About Us Advertise with us Be a Reporter E-Paper

ಗುರು

ಸ್ವಯಂ ನಿಯಂತ್ರಣವಿರಲಿ..

* ಮಹಾದೇವ ಬಾಸರಕೋಡು

ನಮಗೆ ಒಂದು ವಿಷಯದ ಕುರಿತಾಗಿ ಸರಿಯಾದ ವಿವರಗಳು ತಿಳಿದಿದ್ದರೆ ಮಾತ್ರ ನಾವು ನಿಖರವಾದ ಅಭಿಪ್ರಾಯ ಕೊಡಲು ಸಾಧ್ಯವಾಗುತ್ತದೆ. ಆದರೆ ಬಹುತೇಕ ಯಾವುದೋ ಒಂದು ಕಲ್ಪನೆಗೆ ಜೋತು ಬಿದ್ದು ಅಥವಾ ಅನುಮಾನ ಮೂಡಿಸಿಕೊಂಡು, ಇಲ್ಲವೇ ಯಾರೋ ಹೇಳಿದ ಗಾಳಿಸುದ್ದಿಯನ್ನು ಪರಮಸತ್ಯವೆಂದು ನಂಬಿ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸುವುದು ಮಾತ್ರವಲ್ಲದೇ, ನಮ್ಮ ಅಭಿಪ್ರಾಯವೇ ಸರಿ ಎಂಬ ವಿತಂಡವಾದಕ್ಕೆ ಮುಂದಾಗುತ್ತೇವೆ. ಪ್ರತಿಯೊಂದು ಹಂತದಲ್ಲಿಯೂ ನನ್ನ ಯೋಚನೆಯೇ ಅಂತಿಮ ಎಂಬ ಭ್ರಾಮಕತೆಗೆ ನಾವು ಬಲೆಯಲ್ಲಿ ಬೀಳುತ್ತೇವೆ. ಇಂತಹ ಸಂದರ್ಭಗಳಲ್ಲಿ ನಮಗೆ ಮುಜುಗರ ಉಂಟಾಗುತ್ತದೆ. ಇದರಿಂದ ವ್ಯತಿರಿಕ್ತ ಪರಿಣಾಮವನ್ನು ನಾವು ಅನುಭವಿಸುತ್ತೇವೆ. ಇತರರಿಂದ ಅಪಹಾಸ್ಯಕ್ಕೆ ಒಳಗಾಗುತ್ತೇವೆ. ನಮ್ಮ ಮೇಲೆ ನಾವೇ ಕಲ್ಲುಚಪ್ಪಡಿ ಎಳೆದುಕೊಳ್ಳುತ್ತೇವೆ.

ದಟ್ಟವಾದ ಕಾಡು. ಆನೆಯೊಂದು ಕಾಡಿನ ಮಧ್ಯದಲ್ಲಿರುವ ಕೊಳದಲ್ಲಿ ಅತ್ಯಂತ ಸಂತಸದಿಂದ ಜಲಕ್ರೀಡೆಯಾಡುತ್ತಿತ್ತು. ಅಲ್ಲಿಗೆ ಬಂದ ಅದರ ಸ್ನೇಹಿತ ಇಲಿಯೂ ಕೂಡ ಕೊಳದ ಹತ್ತಿರ ಬಂದಿತು. ಆನೆಯನ್ನು ಬೇಗನೆ ಕೊಳದಿಂದ ಹೊರಬರುವಂತೆ ಒತ್ತಾಯಿಸತೊಡಗಿತು. ಅದೇ ತಾನೆ ಕೊಳದಲ್ಲಿ ಇಳಿದಿದ್ದ ಆನೆ ಹೊರಬರಲು ನಿರಾಕರಿಸಿತು. ತಾನು ಇನ್ನಷ್ಟು ಇಲ್ಲಿಯೇ ಸ್ವಚ್ಛಂದವಾಗಿ ವಿಹರಿಸುವೆ ಎಂದಿತು. ‘ಇಲ್ಲ ಈ ಕ್ಷಣವೇ ನೀನು ಹೊರಬರಬೇಕು’ ಎಂದು ಇಲಿ ಮತ್ತೆ ಒತ್ತಾಯಿಸಿತು. ಇದೀಗ ತಾನೆ ಕೊಳಕ್ಕೆ ಇಳಿದಿರುವ ಅದೇಕೆ ನನಗೆ ಹೊರಬರಲು ಒತ್ತಾಯಿಸುತ್ತಿರುವೆ?’ ಎಂದಿತು.

