ವಿಶ್ವವಾಣಿ

ಇಸ್ರೇಲಿ ತಂತ್ರಜ್ಞಾನ ತರುವ ಮೊದಲು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕಿದೆ

ಭಾರತವೆಂದರೆ ಎಲ್ಲರ ಮನಸ್ಸಿಗೂ ಬರುವುದು ಕೃಷಿ ಎಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಪೂರ್ವದಿಂದಲೂ ಅಷ್ಟೇ. ಭಾರತದ ಬಗ್ಗೆ  ಪಾಶ್ಚಿಮಾತ್ಯ ದೇಶಗಳ ನಿಲುವು ಕೂಡ ಅದೊಂದು ಕೃಷಿ ಪ್ರಧಾನ ದೇಶ ಎಂದಿದೆಯೇ ಹೊರತು ಮತ್ತೇನೂ ಅಲ್ಲ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಕೃಷಿ ಕೇವಲ ಬಡ ವರ್ಗದ ರೈತನ ಪಾಲಾಗದೇ ಶ್ರೀಮಂತ ವರ್ಗ ಹಾಗೂ ವಿದ್ಯಾವಂತರ ವಲಯದಲ್ಲೂ ಭಾರೀ ಸದ್ದು ಮಾಡುತ್ತಿದೆ. ಎಷ್ಟೋ ಜನ ಎಂಜಿನಿಯರ್‌ಗಳು, ಡಾಕ್ಟರ್‌ಗಳು, ವಕೀಲರು, ನಿವೃತ್ತ ಅಽಕಾರಿಗಳು ಸಹ ಕೃಷಿ ಚಟುವಟಿಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟು ರೈತರಾಗಿಬಿಟ್ಟಿದ್ದಾರೆ.

ಅದರಲ್ಲಿಯೂ ಎಲ್ಲರ ತಲೆಯಲ್ಲಿ ಇರುವುದು ಇಸ್ರೇಲ್ ಮಾದರಿಯ ಕೃಷಿ ಪದ್ಧತಿ. ಎಲ್ಲರೂ ನಮ್ಮ ರಾಷ್ಟ್ರ, ಇಸ್ರೇಲ್ ಮಾದರಿಯ ಕೃಷಿ ನೀತಿಯನ್ನು ಅನುಸರಿಸಲಿ ಎಂದು ನೋಡಲಾರಂಭಿಸಿದ್ದಾರೆ; ಹಾಗಿದೆ, ಇಸ್ರೇಲ್ ಎಂಬ ಚಿಕ್ಕ ಮರುಭೂಮಿ ರಾಷ್ಟ್ರ ಕೃಷಿಯಲ್ಲಿ ಮಾಡಿರುವ ಕ್ರಾಂತಿ.

 ಇಷ್ಟೆಲ್ಲಾ ಕ್ರಾಂತಿ ಮಾಡಿರುವ ಇಸ್ರೇಲಿಗರ ಮಾದರಿಯನ್ನು ನಾವು ನಿಜವಾಗಿಯೂ ಭಾರತದಲ್ಲಿ ಅಳವಡಿಸಿಕೊಳ್ಳಲಾದೀತೆ? ಅಳವಡಿಸಿಕೊಂಡರೂ ಅವರ ರೀತಿಯ ಬೆಳವಣಿಗೆಗಳು ನಮ್ಮಲ್ಲಿ ಆದೀತೆ ಎಂಬುದೇ ಪ್ರಶ್ನೆ.

