About Us Advertise with us Be a Reporter E-Paper

ಅಂಕಣಗಳು

ಹೆಚ್ಚು ವಿವೇಚನಾಶೀಲರಾಗಿ, ತಾಳ್ಮೆ, ಸoತಸದಿಂದಿರಿ

- ಗೌರ್ ಗೋಪಲ್

ಒಂದು ಹಳೆಯ ಕತೆಯ ಪ್ರಕಾರ, ತೀವ್ರ ಖಾಯಿಲೆಯಿರುವ ಒಬ್ಬ ಮನುಷ್ಯ ಆಸ್ಪತ್ರೆಗೆ ದಾಖಲಾದ. ಆತನನ್ನು ಕಿಟಕಿಯ ಒಕ್ಕದ ಹಾಸಿಗೆಯಲ್ಲಿ ವಿಶ್ರಮಿಸುತ್ತಿದ್ದ ರೋಗಿಯ ಕೋಣೆಗೆ ತರಲಾಯಿತು. ಇಬ್ಬರೂ ಪರಸ್ಪರ ಸ್ನೇಹಿತರಾದರು. ಕಿಟಕಿಯ ಪಕ್ಕದ ರೋಗಿಯು ಕಿಟಕಿಯಾಚೆ ನೋಡುತ್ತಾ ತನ್ನ ಸ್ನೇಹಿತನನ್ನು ಹೊರಗಿನ ಪ್ರಪಂಚದ ವೈವಿಧ್ಯಮಯ ವರ್ಣನೆಯ ಮೂಲಕ ಸಂತೋಷಗೊಳಿಸುತ್ತಾ ಪ್ರತಿದಿನ ಹಲವು ಗಂಟೆಯ ಕಾಲ ಕಳೆಯುತ್ತಿದ್ದ. ಕೆಲವು ದಿನ ಅವನು ಆಸ್ಪತ್ರೆಯ ಪಕ್ಕದ ತೋಟದ ಮರಗಳ ಸೌಂದರ‌್ಯವನ್ನು ಮತ್ತು ಗಾಳಿಯ ಬಿರುಸಿನಿಂದಾಗಿ ಎಲೆಗಳು ಹೇಗೆ ನರ್ತಿಸುತ್ತಿವೆಯೆಂಬುದನ್ನೆಲ್ಲಾ ವರ್ಣಸುತ್ತಿದ್ದ. ಇನ್ನೂ ಕೆಲವು ದಿನ ಆಸ್ಪತ್ರೆಯ ಒಳಗೆ ನಡೆಯುತ್ತಿದ್ದಂತೆ ಜನರೇನು ಮಾಡುತ್ತಿರುತ್ತಾರೆಂದು ಹಂತ ಹಂತವಾಗಿ ತನ್ನ ಸ್ನೇಹಿತನನ್ನು ರಂಜಿಸುತ್ತಿದ್ದ. ಆ ಅದ್ಭುತಗಳನ್ನು ತಾನು ನೋಡಲು ಅಸಮರ್ಥನೆಂದು ಇನ್ನೊಬ್ಬ ಹತಾಶನಾದನು. ಅವನು ತನ್ನ ಸ್ನೇಹಿತನನ್ನು ಕಾಲಕ್ರಮೇಣ ಇಷ್ಟಪಡದಂತಾದನು. ನಂತರ ತೀವ್ರವಾಗಿ ಅವನನ್ನು ದ್ವೇಷಿಸಲಾರಂಭಿಸಿದನು.

ಒಂದು ರಾತ್ರಿ ತುಂಬಾ ಕೆಮ್ಮಿನಿಂದಾಗಿ ಕಿಟಕಿಯ ಪಕ್ಕದ ರೋಗಿಯ ಉಸಿರಾಟ ನಿಂತಿತು. ಸಹಾಯಕ್ಕೆಂದಿರುವ ಬಟನನ್ನು ಒತ್ತದೆ ಆ ಇನ್ನೊಬ್ಬ ವ್ಯಕ್ತಿ ಏನೂ ಮಾಡದೆ ಸುಮ್ಮನಾದನು. ಮರುದಿನ, ಕಿಟಕಿಯಾಚೆ ವೈವಿಧ್ಯಮಯ ದೃಶ್ಯಗಳನ್ನು ವರ್ಣಿಸುವ ಮೂಲಕ ಸಂತೋಷವನ್ನು ನೀಡಿದ ವ್ಯಕ್ತಿ ಸತ್ತನೆಂದು ತಿಳಿದು ಬಂತು. ಕೋಣೆಯಿಂದ ಅವನನ್ನು ಹೊರಗೆ ತೆಗೆದುಕೊಂಡು ಹೋಗಲಾಯಿತು. ಇನ್ನೊಬ್ಬ ವ್ಯಕ್ತಿ ಕೂಡಲೇ ತನಗೆ ಕಿಟಕಿಯ ಪಕ್ಕದ ಹಾಸಿಗೆ ಬೇಕೇಂದಾಗ ಅಲ್ಲಿನ ನರ್ಸು ಕೂಡಲೇ ಅವನ ಕೋರಿಕೆಯನ್ನು ನೆರವೇರಿಸಿದಳು. ಆದರೆ ಆತ ಬಹಳ ಆಸೆಯಿಂದ ಕಿಟಕಿಯಾಚೆ ನೋಡಿದಾಗ ಅವನಿಗೆ ಆಘಾತ ಕಾದಿತ್ತು. ಕಿಟಕಿಯ ಪಕ್ಕ ಕೇವಲ ಉದ್ದನೆಯ ಇಟ್ಟಿಗೆಯ ಗೊಡೆಯತ್ತಷ್ಟೆ. ಅವನ ಆ ಸ್ನೇಹಿತ, ಕಷ್ಟಕಾಲದಲ್ಲಿ ಸ್ವಲ್ಪ ಸಾಂತ್ವನ ನೀಡಲು, ತನ್ನ ಸ್ನೇಹಿತನ ಲೋಕವನ್ನು ಸ್ವಲ್ಪ ಉತ್ತಮಗೊಳಿಸಲು ಪ್ರೇಮದ ಸಂಕೇತವಾಗಿ ತನ್ನ ಮೂಲಕ ಆತ ಅದ್ಭುತ ದೃಶ್ಯಗಳನ್ನು ಸೃಷ್ಟಿಸಿಕೊಂಡು ಹೇಳಿದ್ದನು. ಆತ ನಿಸ್ವಾರ್ಥ ಪ್ರೇಮದಿಂದ ವರ್ತಿಸಿದ್ದನು.

