ರೀ ರಮೇಶಕುಮಾರ್, ನಿಮ್ಮಂಥವರು ಹೀಗೆ ಮಾಡಬಹುದೇನ್ರಿ ?

Posted In : ಸಂಗಮ, ಸಂಪುಟ

ಬೇಟೆ: ಜಯವೀರ ವಿಕ್ರಮ್‌ ಸಂಪತ್‌ ಗೌಡ

ಮೊನ್ನೆ ಮೊನ್ನೆ ತನಕವೂ ಸ್ಪೀಕರ್ ರಮೇಶ ಕುಮಾರ್ ಸರಿಯಾಗಿಯೇ ಇದ್ದರಲ್ಲ, ಈಗ ಆ ಮನುಷ್ಯನಿಗೆ ಏನಾಗಿದೆ? ಉಳಿದವರು ಹಾಗೆ ಮಾಡಿದ್ದರೆ ಯಾರೂ ಏನೂ ಅಂದುಕೊಳ್ಳುತ್ತಿರಲಿಲ್ಲ. ಆದರೆ ರಮೇಶ ಹಾಗೆ ಮಾಡಿದಾಗ ಹೀಗೆ ಕೇಳಲೇಬೇಕಾಗುತ್ತದೆ.

ಏನೆಂದರೆ, ಅಷ್ಟಕ್ಕೂ ಈ ರಮೇಶಕುಮಾರ್‌ಗೆ ಏನಾಗಿದೆ? ಕೆಲವು ರಾಜಕಾರಣಿಗಳು ಮಲಗುವಾಗ ವಿಗ್ ಕಳಚಿಡುತ್ತಾರೆ. ಇನ್ನು ಕೆಲವರು ಹಲ್ಲುಸೆಟ್ಟು ತೆಗೆದಿಡುತ್ತಾರೆ. ಈ ರಮೇಶಕುಮಾರ್‌ಗೆ ಬುದ್ಧಿಯನ್ನು ಕಳಚಿಡುವ ಅಭ್ಯಾಸವೇನಾದರೂ ಇದೆಯಾ? ಬುದ್ಧಿ ಇರುವವರ್ಯಾರೂ ಹೀಗೆ ಮಾಡುತ್ತಿರಲಿಲ್ಲ. ರಮೇಶಕುಮಾರ್ ಅವರಿಂದ ಯಾರೂ ಇಂಥ ನಡೆ ನಿರೀಕ್ಷಿಸಿರಲಿಲ್ಲ. ಆದರೆ ಇವನ್ನೆಲ್ಲ ನೋಡಿದರೆ, ಅವರ ಬೌದ್ಧಿಕ ಮಟ್ಟದ ಬಗ್ಗೆಯೇ ಅನುಮಾನ ಕಾಡಲಾರಂಭಿಸಿದೆ. ನಾವು ಇಷ್ಟಪಟ್ಟ ಅಭಿಮಾನದಿಂದ ಕಂಡ, ವಿಭಿನ್ನ ರಾಜಕಾರಣಿ ಹೆಮ್ಮೆಪಟ್ಟ ರಮೇಶಕುಮಾರ್ ಇವರೇನಾ ಎಂಬ ಅನುಮಾನ ಕಾಡಲಾರಂಭಿಸಿದೆ.

ರಮೇಶಕುಮಾರ್ ನಮ್ಮೆಲ್ಲರ ನಂಬಿಕೆಗೆ ದ್ರೋಹವೆಸಗಿದ್ದಾರೆ. ತಾವೂ ಒಬ್ಬ ಸಾಮಾನ್ಯ ರಾಜಕಾರಣಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದನ್ನು ಅವರ ವೈಯಕ್ತಿಕ ಅಥವಾ ಖಾಸಗಿ ವಿಷಯ ಎಂದು ನಿರಾಕರಿಸಲು, ತಿರಸ್ಕರಿಸಲು ಸಾಧ್ಯವಿಲ್ಲ. ರಮೇಶಕುಮಾರ್ ಈ ನಾಡಿನ, ಸಾಮಾಜಿಕ-ರಾಜಕೀಯ ಜೀವನದ ಸಾಕ್ಷಿ ಪ್ರಜ್ಞೆಯಂತಿರುವವರು. ಅವರು ನಮ್ಮ ನಡುವಿನ ರಾಜಕಾರಣಿಗಳಿಂತ ಭಿನ್ನ. ಅವರ ನಡೆ-ನುಡಿ, ಆಚಾರ-ವಿಚಾರ, ನಡೆವಳಿಕೆಗಳೆಲ್ಲ ಉಳಿದವರಿಗಿಂತ ನೂರುಪಾಲು ಉತ್ತಮವಾದುದು. ಅವರು ಮಾತಾಡಿದರೆ, ಅದು ಸದನದ ಹೊರಗಿರಬಹುದು. ಎಲ್ಲರೂ ಗಮನವಿಟ್ಟು ಕೇಳುತ್ತಾರೆ.

