ವಿಶ್ವವಾಣಿ

ಭಜನೆ ಈಗೀಗ ಸಿನಿಮಾ ಹಾಡಿನಂತೆ ಕೇಳಿಸಲಾರಂಭಿಸಿದೆ!

ಎಷ್ಟು ದಿನ ಇಲ್ಲೆ ಇರತಿ,

ನಿನ್ನ ಮನಿ ಬ್ಯಾರೇನ ಐತಿ,  ॥ ಪ॥

ಬಣ್ಣದ ಮನಿ ಕಟ್ಟಿಸಿದಿ ಜೋರಾ,

ಸ್ಥಿರವಾಗಿ ಇರಲಿಲ್ಲ ಪೂರಾ

ಯಾತಕಬಂದಿ ಎಂಬುದ ಮರೆತಿ

ಹೊಂಚು ಹಾಕಿ ನೀ ಲಂಚವ ತಿಂದಿ

ಲಾಭಕ್ಕಾಗಿ  ಮಾಡ್ತಿ

ಅಣ್ಣ, ತಮ್ಮಂದಿರದೂ ನೀನೇ ತಿಂತಿ

ನಾಲ್ಕು ಮಂದ್ಯಾಗ ಎದೆಸೆಟೆಸಿ ನಿಂತಿ,

ಸತ್ತ ಮ್ಯಾಲ ನೀ ಅವರ ಹೆಗಲ ಏರತಿ

ಹಳ್ಳಿ ಜನ, ಹುಡುಗರು, ಯುವಕರು ರಾತ್ರಿ ತಮ್ಮ ಊರ ಹೊರಗಿನ ಶಿವನ ಗುಡಿಯಲ್ಲೋ, ಹನುಮಪ್ಪನ ಗುಡಿಯಲ್ಲೋ ಪ್ರತಿದಿನ ತಪ್ಪದೇ ಒಂದು ತಾಸು, ಮಲಗುವ ಮುನ್ನ ಇಡೀ ಹಳ್ಳಿಗೆ ಕೇಳುವಂತೆ ಗೋಪುರಕ್ಕೆ ಕಟ್ಟಿದ ಧ್ವನಿವರ್ಧಕದಲ್ಲಿ (ನಮ್ಮಕಡೆ ಭೊಂಗಾ ಎನ್ನುತ್ತಾರೆ) ಕೀರಲು ಧ್ವನಿಯಲ್ಲಿ ಹಾರ್ಮೋನಿಯಂ, ತಪ್ಪಡಿಗಳನ್ನು ಬಾರಿಸುತ್ತಾ ಮೇಲಿನ ಭಜನೆಯ  ಹಾಡಿಯೇ ನಂತರ ಮನೆಯಿದ್ದವರು ತಮ್ಮ ತಮ್ಮ ಮನೆಗಳಿಗೆ, ಮನೆ ಇಲ್ಲದವರು, ವಯಸ್ಸಾದವರು, ಅಲ್ಲೇ ಅದೇ ಗುಡಿಯಲ್ಲಿ ಮಲಗಿ ನಿದ್ರೆ ಹೋಗುತ್ತಾರೆ.  ಉತ್ತರ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಇದು ಇಂದಿಗೂ ಚಾಲ್ತಿಯಲ್ಲಿದೆ.

