ಕಣ್ತುಂಬ ನೂರಾರು ಕನಸು, ನಿರ್ಧರಿಸಿದ ಗುರಿ ಸೇರಲೇಬೇಕೆಂಬ ಹುಮ್ಮಸ್ಸು, ಸರಿಯಾಗಿ ಓದಲೇಬೇಕೆಂಬ ಮನಸ್ಸು, ಒನ್ಸಪಾನ್ ಎ ಟೈಮಲ್ಲಿ ಹಿಂಗಿದ್ದ ಪಾಪಿ ಜೀವ ಇದು. ಆದ್ರೆ ಖಂಡಿತ ಈಗ ಪಕ್ಕಾ ಉಲ್ಟಾ! ಅದ್ಯಾವ ಗಳಿಗೆಯಲ್ಲಿ ನನ್ ಕಣ್ಣೆದುರು ಬಂದೆಯೋ ಅಂದೇ ಸಂಪೂರ್ಣವಾಗಿ ಈ ದಿಲ್ ನಿಂಗೆ ಸೇಲಾಗೊಯ್ತು! ಕ್ಯಾಷುವಲ್ಲಾಗಿದ್ದ ಹುಡುಗನ ಹೃದಯದಲ್ಲಿ ಕ್ಲಾಸಿಕಲ್ ಥಕದಿಮಿತ ಶುರುಮಾಡಿದ್ದಿಯಲ್ಲೇ ಹುಡುಗಿ! ಸರಿಯಾಗಿದೆ ನೆನಪಿದೆ ನನಗೆ ಇದಕ್ಕೆಲ್ಲ ಕಾರಣ ಆ ನಿನ್ನ ಮಿಡ್ನೈಟ್ ಮೆಸ್ಸೆಜು..!
ದಿನಾನೂ ಕ್ಲಾಸಲ್ಲಿ ಸಿಗುತ್ತಿದ್ದೆವು. ಎಲ್ರ ಜತೆ ಇರುವ ರೀತಿಯಲ್ಲೆ ನನ್ನೊಂದಿಗೂ ನೀನಿದ್ದೆ. ಆಟ-ಪಾಠ, ತಮಾಷೆ, ಚೇಷ್ಟೆ, ಸ್ವಲ್ಪ ಮುನಿಸು ಎಲ್ಲವೂ ನಮ್ಮಿಬ್ಬರ ಮಧ್ಯೆ ಕಾಮನ್ನಾಗಿತ್ತು. ಅಷ್ಟೇ, ‘ನೀನು ನನ್ನ ಪಾಲಿಗೆ ಬೆಸ್ಟ್ ಫ್ರೆಂಡಾಗಿದ್ದೆ’. ಇತರರ ಜತೆ ಹೆಚ್ಚು ಮಾತು, ಸಮಯ ಕಳೆದಿದ್ದೂ ನಿನ್ನೊಟ್ಟಿಗೆ. ಒಮ್ಮೊಮ್ಮೆ ಈ ಬೆಸ್ಟ್ ಫ್ರೆಂಡ್ನ ಲೈಫ್ ಪಾರ್ಟರನ್ನಾಗಿ ಮಾಡ್ಕೊಬೇಕೆನ್ನೋ ಆಲೋಚನೆಯೂ ಹುಚ್ಚು ಮನಸ್ಸಿಗೆ ಬಂದದ್ದುಂಟು. ಆದ್ರೆ ಈ ವಿಷಯ ನಿನ್ನ ಹತ್ರ ಹೇಳಿದ್ರೆ ಸದ್ಯ ಸ್ನೇಹಿತೆಯಾಗಿರುವ ನೀನು ಅದಕ್ಕೂ ರಾಜೀನಾಮೆ ಕೊಟ್ಬಿಟ್ರೆ? ಅಂತ ಅದೇಷ್ಟೊ ಬಾರಿ ಹೃದಯದ ಮಾತು ಬಾಯಿಗೆ ಬಂದ್ರು, ಮೊಂಡು ಹಠದಿಂದ ನಾನೇ ತಡೆದು, ನಿದ್ದೆಗಣ್ಣಲ್ಲೂ ಕನವರಿಸಿದ್ದೇನೆ.
ವರುಷದಿಂದ ಹೇಳಬೇಕಿದ್ದ ಈ ನನ್ನ ಹೃದಯದ ಮಾತನ್ನು ಆ ರಾತ್ರಿ ಮೆಸೆಜ್ ಹೇಳಿಬಿಟ್ಟಿತ್ತಲ್ಲಾ.. ದಿನವೂ ನೋಡುವಂತೆ ಮುಂಜಾನೆ ಡಾಟಾ ಆನ್ ಮಾಡ್ದೆ, ವಿಸಿಲ್ ಸೌಂಡ್ ಮಾಡ್ತಾ ಒಂದಿಷ್ಟು ಮೆಸೆಜ್ಗಳು ಪಟ್ ಪಟಾಂತ ಬಂದವು. 25 ಚಾಟ್ಸ್ ಅಂತ ವ್ಯಾಟ್ಸಾಪ್ ತೋರಿಸ್ತು. ಅದ್ರಲ್ಲಿ ನಿನ್ನ ಹೆಸರಿನ ಮುಂದೆಯೂ ಗ್ರೀನ್ ಮಾರ್ಕಲ್ಲಿ 4 ಅಂತಾ ಇತ್ತು. ನಾನಾಗೆ ಮೆಸೆಜ್ ಮಾಡಿದ್ರೆ ಮಾತ್ರ ರಿಪ್ಲೆ ಮಾಡೋ ಜಾಯಮಾನದವಳು ನೀನು. ಅಂತಾದ್ರಲ್ಲಿ 4 ಮೆಸೆಜ್ ಏನ್ ಮಾಡಿರಬಹುದು ಅಂತಾ ಓಪನ್ ಮಾಡಿ ನೋಡ್ದೆ ಕಣೆ. ನನ್ ನಂಬೋಕಾಗ್ಲಿಲ್ಲ, ಇದು ನಿಂದೇ ಮೆಸೆಜಾ ಅಂತಾ ಕಣ್ಣುಜ್ಜಿ ಎರಡೆರೆಡು ಬಾರಿ ಓದ್ದೆ. ಅದು ನಿಂದೆ, ಹೋಗ್ಲಿ ಮೊಬೈಲ್ ನಂದೇನಾ ಅಂತಾ ಕೈಲಿಡಿದು ಚೆಕ್ ಮಾಡ್ದೆ 100% ನಂದೆ.