ಅವರ ಮಾತಿಗೆ ವಿಶೇಷ ಅರ್ಥ, ಮಹತ್ವ ನೀಡಲಾಗುತ್ತದೆ. ನಾಯಕರ ನಡುವೆ ಜನನಾಯಕರಾಗಿ, ಜನನಾಯಕರ ನಡುವೆ ಮಹಾಮುತ್ಸದ್ದಿಯಾಗಿ, ವಿಚಾರವಂತರಾಗಿ, ವಿವೇಕವಂತರಾಗಿ, ಎದ್ದುನಿಲ್ಲುವ ವ್ಯಕ್ತಿತ್ವ ಅವರದು. ಅವರ ಮಾತಿಗೆ ಎಲ್ಲಿಲ್ಲದ ಮನ್ನಣೆ, ಗೌರವ. ನಾಲ್ಕು ಜನರ ವೇದಿಕೆಯಲ್ಲಿ ರಮೇಶಕುಮಾರ್ ಮಾತಾಡಿದರೆ ಮರುದಿನ ಅವರ ಮಾತೇ ಪತ್ರಿಕೆಗಳಲ್ಲಿ ಹೆಡ್‌ಲೈನ್. ಈಗಲೂ ಅದೇ ಗೈರತ್ತನ್ನು ಉಳಿಸಿಕೊಂಡವರು. ಅಲ್ಲದೇ ವಿಧಾನಸಭೆಯ ಸ್ಪೀಕರ್ ಆಗಿ ಸದನದ ಸದಸ್ಯರಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ತಮಗೆ ಪಾರ್ಟಿ, ಸಂಗಡ, ಹೈಕಮಾಂಡ್ ಎಂಬುದನ್ನೂ ನೋಡದೇ ನೇರಾನೇರ ಹೇಳುವವರು. ಹೀಗಾಗಿ ರಮೇಶಕುಮಾರ್ ಅವರಿಗೆ ನಮ್ಮ ಸಾರ್ವಜನಿಕ ಜೀವನದಲ್ಲಿ ಒಂದು ಸ್ಥಾನಮಾನವಿದೆ, ಗೌರವವಿದೆ.

ಅಂಥ ರಮೇಶಕುಮಾರ್ ಮೊನ್ನೆ ಮೂಢನಂಬಿಕೆಯ ಪರಾಕಾಷ್ಠೆ ಪ್ರದರ್ಶಿಸಿ ನಗೆಪಾಟಲಿಗೆ ಈಡಾದರು. ಅಷ್ಟೇ ಅಲ್ಲ, ಇಷ್ಟು ದಿನ ನಾವು ಗೌರವಿಸಿದ, ಅಭಿಮಾನದಿಂದ ಕಂಡ ವ್ಯಕ್ತಿ ಇವರೇನಾ ಎಂದು ಅಚ್ಚರಿಪಡುವಂತೆ ವರ್ತಿಸಿದರು. ವಿಧಾನಸಭಾ ಚುನಾವಣೆಗಿಂತ ಮುನ್ನ ರಮೇಶಕುಮಾರ್ ಅವರು ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆ ಎಂಬ ಊರಿನಲ್ಲಿ, ಇಪ್ಪತ್ತರ ಹರೆಯದಲ್ಲಿರುವ ಗುರೂಜೀ ಎಂಬಾತನನ್ನು ಭೇಟಿ ಮಾಡಿ, ಆತನ ಪಾದಪೂಜೆ ಮಾಡಿ, ಆತನಿಗೆ ಆರತಿ ಎತ್ತಿದರು. ಖಾಕಿ ಚೊಣ್ಣ ಧರಿಸಿದ ಈ ‘ಬಾಲ ಗುರೂಜೀ ರಮೇಶಕುಮಾರ್ ಮಾಡಿದ ಪೂಜೆ ಹಾಗೂ ಸೇವೆಗೆ ಸಂತೃಪ್ತನಾಗುತ್ತಾನೆ. ರಮೇಶಕುಮಾರ್ ಅವರ ಬಲಗೈಯನ್ನು ಸೆಳೆದುಕೊಂಡ ಗುರೂಜೀ, ಹಸ್ತದ ಮೇಲೆ ಉಗುಳುತ್ತಾನೆ. ನೋಡಿದರೆ ಒಂದು ನಾಣ್ಯ!