ಒಂಬತ್ತಕ್ಕೆ ಇದು ಶುರುವಾಗಿ ಹತ್ತಕ್ಕೆ ಬರೋಬ್ಬರಿ ಒಂದು ತಾಸು ಭಜನೆ ನಡೆದು ಮುಗಿಯಿತೆಂದರೆ ದಣಿದ ದೇಹಗಳಿಗೆ ಮಲಗುವ ಹೊತ್ತಾಯಿತು ಎಂಬ ಸಂತಸ. ಕೆಮ್ಮು, ದಮ್ಮಿನ ಮುದುಕರಿಗೆ ಮತ್ತೆ ಬೆಳಗು ಕಾಣ್ತೀವೋ ಇಲ್ಲವೋ ಎಂಬ ದಿಗಿಲು, ಯುವಕರಿಗೆ ಮತ್ತೆ  ಕಳೆದು ಯಾವಾಗ ಬೆಳಗಾದೀತೋ ಎಂಬ ನಿರೀಕ್ಷೆ, ವಿರಹಿಗಳಿಗೆ ಹೇಗಪ್ಪಾ ಈ ರಾತ್ರಿ ಮುಗೀದೀತು ಎಂಬ ಬೇಗುದಿ, ಪ್ರೇಮಿ ದಂಪತಿಗಳಿಗೆ ಭಜನಿ ಮುಗೀತಂದ್ರ ಹಾಸಿಗೆ ಸೇರೋ ಕಾತರ, ಅವಸರಿಸುವ ಗಂಡಿಗೆ ಭಜನಿ ಮುಗೀಲಿ ತಡಿ ಎಂದು ಕಣ್ಣಲ್ಲೇ ಗದರಿ ಹುಸಿ ಮುನಿಸು ತೋರೋ ಅವಳ ಮುಖ ನೋಡಿ ಹಿಗ್ಗುವ ಉತ್ಸಾಹ, ಜೀವನೋತ್ಸಾಹವಿಲ್ಲದ ಕೆಲವು ಮುಗ್ಗಲಗೇಡಿಗಳು. ಎಲ್ಲದಕ್ಕೂ ಅಸಹನೆಯ ಕೆಲವು ಭೂಮಿಗೆ ಭಾರವಾಗಿರುವ ಜೀವಿಗಳು ಸೂ. ಮಕ್ಳು ಕೆಲಸ ಇಲ್ಲದ ಹಗಲು  ತಿರುಗ್ತಾರ, ರಾತ್ರಿ ಹೀಂಗ ಚೇಳು ಕಡಿದ ನಾಯಿಹಂಗ ಒದರ್ತಾರ ಎಂಬ ಭತ್ಸ ್ಯರ್ನೆಯ ಕಿಡಿ ನುಡಿ. ಶಾಲೆಗೆ ಹೋಗುವ ಮಕ್ಕಳು ಪಾಟಿಚೀಲ, ಪುಸ್ತಕ ತೆಗೆದಿಟ್ಟು ಯಪ್ಪಾ, ಮಕ್ಕೊಳ್ಳೊ ಟೈಮ್ ಆತು ಎಂದು ಹಿಗ್ಗುವದರ ಜೊತೆ, ನಾಳೆ ಮತ್ತೆ ಶಾಲೆಗೆ ಹೋಗಬೇಕು ಅಂತ ಕುಗ್ಗಿ ಹಾಸಿಗೆ ಸುರುಳಿ ಉರುಳಿಸಿಕೊಳ್ಳುವ ಯಾಂತ್ರಿಕತೆಯ ದಿನಚರಿಗೆ ಒಗ್ಗುವ ನುಡಿ, ಇವೆಲ್ಲದರ ನಡುವೆ ಯಾವದೂ ತಮಗೆ ಸಂಬಂಧವಿಲ್ಲದಂತೆ, ಅವರ ಭಾವನೆಗಳಿಗೆಲ್ಲ ಒಂದೇ ಉತ್ತರ ಕೊಡುವಂತೆ ‘ಎಷ್ಟು  ಇಲ್ಲೇ ಇರತಿ, ನಿನ್ನ ಮನಿ ಬ್ಯಾರೇನ ಐತಿ’ ಎಂಬ ಹಾಡನ್ನು ವರ್ಷ ವರ್ಷಗಳಿಂದ ಹಾಡುತ್ತಲೇ ಬಂದಿದ್ದಾರೆ.

ನಾಗರಿಕರೆನಿಸಿಕೊಂಡವರು ರಾತ್ರಿ ಹನ್ನೆರಡು, ಒಂದರವರೆಗೆ, ಕಂಪ್ಯೂಟರ್ ಮುಂದೆ, ಫೇಸ್ ಬುಕ್ ತೆರೆದುಕೊಂಡು, ವಾಟ್ಸಪ್‌ಗಳನ್ನು ನೋಡುತ್ತಾ ಇನ್ನಷ್ಟು ಒತ್ತಡಗಳಿಗೆ ಬಲಿಯಾಗಿಯೇ ಮಲಗುತ್ತಾರೆ.  ಮಲಗುವ ಮುನ್ನ ತತ್ವ ಚಿಂತನೆ ಮಾಡಿ ಮಲಗುವ ಪದ್ಧತಿ, ಚಿಂತನೆ ಇರುವದು, ನಾವು ಹಳ್ಳಿಮುಕ್ಕರು, ಅನಾಗರಿಕರು ಎಂದೇ ಭಾವಿಸಿರುವ ಸಾಮಾನ್ಯ ಜನರಲ್ಲಿಯೇ. ತತ್ವ, ನೀತಿ, ನಿಯಮಗಳಿಲ್ಲದ ಬಾಳು ಬಾಳುತ್ತಿರುವದು ನಾಗರಿಕರೆನಿಸಿಕೊಂಡ  ಗಂಡನನ್ನೇ ಕೊಲ್ಲುವ ಹೆಂಡತಿಯರು, ಹೆಂಡತಿಯ, ಮಕ್ಕಳನ್ನು ಗುಂಡಿಟ್ಟು ಸಾಯಿಸುವ ಗಂಡಂದಿರು, ಗೆಳೆಯನ ತಲೆಯ ಮೇಲೆ ಕಲ್ಲುಹಾಕಿ ಕೊಲ್ಲುವ ನಂಬಿದ ಸ್ನೇಹಿತರು. ಮಜಾ ಉಡಾಯಿಸೋದು ಬಿಟ್ಟರೆ ಬೇರೆ ಜೀವನದ ಗುರಿಯೇ ಇಲ್ಲ.  ಈಗ ಹಳ್ಳಿಗಳು ಕೆಟ್ಟಿವೆಯಾದರೂ ತೀರಾ ನಗರದಂತೆ ನಾಶದತ್ತ ಹೊರಟಿಲ್ಲ.

ಹಳ್ಳಿಯ ಬಾಳುವೆ ಸಗ್ಗದ ಬಾಳುವೆ

ನಗರ ಜೀವನವದು ನಾರಕವು

ನಗರದ ಜೀವನ ಶಿಸ್ತಿನ ಜೀವನ,

ಹಳ್ಳಿಯ ಜೀವನವದು ಸೊಗಸಿನದು.

ಶಿಸ್ತು ಬೇರೆ, ಸೊಗಸು ಬೇರೆ, ಶಿಸ್ತಿನಲ್ಲಿ ಸ್ವಾತಂತ್ರ್ಯವಿರುವದಿಲ್ಲ.  ಆರ್‌ಎಸ್‌ಎಸ್‌ನಲ್ಲಿದ್ದಾಗ ಅಲ್ಲಿನ ಶಿಸ್ತಿಗೆ ಮನಸೋತು ಅದರ ಆಕರ್ಷಣೆಗೆ ಒಳಗಾಗಿದ್ದೆ. ಇಂದಿಗೂ ನನ್ನ ಶಿಸ್ತಿನ ಜೀವನಕ್ಕೆ ಅದೇ ಮೂಲ ಪ್ರೇರಣೆ. ಆದರೆ ಒಮ್ಮೊಮ್ಮೆ ಅದು ಕಿರಿಕಿರಿ ಉಂಟು ಮಾಡುತ್ತಿತ್ತು. ಹಸಿಯದೆ ಊಟಕ್ಕೆ ಕೂಡಬೇಕಾಗುತ್ತಿತ್ತು. ನಿದ್ದೆ ಬರದಿದ್ದರೂ ಕಣ್ಣು ಮುಚ್ಚಿ ಮಲಗಬೇಕಿತ್ತು. ಭರ್ತಿ ನಿದ್ದೆ ಹತ್ತುವ ಸಮಯಕ್ಕೆ ಎದ್ದು ಓಡಬೇಕಿತ್ತು. ಓ.ಟಿ.ಸಿ ಎಂಬ ತರಬೇತಿ ದಿನಗಳಲ್ಲಿ ಬೆಳಿಗ್ಗೆ 4-30ಕ್ಕೇ ಏಳಬೇಕಿತ್ತು, ಮಲವಿಸರ್ಜನೆಗೆ ಹೋಗಲೇ ಬೇಕಿತ್ತು ಅದು ಬರದೇ ಇದ್ದರೂ ಕೂತುಬರಬೇಕಿತ್ತು. ಅಕ್ಟೋಬರ್,  ಚಳಿಗಾಲದಲ್ಲಿ ನಡೆಯುತ್ತಿದ್ದ ಈ ತರಬೇತಿಗಳಲ್ಲಿ ಬೆಳಗಿನ ನಾಲ್ಕಕ್ಕೇ ತಂಣೀರಸ್ನಾನ ಮಾಡಬೇಕಿತ್ತು, ಚಳಿಗೆ ಅಂಜಿ ಸ್ನಾನ ಬಿಟ್ಟೆವೆಂದರೆ ಇಡೀ ದಿನ ಸ್ನಾನಮಾಡಲು ಪುರುಸೊತ್ತು ಸಿಗದೇ ಸ್ನಾನವೇ ಆಗುತ್ತಿದ್ದಿಲ್ಲ. ಒಮ್ಮೊಮ್ಮೆ ಎರಡು-–ಮೂರು ದಿನ ಸ್ನಾನವಿಲ್ಲ. ಆದರೆ, ಜರ್ಬಾಗಿ ಗಣವೇಷ ಧರಿಸಿ, ಶಿಸ್ತಿನಿಂದ ರೂಟ್ ಮಾರ್ಚ್ (ಪಥ ಸಂಚಲನ) ದಲ್ಲಿ ಭಾಗವಹಿಸಬೇಕಿತ್ತು, ಆಗೆಲ್ಲ ನಾನು, ನನ್ನ ಗೆಳೆಯ ಶರದ್ ದಂಡಿನ್

ನಾವು ಶಿಸ್ತಿನ ಸಿಪಾಯಿಗಳಂತೆ,

ಹತ್ತಿರ ಬಂದರೆ ನಾರುತ್ತೇವೆ

ಹೆಂಡದ ಪೀಪಾಯಿಯಂತೆ

ಎಂದೇ  ಕಟ್ಟಿ ಹೇಳುತ್ತಿದ್ದೆವು.

ನಗರಗಳಿಗೂ ಇದೇ ಮಾತು ಅನ್ವಯಿಸುತ್ತದೆ. ಆ ರಸ್ತೆಗಳು, ಜನರ ಓಡಾಟ, ಬೀದಿ ದೀಪಗಳು, ಹಣವಿದ್ದರೆ ಬೇಕಾದ್ದು ಕೊಳ್ಳುವ ಸೌಲಭ್ಯ ಇದ್ದರೂ ಒಳ ಹೊಕ್ಕರೆ ಬದುಕೇ ದುರ್ನಾತ ಬೀರಲು ಶುರುವಾಗುತ್ತದೆ.

ಹಳ್ಳಿಗಳಲ್ಲಿ ಧಾವಂತವಿಲ್ಲ, ಮಂದ ಮಾರುತವೊಂದು ಮೆಲ್ಲಗೆ ಬೀಸಿದಂತೆ ಜೀವನ. ಮಲೆನಾಡಿನ ಹಳ್ಳಿಗಳಲ್ಲಿ ಇನ್ನೂ ಸೊಗಸಿದೆ. ಆದರೆ ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳು ಈ ಪಂಚಾಯಿತಿ ಚುನಾವಣೆ, ಗ್ರಾಮ ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು, ಅದರ ಚುನಾವಣೆಗಳು ಬಂದ  ಯಾರನ್ನೂ, ಯಾವದನ್ನೂ ನಂಬದ ಸ್ಥಿತಿಗೆ ಬಂದು ತಲುಪಿವೆ.