‘ಇಲ್ಲ ನೀನು ಹೊರ ಬಂದ ನಂತರವಷ್ಟೇ ನಾನು ಹೇಳುವೆ’ ಎಂದಿತು ಇಲಿ. ‘ಹಾಗಾದರೆ ನಾನು ಬರುವುದಿಲ್ಲ’ ಎಂದಿತು ಆನೆ. ಇಲಿ ಮತ್ತೆ ಮತ್ತೆ ಒತ್ತಾಯಿಸುತ್ತಲೇ ಇತ್ತು. ಆನೆ ಮಾತ್ರ ತನ್ನ ಪಾಡಿಗೆ ತಾನು ಜಲಕ್ರೀಡೆಯಾಡಿತು. ತನಗೆ ಸಾಕು ಎನಿಸಿದ ನಂತರ ಹೊರಬಂದಿತು. ‘ಈಗ ಹೇಳು ನಾನು ಕೊಳದಿಂದ ಹೊರಬರಲು ಅದೇಕೆ ಅಷ್ಟೊಂದು ಒತ್ತಾಯಿಸಿದೆ?’ ಎಂದು ಕೇಳಿತು ‘ನನ್ನ ಈಜುಡುಗೆ ಕಳೆದು ಹೋಗಿದೆ. ಅದನ್ನು ನೀನು ಹಾಕಿಕೊಂಡಿರುವೆಯೆನೋ ಎಂದು ನೋಡಬೇಕಿತ್ತು.’ ಎಂದಿತು ಇಲಿ.

ವಾಸ್ತವಿಕತೆಯನ್ನು ಮರೆತು ನಮ್ಮದೇ ಭ್ರಮಾತ್ಮಕ ವಲಯದಲ್ಲಿ ನಮ್ಮ ಮನಸ್ಸು ವಿಹರಿಸುವುದರ ಪರಿಣಾಮವಿದು. ನಮ್ಮ ಮನಸ್ಸು ಇರುವುದು ಹಾಗೆಯೇ. ಅದು ಇಚ್ಛಿತ ರೀತಿಯಲ್ಲಿ ಕಾರ‌್ಯ ನಿರ್ವಹಿಸಲು ನಿರಾಕರಿಸುತ್ತ ಅದು ತನ್ನದೇ ಆದ ಹಾಸ್ಯಾಸ್ಪದ ಕೆಲಸಗಳಲ್ಲಿ ಅನೇಕ ಬಾರಿ ಕಾರ‌್ಯಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಅನೇಕ ಬಾರಿ ಅವಿವೇಕದಿಂದ ವರ್ತಿಸುತ್ತದೆ. ನಮ್ಮ ನಿಯಂತ್ರಣದಲ್ಲಿ ನಿಲ್ಲದೇ ನಮ್ಮ ವ್ಯಕ್ತಿತ್ವ ನಿಂದನೆಗೆ ಮಾಡುತ್ತದೆ. ಮನಸ್ಸಿನ ಮೇಲೆ ಹಿಡಿತ ಸಾಧಿಸುವುದರ ಮೂಲಕ ಸ್ವಯಂನಿಯಂತ್ರಣದಲ್ಲಿ ಪರಿಣಿತಿ ಪಡೆದರೆ ಇಂತಹ ಮುಜುಗರಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು. ಸಾಂದರ್ಭಿಕತೆಯನ್ನು ಅರಿತುಕೊಳ್ಳಬೇಕು. ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಒಂದಷ್ಟು ವಿವೇಚನೆಯಿಂದ ಅಭಿಪ್ರಾಯಗಳನ್ನು ಮಂಡಿಸಬೇಕು. ಸ್ವಯಂನಿಯಂತ್ರಣವನ್ನು ಸಾಧಿಸಬೇಕು. ಇದರಿಂದಾಗಿ ಅಸೂಯೆ, ಭಯ, ಪ್ರತಿಕಾರ ನಮ್ಮಿಂದ ತಾನಾಗಿಯೇ ದೂರ ಸರಿದು ಆತ್ಮವಿಶ್ವಾಸವನ್ನು ಇಂಬುಗೊಳ್ಳುತ್ತದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಪರಿಸ್ಥಿತಿಯ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ. ವಿವೇಚನೆಯಿಂದ ವರ್ತಿಸಲು ಸಾಧ್ಯವಾಗುತ್ತದೆ. ನಮ್ಮ ಯಶಸ್ವಿ ಬದುಕಿಗೆ ಮಾರ್ಗದರ್ಶಿಯಾಗುತ್ತದೆ. ತಾಳ್ಮೆಯಿಂದ ವರ್ತಿಸಲು ಪ್ರೇರೇಪಿಸುತ್ತದೆ. ಎಲ್ಲ ಕೆಡಕುಗಳನ್ನು ಕೆಡವಿ ನಮ್ಮೆಲ್ಲ ಕೆಲಸ ಕಾರ್ಯಗಳಲ್ಲೂ ಯಶಸ್ಸು ಕಾಣಲು ಸಾಧ್ಯವಾಗಿಸುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close