ಇದರಿಂದ ಅತೀವ ಸಂತೃಪ್ತರಾಗುವ ರಮೇಶಕುಮಾರ್, ಆ ನಾಣ್ಯವನ್ನು ಕಣ್ಣಿಗೆ ಒತ್ತಿಕೊಂಡು, ಪಕ್ಕದಲ್ಲಿರುವವನಿಗೆ ಗುರೂಜಿ ಮಹಿಮೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಅದನ್ನು ತಮ್ಮ ಕಿಸೆಯೊಳಗೆ ಇಟ್ಟುಕೊಳ್ಳುತ್ತಾರೆ. ಆನಂತರ ಗುರೂಜೀ ಕಾಲ ಬಳಿ ನೆಲದ ಮೇಲೆ ಕುಳಿತುಕೊಳ್ಳುವ ವಿವೇಕವಂತ ರಮೇಶಕುಮಾರ್, ಸ್ವಲ್ಪ ಹೊತ್ತು ಪಾದವನ್ನೇ ಹಿಡಿದುಕೊಂಡಿರುತ್ತಾರೆ. ನಂತರ ತನ್ನ ಕೈ ಒರೆಸಿಕೊಳ್ಳಲು ನ್ಯಾಪ್‌ಕಿನ್ ಕೊಡುತ್ತಾರೆ.

ಈ ದೃಶ್ಯವುಳ್ಳ ವಿಡಿಯೋ ತುಣುಕನ್ನು ನೋಡಿದವರಿಗೆ, ಕೊನೆಯ ತನಕವೂ ನಾವು ನೋಡಿದ ರಮೇಶಕುಮಾರ್ ಇವರೇನಾ? ಇವರಿಗೇನು ಬಂತು ಬುದ್ಧಿ ನಷ್ಟ ಕಾಲ? ಪ್ರಾಯಶಃ ಇವರು ರಮೇಶಕುಮಾರ್ ಇರಲಿಕ್ಕಿಲ್ಲ ಎಂಬ ಅಭಿಪ್ರಾಯ ಬರದೇ ಹೋಗುವುದಿಲ್ಲ. ಕಾರಣ ಒಬ್ಬ ವಾಮಾಚಾರಿಯ ಮುಂದೆ ಗೊಂಬೆಯಂತೆ ವರ್ತಿಸುವ ಅಂಧ, ಅವಿವೇಕಿ ಭಕ್ತನಂತೆ ರಮೇಶಕುಮಾರ್ ಗೋಚರಿಸುತ್ತಾರೆ. ಪುಣ್ಯವಶಾತ್, ಆ ಗುರೂಜೀ ಬಾಯಿಯಿಂದ ಉಗುಳಿ ನಾಣ್ಯ ಕೊಟ್ಟರು. ಒಂದು ವೇಳೆ ಬೇರೆ ರಂಧ್ರಗಳಿಂದ ಇನ್ನೇನನ್ನಾದರೂ ‘ಪ್ರಸಾದ ಕೊಟ್ಟಿದ್ದಿದ್ದರೆ,’ಪ್ರಜ್ಞಾವಂತ ರಮೇಶಕುಮಾರ್ ಅವರು ಅದನ್ನೂ ಕಣ್ಣಿಗೆ ಒತ್ತಿಕೊಂಡು ಕಿಸೆಯೊಳಗಿಟ್ಟುಕೊಂಡು ಕೃತಾರ್ಥರಾಗುತ್ತಿದ್ದರೇನೋ?

ರಮೇಶಕುಮಾರ್ ಅವರಿಗೆ ನಾಚಿಕೆಯಾಗಬೇಕು. ಇಂಥ ಸೋಗಲಾಡಿತನವನ್ನು ಅವರು ಬಿಡಬೇಕು. ದೇವೇಗೌಡರೋ, ರೇವಣ್ಣನೋ, ಯಡಿಯೂರಪ್ಪನೋ ಈ ರೀತಿ ಮಾಡಿದ್ದರೆ ರಾಜ್ಯದ ಜನತೆ ಏನೂ ಅಂದುಕೊಳ್ಳುತ್ತಿರಲಿಲ್ಲ. ಕಾರಣ ಅವರು ಮೂಢನಂಬಿಕೆಗಳನ್ನು ಆರಾಧಿಸುವ ಯಡಿಯೂರಪ್ಪನವರು ಮೊದಲ ಬಾರಿಗೆ ಸಿಎಂ ಆದಾಗ, ತುಮಕೂರು ಬಳಿಯ ಸ್ವಾಮೀಜಿಯೊಬ್ಬ ಬಾಯಲ್ಲಿ ಅಕ್ಕಿಕಾಳು ಹಾಕಿ ಉಗುಳಿ, ಇದನ್ನು ಸಿಎಂ ಕುರ್ಚಿ ಮೇಲೆ ಇಟ್ಟು ಕುಳಿತುಕೋ ಎಂದು ಹೇಳಿದಾಗ ಅವರು ಶಿರಸಾವಹಿಸಿ ಮಾಡಿದ್ದರು. ಅಲ್ಲೂ ಪುಣ್ಯವಶಾತ್ ಅಕ್ಕಿಕಾಳು ಕೊಟ್ಟರು. ಬೇರೆ ಯಾವುದಾದರೂ ‘ಪ್ರಸಾದ’ ಕೊಟ್ಟಿದ್ದರೆ, ಯಡಿಯೂರಪ್ಪನವರು ದೂಸರಾ ಮಾತಾಡದೇ ಸ್ವಾಮೀಜಿ ಮಾತನ್ನು ನೆರವೇರಿಸುತ್ತಿದ್ದರು.