ಪ್ರಧಾನಿ ನರೇಂದ್ರ ಮೋದಿಯವರು ಸಹ ಇಸ್ರೇಲ್ ಪ್ರವಾಸ ಮಾಡಿದ್ದಾಯಿತು. ಹಾಗೂ ನಮ್ಮ ಮುಖ್ಯಮಂತ್ರಿಗಳೂ  ಕೂಡ ಇಸ್ರೇಲ್ ಪ್ರವಾಸ ಮಾಡಿದರು. ಇಷ್ಟಾದ ಮೇಲೂ ಹೇಳಿಕೊಳ್ಳುವಂತಹ ಕ್ರಾಂತಿಕಾರಕ ತಂತ್ರಜ್ಞಾನ ಮಾದರಿಯ ಕೃಷಿಯ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿದಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿಯೇನೋ ರಾಜ್ಯದ ಆರು ಕಡೆ ಇಸ್ರೇಲ್ ಒಣ ಬೇಸಾಯ ಕೃಷಿ ಮಾಡಲು ಸುಮಾರು ೫೦೦ ಕೋಟಿ ರು. ಹಣವನ್ನೇನೋ ಮಂಜೂರು ಮಾಡಿದರು. ಆದರೆ  ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇನ್ನು ಪ್ರಧಾನಿ ನರೇಂದ್ರ ಮೋದಿಯೂ ರೈತರ ಆದಾಯವನ್ನು ದ್ವಿಗುಣ ಮಾಡುತ್ತೇನೆಂದು ಬಂದವರು. ಕನಿಷ್ಠ ಬೆಂಬಲ ಬಲೆಯನ್ನು ಏರಿಸಿ ರೈತರಿಗೆ ಒಳ್ಳೆಯದನ್ನು ಮಾಡಿದರು ಎಂಬುದನ್ನು ಒಪ್ಪಿಕೊಳ್ಳಬೇಕು. ಆದರೆ ದ್ವಿಗುಣ ಆಗಬೇಕಿರುವುದು ವ್ಯವಸಾಯ ಉತ್ಪನ್ನಗಳೇ ಹೊರತು ಬೇರೇನೂ ಅಲ್ಲ.

 ದೇಶದ ಒಟ್ಟಾರೆ ಜಿಡಿಪಿ ಯಲ್ಲಿ ಕೃಷಿಯ ಪಾಲು ಶೇ. ೧೬ರಷ್ಟಿದೆ. ೨೦೧೭ರ ಅಂಕಿ-ಅಂಶಗಳ ಪ್ರಕಾರ ಕೃಷಿಯ ಜಿಡಿಪಿಯು ೩೬೬ ಶತಕೋಟಿ ಡಾಲರ್‌ನಷ್ಟಿದೆ. ಹಾಗಾದರೆ ದ್ವಿಗುಣ ಆಗಬೇಕಿರುವುದು ಇಲ್ಲಿಯ ರೈತರ ಬೆಲೆಗಳಲ್ಲಿ ಅಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದರೆ ಅದರಿಂದ ರೈತರಿಗೆ ಲಾಭವಾಗುವುದು. ಆದರೆ ಒಬ್ಬರ ಲಾಭ, ಇನ್ನೊಬ್ಬರ ನಷ್ಟವಾಗುತ್ತದೆ. ಭತ್ತ ಬೆಳೆಯುವ ರೈತ ತರಕಾರಿಯನ್ನು ಕೊಂಡುಕೊಳ್ಳಲೇಬೇಕು. ಆತನಿಗೆ ಭತ್ತದ ಮೇಲಿನ ಕನಿಷ್ಠ ಬೆಂಬಲದಿಂದ ಆದ ಲಾಭ, ತರಕಾರಿ ಮೇಲೆ ಏರಿಕೆಯಾದ ನಷ್ಟದಲ್ಲಿ ಕಳೆದುಹೋಗುತ್ತದೆ. ಈ ಕಾರಣದಿಂದಲೇ ಕನಿಷ್ಠ ಬೆಂಬಲ ಬೆಲೆಯ ಏರಿಕೆ ದೂರದೃಷ್ಟಿಯ ಶಾಶ್ವತ ಪರಿಹಾರವಲ್ಲ. ಆದ್ದರಿಂದಲೇ ಉತ್ಪನ್ನಗಳ ಉತ್ಪಾದನೆ ದ್ವಿಗುಣವಾಗಬೇಕು ಎನ್ನುವುದು.