ನಾನು ಈ ಕತೆ ಬಗ್ಗೆ ಯೋಚಿಸಿದಾಗ ಅದು ನನ್ನ ದೃಷ್ಟಿಕೋನವನ್ನು ಬದಲಿಸಲೆಂದೂ ವಿಫಲವಾಗುವುದಿಲ್ಲ. ಸಂತೋಷವಾಗಿ ಬದುಕಲು, ಹೆಚ್ಚು ತುಂಬು ಜೀವನ ನಡೆಸಲು, ನಾವು ಕಷ್ಟಗಳನ್ನು ಎದುರಿಸಿದಾಗ ನಮ್ಮ ದೃಷ್ಟಿಕೋನವನ್ನು ಬದಲಿಸುತ್ತಿರಬೇಕು ಮತ್ತು ನಿರಂತರವಾಗಿ ನಮ್ಮನ್ನು ನಾವು ಪ್ರಶ್ನಿಸುವಂತಿರಬೇಕು. ‘ನಕಾರಾತ್ಮವಾಗಿ ಭಾಸವಾಗುವ ಈ ಸ್ಥಿತಿಯನ್ನು ದೃಷ್ಟಿಸುವ ಇನ್ನೂ ಹೆಚ್ಚು ವಿವೇಚನೀಯ, ತಿಳುವಳಿಕೆಯುಳ್ಳ ದೃಷ್ಟಿಕೋನವಿದೆಯೇ?’

ನಾವು ಈ ಅತ್ಯಂತ ಕಡಿಮೆ ಕಾಲ ಮಾತ್ರ ಬದುಕಿರುತ್ತೇವೆ. ಸಮಸ್ತ ಯೋಜನೆಯಲ್ಲಿ ಅನಂತದ ಪರದೆಯ ಮೇಲೆ ನಮ್ಮ ಬದುಕು ಕೇವಲ ಚುಕ್ಕಿಯಂತಷ್ಟೆ. ಆದ್ದರಿಂದ ಜೀವನ ಪ್ರಯಾಣವನ್ನು ಸಂತೋಷದಿಂದ ಅನುಭವಿಸಲು ಮತ್ತು ಜೀವನಗತಿಯನ್ನು ಸವಿಯುವ ತಿಳುವಳಿಕೆಯನ್ನು ಹೊಂದಿರಿ.

===============

ಕೆಟ್ಟವರಿಗೂ ಒಳ್ಳೆಯದನ್ನೇ ಬಯಸೋಣ

ಒಂದೂರಿನಲ್ಲಿ ಹುಡುಗನಿದ್ದ. ಅವನು ಹುಟ್ಟು ತರಲೆಯಾಗಿದ್ದ. ಯಾವಾಗಲೂ ಏನಾದರೊಂದು ಕೀಟಲೆ ಮಾಡದಿದ್ದರೆ ಅವನಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನ ಮಾತನ್ನೇ ಕೇಳುತ್ತಿರಲಿಲ್ಲ.ಅವರಿಗೂ ಬುದ್ಧಿ ಹೇಳಿ ಹೇಳಿ ಸಾಕಾಗಿ ಇವತ್ತು ಸರಿ ಹೋಗಬಹುದು ನಾಳೆ ಸರಿಹೋಗಬಹುದು ಎಂದು ಅವರು ಕಾದು ಕಾದು ಸುಸ್ತಾಗಿದ್ದರು. ಅಕ್ಕಪಕ್ಕದವರೆಲ್ಲಾ ಹುಡುಗ

ಬುದ್ಧಿ ದೊಡ್ಡವನಾಗುತ್ತಾ ಸರಿ ಹೋಗುತ್ತಾನೆ ಅಂದುಕೊಳ್ಳುತ್ತಿದ್ದರು. ಬೆಳೆಯುವ ಪೈರು ಮೊಳಕೆಯಲ್ಲೆ ನೋಡು ಅಂತ ಮತ್ತೆ ಕೆಲವರು ಆಡಿಕೊಳ್ಳುತ್ತಿದ್ದರು. ಅವನ ತಂದೆ ತಾಯಿಗಳಿಗೂ ಇವನದೇ ದೊಡ್ಡ ಯೋಚನೆಯಾಗಿತ್ತು.

ಶಾಲೆಯಿಂದ ದಿನಾ ಏನಾದರೊಂದು ಇವನ ಮೇಲೆ ದೂರು ಇದ್ದದ್ದೆ. ಅವನಿಗೆ ಹೊಡೆದ, ಇವನಿಗೆ ಹೊಡೆದ,ಪುಸ್ತಕ ಹರಿದ ಎಂದು ದೂರುಗಳು ಬರುತ್ತಲೇ ಇದ್ದವು. ಇಷ್ಟೆಲ್ಲಾ ತರಲೆ ಓದುವುದರಲ್ಲಿ ಮುಂದಿದ್ದ. ಆತನ ಅಪ್ಪ ಅಮ್ಮನಿಗೆ ಇವನದೇ ದೊಡ್ಡ ಯೋಚನೆಯಾಗಿತ್ತು. ಶನಿವಾರ ಬಂತೆಂದರೆ ಸಾಕು ಮುಂಜಾನೆ ಶಾಲೆ ಮುಗಿಸಿಕೊಂಡು ಬಂದವನೇ ಶಾಲಾ ಸಮವಸ್ತ್ರ ಸಹ ಬಿಚ್ಚದೆ ಮನೆಯ ಹತ್ತಿರವೇ ಇದ್ದ ನದಿಗೆ ಮೀನು ಹಿಡಿಯಲು ಆತನ ಗೆಳೆಯನೊಂದಿಗೆ ಹೋಗುತ್ತಿದ್ದನು. ಮೀನು ಹಿಡಿದು ತರುವುದು ಮನೆಯ ತೊಟ್ಟಿಯಲ್ಲಿ ಹಾಕುವುದು ಮಾಡುತ್ತಿದ್ದ.

ಎಷ್ಟು ಹೋಗಬೇಡವೆಂದರೂ ಕೇಳುತ್ತಿರಲಿಲ್ಲ. ನದಿಯಲ್ಲಿ ಮೀನು ಹಿಡಿಯುವುದು, ಅದನ್ನು ತಂದು ಮನೆಯ ತೊಟ್ಟಿಯಲ್ಲಿ ಬಿಡುವುದು ಮಾಡುತ್ತಿದ್ದ. ಯಾವಾಗ ಇವನು ಹೋಗುತ್ತಾನೋ ಎಂದು ಅವನ ತಂದೆ ತಾಯಿ ಕಾಯುವುದೇ ಆಗಿತ್ತು. ಒಂದು ದಿನ ಅವನ ತಾಯಿ ಆತನನ್ನು ಕರೆದು ಅಂಗಡಿಯಿಂದ ತರಕಾರಿ ತರಲು ಹೇಳಿದರು. ಅಂಗಡಿಗೆ ಹೋಗಿ ತರಕಾರಿ ತೆಗೆದುಕೊಂಡು ಬರುತ್ತಿದ್ದ. ಸಂಜೆಯಾಗಿ ಕತ್ತಲಾಗುತ್ತಾ ಬಂದಿತ್ತು.

ಇನ್ನೆನು ಮನೆ ಸ್ವಲ್ಪ ದೂರ ಇತ್ತು, ಆಗ ವಿದ್ಯುತ್ ಕಡಿತವಾಗಿ ಬೀದಿಯೆಲ್ಲಾ ಕತ್ತಲಾಯಿತು. ಮೊದಲೇ ತರಲೆ ಹುಡುಗ, ಏನಾದರೂ ಕೀಟಲೆ ಮಾಡಬೇಕೆನಿಸಿತು ಅವನಿಗೆ. ರಸ್ತೆಗೆ ಟಾರ್ ಹಾಕಲೆಂದು ರಸ್ತೆಯ ಇಕ್ಕೆಲಗಳಲ್ಲಿ ದಪ್ಪ ದಪ್ಪ ಕಲ್ಲುಗಳನ್ನು ಹಾಕಿದ್ದರು. ಅದನ್ನು ನೋಡಿದ್ದೆ ತಡ ಹುಡುಗನ ತಲೆಯಲ್ಲೊಂದು ಯೋಚನೆ ಬಂತು. ಹೇಗೂ ಕರೆಂಟ್ ಹೋಗಿ ಬೀದಿ ದೀಪಗಳು ಆರಿದ್ದವು. ರಸ್ತೆಯ ಎರಡು ಬದಿಯಲ್ಲೂ ಬರಿ ಹೆಂಚಿನ ಮನೆಗಳೇ. ಒಂದು ದಪ್ಪ ಕಲ್ಲನ್ನು ಎಸೆಯುವೆ, ಕಲ್ಲು ಬಿದ್ದರೆ ಹೆಂಚು ಒಡೆದುಹೋಗುತ್ತದೆ. ಮಳೆಗಾಲದಲ್ಲಿ ಮನೆ ಸೋರುತ್ತದೆ. ಎಂದು ಯೋಚಿಸಿದವನೇ ಒಂದು ದೊಡ್ಡ ಜಲ್ಲಿ ಕಲ್ಲನ್ನು ತೆಗೆದುಕೊಂಡು ಮೇಲೆಸೆದನು. ಕಲ್ಲು ಮನೆ ಮೇಲೆ ಬಿದ್ದು ಮನೆಯವರು ಹೊರಬರುವುದರಲ್ಲಿ ಮನೆ ಸೇರಬೇಕೆಂದು ಓಡಿದನು.

ಓಡಿ ಸ್ವಲ್ಪ ಮುಂದೆ ಬಂದಿರಲ್ಲಿ, ಅವನು ಕಲ್ಲನ್ನು ಹೇಗೆ ಎಸೆದಿದ್ದನೋ? ಅವನು ಮುಂದೆ ಬಂದಾಗ ಅದು ಅವನ ತಲೆಯ ಮೇಲೆ ಬಿದ್ದು ರಕ್ತ ಬರಲಾರಂಬಿಸಿತು. ಅಯ್ಯೊ ಏನೋ ಮಾಡಲು ಹೋಗಿ ಏನೋ ಆಯಿತಲ್ಲಾ ಎಂದು ಅಳುತ್ತಾ ಮನೆಗೆ ಬಂದನು, ಅಳುತ್ತ ಬಂದ ಹುಡುಗನನ್ನು ಆತನ ಅಮ್ಮ ಏನಾಯಿತೆಂದು ಕೇಳಿದರು. ಆಗ ಹುಡುಗ ನಡೆದದ್ದನ್ನೆಲ್ಲಾ ವಿವರಿಸಿದನು. ಆಗ ಆತನ ಅಮ್ಮ ನೋಡಿದೆಯಾ, ನೀನು ಯಾವಾಗಲೂ ಏನಾದರೊಂದು ಕೀಟಲೆ ಮಾಡುತ್ತಿರುತ್ತಿಯ. ಯಾವಾಗಲೂ ಒಳ್ಳೆಯದನ್ನೆ ಬಯಸಬೇಕು. ಕೆಟ್ಟದ್ದು ಮಾಡಲು ಹೋದರೆ ನಮಗೆ ಕೆಡಕಾಗುತ್ತದೆ. ಅದಕ್ಕೆ ಇಂದಿನ ಘಟನೆಯೇ ಸಾಕ್ಷಿ. ಇನ್ನು ಮೇಲೆ ಹೀಗೆಲ್ಲಾ ಮಾಡಬೇಡ. ಎಲ್ಲರಿಂದ ಒಳ್ಳೆಯ ಹುಡುಗ ಅನ್ನಿಸಿಕೊಳ್ಳಬೇಕೆಂದರು. ಬಾಲುವಿಗೆ ತನ್ನ ತಪ್ಪಿನ ಅರಿವಾಗಿತ್ತು. ಅಂದಿನಿಂದ ಅವನು ಒಳ್ಳೆಯ ಹುಡುಗನಾಗಿ ಬಾಳಿದನು.

=======================================================

ವಿದ್ಯಾರ್ಥಿಗಳಿಗೆ ವಿನಯವೇ ಭೂಷಣ

ಒಂದೂರಿನಲ್ಲಿ ರಾಮಣ್ಣ ಎಂಬ ಶಿಕ್ಷಕರಿದ್ದರು. ರಾಮಾಪೂರ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದವರು. ಒಂದು ಸಲ ಅವರು ತಮ್ಮ ಕೆಲಸದ ನಿಮಿತ್ತ ಹೋಗಿದ್ದರು. ತಮ್ಮ ಕೆಲಸ ಮುಗಿಸಿ ಬಸ್ಸಿಗಾಗಿ ನಿಲ್ದಾಣದಲ್ಲಿ ಕುಳಿತಿದ್ದರು. ಅಲ್ಲಿಯೇ ಬಂದ ಹಳೆಯ ಶಿಷ್ಯ ರುದ್ರಣ್ಣ. ಗುರುಗಳನ್ನು ನೋಡಿ, ನಮಸ್ಕಾರ ಸರ್ ಎಂದ. ರಾಮಣ್ಣ ಗುರುಗಳಿಗೆ ಬೇಗನೇ ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ನೆನಪಿಸಿಕೊಂಡು, ನಮಸ್ಕಾರಪಾ ರುದ್ರಣ್ಣ ಬಾ ಎಂದು ತಮ್ಮ ಬಳಿಯಲ್ಲಿ ಕುಳ್ಳಿರಿಸಿಕೊಂಡರು. ಗುರುಗಳು ರುದ್ರಣ್ಣನ ಕ್ಷೇಮ ಸಮಾಚಾರ ಮತ್ತು ನೌಕರಿಯ ಬಗ್ಗೆ ವಿಚಾರಿಸಿದರು. ತರಗತಿಯಲ್ಲಿಯೇ ಜಾಣನೆಂದು ಬೀಗುತ್ತಿದ್ದ ರುದ್ರಣ್ಣನಿಗೆ ಗುರುಗಳ ಹತ್ತಿರ ತನ್ನ ಬಗ್ಗೆ ಹೇಳಿಕೊಳ್ಳಲು ಸಂಕೋಚವಾಯಿತು.

ನಾನು ಯಾವ ಸರಕಾರಿ ನೌಕರಿಯಲ್ಲೂ ಇಲ್ಲ. ನನ್ನ ದೈವವೇ ಚೆನ್ನಾಗಿಲ್ಲ. ನಿಮ್ಮಿಂದ ದಡ್ಡರೆಂದು ಕರೆಸಿಕೊಳ್ಳುತ್ತಿದ್ದವರೆಲ್ಲ ಇಂದು ನೌಕರಿಯಲ್ಲಿದ್ದು ಸುಖವಾಗಿದ್ದಾರೆ. ನಾನು ಜಾಣ ಎಂಬ ಅಹಂಕಾರದಿಂದ ನಡೆದುಕೊಂಡದ್ದರಿಂದ ನೌಕರಿಯ ಭಾಗ್ಯ ದೊರೆಯಲಿಲ್ಲ. ಪದವೀಧರನಾಗಿ ಶಿಕ್ಷಕ ತರಬೇತಿಯಾದರೂ ಐದನೆಯ ವರ್ಗದ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಹಂಗಾಮಿಯಾಗಿ ಕೆಲಸ ಮಾಡುತ್ತಲಿದ್ದೇನೆ. ಸಂಬಳವೂ ಜಾಸ್ತಿಯಿಲ್ಲ.

ಸರ್, ಅಂದು ನೀವು ತರಗತಿಯಲ್ಲಿ ಹೇಳುತ್ತಿದ್ದಿರಿ, ವಿದ್ಯಾರ್ಥಿಗೆ ಪ್ರತಿಯೊಂದು ಅಂಕವೂ ತುಂಬಾ ಮಹತ್ವದ್ದು. ಫಲಿತಾಂಶ ಮತ್ತು ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಒಂದು ಅಂಕಕ್ಕೆ ಬೆಲೆಯಿಲ್ಲವೆಂದು ತಿಳಿದುಕೊಳ್ಳಬಾರದು. ಒಂದು ಅಂಕದಿಂದ ಪಾಸಾಗಬಹುದು ಇಲ್ಲವೆ ನಪಾಸಾಗಬಹುದು. ಚೆನ್ನಾಗಿ ಅಭ್ಯಾಸ ಮಾಡಿ ಹೆಚ್ಚು ಅಂಕ ಗಳಿಸಿರಿ ಎಂದಿರಿ. ನನಗೆ ಅದು ಸರಿ ಎನಿಸಲಿಲ್ಲ. ನಾನು ಎದ್ದು ನಿಂತು, ಒಂದು ಅಂಕದಿಂದ ಏನೂ ಗಳಿಸಬೇಕಾಗಿಲ್ಲ. ಒಂದು ಅಂಕಕ್ಕೆ ಯಾವ ಬೆಲೆಯೂ ಇಲ್ಲ ಎಂದು ನಿಮ್ಮ ಮಾತನ್ನು ತಿರಸ್ಕರಿಸಿ ಉದ್ಧಟತನದಿಂದ ಮಾತನಾಡಿದೆ. ನನ್ನ ಮಾತಿನಿಂದ ನಿಮ್ಮ ಮನಸ್ಸಿಗೆ ತುಂಬಾ ನೋವಾಗಿರುವುದು ಕಂಡು ಬಂತು. ನಾನು ಮನದಲ್ಲಿಯೇ ಸಂತೋಷಪಟ್ಟೆ.

ನೀವು ಎಷ್ಟೇ ಒಳ್ಳೆಯ ರೀತಿಯಲ್ಲಿ ಮಾರ್ಗದರ್ಶನ ಮಾಡಿದರೂ ನಾನು ನಿಮ್ಮನ್ನು ದ್ವೇಷಿಸುತ್ತಲೇ ಬಂದೆ. ತರಗತಿಯಲ್ಲಿ ಅನವಶ್ಯಕ ಪ್ರಶ್ನೆಗಳನ್ನು ಕೇಳಿ, ನೀವು ತಬ್ಬಿಬ್ಬಾಗುವಂತೆ ಮಾಡುತ್ತಿದ್ದೆ. ನಿಮಗಾಗುವ ಅವಮಾನದಿಂದ ನಾನು ಖುಷಿಪಡುತ್ತಿದ್ದೆ. ಭೀಮನೆಂಬ ವಿದ್ಯಾರ್ಥಿಯ ಬಗ್ಗೆ ನಿಮಗೆ ನೆನಪಿರಬಹುದು. ಅವನ ತಂದೆಗೂ ನನ್ನ ತಂದೆಗೂ ಚುನಾವಣೆಯ ನಿಮಿತ್ತ ದ್ವೇಷ ಬೆಳೆಯಿತು. ನೀವು ಭೀಮನತ್ತ ಹೆಚ್ಚು ಒಲವು ತೋರುತ್ತಿದ್ದೀರಿ ಎಂಬ ಅನುಮಾನದಿಂದ ನಿಮ್ಮನ್ನು ದ್ವೇಷಿಸತೊಡಗಿದೆ. ಗೆಳೆಯರ ಮುಂದೆ ನಿಮ್ಮನ್ನು ಹತ್ತನೆ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಲು ನನ್ನ ಜಾಣತನವೇ ಕಾರಣವೆಂದು ಬಡಾಯಿ ಕೊಚ್ಚಿಕೊಂಡೆ. ಯಾವ ಶಿಕ್ಷಕರ ಉಪಕಾರವನ್ನೂ ಸ್ಮರಿಸಲಿಲ್ಲ. ಅಹಂಕಾರ ನನ್ನಲ್ಲಿ ಮನೆ ಮಾಡಿತ್ತು. ಈ ಅಹಂಕಾರದಿಂದಲೇ ನಾನು ಪಿಯುಸಿಯಲ್ಲಿ ಸರಿಯಾಗಿ ಅಭ್ಯಾಸ ಮಾಡದೆ ಫೇಲಾದೆ. ಒಂದು ವಿಷಯದಲ್ಲಿ ಒಂದೇ ಒಂದು ಅಂಕ ಹೆಚ್ಚು ಬಂದಿದ್ದರೆ ಪಾಸಾಗುತ್ತಿದ್ದೆ. ಒಂದು ಅಂಕದ ಮಹತ್ವ ನನಗಾಗ ತಿಳಿಯಿತು. ಆ ಒಂದು ಹೆಚ್ಚು ಅಂಕ ಸಿಕ್ಕಿದ್ದರೆ ನನ್ನ ಭವಿಷ್ಯವೇ ಬದಲಾಗುತ್ತಿತ್ತು. ಮುಂದೆ ಎರಡೆರಡು ಪರೀಕ್ಷೆ ಕಟ್ಟಿ ಪಿಯುಸಿ ಪಾಸಾದೆ. ಬಳಿಕ ಪದವೀಧರನಾಗಿ ಶಿಕ್ಷಕ ತರಬೇತಿಯನ್ನು ಪಡೆದುಕೊಂಡೆ. ಶಿಕ್ಷಕರನ್ನು ಆಯ್ಕೆ ಮಾಡುವ ಸಿಇಟಿ ಪರೀಕ್ಷೆಯಲ್ಲಿಯೂ ಒಂದೆರಡು ಅಂಕಗಳಲ್ಲಿ ಅವಕಾಶ ವಂಚಿತನಾದೆ. ಒಂದೇ ಒಂದು ಅಂಕದಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸಬಹುದು ಎಂದು ನನಗನಿಸತೊಡಗಿದೆ. ಮಿಂಚಿಹೋದ ಮಾತಿಗೆ ಚಿಂತಿಸಿ ಫಲವಿಲ್ಲ ಎಂದು ನನಗೆ ಈಗ ತಿಳಿದಿದೆ. ವಿದ್ಯಾರ್ಥಿಗೆ ವಿನಯವೇ ಭೂಷಣ. ಅಹಂಭಾವ ಅವನತಿಗೆ ಕಾರಣ. ನನಗೀಗ ಬುದ್ಧಿ ಬಂದಿದೆ. ನನ್ನ ತಪ್ಪನ್ನು ಮನ್ನಿಸಿ ಎಂದು ರುದ್ರಣ್ಣ ಗುರುಗಳ ಹಿಡಿದು ಬೇಡಿಕೊಂಡನು.

ಗುರುಗಳು ಅವನನ್ನು ಎತ್ತಿ ತಮ್ಮ ಬಳಿ ಕೂರಿಸಿಕೊಂಡರು. ರುದ್ರಣ್ಣ, ಹುಡುಗಾಟದ ವಯಸ್ಸಿನಲ್ಲಿ ಹೀಗಾಗುವುದು ಸಹಜ. ನಾನು ಎಲ್ಲವನ್ನೂ ಮರೆತಿದ್ದೇನೆ. ನಿನ್ನನ್ನು ಕ್ಷಮಿಸಬೇಕಲ್ಲ, ಕ್ಷಮಿಸಿದ್ದೇನೆ. ಅನ್ಯಥಾ ಭಾವಿಸಬೇಡ. ನಿನ್ನ ತಪ್ಪಿನ ಅರಿವು ನಿನಗಾದುದು ಬಹಳ ಸಂತೋಷವಾಗಿದೆ. ಮತ್ತೆ ಸಿಇಟಿ ಪರೀಕ್ಷೆಗೆ ಕಟ್ಟು, ಚೆನ್ನಾಗಿ ಅಭ್ಯಾಸ ಮಾಡು. ಪ್ರಯತ್ನಕ್ಕೆ ತಕ್ಕ ಫಲವಿದೆ. ನಿನಗೆ ನನ್ನ ಆಶೀರ್ವಾದ ಇದ್ದೇ ಇದೆ. ನೀನು ಯಾವ ಚಿಂತೆಯನ್ನೂ ಮಾಡಬೇಡ. ಎಂದು ರಾಮಣ್ಣ ಗುರುಗಳು ಮಾಡಿದರು. ರುದ್ರಣ್ಣನ ಮನಸ್ಸಿಗೆ ಸಮಾಧಾನವಾಯಿತು. ಅವನು ಗುರುಗಳ ಮಾತಿನಂತೆಯೇ ನಡೆಯುವ, ಕಠಿಣ ಪರಿಶ್ರಮ ಪಟ್ಟು ಸಾಧಿಸುವ ಗುರಿ ಹೊಂದಿದನು.

================================================================

ಸ್ನೇಹದಲ್ಲಿ ನಿಸ್ವಾರ್ಥ ಪ್ರೇಮವಿರಬೇಕು

ಒಂದು ಕಾಡಿನಲ್ಲಿ ಹುಲಿ, ಜಿಂಕೆ, ನರಿ, ಕರಡಿ, ಕೋಣ ಸೇರಿದಂತೆ ಹತ್ತಾರು ಪ್ರಾಣಿಗಳಿದ್ದವು. ಕಾಡು ಹುಲುಸಾಗಿ ಬೆಳೆದಿತ್ತು. ಹೀಗಾಗಿ ಎಲ್ಲ ಪ್ರಾಣಿಗಳೂ ಸುಖದಿಂದ ಜೀವಿಸುತ್ತಿದ್ದವು. ಒಮ್ಮೆ ಇದ್ದಕ್ಕಿದ್ದಂತೆ ಬರಗಾಲ ಬಂತು. ಗಿಡ-ಮರಗಳು ಒಣಗುತ್ತಾ ಬಂದವು. ಅವುಗಳನ್ನೇ ನಂಬಿದ್ದ ಅನೇಕ ಪ್ರಾಣಿಗಳಿಗೆ ಸಾವೇ ಗತಿಯಾಯಿತು. ಈ ಕಾಡಿನಲ್ಲಿ ಉಳಿಗಾಲವಿಲ್ಲ ಎಂದು ಅರಿತ ಅನೇಕ ಪ್ರಾಣಿಗಳು ಅಲ್ಲಿಂದ ದೂರ ನಡೆದವು. ಕೊನೆಗೆ ಅಲ್ಲಿ ಉಳಿದದ್ದು ನರಿ ಮತ್ತು ಕರಡಿ. ಅವೆರಡೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಗಾಢ ಸ್ನೇಹಿತರಾಗಿದ್ದವು.

ಒಮ್ಮೆ ಅವೆರಡೂ ಸೇರಿ ಯೋಚಿಸಿದವು. ನಾವು ಬದುಕಬೇಕಾದರೆ ಏನಾದರೂ ಮಾಡಬೇಕು ಎಂದು ತಿರ್ಮಾನಿಸಿ ಕಾಡಿನಿಂದ ಸ್ವಲ್ಪ ದೂರದಲ್ಲಿದ್ದ ಕೆರೆಯ ಬಳಿ ಬಂದವು. ಸಂಜೆಯಾಗಿತ್ತು. ಕೆರೆಕಟ್ಟೆಯ ಮೇಲೆ ಅದೇ ಕಾಡಿನ ಕಪ್ಪೆಯೊಂದು ವಟಗುಡುತ್ತಿತ್ತು. ಬರಗಾಲದಿಂದ ಕಂಗೆಟ್ಟಿದ್ದ ಆ ಕಾಡಿನಲ್ಲಿ ಮೋಡಗಳು ಮಳೆ ಬರುವ ಸೂಚನೆ ಕಂಡು ಅವುಗಳಿಗೆ ಖುಷಿಯಾಯಿತು.

ಆಗ ಕಪ್ಪೆ, ‘ಏ ಎಲ್ಲಿಗೆ ಹೋಗುತ್ತಿದ್ದೀರಿ? ಮಳೆ ಬರಬಹುದು. ಬನ್ನಿ, ಇಂದು ರಾತ್ರಿ ನಮ್ಮ ಮನೆಯಲ್ಲೇ ಇರಿ, ಬೆಳಗ್ಗೆ ಹೋದರಾಯಿತು’ ಎಂದು ನರಿ ಮತ್ತು ಕರಡಿಗೆ ಹೇಳಿತು.

ಗೆಳೆಯರಿಬ್ಬರೂ ಒಪ್ಪಿ ಕಪ್ಪೆ ಮನೆಗೆ ಬಂದರು. ಕಪ್ಪೆ ಅವರನ್ನು ಬರಮಾಡಿಕೊಂಡು ಅವರ ಕಥೆಯನ್ನೆಲ್ಲಾ ಕೇಳಿತು. ಆಗ ಮಾತು ಆರಂಭಿಸಿದ ಕಪ್ಪೆ, ನೀವು ನಾನು ಹೇಳಿದ ಹಾಗೆ ಕೇಳಿದರೆ ನಿಮ್ಮ ಸಮಸ್ಯೆ ದೂರವಾಗುತ್ತದೆ. ಸ್ವತಂತ್ರವಾಗಿ ಬದುಕಬಹುದು. ಇನ್ನೊಬ್ಬರ ಮೇಲೆ ಅವಲಂಬಿತರಾಗುವ ಅವಶ್ಯಕತೆಯೇ ಇಲ್ಲ. ಕೆರೆ ಪಕ್ಕದಲ್ಲೇ ನನ್ನ ದೊಡ್ಡ ಜಮೀನಿದೆ. ಅಲ್ಲಿ ನೀವು ಬೇಸಾಯ ಮಾಡಿ. ಬೆಳೆದುದರಲ್ಲಿ ವರ್ಷಪೂರ್ತಿ ನಿರಾಳವಾಗಿ ಬದುಕಬಹುದು ಎಂದು ಸಲಹೆ ನೀಡಿತು. ಕಪ್ಪೆಯ ಸಲಹೆ ನರಿ ಮತ್ತು ಕರಡಿಗೆ ಒಪ್ಪಿಗೆಯಾಯಿತು.

ಹೇಗಿದ್ದರೂ ಇಂದು ಮಳೆ ಬಿದ್ದಿದೆ. ನಾಳಿನಿಂದಲೇ ಬೇಸಾಯ ಆರಂಭಿಸೋಣ ಎಂದು ನಿರ್ಧರಿಸಿದವು. ಕಪ್ಪೆ ಮನೆಯ ಮೂಲೆಯಲ್ಲಿದ್ದ ನೇಗಿಲು, ಸೆನಿಕೆಗಳನ್ನು ಸಿದ್ದ ಮಾಡಿತು. ಬೆಳಗ್ಗೆ ಎಲ್ಲರೂ ಜಮೀನಿಗೆ ಬಂದು ಉಳುಮೆ ಮಾಡಲು ಆರಂಭಿಸಿದರು.

ಈ ಮಧ್ಯೆ ಕುತಂತ್ರ ಯೋಚಿಸಿದ ನರಿ ಕರಡಿಯನ್ನು ಕರೆದು, ಈಗ ನಾವು ಮಾಡುವ ಬೇಸಾಯದಲ್ಲಿ ಬರುವ ಫಸಲನ್ನು ಹೇಗೆ ಹಂಚಿಕೊಳ್ಳುವುದು ಎಂದು ನಿರ್ಧಾರ ಮಾಡಿ ಕೆಲಸ ಆರಂಭಿಸೋಣ ಎಂದಿತು. ಕರಡಿ ಸುಮ್ಮನೆ ತಲೆಯಾಡಿಸಿತು. ಸರಿ, ಈ ಬಾರಿ ನೆಲದ ಮೇಲೆ ಬರೋ ಫಸಲು ನಿನ್ನದು, ನೆಲದ ಒಳಗೆ ಬರೋ ಫಸಲು ಮಾತ್ರ ನನ್ನದು ಎಂದಿತು. ಒಪ್ಪಂದ ಮುಗಿದ ಬಳಿಕ ಕೆಲಸ ಆರಂಭವಾಯಿತು. ಕರಡಿಯ ಬೆನ್ನಿಗೆ ನರಿ ಜಮೀನು ಉಳುಮೆ ಮಾಡಿತು. ಕಡಲೇಕಾಯಿ ಬೀಜದ ಬಿತ್ತನೆಯೂ ನಡೆಯಿತು.