ಆಗ ಇದೇ ರಮೇಶಕುಮಾರ್ ಯಡಿಯೂರಪ್ಪನವರನ್ನು ಗೇಲಿಮಾಡಿದ್ದರು. ‘ನಮ್ಮನ್ನು ಆಳುವವರು ಮತಿಗೇಡಿಗಳಾಗಬಾರದು, ಮೂಢನಂಬಿಕೆ ದಾಸರಾಗಬಾರದು. ಇದು ಸಮೂಹಪ್ರಜ್ಞೆಗೆ ದ್ರೋಹ’ ಎಂದು ರಮೇಶಕುಮಾರ್ ಕಟು ಟೀಕೆ ಮಾಡಿದ್ದರು. ಈಗ ಅದೇ ರಮೇಶಕುಮಾರ್ ಏನು ಮಾಡಿದರು? ಇದೂ ಸಮೂಹಪ್ರಜ್ಞೆಗೆ ಮಾಡಿದ ದ್ರೋಹವಲ್ಲವೇ? ಬುದ್ಧಿಯಿರುವವರು, ವಿವೇಕಶಾಲಿಗಳು, ವಿಚಾರವಂತರು ಮಾಡುವ ನಡೆಯಾ ಇದು? ರಮೇಶಕುಮಾರ್‌ರಿಗೆ ತಮ್ಮ ನಡೆಯಿಂದ, ಈ ಸಮಾಜವನ್ನು ತಾನು ದ್ವಾಪರಯುಗಕ್ಕೆ ಕರೆದೊಯ್ಯುತ್ತಿದ್ದೇನೆ ಎಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದೇ ಹೋಯಿತಾ? ನಾಳೆ ಯಾವನೋ ನಕಲಿ ಬಾಬಾ, ಕಣ್ಣ ಸನ್ಯಾಸಿ, ವಂಚಕ ಗುರೂಜೀ, ತನ್ನ ಪಾದಪೂಜೆ ಮಾಡಿದ ನೀರನ್ನು ಕುಡಿ, ನೀರು ಮುಖ್ಯಮಂತ್ರಿಯಾಗ್ತೀಯಾ ಹೇಳಿದರೆ ಈ ರಮೇಶಕುಮಾರ್ ಕುಡಿಯುತ್ತಾರಾ? ಹಾಗಾದರೆ ಈ ಪ್ರಜಾಪ್ರಭುತ್ವ, ಮತದಾರ ಪ್ರಭು, ಸಂವಿಧಾನ ಇವುಗಳಿಗೆಲ್ಲ ಏನು ಬೆಲೆ? ಎಲ್ಲರೂ ಪಾದಪೂಜೆಯನ್ನೇ ಮಾಬಹುದಲ್ಲ? ಉಗುಳಿದ ನಾಣ್ಯವನ್ನೇ ಜೇಬಿನಲ್ಲಿಟ್ಟುಕೊಂಡು ಗುರೂಜೀ ಪ್ರಸಾದ ಸ್ವೀಕರಿಸಿ ಬಯಸಿದ್ದನ್ನು ಪಡೆಯಬಹುದಲ್ಲ? ಹಾಗಾದರೆ ಮನುಷ್ಯ ಪ್ರಯತ್ನಕ್ಕೆ ಏನು ಬೆಲೆ? ಇದರಿಂದ ಸಮಾಜಕ್ಕೆ ತಾವು ಎಂಥ ಕೆಟ್ಟ ಸಂದೇಶ ಕಳಿಸುತ್ತಿದ್ದೇನೆ ಎಂಬುದರ ಅರಿವಾದರೂ ರಮೇಶಕುಮಾರ್ ಅವರಿಗೆ ಇದೆಯಾ? ಮಾತೆತ್ತಿದರೆ ಮಹಾಮೇಧಾವಿಯಂತೆ, ಪ್ರಾಜ್ಞರಂತೆ, ವಿಚಾರವಂತರಂತೆ ಮಾತಾಡುವ ರಮೇಶಕುಮಾರ್ ಅವರಿಗೆ ತಾನು ಹಲ್ಕಾ ಕೆಲಸ ಎಂಬುದು ಗೊತ್ತಾಗಿಲ್ಲವಾ? ನಾಡಿನ ಜನತೆ ಈ ಬಗ್ಗೆ ಅವರನ್ನು ಟೀಕಿಸುತ್ತಿದ್ದರೂ ತಪ್ಪಾಯ್ತು ಎಂದು ಹೇಳುವ ಸೌಜನ್ಯವನ್ನೂ ಅವರು ತೋರಲಿಲ್ಲವಲ್ಲ?

