About Us Advertise with us Be a Reporter E-Paper

ಸಿನಿಮಾಸ್

ಬಣ್ಣದ ಲೋಕಕ್ಕೆ ಬೆಳ್ಳಾರೆ ಬೆಡಗಿ…. ಭವ್ಯಶ್ರೀ ಪೂಜಾರಿ

* ನಿಶಾಂತ್ ನರ್ತನಪುರಿ

ಬಣ್ಣದ ಲೋಕ ಹಾಗೆ. ಅದಕ್ಕೆ ಆಕರ್ಷಿತರಾಗದವರಿಲ್ಲ. ಪ್ರತಿಭೆ ಇದ್ದವರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಇನ್ನು ಎಲಿಜಿಬಿಲಿಟಿ ಇದ್ದರಂತೂ ಮುಗಿಯಿತು. ಅವರ ಪ್ರತಿಭೆಗೆ ತಕ್ಕ ಪ್ರಾಶಸ್ತ್ಯ, ಪುರಸ್ಕಾರಗಳನ್ನು ಒಮ್ಮೆಲೆ ನಿರೀಕ್ಷೆಗೂ ಮೀರಿ ಲಭಿಸುವಂತೆ ಮಾಡುತ್ತದೆ. ಇತ್ತೀಚಿಗೆ ಇಂತಹ ಪ್ರತಿಭೆಗಳ ಪ್ರವೇಶ ಸ್ಯಾಂಡಲ್‌ವುಡ್‌ನ ಮಟ್ಟಿಗೆ ಯಥೇಚ್ಚವಾಗಿಯೇ ನಡೆಯುತ್ತಿದೆ. ಪ್ರವೇಶಕ್ಕೂ ಮುನ್ನ ಕೊಂಚ ಹೋಮ್ ವರ್ಕ್ ಮಾಡಿಕೊಂಡು, ಹೊಸ ಮುಖಗಳು ಹೊಸ ಹೊಸ ಅವಕಾಶಗಳನ್ನು ಪಡೆದು, ಆಶ್ಚರ್ಯ ಹುಟ್ಟಿಸುವ ಮಟ್ಟಿಗೆ ಬ್ರಹ್ಮ ಬರೆದ ಹಣೆಬರಹವನ್ನು ತೀಡಿ ಬಿಡುತ್ತಾರೆ. ಅಂತಹ ಬ್ರಹ್ಮನ ಬರಹಕ್ಕೆ ಸವಾಲ್ ಹಾಕಿ ಮಂಗಳೂರಿನಿಂದ ಬೆಂಗಳೂರಿಗೆ ಬಣ್ಣದ ಸೆಳೆತದಿಂದ ಬಂದ ಬೆಳ್ಳಾರೆ ಬೆಡಗಿ ಭವ್ಯಶ್ರೀ ಪೂಜಾರಿ.

ಮೂಲತಃ ಪುತ್ತೂರಿನ ಬೆಳ್ಳಾರೆಯವರಾದ ಇವರು, ಭರತನಾಟ್ಯ, ಯಕ್ಷಗಾನ ಕಲಾವಿದೆ ಕೂಡ. ಕ್ರಮವಾಗಿ ನಯನಾ ರೈ ಮತ್ತು ಲಿಂಗಪ್ಪ ಅವರಿಂದ ಭರತನಾಟ್ಯ-ಯಕ್ಷಗಾನದ ಬೇಸಿಕ್ ಮುಗಿಸಿರುವ ಇವರು, ಅನೇಕ ನೃತ್ಯ ಪ್ರದರ್ಶನಗಳನ್ನು ನಡೆಸಿಕೊಟ್ಟಿರುತ್ತಾರೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ತಾಯಿ ವಸಂತಿ ಅವರ ಮಾರ್ಗದರ್ಶನದಲ್ಲಿ ಬೆಳೆದ ಭವ್ಯಶ್ರೀ ಅವರಿಗೆ ಓದಿಗಿಂತ ಕಡೆ ಹೆಚ್ಚಿನ ಒಲವು. ಆದರೂ ಪ್ರದರ್ಶನ ಕಲೆಯಲ್ಲಿ 2 ವರ್ಷದ ಕೋರ್ಸ್ ಮುಗಿಸಿ, ದೂರ ಶಿಕ್ಷಣದಲ್ಲಿ ಬಿ.ಎ ಪದವಿಯನ್ನು ಓದುತ್ತಿದ್ದಾರೆ. ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿರುವ ಭವ್ಯ, ಅವರೇ ನನ್ನ ನಟನೆಗೆ ಪ್ರೇರಣೆ-ಸ್ಪೂರ್ತಿ ಎನ್ನುತ್ತಾರೆ.