ಕಾಲ ಕಾಲಕ್ಕೆ ಗೊಬ್ಬರ, ನೀರು ಹಾಯಿಸಿ ಒಳ್ಳೇ ಬೆಳೆ ತೆಗೆದವು. ಒಪ್ಪಂದದಂತೆ ನೆಲದೊಳಗೆ ಬೆಳೆದಿದ್ದ ಕಡಲೇಕಾಯಿ ನರಿಯ ಪಾಲಿಗೆ ಬಂದರೆ, ನೆಲದ ಮೇಲೆ ಬೆಳೆದಿದ್ದ ಕಡಲೇಸೊಪ್ಪು ಕರಡಿಯ ಪಾಲಾಯಿತು. ಕರಡಿಗೆ ತೀವ್ರ ನಿರಾಶೆಯಾಯಿತು. ಇದನ್ನು ಪ್ರತಿಭಟಿಸಿದ ಕರಡಿ, ನೀನು ಕುತಂತ್ರ ಮಾಡಿದ್ದೀಯೆ. ಈ ಸೊಪ್ಪು ಪಡೆದು ನಾನೇನು ಮಾಡಲಿ? ಈ ಬಾರಿ ನೆಲದ ಮೇಲೆ ಬೆಳೆಯೋದು ನಿನ್ನದು, ಬೆಳೆಯೋದು ನನ್ನದು ಎಂದು ನಿಯಮ ಬದಲಿಸಿತು.

ಪೆದ್ದು ಕರಡಿಯ ಮಾತು ಕೇಳಿದ ನರಿ, ಆಗಲಿ ಎಂದು ಹೇಳಿ ಈ ಬಾರಿ ಜೋಳ ಬಿತ್ತನೆ ಮಾಡಿತು. ತಿಂಗಳುಗಳು ಕಳೆದು ಫಸಲು ಬಂತು. ಆಗ ಒಪ್ಪಂದದಂತೆ ಜೋಳವೆಲ್ಲಾ ನರಿ ಪಾಲಾಯಿತು. ಬರೀ ಬೇರು-ಕಾಂಡ ಕರಡಿಗೆ ಸಿಕ್ಕಿತು. ಜೋಳ ಮಾರಿ ಹಣ ಮಾಡಿಕೊಂಡ ನರಿ ಗತ್ತಿನಿಂದ ಬೀಗಿತು. ಪೆದ್ದುತನಕ್ಕೆ ಬೆಲೆತೆತ್ತ ಕರಡಿ ನಿರಾಶೆಯಿಂದ ದುಃಖಿಸಿತು. ಬೇಸರಗೊಂಡ ಕರಡಿ, ಕಪ್ಪೆಯ ಬಳಿ ಬಂದು ತನ್ನ ತೋಡಿಕೊಂಡಿತು. ಕಪ್ಪೆ ನರಿಯ ಕುತಂತ್ರ ಅರಿತು ಕೋಪದಿಂದ ಅಬ್ಬರಿಸಿತು.

ನರಿಯನ್ನು ಕರೆದು, ನೀವಿಬ್ಬರೂ ಒಳ್ಳೆಯ ಗೆಳೆಯರು. ನಿಮ್ಮ ಕಷ್ಟಕ್ಕೆ ನಾನು ನೆರವಾಗಬಹುದು. ಇಬ್ಬರೂ ಸಮಾನವಾಗಿ ಹಂಚಿಕೊಂಡು ಬೆಳೆಯಿರಿ ಎಂದು ನಾನು ಸಹಾಯ ಮಾಡಿದೆ. ಆದರೆ ನೀನು, ನಿನ್ನ ಗೆಳೆಯನಿಗೇ ವಂಚನೆ ಮಾಡಿದ್ದೀಯಾ. ನಿನ್ನ ಸ್ವಾರ್ಥದಿಂದ ಏನೂ ಗಳಿಸಲಾಗದು. ನೀನಿನ್ನು ಈ ಭೂಮಿಯಲ್ಲಿ ಬೇಸಾಯ ಮಾಡುವ ಹಾಗಿಲ್ಲ. ಇಲ್ಲಿಂದ ಹೊರಡಬಹುದು ಎಂದು ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿ ಊರಿನಿಂದ ಹೊರ

ನರಿ ತನ್ನ ಕುತಂತ್ರ ಬುದ್ದಿಯಿಂದ ಒಳ್ಳೆಯ ಸ್ನೇಹಿತರನ್ನು, ದುಡಿಮೆಯ ಆಧಾರವನ್ನೂ ಕಳೆದುಕೊಂಡು ಬೀದಿಗೆ ಬಿತ್ತು. ಇತ್ತ ಕಪ್ಪೆ ಮತ್ತು ಕರಡಿ ಬೇಸಾಯ ಮುಂದುವರೆಸಿ ಸಂತೋಷದಿಂದ ಬಾಳಿದವು.

===================================================================

ಬದಲಾವಣೆಯೇ ನೂತನ ಜೀವನದ ಒಗ್ಗರಣೆ

ಅನೇಕ ವರ್ಷಗಳ ಹಿಂದೆ ಧನುಶರ್ಮಾ ಎಂಬ ರಾಜನಿದ್ದ. ಬಲಾಢ್ಯನಾದ ಆತನಲ್ಲಿ ಶಕ್ತಿಶಾಲಿ ಸೈನ್ಯವಿದ್ದುದರಿಂದ ತನ್ನ ರಾಜ್ಯವನ್ನು ವಿಸ್ತರಿಸುವ ಬಯಕೆಯಾಯಿತು. ಅಂತೆಯೇ ಸುತ್ತಮುತ್ತಲಿರುವ ರಾಜ್ಯಗಳಿಗೆ ಹೋಗಿ ಯುದ್ಧಸಾರಿ ಅವರನ್ನು ಸೋಲಿಸಿ ತನ್ನ ಸಾಮಂತರನ್ನಾಗಿ ಮಾಡಿಕೊಳ್ಳತೊಡಗಿದ. ಎಲ್ಲಾ ಅವನಿಗೆ ಗೆಲುವು ಸಿಕ್ಕಿತು. ಅವನ ಸಾಮ್ರಾಜ್ಯ ವಿಸ್ತರಿಸತೊಡಗಿತು. ಹೀಗೆ ಧನುಶರ್ಮಾನ ರಾಜ್ಯ ವಿಸ್ತರಿಸುವ ಬಯಕೆ ದುರಾಶೆಯಾಗಿ ಪರಿವರ್ತನೆಯಾಯಿತು.
ಒಮ್ಮೆ ರಾಜನಿಗೆ ಬೇಟೆಯಾಡುವ ಬಯಕೆಯಾಗಿ ಮಂತ್ರಿಗೆ, ಕಾಡಿನಲ್ಲಿ ನಾನೊಬ್ಬನೇ ಬೇಟೆಯಾಡುವ ಬಯಕೆಯಾಗಿದೆ. ನನ್ನ ರಕ್ಷಣೆಗೆ ಯಾವ ಸೈನಿಕರೂ ಬೇಡ ಎಂದು ನುಡಿದ. ಆಗ ಮಂತ್ರಿ ತಲೆ ತಗ್ಗಿಸಿ, ಆಯ್ತು ಮಹಾಪ್ರಭುಗಳೇ, ಜಾಗ್ರತೆಯಿಂದ ಹೋಗಿಬನ್ನಿ ಎಂದು ವಿನಂತಿಸಿಕೊಂಡ.