ಈ ಉಪಾಯಗಳು ಹೇಳುವುದಕ್ಕೆ ಚೆನ್ನಾಗಿರುತ್ತವೆ, ಆದರೆ ಅನುಷ್ಠಾನಗೊಳಿಸುವುದು ಮಾತ್ರ ಅಸಾಧ್ಯವೇ ಸರಿ. ಅದರಲ್ಲಿಯೂ ಭಾರತದಂತಹ ರಾಷ್ಟ್ರದಲ್ಲಿ ಉಪಾಯಗಳನ್ನು ನೀಡುವವರಿಗೇನೂ ಕಮ್ಮಿಯಿಲ್ಲ. ಬಿಟ್ಟಿಯಾಗಿ ಉಪಾಯಗಳನ್ನು ನೀಡುವುದೆಂದರೆ, ನಮ್ಮವರಿಗೆ ಹಬ್ಬ. ಉದಾಹರಣೆಗೆ ಚಿತ್ರನಟ ಉಪೇಂದ್ರ. ಇತ್ತೀಚೆಗೆ ರಾಜಕೀಯ ಪ್ರವೇಶಿಸಲು ಹವಣಿಸಿದ ಅವರ ಪಕ್ಷದ ಪ್ರಣಾಳಿಕೆ ನೋಡಿರಂತೂ ದೇವರೇ ಕಾಪಾಡಬೇಕು ಅನ್ನಿಸುತ್ತದೆ. ತೆರೆಯ ಮೇಲೆ ಸಿನಿಮಾ ತೋರಿಸಿದಷ್ಟು ಸುಲಭವಾಗಿ ದೇಶ ಕಟ್ಟುವುದು ಸಾಧ್ಯವಾಗಿದ್ದರೆ, ನಮ್ಮ ದೇಶ ಯಾವತ್ತೋ ಮುಂದುವರಿದ ರಾಷ್ಟ್ರವಾಗಬೇಕಿತ್ತು. ಒಂದಂತೂ ಸತ್ಯ, ನಾವುಗಳು ಹೋದಷ್ಟೂ ಕಾಲ ಹೀಗೆಯೇ ಇರಲು ಸಾಧ್ಯವಿಲ್ಲ. ಬದಲಾವಣೆ ಜಗದ ನಿಯಮ, ಬದಲಾಗಲೇಬೇಕು.

ನಮ್ಮ ದೇಶದ ಕೃಷಿಯಲ್ಲಿ ಕಾಣುವ ಕಂಡ ಅತೀ ಮುಖ್ಯ ಸಮಸ್ಯೆಯೆಂದರೆ, ಹರಿದು ಹಂಚಿಹೋಗಿರುವ ಕೃಷಿಭೂಮಿ ಎಂಬುದು ನನ್ನ ದೃಷ್ಟಿಕೋನ. ಪಾಶ್ಚಿಮಾತ್ಯ ದೇಶಗಳಲ್ಲಿ ನೀವು ಗಮನಿಸಿದರೆ ರೈತರು ಅತೀ ಹೆಚ್ಚಿನ ಪ್ರದೇಶ ಅಂದರೆ ನೂರಾರು ಎಕರೆಗಳಲ್ಲಿ ಸಮೂಹ ಕೃಷಿ ಮಾಡುತ್ತಾರೆ. ಒಬ್ಬೊಬ್ಬ  ರೈತನ ಬಳಿ ಕನಿಷ್ಠವೆಂದರೂ ೨೫ ಎಕರೆಯಿಂದ ೧೦೦ ಎಕರೆಯವರೆಗೂ ಕೃಷಿಭೂಮಿಯಿರುತ್ತದೆ. ಅದೇ ನಮ್ಮ ದೇಶದಲ್ಲಿ ಒಂದು ಎಕರೆಗೆ ಇಬ್ಬರೂ ಮಾಲೀಕರಾಗಿರುತ್ತಾರೆ. ಅರ್ಧ ಎಕರೆಯಲ್ಲಿ ಆಲೂಗಡ್ಡೆ ಬೆಳೆದರೆ, ಇನ್ನರ್ಧ ಎಕರೆಯಲ್ಲಿ ಈರುಳ್ಳಿ ಬೆಳೆದಿರುತ್ತಾರೆ. ಇದರ ಜತೆಗೆ ಒಂದೇ ಎಕರೆಯಲ್ಲಿ ಎರಡು ಬೋರ್‌ವೆಲ್‌ಗಳು ಬೇರೆ. ಬೇಕಿರುವುದು ಒಂದೇ ಬೋರ್‌ವೆಲ್. ಆದರೂ ಎರಡು ಬೋರ್‌ವೆಲ್‌ಗಳಿರುತ್ತವೆ.