ಇತ್ತೀಚೆಗೆ ಒಂದು ಹಳ್ಳಿಗೆ, ಸುಮ್ಮನೆ ಎರಡು ದಿನ ಇದ್ದು ಏನಾದರೂ ಓದಿ, ಬರೆದುಕೊಂಡು ಬರೋಣ ಎಂದು ಹೋದರೆ, ಅಲ್ಲಿನ ಜನ  ‘ಸುಮ್ಮನೆ ಬರಾಕ ನೀವೇನು ಹುಚ್ಚರೇನ್ರಿ? ಏನೋ ಐತಿ ಅದಕ್ಕ ಬಂದೀರಿ, ನಮ್ಮೂರನ್ನೂ ಟಿವಿ ಯಾಗ ತೋರಸಾಕ ಹೇಳ್ರಿ, ನಮಗೇನರ ಕೊಟ್ಟು ಹೋಗ್ರಿ, ಇಲ್ಲಿ ಮೈನ್‌ಸ್ ಮಾಡಾಕ ಬಂದಿರೇನ್ರಿ? ನಿಧಿ ಐತೆ ಅಂತ ಹೇಳ್ಯಾರೇನ್ರಿ?’ ಎಂದೇ ಕಿರಿಕಿರಿ ಹಚ್ಚಿದರು. ಒಂದುಕಡೆ  ಕೂರಲು, ನೋಡುತ್ತಾ ನಿಲ್ಲಲು ಬಿಡಲಿಲ್ಲ. ಹಾಗೆ ಸುಮ್ಮನೆ ಬಂದೀನಿ ಎಂದರೆ, ‘ಸುಮ್ಮನೆ ಬರಾಕೆ ನಿಮಗೆ ಹುಚ್ಚೇನ್ರಿ, ಸುಮ್ಮನೆ ಬರಾಕ ನೀವೇನು ಹುಚ್ಚರೇನ್ರಿ?’ ಇದೇ ಪಲ್ಲವಿ ಪ್ರತಿಯೊಬ್ಬರಿಂದಲೂ. ‘ಅಲ್ಲಿದೆ ನಮ್ಮನೆ, ಇಲ್ಲಿಗೆ ಬಂದೆ ಸುಮ್ಮನೆ’ ಎಂದು ಹಾಡಿದ ದಾಸರ ಹಾಡಿನಲ್ಲೂ  ‘ಏನೋ ಮಸಲತ್ತಿದೆ ಇವರ ಮಾತಿನಲ್ಲಿ’ ಎಂದು ಅನ್ನುವವರೂ ಹುಟ್ಟಿಕೊಂಡಿದ್ದಾರೆ.

ನಗರಗಳಲ್ಲಿ ಒಬ್ಬರನ್ನು ತುಳಿದು, ತಳ್ಳಿ ಮುಂದೆ ಬರುವವರೇ ಸಿಗುತ್ತಾರೆ.  ಆದರೆ ಹಳ್ಳಿಗಳಲ್ಲಿ ಭಜನೆ ಪದ ಹಾಡುವಂತೆ, ಅವರ ಪಾಪ  ತಿಂತೈತಿ ಎಂದು ಹಿಂದೆ ಸರಿಯುವವರಿದ್ದಾರೆ.  ಅದಕ್ಕೇ ಸಂತರ, ದಾಸರ, ಶರಣರ ಜೀವನ-ಬಾಲ್ಯಗಳೆಲ್ಲವು ಹಳ್ಳಿಯ ವಾತಾವರಣದಿಂದಲೇ ಪ್ರೇರಿತವಾದವು.