ಮಹಾರಾಜ ಒಬ್ಬನೇ ಬೇಟೆಗಾಗಿ ಅಲೆಯುತ್ತಾ ಅಲೆಯುತ್ತಾ ಕಾಡಿನ ಮಧ್ಯೆ ಬಂದ. ಬೇಟೆಯಾಡುತ್ತಾ ಪ್ರಾಣಿಗಳನ್ನು ಅವನಿಗೆ ವೇಳೆ ಕಳೆದದ್ದೇ ಗೊತ್ತಾಗಲಿಲ್ಲ. ತುಂಬಾ ಆಯಾಸ, ಹಸಿವೆಯಾಗತೊಡಗಿತು. ಅಲ್ಲೆಲ್ಲಾದರೂ ನೀರು ದೊರೆಯಬಹುದು ಎಂದು ಸುತ್ತಲೂ ನೋಡಿದ. ಎಲ್ಲೂ ಒಂದು ಹನಿ ನೀರಿನ ಒರತೆಯೂ ಕಾಣಿಸಲಿಲ್ಲ. ಇನ್ನೇನು ಮಾಡುವುದೆಂದು ಚಿಂತಿತನಾಗಿ ಅತ್ತಿತ್ತ ನೋಡುವಷ್ಟರಲ್ಲಿ ಸ್ವಲ್ಪ ದೂರದಲ್ಲಿ ಗುಹೆಯೊಂದು ಕಾಣಿಸಿತು. ರಾಜನಿಗೆ ಅಲ್ಲೇನಾದರೂ ತಿನ್ನಲೋ ಅಥವಾ ಕುಡಿಯಲೋ ಸಿಗಬಹುದು ಎಂದು ಆಸೆಯಾಗಿ ಹತ್ತಿರ ಹೋಗಿ, ಒಳಗೆ ಯಾರಿದ್ದೀರಾ? ಎಂದು ಜೋರಾಗಿ ಕೂಗಿದ.

ಆಗ ಆ ಗುಹೆಯಿಂದ ಮುನಿಯೊಬ್ಬ ಹೊರಬಂದು, ಬನ್ನಿ ಬನ್ನಿ. ಕುಳಿತುಕೊಳ್ಳಿ ಎಂದು ಚಾಪೆ ಹಾಸಿದ. ಮಹಾರಾಜ ಅಲ್ಲೇ ಕುಳಿತು ಆಯಾಸ ಪರಿಹರಿಸಿಕೊಳ್ಳತೊಡಗಿದ. ಮುನಿ ರಾಜನಿಗೆ ಕುಡಿಯಲು ಪನ್ನೀರು ಕೊಟ್ಟ. ಅದನ್ನು ಕುಡಿದಾಗ ರಾಜನಿಗೆ ಹೊಸ ಚೈತನ್ಯ ಬಂದಂತಾಯ್ತು. ತಿನ್ನಲು ಏನಾದರೂ ತಿಂಡಿ ದೊರಕಬಹುದೆಂದೂ ಕಾತುರದಿಂದಿದ್ದಾಗ, ಮುನಿಯು ಬಾಳೆ ಎಲೆಯೊಂದರಲ್ಲಿ ಒಂದಷ್ಟು ಚಿನ್ನದ ನಾಣ್ಯಗಳನ್ನು ಹಾಕಿಕೊಂಡು ತಂದ. ಅದನ್ನು ರಾಜನ ಮುಂದಿಟ್ಟು, ಬಹಳ ಹಸಿವೆಯಾಗಿರಬೇಕಲ್ಲವೇ ಮಹಾರಾಜರೇ, ತಿನ್ನಿ ಎಂದ.

ಹಸಿದಿದ್ದ ರಾಜನಿಗೆ ಸಿಟ್ಟು ಬಂದು, ಏನಿದು ಪರಿಹಾಸ್ಯ ಮುನಿಗಳೇ? ತಿನ್ನಲಾದೀತೇ? ಎಂದು ರೇಗಾಡಿದ. ಅದಕ್ಕೆ ಮುನಿಗಳು ಶಾಂತವಾಗಿಯೇ ಉತ್ತರಿಸಿದರು, ಕೋಪಿಸಿಕೊಳ್ಳಬೇಡಿ ಮಹಾರಾಜರೇ, ನೀವು ಕೇವಲ ಯುದ್ಧ ಮಾಡಿ ರಾಜ್ಯಗಳನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿರುವಿರಿ. ಆದರೆ ಪ್ರಜೆಗಳ ಯೋಗಕ್ಷೇಮದ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಭೀಕರ ಬರಗಾಲದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ನೀವು ಅವರ ಕಷ್ಟವನ್ನು ಪರಿಹರಿಸುವುದನ್ನು ಬಿಟ್ಟು ಮೋಜಿಗಾಗಿ ಬೇಟೆಯಾಡಲು ಬಂದಿರುವಿರಲ್ಲಾ? ಎಂದಾಗ ಧನುಶರ್ಮಾನಿಗೆ ತನ್ನ ತಪ್ಪಿನ ಅರಿವಾಯ್ತು.

ಅಂದಿನಿಂದಲೇ ರಾಜ ಜನರ ಹಿತಕ್ಕಾಗಿ ಶ್ರಮಿಸತೊಡಗಿದ. ಕೆರೆ, ಬಾವಿಗಳನ್ನು ಕಟ್ಟಿಸಿ ಸ್ವಂತ ಮಕ್ಕಳಂತೆ ಪಾಲಿಸತೊಡಗಿದ. ಪ್ರಜೆಗಳು ಕಷ್ಟದಲ್ಲಿದ್ದಾಗ ಎಂದೂ ತನ್ನ ಸ್ವಂತ ಸುಖವನ್ನು ಬಯಸಿ ಸ್ವಾರ್ಥದಿಂದ ಇರಲಿಲ್ಲ. ಇದರಿಂದಾಗಿ ಜನರಿಗೂ ಅವನ ಮೇಲೆ ಗೌರವ, ಪ್ರೀತಿ ಮೂಡಿತು. ಅವರೂ ಅವನನ್ನು ಪ್ರೀತಿಯಿಂದ ಆದರಿಸತೊಡಗಿದರು. ರಾಜ ಹಾಗೂ ಜನರ ಜೀವನದಲ್ಲಿ ನೆಮ್ಮದಿ ಮೂಡಿತು.

Tags

Related Articles

Leave a Reply

Your email address will not be published. Required fields are marked *

Language
Close