ಒಬ್ಬರು ಸಾಲ ತೆಗೆದುಕೊಂಡಿರುತ್ತಾರೆ, ಮತ್ತೊಬ್ಬರು ತೆಗೆದುಕೊಂಡಿರುವುದಿಲ್ಲ. ಉಳುಮೆ ಮಾಡಲು ಎರಡು ಟ್ರ್ಯಾಕ್ಟರ್‌ಗಳು. ಕೂಲಿಯಾಳು, ಖರ್ಚು ಬೇರೆ. ಒಟ್ಟು ಎಲ್ಲವೂ ಬೇರೆ ಬೇರೆ. ಹೀಗಿರುವಾಗ ಉತ್ತಮವಾದ ಬೆಳೆಯನ್ನು ಹೇಗೆ ತಾನೇ ಬೆಳೆಯಲು ಸಾಧ್ಯ?

ಆದರೆ ಬೇರೆ ದೇಶಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಅಲ್ಲಿ ೧೦೦ ಎಕರೆಗೆ ಒಬ್ಬನೇ ಒಡೆಯ. ಅಷ್ಟೂ ಜಾಗದಲ್ಲಿ ಒಂದೇ ರೀತಿಯ ಬೆಳೆಯನ್ನು ಬೆಳೆದು, ಖರ್ಚು ಕಡಿಮೆ ಮಾಡಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಒಳ್ಳೆಯ ಬೆಳೆಯನ್ನು ತೆಗೆಯುತ್ತಾನೆ. ನಮ್ಮಲ್ಲಿ ಈ ರೀತಿಯ ರೈತರ ಸಂಖ್ಯೆ ಬಹಳ ವಿರಳ ಎನ್ನಬಹುದು. ಯಾಕೆಂದರೆ ನಮ್ಮದು ೧೩೫ ಕೋಟಿ ಜನಸಂಖ್ಯೆಯುಳ್ಳ ದೇಶ. ಇಡೀ ಭಾರತದ ಭೂಭಾಗವನ್ನು ಎಲ್ಲರಿಗೂ ಹಂಚಿದರೆ ಒಂದು ೨೦ ಬೈ ೩೦ ಸೈಟು ಪ್ರತಿಯೊಬ್ಬರಿಗೂ ಸಿಗುವುದು ಸಹ ಅನುಮಾನ, ಬಿಡಿ.

ಹಾಗಂತ ನಾವು ಕೈಕಟ್ಟಿ ಕೂಡಲಾಗುವುದಿಲ್ಲ. ಪರಿಹಾರವನ್ನು ಹುಡಕಬೇಕಿದೆ. ಈ ರೀತಿ ಹರಿದು ಹಂಚಿಹೋಗಿರುವ ಕೃಷಿ ಭೂಮಿಯನ್ನು ಮೊದಲು ಒಂದೆಡೆ ಸೇರಿಸಬೇಕಿದೆ. ನಮಗೆಲ್ಲ ತಿಳಿದಿರುವಂತೆ ಭಾರತವು ಸಹಕಾರಿ ಸಂಘಗಳ ಚಳವಳಿಯಿಂದ  ಬೆಳೆದಂತಹ ರಾಷ್ಟ್ರ. ಪ್ರತಿ ಹಳ್ಳಿಯಲ್ಲಿ ಒಂದೊಂದು ಸಹಕಾರ ಸಂಘಗಳು ಇದ್ದೇ ಇರುತ್ತದೆ. ಹಾಲು ಒಕ್ಕೂಟ ಸಂಘಗಳಿವೆ. ಸ್ವಸಹಾಯ ಸಂಘಗಳಿವೆ, ಕೃಷಿ ಸಹಕಾರ ಸಂಘಗಳಿವೆ, ಇವೆಲ್ಲವೂ ರೈತರ ಉತ್ಪನ್ನಗಳ ಬಗ್ಗೆ ನಿಗಾ ವಹಿಸುತ್ತವೆಯೇ ಹೊರತು ಅವರ  ಉತ್ಪಾದನೆ ವಿಧಾನದ ಬಗ್ಗೆ ಅಷ್ಟೊಂದು ಗಮನ ಹರಿಸುತ್ತಿಲ್ಲ.