ಸಿದ್ದರಾಮಯ್ಯನವರ ಸರಕಾರ ಮೂಢನಂಬಿಕೆ ವಿರೋಧಿ ವಿಧೇಯಕ ಮಂಡಿಸಿದಾಗ, ಇದೇ ರಮೇಶಕುಮಾರ್ ಅದನ್ನು ಬೆಂಬಲಿಸಿದ್ದರು. ಮೂಢನಂಬಿಕೆ ಬಗ್ಗೆ ತಮ್ಮ ವಿಚಾರಧಾರೆ ಹರಿಯಬಿಟ್ಟಿದ್ದರು. ಈಗ ಅದೇ ರಮೇಶಕುಮಾರ್ ಮೂಢನಂಬಿಕೆ ಆರಾಧಿಸುವ ಪರಾಕಾಷ್ಠೆ ಪ್ರದರ್ಶಿಸಿದ್ದಾರೆ. ಅಂದರೆ ಇವರು ಹೇಳುವುದು ಶಾಸ್ತ್ರ, ತಿನ್ನುವುದು ಬದನೆಕಾಯಿ ಎಂದಂತಾಯಿತು. ಅಂದರೆ ಇವರ ಮಾತಿಗೂ, ಕೃತಿಗೂ ಇಲ್ಲ ಎಂದಂತಾಯಿತು. ಪ್ರಾಯಶಃ ತಾನು ಮಾಡಿದ ‘ಪಾದಪೂಜೆ ಬೇರೆ ಯಾರಿಗೂ ಗೊತ್ತಾಗುವುದಿಲ್ಲ’ ಎಂದೇ ಅವರು ಭಾವಿಸಿದ್ದಿರಬೇಕು. ಈ ರೀತಿ ಬೇರೆಯವರಿಗೆ ಗೊತ್ತಾಗದಂತೆ, ಗೊತ್ತಾಗುವುದಿಲ್ಲ ಎಂದು ಭಾವಿಸಿ ಏನೇನು ಮಹಾಕಾರ್ಯಗಳನ್ನು ಮಾಡಿದ್ದಾರೋ ಯಾರಿಗೆ ಗೊತ್ತು? ತಾವು ಆಡುವ ಮಾತುಗಳನ್ನು ಬೇರೆಯವರು ಪಾಲಿಸಬೇಕು. ತಾವು ಮಾತ್ರ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಹುದು ಎಂದು ಅವರು ಭಾವಿಸಿರಬೇಕು. ಇದು ಅತ್ಯಂತ ಅಪಾಯಕಾರಿ ಚಿಂತನಾ ಪ್ರವೃತ್ತಿ.

ಅಮಾಯಕ ಗುರೂಜೀ ಕಾಲಿಗೆರಗಿ ಪೂಜೆ ಮಾಡಿ ಹಣೆಯಿಟ್ಟು ಮೌಢ್ಯ ರಮೇಶಕುಮಾರ್ ಅವರಂಥವರಿಗಾಗಿ ಇಂಗ್ಲಿಷಿನಲ್ಲಿ ಒಂದು ಮಾತಿದೆ. “If you know less and less, you believe more and more’. ರಮೇಶಕುಮಾರ್ ಅವರ ಮಟ್ಟ ಇಷ್ಟೇನಾ? ಪಾದಕ್ಕಿಂತ ಮೇಲೆ ಬಂದಿಲ್ಲವಾ?