ವಿಚಿತ್ರ ಅನಸ್ತು, ನನ್ನಂಗೆ ಅವಳಿಗೂ ಫೀಲ್ ಆಗಿದೆಯಲಾ. ಹುಡುಗ, ಹುಡುಗಿಗೆ ಆ ರೀತಿ ಮೆಸೆಜ್ ಮಾಡಿದ್ರೆ ಅದ್ರಲ್ಲಿ ಅಂತಾ ಸ್ಪೇಷಲ್ ಇರೋದಿಲ್ಲಾ. ಆದ್ರೆ ಹುಡುಗಿ, ಡೈರೆಕ್ಟಾಗಿ ಅಂಜದೆ, ಬೋಲ್ಡಾಗಿ ಮೆಸೆಜ್ ಮಾಡಿದ ರೀತಿ ತುಂಬಾ ಇಷ್ಟ ಆಯ್ತು.
ಮೊದ್ಲಿಗೆ ನಿನ್ನ ಕಂಡದ್ದು ‘143’ ಅನ್ನೋ ಸಂಖ್ಯೆಗಳು. ಇವು ಏನ್ ಬೇಕಾದ್ರೂ ಆಗ್ತವೆ. ಅದಕ್ಕೆ ಹೆಚ್ಚು ತಲೆಕೆಡಿಸ್ಕೊಳ್ಳಿಲ್ಲ. ಅದೇ ಅಚ್ಚ ಕನ್ನಡದಾಗ ಅಚ್ಚೊತ್ತಿದ ಆ ನಿನ್ ಮನದ ಮಾತು, ಮರುದಿನ ಎದುರಿಗೆ ಸಿಕ್ಕಾಗ ಯಾವ ಉತ್ತರ ಕೊಡಲಿ ಅನ್ನೋ ಗೊಂದಲ ಸೃಷ್ಠಿಸಿಬಿಟ್ಟಿತು. ‘ಹೇ ಹುಡುಗ, ಇನ್ನು ಎಷ್ಟು ದಿನ ಹಿಂಗೆ ಮೌನವಾಗಿರ್ತಿ? ನಂಗೊತ್ತು ನೀನಂತು ನಾಚಿಕೆ ಸ್ವಭಾವದವ, ಒಂದ್ ಮಾತು ಆಡಬೇಕೆಂದ್ರೂ ನೂರ ಸಲ ರಿಹರ್ಸಲ್ ಮಾಡುವವನ ಹಂಗ ಕಾಣ್ತಿ! ನೀನೆ ಅಂತ ಇಷ್ಟು ದಿವಸ ಕಾಯ್ದೆ. ಊಹ್ಞೂ… ನೀನೇನು ಬಾಯ್ ಬಿಡುವಂಗ್ ಕಾಣ್ಲಿಲ್ಲ.
ಅದಕ್ಕೆ ನಾನೇ ಫಸ್ಟ್ ಪ್ರಪೋಸ್ ಮಾಡ್ತಿದೀನಿ. ‘ಹುಡುಗಾಟದ ಹುಡುಗನೇ, ನನ್ನ ಸಂಗಾತಿಯಾಗ್ತಿಯಾ ಈ ಜನುಮಕೆ? ಬಹುಶಃ ನಿನ್ನ ಉತ್ತರ ‘ಹೂಂ’ ಆಗಿರುತ್ತೆ ಅಂತ ಅನ್ಕೊಂಡಿದಿನಿ. ಇಷ್ಟ ಇಲ್ಲಾಂದ್ರೂ ಹೇಳು, ಸ್ನೇಹಿತರಾಗಿರೋಣ’. ಇದನ್ನ ನೀನು ಕಳ್ಸಿದ್ದು ರಾತ್ರಿ 2:30ಕ್ಕೆ! ಮಾತೇ ಬರ್ತಿಲ್ಲಾ ಹುಡುಗಿ, ಹಕ್ಕಿಗೆ ಪುಕ್ಕ ಬಲಿತು, ಸ್ವಚ್ಛಂದ ಆಕಾಶದಿ, ಮನಸ್ಸು ಬಿಚ್ಚಿ ಹಾರಾಡುವಂಗಾಯ್ತು. ನಾನಂತೂ ಸಂಪೂರ್ಣವಾಗಿ ನಿನ್ನೆದುರು ನಿಂತು ಎಲ್ಲವನ್ನೂ ಹೇಳಬೇಕೆಂದಿರುವೆ. ಆದಷ್ಟು ಬೇಗ ಅದಕೂ ಕಾಲ ಕೂಡಿಬರುತ್ತದೆ. ನನ್ನ ಮನದ ಮಾತು ನಿನ್ಮುಂದೆ ಹೇಳುವೆ…
ಸರಿಯಾಗಿ ನೆನಪಿದೆ ನನಗೆ, ಇದಕ್ಕೆಲ್ಲಾ ಕಾರಣ ಆ ನಿನ್ನ ಮೆಸ್ಸೆಜು..!