‘ಎಲೆ ಎಲೆ ಯೆನ್ನಜೀವ, ಮೈಯೆಲ್ಲ ನೋವು ಗಾಯ’ ಎಂಬ ಭಜನೆ ಹಾಡು ನನಗಿಷ್ಟವಾದದ್ದು. ಭಜನೆಗಳಲ್ಲಿ ಹಾರ್ಮೊನಿಯಂ ತಬಲಾ, ಖಂಜರಾ ಬಾರಿಸುವವರು ಎಲ್ಲಿಯೂ, ಯಾವ ಶಾಲೆಯಲ್ಲೂ ಗುರುಗಳ ಬಳಿಯೂ ಅವನ್ನು ಕಲಿತಿರುವದಿಲ್ಲ. ಕೇಳಿ ಕೇಳಿ, ನೋಡಿ ನೋಡಿ ಅಂದಾಜಿನ ಮೇಲೆ ಲಯ ಹಿಡಿದು ಬಾರಿಸುತ್ತಿರುತ್ತಾರೆ. ಹಾಡು ಹಾಡುತ್ತಲೇ ತಮಗೆ ತಾವೇ ತಬಲಾ ಬಾರಿಸಿಕೊಳ್ಳುವವರಿದ್ದಾರೆ.   ಈಗೀಗ ಉತ್ತರ ಕರ್ನಾಟಕದಲ್ಲಿ ಅಗ್ಗದ ಅಶ್ಲೀಲ, ದ್ವಂದ್ವಾರ್ಥಗಳ ಹಾಡಿನ ಯುಗ ಶುರುವಾಗಿ ಭಜನೆಯ ತತ್ವದ ಪದಗಳು ಕಾಣೆಯಾಗುತ್ತಿವೆ. ‘ಚುಟು ಚುಟು ಅನುತೈತೆ ಮಾವ, ಚುಮು ಚುಮು ಆಗತೈತಿ’ ಹಾಡು ಹಳ್ಳಿಗಳ, ಪಡ್ಡೆ ಹೈಕಳ ಮೆಚ್ಚಿನ ಹಾಡು. ಸಿನಿಮಾ ಧಾಟಿಗಳಲ್ಲಿ ತತ್ವಪದಗಳನ್ನು ಮಾರ್ಪಾಡುಗೊಳಿಸಲಾಗಿದೆ. ತತ್ವಪದಗಳನ್ನು ಸಿನಿಮಾ ಹಾಡಿಗೆ ಪರಿವರ್ತಿಸಿದ್ದಾರೆ.

ಹೀಗಾಗಿ ಭಜನೆ ಮಾಡುವಾಗ ಸಿನಿಮಾ ಹಾಡುಗಳಂತೆಯೂ, ಸಿನಿಮಾ ಹಾಡುಗಳನ್ನು ಹಾಡುವಾಗ ಭಜನೆಯಂತೆಯೂ ಹಾಡುಗಳು ಕೇಳಿಸಲಾರಂಭಿಸಿವೆ. ಕೇಳುತ್ತಿರುವುದು ಸಿನಿಮಾ ಹಾಡುಗಳ ಆರ್ಕೆಸ್ಟ್ರಾನೋ  ಭಜನಾ ಮೇಳವೋ ಎನ್ನವದನ್ನು ಹೋಗಿಯೇ ನೋಡಿ, ಕೇಳಿಯೇ ಅರಿತುಕೊಳ್ಳಬೇಕಿದೆ. ಕಡೆಗೊಂದು ದಿನ ಭಗವಂತನೇ ನನಗಾಗಿ ಯಾರೂ ಹಾಡಬೇಡಿ ಎಂದು ವಿನಂತಿಸಿಕೊಳ್ಳುವ ಕಾಲ ದೂರವಿಲ್ಲ. ‘ಕೇಳನೋ ಹರಿ, ತಾಳನೋ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ’ ಎಂಬ ದಾಸರ ಮಾತು ಸತ್ಯ ಎನಿಸಿದೆ. ‘ಹರಿಭಜನೆ ಮಾಡೋ ನಿರಂತರ’ ಎಂದು ಹೇಳಿದ್ದಾರಾಗಲಿ, ಹೇಗೆ ಎಂದು ಹೇಳಿಲ್ಲ ಎಂಬುದು ಈಗಿನ ಭಜನಾ ಮಂಡಳಿಗಳ ವಾದವಾದರೂ ಆಗಬಹುದು.