ರಮೇಶಕುಮಾರ್ ಅವರು ಯಾಕೋ ಗೆಂಡೆತಿಮ್ಮನಾಗಿದ್ದರೆ, ಯಂಕನೋ, ನಾಣಿಯೋ ಆಗಿದ್ದಿದ್ದರೆ ತಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ. ಹಾಗೆಂದು ಅವರು ಇದು ತನ್ನ ವೈಯಕ್ತಿಕ ಅಥವಾ ಖಾಸಗಿ ವಿಷಯ ಎಂದು ಹೇಳಿ ನುಣುಚಿಕೊಳ್ಳಲು ಅಗುವುದಿಲ್ಲ. ಹಾಗೆ ನೋಡಿದರೆ, ಅಧಿಕಾರದಲ್ಲಿರುವವರಿಗೆ, ಸಮಾಜದಲ್ಲಿ ಉನ್ನತ ಖಾಸಗಿ ಹಾಗೂ ಸಾರ್ವಜನಿಕ ಎಂಬುದಿರುವುದಿಲ್ಲ. ಖಾಸಗಿಯಾಗಿ ಹಲ್ಕಾ ಕೆಲಸ ಮಾಡಿದರೆ, ಸಾರ್ವಜನಿಕವಾಗಿ ಮಾಫು ಮಾಡಬೇಕೆಂದು ಹೇಳಲಾಗುವುದಿಲ್ಲ. ಉನ್ನತಸ್ಥರದಲ್ಲಿರುವವರು ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಂಡಿರುತ್ತಾರೆ. ಅವರನ್ನು ನೋಡಿ ಸಮಾಜ ತನ್ನ ಪಾತಳಿ ಬದಲಿಸುತ್ತದೆ. ಈ ಸೂಕ್ಷ್ಮ ಸಂಗತಿ ರಮೇಶಕುಮಾರ್‌ಂಥವರಿಗೆ ತಿಳಿಯದ ಸಂಗತಿಯೇನಲ್ಲ. ಅವರಿಗೆ ಈ ವಿಷಯದಲ್ಲಿ, ತಿಳಿಯುವ ಸಂಗತಿಯೇನೆಂದರೆ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಗೊತ್ತಾಗುವುದಿಲ್ಲ ಎಂಬುದು.

ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಚಂದ್ರಸ್ವಾಮಿಯಂಥ ಪಕ್ಕಾ 420ಯನ್ನು ಆಗಾಗ ಭೇಟಿ ಮಾಡಿ, ಕಾಲಿಗೆ ಎರಗಿ ಬರುತ್ತಿದ್ದರು. ಆ ಸ್ವಾಮಿ ಒಂದು ದಿನ ರಾಯರಿಗೆ ‘ನನ್ನ ಫೋಟೋವನ್ನು ನಿಮ್ಮ ಮನೆಯ ಜಗುಲಿ ಗೋಡೆಗೆ ತಗುಲಿ ಹಾಕಿ ಎಂದು ತನಗೆ ಕನಸಿನಲ್ಲಿ ಅಪ್ಪಣೆಯಾಗಿದೆ’ಯೆಂದು ತಿಳಿಸಿದ. ರಾಯರು ಸ್ವಾಮಿಯ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸಿದರು. ರಾಯರು ತಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯ ಹಿಂಬದಿಗೆ ಈ ಕಳ್ಳಸ್ವಾಮಿ ಫೋಟೋ! ಯಾವ ಆ್ಯಂಗಲ್‌ನಿಂದ ರಾಯರ ಫೋಟೋ ತೆಗೆದರೂ, ಸ್ವಾಮಿಯ ಫೋಟೋ ಹಿನ್ನೆಲೆಯಲ್ಲಿ ಕಾಣಿಸುತ್ತಿತ್ತು. ನರಸಿಂಹರಾಯರಂಥ ಪ್ರಾಜ್ಞರು. ಮೇಧಾವಿಗಳು, ವಿದ್ವಾಂಸರು ಈ ಸ್ವಾಮೀಗಳ ಹುನ್ನಾರಕ್ಕೆ ಬಲಿಯಾಗಿದ್ದರು.

