ಲಾಸ್ಟಿಕ್ ಕವರ್, ಬಾಟಲಿಗಳು ಅಲ್ಲಿ ಕಾಣಲಿಲ್ಲ. ಅಷ್ಟಕ್ಕೂ ಅವರೆಲ್ಲರೂ 6-8 ವರ್ಷದೊಳಗಿನ ಮಕ್ಕಳು. ಮಕ್ಕಳಿಗೆ ನಿಜವಾಗಿಯೂ ಕಲಿಸಬೇಕಿರುವುದು ಇದೇ ತಾನೆ? ನಮ್ಮಲ್ಲಿಯೋ, ಸ್ವತಃ ಅಪ್ಪನೇ ಮಗನನ್ನು ಕೈಹಿಡಿದುಕೊಂಡು, ಕೆಂಪು ಸಿಗ್ನಲ್ ಇದ್ದಾಗ ಓಡಿ ಓಡಿ ಸಿಗ್ನಲ್ ದಾಟುತ್ತಾನೆ. ಎದುರಿಗೆ ಸಿಕ್ಕವರಿಗೆ ಒಂದು ನಮಸ್ಕಾರ ಹೇಳುವ ಬೆಳೆಸಿಕೊಂಡಿಲ್ಲ. ಒಂದು ಕಿರುನಗೆ ಬೀರುವುದಿಲ್ಲ. ಪುಸ್ತಕಗಳಲ್ಲಿ ಇಂತಹ ವಿಚಾರಗಳನ್ನೂ ಸಹ ಹೇಳಿಕೊಡಬೇಕಿದೆ.

ಮೊದಲು ಸರಿಮಾಡಬೇಕಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು. ಅದನ್ನು ಬಿಟ್ಟು ಯಾವ ಕೌಶಲಾಭಿವೃದ್ಧಿಯನ್ನು ಮಾಡಿದರೂ ಏನೂ ಪ್ರಯೋಜನವಿಲ್ಲ. ಸುಮ್ಮನೆ ಹಣವೂ ಹಾಳು, ಸಮಯವೂ ಹಾಳು. ಸಮಸ್ಯೆ ಇರುವುದು ಬೇರಿನಲ್ಲಿ. ಮೊದಲು ಬೇರನ್ನು ಗಟ್ಟಿ ಗೊಳಿಸಬೇಕು. ಇಂದಿಗೂ ಹತ್ತರಲ್ಲಿ ಒಬ್ಬ ಒಳ್ಳೆಯ ಶಿಕ್ಷಕರಿದ್ದಾರೆ. ಆದರೆ ವ್ಯವಸ್ಥೆಯು ಅವರನ್ನು ಸರಿಯಾದ ರೀತಿಯಲ್ಲಿ ಪಾಠ ಮಾಡಲು ಬಿಡುತ್ತಿಲ್ಲ.

ಕಳೆದ ವಾರ ಮಂಡ್ಯ ಪಾಂಡವಪುರದಲ್ಲಿ ಒಬ್ಬ ಶಿಕ್ಷಕರು ಇದೇ ಅಳಲನ್ನು ತೋಡಿಕೊಂಡು ಅರ್ಹತೆ ಇಲ್ಲದವನನ್ನು ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಪಾಸು ಮಾಡಬೇಕಾದಂತಹ ಪರಿಸ್ಥಿತಿ ತಮ್ಮದು ಎಂದಾಗ ತುಂಬಾ ಬೇಸರವಾಯ್ತು.

ವೋಟ್ ಮಾಡುವ ಅರ್ಹತೆ ಪಡೆದುಕೊಳ್ಳುವ ಘಟ್ಟದಲ್ಲಿ ಚುನಾವಣೆಯಲ್ಲಿ ಮತದಾನ ಮಾಡುವ ಮುನ್ನ ಅಭ್ಯರ್ಥಿ ಆಯ್ಕೆಯನ್ನು ಹೇಗೆ ಮಾಡಬೇಕೆಂಬ ಸಾಮಾನ್ಯ ಶಿಕ್ಷಣವನ್ನು ಸಹ ಮಕ್ಕಳಿಗೆ ಹೇಳಿಕೊಟ್ಟಿಲ್ಲ. ಇದೆಂತಹ ಶಿಕ್ಷಣದ ವ್ಯವಸ್ಥೆಯೋ ದೇವರೇ ಬಲ್ಲ. ಶೈಕ್ಷಣಿಕ ಅಸಮತೋಲನವನ್ನು ಸರಿಪಡಿಸಿದರೆ ಸಾಕು, ಸಮಾಜದ ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ. ಅದಕ್ಕಿರುವುದೊಂದೇ ದಾರಿ, ಪಠ್ಯಪುಸ್ತಕಗಳ ಗುಣಮಟ್ಟವನ್ನು ಹೆಚ್ಚಿಸಿ, ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಮಾಡಿ, ಮೌಲ್ಯಮಾಪನವನ್ನೂ ಸಹ ತುಂಬಾ ಕಟ್ಟುನಿಟ್ಟಾಗಿ ಮಾಡಬೇಕು. ಆ ಮೂಲಕ ಫೇಲ್ ಆಗುವಂತಹವರನ್ನು ಫೇಲ್ ಮಾಡಲೇಬೇಕು!

Tags

Related Articles

Leave a Reply

Your email address will not be published. Required fields are marked *

Language
Close