ಹರಿದು ಹಂಚಿಹೋದ ಕೃಷಿಭೂಮಿಯನ್ನು ಈ ಸಂಘಗಳ ಅಡಿಯಲ್ಲಿ ಬರುವಂತೆ ಮಾಡಿ, ರೈತರಿಗೆ ಅವರವರ ಭೂಮಿಯ ಪಾಲಿಗೆ ಅನುಗುಣವಾಗಿ ಸದಸ್ಯತ್ವವನ್ನು ನೀಡಬೇಕು. ಇಡೀ ಗ್ರಾಮದ ಕೃಷಿಯನ್ನು ಆ ಸಂಘವೇ ಮಾಡಬೇಕು. ಬರುವ ಲಾಭವನ್ನು ರೈತರಿಗೆ ಹಂಚಬೇಕು. ಹೀಗಾದಾಗ ಎಕರೆಗೆ ೨ಬೋರ್‌ವೆಲ್, ೨ ಟ್ರ್ಯಾಕ್ಟರ್ ಬೇಕಾಗುವುದಿಲ್ಲ. ಇದರ ಜತೆಗೆ ಸರಕಾರದ ಎಲ್ಲ ಯೋಜನೆಗಳನ್ನು ಕೇವಲ ಒಂದು ಸಂಘಕ್ಕೆ ನೀಡಿದರೆ ಸಾಕಾಗುತ್ತದೆ.

ಆಗ ಎಲ್ಲವೂ ನಿಯಂತ್ರಣದಲ್ಲಿರುತ್ತದೆ. ಅತಿ ಮುಖ್ಯವಾಗಿ ಕೃಷಿ ಸಾಲವು ನಿಯಂತ್ರಣದಲ್ಲಿರುತ್ತದೆ. ಇದರಿಂದ ಲಾಭವೂ ಹೆಚ್ಚು, ರೈತರ ಬೆಳೆಯೂ ದ್ವಿಗುಣವಾಗುತ್ತದೆ. ತಂತ್ರಜ್ಞಾನ ಆಧರಿತ ಕೃಷಿಯನ್ನು ಮಾಡಲೂ ಇದು ಸಹಾಯಕ. ಹೀಗೆ ಮಾಡಲು ಸಾಧ್ಯವಾದರೆ, ನಮ್ಮ ಕೃಷಿಯಲ್ಲಿ ಇದು ಒಂದು ರೀತಿಯ ಕ್ರಾಂತಿಕಾರಕ ಹೆಜ್ಜೆಯಾದರೂ ಆಶ್ಚರ್ಯವಿಲ್ಲ. ಅಂದುಕೊಂಡಷ್ಟು ಸುಲಭವಾಗಿ ರೈತರ ಮನವೊಲಿಸಿ ಈ ಕೆಲಸ ಮಾಡಲಾಗುವುದಿಲ್ಲ. ಆದರೆ ನಿದಾನವಾಗಿ ಕೆಲವು ಭಾಗಗಳಲ್ಲಿ ಮಾಡಿ ಯಶಸ್ವಿಯಾದ ಮೇಲೆ ಬೇರೆಡೆ ವಿಸ್ತರಿಸಿ ನೋಡಬಹುದು.

