ವಿಶ್ವವಾಣಿ

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ (ವಿಡಿಯೊ)

ಉಡುಪಿ: ಕರಾವಳಿಯಲ್ಲಿ ಬಂದ್ ಬಿಸಿ ಜೋರಾಗಿಯೇ ಇದ್ದು, ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯೂ ನಡೆದಿದೆ.

ಉಡುಪಿ ಬಿಜೆಪಿ ನಗರಾಧ್ಯಕ್ಷ ಪ್ರಭಾಕರ ಪೂಜಾರಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಬಾವುಟದ ಕೋಲಿನಿಂದಲೇ ಕಾರ್ಯಕರ್ತರು ಹೊಡೆದಿದ್ದಾರೆ. ಪ್ರಭಾಕರ ಪೂಜಾರಿ ಅವರ ತಲೆ, ಮುಖದ ಮೇಲೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬನ್ನಂಜೆ ಎಸ್ಪಿ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಸುಮಾರು 15 ನಿಮಿಷ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

ಉಡುಪಿಯ ಬನ್ನಂಜೆಯಲ್ಲಿ ಬಂದ್ ಬೆಂಬಲಿಸಿ ಅಂಗಡಿಗಳ ಮುಚ್ಚುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಅಂಗಡಿಗಳನ್ನು ಮುಚ್ಚದಂತೆ ಒತ್ತಾಯಿಸುತ್ತಿದ್ದರು. ಇದರಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದರು. ಬಳಿಕ ವಾಗ್ವಾದ ನಡೆದು ಪರಸ್ಪರ ಜಟಾಪಟಿ ನಡೆದು, ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು.