
ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ಸಾರಿಗೆ ಬಸ್ ಸೇವೆ ಇರುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾರ್ಮಿಕರ ಹಿತದೃಷ್ಟಿಯಿಂದ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ನಾವು ಕೂಡ ಸಹಕರಿಸುತ್ತಿದ್ದೇವೆ. ನಾಳೆ ಬಸ್ ಸಂಚಾರದ ಬಗ್ಗೆ ಪರಿಸ್ಥಿತಿ ನೋಡಿ ತೀರ್ಮಾನಕ್ಕೆ ಬರುತ್ತೇವೆ. ಆದರೆ ಬಂದ್ ಇರುವುದರಿಂದ ಸಾರಿಗೆ ವ್ಯವಸ್ಥೆ ಕಷ್ಟ ಎಂದು ಹೇಳಿದರು.
ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಸಾರಿಗೆ ಇಲಾಖೆಯ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ಭಾರತ ಬಂದ್ಗೆ ಕರೆ ನೀಡಿವೆ. ಎರಡು ದಿನ ರಾಜ್ಯದಾದ್ಯಂತ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಉಪಾಧ್ಯಕ್ಷ ಅನಂತ್ ಸುಬ್ಬರಾವ್ ತಿಳಿಸಿದ್ದಾರೆ.
ಆಟೋರಿಕ್ಷಾ, ಓಲಾ, ಉಬರ್ ಕ್ಯಾಬ್ಗಳು, ಬ್ಯಾಂಕ್ ಸೇವೆ, ಲಾರಿ ಓಡಾಟ ಸ್ಥಗಿತಗೊಳ್ಳಲಿವೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ. ಅಂಬುಲೆನ್ಸ್, ಮೆಟ್ರೊ, ರೈಲು ಎಂದಿನಂತೆ ಇರಲಿದೆ.
ಕರ್ನಾಟಕ ವಿಶ್ವವಿದ್ಯಾಲಯ ಜ.8 ಮತ್ತು 9ರಂದು ನಡೆಯಬೇಕಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ. ಎಂ.ಎ., ಎಂ.ಎಸ್ಸಿ ಹಾಗೂ ಎಂ.ಕಾಂ. ಪರೀಕ್ಷೆಗಳನ್ನು ಜ.17-18ರಂದು ನಡೆಸಲಾಗುವುದು ಎಂದು ಕರ್ನಾಟಕ ವಿ.ವಿ. ಮೌಲ್ಯಮಾಪನ ಕುಲಸಚಿವ ನಾರಾಯಣ ಸಾಲಿ ತಿಳಿಸಿದ್ದಾರೆ.