 ಈ ರೀತಿಯ ಸಮಸ್ಯೆಗಳನ್ನು ಮೊದಲು ಬಗೆಹರಿಸಿ ನಂತರವಷ್ಟೇ ಇಸ್ರೇಲಿ ಮಾದರಿಯ ಕೃಷಿಗೆ  ಕೈಹಾಕುವುದರಲ್ಲಿ  ಅರ್ಥವಿದೆ. ಇಲ್ಲವಾದಲ್ಲಿ ಅದು ಕೇವಲ ಒಂದು ಪ್ರಾಜೆಕ್ಟ್ ರಿಪೋರ್ಟ್ ಆಗಿ ಉಳಿಯುತ್ತದೆಯೇ ಹೊರತು ಕ್ರಾಂತಿಕಾರಕ ಬೆಳವಣಿಗೆಯನ್ನು ಮಾಡಲು ಆಗುವುದಿಲ್ಲ. ಮತ್ತೊಂದು ವಿಷಯವೆಂದರೆ, ನಾವು ನಮ್ಮ ದೇಶವನ್ನು ಇಸ್ರೇಲ್, ಅಮೆರಿಕ, ಸಿಂಗಪುರಗಳಿಗೆ  ಹೋಲಿಸುವುದೇ ದೊಡ್ಡ ತಪ್ಪು. ಇಸ್ರೇಲ್ ದೇಶವು ಕರ್ನಾಟಕದ ಅರ್ಧದಷ್ಟು ಸಹ ಇಲ್ಲ. ಹೀಗಾಗಿ ಅಲ್ಲಿ ಕ್ರಾಂತಿ ಮಾಡುವುದು ಸುಲಭ. ಜತೆಗೆ ನಮ್ಮ ರೀತಿಯ ಚಿತ್ರವಿಚಿತ್ರ ಜನರಿಲ್ಲ. ಇನ್ನು ಸಿಂಗಪುರವೋ ವಿಸ್ತೀರ್ಣದಲ್ಲಿ ಬರೀ ಬೆಂಗಳೂರಿನಷ್ಟಿದೆ. ಆ ದೇಶದಲ್ಲಿ ಅಭಿವೃದ್ಧಿ ಮಾಡುವುದು ಬಲು ಸುಲಭ. ಅಮೆರಿಕ ದೇಶವೂ ಅಷ್ಟೇ, ಭೌಗೋಳಿಕವಾಗಿ ಭಾರತದ ಮೂರರಷ್ಟಿದೆ. ಹಂಚಿದರೆ ಒಬ್ಬೊಬ್ಬರಿಗೆ ಕನಿಷ್ಠವೆಂದರೂ ಹತ್ತು ಎಕರೆ ಭೂಮಿ ಸಿಗುತ್ತದೆ. ನಾವು ಜನಸಂಖ್ಯೆಯೆಂಬ ಶಾಪದಿಂದ ಹರಿದು ಹಂಚಿಹೋಗಿದ್ದೇವಷ್ಟೆ.

ನಮ್ಮಲ್ಲಿ ತಂತ್ರಜ್ಞಾನ ಅಳವಡಿಕೆಯೆಂದರೆ, ಸಣ್ಣ ಜಾಗದಲ್ಲಿ ಏನಾದರೂ ಮಾಡುವುದು. ಪ್ರತಿ-ಲವೆಂದರೆ, ಮಾಧ್ಯಮಗಳಲ್ಲಿ ಒಂದು ವರದಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು  ಟ್ರೋಲ್ ಅಷ್ಟೆ. ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಳ್ಳದಿರುವುದು ಮಾತ್ರ ವಿಪರ್‍ಯಾಸ. ಮಾತು ಮಾತಿಗೂ ಕೃಷಿಯೆಂದರೆ ಇಸ್ರೇಲಿ ಮಾದರಿ ಎನ್ನುವ ಜನರಿಗೆ ಇಸ್ರೇಲಿಗರನ್ನೂ ಮೀರಿಸುವ ಕೃಷಿ ತಂತ್ರಜ್ಞಾನ ಹೊಂದಿರುವ ದೇಶ ಹಾಲೆಂಡ್ ಎನ್ನುವುದು ಗೊತ್ತಿದೆಯೇ? ಕೇವಲ ನೀರಿನಲ್ಲಿಯೇ ನೂರಾರು ಎಕರೆ ಜಾಗದಲ್ಲಿ ಕೃಷಿ ಮಾಡುತ್ತಿರುವ ದೇಶವಿದು. ಸಂಪೂರ್ಣ ಆಟೋಮೇಷನ್ ಮಾಡಿ ಇಡೀ ಕೃಷಿಯನ್ನು ಬಹುಮಹಡಿ ಕಟ್ಟಡಗಳಲ್ಲಿ ಮಾಡುತ್ತಾರೆ.

ಕಳೆದ ವರ್ಷ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಆವರಣದಲ್ಲಿ ನಡೆದ ಕೃಷಿಮೇಳವನ್ನು ವೀಕ್ಷಿಸಲು ನಾನು ಹೋಗಿದ್ದೆ. ಹೋಗುವ ಮೊದಲು ನನ್ನ ಕಲ್ಪನೆಯಲ್ಲಿ ಕೃಷಿಮೇಳವೆಂದರೆ, ನೂತನ ತಂತ್ರಜ್ಞಾನ, ಹೊಸಹೊಸ ರೀತಿಯ ಸಲಕರಣೆಗಳು, ಹೊಸ ಕೃಷಿಪದ್ಧತಿ ಎಂದೆಲ್ಲಾ ಇತ್ತು. ಆದರೆ ಅಲ್ಲಿ ಹೋಗಿ ನೋಡಿದ ಮೇಲೆಯೇ ತಿಳಿದದ್ದು. ಅದು ಹಳೇ ಮಾದರಿಯ ಒಂದು ಮಾರಾಟ ಮೇಳ ಎಂದು. ಹೇಳಿಕೊಳ್ಳಲು ಒಂದಾದರೂ ಹೊಸತನವಿರಲಿಲ್ಲ. ಇದು ನಮ್ಮ ಕೃಷಿ ಸಚಿವರಾದ ಕೃಷ್ಣ ಭೈರೇಗೌಡರ ಕೃಷಿಮೇಳ. ಅಲ್ಲಿಗೆ ಬಂದಿದ್ದಂತಹ ಜನರು ಪಿಕ್‌ನಿಕ್‌ಗೆ ಬಂದು ಹೋಗುವ ರೀತಿ ತಿಂಡಿಗಳನ್ನು ತಿಂದು ಪೇಪರ್‌ಪ್ಲೇಟ್‌ಗಳನ್ನು ಎಲ್ಲೆಂದರಲ್ಲೇ ಎಸೆದು ಹೋಗುತ್ತಿದ್ದರು.

ನಾವು ಇಷ್ಟು ಹೊತ್ತು ಚರ್ಚಿಸಿದ್ದು ಈಗಾಗಲೇ ಬಳಸುತ್ತಿರುವ ಕೃಷಿಭೂಮಿಯಾದರೆ, ಬಳಕೆಯಾಗದ ಕೃಷಿ ಭೂಮಿಯೂ ಲಕ್ಷಾಂತರ ಎಕರೆಯಿದೆ. ಒಂದು ಅಂದಾಜಿನ ಪ್ರಕಾರ ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು ೬ಲಕ್ಷ ಎಕರೆಯಷ್ಟು ಬಳಕೆಯಾಗದ ಕೃಷಿ ಭೂಮಿಯಿದೆ. ಕನಿಷ್ಠ ಪಕ್ಷ ಈ ಭೂಮಿಯನ್ನಾದರೂ ಸಹಕಾರ ಸಂಘಗಳ ಅಡಿಯಲ್ಲಿ ಸೇರಿಸಬೇಕಿದೆ.

 ನಮ್ಮಲ್ಲಿ ಕೃಷಿ ವಿಜ್ಞಾನಿಗಳಿಗೇನೂ ಬರವಿಲ್ಲ. ಆದರೆ ಚಿಂತೆ ಇರುವುದು ಅವರ ವಿಷಯಗಳನ್ನು ಅಳವಡಿಸಿಕೊಳ್ಳಲು ಈ ರೀತಿಯ ಸಮೂಹ ಕೃಷಿಯ ವೇದಿಕೆಯೊಂದು ಸಿದ್ಧವಾಗಬೇಕಿದೆ. ಇದೇ ರೀತಿಯ ಚರ್ಚೆಯೊಂದನ್ನು ೨೦೧೪ರಲ್ಲಿ ಸ್ವತಃ ನಾನೇ ಪತ್ರಿಕೆಯ ಅಂಕಣವೊಂದರಲ್ಲಿ ಬರೆದಿದ್ದೆ. ಈಗಾಗಲೇ ೪ ವರ್ಷಗಳು ಕಳೆದರೂ ಯಾಕೋ ಯಾರೂ ಇದರ ಬಗ್ಗೆ  ಗಮನ ಹರಿಸಿದಂತೆ ಕಾಣುತ್ತಿಲ್ಲ. ಉಪೇಂದ್ರ ಮಾತ್ರ ತಮ್ಮ ಪ್ರಣಾಳಿಕೆಯಲ್ಲಿ ಅದನ್ನು ಪ್ರಕಟಿಸಿದ್ದು ಬಿಟ್ಟರೆ, ಮತ್ತೆಲ್ಲೂ ಕೇಳಿಬರಲೇ ಇಲ್ಲ.