ದೇಶದ ಪ್ರಧಾನಿ ಗೋಡೆಯ ಮೇಲಿನ ಫೋಟೋ ನೋಡಿದ ಜನತೆ, ಚಂದ್ರಸ್ವಾಮಿಯ ಮನೆಮುಂದೆ ಜಮಾಯಿಸಲಾರಂಭಿಸಿದರು. ಒಳ್ಳೆಯ ಹುದ್ದೆ, ವರ್ಗಾವಣೆ ಬಯಸಿ ಬರುವ ಅಧಿಕಾರಿಗಳ ಸಂಖ್ಯೆ ಜಾಸ್ತಿಯಾಗಲಾರಂಭಿಸಿತು. ಕೆಲವು ದಿನಗಳಲ್ಲಿ ಸ್ವಾಮಿಯ ಖದರು, ಖ್ಯಾತಿ, ಕೈಫಿಯತ್ತು ಬದಲಾಗಿ ಹೋಯಿತು. ದಿಲ್ಲಿ ಸರಕಾರ ಸ್ವಾಮಿಗೆ ಹತ್ತಾರು ಎಕರೆ ಭೂಮಿ ನೀಡಿತು. ಈ ಸ್ವಾಮಿ ಅಲ್ಲಿ ವೈಭವಯುತವಾದ ಆಶ್ರಮ ಕಟ್ಟಿದ. ಪ್ರಧಾನಿಯನ್ನು ಭೇಟಿ ಮಾಡುವವರು ಈ ಆಶ್ರಮ ತುಳಿದು ಬರುತ್ತಿದ್ದರು. ಆಶ್ರಮ ಪ್ರಧಾನಿ ಕಾರ್ಯಾಲಯದ ಅಂಗವಾಯಿತು. ಈ ಪಡಪೋಶಿ ಸ್ವಾಮಿ ಮಾಡಬಾರದ ಅವಾಂತರಗಳನ್ನೆಲ್ಲ ಮಾಡಿದ, ತಾನೂ ಕೆಟ್ಟ, ರಾಯರ ಹೆಸರನ್ನೂ ಕೆಡಿಸಿದ. ಸಿಬಿಐ ಈತನನ್ನು ಅರೆಸ್‌ಟ್ ಮಾಡಿತು. ಅದಕ್ಕೂ ಮುನ್ನ ಈತ ತಲೆಮರೆಸಿಕೊಂಡಿದ್ದ.

ನರಸಿಂಹರಾಯರ ಅಂಧಭಕ್ತಿ ಈ ಸ್ವಾಮಿಯ ಗೃಹಗತಿಯನ್ನೇ ಬದಲಾಯಿಸಿತು. ಒಬ್ಬ ಸಾಮಾನ್ಯ ವ್ಯಕ್ತಿ ದಿಲ್ಲಿ ಅಧಿಕಾರರವಲಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಮೆರೆಯುವಂತೆ ಮಾಡಿತು. ಪ್ರಧಾನಿ ನಿವಾಸದಲ್ಲಿ ಒಂದು ಫೋಟೋ ತಗುಲಿ ಹಾಕಿಸಿಕೊಂಡು ಎಲ್ಲರನ್ನೂ ತನ್ನ ಅಣತಿಯಂತೆ ನೇತಾಡುವಂತೆ ಮಾಡಿದ. ಪ್ರಮುಖ ಸ್ಥಾನದಲ್ಲಿರುವವರು ಬೇರೆಯವರ ‘ಪಾದಾರವಿಂದಗಳಿಗೆ ಹಣೆ ಹಚ್ಚುವ ಮುನ್ನ ಯೋಚಿಸಬೇಕು. ತನ್ನ ನಂಬಿಕೆ ಇಡೀ ಸಮಾಜಕ್ಕೆ ಪರಮ ಘಾತಕವಾಗಿ ಪರಿಣಮಿಸಬಹುದು ಎಂಬ ಎಚ್ಚರವಿರಬೇಕು. ಹಾಗೆಂದು ಸ್ವಾಮೀಜಿಗಳು, ಗುರೂಜೀಗಳ ಬಗ್ಗೆ ಗೌರವ ಇಟ್ಟುಕೊಳ್ಳಬಾರದು ಎಂದಲ್ಲ. ಇಟ್ಟುಕೊಳ್ಳಲಿ, ಆದರೆ ಬುದ್ಧಿಯನ್ನು ಯಾರದ್ದೋ ಕಾಲಿನ ಬುಡದಲ್ಲಿ ಇಡಬಾರದು.

ಈ ಅಧಿಕಾರದಲ್ಲಿರುವವರು, ಅಧಿಕಾರಕ್ಕೇರಬೇಕೆನ್ನುವವರು ಮಾಡಬಾರದ ಹಲ್ಕಾ ಕೆಲಸಗಳನ್ನು ಮಾಡಿರುತ್ತಾರೆ. ಹೀಗಾಗಿ ಅವರ ಮನಸ್ಸಿನೊಳಗೆ ಸದಾ ಆತಂಕ, ಭಯ ಮನೆ ಮಾಡಿರುತ್ತದೆ. ಪಾಪಪ್ರಜ್ಞೆ ಕಾಡುತ್ತಿರುತ್ತದೆ. ಇವುಗಳಿಂದ ದೇವರು, ಸ್ವಾಮೀಜಿ, ಗುರೂಜಿಗಳ ಮೊರೆ ಹೋಗುತ್ತಾರೆ. ಇವರ ಅಸಲಿಯತ್ತು ಸ್ವಾಮೀಜಿಗಳಿಗೆ ಗೊತ್ತಿರುತ್ತದೆ. ಇವರು ತಾವು ಏನೇ ಹೇಳಿದರೂ ಮಾಡುತ್ತಾರೆಂಬುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಕಾರಣ ಆ ಪ್ರಮಾಣದ ಪಾಪಕಾರ್ಯ ಮಾಡಿ ಅಲ್ಲಿಗೆ ಬಂದಿರುತ್ತಾರೆ. ಸ್ವಾಮೀಜಿ ಏನೇ ಹೇಳಿದರೂ, ಮಂಗನಾಡಿಸುವವ ಏನೇ ಹೇಳಿದರೂ ಕೋತಿ ಕೇಳುತ್ತದಲ್ಲ, ಅದೇ ರೀತಿ ವರ್ತಿಸುತ್ತಾರೆ.