ನಟನೆಗೆ ಅಗತ್ಯವಿರುವ ಹೋಮ್ ವರ್ಕ್‌ಗಳನ್ನೇನೂ ಅಷ್ಟಾಗಿ ಮಾಡಿಕೊಳ್ಳದೆಯೂ ತನ್ನ ಆತ್ಮವಿಶ್ವಾಸಕ್ಕಿಂತ ಯಾವ ಹೋಮ್ ವರ್ಕ್ ಮಿಗಿಲಲ್ಲ ಎಂದೇ ನಂಬಿರುವ ಇವರು, ಈಗಾಗಲೇ ‘ಇಂತಿ ನಿನ್ನ ಪ್ರೀತಿಯ’, ‘ಪತ್ತೇದಾರಿ ಪ್ರತಿಭಾ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಪಾಪಂ’ ಸರಣಿಗಳಲ್ಲಿಯೂ ಬಂದು ಹೋಗಿದ್ದಾರೆ. ಪ್ರಸ್ತುತ ‘ಕಮಲಿ’ ಧಾರಾವಾಹಿಯಲ್ಲಿ ‘ಪಿಂಕಿ’ ಎನ್ನುವ ವಿಲನ್ ಶೇಡ್‌ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ, ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರದಲ್ಲಿಯೂ ಅಭಿನಯಿಸಿ, ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.

ವಿಲನ್ ಆಗಬೇಕು ಅನ್ನೋದೆ ನನ್ನಾಸೆ
ವಿಲನ್ ಪಾತ್ರಗಳನ್ನೇ ಹೆಚ್ಚು ಇಷ್ಟ ಪಡುವ ಭವ್ಯ ಉತ್ತಮ ವಿಲನ್ ಆಗಬೇಕೆನ್ನುವ ಕನಸನ್ನು ಹೊಂದಿದ್ದಾರೆ. ಅದಕ್ಕನುಗುಣವಾಗಿ ಭವ್ಯಶ್ರೀ ಅವರಿಗೆ ಸಿಗುತ್ತಿರುವ ಪಾತ್ರಗಳೂ ವಿಲನ್ ಶೇಡ್‌ನದೇ ಆಗಿರುವುದು ಅವರ ಸಂತಸಕ್ಕೆ ಜತೆಗೆ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ‘ಅಜ್ಜಮ್ಮ’ ಚಂದ್ರಕಲಾ ಮೋಹನ್ ಅವರ ಅಭಿನಯಕ್ಕೆ ಮನಸೋತಿರುವ ಈ ಹುಡುಗಿ, ಅಜ್ಜಮ್ಮನ ಹಾವಭಾವ, ಆಂಗಿಕ ಅಭಿನಯ, ಡೈಲಾಗ್ ಡೆಲಿವರಿಗಳನ್ನು ಕಲಿಯುವುದಕ್ಕೂ ಪ್ರಾರಂಭಿಸಿದ್ದಾರೆ. ನಿರ್ದೇಶಕರ ಮಾರ್ಗದರ್ಶನದಲ್ಲಿ ಮಂಗಳೂರು ಭಾಷೆಯಿಂದ ಬೆಂಗಳೂರು ಭಾಷೆಗೆ ತನ್ನ ಸ್ಲಾಂಗ್ ಬದಲಿಸಿಕೊಂಡು ಸ್ಯಾಂಡಲ್‌ವುಡ್‌ನ ಲೇಡಿ ವಿಲನ್‌ಗಳ ಪೈಕಿ ತಾನು ಒಬ್ಬಳಾಗಬೇಕೆನ್ನುವ ಹಂಬಲದಲ್ಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close