ಒಳ್ಳೆಯ ತಂತ್ರಜ್ಞಾನಗಳನ್ನು ಅಳವಡಿಸಲು ಬಹುಮುಖ್ಯವಾಗಿ ನೀರು ಹಾಗೂ ವಿದ್ಯುತ್ ಬೇಕೇಬೇಕು. ನಮ್ಮ ರಾಜ್ಯದಲ್ಲಿ ಸರಾಸರಿಯಾಗಿ ದಿನದಲ್ಲಿ ೧೭ ಗಂಟೆ ವಿದ್ಯುತ್ ಇರುತ್ತದೆ. ಅದರಲ್ಲಿಯೂ ಕೆಲವು ನಗರ ಪ್ರದೇಶಗಳಲ್ಲಿ ೨೪ಗಂಟೆ ವಿದ್ಯುತ್ ಇಲ್ಲ. ಇನ್ನು ಹಳ್ಳಿಗಳಲ್ಲಿ ಎಷ್ಟೋ ಕಡೆ ಸಿಂಗಲ್ -ಸ್ ವಿದ್ಯುತ್  ಇದೆ.  ಮೊದಲು ಈ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಇದನ್ನು ಬಿಟ್ಟು ಇಸ್ರೇಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಮಾಡುತ್ತೇವೆಂದು  ಎಲ್ಲೋ ನಾಲ್ಕು ಕಡೆ ಒಣ ಬೇಸಾಯ ಮಾಡಿ, ಪೋಸ್ಟರ್‌ಗಳಲ್ಲಿ, ಮಾಧ್ಯಮಗಳಲ್ಲಿ -ಟೊಸಮೇತ  ತೋರ್ಪಡಿಕೆ ಮಾಡಿದರೆ ಏನು ಪ್ರಯೋಜನ?

ಭಾರತದಲ್ಲಿನ ಹಲವಾರು ಸಣ್ಣಪುಟ್ಟ ಕಂಪನಿಗಳು ತಯಾರು ಮಾಡಿರುವ ಅಧುನಿಕ ಕೃಷಿ ಉಪಕರಣಗಳಾದ ಹವಾಮಾನ ಮುನ್ಸೂಚನೆ, ಬೀಜಗಳ ಬೆಳವಣಿಗೆ  ರೈತರಿಗೆ ಕ್ಷಣಕ್ಷಣದ ಮಾಹಿತಿಯ ಹಲವಾರು ವಿಷಯಗಳನ್ನು ಈಗಾಗಲೇ ತಳ ಮಟ್ಟದಲ್ಲಿ ಕ್ರಾಂತಿಕಾರಿಯಾಗಿ ಅನುಷ್ಠಾನಗೊಳಿಸಲು ಆಗುತ್ತಿಲ್ಲ. ಒಂದು ಸಣ್ಣ ಉಪಕರಣವನ್ನು ತಂದು ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಬಹುದೆಂದು ಬಹಳ ಬೀಗಲೂ ಆಗುವುದಿಲ್ಲ. ಯಾಕೆಂದರೆ ಶುದ್ಧೀಕರಿಸಿದ ನೀರನ್ನು ಎಷ್ಟು ಜನರಿಗೆ ಹಂಚುವಿರಿ? ಆ ಉಪಕರಣವನ್ನು ನೋಡಿದರೆ ರೋಡಿಗೆ ಒಂದೊಂದು, ಎಕರೆಗೆ ಒಂದೊಂದು ಉಪಕರಣ ಬೇಕೆನಿಸುತ್ತದೆ. ಅದರ ಬದಲು ದೊಡ್ಡ ದೊಡ್ಡ ಸಂಸ್ಕರಣ ಘಟಕಗಳನ್ನು ನಿರ್ಮಿಸಬೇಕು.