ನಮ್ಮ ರಮೇಶಕುಮಾರ್ ಅವರು ಮಾಡಿದ್ದೂ ಅದೇ. ಅವರು ಅದ್ಯಾವ ಪಾಪಕಾರ್ಯಗಳಿಂದ ಬಳಲುತ್ತಿದ್ದರೋ. ಯಾವ ಕನಸು, ಕನವರಿಕೆಗಳನ್ನು ಇಟ್ಟುಕೊಂಡು ತೊಳಲಾಡುತ್ತಿದ್ದಾರೋ, ಬಾಲಗುರೂಜೀಗೇ ಗೊತ್ತು. ಸೀದಾ ಹೋಗಿ ಹಣೆ ಹಚ್ಚಿ ಬಂದರು. ಅದರಿಂದ ಅವರಿಗೆ ತಾನೆಂಥ ಘೋರ ಪಾಪ ಮಾಡಿದೆ ಎಂಬುದೂ ಗೊತ್ತಾಗಲಿಲ್ಲವಲ್ಲ, ಅದು ಕರ್ಮ, ಕರ್ಮ! ರಮೇಶಕುಮಾರ್ ಕನಿಷ್ಟ ಒಂದು ಕ್ಷಮೆ, ಹೋಗಲಿ ಒಂದು ಸ್ಪಷ್ಟನೆ, ಸಮರ್ಥನೆಯನ್ನಾದರೂ ನೀಡಬಹುದಿತ್ತು. ಅದನ್ನೂ ಮಾಡಲಿಲ್ಲ. ಅಂದರೆ ಅವರಿಗೆ ಸ್ವಲ್ಪವೂ ಪಶ್ಚಾತ್ತಾಪವಾಗಿಲ್ಲವೆಂದಂತಾಯಿತು. ಸರಿ, ತಾನು ಮಾಡಿದ್ದು ಘನಕಾರ್ಯ ಎಂದಾದರೂ ಸಮರ್ಥನೆ ಮಾಡಿಕೊಳ್ಳಲಿ ನೋಡೋಣ.

ರಮೇಶಕುಮಾರ್ ಅವರ ಅಧಿನಾಯಕಿ ಇಂದಿರಾಗಾಂಧಿ ಸಹ ಧೀರೇಂದ್ರ ಬ್ರಹ್ಮಚಾರಿ ಎಂಬ ಕಾಲಿಗೆರಗಿ ವಿವಾದ ಎಳೆದುಕೊಂಡಿದ್ದರೆಂಬುದನ್ನೂ ಅವರು ಮರೆಯಬಾರದಿತ್ತು.

ಕಾಲಿಗೆರಗಿ ನಮಿಸುವುದು ತಪ್ಪಲ್ಲ. ಅದು ನಮ್ಮ ಸಂಸ್ಕೃತಿ. ಹಿರಿಯರಿಗೆ ಕಾಲಿಗೆರಗುವುದು ನಮ್ಮ ಉದಾತ್ತ ಸಂಪ್ರದಾಯ. ಆದರೆ ನಾವು ಕಾಲಿಗೆರಗುವವರು ಯಾರು, ಅವರ ಸಾಚಾತನ ಏನೆಂಬುದು ನಮಗೆ ಗೊತ್ತಿರಬೇಕು. ಅಲ್ಲದೇ ನಮ್ಮ ಈ ನಡೆಯಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತಿದೆಯೆಂಬುದೂ ತಿಳಿದಿರಬೇಕು. ಇದು ತಮ್ಮ ಖಾಸಗಿ ವಿಷಯವೆಂದು ಸಾರ್ವಜನಿಕವಾಗಿ ಬೆತ್ತಲಾಗಬಾರದು.

Leave a Reply

Your email address will not be published. Required fields are marked *

3 + thirteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top